Tuesday, February 20, 2018

ಅಲಾರಾಂ ಹೊಡೆದುಕೊಳ್ಳುತ್ತಿತ್ತು, ಟಪಾಕ್  ಅಂತ ಅದರ ತಲೆಯಮೇಲೊಂದು ಕುಕ್ಕಿದೆ, ಸುಮ್ಮನೆ ಬಾಯಿ ಮುಚ್ಚಿಕೊಂಡಿತು, ಮತ್ತೆ ಹಾಸಿಗೆಯ ಮೇಲೆ ಬಿದ್ದು ಹೊರಳಾಡಿದೆ , ಪಕ್ಕದಲ್ಲಿಯೇ ರಾತ್ರಿ ಓದಿ ಮುಗಿಸಿದ ಡಿಕನ್ಸನ್ನನ ಪುಸ್ತಕ "ಯಾವಾಗ ಮತ್ತೆ ನೀನು ನನ್ನ ಮುಟ್ಟೋದು " ಅಂತ ಅಂಗಾತ ಮಲಗಿತ್ತು. ಅದರ ಪೇಜುಗಳ ಮೇಲೆ ಮೃದುವಾಗಿ ಬೆರಳಾಡಿಸಿದೆ, ನನಗೆ ಹೊಸ ಮತ್ತು ಹಳೆಯ ಪುಸ್ತಕಗಳ ನಾಜೂಕು ಬಹಳ ಇಷ್ಟವಾಗುತ್ತದೆ, ಅದೊಂಥರಾ ಹೆಣ್ಣಿನಂತೆ ಅಂತನ್ನಿಸುವುದು , ವಯಸ್ಸಾದಂತೆಲ್ಲ ಮಾಗುತ್ತಾ ಒಂದು ಔನ್ಯತ್ಯ  ಒಂದು ಹಿತವಾದ ಪಳಗಿಸಲ್ಪಟ್ಟ ನಾಜೂಕು ಹೆಣ್ಣಿನ ದೇಹ ಮತ್ತೆ ವರ್ತನೆಗಳಿಗೆ ಒದಗುತ್ತದೆ ಹಾಗೆಯೇ ಆಗಷ್ಟೇ ಕುಸುಮಿಸುವ ಹದಿಹರೆಯಕ್ಕು ಸಹ ಅಲ್ಲಿ ನಾಜೂಕು ಕಾಣುವುದು , ಅವೆರಡರ ನಡುವಿನದ್ದು ಕ್ಲಿಷ್ಟ ಮತ್ತು ಕ್ಲಿಷೆ ಅನ್ನಿಸಿ ನಗು ಬಂತು, ಓ ಆಗಲೇ ಆರಾಯಿತು ಪಮ್ಮಿ ಬಂದುಬಿಡುತ್ತಾನೆ ಬಾಗಿಲಿಗೆ , ವಾಕಿಂಗಿಗೆ ಹೋಗುವುದು ತಪ್ಪಿಸಲಾಗದು, ನಡೆಯುವುದಕ್ಕಿಂತಲೂ ತಮಗೆಂದೇ ಮೀಸಲಾದ ಬೆಂಚಿನಲ್ಲಿ ಕುಳಿತು ವಿದ್ಯಮಾನಗಳನ್ನೆಲ್ಲ ಚರ್ಚಿಸುವುದು ತಮಗೆ ಇಷ್ಟದ ಕೆಲಸ ಅಲ್ವೇ, ಪಮ್ಮಿಯಂತೂ ಅವನ ಬದುಕಿನಲ್ಲಿ ಬಂದು ಹೋದ ಹೆಣ್ಣುಗಳ ಬಗ್ಗೆ ಈಗಲೂ ಶಾಯರಿ ಕಟ್ಟುತ್ತಾನೆ , ನಾನು ಮೌನವಾಗಿ ಎಲ್ಲ ಕೇಳಿಸಿಕೊಂಡು ನಡೆಯುತ್ತೇನೆ
ಬಾಗಿಲಿನ ಬಳಿ ಶಬ್ದವಾಯಿತು ಪಮ್ಮಿ ನಿಂತಿದ್ದಾನೆ . ನಾನಿನ್ನು ಸಾಕ್ಸ್ ಹಾಕಿಲ್ಲ , ಕಷ್ಟ ಪಟ್ಟು ಕಾಲಿಗೆ ಬಗ್ಗಲು  ಹೋದರೆ  ಸಂಧಿವಾತ ಹಿಡಿದುಕೊಂಡ ಕಾಲು ಜಪ್ಪಯ್ಯ ಅಂದರು ಹನಿ ಹಂದಲಿಲ್ಲ , ಪಮ್ಮಿ ತನ್ನ ಕೋಲನ್ನು ಒರಗಿಸಿ ಅಚ್ಯುತಾ ಅಂತ ನನ್ನ ಮಗನನ್ನು ಕರೆದ , ಅಚ್ಯುತ ಆಗಲೇ ಎದ್ದು ಜಿಮ್ಮಿಗೆ ತಯಾರಾಗುತ್ತಿದ್ದಾನೆ ಥೇಟು ನನ್ನದೇ ರೂಪ ವರ್ಷದಲ್ಲಿ ಎರಡು ತಿಂಗಳು ಇಲ್ಲಿ, ಇನ್ನುಳಿದಂತೆಲ್ಲ ಅಮೇರಿಕಾದಲ್ಲಿ , ಊರಿಗೆ ಬಂದಾಗಲೂ ಜಿಮ್ಮು ತಪ್ಪಿಸುವವನಲ್ಲ ಆವಾ, ಎಷ್ಟಂದರೂ ನನ್ನ ಮಗನಲ್ಲವೇ, ನೆನೆದು ಹೆಮ್ಮೆಯಾಯ್ತು, ಅಚ್ಯುತ ಹೊರಗೆ ಬಂದವನೇ ನೆಲದ ಮೇಲೆ ಕೂತು ಸಾಕ್ಸ್ ಹಾಕಿದ "ಅಪ್ಪಾ ಇವತ್ತು ವಾಕಿಂಗ್ ಬೇಡ ಇತ್ತು , ತುಂಬಾ ಚಳಿ ಇದೆ , ಆರು ತಿಂಗಳಾಯ್ತು ಬೈಪಾಸ್ ಮಾಡಿಸಿ ನಿಂಗಿ ವಯಸ್ಸಿಗೆ ಇದೆಲ್ಲ ಬೇಕಾ" ಅಂದ. ಅವನಿಗೆ ಉತ್ತರ ಕೊಡದೆ ಬರಿ ನಕ್ಕುಬಿಟ್ಟೆ , " ಅಪ್ಪ, ಎಷ್ಟು ಚಂದ ನಿನ್ನ ಸ್ಮೈಲ್ ಯಾವಾಗ್ಲೂ ಹೀಗೆ ಇರು, ನಿಂಗಿಷ್ಟ ಬಂದಿದ್ದೆ ಮಾಡು " ಅಂದವನೇ ತಾನು ತಯಾರಾಗತೊಡಗಿದ , ನಾನು ನಿಧಾನಕ್ಕೆ ಎದ್ದು ಪಮ್ಮಿಯೊಡನೆ ರಸ್ತೆಗಿಳಿದೆ
ಈ ರಸ್ತೆಯ ಪ್ರತಿ ಅಂಗುಲಂಗುಲವು ಗೊತ್ತು ನನಗೆ , ಎಲ್ಲಿ ಗುಂಡಿ ಇದೆ, ಯಾರ ಮನೆಯಲ್ಲಿ ನಾಯಿ ಇದೆ, ಯಾರು ಯಾರ ಮನೆಯ ಹೂ ಕೀಳುತ್ತಾರೆ ಎಲ್ಲ ಗೊತ್ತು, ವಾಕಿಂಗಿನಲ್ಲಿ ನನ್ನದೇ ಎಪ್ಪತ್ತೈದು ಎಂಭತ್ತರ ಗುಂಪಿದೆ, ನಾವೆಲ್ಲಾ ಇದೆ ರಸ್ತೆಯಲ್ಲೇ ಆದಿ ಓದಿ ಕೀಟಲೆ ಮಾಡಿಕೊಂಡು ಬೆಳೆದವರು, ಎಲ್ಲೆಲ್ಲೋ ಕೆಲಸ ಮಾಡಿಯೂ ಕೊನೆಯ ಸಂಧ್ಯೆಗೆ ಎಲ್ಲ ಅವರವರ ಮನೆಗಳಲ್ಲಿ ನೆಲೆಸಿದವರು. ನಮಗೆ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಬಹಳ ವಿಷಯಗಳು ಗೊತ್ತು, ಮುಚ್ಚಿಡುವಂಥ ವಿಷಯಗಳೇ ಇರಲಿಲ್ಲ, ನಿಧಾನವಾಗಿ ಪಾರ್ಕ್ ಪ್ರವೇಶಿದೆವು, ನಮಗಾಗೇ ಅಂತ ಕಾದಿರಿಸಿದ್ದ ಆ ಬೆಂಚಿನಲ್ಲಿ ಇವತ್ತು ಅವಳೊಬ್ಬಳೆ ಕುಳಿತಿದ್ದಳು ಬೇರೆ ಎಲ್ಲ ವಾಕಿಂಗ್ ಮಾಡುತ್ತಿರಬೇಕು , ನಾನು ಹೋಗಿ ಕುಳಿತೆ, ಪಮ್ಮಿಯೂ ಗುಡ್ ಮಾರ್ನಿಂಗ್ ಅಂದ , ಅವಳು ಅಚ್ಚ ಕನ್ನಡದಲ್ಲಿ ಶುಭೋದಯ ಅಂದು ಮುಗುಳ್ನಕ್ಕಳು, ಒಂದು ಮುವ್ವತ್ತು ಮುವ್ವತ್ತೈದರ ಹೆಣ್ಣು, ಸದಾ ನಮ್ಮಂಥ ಚಿರಯುವಕರ ಸಂಗದಲ್ಲಿ ಸತ್ಸಂಗ ಮಾಡುತ್ತಾ ಕಾಲ ಕಳೆವಳು, ತೀರಾ ಮಾಡರ್ನ್ ಕಾಣುವ ಆದರೆ ಅದಕ್ಕೆ ತದ್ವಿರುದ್ಧವಾಗಿ ಅಧ್ಯಾತ್ಮ ಸಾಹಿತ್ಯದಲ್ಲಿ ನಿರರ್ಗಳ ಮಾತಾಡುವ, ಅತಿಯಾಗಿ ಎಲ್ಲರನ್ನು ಪ್ರೀತಿಸುವ, ಒಬ್ಬರು ಬರದಿದ್ದರೂ ವಿಚಾರಿಸುವ, ಈಕೆ ಪರಿಚಯ ಆದದ್ದು ನಮ್ಮಲ್ಲೆಲ್ಲ ಖುಷಿ ತಂದಿದೆ. ಬೇರೆಯವರೆಲ್ಲ ಆಕೆಯನ್ನು ಏನೋ ತಪ್ಪು ಮಾಡಿದವಳೆಂಬಂತೆ ನಮ್ಮೊಡನೆ ಇರುವಾಗ ನೋಡುತ್ತಿದ್ದರೆ, ಈಕೆ ಮಾತ್ರ ಎಲ್ಲರೊಡನೆ ಕೈ ಹಿಡಿದು  ಪರಿಯಿಂದ ಒಂದಪ್ಪುಗೆ ಕೊಟ್ಟು ನಂತರ ಮಾತಿಗಿಳಿಯುತ್ತಿದ್ದಳು, ಅವ್ಳಿದ್ದುದರಿಂದಲೇ ನನ್ನ ವಾಕಿಂಗು ಸಾಂಗ ಅಂತ ಅನ್ನಿಸೋಕೆ ಶುರುವಾದದ್ದು.
ಇವತ್ತು ಮಾತಿನೊಡನೆ ಗರುಡ ಪುರಾಣ ಬಂತು ಆಕೆ ಅದೆಲ್ಲ ಕಲ್ಪನೆಗಳು ಇತಿಹಾಸದಲ್ಲಿ ಸೃಷ್ಟಿಯಾದ ಸ್ವಾರಸ್ಯ ವಿವರಿಸುತ್ತಾ, ಯಾವುದೋ ಹಂತದಲ್ಲಿ ಕೈ ಹಿಡಿದಳು, ಆ ಆತ್ಮೀಯತೆ ಅದು ನನಗೋಸ್ಕರ ಮಾತ್ರ ಎನ್ನುವ ಅವಳ ವರ್ತನೆ ನನಗೆ ಬಹುಶಃ ಖುಷಿ ಕೊಡುತ್ತಿತ್ತು, ಗಂಟೆಗಳು ಸರಿದದ್ದೇ ಗೊತ್ತಾಗಲಿಲ್ಲ, ವಾಪಸ್ಸು ಮನೆಗೆ ಬಂಡ ಮೇಲು ದಿನಾಲು ಆಕೆ ಕಾಡುತ್ತಿದ್ದಳು, ಚಿಕ್ಕ ಮಗಳ  ವಯಸ್ಸಿನ ಹುಡುಗಿ, ಬಹುಶಃ ನನಗೆ ಹುಟ್ಟಿರುವುದು ಅಕ್ಕರಾಸ್ಥೆಯ ಅನ್ನುವುದರ ಬಗ್ಗೆ ನಾನು ತುಂಬಾ ಸಾರಿ ಯೋಚಿಸಿದ್ದಿದೆ ಅದಲ್ಲ, ಯಾವುದೋ ನೆಮ್ಮದಿ ಅವಳ ಮಾತು ಕತೆಗಳಲ್ಲಿ , ಅವಳ ಹಾವ ಭಾವ ಎಲ್ಲ ನನಗಾಗೇ ಅನ್ನಿಸಲು ಶುರುವಾಗಿತ್ತು, ಬಹುಶಃ ಎಂಬತ್ತರ ಆಸುಪಾಸಿಗೆ ಈ ಮೋಹ ಹುಟ್ಟುವುದಿಲ್ಲ, ಅಷ್ಟಕ್ಕೂ ಅದು ಮೋಹವಾ ಅನ್ನುವ ಪ್ರಶ್ನೆಗೆ ಅಲ್ಲ ಅನ್ನುವುದೇ ಉತ್ತರವಾಗಿತ್ತು. ಇತ್ತೀಚಿಗೆ ಆಕೆಯ ಯೋಚನೆ ಇಂದಲೇ ಶುರುವಾಗಿ ಅವಳಿಂದಲೇ ಮುಗಿಯುತ್ತಿತ್ತು, ಒಂದು ದಿನ ಆಕೆ ಬರದಿದ್ದರೆ ಸಾಕು ನಾನು ನರಳುತ್ತಿದ್ದೆ.
ನಿತ್ಯದಂತೆ ಇವತ್ತು ತರಕಾರಿ ತಂದೆ, ಸಂಜೆಗೊಂದು  ಸೊಗಸಾದ ಹುಳಿ ಮಾಡಿ ವಿಶ್ರಮಿಸಿದೆ , ನಾಳೆ ಆಕೆಯೊಂದಿಗೆ ಮಾತಾಡಬೇಕು ಅನ್ನಿಸಿತು. ಹೆಂಡತಿಯ ಚಿತ್ರ ವನ್ನೊಮ್ಮೆ ನೋಡಿದೆ ಪ್ರಶಾಂತವಾಗಿ ದೀಪದಂತೆ ನಗುತ್ತಿದ್ದಳು ಅವಳು
ಏನೋ ಒಂಥರಾ ಸಮಾಧಾನ ಅವಳ ಹತ್ತಿರ ಎಲ್ಲ ಹೇಳಿದರೆ, ದೀಪದ ಬೆಳಕಲ್ಲೇ ಹೂ ಅಂದಂತಾಯಿತು. ಒಂದೇಆರದು ಪೇಜು ಓಡುವಷ್ಟರಲ್ಲಿ ಗಾಢವಾದ ನಿದ್ದೆ.
ಮತ್ತೆ ಎಚ್ಚರಾದಾಗ ಯಾವತ್ತಿನಂತೆ ಅಲಾರಾಂ ಸಡ್ಡು ಕೇಳಿಸಲಿಲ್ಲ, ನಾನು ಬಹುಶಃ ಸರಿಯಾದ ಸಮಯಕ್ಕಿಂತ ಮುಂಚೆ ಎದ್ದಿದ್ದೇನೆ ಅನ್ನಿಸಿತು, ಸುತ್ತ ನೋಡಿದೆ ಮಗನ ಕೊಣೆ ಯಲ್ಲಿ ಸಣ್ಣ ದೀಪವಿತ್ತು, ಸದ್ದು  ಮಾಡದಂತೆ ಎದ್ದು ಹಾಲು ಕಾಯಿಸಿದೆ,ಹಲ್ಲು ತಿಕ್ಕಿ ಪೈಜಾಮ ಬದಲಿಸಿ ಸಾಕ್ಸ್ ಹಾಕಲಾರಂಭಿಸಿದೆ...ಆಶ್ಚರ್ಯ , ಸಲೀಸಾಗಿ ಒಂದೇ ನಿಮಿಷದಲ್ಲಿ ಹಾಕಿಬಿಟ್ಟೆ, ಎದ್ದುನಿಂತೆ ಇದ್ದಕ್ಕಿದ್ದಂತೆ ಯೌವನ ಉಕ್ಕಿಬಂದ  ಹಗುರ ಭಾವ , ಬೆನ್ನಿನ ಕೊಲೆಲ್ಲ ಲ್ಲ ನೆಟ್ಟಗಾದಂತೆನ್ನಿಸಿತು
ಮೆಟ್ಟಿಲಿಳಿವುದು ಕಷ್ಟವಾಗಲಿಲ್ಲ, ಇವತ್ತು ಅವಳ ಹತ್ತಿರ ಮಾತಾಡಬೇಕಾದ ವಿಷಯ ನೆನೆದು ಖುಷಿಯಾಗಿದ್ದೆ, ಇವತ್ತು ಪಮ್ಮಿ ಬದಲಿಗೆ ಬೇರೆ ಯಾರೋ ಗೇಟಿನ ಬಳಿ ಇರುವಂತೆನಿಸಿತು. ಅರೆ! ಶ್ರೀಕಂಠ ಅಲ್ವೇ, ಆಶ್ಚರ್ಯವಾದರೂ ಮಾತಾಡಿಸಿದೆ ಏನೋ ಅಂತೂ ಇವತ್ತಿಂದ ನೀನು ನಂಜೊತೆ ವಾಕಿಂಗ್ ಮಾಡೋ ಹಾಗಾಯ್ತು ಅಂತ ನಕ್ಕ, ನನ್ನ ಚಡ್ಡಿ ದೋಸ್ತ ಅವ , ಒಟ್ಟಿಗೆ ನಡೆದೆವು ಅವನಿಗೆ ಇವಳ ವಿಷಯವೆಲ್ಲ ಹೇಳಿದೆ, ಅದಕ್ಕವ ವಿಚಿತ್ರವಾಗಿ ನಕ್ಕು ನನ್ನ ಕಡೆ ನೋಡಿದ, " ನೀನೊಂದು, ಅವಳಿಗೆ ಇನ್ನು  ಮೋಹ, ಸುಮ್ಮನೆ ಬಾ, ಕೂರೋಣ , ಅಂತ ನನ್ನ ಕರೆದುಕೊಂಡು ಹೋದ, ನನಗೆ ಏನೋ ತಾಳ ತಪ್ಪಿದಂತೆನಿಸಿತು, ಅವಳು  ಅಲ್ಲೇ ಕೂತಿದ್ದಳು  ಆ ಕಣ್ಣಿನಲ್ಲಿ ನಿರೀಕ್ಷೆ ಇತ್ತು , ಅದು ನನ್ನದೇ ಆದರೂ ಅವಳು ಎದುರು ಕೂಟ ನನ್ನ ನೋಡುತ್ತಿಲ್ಲ ಅಂತ ಗೊತ್ತಾಯಿತು , ಸಾಜು ಮೋಹನ ಇವರೆಲ್ಲರೂ ಕಂಡರೂ, ಅದೇ ಪಾರ್ಕಿನಲ್ಲಿ ಸಲೀಸಾಗಿ ಆನಂದವಾಗಿ ವಾಕ್ ಮಾಡುತ್ತಿದ್ದರು, ಅವರೆಲ್ಲರ ಮೈಯಲ್ಲೂ ನನ್ನಂಥದ್ದೇ ಕಸುವಿತ್ತು, ಹೊಸಾ ಉತ್ಸಾಹವಿತ್ತು. ಇದ್ದಕ್ಕಿದ್ದಂತೆ ನೆನಪಾಗಿದ್ದು, ಹೌದು, ಇವರೆಲ್ಲರ ದೇಹಕ್ಕೆ ಬೆಂಕಿ ಇಟ್ಟದ್ದನ್ನ ನಾನೇ ನೋಡಿದ್ದೇ..ಹಾಗಾದರೆ ನಾನು ನಾನು ಬದುಕಿಲ್ಲವಾ ..ಅಂತನ್ನಿಸಿತು! ಅಸಾವಿನ ಯಾವ ಕುರುಹು ಕಾಣ ಲಿಲ್ಲ ನನಗೆ...ನಾನು ಯಾವತ್ತಿನಂತೆಯೇ ಇದ್ದೇನೆ , ಮತ್ಯಾಕೆ ಈ ಗೊಂದಲ ಅನ್ನಿಸಿತು.ಅವಳ ಕಡೆ ನೋಡಿದೆ  ಆ ಕಣ್ಣುಗಳಲ್ಲಿ ಶೂನ್ಯವೊಂದು ಕಾಣುತ್ತಿತ್ತು ...