Thursday, December 19, 2013

ಬದುಕೇ ನಿನಗೊಂದು ಸಲಾಮು

ತಳ್ಳು ಗಾಡಿಯಲ್ಲಿ ಕಸ ಹೊತ್ತು ಬರುತ್ತಿದ್ದ ಆಕೆ, ಹಿಂದೆ ಸರ್ಕಾರಿಶಾಲೆಯ ಯೂನಿಫಾರ್ಮ್ ಹಾಕಿಕೊಂಡು ಓಡಿ ಬರುತ್ತಿತ್ತು ಆಕೆಯ ೬ ವರ್ಷದ ಮಗು..ಕಂಡರೂ ಕಾಣದಿದ್ದವಳಂತೆ ರಸ್ತೆ ಗುಡಿಸುತ್ತಿದ್ದಳು ಅವಳು..."ಅವ್ವಾ, ನಾ ಇಸ್ಕೋಲಿಗೆ ಹೋಗಾನಿಲ್ಲ ನಾಳೆ,ನಿನ್ ಕುಟ್ಟೆ ಬತ್ತೀನಿ" "ಆಯ್, ನಿಂಗೆನ್ ತಲೆ ಗಿಲೆ ಕೆಟ್ಟದಾ,ಸಿಗೋ ಮೂರ್ ಕಾಸಿನ ಸಂಬ್ಳ,ನಿಮ್ಮಪ್ಪ ಅನಿಸ್ಕೊಂಡ್ ಮೂದೇವಿ ನಶೆಗೆ ಸಾಕಾಗಕಿಲ್ಲ,ಅಂತಾಮಿಕಿ ಕಷ್ಟ ಇದ್ರುನುವೇ ನೀ ಏನಾರ ನಾಕ್ ಅಕ್ಸರ ಕಲ್ತು ನಿನ್ ಉದ್ಧಾರ ನೀ ಮಾಡೀಯೆ ಅಂತ ಇಸ್ಕೂಲಿಗೆ ಹಾಕಿರದು,ಈ ಇಚಾರ ಎಲ್ಲ ದೂರ ಮಡ್ಗಿ ತೇಪ್ಗೆ ಇಸ್ಕೋಲ್ಗೆ ಹೋದೆ ಬಾಳೀಯಾ,ಇಲ್ಲಾ ಅಂದ್ರೆ ಹುಟ್ಲಿಲ್ಲಾ ಅನ್ನಿಸ್ ಬುಟ್ಟೇನು!!" ಅದರ ಕಣ್ಣ ತುಂಬಾ ನೀರು...ಅವ್ವನ ಕೈ ಹಿಡಿದು "ಅವ್ವಾ,ಕಾಸ್ ಕೊಡ್ಲಿಲ್ಲಾ ಅಂತ ತಾನೇ ನಿನಗೆ ದಿನಾ ಅಪ್ಪಯ್ಯ ಈ ತರ ಹೊಡೆಯೊದು..ನಾನು ನಾಳೆ ಇಂದ ಕೆಲ್ಸಕ್ಕೆ ಬಂದ್ರೆ ಸಲ್ಪ ಕಾಸ್ ಬರ್ತೈತೆ.ಆಗ ಅಪ್ಪ ನಿನ್ ಸುದ್ದಿಗೆ ಬರಂಗಿಲ್ಲ ಅಲ್ಲನೇ ಅವ್ವಾ ಅದ್ಕೆಯ ಯೋಳಿದ್ದು" ಕಸಾ ಗುಡಿಸ್ತಿದ್ದ ಪೊರಕೆಯನ್ನ ಪಕ್ಕಕ್ಕೆಸೆದು ಮಗುನಾ ಅಪ್ಪಿ ಮುದ್ದಿಸಿ ಅಳತೊಡಗಿದ್ದಳು ಅವಳು"ಒಂದ್ ದಿನಾ ಅದ್ ಬೇಕು ಇದ್ ಬೇಕು ಅಂತ ಕ್ಯೋಣ್ನಿಲ್ಲ ನನ್ನ್ ಮಗಾ ನೀನು,ಇಂತಾ ಬಂಗಾರದಂತಾ ಮಗಾ ಇರೋ ಒತ್ಗೆ ನಾನ್ಯಾವ ಕಷ್ಟಕ್ಕೆ ಹೆದ್ರೇನು..ಚಲೋ ಓದ್ಬೇಕು ಮಗಾ ನೀನು,ನಿಮ್ಮವ್ವನ ಆಸೆ ಆಟೆಯಾ" ದೂರ ನಿಂತು ನೋಡ್ತಿದ್ದ ನನ್ನ ಕಣ್ಣು ಒದ್ದೆಯಾಯ್ತು...
ದಿನ ನಿತ್ಯ ಬದುಕನ್ನ ಶವ ಯಾತ್ರೆಯಂತೆ ಕಳೆಯುವ ಅನಿವಾರ್ಯತೆ ಅದೆಷ್ಟೋ ಜೀವಗಳಿಗಿದೆ...ಅದು ಇದ್ದರೆ  ಇದಿಲ್ಲ ಇದಿದ್ದರೆ ಅದಿಲ್ಲ..ಮಾಮೂಲೇ..ದೊಡ್ಡ ದೊಡ್ಡ ಸಂತಸಗಳಿಗೆ ಹುಡುಕುತ್ತಾ ಸಣ್ಣ ಪುಟ್ಟದ್ದರ ಬೆಲೆಯನ್ನೇ ಕಳೆಯುತ್ತಿದ್ದೇವೆ ನಾವು...ನನಗೆ ಮನೆಯಲ್ಲಿ ಒಂದು ತುತ್ತು ಅನ್ನ ಚೆಲ್ಲುವಾಗ ,ವಿನಾಕಾರಣ ಅಗತ್ಯವಿಲ್ಲದೆ ದೂರುವಾಗ, ಆಡಿಕೊಳ್ಳುವಾಗ ಕೋಪ ಬರುತ್ತದೆ, ಅವರವರ ಜೀವನ ಅದರ ಅಗತ್ಯತೆ ಅವರವರಿಗೆ..ಅವರ ಜೀವನದ ಹಾದಿ ಅವರು ಹುಡುಕಿಕೊಳ್ಳಬೇಕು..ಅವರ ಕಷ್ಟಗಳಿಗೆ ಪರಿಹಾರ ಅವರೇ ಕಂಡುಕೊಳ್ಳಬೇಕು..ದಿನವಿಡೀ ಮನೆಯಲ್ಲಿ ಕಳೆಯುವದು ಕೇವಲ ಎರಡೋ ಮೂರೋ ಗಂಟೆಗಳಷ್ಟೆ..ಅವುಗಳಲ್ಲೂ ನಾವು ಮುಖ ಕೊಟ್ಟು ಮಾತನಾಡಲಾಗದ ಮಟ್ಟಕ್ಕೆ ತಲುಪುತ್ತಿದ್ದೇವೆ..ಕೂತು ಮಾತಾಡಿದರೆ ಎಲ್ಲ ಸರಿಯಾದೀತು..ಆದರೆ ಅಹಂಕಾರ ಬಿಡಬೇಕಲ್ಲ, ..ಇರುವ ೧೮೦ ನಿಮಿಶಗಳಲ್ಲಿ ಅದೆಷ್ಟು ವ್ಯಂಗ್ಯ,ಅದೆಷ್ಟು ಚುಚ್ಚುವಿಕೆ ಇಂದ ನಿಂದಿಸಿಕೊಳ್ಳುತ್ತೇವೆ..ಒಂದು ನಿಮಿಷ ನಿಲ್ಲಿ..ನಿಮಗೆಲ್ಲಾ ಒಂದು ಪ್ರಶ್ನೆ ಕೇಳಬೇಕು..ನೀವು "ಬದುಕು"ತ್ತಿದ್ದೀರಾ??ಇತರರನ್ನು" ಬದುಕ" ಬಿಡುತ್ತಿದ್ದೀರಾ??
ನಗುವಿನ ಮುಖವಾಡ ಹಾಕಿ ಬದುಕುವ ಕಲೆ ನಿಮಗೆಲ್ಲ ಗೊತ್ತು..ಮನಬಿಚ್ಚಿ ಅತ್ತು ನೋಡಿ ಒಮ್ಮೆ...ಕುಶಿಯಾದಾಗ ಒಂದೆರಡು ಹೆಜ್ಜೆ..ಗೆದ್ದಾಗ ನಿಮ್ಮ ಜೊತೆಯವರೊಂದಿಗೆ ಒಂದು "ಹುರ್ರೇ"...ಸಾಧ್ಯವೇ??

ಮೊನ್ನೆ ನನ್ನ ಮಗ ಗೊತ್ತಿಲ್ಲದಂತೆ ನನ್ನ ಜಾಗಿಂಗ್ ಶೂ ತೂತು ಮಾಡಿಬಿಟ್ಟ..ನಾನು ಹೊಡೆಯಲಿಲ್ಲ..ವಿನಾಕಾರಣ ಹೊಸದಾಗಿದ್ದ ವಸ್ತುವಿಗೆ ಹಣ ಹಾಕಬೇಕಲ್ಲಾ ಅನ್ನಿಸಿತು..ಅದನ್ನೇ ಹಾಕಿ ಜಾಗಿಂಗಿಗೆ ಹೊರಟೆ..ಮರಳಿ ಬರುವ ಹೊತ್ತಿಗೆ ಮುದ್ದು ಮುಖದಲ್ಲೊಂದು ಬೇಸರ ಹೊತ್ತು ಕಾಯುತ್ತಿದ್ದ ಅವನು ನನ್ನ ಕೈ ಹಿಡಿದು"ಅಮ್ಮ ಬಾ" ಅಂದ ಮರು ಮಾತಿಲ್ಲದೆ ಹಿಂಬಾಲಿಸಿದೆ..ತನ್ನ ಪುಟ್ಟ ಪಿಗ್ಗಿ ತೋರಿಸಿ "ತೋರಿಸಿ "ಇದ್ರಲ್ಲಿ ಇರೋ ದುಡ್ಡಲ್ಲಿ ಶೂ ತಗೋ..ನಾನು ದೋಡ್ಡೊನಾದ್ಮೇಲೆ ನಿನಗೆ ಕಾರಲ್ಲಿ ಕರ್ಕೊಂಡು ಹೋಗಿ ತುಂಬಾ ದೊಡ್ಡ ಶೂ ಕೊಡಿಸ್ತೀನಿ..ಆಯ್ತಾ!!"ನನಗೆ ದೊಡ್ಡ ಶೂ ಹಾಕ್ಕೊಳು ಆಸೆ ಇಲ್ಲದಿದ್ದರೂ...ಅವನ ಮಾತು ಕೇಳಿ ಕಣ್ಣಲ್ಲಿ ದೊಡ್ಡ ಬಿಂದು ಒಂದು ಉರುಳಿದ್ದು ಸತ್ಯ..ಅದಕ್ಕೆ ನಾನು ಈಗಲೂ ದಿನಾ ಅದೇ ಶೂ ಹಾಕ್ಕೊಂಡೆ ವಾಕಿಂಗಿಗ್ ಹೋಗ್ತೀನಿ..ನನಗೆ ಅದ್ರಲ್ಲಿ ಕುಶಿ ಇದೆ..ಮರಳಿ ಮನೆಗೆ ಬರುವ ತನಕವೂ ಮುದ್ದು ಮುಖವನ್ನೇ ನೆನೆಸ್ತಿರ್ತೀನಿ..
ಏನೇ ಹೇಳಿ ಪ್ರೀತ್ಸೋದ್ರಲ್ಲಿ..ಪ್ರೀತಿಸಿಕೊಳ್ಳೋದ್ರಲ್ಲಿ..ದುಖವನ್ನ ಹಂಚಿಕೊಳ್ಳೋದ್ರಲ್ಲಿ ಸುಖಾನಾ ಪಾಲು ಮಾಡ್ಕೊಳೋದ್ರಲ್ಲಿ ಏನೋ ಒಂಥರಾ ನೆಮ್ಮದಿ ಇದೆ... ಅಲ್ವೇ??