Sunday, November 24, 2013

ಹೊಸಿಲು ದಾಟದ/ ದಾಟಿದ ಹೆಣ್ಣಿಗೆ!!

ಹೆಣ್ಣಾಗಿ ಹುಟ್ಟಿದವಳೆಂಬ ಒಂದೇ ಕಾರಣಕ್ಕೆ ಇಷ್ಟವಿಲ್ಲದವನ ಕಟ್ಟಿಕೊಂಡು ಬದುಕು ತೇಯುವ ಅದೆಷ್ಟೋ ಹೆಣ್ಣುಗಳು ಆಸುಪಾಸಲ್ಲಿ ಕಾಣಿಸುತ್ತಾರೆ...ಇಷ್ಟ ಪಟ್ಟವನ ಕಟ್ಟಿಕೊಂಡು ಬದುಕೇ ನೀರಸಎಂಬಂತ ಮುಖ ಹೊತ್ತ ಅದೆಷ್ಟೋ ಜೀವಗಳು ಕಾಣಸಿಗುತ್ತವೆ...ನಿಮ್ಮಂತವರಿಗಾಗಿ ನನ್ನಂಥವರಿಗಾಗಿ ಬರಕೊಂಡ ಪದ್ಯಗಳಿವು...

1
ಸೆರಗ ಒತ್ತಿ ಹಿಡಿ...ಕಣ್ಣ ಹನಿಯೊಂದು ಹೊರ ಜಾರೀತು ಜೋಕೆ!!
ಹೊಸಿಲ ದಾಟದ ಹೆಣ್ಣೆ, ಪತಿಯೇ ಪರದೈವ,
ಅಡಿಗೆ ಮಾಡುವ ಪಾತ್ರೆಗಳಂತೆ ದಿನವೂ
ಮನಸ ತೊಳೆಯಬೇಕು
ದಾರಂದ್ರದ ಮಧ್ಯದಿಂದ ಇಣುಕುವ
ಬಿಸಿಲಿಗೆ ಅಪರೂಪಕ್ಕೊಮ್ಮೆಯಾದರೂ
ಕೈ ಒಡ್ಡು ಅಳಿಸಿಹೋದ ಅದೃಷ್ಟದ
ರೇಖೆಗಳು ಕಾಣುತ್ತಿವೆಯೇ??
ವಯಸಿಗೆ ಮುಂಚೆ ಬಂದ
ಮೊಗದಮೇಲಿನ ಸುಕ್ಕು
ನಿನ್ನ ತಪ್ಪಲ್ಲ,
ಒಗೆಯುವ ಬಟ್ಟೆಗಳ ಮಧ್ಯದಲ್ಲಿ
ಇಣುಕುವ ಲಿಪ್‌ಸ್ಟಿಕ್ಕಿನ ಗುರುತು ನಿನ್ನ
ಕಾಡದಿರಲಿ
ಕತ್ತಲಲ್ಲಿ ಮುಗಿಯುವ ಮೃಗೀಯ ಪ್ರಸ್ತಕ್ಕೆ
ದಿನವೂ ಸಾಕ್ಷಿಯಾಗುವ ನಿನ್ನ
ಹೆಣ್ತನಕ್ಕೆ ನನ್ನದೊಂದು ಸಲಾಮು
ಅತ್ತೆ ಮಾವರ ಗೊಣಗಾಟ,ಗಂಡನ
ಕಿಸರುಗಣ್ಣು ಎಲ್ಲ ಕೆಲಸಾಟಗಳ ಮಧ್ಯೆ
ಇಗೋ ನಿನ್ನ ಸೆರಗೆಳೆಯುವ ಮಗುವನೊಮ್ಮೆ ನೋಡಿ
ನಕ್ಕು ಬಿಡು..ಉಕ್ಕುಕ್ಕಿ ಬರುವ ಕಣ್ಣ ಹನಿಗಳು ಸತ್ತು ಹೋಗಲಿ
ದು:ಖ ಸುಖಗಳ ನಡುವಿನ ದ್ವಂದ್ವ ನಾಳೆ
ತರಕಾರಿಯ ಖರ್ಚಿಗಾಯ್ತು!!


 ಕಿರ್ರ್  ಎಂದು ಕಿರುಚುವ ಗಡಿಯಾರದ
ತಲೆ ಮೇಲೊಂದು ಪೆಟ್ಟು
ಏಳದ ಸೂರ್ಯನಿಗೊಂದು  ಶಾಪ
ಮಲಗಿರುವ ಗಂಡ ಮಕ್ಕಳೆಡೆಗೊಂದು
ಅಸೂಯೆಯ ನಿಟ್ಟುಸಿರು
ಪಾತ್ರೆ ತೊಳೆಯುವಾಗಲೂ ತಲೆಯಲ್ಲಿ
ಮುಗಿಯದ ನಿನ್ನೆಯ ವಿಂಡೋಸು ಎಕ್ಸೆಲ್ಲು
ಹಾಲಿಟ್ಟು  ಕುಕ್ಕರಿನ ವಿಶಿಲಾಗುವಾಗ ನೆನಪಾಯ್ತು
ನಿನ್ನೆ ಮ್ಯಾನೇಜರಿಗೊಂದು ಮುಖ್ಯವಾದ  ಕರೆ ಇತ್ತು!!
ಮುಗಿದ ತಂಗಳು ಪೆಟ್ಟಿಗೆಯ ತರಕಾರಿ ,ಹಸಿಮೆಣಸು ಕೊತ್ತಂಬರಿಗಳ
ಮರೆತು ಏನೋ ಒಗ್ಗರಿಸುವಾಗ ತಟ್ಟಂತ ಹೊಳೆದದ್ದು
ಮುಗಿದು ಹೋದ ಮೊಬೈಲಿನ ಕರೆನ್ಸಿ !!
ವಾರದ ಈ ದಿನವೇ ಕರೆ ಮಾಡುವ ಅಮ್ಮ
ಕೇಳೋದು "ಆರಾಮಿದ್ದೀಯಾ"
ನನಗೋ ಹೇಳೋದಿಕ್ಕೂ ಪುರುಸೊತ್ತಿಲ್ಲ, ಬಿದ್ದ
ಬಟ್ಟೆಗಳ ರಾಶಿಯಲ್ಲಿ ಮಗನ ಚಡ್ಡಿ ಹುಡುಕುತ್ತಾ
ಕತ್ತೆತ್ತಿ ನನ್ನವನ ನೋಡುತ್ತೇನೆ ಅಲ್ಲೇನಿದೆ?
ಕಟ್ಟದ  ವಿದ್ಯುತ್ ಬಿಲ್ಲು,ಮಗನ ಸ್ಕೂಲು ಫೀಸು
ಧಾರೆಯಾಗಿ ಹರಿಯುವ ನೀರಿಗೆ ತಲೆಯೊಡ್ಡಿದಾಗ
ಅವನು ನೆನಪಾಗುತ್ತಾನೆ
ತಟ್ಟಂಥ
ಬಿಸಿ ನೀರ ಧಾರೆಯಲ್ಲೂ
ತಣ್ಣನೆಯದೊಂದು ನಡುಕ
ಇನ್ನೂ ಸುಕ್ಕುಗಟ್ಟದ ನನ್ನ ರೇಶಿಮೆಯ
ಮೈಗೆ ಎಳೆಸೂರ್ಯನ ಕಿರಣದಂತೆ
ತಾಕಿದವನ ಗುರುತು ಹುಡುಕುತ್ತಾ
ಹೊರಬರುತ್ತೇನೆ!!
ದಿನವಹಿಯ ಸುಸ್ತು ಅವಾಹಿಸಿಕೊಂಡು
ಆಫೀಸಿಂದ  ಬಂದು
ಕಾಣದ ದೇವರಿಗೊಮ್ಮೆ ಕೈಮುಗಿಯುತ್ತೇನೆ..
ಸದ್ಯ!!ಒಂದು ದಿನ ಕಳೆಯಿತಲ್ಲ!!