Thursday, April 17, 2014

ಮುಗಿಯದ ಚುನಾವಣೆ

ಚುನಾವಣೆ ಮುಗೀತು... ನನ್ನ ಮನದಲ್ಲಿ ಇನ್ನೂ ನಡೆಯುತ್ತಿದೆ!!

ಆಳೆತ್ತರದ  ಹಂಪು , ಅಷ್ಟೇ ಆಳದ  ಗುಂಡಿ ... ರಸ್ತೆಗಳೊ ದೇವರಿಗೆ ಪ್ರೀತಿ ..ಸೀದಾ ಯಮಲೋಕಕ್ಕೆ ದಾರಿ... ಹೀಗೆ ಪುಕ್ಕಟ್ಟೆ ಟಿಕೇಟು ಕೊಟ್ಟು  ಖಾಲಿಯಾಗದ ಕೋಟಿ ಕೋಟಿ ಗಳ ಲೆಕ್ಕದ ಜನಸಂಖ್ಯೆ... ಹಾಗೂ ಅವರು ಗುಂಡಿಯಲ್ಲಿ ಬೀಳಿಸುತ್ತಲೆ ಇದ್ದಾರೆ ನಾವು ಬೀಳುತ್ತಲೇ  ಇದ್ದೇವೆ...!!

ಹುಟ್ಟಿದಾಗ ಅಪ್ಪ ಅಮ್ಮನಂತೆ ಆಮೇಲೆ ಗಂಡ ನಂತರ  ಮಗ ..ಈಗ ಅಷ್ಟಿಲ್ಲ .ಅದೇನೆನೊ ಕಾನೂನು ತಂದಿದ್ದಾರಂತೆ... ದೊಡ್ಡವರ ಮನೆ ಹೆಣ್ಣುಗಳು ಗಂಡನ್ನ ಪಾಪದ ನಾಯಿ ಮಾಡಲು ಬಳಸಿದಳು..ಮಧ್ಯಮ ಕೆಳ ಮಧ್ಯಮ ವರ್ಗದ  ಹೆಣ್ಣು ಮಕ್ಕಳು ಪಾಪ ಮರ್ಯಾದೆಗಂಜಿ ಇನ್ನು ಸೀಮೆ ಎಣ್ಣೆ ರೇಟು..ಗ್ಯಾಸು ಸಿಲೆಂಡರು .. ಫ್ಯಾನು..ನಿದ್ದೆಮಾತ್ರೆ  ರೇಟು ಜಾಸ್ತಿ ಮಾಡ್ತಿದ್ದಾರೆ ..ಪಾಪ ನಮ್ಮ ಮಹಿಳಾ ರಕ್ಷಣಾ ಸಂಘಗಳಿಗೆ ಏನ್.ಜಿ ಓ ಗಳಿಗೆ ಅಲ್ಲಿ ಯಾವುದೋ ಕೋಮುಗಲಭೆ(ಅದೂ ಅಲ್ಪ ಸಂಖ್ಯಾತ ಆಗಿರಬೇಕು!!) ಆಗಿ  ರುಚಿ ಕವಳದಂಥ ಸುದ್ದಿಗಳಾಗುವ.. ಟಿವಿ ಡಿಬೇಟುಗಳಲ್ಲಿ ಭಾಗವಹಿಸುವ ಅವಕಾಶ ದಕ್ಕಿಸುವ ಕೇಸು ಮಾತ್ರ ಕಣ್ಣಿಗೆ ಕಾಣುತ್ತದೆ .ಅದರ ಜೊತೆಗೆ ಸಂಸ್ತೆಗಳಿಗೆ ಹರಿದು ಬರುವ ಬಿಟ್ಟಿ ಹಣದ ಮೇಲೆಯೂ ಕಣ್ಣು.. ಹೀಗೆ ನಾಯಿ ರಕ್ಷಣೆಗಾಗಿ ಕಣ್ತೆರೆದ ಸಂಸ್ಥೆಯ  ಒಡತಿ  ಈಗ ಕೇವಲ ಕೋಟಿ ಲೆಕ್ಕದ ಮನೆ ತಗೊಂಡು ಅರ್ಧ ಕೋಟಿ ಲೆಕ್ಕದ ಕಾರಿನಲ್ಲಿ  ಗಂಡನೊಂದಿಗೆ ಓಡಾಡುತ್ತಾಳೆ.. ಪಾಪ ಬಿಡಿ ಅವರು ಬದುಕಿಕೊಳ್ಳ ಬೇಕು ಅಲ್ಲವೇ ??

ಅವನು ಪಾಪದ ಎಂ ಪಿ .. ಹೆಣ್ಣಿನ ದೇಹದ ಮೇಲೆ ಹಿಂಸ್ರ ಪಶುಗಳಂತೆ ಎರಗುವ ಗಂಡುಗಳು ಅವನ ರಕ್ತ ಸಂಬಂಧಿಗಳಿರಬೇಕು... ಅದಕ್ಕೆ ಅವರ ಪರ ನಿಂತಿದ್ದಾನೆ ..ಇದನ್ನೆ ದೊಡ್ದದು ಮಾಡಿ ಚಾನೆಲ್ಲುಗಳು ಟಿ ಆರ್ ಪಿ ಹೆಚ್ಚುಮಾಡಿ ಕೊಂಡವು.. ಮತ್ತು ನಮ್ಮ ದೇಶದಲ್ಲಿ ದಿನ ನಿತ್ಯ ಹೆಣ್ಣು ಎಂಬ ಜೀವಿಗಳು ಹುಟ್ಟುವುದು ತಪ್ಪು ಎಂದೂ ಇವರೆಲ್ಲಾ ಅಯೋನಿಜರೆಂದು ಸಾರಿ ಕೊಲ್ಲುತ್ತಲೇ ಇದ್ದಾರೆ ಹುಟ್ಟುವ ಮುನ್ನವೂ ಹುಟ್ಟಿನ ನಂತರವೂ ..ಒಬ್ಬ ನಿರ್ಭಯ ಮಾತ್ರ ಸುದ್ಧಿಯಾದಳು ನೂರು ಅಬಲೆಯರು ಸತ್ತ ವಿಷಯ ವಿಶೇಷವಲ್ಲ ಬಿಡಿ...

ಕಾನೂನು  ತಿದ್ದುವ ಜಾಗದಲ್ಲಿ ಕೂರುವವರು ಓದಿಕೊಂಡವರೇ  ಇರಬೇಕೆ ..ಸ್ವಾಮಿ ನಾವು ಹಿರಿಯರ ಸಂಸ್ಕೃತಿ ಯನ್ನು ಗೌರವಿಸುವವರು .ಹೆಬ್ಬೆಟ್ಟಾದರೂ  ಪರವಾಗಿಲ್ಲ .....ನಮ್ಮ ದುಡ್ಡಿನಲ್ಲೇ ವಿಮಾನ ದಲ್ಲಿ ಮತ್ತು ಸಂಸತ್ತಿನಲ್ಲಿ ನಿದ್ರಿಸುವ ಯಜಮಾನರು ಬೇಕು..ನಾವು ಓಬೇರಾಯನ ಕಾಲದ  ಕುರಿಗಳು .. ಅವರು ಬದಲಾಯಿಸಬಹುದಾದ ಕಾನೂನುಗಳನ್ನ ಮಾಡುತ್ತಾರೆ..ಮತ್ತು ಅವರವರ ಅನುಕೂಲಕ್ಕೆ ತಕ್ಕಂತೆ  ಬೇಕಾದಾಗ ಬದಲಾಯಿಸಿಕೊಳ್ಳುತ್ತಾರೆ .. ನಾವು ವಂಶ ಪಾರಂಪರ್ಯ ಆಡಳಿತಕ್ಕೆ ಹೊಂದಿಕೊಳ್ಳುತ್ತೇವೆ..ಮತ್ತು ನಮ್ಮದು ಗುಲಾಮಿ ಮನಸ್ಥಿತಿ .. ಅದು ನೂರಾರು ವರ್ಷಗಳ ಕಾಲದ ಹಳೆ ವರ್ಣತಂತು .. ನಿಧಾನಕ್ಕೆ ಬದಲಾಗುತ್ತದೆ ಬಿಡಿ.. ಇಂಗ್ಲಿಷರು ಕೊಟ್ಟ ಒಡೆದು ಅಳುವ ಕತ್ತಿಯನ್ನ ಒರೆಯಲ್ಲಿಡುವ ಬದಲು..ಅದನ್ನ ಮಸೆದು ಮಸೆದು ಹರಿತಗೊಳಿಸಿ ಜಾತಿ ಧರ್ಮ ಅನ್ನೋ ನೂರು ಪಂಗಡಗಳನ್ನ ಮತ್ತೆ ಕೊಚ್ಚಿ ರಕ್ತಸಿಕ್ತ ಸಿಂಹಾಸನದ ಮೇಲೆ ಕೂರುವ ನರಿಗಳ ನಿತ್ಯ ಉತ್ಸವ .."ಹುಚ್ಚು ಮುಂಡೆ ಮದ್ವೇಲಿ ಉಂಡವನೆ  ಜಾಣ"
ಎಲ್ಲರು ಉರಿವ ಮನೆಯಲ್ಲಿ ಗಳ ಹಿರಿವ ಕೆಲಸ ಮಾಡುವವರೇ ಹೊರತು.. ಬಿಡಿ  ನಾವು ಅವರನ್ನು ಕ್ಷಮಿಸಿದ್ದೇವೆ ..ಮತದಾನಕ್ಕೆ ರಜೆ ಸಿಗುತ್ತಿದ್ದಂತೆ ಊರುಗಳಿಗಳಿಗೆ ತೆರಳಿ ಹಬ್ಬದೂಟ ಮಾಡಿ ಗಡದ್ದು ನಿದ್ರಿಸುತ್ತೇವೆ... ಬೇರೆಯವರಿಗೆ ಮತದಾನದ ಮಹತ್ವವನ್ನ ಫೇಸು ಬುಕ್ಕಿನಲ್ಲಿ ಟ್ವಿಟ್ಟರಿನಲ್ಲಿ  ಉಪದೇಶಿಸಿ ದೊಡ್ಡವರಾಗುತ್ತೇವೆ!!

 ನೀರಿಲ್ಲದಿದ್ದರು ನಳಗಳನ್ನು ಹಾಕುವ..ರಸ್ತೆಯೇ ಇಲ್ಲದಿದ್ದರೂ ಕಾಮಗಾರಿ ಮಾಡುವ..ಕೆರೆ ಹೂಳೆತ್ತಲು ಬಿಲ್ ಪಾಸು ಮಾಡಿಸಿ ಇಡಿ ಕೆರೆಯನ್ನೇ ಮಟಾ ಮಾಯ  ಮಾಡುವ ..ಚುನಾವಣೆಯ ಕಾಲಕ್ಕೆ ಸಪೂರ ಸೊಂಟದ ನಟೀಮಣಿಯರನ್ನು ಕಣಕ್ಕಿಳಿಸಿ ಮನರಂಜನೆ ಮಾಡಿಸುವ ,ಕೋತಿ ಕೋಟಿ  ಲೆಕ್ಕದ ಹಗರಣಗಳನ್ನು ಸುಳ್ಳು ಎಂದು ತೋರಿಸಲು ನಮ್ಮದೇ ದುಡ್ಡಲ್ಲಿ ತನಿಖಾ ಸಂಸ್ಥೆಯನ್ನು ಸ್ಥಾಪಿಸುವ , ಉದ್ಯಮಿಗಳಿಂದ ಸಾವಿರ ಕೋಟಿಗಳ  ಲೆಕ್ಕದಲ್ಲಿ ಫಂಡು ಸ್ವೀಕರಿಸುವ... ಜೂಜಾಡುವ ..ಶರ್ಟು ಕುರ್ಚಿ ಹಿಡಿದು ಹೊಡೆದಾಡುವ ... ಬಿಳಿಯಾನೆಗಳ ಕೈಯಲ್ಲಿ ಜುಟ್ಟು ಕೊಟ್ಟು ದೇಶವನ್ನು ಇಂಚಿಚಾಗಿ ನುಂಗುವ ಇವರನ್ನೆಲ್ಲಾ ನಾವು ಏನು ಮಾಡ ಬಾರದು..ಸ್ವಾಮೀ ..ಪ್ರಾಣಿ  ಹತ್ಯೆ ಮಹಾ ಪಾಪ..ತೊಳೆದು ಕೊಳ್ಳಲು ಈಗ ಗಂಗೆಯು ಶುದ್ಧಳಿಲ್ಲ!!

ಮುಗಿಯಿತೇ  ಚುನಾವಣೆ..ಭರವಸೆಯ ಬಂಡಿಯನ್ನ  ನಿಮ್ಮ ಊರುಗಳಲ್ಲಿ ಹಣ ಹೆಂಡ ಸೀರೆ ಜಾತಿ ಧರ್ಮ ಅಂತ ಹಾರಿಸಿದ್ದಾಯಿತು... ಹೊತ್ತಿಕೊಂಡ ಹೊಟ್ಟೆ ಅರವತ್ತು ವರ್ಷಗಳಲ್ಲೂ ಮುಂದೆ ಬರಲಿಲ್ಲ ..ಕಾರು ಇದ್ದವನ ಮನೆ ಮುಂದೆ ಈಗ ಕಾರುಗಳದ್ದೆ ಜಾತ್ರೆ..ಆದರೂ ಅನ್ನ  ತಿನ್ನುವವರು ಇನ್ನು ಬದುಕಿದಾರೆ.. ಮುಂದೊಂದು  ದಿನ ನಿಜವಾದ ಚುನಾವಣೆ ನಡೆಯಲಿದೆ ... ಮತ್ತು ಇನ್ನೂ ಚುನಾವಣೆ ಮುಗಿದಿಲ್ಲ ..!!
ನೋಟಿನಲ್ಲಿಯ ಗಾಂಧಿ ನಗುತ್ತಲೇ ಇದ್ದಾರೆ!!

ಚಿತ್ರ ಕೃಪೆ -ಅಂತರ್ಜಾಲ 

5 comments:

  1. ಚುನಾವಣೆ ಎಂಬುದು ಇದೀಗ ಬಡವನ ಹೊಟ್ಟೆಯ ಮೇಲೆ ಹೊಡೆಯುವ ಬಿಳಿ ಆನೆಯೇ ಸರಿ.
    ಕೋಟಿ ಕೋಟಿ ಖರ್ಚು!!!

    ReplyDelete
    Replies
    1. ನಿಮ್ಮ ಮಾತು ಒಪ್ಪಿದೆ brother :)

      Delete
  2. ಸಮಯೋಚಿತ ಲೇಖನ, ಇಷ್ಟವಾಯಿತು

    ReplyDelete
  3. ವಾಸ್ತವಕ್ಕೆ ಹಿಡಿದ ಕನ್ನಡಿ ಇದು , ಒಳ್ಳೆಯ ಲೇಖನ

    ReplyDelete
  4. ಮನಸ್ಸಿಗೆ ನಾಟುವಂಥ ಲೇಖನ. ವ್ಯಂಗ್ಯವನ್ನು ಪರಿಣಾಮಕಾರಿಯಾಗಿ ಬರಹದ ಭಾಗವಾಗಿ ಬಳಸಿಕೊಂಡಿದ್ದೀರಿ.

    - ಪ್ರಸಾದ್.ಡಿ.ವಿ.

    ReplyDelete