Monday, July 17, 2017

ಧಾರವಾಹಿ ಸುಗಂಧಿನಿ - ಭಾಗ ೩

ಯಮುನೆ ಹರಿಯುತ್ತಿದ್ದಳು ಇಕ್ಕೆಲಗಳನ್ನು ಬಾಚಿ ಬಾಚಿ ತಬ್ಬಿ , ಒಮ್ಮೊಮ್ಮೆ ಮುನಿಸು ಹೊತ್ತಿನಲ್ಲಿ ಪುಂಡಾಟ ಮಾಡುವ ಮಗು, ಒಮ್ಮೊಮ್ಮೆ ಸರಳ ಸುಂದರಿ, ಒಮ್ಮೊಮ್ಮೆ ತೀರಾ ಯಾರಿಗೋ ಕಾದು  ಬೇಸತ್ತವಳಂತೆ, ವೈರಾಗಿಯೊಮ್ಮೊಮ್ಮೆ, ಒಮ್ಮೊಮ್ಮೆ ಮೋಹಿನಿ, ನದಿಯೆಂದರೆ ಯಮುನೆ, ನನ್ನೆದೆಯೊಳಗೂ ಅವಳು ಹರಿಯುತ್ತಿದ್ದಳು, ತಬ್ಬಲಿತನವನ್ನು ಸಂತೈಸಿ, ಸದಾ ನಾನಿಲ್ಲವೆ ಎನ್ನುವಳು, ನನ್ನ ಭಾವದ ಹರಿವು  ಅವಳ ನೀರ  ಹರಿವು ಎರಡೂ  ನೀರಸ ಬದುಕಿಗೆ ಆಗಾಗ ರಂಗು ತುಂಬುವ ಸುತ್ತಲ ಹಸಿರನ್ನ ನೋಡುತ್ತಾ ಕಳೆಯುತ್ತಲಿತ್ತು, ಕೈಯಿಟ್ಟರೆ ಸಾಕು ತಣ್ಣಗೆ ಕೊರೆವ ನೀರು, ಕಾಳಿಂದಿಯಲ್ಲಿ ಅಮೃತಪಾನವಾಗಿ ಬದಲಾಗುವ ಪರಿಗೆ ನಾನು ಆಶ್ಚರ್ಯ ಪಟ್ಟಿದ್ದುಂಟು ಬಹಳ ಸಲ  , ನನಗೆ ನೆನಪೇ ಇದೆ, ಚಿಕ್ಕವಳಿದ್ದಾಗ ಇದೆ ದಡದಗುಂಟ ಅಜಮಾಸು ನೂರು ಯೋಜನ  ಒಂದು ವಾರ ನಡೆದು ಅಲ್ಲಿ ಹಳ್ಳಿಯಲ್ಲಿ ತಂಗಿದ್ದೆವು ಅದನ್ನು ತಂದೆ "ವೃಂದಾವನ" ಅಂತ ಪರಿಚಯಿಸಿಕೊಟ್ಟಿದ್ದರು, ಅಲ್ಲಿಯ ಮಣ್ಣು ಹೂ ಹಣ್ಣು ಗೋಧಿಗೆ ಹೇಳಿ ಮಾಡಿಸಿದಂತಿತ್ತು , ಮಕ್ಕಳು ಬಲು ಚೂಟಿಯಾಗಿದ್ದರು , ಎಲ್ಲಕ್ಕಿಂತ ನನಗೆ ಆಗ ಬೆನ್ನು ಗೊತ್ತಾಗದಷ್ಟು ಚೂರು ಬಾಗಿತ್ತು , ಕಾಲೂ ,ಅಷ್ಟೇ, ಸುಮತಿ ಸುಗಣ್ಯ  ರಮಣಿ ಮುಂತಾದ ಮಕ್ಕಳೊಂದಿಗೆ ತಾನು ಕಳೆದ ಆ ದಿನಗಳು ಇವತ್ತಿಗೂ ನೆನಪಿದೆ, ಅಲ್ಲಿಯ ಯಮುನೆ ಇಲ್ಲಿಯವಳಲ್ಲ ಅಂತ ಬಹಳ ಸರಿ ಅನಿಸಿದ್ದಿದೆ, ಬೆಟ್ಟ ಬಯಲು ಎರಡು ಸಮ್ಮಾನವಾಗಿ ಹಂಚಿ ಹರಿಯುತ್ತಿದ್ದ ಆ ಪ್ರದೇಶ ಕೂಡ ನಂದನ ವಂಶಸ್ಥರಿಗೆ ಸೇರಿದ್ದು ಅಂತ ತಂದೆ ಯಾವಾಗಲೂ ಕಥೆ ಹೇಳುತ್ತಿದ್ದರು.
ತಟದಲ್ಲಿ ನಿಂತು ಹಣೆಯ ಮೇಲೆ ಕೈ ಇತ್ತು ದೂರದೆಡೆಗೆ ಕಣ್ಣು ಹಾಯಿಸಿದೆ , ಸುಶೇಷಣ ತನ್ನ ದೋಣಿಯನ್ನು ದಡದಲ್ಲಿದ್ದ ಮಾಮರಕ್ಕೆ ಕಟ್ಟಿ ಮಾಯವಾಗಿದ್ದ, ಬಹುಶಃ ನಿನ್ನೆ ಬಹಳ ದಣಿದಿದ್ದನೇನೋ ಎದ್ದಿರಲಿಲ್ಲ, ಉಳಿದ ಮೀನುಗಾರರು ಯಮುನೆಯ ಆ ತುದಿಯಲ್ಲಿ ಚುಕ್ಕಿಗಳಂತೆ ಕಾಣುತ್ತಿದ್ದರು . ಆ ದಡ ತಲುಪಿಸಲು ಯಾವ ಮಾಯಾವಿ ಬಂದಾನು? ಆದರೆ ನನಗೆ ಅಲ್ಲಿಗೆ ತಲುಪಲೇ ಬೇಕಿತ್ತು. ಅದೂ  ಬಹಳ ತುರ್ತಾಗಿ ರಾಣಿ ರೋಹಿಣಿಯ ಸಂದೇಶ ಹೊತ್ತು , ತಾಯಿ ದೇವಕಿಯನ್ನು ನೋಡಲು, ಮತ್ತೆ ಮೈಯೆಲ್ಲಾ ಪುಳಕಿಸಿತು,ಕೈಯಲ್ಲಿದ್ದ ಗಂಧ ಚಂದನದ ಪೆಟ್ಟಿಗೆ, ಜತೆಗೆ ರಾಣೀವಾಸದವರು ನೀಡಿದ್ದ ಪುಟ್ಟ ಬುಟ್ಟಿ , ಕೈಗಳು ನೋಯಲಾರಂಭಿಸಿತ್ತು
ಇದ್ದಕ್ಕಿದ್ದಂತೆ ಆ ಕಡೆಯಿಂದ ಒಂದು ದೋಣಿ ಇತ್ತ ಬರುತ್ತಿರುವಂತೆ ಕಾಣಿಸಿತು, ಓ ಅದು ಸೈನಿಕರ ದೋಣಿ ಅವರಿಗೆ ಇಲ್ಲೇನು ರಾಜಕಾರ್ಯ, ನನಗರ್ಥವಾಗಲಿಲ್ಲ, ಉಗ್ರಸೇನ ಮಥುರೆಯ ಪಟ್ಟದಲ್ಲಿದ್ದಾಗ ನಂದನನ್ನು ಮತ್ತು ನಂದನ ತಂದೆಯನ್ನು ಪ್ರಾಣಕ್ಕೆ ಸ್ನೇಹಿತರಂತೆ ನೋಡಿದ್ದ, ಆದರೆ ಅವನ ಇದ್ದೊಬ್ಬ ಮಗ ರಾಜ್ಯದ ಮಾನವನ್ನು ಸೂರೆಗೈಯತೊಡಗಿದ, ಸಾಲದು ಅಂತ ತಂದೆಯನ್ನು ಪಟ್ಟದಿಂದ ಕೆಳಗಿಳಿಸಿ ಸ್ವಯಂ ಪಟ್ಟಾಭಿಷೇಕ ಮಾಡಿಕೊಂಡ, ತಂದೆಯ ಸಲಹೆಗಳಿಗೆ ಕಿವಿಗೊಡದೆ, ರಾಜ್ಯದ ಸಾಮಂತರಿಗೆ ಕೊಡಲಾಗುತ್ತಿದ್ದ ಗೌರವ ಮತ್ತು ಮರ್ಯಾದೆ ಕಿತ್ತೆಸೆದು ತೆರಿಗೆ ಮತ್ತು ದಂಡಗಳನ್ನು ಹೆಚ್ಚಿಸಿದ. ಅವನ ಮಾತು ಕೆಳದವರನ್ನು ಮೂಲೆಗೊತ್ತಿದ, ಅಂತೆಲ್ಲಾ ಹಲವಾರು ಕಥೆಗಳು ಆ ದಡದಿಂದ ತೇಲಿ ಬರುತ್ತಿದ್ದವು , ನಾನು ರಾಜಕಾರಣ ಅರಿತವಳಲ್ಲ, ಆದರೂ ನಮ್ಮ ವ್ರಜ ಭೂಮಿಗೆ ಯಾವತ್ತೂ ಕೆಟ್ಟದ್ದು ತಡೆದುಕೊಳ್ಳುವ ಶಕ್ತಿ  ಇರಲಿಲ್ಲ, ಅದು ನಂದ ರಾಜನಂತೂ ರಿಷಿ ಸಮಾನ ರಾಜ, ಆಚಾರ ವಿಚಾರದಲ್ಲಾಗಲಿ ಅವನು ಯಾರನ್ನು ನೋಯಿಸಿದ್ದೆ ಇಲ್ಲ, ಮಕ್ಕಳಿಂದ ವೃದ್ಧರವರೆಗೆ ಅದೇ ಆದರೆ ಅದೇ ಪ್ರೀತಿ, ಅಷ್ಟು ಸಮ ತೂಗುವ ಅವನ ಪ್ರಾಮಾಣಿಕತೆಯನ್ನು ಇತ್ತೀಚಿಗೆ ಕಂಸ ಪ್ರಶ್ನಿಸಲಾರಂಭಿಸಿದ್ದ , ಕಂಸ ನಂದನನ್ನು ಬಲ್ಲದಿದ್ದವನೇನಲ್ಲ , ವಸುದೇವ ನಂದ  ಕಂಸ ಮೂವರ ಗೆಳೆತನ ಹಳೆಯದ್ದೇ, ಯಾವತ್ತೋ ಒಮ್ಮೆ ವಾಸುದೇವ ಕುಂತಿಯನ್ನು ಕಂಸನಿಗೆ ಕೊಟ್ಟು  ವಿವಾಹ ನೆರವೇರಿಸಬೇಕೆಂದುಕೊಂಡಿದ್ದನಂತೆ, ಅವನೋ ಕುಂತಲ ರಾಜ್ಯದ ರಾಜಕುಮಾರನಾದರೂ  ಕಂಸನ ಮೇಲೆ ಅತಿಯಾದ ವಿಶ್ವಾಸ, ಅದೆಲ್ಲವೂ ಈಗ ಮರೆತ ಕಥೆ.

ದೂರದಲ್ಲಿದ್ದ ದೋಣಿ ಹತ್ತಿರಕ್ಕೆ ಬಂದಿತ್ತು , ಅದು ಎರಡೆರಡು ಸೈನಿಕರನ್ನು ಹೊತ್ತು ತಂದಿತ್ತು ಒಬ್ಬ ಕಾಂಗದ , ಮತ್ತೊಬ್ಬ ನಿರೂಪ ಇಬ್ಬರು ಇದು ಎರಡನೇ ಸಲ ಬರುತ್ತಿರುವುದು, ಪಾಪ ಅವರೇನು ಮಾಡಿಯಾರು, ಜೀವಂತ ಇರಬೇಕಾದರೆ  ರಾಜ ಹೇಳಿದ ಕೆಲಸ ಮಾಡಲೇಬೇಕು, ನನ್ನೆದೆಯಲ್ಲಿ ಯಾಕೋ ಅವರಿಗಾಗಿ ತುಸು  ಆರ್ದ್ರ ಭಾವವೊಂದು ಅವತ್ತೇ ಹುಟ್ಟಿತ್ತು, ಹಾಗೆಯೇ ನಂದರಾಜರ ಬಗ್ಯೆ ಕಾಳಜಿಯೂ, ದಡಕ್ಕೆ ದೋಣಿ ಕಟ್ಟಿ ಇಬ್ಬರೂ  ಕಟ್ಟಿ ಹಿಡಿದು ಇಳಿದರು , ನನ್ನ ನೋಡುತ್ತಲೇ ಪರಿಚಿತ ಭಾವವೊಂದು ನಗೆಯಲ್ಲಿ ಕೊನೆಯಾಯಿತು, "ತ್ರಿವಕ್ರೆ, ನಂದರಾಜರು ಲಭ್ಯವಿರುವರೇನು? ನಾವು ಬಂದ  ವಿಷಯ ಅವರಿಗೆ ತಿಳಿಸಬೇಕಿತ್ತು" ಸಣ್ಣದಾದ ನಡುಕವೊಂದು ನನ್ನೇ ಆವರಿಸಿತು, ತಕ್ಷಣ ಎಚ್ಚೆತ್ತು ನುಡಿದೆ"ನನಗೆ ತಿಳಿಯದು, ನೀವು ಅರಮನೆಯ ಹತ್ತಿರ ಹೋಗಿ ಕೇಳಬೇಕು" "ನೀನು ದೋಣಿಗಾಗಿ ಕಾಯುತ್ತಿರುವೆಯಾ ಸಹೋದರಿ, ನಮ್ಮ ವಿಶಂಕು ನಿನ್ನ ಆ ದಡಕ್ಕೆ ತಲುಪಿಸಿ ಬರುವ, ಸರಿಯೆನು?" ನಿರೂಪನ  ದನಿ, ಅದರಲ್ಲಿದ್ದ ನಿಜ ಕಾಳಜಿಗೆ ಕರಗಿದೆ ನಾನು, ನನ್ನ ಯೋಗ್ಯತೆಯನ್ನು ಅರ್ಹತೆಯನ್ನು ಕೇವಲ ನನ್ನ ರೂಪದಿಂದಲೇ ಅಳೆವವರ ಮಧ್ಯೆ ನನಗೆ ಗೌರವಿಸಿ ಅರ್ಥೈಸಿಕೊಳ್ಳುವವರು ಬಹಳೇ ಕಮ್ಮಿ. ಮರು ಮಾತಾಡದೆ ದೋಣಿ ಹತ್ತಿ ಕುಳಿತೆ. ದೋಣಿ ಸಾಗಿತು ಯಮುನೆಯ ನೊರೆ ನೊರೆ ತೆರೆ ಸೀಳುತ್ತ.
(ಮುಂದುವರೆಯುವುದು)

No comments:

Post a Comment