Friday, March 7, 2014

ಮನದಲ್ಲಿ ಹೊಳೆದದ್ದು !!


ಎದುರು ಬದುರು ಕುಳಿತಿದ್ದೆವು... ಬರೀ ದೂರವಾಣಿಯಲ್ಲಿ ಮಾತಿತ್ತು ನಿನ್ನೆಯ ತನಕ ,ಇವತ್ತು ತುಂಬಾ ಚರ್ಚೆಗಳು.. ನನಗೆ ಆರೋಗ್ಯಕರವಾದ ಸಂವಾದ ಬೇಸರ ತರುವದಿಲ್ಲ ..ಯಾವ ವಿಷಯಕ್ಕೂ ಸೈ,ನನಗೆ ಗೊತ್ತಿದ್ದನ್ನು ಹೇಳಿ ಗೊತ್ತಿಲ್ಲದ್ದನ್ನು  ಕೇಳುವ ತನಕ ... ನಾನು ಆಗಷ್ಟೇ ಓಶೋ ಪುಸ್ತಕ ಓದಿ ಮುಗಿಸಿದ್ದೆ..ಮಾತಾಡುತ್ತಾ ಆಡುತ್ತಾ ಮುಕ್ತ ಲೈಂಗಿಕತೆ ಎಡೆಗೆ ಮಾತು ಹೊರಳಿತು... ನನ್ನ ಅಭಿಪ್ರಾಯ ಕೇಳಿದ ..ನಾನು ಹೇಳಿದೆ... ಮನಸ್ಸು ಒಪ್ಪಿದವರೊಡನೆ ಇರುವುದು ಖಂಡಿತಾ ತಪ್ಪಲ್ಲ,ಮನಸ್ಸು ಮುರಿದವರೊಡನೆ ಬದುಕುವುದು ತಪ್ಪು .. ಈಗವನ ಬಾರಿ , ಒಂದು ಕ್ಷಣ ಏನು ಹೇಳಲಿಲ್ಲ ..ನಂತರ ನನ್ನ ಕಣ್ಣಲ್ಲಿ ಕಣ್ಣಿಟ್ಟು ಕೇಳಿದ "ನನ್ನ ಮನೆ ಮನಸ್ಸು ಖಾಲಿ ಇದೆ ..ಬಿಟ್ಟು  ಬಂದು ಬಿಡು " ನಿರುತ್ತರಳಾಗುವ ಸರದಿ ನನ್ನದು..ಆಡದೆ ಉಳಿದ ಮಾತಿತ್ತು .ಅದಕ್ಕು ಮೀರಿದ ಕರ್ತವ್ಯದ ಕರೆ ಇತ್ತು .. ಹಾಗೇ ಒಂದು ಕಲ್ಪನೆಗಾದರು ಕನಸಿಗಾದರೂ ಸಿಗಬಹುದಾದ ಅವನ ಲೋಕವನ್ನ ವಾಸ್ತವಕ್ಕೆ ಬಂದು ಕಳಕೊಳ್ಳೋ ಭಯವಿತ್ತು !! ಮತ್ತೆ ನಾ ಅವನೊಡನೆ ಮುಕ್ತ ಲೈಂಗಿಕತೆಯ ಬಗ್ಗೆ ಮಾತಾಡಲಿಲ್ಲ..ಅವನೂ ಸಹ!!



ಪಕ್ಕದ ಮನೆಯಾಕೆ ನೀರು ಹಾಕಿ ಒಪ್ಪವಾಗಿ ರಂಗೋಲಿ ಇಡುತ್ತಾಳೆ ..ನಮ್ಮವ ಅದನ್ನ ನೋಡಿದಾಗಲೆಲ್ಲಾ ನನ್ನತ್ತ ಕಣ್ಣು ಹರಿಸಿ ನಿಟ್ಟುಸಿರಿಡುತ್ತಾನೆ ... ನನಗೆ ಇವನಂತವರ  ಮನಸ್ಥಿತಿಗೆ  ಮರುಕ, ಸಂಬಳ ತಂದ ಹದಿನೈದು ದಿನ ಗೆಳೆಯರೆದುರು ದೇವತೆ   ಎಂದು ಅಟ್ಟಕ್ಕೆರಿಸುವುದು ,ಉಳಿದ ದಿನ ರಾತ್ರಿಗಳು ದೂರದೂರಿನ  ಮನೆಯವರೆದುರು ಅವಳು ಒಪ್ಪವಿಲ್ಲ ಅದು ಮಾಡೋದಿಲ್ಲ ಇದು ಮಾಡೋದಿಲ್ಲ ಎಂದು ದೂರೋದು ... ಮೊದಲೆಲ್ಲಾ ಏಣಿ ಹತ್ತಿದ್ದು ಇಳಿದದ್ದು ಗೊತ್ತಾಗುತ್ತಿರಲಿಲ್ಲ ..ಈಗೀಗ ಹುಶಾರಾಗಿದ್ದೇನೆ...  ಅವನ ಹೊಗಳಿಕೆಗೂ ತೆಗಳಿಕೆಗೂ ಆಕಾಶದಲ್ಲಿ ಕಣ್ಣು ನೆಟ್ಟು ಅಮವ್ಯಾಸೆಯಲ್ಲಿ ಕಾಣದ ಚಂದ್ರಮನ  ನೆನೆದು ನಿಟ್ಟುಸಿರಿಡುತ್ತೇನೆ !!



ಅವನು ಹತ್ತಿರದ ಗೆಳೆಯ ಅವನ ತೀರ  ವೈಯುಕ್ತಿಕ ವಿಷಯಗಳು ನನಗೆ ಗೊತ್ತು ..ನೋಡಲಿಕ್ಕೂ ಚನ್ನಾಗಿದ್ದಾನೆ..
ಓದಿಕೊಂಡಿದ್ದಾನೆ ..ಸ್ತ್ರೀವಾದದ ಬಗ್ಗೆ ಸ್ತ್ರಿಲಿಂಗಿಯಾದ  ನನ್ನೇ ಸೋಲಿಸುವಷ್ಟು ಮಾತಾಡುತ್ತಾನೆ , ಆದರೆ ನನ್ನ ಕಷ್ಟಗಳನ್ನ ಹೇಳಿದಾಗ ಮಾತ್ರ ಆಥವಾ  ಅಪ್ಪಟ ಅಪ್ಪನಂತೆ ಅಥವಾ ತಮ್ಮನಂತೆ "ನೀನು ಹೆಣ್ಣು ಕಣೇ ..ಸಹಿಸಿಕೋಬೇಕು ..ಏನೋ ಒತ್ತಡದ ಗಳಿಗೆಗಳು" ನನಗೆ ಉರಿದು ಹೋಗುತ್ತದೆ .. ಅವನೊಡನೆ ಶರಂಪರ ಕಿತ್ತಾಡಿ ಬರುತ್ತೇನೆ ..ಕಣ್ಣತುಂಬಾ ಪ್ರಶ್ನಾರ್ಥಕ ಚಿಹ್ನೆ ಹೊತ್ತು ಕಾಯುತ್ತಿರುವ ನನ್ನವನೆದುರು ನಿಂತು "ಆಯ್ತಾ,ಇವತ್ತು ಜಗಳವಿಲ್ಲ...ಏನು ಮಾಡಲಿ ಊಟಕ್ಕೆ.. ಕಾಫಿ ಕುಡಿತೀಯಾ?" ಕೇಳುತ್ತೇನೆ, ಕಿತ್ತಾಟಕ್ಕೆ ಸಿದ್ಧವಾಗಿ ಶಸ್ತ್ರ ಸಜ್ಜಿತನಾಗಿದ್ದ ಅವ ಕತ್ತು  ಕೆಳಗಿಳಿಸಿ" ಕಾಫೀ ಮಾಡು" ಅನ್ನುತ್ತಾನೆ ..ಕಣ್ಣಲ್ಲಿ  ತುಂಟ ವಿಜಯದ ನಗು ಹೊತ್ತು ನಾನು ಅಡಿಗೆ ಮನೆಯತ್ತ ಧಾವಿಸುತ್ತೇನೆ ಮನದಲ್ಲಿ ದಿನವೂ ಅವನು ಸಿಗಬಾರದೇ ಎಂದು ಶಾಪ ಹಾಕುತ್ತಾ  !!

ಚಿತ್ರಕೃಪೆ :ಅಂತರ್ಜಾಲ 

18 comments:

  1. ನಿಮ್ಮ ಪದ ಜೋಡಣೆಯಲ್ಲಿ ತುಂಬಾ ವಿಶೇಷತೆ ಇದೆ. ನನಗೆ ಅನಿಸಿದಂತೆ ನಿಮ್ಮ ಅನುಭವದ ಆಲೋಚನಾ ಮಂಥನ ಒಂದು ಹಂತಕ್ಕೆ ಬಂದು ನಿಂತು ಬಿಟ್ಟಿದೆ. ಬೇರೆ ಹೊಸ ವಿಷಯಗಳ ಬಗ್ಗೆ ನೀವು ಬರೆದರೆ , ಆಸಕ್ತಿಕರ ನಿಜವಾಗಿಯೂ. ಕೆಲವು ಬಾರಿ ವಯಸ್ಕರ ಆಲೋಚನೆಗಳನ್ನು ಓದಿದಾಗೆ ಅನಿಸದ್ದು, ಒಂದು ಚೀಲ ರಾಗಿಯಲ್ಲಿ ಎಷ್ಟು ಕಾಳುಗಳು ಇರಬಹುದು ಎಂದು ಚಿಕ್ಕ ವಯಸ್ಸಿಂದ ನಾನು ಆಲೋಚಿಸಿದ ವಿಷಯವೇ ಇಂದಿಗೂ ಹೊಸದು ಎನಿಸುತ್ತೆ.

    ReplyDelete
    Replies
    1. raghavendra ..naaninnU hosatanada haadiyalli nadeyuttiruvavaLu..nimma abipraayagaLu adastu arthavaaguvantiddare oLLeyadu...hIgE baruttiri..santasavaaytu!!

      Delete
    2. ಥ್ಯಾಂಕ್ಸ್, ಈಗಿನ ದಿನಗಳಲ್ಲಿ ಅನುಭವದ ಆಲೋಚನೆಗಳನು ಹೊಸ ರೀತಿಯ ಹೋಲಿಕೆಗಳೊಂದಿಗೆ ಹೇಳಿಬಿಡುತ್ತಾರೆ , ಆದರೆ ತಿಳಿದ ಅನುಭವಗಳ ಆಳಕ್ಕೆ ಬಹಳಷ್ಟು ಕಡಿಮೆ ಜನ ಇಳಿಯುತ್ತಾರೆ , ಆಲೋಚನೆಗಳ ಆಳಕ್ಕೆ ಇಳಿದರೆ ತಾನೆ ಹೊಸಪದಗಳು, ಭಾವಗಳು ನಮಗೆ ಹುಟ್ಟುವುದು ? ಹಾಗೆ ಸತ್ಯ ನಿಷ್ಟವಾದ ,ಚೊಕ್ಕವಾಗಿ ಹೊಸ ಆಳ ಪದರುಗಳಲ್ಲಿ ನಿಮ್ಮ ಅನುಭವಗಳನು ಆಲೋಚಿಸಿ. ಆಲೋಚಿಸಿ ನಿಮ್ಮ ಪದಗಳಲಿ ಬರೆಯಿರಿ , ನಿಜಯಾಗಿಯು ನಿಮ್ಮಲ್ಲಿ ಆ ಕಲೆ ಇದೆ, ಆ ರೀತಿ ಬರೆದರೆ ಅದೊಂದು ಎಲ್ಲರಿಗು ಕೊತೂಹಲವಿಷಯ ಆಗುತ್ತೆ .

      Delete
    3. ನಿಮ್ಮ ಬರಹ ದಲ್ಲಿ ಜೀವನ ಪ್ರೀತಿ ಇದೆ.. ಅದರ ಮೊನಚು ಹಾಗು ಭಾವಸ್ಪಂದನ ನನಗೆ ಇಸ್ತವಾಯ್ತು..
      ಶುಭಾಷಯಗಳು

      Delete
  2. ವಾಸ್ತವ ಮತ್ತು ಕನಸಿನ ಮುಖಾಮುಖಿ, ಸಣ್ಣ ಸಣ್ಣ ಕತೆಗಳು ಚೆನ್ನಾಗಿವೆ.

    ReplyDelete
  3. ಹೇ... ಶಮ್ಮಿ.....
    ಚೆನ್ನಾಗಿವೆ.. ಅವನ ಹೊಗಳಿಕೆಗೂ ತೆಗಳಿಕೆಗೂ ಆಕಾಶದಲ್ಲಿ ಕಣ್ಣು ನೆಟ್ಟು ಅಮವ್ಯಾಸೆಯಲ್ಲಿ ಕಾಣದ ಚಂದ್ರಮನ ನೆನೆದು ನಿಟ್ಟುಸಿರಿಡುತ್ತೇನೆ !!... ಸೂಪರ್ ಸೂಪರ್

    ReplyDelete
  4. ೧.
    ವಾಸ್ತವಕ್ಕೆ ಎಳೆತನದಿಂದಲೂ ಕಲ್ಪನೆಯ ನೆಮ್ಮದಿಯನ್ನು ಕಳೆದುಕೊಳ್ಳಬಾರದು, ಎನ್ನುವ ಮಾತು ನಾನು ಸಂಪೂರ್ಣ ಒಪ್ಪುತ್ತೇನೆ. ಆ 'ಮುಕ್ತತೆ' ಈ ನೆಲಕೆ ಒಗ್ಗದ ವಿಚಾರ.

    ೨.
    ಅಸಲು ಒಳಗೊಂದು ಮಡಗಿಕೊಂಡು ಅತ್ಯಂತ ಅಮೋಘವಾಗಿ ನಟಿಸುವ ಮನೆಯೊಳಗಿನ ಆಸ್ಕರ್ ನಾಮಿನಿಗಳ ಕುರಿತಂತೆ ದಿವ್ಯ ನಿರ್ಲಕ್ಷ್ಯವೇ ಒಳ್ಳೆಯ ಮದ್ದು.

    ೩.
    ನೋವುಗಳನ್ನು ಸಂತ್ವಾನವು ಸಿಕ್ಕುವ ಆ ಕೆಲ ಹೊತ್ತು ಬದುಕಿನಲ್ಲಿ ಸ್ತಬ್ಧವಾಗಬಾರದೇ ಎನಿಸುವ ಸಂಗತಿ. ಹೆಣ್ಣು ಮಾತ್ರ ಸಹಿಸಿಕೊಂಡು ಮೂಕವಾಗಿ ಇದ್ದುಬಿಡಬೇಕೆನ್ನುವ ಲೋಕರೂಡಿಯು ಈಗ ಪ್ರಚಲಿತದಲ್ಲಿರುವ ಇಲ್ಲದ ಅಪ್ರಸ್ತುತ ವಿಚಾರ.

    ೩ ಕ್ಕೂ ಸೇರಿ ೩೦೦ ಅಂಕಗಳು.

    ReplyDelete
    Replies
    1. thank you palavalli sir..dura payanakke nimmellara saath sikkaddu olledaaytu..illa andre yaavatto mare agirtidde

      Delete
  5. Chendada saalugalu madam...first one ishta aytu..

    ReplyDelete
    Replies
    1. tammaa...thank you..ulidaveradu bahusha samsaara taapatraya!!

      Delete
  6. ತುಂಬಾ ಚನ್ನಾಗಿವೆ ಮಹಿ ಅಕ್ಕ :)...

    ReplyDelete
  7. ನಿಮ್ಮ ಶೈಲಿ ಬಹಳ ಚೆನ್ನಾಗಿದೆ :)

    ReplyDelete
  8. ಮಹಿ ಚೆನ್ನಾಗಿ ಬರೆದಿದ್ದೇಯೆ. ಹೊಸ ಹೊಸ ವಿಚಾರಗಳನ್ನು ಕೈಗೆತ್ತಿಕೊ. ನಿನ್ನ ಸುತ್ತಲಿಗೆ ಸ್ಪಂದಿಸುವ ಪರಿ ಸುಂದರವಾಗಿದೆ. ಆದರೆ ಜಗತ್ತಿನಲ್ಲಿ ಎಲ್ಲವೂ ಸುಂದರವಾಗಿಲ್ಲ. ಹಾಗಲ್ಲದ ವಿಚಾರಗಳನ್ನೂ ನಿನ್ನ ಬರಹದ ಪರಿಧಿಗೆ ತೆಗೆದುಕೊಂಡು ಬಾ. ಉತ್ತಮ ಬರಹಗಾರ್ತಿಯರಲ್ಲಿ ನಿನ್ನ ಹೆಸರು ನೋಂದಣಿಯಾಗಲಿ. ಶುಭಮಸ್ತು

    ReplyDelete