Saturday, January 4, 2014

ಪ್ರೇಮ ನಾದ ಮತ್ತು ಬೆಳಕು(ಕಾವ್ಯ ಗುಚ್ಛ)

 ನಾದ -೧

ತೂಗುವ ಸಮಯದ ತೂಗುಯ್ಯಾಲೆ
ಇತ್ತಿಂದತ್ತ ಅತ್ತಿಂದಿತ್ತ ತೂಗದೆ ನಿಂತ ಹಾಗಿದೆ!!

ನಿನ್ನ ನನ್ನ ಕಾಣದ ಈ ದ್ವೀಪದ ದಡ ಸೇರಿಸಿದ
ದೋಣಿ ಇಲ್ಲೆ ಇದೆ
ಅಂಬಿಗ ಎಲ್ಲೋ ಕಳೆದು ಹೋಗಿದ್ದಾನೆ
ಹುಡುಕುವ ದರ್ದು ನಮಗೂ ಇಲ್ಲ

ನಿನ್ನೆದೆಯ ಮೇಲಿನ ಅಷ್ಟೂ ಕೂದಲ ಎಣಿಸುತ್ತಾ 
ಮಲಗಿದ್ದೇನೆ
ಯಾರು ಎಚ್ಚರಿಸುವದಿಲ್ಲ

ಅನಾಹತ ದ  ಆಳದಲ್ಲಿ ಮಿಡಿಯುವ
ನಮ್ಮ ಆತ್ಮಗಳ ಮಿಲನದ ನಾದಕ್ಕೆ
ಜಗತ್ತು ಮನ ಸೋತಿದೆಯಂತೆ 

ಹೌದಾ ?? ನನ್ನ ಚಲುವ ಶ್ಯಾಮಾ??


ನಾದ-೨


ಕಾರಣ ನೀನೇ!!


ಬಕ್ಕ ಬಾರಲು ಬಿದ್ದಿದ್ದ ಆಸೆಗಳು
ನಿನ್ನ ನೋಡುತ್ತಲೇ ಚಿಗುರಿಕೊಂಡವು
ಮುಗುಳ್ನಕ್ಕು ವರ್ಷಗಟ್ಟಲೇ ತುಕ್ಕು
ಹಿಡಿದಿದ್ದ ನರನಾಡಿಗಳ ಸವರಿ ಮತ್ತೆ ದೇಹ
ವೀಣೆಯ ಶ್ರುತಿ ಹಿಡಿದವಳು ನೀನೇ!!

ತಾರೆಗಳ ಬೆಳಕಿನ ಮಳೆಯಲ್ಲಿ ಮಿಂದ ಕನಸಿತ್ತು
ಅಲ್ಲಿ ನನ್ನ ಕೈ ಚಾಚಿದ್ದು ನಿನ್ನ ಹೃದಯ ಚಂದ್ರಮನಿಗಾಗಿ
ಕಳೆದ ವಸಂತಗಳ ಲೆಕ್ಕವಿಟ್ಟಿರಲಿಲ್ಲ ನಾನೂ
ದಿನಾ ಇಣುಕುವ ಬಿಳಿ ಕೂದಲಿಗೆ
ಕಪ್ಪು ಬಣ್ಣ ಬೇಕು ಅಂದದ್ದು ನಿನ್ನ ಕೊಂಕು ಕಣ್ಣೋಟವೇ!!

ಚಿಪ್ಪಿನಲ್ಲಿ ಅವಿತಿದ್ದ ತುಂಟತನ
ಈಗ ಕಚಗುಳಿ ಇಡುತ್ತಿದೆ
ಚಳೀಗಾಲವಿದು..ಎಳೆಬಿಸಿಲು 
ನೀ ಆದರೆ ಚಂದ, ಮಾತು ಬರದ
ನನ್ನ ಮೌನ ಒಲವಿಗೆ ನಿನ್ನ 
ಬಿಸಿ ಮುತ್ತಿನ ಒಪ್ಪಿಗೆ ಸಿಕ್ಕರೆ ಸಾಕು!!

ಕೇಳಬೇಡ ಈಗ, ಎಲ್ಲದಕು ಕಾರಣ
ನೀನೇ!!

ನಾದ -೩


ದಾರಿಯಲಿ ಬಿದ್ದವಳು ಕಣ್ತೆರೆವ ಮೊದಲೇ 
ತುಳಿದು ತಳ್ಳಿದವರು ಎಷ್ಟೋ ಮಂದಿ 
ತಿರಸ್ಕಾರ ನಿಂದೆಗಳಿಗೆ  ಪಕ್ಕಾಗಿ ಸುಕ್ಕಾದರೂ 
ಹರಿಯುತಿದ್ದ ಆಸೆಯ ಅಮೃತ ವಾಹಿನಿಯ ಹೊತ್ತು ಕಾಯುತಲಿದ್ದೆ... 

ಬಂದೇ ಬಂದನಲ್ಲ ಅವ.. 
ಯಾವ ಸೀಮೆಯ ಮಾಯಕಾರ ??
ಯಾವ ಲೋಕದ ಸಂತ??
ಬರುವ ಹಾದಿಗೆಲ್ಲಾ ಕಾಮನಬಿಲ್ಲು 
ನಿಂತಲ್ಲೆಲ್ಲ  ಕಿಲಿಸುವ ಹೂ ಹುಲ್ಲು 
ನನ್ನ ನೋಡಿ ಮುಗುಳ್ನಕ್ಕ 
ಅಂತಿದ್ದ ನೂರು ಜಾಢ್ಯಗಳ ಧೂಳ 
ತನ್ನ ಚಿಗುರು ಬೆರಳುಗಳಲ್ಲಿ ಸವರಿ 
ತನ್ನ ತುಟಿಗಿಟ್ಟ!!

ಇವ ಗಂಧರ್ವನೇ  ಇರಬೇಕು!!

ನಾನೀಗ ಹರಿಯುತ್ತಿದ್ದೇನೆ ಸಲಿಲ ಹೊಸ ರಾಗಗಳಲ್ಲಿ 
ನವ ರಂಧ್ರಗಳ ಕೊಳೆಯ ತೊಳೆದವನೇ ಹೇಳು 
ಅದೋ ಮಂದ್ರದಿಂದ ಷಡ್ಜದವರೆಗೆ 
ಕಣಕಣವ ಅರಳಿಸಿ 
ನನ್ನ ಭಾಗ್ಯದ ಕುಂಡಲಿನಿಯ 
ಮೂಲಾಧಾರದಿಂದ ಸಹಸ್ರಾರಕ್ಕೆ 
ತಾಕಿಸಿ ಹೋಳಾಗಿಸಿದೆ .. 


ಇದು ಚಂದ್ರ ಕೌಂಸ ವಲ್ಲ ಭೈರವಿಯೂ ಅಲ್ಲ 
ಬಹುಶಃ  ಮೋಹನವೇ ? ಇರಬೇಕು!!
ಋತುಕಾಲಗಳೆಲ್ಲ  ನಿಂತಿವೆ ..
ಸಪ್ತಋಷಿ ಮಂಡಲವೋ ಹಾಲ ಕಣಿವೆಯೋ 
ಇವನ ಕಣ್ಣ ಬೆಳಕಲ್ಲೇ ಹುಟ್ಟಿದವೇ??
ಸುತ್ತೆಲ್ಲ ಹರಿವ ನಾದಗಂಗೆ 
ಬೆಳಕೋ ಬೆಳಕು 
ಕೇಳು ನನ್ನ ಅವಕಾಶಗಳಲ್ಲಿ ತುಂಬಿಕೊಂಡ 
ನಿನ್ನ ಉಸಿರಿಗೆ ಪಕ್ಕಾಗಿ 
ನಾನೀಗ ಅಲೌಕಿಕೆ !!

ನನಗಿನ್ನು  ಸಾವಿಲ್ಲ!!





6 comments:

  1. ನನಗಿಷ್ಟವಾದ ಸಾಲುಗಳು...

    ನಿನ್ನ ನನ್ನ ಕಾಣದ ಈ ದ್ವೀಪದ ದಡ ಸೇರಿಸಿದ
    ದೋಣಿ ಇಲ್ಲೆ ಇದೆ
    ಅಂಬಿಗ ಎಲ್ಲೋ ಕಳೆದು ಹೋಗಿದ್ದಾನೆ
    ಹುಡುಕುವ ದರ್ದು ನಮಗೂ ಇಲ್ಲ


    ReplyDelete
  2. ಸಲಿಲವಾಗಿ ಹರಿವ ಕಾವ್ಯನಾದ ,ಪೂರಕ fonts ಎಲ್ಲವೂ ಹೊಸತು ; ಧಾಟಿಯೂ ಹೊಸತು .
    ನಿಜವಾಗಿ ಚೆನ್ನಾಗಿದೆರೀ. pl. proceeded

    ReplyDelete
  3. ಸಲಿಲವಾಗಿ ಹರಿವ ಕಾವ್ಯನಾದ ,ಪೂರಕ fonts ಎಲ್ಲವೂ ಹೊಸತು ; ಧಾಟಿಯೂ ಹೊಸತು .
    ನಿಜವಾಗಿ ಚೆನ್ನಾಗಿದೆರೀ. pl. proceeded

    ReplyDelete
  4. ಶೀರ್ಷಿಕೆಗೆ ಸಂಪೂರ್ಣ ಅಂಕಗಳು.
    1. ನಾದ -೧ : ರಾಧೆ ಕನಸ್ಸಿನಲ್ಲೇ ಬದುಕಿ ಬಿಟ್ಟಳೇನೋ ಗತ ಸ್ಮರಣೆಯಲ್ಲೇ? ಪಾಪ ಅವನು ದಕ್ಕಳೇ ಇಲ್ಲ ನಿಜ ತೆಕ್ಕೆಗೆ ಬದುಕ ಪೂರಾ!

    2. ನಾದ-೨ : ultimate:
    " ದಿನಾ ಇಣುಕುವ ಬಿಳಿ ಕೂದಲಿಗೆ
    ಕಪ್ಪು ಬಣ್ಣ ಬೇಕು ಅಂದದ್ದು ನಿನ್ನ ಕೊಂಕು ಕಣ್ಣೋಟವೇ"
    ಅವಳು ಕೇಳುವುದಿಲ್ಲ, ನಸು ನಗುತ್ತಾಳಷ್ಟೇ ಎಕೆಂದರೆ,
    'ಕೇಳಬೇಡ ಈಗ, ಎಲ್ಲದಕು ಕಾರಣ
    ನೀನೇ!!'

    3. ನಾದ -೩ : ಇದನ್ನೇ ನನ್ನ ಕೋನದಲ್ಲಿ ಬರೆದುಕೊಂಡರೆ, ಅವಳನ್ನು ಮಾಯಾ ಕಿನ್ನರಿಗೆ ಹೋಲಿಸಬಲ್ಲೆನೇನೋ? ಶೋಕ ಗೀತೆಯಾಗಬೇಕಿದ್ದ ಬಂಜರು ಜೀವನಯಾನವನ್ನು ಮೋಹನ ರಾಗದಿಂದ ಪುನರಜ್ಜೀವನಗೊಳಿಸಿದ ಅವಳ ದೊಡ್ಡತನಕ್ಕೆ ನಾನು ಗುಲಾಮ.

    ಮೂರು ನಾದಗಳಲ್ಲಿ ವಿಭಿನ್ನ ವಸ್ತುಗಳನ್ನು ಮುಂದಿಟ್ಟುಕೊಂಡು ಒಂದು ಅತ್ಯುತ್ತಮ ಕವನ ಮಾಲಿಕೆ ಕೊಟ್ಟಿದ್ದೀರಾ.

    ReplyDelete
  5. ಕೇಳು ನನ್ನ ಅವಕಾಶಗಳಲ್ಲಿ ತುಂಬಿಕೊಂಡ
    ನಿನ್ನ ಉಸಿರಿಗೆ ಪಕ್ಕಾಗಿ
    ನಾನೀಗ ಅಲೌಕಿಕೆ !!
    ಶಮ್ಮಿ ನನ್ನನ್ನು ತುಂಬಾ ಕಾಡಿದ ಸಾಲುಗಳಿವು.... ಮೂರೂ ತುಣಿಕುಗಳು ಚನ್ನಾಗಿವೆ.

    ReplyDelete