Saturday, December 15, 2012

ಶಿಶಿರ ಹೇಮಂತ ಗಾನ(ಚಳಿಗಾಲದ ಪಲಕುಗಳು)

 ಪಲಕು ೧


ಹೊದಿಕೆಯ ಅಡಿಯಲ್ಲಿ ಬೆಚ್ಚಗೆ ಹೊದ್ದು ಮಲಗಿದ ನನ್ನ ಕರೆದದ್ದು ಸೂರ್ಯನಾ?ಈ ಮೈ ನಡುಕಕ್ಕೆ ನಿನ್ನ ನೆನಪು ಮತ್ತಷ್ಟು ಚಳಿ ಏರಿಸುತ್ತದಲ್ಲೋ ಪಾಪಿ!!ನಾನ್ಯಾವ ಪಾಪದ ಕರ್ಮ ಮಾದಿದ್ದೇನೋ,ಇಂತಹ ರಣ ಚಳಿಗಾಲದಲ್ಲಿ ನನ್ನ ವಿರಹದ ಉರಿಗೆ ತಳ್ಳಿ ನಿನ್ನ ತೊಗಲುಭರಿತ ಹೃದಯವ ಚಳಿ ಕಾಸೋಕೆ ಬಿಟ್ಟಿದ್ದೀಯಲ್ಲ ಹೇಳು ಇದು ಯಾವ ನ್ಯಾಯ? ಕಷ್ಟ ಪಟ್ಟು ಹೇಗೋ ಎದ್ದಿದ್ದಾಯ್ತು..ಅಕ್ಕಪಕ್ಕದ ಮನೆಯ ಹೆಂಗಸರ ಸುಳಿವಿಲ್ಲ ಈ ಚಳಿಗಾಲ ಬಂದ ಮೇಲೆ,ಎದ್ದಾರಾದರು ಹೇಗೆ, ಗಂಡ ಮಕ್ಕಳ ನಡುವೆ ಬೆಚ್ಚಗೆ ಹೊದ್ದು ಮಲಗಿದ ಅವರ ಸವಿ ನಿದ್ದೆಗೆ ಮತ್ತಷ್ಟು ಮಸುಕು ಸುರಿದು ನಿದಿರೆಯ ಮಾಯಾ ಲೋಕಕ್ಕೆ ತಳ್ಳುವನಲ್ಲಾ ಈ ಶಿಶಿರ..ನನ್ನ ಪಾಲಿಗೆ ಮಾತ್ರ ವೈರಿ!!

ಪಲಕು ೨

ತಣ್ಣನೆಯ ನೀರಿನಲ್ಲಿ ಮುಖ ತೊಳೆದು,ಬೆಳಗಿನ ಸೌಂದರ್ಯ ಸವಿಯಲು ಮನೆ ಬಾಗಿಲು ತೆರೆದೆ,ರಪ್ಪೆಂದು ರಾಚಿದ ಗಾಳಿಗೆ ಎದೆಯಲ್ಲಿ ನಡುಕ, ಮುಂದೆ ಯಾರಾದರೂ ಇದ್ದಾರೋ?..ಕಾಣಲಾಗದಷ್ಟು ಮಂಜಿನ ತೆರೆ, ನನ್ನ ನಿನ್ನ ನಡುವೆಯೂ ಇಷ್ಟೇ ಅಂತರ..ಹೆಜ್ಜೆ ಇಟ್ಟರೆ ಅಳುವ ಗತಿಸಿದ ನಿನ್ನ ಸವಿ ಸ್ನೇಹದ ನೆನಪುಗಳು..ನನ್ನ ಬೆಳಗಿನ ಕಿನ್ನರಿ ಅಂತಿದ್ದೆ..ಈಗ ಕಿನ್ನರಿಯ ಮಾಯಶಕ್ತಿ ಸೊರಗಿದೆ..ನೀ ಹಾಸಿದ ಮಂಜಿನ ತೆರೆಯ ನೀನೇ ಸರಿಸಿ ಬರಬಾರದೇ? ಮನಸಿಗೂ ಒಮ್ಮೊಮ್ಮೆ ಎಂತಹ ಹುಚ್ಚು ನೋಡು..ನಾ ನಡೆದ ಉಹುಮ್ ನಾವು ನಡೆದ ಈ ಹಾದಿಯಲ್ಲಿ ಮತ್ತೆ ಹೂ(ಅದೂ ಕಣಗಿಲೆ) ಅರಳಿದೆ..ಅದರ ಮೇಲೆ ಬಿದ್ದ ಹಿಮದ ಬಿಂದುವಿನಲ್ಲಿ ನಿನ್ನ ಸ್ಪರ್ಶದ ಅನುಭವವಾಗಿ ಒಮ್ಮೆ ಬೆಚ್ಚಿದೆ!!


ಪಲಕು ೩

ಎಂದೂ ಕಾಣುತ್ತಿದ್ದ ನಿತ್ಯದ ಮುಖಗಳಿಗೀಗ ಸ್ಪಷ್ಟತೆ ಇಲ್ಲ..ಯಾಕೆಂದರೆ ಮಂಜು ಸುರಿದಿದೆ ನೋಡು..ಸೂರ್ಯನು ನಿನ್ನ ಸ್ನೇಹಿತ ತಾನೆ..(ನೀ ಚಂದಿರನಾದರೆ ಅವ ನಿನ್ನ ಸ್ನೇಹಿತನೊ ವೈರಿಯೊ?)ಅವನಿಗೆ ನನ್ನ ಮೇಲ್ಯಾವ ದ್ವೇಷವಿದೆ  ಮಾರಾಯ ಎಲ್ಲಾ ಮುಖಗಳ ಮೇಲಿನ ನಗುವ ಅಳಿಸಿ ಹಾಕಿದ್ದಂತೆ ಕಾಣುವುದು!! ಕೈ ಕೈ ಹಿಡಿದು ನಾವಿಬ್ಬರೂ ಅದೆಷ್ಟು ಬಾರಿ ಈ ಜಾಗದಲ್ಲಿ ಸೂರ್ಯನಿಗೆ "ಗುಡ್ ಮಾರ್ನಿಂಗ್" ಹೇಳಿಲ್ಲ??ಈಗಲ್ಲಿ ನೀ ಬಿಟ್ಟು ಹೋದ ಅಸಹನೀಯ ಏಕಾಂತವಿದೆ..ಆ ದಾರಿಯಲ್ಲಿರುವ ಮಂಜಿನ ತೆರೆ ಈಗ ಮತ್ತಷ್ಟು ಗಾಢವಾಗಿದೆ.ಆದರೂ ನನಗೆ ಚಳಿಗಾಲ ಎಂದರೆ ಇಷ್ಟ..ನಿನ್ನ ನೆನಪು ಮತ್ತಷ್ಟು ನಿಚ್ಚಳ ನನ್ನ ಪ್ರೀತಿ ಮತ್ತಷ್ಟು ಆಳವಾಗುತ್ತದೆ ನೋಡು..ಅದಕ್ಕೇ!!

ಪಲಕು ೪
ಏನೆ ಹೇಳು,ಈ ಚಳಿಗಾಲಕ್ಕೊಂದು ಅನೂಹ್ಯ ಸೌಂದರ್ಯವಿದೆ , ಒಂದು ಬಣ್ಣಿಸಲಾಗದ ಅಂದವಿದೆ, ಮುಪ್ಪಿನ ಸುಕ್ಕುಗಳಲ್ಲಿರುವ ಅನುಭವದ ರೇಖೆಗಳಂತೆ ಜೀವನದ ನಶ್ವರತೆಯ ಸಾರುವ ಗುಣವಿದೆ..ನೋಡು..ಎಲ್ಲ ಮರಗಳಿಂದ ಉದುರುವ ಬಣ್ಣ ಬಣ್ಣ ಮಾಸಿದ ಎಲೆಗಳು ಯಾವ ಅವಸರವಿಲ್ಲದೇ ಭೂಮಿಯನ್ನ ನಿಧಾನವಾಗಿ ಚುಂಬಿಸುತ್ತಿದೆ..ಕಲರವದಿಂದ ಜರ್ಝರಿತವಾಗಿದ್ದ ಈ ವನದಲ್ಲಿ ಮೌನದ ಹಿತವಾದ ಕೂಜನ!! ಹಿಮಮಣಿಗಳ ಅಂದವೆನ ಹೇಳಲಿ ಗೆಳೆಯಾ,ಸೂರ್ಯನಿಗೇ ಗೊತ್ತಿಲ್ಲದ ಅನೇಕ ಬಣ್ಣಗಳಲ್ಲಿ, ಅವನ ಪ್ರಖರ ಕಿರಣಕ್ಕೆ ಕರಗುವಾಗಲೂ ಅದೆಂಥ ತನ್ಮಯತೆ??ನಿನ್ನಲ್ಲಿ ಕರಗುವ ನನ್ನಂತೆ!!ಈ ಮೌನದಲ್ಲಿ ಒಂದು ವಿರಹವಿದೆ..ಈ ಬಿದ್ದ ಎಲೆಗಳ ಮೇಲೆ ನಡೆವಾಗ ನಿನ್ನ ನೆನಪುಗಳ ಸರಸರ್ ಸದ್ದಿಗೆ ನನ್ನ ಕಾಲಗೆಜ್ಜೆ ಮೌನವಾಗಿದೆ.. ಆ ಎಲೆ ಇಲ್ಲದ ಮರಗಳು ನಶ್ವರತೆ,ದು:ಖದ ತೀವ್ರತೆಯನ್ನ ಸೂಚಿಸುವಂತೆ ನಿಂತಿವೆ, ಬೀಸಿ ಬರುವ ಗಾಳಿಗೀಗ ಎಲ್ಲಿಲ್ಲದ ತೀವ್ರತೆ..ನಲ್ಲನನ್ನ ಕಳಕೊಂಡ ನಲ್ಲೆಯ ನಿಟ್ಟುಸಿರ ಓಲೆ ಅದರಲ್ಲಿರಬಹುದೇ?? ನಾನಂಥ ಓಲೆಯೊಂದ ಬರೆದರೆ ನೀ ದೂರದಲ್ಲೆಲ್ಲೋ ಓದಬಹುದೇ??

ಪಲಕು೫

ಇದು ಆಸೆಗಳ ಹಣ್ಣಾಗುವ ಕಾಲ..ಹಳೇ ಗಾಯಗಳು,ನೋವುಗಳು ಕೆಣಕುವ ಕಾಲ..ಆಸೆಗಳ ಹಣ್ಣುಗಳು ಬಯಕೆಗಳ  ಎಲೆಗಳು ಉದುರುವ ಕಾಲ..ಸುಖ-ದು:ಖದ ಸಮ್ಮಿಲನದ ಅರೆಮಾಗಿದ ಮಾಗಿ ಕಾಲ..ಯಾವ ಅವಸರವಿಲ್ಲದ ಸಾವಕಾಶದ ಕಾಲ..ವಿರಹಿಗಳ ಸುಡುವ ಚಳಿಗಾಲ..ಮನಸ್ಸು ಯೋಚಿಸುತ್ತದೆ..ದು:ಖವಿಲ್ಲದೇ ಸುಖವೇ?? ಕಪ್ಪೆಂಬ ಬಣ್ಣವೇ ಕಾಣದಿದ್ದರೆ ಬಿಳುಪು ಕಂಡೀತು ಹೇಗೆ?? ಕತ್ತಲಿಲ್ಲದ ಬೆಳಕೇ??ಪ್ರೀತಿ ಇಲ್ಲದ ಪ್ರಕೃತಿಯೇ?? ಶಿಶಿರ ಹೇಮಂತರಿಲ್ಲದ ವಸಂತನೇ??ನಿನ್ನ ಇರುವಿರದ ನಾನೇ?? ನೀ ಉತ್ತರಿಸು!! ನನ್ನೊಂದಿಗೆ ಶಿಶಿರನೂ ಹೇಮಂತನೂ ಕಾಯುತ್ತಿರುವರು ನಿನ್ನ ಉತ್ತರಕ್ಕೆ..ವಸಂತನೊಬ್ಬ ಬರುವ ಮೊದಲೇ ನಿನ್ನ ಸಂದೇಶ ತಲುಪಲಿ..ನನ್ನ ಬರದಾದ ಬಯಕೆಗಳ ನದಿ ತುಂಬಿ ಹರಿಯಲಿ..



 

6 comments:

  1. ತುಂಬಾ...
    ತುಂಬಾ ಇಷ್ಟವಾಯ್ತು ಪಲಕುಗಳು...

    ನಿಮ್ಮ ಪ್ರತಿಭೆಗೆ ನನ್ನ ನಮನಗಳು...

    ReplyDelete
  2. ೧. ವಿರಹ, ಚಳಿ ಮತ್ತು ಶಿಶಿರ ಸೂಪರ್ರೂ...

    ೨. ಮಂಜಿನ ತೆರೆ ಹಿಂದೆ ಎಂತದೋ ನೆನಪಿನ ಪುಳಕ.

    ೩. ನೆನಪು ಕೆದಕುವ ಚಳಿಗಾಲಕ್ಕೆ ನಮ್ಮದೂ ಸಲಾಮು.

    ೪. ಮೌನದ ಹಿತವಾದ ಕೂಜನ!! ಪದ ಬಳಕೆ ನಿಮ್ಮಿಂದ ಕಲಿಯಬೇಕು ಮಹೀ.

    ೫. ಋತು ಮಾನ ಸಂಪುಟ ತೆರೆದ ಮನ.

    ಒಟ್ಟಾರೆ ೫ಕ್ಕೆ ೫ ರಲ್ಲೂ ನೂರಕ್ಕೇ ಇನ್ನೂರು...

    ReplyDelete
  3. ತುಂಬಾನೇ ಇಷ್ಟವಾಯಿತು ಮಾಗಿಯ ಫಲುಕುಗಳು...

    ReplyDelete
  4. ಮಾಗಿಯ ಚಳಿಯಲ್ಲಿ ಮಾಗದೆ ಇರುವ ನೆನಪುಗಳ ಸಾರವನ್ನೇ ಹೊತ್ತು ಒಂದು ಸುಂದರ ಹದಭರಿತ ಪಾಕ ಉಣಬಡಿಸಿದ್ದೀರಿ..ಪದಗಳ ನರ್ತನ..ಭಾವಗಳ ಪಲುಕು, ಎಲ್ಲವು ಸೊಗಸಾಗಿ ಮೂಡಿಬಂದಿವೆ.ಅಭಿನಂದನೆಗಳು

    ReplyDelete
  5. ಎಲ್ಲವೂ ಸುಂದರ ಪಲಕುಗಳು.
    ಮೆಲುಕು ಹಾಕುವಂತಹದ್ದು.. ಚೆನ್ನಾಗಿದೆ.

    ReplyDelete
  6. ಪಲುಕುಗಳಿಗೆ ಸುಂದರ ಭಾವ ಸೇರಿದರೆ ಮೆಲುಕಿಗೆ ಕಾರಣವಾಗುತ್ತದೆ...
    ಬಹಳ ಸುಂದರವಾಗಿವೆ ಋತುಗಳ ಚಿತ್ರಿಸೋ ಪದಜಾಲದ ಕವನ

    ReplyDelete