ನಂದನ ತಲಬಾಗಿಲು ದೂರವೇನಿಲ್ಲ, ಇಲ್ಲಿಂದ ಕೂಗಿದರೆ ಅವರ ಮನೆಯ ಹಂಸನಂದಿ ಅಂಬಾ ಅನ್ನುತ್ತದೆ, " ದಾರಿ ದೂರ ತೋರುವುದಿಲ್ಲ, ಹುಚ್ಚು ಸೆಳೆತಕ್ಕೆ ಯಾವ ದಾರಿಯು ದೂರವಲ್ಲ" ಮನದೊಳಗಿನ ದನಿ ಪಿಸುಗುಟ್ಟಿತು, ಯಮುನೆಯಾಚೆಗಿನ ದಡ ಸದಾ ಹಸಿರಾಗಿ ಸೆಳೆಯುತ್ತಿತ್ತು, ಈ ದಿನ ಅಲ್ಲಿಂದ ತೇಲಿಬಂದ ದೇವಗಂಧ ಮೂಗಿಗಡರಿತು, ನನಗೋ ಭ್ರಮೆ, ಇದೆಂಥ ಭ್ರಮೆ, ಹರೆಯ ಕಾಲಿಡುವ ಸಮಯ, ನನಗೆ ಸಹಜವಲ್ಲವಾ ಈ ಕಳವಳ, ಬಯಕೆ, ಭ್ರಮೆಗಳು? ಉಹುಮ್, ನಾನು ಎಲ್ಲರಂತಲ್ಲ, ಕನಸುವ ಹಕ್ಕು ನನಗಿಲ್ಲ, ಹುಟ್ಟಿದಾಗಿನಿಂದ ಬಾಗಿದ ಬೆನ್ನು, ನಿಲ್ಲದ ತಲೆ, ತಿರಿಚಿದ ಕಾಲುಗಳು, ಹರೆಯ ಬಂದಿತ್ತು, ಮುಖ ತೊಳೆವ ಮುಂಚೆ ನಾ ಯಮುನೆಯ ನೀರಲ್ಲಿ ನೋಡಿದ ಬಾಲೆಗೆ ಉದ್ದ ಕೂದಲಿತ್ತು ಹೊಳೆವ ಕಣ್ಣಿತ್ತು, ಆದರೆ ...
ಯೋಚನೆಗಳು ಅಲ್ಲಿಗೆ ನಿಂತವು, ಎದುರಿಂದ ಕಾಮಿನಿ ಬರುತ್ತಿದ್ದಳು, ಅವಳ ಕೈಯಲ್ಲಿ ಹೂ ದಂಡೆ, ಅದು ಬಹುಶಃ ಪುಣ್ಯಕೋಟಿಗೋ, ಹಂಸ ನಂದಿಗೋ? ಪುಣ್ಯಕೋಟಿಗೆ ಅದು ಎರಡನೆಯ ಬಸಿರು, ಹಂಸನಂದಿ ಚೊಚ್ಚಲ ಬಸುರು, ರಾಣಿಯರು ಅರಮನೆಯಲ್ಲಿ ಬೆಳಕಿತ್ತರೆ ಇವೆರಡೂ ಕಾಮಧೇನುಗಳು ನಂದನ ಕೊಟ್ಟಿಗೆಯ ಪಟ್ಟದರಸಿಯರು, ಇವರಿಬ್ಬರಿಗೆ ಗೋಗ್ರಾಸ ಕೊಡದೆ ಬೆಳಗಿನ ಜಾವ ತೊಟ್ಟು ನೀರು ಕುಡಿವುದಿಲ್ಲ ನಂದ ಯಶೋದೆಯರು,ಅದು ನನಗೆ ಹೊತ್ತಿದ್ದ ವಿಷಯವೇ, ಕಾಮಿನಿ ಲಗುಬಗೆಯಲ್ಲಿ ಕೈಗೆ ಮಾಲೆ ಇತ್ತು, ನನ್ನ ಕೈಲಿದ್ದ ಸುಗಂಧ ದ್ರವ್ಯಗಳ ಬುಟ್ಟಿಯನ್ನು ಕಸಿದು" ಇವತ್ತು ಪುಣ್ಯಕೋಟಿಗೆ ಈ ಹಾರ ನೀನೆ ಹಾಕಬೇಕು, ಹಾಗೆಯೆ ಒಳಮನೆಗೆ ಬಂದುಬಿಡು, ರಾಣಿಯರು ಕಾಯುತ್ತಿದ್ದಾರೆ" ಅಂದು ಓಡಿದಳು, ಗೆಜ್ಜೆಯ ಸದ್ದು ಮರೆಯಾಯ್ತು, ನನಗೆ ಆನಂದವಾಯ್ತು, ಪುಣ್ಯಕೋಟಿ ಬಿಳಿಯ ಹಸು ಹಣೆಯ ಮೇಲೊಂದು ದೈವದತ್ತ ಕಪ್ಪು ಗುರುತು, ಸದಾ ನಗುತ್ತಿರುವಳೋ ಅನ್ನುವ ಹಾಗೆ, ಇಡೀ ಕೊಟ್ಟಿಗೆಯಲ್ಲಿ ಆಕೆಯ ಸಂತಾನವೆ ಜಾಸ್ತಿ, ನಾನು ನಿಧಾನಕ್ಕೆ ಒಳ ಕಾಲಿಟ್ಟೆ, ಕತ್ತಿನಲ್ಲಿದ್ದ ಗಂಟೆ ನಿನಾದಿಸಿತು, ನನ್ನ ಗೂನಿಗೆ ತನ್ನ ಕೆನ್ನೆಯಿಟ್ಟು ಲಾಲಿಸಿದಳು ಪುಣ್ಯಕೋಟಿ, ಹೌದು ಹುಟ್ಟಿದಾಗಿನಿಂದ ತಾತ್ಸಾರ ಹಳಿಯುವ ಮಾತುಗಳನ್ನೆ ಕೇಳಿ ಬೆಳೆದ ನನಗೆ ಮೂಕ ಪ್ರಾಣಿಗಳ ಮೌನದ ಭಾಷೆ ಅರ್ಥವಾಗುತ್ತಿತ್ತು, ಇವತ್ತು ಪುಣ್ಯಕೋಟಿ ಸಂಭ್ರಮ ದಲ್ಲಿದ್ದ ಳು, ನಾನೂ , ನಿಧಾನವಾಗಿ ಮಲ್ಲಿಗೆಯ ಹೂದಂಡೆ ಅವಳಿಗೇರಿಸಿ ನನ್ನ ಸಂಭ್ರಮ ಪಿಸುಗುಟ್ಟಿದೆ, ಆಕೆ ತನ್ನ ಹಾಲು ನೆಲದ ಮೇಲೆಲ್ಲ ಸುರಿದು ಯಾವುದೋ ಆಹ್ಲಾದ ವ್ಯಕ್ತಪಡಿಸಿ ನನ್ನ ಬಲು ಪ್ರೀತಿಯಿಂದ ನೆಕ್ಕಿದಳು, ಪಕ್ಕದಲ್ಲಿದ್ದ ಹಂಸನಂದಿ ಸಂತಸದ ಕಣ್ಣೀರು ಸುರಿಸುತ್ತಿದ್ದಳು
ಹಗುರಾಗಿ ಅರಮನೆಯತ್ತ ನಡೆಯತೊಡಗಿದೆ.
ತೊಟ್ಟಿಯ ಮನೆಯಲ್ಲಿ ಗೋಪಿಯರ ಮಾತು ಸಲ್ಲಾಪಗಳು ಮುಗಿಲು ಮುಟ್ಟಿತ್ತು, ಹಾದಿಯಲ್ಲಿ ಎದುರಾದ ಸೂಲಗಿತ್ತಿ ಶ್ಯಾಮಲೆಯು "ಬಂದೆಯಾ ತ್ರಿವಕ್ರೆ, ನೋಡು, ರಾಣಿಯರ ಮುಖದ ಕಳೆ, ನಾಳೆಅಥವಾ ನಾಡಿದ್ದು ಶುಭ ಸುದ್ದಿ ಖಂಡಿತಾ" ಎಂದು ನಕ್ಕಳು. ರಾಣಿಯರ ಬೆನ್ನಿಗೆ ನಿಧಾನವಾಗಿ ಚಂದನ ಸವರಿ ಕೈಗಳಲ್ಲಿ ಹಗುರಾಗಿ ತಿಕ್ಕುತ್ತಾ ಗಂಧ ಲೇಪನಕ್ಕೆ ನನ್ನ ಬುಟ್ಟಿಯೆಡೆಗೆ ತಿರುಗಿದೆ, ಎಲ್ಲಿಂದ ಬಂತು ಅಲ್ಲಿ ಗಂಧದ ಬಟ್ಟಲಲ್ಲಿ ಎರಡು ಪುಟ್ಟ ಹೆಜ್ಜೆಯ ಗುರುತುಗಳು, ನಾನು ಮತ್ತೆ ವಿಭ್ರಮೆಗೆ ಬಿದ್ದೆ, ಮತ್ತದೇ ದೇವಗಂಧ, ನನ್ನ ಕರೆಯುತ್ತಲಿರುವಂತೆ ಯಮುನೆಯ ದಡದಲ್ಲಿ ಕನಸಿನ ಸಂಗತಿ ಮತ್ತೆ ಮರುಕಳಿಸಿದಂತೆ , ಈ ಬಾರಿ ಬೆಚ್ಚಲಿಲ್ಲ, ಲೇಪನವನ್ನು ಅರ್ಧ ಗಳಿಗೆಯ ನಂತರ ನಿಧಾನಕ್ಕೆ ತೆಗೆಯಲು ಹೇಳಿ, ಕೆನ್ನೆ ಕತ್ತಿಗೆಲ್ಲ ಕಣಗಿಲೆಯ ಸುಗಂಧ ಲೇಪಿಸಿ ಹೊರಡಲಣಿಯಾದೆ,ರೋಹಿಣಿ ಕರೆದು ಕೈಗೆ ಬಂಗಾರದ ನಾಣ್ಯ ಇತ್ತು ಮೃದುವಾಗಿ ನನ್ನ ಕೈ ಹಿಡಿದು ಬೇಡಿದಳು" ಮಥುರೆಗೆ ಹೋಗಿ ದೇವಕಿಗೆ ನನ್ನ ಸಂದೇಶ ಮತ್ತು ನಿನ್ನ ಸೇವೆ ಮುಟ್ಟಿಸುವೆಯಾ, "
ನನಗೆ ಮಾತು ಹೊರಡಲಿಲ್ಲ, ಎತ್ತ ಇತ್ತು ಚಿತ್ತ? ಆಚೆಯ ದಡದ ಸೆಳೆತ ಯಾವ ಕಾಣದ ಕೊರಳಿನ ಕರೆ ತಿಳಿಯಲೆ ಇಲ್ಲ, ಅರ್ಧ ಘಳಿಗೆಯಲ್ಲಿ ನಾನು ಯಮುನೆಯ ದಡದಲ್ಲಿದ್ದೆ.
(ಮುಂದುವರೆಯುವುದು)
ಬಯಲ ಬೇಲಿಯ ದಾಟಿ ಮಲ್ಲಿಗೆಯ ಕಂಪು ಮನದ ಬೇಲಿಯ ದಾಟಿತು ಮಂದಾರದ ನುಣುಪು, ಬದುಕ ಹಾಡು ಮಲ್ಲಿಗೆ,ಬಯಕೆ ಹಾಡು ಮಂದಾರ!!!
Tuesday, June 21, 2016
ಧಾರಾವಾಹಿ ಸುಗಂಧಿನಿ ಭಾಗ-೨
Subscribe to:
Posts (Atom)