ಆ ದಿನ ಅಪ್ಪನಿಗೆ ತುಂಬಾ ಭಯಂಕರವಾದ ಸಿಟ್ಟು ಬಂದಿತ್ತು. ಅದೂ ಅಂತಿಂತ ಕೋಪ ಅಲ್ಲ,ಶಿವನಿಗೆ ತಾಂಡವ ಆಡೋದಿಕ್ಕೆ ಮೊದಲು ಬಂದಿತ್ತಲ್ಲ ಅಂಥಾ ರುದ್ರಭಯಂಕರ ಕೋಪ. ಅಪ್ಪನಿಗೆ ಈ ರೀತಿ ಸಿಟ್ಟು ಬರಲು ಕಾರಣ ಇಷ್ಟೇ,ಮನೆಯ ಉಪ್ಪರಿಗೆಯಲ್ಲಿ ಹೊಗೆ ಕೋಣೆ ಅಂತ ಇತ್ತು,ಅದರಲ್ಲಿ ಒತ್ತೆ ಹಾಕಿದ್ದ ಕಸೆ ರಸಪೂರಿ ಮಾವಿನ ಹಣ್ಣುಗಳ ರಾಶಿಯಲ್ಲಿ ೧೦ ರಿಂದ ೧೨ ತಿಂದಿದ್ದ ಗೊರಟೆಗಳು ಅಪ್ಪನ ಕಣ್ಣಿಗೆ ಕಂಡದ್ದು, ಅದಕ್ಕೆ ಕಾರಣ ಯಾರಿರಬಹುದು ಎಂಬ ಬಗ್ಗೆ ತುಂಬಾ ಧೀರ್ಘವಾದ ವಾದ-ವಿವಾದಗಳು ನಡೆದು ತೀರ್ಮಾನವಾಗದೇ ಅರ್ಧಕ್ಕೆ ನಿಂತಿತ್ತು, ಮಾವಿನಹಣ್ಣಿನ ಕಳವು ಮಾಡಿದ್ದು ಯಾರು ಎನ್ನುವುದೊಂದು ಯಕ್ಷಪ್ರಶ್ನೆಯಾಗಿ ಕಾಡತೊಡಗಿತ್ತು,ನಾವು ಮೂವರೂ ಅಂದರೆ ನಾನು, ವಿನ್ನು ಮತ್ತೆ ಅಕ್ಕ ಈ ಕುತೂಹಲಕರ ಸನ್ನಿವೇಶದಲ್ಲಿ ಭಾಗವಹಿಸದೇ ಅಪ್ಪ ಮತ್ತು ಅಮ್ಮನ ಕೈ-ಬಾಯಿ ನೋಡುತ್ತ ಕುಳಿತಿದ್ದೆವು.ಮಾವಿನ ಹಣ್ಣಿನ ಕೇಸನ್ನು ಅಡ್ಜರ್ನ್ ಮಾಡಲು ಅಪ್ಪ ಅಮ್ಮನ ಕೋರ್ಟು ತೀರ್ಮಾನಿಸಿತು.ಅದೂ ಒಂದು ನಿರ್ಣಯದೊಂದಿಗೆ, ಏನೆಂದರೆ ನಾಳೆಯೂ ಅಪ್ಪ ಹೋಗಿ ಹೊಗೆಕೋಣೆಯಲ್ಲಿ ನೋಡುವುದು,ಆಗಲೂ ಗೊರಟೆ ಕಂಡುಬಂದರೆ ಆಗ ಮಕ್ಕಳನ್ನು ಪ್ರಶ್ನೆ ಮಾಡುವುದು,ಅಪ್ಪ ಕಠಿಣ ತೀರ್ಮಾನಕ್ಕೆ ಬರದಂತೆ ಮಾಡಿದ್ದು ಅಮ್ಮನ ಮಮತೆಯೇ, ಇಲ್ಲವೆಂದರೆ ನಮ್ಮ ಮೈಮೇಲೆ ಆಗಲೇ ಅಪ್ಪನ ಕೋಪದ ಫಲಗಳಾದ ಬಾಸುಂಡೆ ಮತ್ತು ಒಂದಿಷ್ಟು ಬೈಗಳು ಸಿಕ್ಕಿರುತ್ತಿತ್ತು.ಅಂತೂ ಆವತ್ತಿನ ಸಭೆ ಇಷ್ಟರಲ್ಲೆ ಬರಕಾಸ್ತಾಯಿತು.ಹೀಗೇ ಮರುದಿನ ಹಣ್ಣುಗಳನ್ನು ನೋಡಿದಾಗ ಮತ್ತೆ ೪ ಗೊರಟೆ ಸಿಕ್ಕಿತ್ತು, ಅಪ್ಪ ಅದಕ್ಕೇ ಅಷ್ಟೊಂದು ಕೋಪಾವಿಷ್ಟನಾದದ್ದು. ಆ ದಿನ ನಮಗೆ ಚೆನ್ನಾಗಿ ಹುಣಸೇ ಬರಲಿನ ರುಚಿ ಬಿತ್ತೂ ಅನ್ನಿ,ಆದರೂ ಇವತ್ತಿನವರೆಗೆ ಆ ಕೇಸು ಹಾಗೆಯೇ ಉಳಿದಿದೆ.
ನಮ್ಮನೆ ಹೊಗೆ ಕೋಣೆಯೇ ಹಾಗೆ,ಅದು ಒಂಥರಾ ಚಂದಮಾಮದಲ್ಲಿ ಬರುವ ಧಾರಾವಾಹಿಯಂತೆ, ಅಲ್ಲಿ ಏನಿಲ್ಲ,ಅಲ್ಲಿಲ್ಲದ್ದು ಏನೂ ಇಲ್ಲ, ಅಡಿಗೆ ಮನೆ ಮೇಲೆ ಸರಿಯಾಗಿ ಹೊಗೆ ಕೋಣೆ. ಅದಿಕೆ,ರಂಗೋಲಿಯಿಂದ ಹಿಡಿದು, ಅಪ್ಪ ಅಮ್ಮನ ಸುಮಧುರ ದಾಂಪತ್ಯದ ಸವಿನೆನಪಿನ ಟ್ರಂಕು,ನಮ್ಮ ಬಾಲ್ಯದ ಬಟ್ಟೆಗಳಿದ್ದ ಮರದ ಪೆಟ್ಟಿಗೆ ಏನಿಲ್ಲ ಹೇಳಿ, ನನಗಂತೂ ಅದು ಒಂದು ಸುಂದರ ಮಾಯಾ ಲೋಕ,ಅಮ್ಮನ ಮೇಲೆ ಅಪ್ಪನ ಮೇಲೆ ಯಾರ ಮೇಲೇ ನಂಗೆ ಕೋಪ ಬರಲಿ ಸದಾ ಅರೆಗತ್ತಲಿರುತ್ತಿದ್ದ ಆ ಕೋಣೆ ನನ್ನ ಸಂತೈಸುತ್ತಿತ್ತು. ಶಾಲೆಯ ನಂತರದ ನನ್ನ ಸಮಯ ಬಹುಪಾಲು ಅಲ್ಲೇ ಕಳೆಯುತ್ತಿತ್ತು, ಆಗೆಲ್ಲ ನನ್ನ ಜೊತೆಗೆ "ಡಿಂಗ,ಕಿಂಗಿಣಿ,ವಿಕ್ರಮ ಬೇತಾಳ" ಮುಂತಾದ ನನ್ನ ಗೆಳೆಯರೇ ಇರುತ್ತಿದ್ದರು. ಅವರ ಸಂಗದಲ್ಲಿ ಸಮಯ ಕಳೆದದ್ದೇ ಗೊತ್ತಾಗ್ತಿರಲಿಲ್ಲ,ತರಲೆ ಮಾಡಿ ಅಪ್ಪನಿಗೆ ಗೊತ್ತಾಗದಂತೆ ಬಚ್ಚಿಟ್ಟು ಕೊಳ್ಳುತ್ತಿದ್ದದ್ದು ಅಲ್ಲೇ.
ಅದು ನಮ್ಮನೆಗೆ ಮುದ್ದು ಬೆಕ್ಕಿನ ಮರಿ ಚಿಂಟುವನ್ನುತಂದ ಸಮಯ.ಅವನು ತುಂಬಾ ಚಿಕ್ಕವನಿದ್ದ,ತುಂಬಾ ಮುದ್ದಾಗೂ ಇದ್ದ. ಅವನ ಫಳ ಫಳ ಹೊಳೆಯುವ ತುಂಟ ಕಣ್ಣುಗಳು,ಉದ್ದನೆಯ ಚವರಿಯಂತ ಬಾಲ, ಗುಲಾಬಿ ಬಾಯಿ,ಕಾಶ್ಮೀರಿ ರೇಶಿಮೆಯಂತ ಹೊಳಪು ಕೂದಲು,ಅವನು ಮುದ್ದಾಗಿ "ಮಿಯಾಮ್" ಎನ್ನುತ್ತಿದ್ದರೆ ಏನು ಚೆಂದ?? ಇನ್ನೂ ಏನೇನೋ, ಅವನ ತುಂಟಾಟಕ್ಕೆ ಮಿತಿಯೇ ಇಲ್ಲ, ನಮ್ಮನ್ನೆಲ್ಲ ತನ್ನ ಆಟದ ಮೋಡಿಯಲ್ಲಿ ಕೂಡಿ ಹಾಕಿದ್ದ, ನಮ್ಮನೆಯ ಆಸು-ಪಾಸಿನಲ್ಲಿ ಮಾಳ ಬೆಕ್ಕುಗಳ ಸಂತತಿಯೇ ಇತ್ತು.ಅದರಲ್ಲಿ ಒಂದು ಮಾಳವಂತೂ ಸಮಯ ನೋಡಿ ಕದ್ದು ಕದ್ದು ಹಾಲು ಕುಡಿದು ಅಪ್ಪನಿಂದ ಚೆನ್ನಾಗಿ ಕಾಲು ಮುರಿದು ಹೋಗೋ ರೀತಿ ಹೊಡೆತ ತಿಂದಿತ್ತು,ಅದೂ ಸಮಯಕ್ಕೆ ಕಾದಿತ್ತೇನೋ,ಚಿಂಟುವನ್ನು ನೋಡಿ ತನ್ನ ಹಾಲಿಗೆ ಇವನೊಬ್ಬ ಉತ್ತರಾಧಿಕಾರಿ ಬಂದ ಅಂತ ಗೊತ್ತಾಯ್ತು ಅನ್ನಿಸುತ್ತೆ,ಆ ದಿನ ನೀರವ ರಾತ್ರಿಯಲ್ಲಿ ದೊಡ್ಡದಾಗಿ ಮಾಳನ ’ಗುರ್’ ಶಬ್ದವೂ ನಮ್ಮ ಚಿಂಟುವಿನ ರೋಪು ಹಾಕುವ ಶೈಲಿಯ ’ಮಿಯಾಮ್’ ಶಬ್ದವೂ ಕೇಳಿತು,ಗಡಿಬಿಡಿಯಲ್ಲಿ ಉಪ್ಪರಿಗೆ ಹತ್ತಿದರೆ ಅಲ್ಲಿ ಕಂಡದ್ದೇನು?
ನಮ್ಮ ಹೊಗೆ ಕೋಣೆ ಅಕ್ಷರಶ: ರಣರಂಗವಾಗಿತ್ತು,ಆ ಹೊಗೆ ಕೋಣೆ ಅಂಬೋ ರಣರಂಗದ ಮಧ್ಯದಲ್ಲಿ ನಮ್ಮ ಮುದ್ದು ಮರಿ ಚಿಂಟಣ್ಣ ತನ್ನ ಚವರಿಯಂತ ಬಾಲವನ್ನ ಮೇಲೆತ್ತಿ ವೈರಿಯನ್ನ ಎದುರಿಸಲು ತಯಾರಾಗಿದ್ದ. ಮಾಳ ಬೆಕ್ಕೇನು ಕಮ್ಮಿಯೆ? ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಡುವ ಹಾಗೆ ಈ ಪುಟ್ಟ ಮರಿಯ ಮೇಲೆ ತನ್ನ ಶಕ್ತಿ ಬಿಟ್ಟು ಹಲ್ಲು ಕಿರಿದು ಹೆದರಿಸುತ್ತಾ ಇತ್ತು.ನನಗಂತು ಜೀವವೇ ಬಾಯಿಗೆ ಬಂದಂತಾಗಿತ್ತು,ಯಾಕೆಂದರೆ ಚಿಂಟುಕಿಂತ ಮೊದಲು ನಮ್ಮನೆಯಲ್ಲಿ ಒಂದು ಮುದ್ದು ಹೆಣ್ಣು ಬೆಕ್ಕಿತ್ತು,"ಚಿಂಚಿ" ಅಂತ, ಅದು ಹಾವಿನ ಮರಿ ತಿಂದು ಸತ್ತು ಹೋದದ್ದನ್ನು ನೋಡಿ ಮನೆಯಲ್ಲಿ ಎಲ್ಲರೂ ತುಂಬಾ ಬೇಜಾರು ಪಟ್ಟಿದ್ದರು, ನಂಗಂತೂ ಬೆಕ್ಕು ಅಂದ್ರೆ ನನ್ನ ಪುಟ್ಟ ಪ್ರಪಂಚದ ಒಂದು ಭಾಗವೇ ಆದ್ದರಿಂದ ನಾಲಕ್ಕು ದಿನ ತುತ್ತು ಗಂಟಲಲ್ಲಿ ಇಳಿದಿರಲಿಲ್ಲ,ಹಾಗಾಗಿ ಅಪ್ಪ ಈ ಮರೀನ ತಂದು ಕೊಟ್ಟದ್ದು. ಅದೂ ಈಗ ಕಷ್ಟದಲ್ಲಿರುವುದನ್ನು ನೋಡಿ ನಂಗಂತು ಭಯವಾಗಿತ್ತು,ಮಾಳನನ್ನೇನೋ ಹೊಡೆದು ಹೊರ ಕಳಿಸಿದ್ವಿ ಆದರೆ ಮರಿಯ ರಕ್ಷಣೆ ಹೇಗೆ ಮಾಡೋದು,ನನ್ನ ಮತ್ತೆ ವಿನ್ನುವಿನ ಮುಂದೆ ಅದೇ ದೊಡ್ಡ ಪ್ರಶ್ನೆಯಾಗಿತ್ತು,ಆಗ ನಮ್ಮ ತಲೆಗೆ ಹೊಳೆದಿದ್ದು ಹೊಗೆ ಕೋಣೆಯೆ, ಅಲ್ಲೇ ಒಂದು ಗೋಣಿಚೀಲ ಹಾಕಿ ಮೇಲಿಂದ ಹೆಡಿಗೆ ಮುಚ್ಚಿ ಮೇಲೊಂದು ಕಲ್ಲು ಇಟ್ಟೆವು,ಅಲ್ಲಿಗೆ ಮರಿಯ ರಕ್ಷಣಾಪರ್ವ ಮುಗಿದಿತ್ತು,(ಚಿಂಟು ಬಗ್ಗೆ ಹೇಳಕ್ಕೆ ಬೇಕಾದಷ್ಟಿದೆ,ಮುಂದೆ ಎಂದಾದರೂ ಹೇಳುವೆ!!)
ನನ್ನ ಪಾಸ್ಟ್ ಟೈಮ್ನಲ್ಲೆಲ್ಲ ಮರೆಯಲಾಗದ ಹಲವು ನೆನಪುಗಳು ಈ ಹೊಗೆ ಕೋಣೆಯೊಂದಿಗೆ ಬೆಸೆದು ಕೊಂಡಿದೆ,ಹರೆಯದ ಮುದ ತುಂಬಿದ ದಿನಗಳಲ್ಲಿ ಕನಸು ಕಾಣ್ತಾ ಇರಕ್ಕೆ ನಂಗೆ ಇದ್ದ ಜಾಗಗಳಲ್ಲಿ ಹೊಗೆಕೋಣೆ ನನ್ನ ಫ಼ೇವರಿಟ್, "ಅವನ" ಪತ್ರಗಳನ್ನ ಕದ್ದು ಓದೋದಿಕ್ಕು ಅದೇ ಸರಿಯಾದ ಜಾಗ,ಇನ್ನು ಮಳೆಗಾಲದಲ್ಲಿ ಹಪ್ಪಳ ಸಂಡಿಗೆ ಈ ಹೊಗೆಕೋಣೆಯಿಂದ ರವಾನೆ ಆಗ್ತಾ ಇತ್ತು, ಕಂಬಳಿ ಹೊದೆಯಕ್ಕೆ ಇಲ್ಲಿಂದಲೇ ಸಿಗ್ತಾ ಇತ್ತು,ಅಪ್ಪನ ಪುಸ್ತಕಗಳನ್ನ ಓದಕ್ಕೆ ಅದೇ ಸರಿಯಾದ ಜಾಗ,ಆ ಸಮಯದಲ್ಲೆ ಅಲ್ಲವೇ ನಾನು "ಸ್ವಪ್ನ ವಾಸವದತ್ತ" ಓದಿದ್ದು?,ನಮ್ಮ ಜೊತೆಗಿದ್ದ ಚಿಕ್ಕಪ್ಪ ಬೇರೆ ಹೋಗುವಾಗ ನಮ್ಮಮ್ಮ ಇದೇ ಕೋಣೆಯಲ್ಲಿ ಕಣ್ಣೀರು ಹಾಕ್ತಾ ಕೂತಿದ್ದರು,ನನ್ನ ತುಂಬಾ ಮುದ್ದು ಮಾಡ್ತಿದ್ದ ಆ ಚಿಕ್ಕಪ್ಪನ ನಿರ್ಗಮನ ನನ್ನ ಮೇಲಂತು ತುಂಬಾ ಪರಿಣಾಮ ಬೀರಿತ್ತು,ಆ ವರ್ಷ ನಾನು ಓದಿನಲ್ಲಿ ತುಂಬಾ ಹಿಂದುಳಿದಿದ್ದೆ,ಅಲ್ಲಿಂದ ಶುರುವಾದ ನನ್ನ ಕಷ್ಟಗಳ ಪರಂಪರೆ ಅದನ್ನಂತೂ ನೆನೆಸಿಕೊಳ್ಳುವ ಹಾಗೇ ಇಲ್ಲ. ನಮ್ಮ ಬಾಲ್ಯದ ನೆನಪುಗಳನ್ನ ಕಿತ್ತು ಹಾಕಿ ನನ್ನ ಮೇಲಿನ ಪ್ರೀತಿಯನ್ನ ತೊರೆದು ಹೋಗುವಷ್ಟು ಚಿಕ್ಕಪ್ಪ ಯಾಕೆ ನಿರ್ದಯಿಯಾದ?. ನಂಗೆ ಈಗಲೂ ಪ್ರಶ್ನೆ ಕಾಡ್ತಾ ಇರುತ್ತೆ, ಹೊಗೆ ಕೋಣೆಯಲ್ಲಿದ್ದ ಪಾತ್ರೆಯನ್ನ ಎತ್ತಿಕೊಂಡು ಹೋಗ್ತಾ ಇರಬೇಕಾದ್ರೆ ಹೋಗ್ಬೇಡ ಅಂತ ಚಿಕ್ಕಪ್ಪನ ಕೈ ಹಿಡಿದು ನಾನು ಗಳ ಗಳ ಅತ್ತಿದ್ದೆ. ಆದ್ರೆ ನಮ್ಮ ಚಿಕ್ಕಮ್ಮನ ನೋಟಕ್ಕೆ ಉತ್ತರಿಸಲಾಗದೆ ಸುಮ್ಮನೇ ಹೋದ ಅವನ ಚಿತ್ರ ಇನ್ನು ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ.
ಅಕ್ಕನ ಮದುವೇಲಿ ಮದುವೆಯ ಮುಂಚಿನ ದಿನ ನಾವೆಲ್ಲ ಮಲಗಿದ್ದೆ ಹೊಗೆ ಕೋಣೇಲಿ, ಹೊರಗಡೆ ದೊಡ್ಡೋರಿಗೆ ಜಾಗ, ಅದಲ್ದೇ ನನಗೆ ಮತ್ತು ಅಕ್ಕನ ಗೆಳತಿ ಸುವರ್ಣಳಿಗೆ ತುಂಬಾ ತುಂಬಾ ಮಾತಾಡೋದಿತ್ತು,ಜೊತೆಗೆ ಇನ್ನೂ ಮೂರ್ನಾಲ್ಕು ಅಕ್ಕಂದಿರೂ ಇದ್ದರು ಅನ್ನಿ, ಮೊದಲೇ ಮೃದು ಮೃದು ನಮ್ಮಕ್ಕ ನಮ್ಮ ಕೆಣಕು ಮಾತಿಗೆ ಸುಮ್ಮನೆ ನಾಚತಾ ಇದ್ದದ್ದು,ಅವಳ ಕೈಯಲ್ಲಿದ್ದ ಮದರಂಗಿಗಿಂತಲೂ ಅವಳ ಮುಖ ಕೆಂಪಾಗಿತ್ತು, ಎಷ್ಟು ಚಂದ ಕಾಣ್ತಿದ್ದಳು ನಮ್ಮಕ್ಕ, ಇಷ್ಟುದ್ದ ಬೆಳೆದ ಮಗಳನ್ನು ಮದುಮಗಳಾಗಿ ನೋಡುವಾಗ ಅಮ್ಮನ ಕಣ್ಣಲ್ಲಿ ಮಗಳ ಅಗಲಿಕೆಯ ನೋವಿಂದ ಸಣ್ಣ ಕಣ್ಣೀರ ಹನಿಯಿತ್ತು, ಅಪ್ಪನ ಮುಖದಲ್ಲಿ ಹೆಮ್ಮೆಯಿತ್ತು,ಆದರೆ ಏನೇ ಬಂದರೂ ಧೈರ್ಯವಾಗಿ ಎದುರಿಸುವ ನನ್ನ ಮುದ್ದು ಅಪ್ಪನ ಕಣ್ಣಲ್ಲೂ ಅಂದು ಸಣ್ಣಗೆ ಕಣ್ಣೀರ ಪಸೆಯಿದ್ದದ್ದು ಸುಳ್ಳೇ?ವರುಷಗಳ ನಂತರ ತುಂಬಿದ ಬಸುರಿ ನಮ್ಮಕ್ಕ ಬಾಣಂತನಕ್ಕೆ ಬಂದಾಗ ಮತ್ತೆ ಅದೇ ಹೊಗೆಕೋಣೆಯ ಅಮ್ಮನ ಮರದ ಪೆಟ್ಟಿಗೆ ಎಂಬ ಮಾಯಾಂಗನೆ ಬೇಕಾದಷ್ಟು ಕಾಟನ್ ಬಟ್ಟೆ ಒದಗಿಸಿದ್ದೂ ಇತ್ತೀಚಿನ ನೆನಪುಗಳು,
ಹೀಗೆ ಊರಿಗೆ ಹೋದಾಗಲೆಲ್ಲ ನಂಗೆ ಹೊಗೆಕೋಣೇಲಿ ಸ್ವಲ್ಪ ಹೊತ್ತು ಏನಾದ್ರು ಮಾಡದಿದ್ದರೆ ಮನಸ್ಸೇ ಸರಿ ಇರುವುದಿಲ್ಲ ಈಗ ಹೊಗೆಕೋಣೇಲಿ ಹೊಗೆ ಇಲ್ಲ ಯಾಕಂದ್ರೆ ಗೋಬರ್ ಗ್ಯಾಸ್ ಹಾಗೂ ಎಲ್.ಪಿ.ಜಿ ಎರಡೂ ಬಂದಿದೆ.ಅಮ್ಮಂಗೂ ಪದೇ ಪದೇ ಹತ್ತಲಾಗುವುದಿಲ್ಲ,ಅದಕ್ಕೇ ಅಲ್ಲಿದ್ದ ಸುಮಾರಷ್ಟು ವಸ್ತುಗಳು ಒಂದೋ ಮಾಯವಾಗಿವೆ ಇಲ್ಲ ಕೆಳಗೆ ಅಮ್ಮನ ಕೈಗೆಟಕುವ ರೀತಿ ಸ್ಥಳಾಂತರಗೊಂಡಿವೆ. ಹಾಗಾಗಿ ಅಲ್ಲಿದ್ದ ಮಾಯಲೋಕದ ವಸ್ತುಗಳು ಈಗಿಲ್ಲ,ಹಾಗೇ ಮುಂಚೆ ಮಾಯಾಲೋಕ ಸೃಷ್ಟಿಗೆ ನೆರವಾಗುತ್ತಿದ್ದ ಅರೆಗತ್ತಲು ಮಾಯವಾಗಿ ಬೆಳಕೂ ಸಾಕಷ್ಟಿದೆ,ಆದರೂ ನಂಗೆ ಮನಸು ತಡೆಯುವುದಿಲ್ಲ,ಅಮ್ಮ ಕೂಗತಾ ಇದ್ದರೂ ನಾನು ಆರಾಮಾಗಿ ಅಲ್ಲಿ ಮನಸು ತಣಿಯುವಷ್ಟು ಹೊತ್ತು ಇದ್ದು ಬರುತ್ತೇನೆ,ನನ್ನ ಅಕ್ಕನ ಮಗ "ಚಿಕ್ಕೀ ಚಿಕ್ಕೀ" ಅಂತ ಮೊನ್ನೆ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಆ ಮಾಯಾಲೋಕದ ಪ್ರವೇಶ ಪಡೆದಿದ್ದಾನೆ,ಅವನು ದೊಡ್ಡ ಆಗುವಷ್ಟು ದಿನವಾದರೂ ಆ ಹೊಗೆ ಕೋಣೆ ಅವನಲ್ಲಿ ಕುತೂಹಲ ಹುಟ್ಟಿಸಿದರೆ ಅಷ್ಟೇ ಸಾಕು.
ಅಂದ ಹಾಗೆ ನಿಮಗೆ ಮಾವಿನ ಹಣ್ಣು ತಿಂದವರು ಯಾರು ಅನ್ನೋ ಕುತೂಹಲವೇ? ಅದು "ನಾನೇ" ನಿಸ್ಸಂಶಯವಾಗಿ!! ಇದು ಹೊಗೆಕೋಣೆಯಲ್ಲಿ ಮುಚ್ಚಿ ಹೋದ ಒಂದು ಹಳೆಯ ಸತ್ಯ ಅಷ್ಟೇ!!!!
ಬಯಲ ಬೇಲಿಯ ದಾಟಿ ಮಲ್ಲಿಗೆಯ ಕಂಪು ಮನದ ಬೇಲಿಯ ದಾಟಿತು ಮಂದಾರದ ನುಣುಪು, ಬದುಕ ಹಾಡು ಮಲ್ಲಿಗೆ,ಬಯಕೆ ಹಾಡು ಮಂದಾರ!!!
Friday, June 13, 2008
Tuesday, June 10, 2008
ಚಿರವಿರಹಿಗೆ (ಗಝಲ್)
ಕೇಳಿಸದೆ ಹೃದಯಕ್ಕೆ ವಿರಹಿಯಾ ರಾಗ
ಮಧುಕರನ ಬರುವಿಲ್ಲದೆ ನೊಂದ ಎದೆಯಲ್ಲಿ ಈಗ !!
ಖಾಲಿಯಾಗದ ಮಧುಪಾತ್ರೆ , ಮತ್ತೇರಿದ ಕಣ್ಣು
ಎದೆ ಬಾಗಿಲಲ್ಲಿ ನಿಂತು ಯಾರಿಗೆ ಕಾಯುವ ಹೆಣ್ಣು!!
ಹಾಡುವಳು ಹೀಗೆ,
ನಾ ಕೊಟ್ಟದ್ದು ಕಳೆದದ್ದು ಲೆಕ್ಕವಿಲ್ಲ
ಈ ಖಾಲಿಯಾಗದ ಜೇನು ತುಂಬಿದ ಪಾತ್ರ
ಎದೆ ತುಂಬ ಕಚಗುಳಿಯಿಡುವುದು
ನಿನ್ನ ನೆನಪು ಓ ಮಿತ್ರ!!
ಮಯ್ ಬಿಗಿದು ತುಟಿಯರಳಿಸೆರಗ ಬದಿ ಜಾರಿ
ನನಗಿದೋ ಈ ನೊವ ತಂದವನಾರು ಈ ಪರಿ! !
ನೀ ಬರುವಿಯೆಂದು ಬಂದು
ಹೋದವರೆಲ್ಲರ ದೂರವೆ ಇಟ್ಟೆ
ಖಾಲಿ ಮಧುಪಾತ್ರೆ ಬಣಗುಡುವ ಮನಸಲ್ಲಿ
ವಿರಹದಲಿ ಬೆಂದು ಗೋಳಿಟ್ಟೆ!!
ಈ ಹಾಡು ಈ ಸಾಲು ನಿನಗಾಗಿ ಅಲ್ಲ
ಪ್ರತಿ ನಿಮಿಶ ಪ್ರೇಮಿಗಾಗಿ ಮರುಗುವ
ಚಿರವಿರಹಿಗಿದು ಸೊಲ್ಲ!!
ಮಧುಕರನ ಬರುವಿಲ್ಲದೆ ನೊಂದ ಎದೆಯಲ್ಲಿ ಈಗ !!
ಖಾಲಿಯಾಗದ ಮಧುಪಾತ್ರೆ , ಮತ್ತೇರಿದ ಕಣ್ಣು
ಎದೆ ಬಾಗಿಲಲ್ಲಿ ನಿಂತು ಯಾರಿಗೆ ಕಾಯುವ ಹೆಣ್ಣು!!
ಹಾಡುವಳು ಹೀಗೆ,
ನಾ ಕೊಟ್ಟದ್ದು ಕಳೆದದ್ದು ಲೆಕ್ಕವಿಲ್ಲ
ಈ ಖಾಲಿಯಾಗದ ಜೇನು ತುಂಬಿದ ಪಾತ್ರ
ಎದೆ ತುಂಬ ಕಚಗುಳಿಯಿಡುವುದು
ನಿನ್ನ ನೆನಪು ಓ ಮಿತ್ರ!!
ಮಯ್ ಬಿಗಿದು ತುಟಿಯರಳಿಸೆರಗ ಬದಿ ಜಾರಿ
ನನಗಿದೋ ಈ ನೊವ ತಂದವನಾರು ಈ ಪರಿ! !
ನೀ ಬರುವಿಯೆಂದು ಬಂದು
ಹೋದವರೆಲ್ಲರ ದೂರವೆ ಇಟ್ಟೆ
ಖಾಲಿ ಮಧುಪಾತ್ರೆ ಬಣಗುಡುವ ಮನಸಲ್ಲಿ
ವಿರಹದಲಿ ಬೆಂದು ಗೋಳಿಟ್ಟೆ!!
ಈ ಹಾಡು ಈ ಸಾಲು ನಿನಗಾಗಿ ಅಲ್ಲ
ಪ್ರತಿ ನಿಮಿಶ ಪ್ರೇಮಿಗಾಗಿ ಮರುಗುವ
ಚಿರವಿರಹಿಗಿದು ಸೊಲ್ಲ!!
ನಾ ರಾಧೆ
ನಾ ರಾಧೆ
ಕೃಷ್ಣ ಎನ್ನೊಲವಿನ ಗಿರಿಧರ ನಾ ಬಲ್ಲೆ
ನೀ ನನ್ನೊಲವಿನ ಹಂದರ
ಕೃಷ್ಣನೊಲವಿನ ದೀವಿಗೆ ಹೊತ್ತಿ ಉರಿಯಲಿ ನನ್ನೆದೆಯ ವಿರಹವ ಮರೆಸಲಿ
ಓ ಉದ್ಧವ! ವಿಪ್ರಲಂಭದ ಹೊಳೆಯಲ್ಲಿ ಮುಳುಗುತ್ತಿರುವ ಎನಗೆ ರುಚಿಸೀತೆ ನಿನ್ನ ಗೊಡ್ಡು ಉಪದೇಶ?
ನೀನೇನು ಬಲ್ಲೆ ? ನೀನೆಷ್ಟು ಬಲ್ಲೆ ನಮ್ಮ ಶ್ರೀಧರನ?
ಅಂದು ತುಂಬಿದ ಸಭೆಯಲ್ಲಿ ನನ್ನತ್ತಿಗೆ ದ್ರೌಪದಿಯ ಮಾನ ರಕ್ಷಿಸಿದವ
ಕರೆಯದೇ ಬಂದ ಸುಧಾಮಗೆ ಮರೆಯಲಾರದ ಅನುಭವ ನೀಡಿದವ
ಅವನೆನ್ನ ಕಣ್ಣ !
ಅಂದು ಯಮುನೆಯ ತೀರದಲ್ಲಿ ನಾ ರಾಧೆಯಾಗಿ
ನಿನ್ನ ಕೊಳಲ ಮಧುರವಾಣಿಗೆ ಮುಖ ಗೀತೆಯಾಗಿ
ಹಾಡಿ ಕುಣಿದದ್ದು ಸುಳ್ಳು ಏನೋ ಕಣ್ಣಾ?
ಬದಲಗಾಬಾರದೋ ಹೀಗೆ ನಿನ್ನೊಲವ ಬಣ್ಣ
ಇಂದು ಎನ್ನ ವಿರಹಕ್ಕೆ ಮರು ದನಿ ಯೇ ಇಲ್ಲದೇ
ಬರೀ ಕಲ್ಲಾದುದು ಏಕೆಂದು ಈ ಜೀವ ಬಲ್ಲುದೆ?
ಬಾ ಬಾರ ನನ್ನ ಬದುಕ ಭರವಸೆಯೇ ಬಾ ಬಂದು ಸೇರ ಮಹಿ ಒಲವ ಗಿರಿಧಾರಿಯೇ
(ಇದು ಮೀರಾ ಭಜನ್ ನಿಂದ ಆಕರ್ಷಿತಳಾಗಿ ರಚಿಸಿದ ಗೀತೆ)
ಕೃಷ್ಣ ಎನ್ನೊಲವಿನ ಗಿರಿಧರ ನಾ ಬಲ್ಲೆ
ನೀ ನನ್ನೊಲವಿನ ಹಂದರ
ಕೃಷ್ಣನೊಲವಿನ ದೀವಿಗೆ ಹೊತ್ತಿ ಉರಿಯಲಿ ನನ್ನೆದೆಯ ವಿರಹವ ಮರೆಸಲಿ
ಓ ಉದ್ಧವ! ವಿಪ್ರಲಂಭದ ಹೊಳೆಯಲ್ಲಿ ಮುಳುಗುತ್ತಿರುವ ಎನಗೆ ರುಚಿಸೀತೆ ನಿನ್ನ ಗೊಡ್ಡು ಉಪದೇಶ?
ನೀನೇನು ಬಲ್ಲೆ ? ನೀನೆಷ್ಟು ಬಲ್ಲೆ ನಮ್ಮ ಶ್ರೀಧರನ?
ಅಂದು ತುಂಬಿದ ಸಭೆಯಲ್ಲಿ ನನ್ನತ್ತಿಗೆ ದ್ರೌಪದಿಯ ಮಾನ ರಕ್ಷಿಸಿದವ
ಕರೆಯದೇ ಬಂದ ಸುಧಾಮಗೆ ಮರೆಯಲಾರದ ಅನುಭವ ನೀಡಿದವ
ಅವನೆನ್ನ ಕಣ್ಣ !
ಅಂದು ಯಮುನೆಯ ತೀರದಲ್ಲಿ ನಾ ರಾಧೆಯಾಗಿ
ನಿನ್ನ ಕೊಳಲ ಮಧುರವಾಣಿಗೆ ಮುಖ ಗೀತೆಯಾಗಿ
ಹಾಡಿ ಕುಣಿದದ್ದು ಸುಳ್ಳು ಏನೋ ಕಣ್ಣಾ?
ಬದಲಗಾಬಾರದೋ ಹೀಗೆ ನಿನ್ನೊಲವ ಬಣ್ಣ
ಇಂದು ಎನ್ನ ವಿರಹಕ್ಕೆ ಮರು ದನಿ ಯೇ ಇಲ್ಲದೇ
ಬರೀ ಕಲ್ಲಾದುದು ಏಕೆಂದು ಈ ಜೀವ ಬಲ್ಲುದೆ?
ಬಾ ಬಾರ ನನ್ನ ಬದುಕ ಭರವಸೆಯೇ ಬಾ ಬಂದು ಸೇರ ಮಹಿ ಒಲವ ಗಿರಿಧಾರಿಯೇ
(ಇದು ಮೀರಾ ಭಜನ್ ನಿಂದ ಆಕರ್ಷಿತಳಾಗಿ ರಚಿಸಿದ ಗೀತೆ)
Subscribe to:
Posts (Atom)