Sunday, January 13, 2013

ಸುಮ್ಮನಿರದ ಸಾಲುಗಳು...

  ನಾನಳಿಯಲಿ

ನಿನಗೆಂಥ ಪ್ರೇಮದ ಹಸಿವು ದೊರೆ??
ನಿನ್ನ ಬಯಕೆಯ ಕಡಲ ಹೀರಿ
ಮುತ್ತಿನ ಮಧು ಮಳೆಯಸುರಿದೆ
ನೋಟದ ಮಿಂಚಿತ್ತು
ಪಿಸುಮಾತುಗಳ ಗುಡುಗಿತ್ತು
 ಆದರೆ...
ನಿನ್ನೆದೆಯ ಬರಡು ಮರುಭೂಮಿಯಲ್ಲಿ
ತಾಕಿ ಆವಿಯಾಯಿತು..
 ನನ್ನಲ್ಲಿ ಇನ್ನೂ ಬತ್ತದ ಜೀವಸೆಲೆಯಿದೆ
ಸುರಿವೆ ನಿನ್ನೊಡಲಿಗೆ
ತಕ್ಕೋ..ನಿನ್ನ ವಿರಹದ
ಬಡಬಾನಲಕ್ಕೆ ಸಿಕ್ಕಿ "ನಾನ"ಳಿಯಲಿ!!



ಸಂಕ್ರಾಂತಿ

 ಸಂಕ್ರಾಂತಿ ಬಂದಿದೆ
’ಸಮ್" ಕ್ರಾಂತಿ ಬರುವುದೇ??

ಅದೆಷ್ಟು ಸೀತೆಯರು..
ಅದೆಷ್ಟು ದ್ರೌಪದಿಯರು..
ಅದೆಷ್ಟು ಅಂಬೆಯರು,
ಅಂಬಾಲಿಕೆಯರು
ಕಣ್ಣ ನೀರ ಹರಿಸಿ 
ಒಡಲ ಅಸು ನೀಗಿಹರು
ನೀನು ದುಶ್ಯಾಸನರ 
ಅಳಿಸಿ ರಾಮರ ತರುವೆ
ಕ್ರಾಂತಿಯ ಕಿಡಿಯ ಹೆಣ್ಣ 
ಮನದಲ್ಲಿ ಹೊತ್ತಿಸಿ
ಒಂದಷ್ಟು ಶಾಂತಿಯ 
ತಂದಿಯೆಂದು ಆಸೆ 
ಹೊತ್ತಿದೆ ಎನ್ನ ಮನ!!
 ಹೇಳು ಬರೀ ಎಳ್ಳು ಬೆಲ್ಲ
ತರುವುದೇ ರಾಮರಾಜ್ಯ??
ಎಷ್ಟು ಕೊಟ್ಟರೇನು,ಎಷ್ಟು ಪಡೆದರೇನು?
ಸಂಕ್ರಾಂತಿ ಕ್ರಾಂತಿಯಾಗಬೇಕು
ಹೆಣ್ಣು ಕಾಳಿಯಾಗಬೇಕು
ರಣಚಂಡಿಯಾಗಬೇಕು!!







3 comments:

  1. ನಿಮಗೂ ಕೂಡಾ ಸಂಕ್ರಾಂತಿಯ ಹಾರ್ದಿಕ ಶುಭಾಷಯಗಳು....
    "ಬಡಬಾನಲಕ್ಕೆ" ಇಷ್ಟವಾದ ಪದ...
    ಚೆನ್ನಾಗಿದೆ ಸಂಕ್ರಾಂತಿ ಕವನ ಕೂಡಾ....
    "ಹೆಣ್ಣು ಕಾಳಿಯಾಗಬೇಕು
    ರಣಚಂಡಿಯಾಗಬೇಕು!!"
    ಎನ್ನುವಲ್ಲಿ ಪ್ರಸ್ತುತ ಸ್ಥಿತಿಗೆ ಒಳ್ಳೆಯ ಸಂದೇಶ ಕೊಡುತ್ತಿದ್ದೀರಿ..
    ಬರೆಯುತ್ತಿರಿ..
    ನಮಸ್ತೆ

    ReplyDelete
  2. ಒಳಗಿರುವ ದುಶ್ಯಾಸನರನ್ನು ಒಳಗೆ ಇರದೇ ಹೊರಗೆ ಬಿಟ್ಟು.ಒಳಗಿರಬೇಕಿದ್ದ ರಾಮ ಕೃಷ್ಣರನ್ನು ಒಳಗೆ ಬಿಡದೆ ಒದ್ದಾಡುತ್ತಿರುವ ಸಮಾಜದ ಸಾದೃಶ್ಯ ನೋಟ ನಿಮ್ಮ ಕವನಗಳ ಸಾಲುಗಳು...ಸೂಪರ್

    ReplyDelete
  3. ನಾನಳಿಯಲಿ :

    ಕರಗಿ ಹೋಗುವದರಲ್ಲೂ ಮಜವಿದೆ ಅಲ್ಲವೇ? ಸಂಪೂರ್ಣ ಅರ್ಪಣಾ ಭಾವದ ಕವನ.

    ಸಂಕ್ರಾಂತಿ:

    ಹೆಣ್ಣು ಮೊದಲು ತನಗೆ ತಾನು ಯಾರಿಗೂ ಕಮ್ಮಿ ಇಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಂಡರೆ ಮುಕ್ಕಾಲು ವಾಸೀ ಶೋಷಣೆ ನಿಲ್ಲುತ್ತದೆ. ಅವಳ ಹಿಂಸೆಗೆ ಯಾರೇ ಕಾರಣರಿರಲಿ. ಅವರಿಗೆ ನಮ್ಮ ಧಿಕ್ಕಾರವಿದೆ.

    ReplyDelete