Saturday, October 13, 2012

ಒಂದು ಕವನ ಗುಚ್ಛ

ಇಲ್ಲಿ ಕೆಲ ಪುಟ್ಟ ಪುಟ್ಟ ಕವನಗಳಿವೆ...ಕೆಲವು ಏಕಾಂತದಲ್ಲಿ ಕೆಲವು ಕೆಲಸದ ಒತ್ತಡದಲ್ಲಿದ್ದಾಗ ಬರೆದದ್ದು...ನಿಮಗೂ ಇಷ್ಟವಾದೀತು ಅನ್ನೋ ನಂಬಿಕೆ ನನ್ನದು...

ಇಬ್ಬನಿ
ಶಿಶಿರದ ರಾತ್ರಿಗಳಲ್ಲಿ
ತಣ್ಣಗೆ ಸುರಿವ ಚಳಿಗೆ
ವಸುಂಧರೆ ನಡುಗುತ್ತಾಳೆ

ಚಂದಿರನೂ ನನ್ನ ಸಂತೈಸುವ
ಬದಲು ವಿರಹದ ಶೀತಲ
ಕಿರಣಗಳ ಸುರಿದ
ಎಂದು ಅಳುತ್ತಾಳೆ

ಅವಳ ನೋವ ನೋಡಲಾಗದ
ಗೆಣೆಕಾರ ದಿನಕರ
ಚುಮು ಚುಮು ಬೆಳಗಿನ
ಬಿಸಿಲ ಅಪ್ಪುಗೆಯಲ್ಲಿ
ಒರೆಸುತ್ತಾನೆ ಅವಳ
ಕಂಬನಿ
ಮುಂಜಾವಿನ ಇಬ್ಬನಿ!!

ಪ್ರಶ್ನೋತ್ತರ(ನಾನು ಮತ್ತು ನನ್ನ ಝೆನ್ ಗುರು)
 ನಾ ಕೇಳಿದೆ "ಬೆಲೆಯೇನು?
ಅವ"ತಕ್ಕೊಂಡಿದ್ದೇನು ಇಲ್ಲ" 

’ನಾ ದೇವರ ನೋಡಬೇಕಿತ್ತು’

"ಮಾವಿನ ಮರವಾಗು" ಅಂದ

’ಕಣ್ಣಲ್ಲಿ ಬೆಳಕು ಯಾರದ್ದು”
ಉತ್ತರ "ಹೂಗಳು ಅರಳುವುದ ನೋಡು"

ನಾ ಹೇಳಿದೆ ’ನನ್ನ ಮೊತ್ತ ಸೊನ್ನೆ’
"ಮೊದಲು ಕೊಡುವುದ ಕಲಿ"

’ನಾ ಬೆಳಕಾಗಬೇಕು’
ಉತ್ತರ ಹೀಗಿತ್ತು
"ನಿಲ್ಲದ ಪಯಣಕ್ಕೆ ತಯಾರಾಗು"

ಮುತ್ತು
ನಲ್ಲ ...
ನಿನ್ನ ತುಟಿಗಳ ಅಂಚಿನಲ್ಲಿ
ಸುರಿವ ಮುಗ್ಧ ನಗೆಯ
ಮೋಡಿಯಲ್ಲಿ ಮರೆತರೆ
ಹೊತ್ತು
ಕಣ್ಣ ತುಂಬಿ ನಿನ್ನ 
ಬೀಳ್ಕೊಡುವಾಗ 
ಮರೆತೇ ಹೋದೇನು
ವಾಡಿಕೆಯ ಸಿಹಿ
ಮುತ್ತು!!

ಸಿಕ್ಕಿದ್ದು
ನಿನ್ನ ನೆನಪುಗಳ ಸಾಗರವ
ಸೋಸಿದಾಗ ಸಿಕ್ಕಿದ್ದು
ಬೊಗಸೆ ತುಂಬಾ ಕಣ್ಣ ಹನಿ 
ಎದೆಯ ತುಂಬಾ 
ಕವಿತೆಗಳ ಸಾಲು ಸಾಲು!!

ಆಫೀಸು ಮತ್ತು ನಾನು
ಈ ಮಧ್ಯಾಹ್ನದ ನೀರವ 
ಏಕಾಂತದಲ್ಲಿ
ಲೆಡ್ಜರು ರೆಸಿಪ್ಟು ಇನ್ವಾಯ್ಸುಗಳ
ಮಧ್ಯೆ ನನ್ನ ಧ್ವನಿ ಕಳಕೊಂಡಿದ್ದೇನೆ
ತಣ್ಣನೆಯ ಈ ಕೊಠಡಿಯಲ್ಲಿ
ಕುಳಿತು ಹೊರ ಜಗತ್ತಿನ
ಆಗುಹೋಗುಗಳ ನಿರುಕಿಸುವ 
ನಾನು ನಮ್ಮ ಆಫೀಸಿನ
ಗಡಿಯಾರಕ್ಕಿಂತ ಬೇರೆ ಅಲ್ಲ 
ಅನ್ನುವ ಸತ್ಯದ ಅರಿವಾದಂತೆ
ನನ್ನ ಕಳೆದು ಹೋದ ಭಾವಗಳ
ಬೆನ್ನು ಹತ್ತಿ ಒಮ್ಮೆ ಬೆವರಿದ್ದೇನೆ!!

ಉಳಿದದ್ದು 
ನಿನ್ನ ಒಲುಮೆಯ ಸಾಗರದ 
ಮೇಲೆ ತೇಲುವ ನನ್ನ 
ಭರವಸೆಯ ದೋಣಿಯನ್ನು
ಹುಸಿ ಆಣೆ ಪ್ರಮಾಣಗಳ 
ಬಿರುಗಾಳಿ ಮುಳುಗಿಸಿದೆ 
ಆದರೂ
ಮಾತೆಲ್ಲ ಮುಗಿದಿದೆ
ಒಲವೊಂದೆ ಉಳಿದಿದೆ!! 
 

 

1 comment:

  1. nijakku nimmella kavanagalu hrudayakke muttuttave, yavudo anubhava needuttave, allade vastavasathyavannu torisuttave, preeti,prema,sanniveshagalu nimage varnisalu bahu sulabhavagibittive, heege munduvareyiri.
    tpprabhudev@gmail.com

    ReplyDelete