೧
ಕಾಫಿಗಿಟ್ಟ ಹಾಲು ಉಕ್ಕಿದೆ...ನೊರೆ ನೊರೆಯಾಗಿ..ಗಂಡನ ಬೈಗುಳಕ್ಕೆ ತಡೆಯೆ ಇಲ್ಲ..ಆದರೆ ಇವಳಿಗೋ ತಲೆಯ ತುಂಬಾ ಅದೆ ಗುಂಗು...ಆಕೆಯ ನೋಟದ ತಾತ್ಸಾರ..ಕೊಂಕು ಮಾತುಗಳು...ನಂಬಬಹುದೇ?,"ನಿನ್ನೆ ಮಧ್ಯಾಹ್ನ ಅದ್ಯಾರೋ ಹೆಂಗಸು ನಿಮ್ಮನೆಗೆ ಬಂದಿದ್ರು..ನಿಮ್ಮ ತಂಗೀನಾ?"ಶಾಂತ ನದಿಯಂತಿದ್ದ ಬಾಳಿಗ್ಯಾವ ಕೊಳಕು ತೊರೆ ಸೇರಿತು?ಆಕೆ ಹೇಳಿದ್ದೆಲ್ಲ ನಿಜವೇ?ತನ್ನವ ಎಂದೂ ಆ ಸ್ವಭಾವದವನಲ್ಲ..ತಾನ್ಯಾಕೆ ನಂಬಲಿ? ಮನಸ್ಸು ಸಂತೈಸಿತು...ಬಾಯ್ತುಂಬಾ ಬೈದು ಸುಸ್ತಾಗಿದ್ದ ಗಂಡ ಈಗ ಈಕೆಯ ಬಳಿ ಬಂದ.."ಕಾಫೀ ಕೊಡಲ್ವಾ?"
"ತಗೊಳ್ಳಿ"
"ಯಾಕೇ?,ಬೈದಿದ್ದಕ್ಕೆ ಬೇಜಾರಾಯ್ತಾ?ಮತ್ತೆ ಯಾವಗ್ಲು ಹಾಲು ಕಾಯೋಕೆ ಇಟ್ಟು ನಿನ್ ಪ್ರಪಂಚದಲ್ಲಿ ಮುಳುಗಿ ಹೋಗಿರ್ತಿ,ನಾನ್ ಬೈದ್ರು ಪ್ರಯೋಜನ ಇಲ್ಲ"
ಇವನೋ ಎಂದಿನಂತೆ ಮಾತಾಡುತ್ತಲೇ ಇದ್ದಾನೆ..
"ನಿಂಗೊಂದು ವಿಶ್ಯ ಕೇಳ್ಬೇಕಿತ್ತು"
ಕಿವಿ ಚುರುಕಾಯ್ತು..ಏನಿರಬಹುದು? ಹೊರಗೆ ಹೋಗುವ ಹಂಬಲವೇ?ತನ್ನ ಜೊತೆಗಂತು ಇರಲಿಕ್ಕಿಲ್ಲ..
"ಆ ಪಕ್ಕದ್ಮನೆ ಹೆಂಗಸು ಇದ್ದಾಳಲ್ಲಾ,"
"ಹೂ ಇದ್ದಾಳೆ..ಇಲ್ಲದೇ ಏನು? "
’ಅದೇ ಕಣೆ,ಅವಳು ಇವತ್ತು ಹಾಲು ತರೋಕೆ ಅಂತ ಬೆಳಗ್ಗೆ ಹೋಗ್ತಾ ಇದ್ನಲ್ಲ,ಆಗ"
"ಹೂ ಹೇಳಿ ಏನಾಯ್ತು? ಅದಕ್ಕೆ ಇಷ್ಟುದ್ದ ಪೀಠಿಕೆ ಬೇಕಾ?"
"ಏನಿಲ್ಲ..ನಿನ್ನೆ ನೀನು ಮಧ್ಯಾಹ್ನ ಆಫೀಸಿನಿಂದ ಅದ್ಯಾರೋ ಜೊತೆ ಡ್ರಾಪ್ ತಗೊಂಡೆ ಅಂತೆ..ಆ ಮನುಷ್ಯ ಮನೆಗೂ ಬಂದಿದ್ದ ಅಂತೆ..ನನ್ನ ಹತ್ತಿರ ಅವರ್ಯಾರು ನಿನ್ನೆ ಬಂದಿದ್ದು ನಿಮ್ಮ ಸಂಬಂಧಿಕರಾ? ಅಂತ ಕೇಳಿದ್ಲುಕಣೇ"
"ನೀವು ನನ್ನ ಸಂಭಂಧಿಕ ಅಂತ ಹೇಳ್ಬೇಕಾಗಿತ್ತು"
"ಅಂದ್ರೆ,ಆಕೆ ಹೇಳಿದ್ದು ನಿಜಾ ಅಂತಾಯ್ತು"
"ಮತ್ತಿನೇನ್ರಿ, ನಿನ್ನೆ ನಾನು ಬಂದಿದ್ದೇ ೬ ಗಂಟೆಗೆ,ನಿಮ್ಗೆ ಯಾರೊ ಹೇಳಿದ್ದು ನಿಜಾ ಅನಿಸುತ್ತೆ..ನನ್ನ ಮೇಲೆ ಮಾತ್ರ ನಂಬ್ಕೆ ಇಲ್ಲ ನೋಡಿ"
ಇವಳಿಗೆ ಆಶ್ಚರ್ಯ..
ಮರುದಿನ...ಅವಳು ಇವಳು ಎದುರಾದರು...ಇವಳ ಮುಖದಲ್ಲಿ ಮುಗುಳ್ನಗೆ..
"ಎನ್ರೀ ಭಾಳ ಖುಷೀಲಿದ್ದೀರಿ??ಮತ್ತೆ ನಿನ್ನೆ ಅವರ್ಯಾರು ಅಂತ ಕೇಳಿದ್ರಾ?"
"ಕೇಳಿದೆ.. ಅದು ನೀವೇ ಅಂತೆ"
"ಹಾ!! ಏನಂದ್ರಿ?/"
ಅಷ್ಟರಲ್ಲಿ ಆಕೆಯ ಗಂಡ ಕೂಗುತ್ತ ಹೊರಬಂದ
"ಹಾಲು ಉಕ್ಕಿ ಹೋಯ್ತು..ಅದೇನು ಮಾಡ್ತಾ ಇದ್ದೀಯೇ??"
೨
ಸುಂದರಿ ಚಿಟ್ಟೆ ತನ್ನ ಎಲೆ ಕೋಣೆಯ ಕಿಟಕಿ ಇಂದ ತಲೆ ಹೊರಗೆ ಹಾಕ್ತು..ಅಹಾ..ನೀಲಿ ನೀಲಿ ಆಕಾಶ..ಇವತ್ತು ಮಳೆ ಬರೋದಿಲ್ಲ..
ಮನಸಲ್ಲೇ ಲೆಕ್ಕ ಹಾಕಿ ಪುರ್ರ್ ಅಂತ ಹೊರಗೆ ಹಾರಿತು..
ಹೂ ಹುಡುಗಿ ಮನೆಯ ದಾರೀಲಿ ಘಮ ಘಮ..
ಒಹೋ ಮಲ್ಲಿಗೆ ಅರಳಿದ್ದಾಳೆ..ಹಬ್ಬದೂಟ!!
ಹೊಟ್ಟೆಯಲ್ಲೇನೊ ಒದ್ದಂತಾಯ್ತು..
ಪುಳಕ್ಕನೆ ಕಂಡ ಎಲೆಯಡಿ ಸೇರಿತು ಸುಂದರಿ ಚಿಟ್ಟೆ..
ಬಸವನ ಹುಳ ಹರಿದಾಡ್ತಿತ್ತು..ಚಿಟ್ಟೆಗೆ ಹೇಳ್ತು"ನಾನು ಬರೋ ದಾರಿಲಿ ಮೊಟ್ಟೆ ಇಡ್ಬೆಡ್ವೆ"
ಗೆಳೆಯನನ್ನ ಕಂಡಂತಾಯ್ತು..ನಾಚಿಕೆ ಉಕ್ಕಿತು..ಮೊಟ್ಟೆ ಇತ್ತು ಮರೆಯಾಯ್ತು ಸುಂದರಿ..
ವಾರ ಕಳೆದಿತ್ತು..ಎರಡು ಸಲ ಮಳೆಯಾಗಿತ್ತೋ? ಗೊತ್ತಿಲ್ಲ..
ಸುಂದರಿಗೆ ತಾನಿಟ್ಟ ಮೊಟ್ಟೆಗಳ ನೋಡುವಾಸೆಯಾಯ್ತು..
ಎಲೆಯಡಿಯಲ್ಲಿ ಇಣುಕಿತು..ಕಾಣಿಸುತ್ತಲೇ ಇಲ್ಲ..ಭಯವಾಯ್ತು...
ಯಾವ ಹಸಿದ ಕೀಟಕ್ಕೆ ಅಹಾರವಾಯಿತೋ ನಮ್ಮ ಪ್ರೇಮ ಸಂಕೇತ?
ಕುಣಿದು ಕುಣಿದು ನೋಡಿತು..ಬೇಸರಾಗಿ ಹಾರಿತು..
ಅಲ್ಲೇ ಮರೆಯಲ್ಲಿ ವನವಾಸಕ್ಕೆ ತೆರಳಿದ್ದ ಲಾರ್ವಾ..ಅಮ್ಮನ ಕುಣಿತ ಕಂಡು ನಕ್ಕಿತು!!
"ನಾನು ಬರುವೆ..ನಾವಿಬ್ಬರೂ ಮತ್ತೆ ಸ್ವಚ್ಚಂದ ಬಾನು..ರಿಂಗಣದಾಟಕ್ಕೆ ನನ್ನ ಮುದ್ದು ಅಮ್ಮನ ಜೊತೆ ನಾನು!!
ಬೆಚ್ಚಗೆ ಕನಸುತ್ತಾ ಬರಲಿರುವ ಸುಂದರ ರೆಕ್ಕೆಗಳಿಗೆ ಬಣ್ಣ ಹಾಕತೊಡಗಿತ್ತು!!
೩
ಕೆಳಗೆ ಬಿದ್ದಿದ್ದೇನೆ ನೋಡಬಾರದೆ? ಈ ಮಾನವರಷ್ಟು ಸ್ವಾರ್ಥಿಗಳನ್ನ ನಾ ನೋಡಲಿಲ್ಲ!!ಆಕೆಯ ತಲೆ ಏರಿದ್ದೇ ಸ್ವರ್ಗದಷ್ಟು ಕುಶಿಯಾಗಿತ್ತು..ಸರಿಯಾಗಿ ಬಂಧಿಸಲಿಲ್ಲ,..
ಇಲ್ಲಿ ಎಲ್ಲೋ ಅವಳಿಂದ ದೂರಾದೆನಲ್ಲ..!!
ಗುಲಾಬಿಗೆ ಆಕೆಯ ಮುದ್ದು ಮೊಗದ್ದೇ ಧ್ಯಾನ..
ನಾ ಸುಂದರಿಯೋ ಆಕೆಯೋ ಎಂದು ಕನ್ನಡಿಯಲ್ಲಿ ಆಕೆಯ ಹೆರಳಿಂದ ಇಣುಕಿಣುಕಿ ನೋಡಿದ್ದೆ ಬಂತು
ಈಗ ಅವಳ ಪಾದದ ಗುರುತಿರದೆ ಈ ಮಾನವ ಕಾನನದಲ್ಲಿ ಕಳೆದು ಹೋದೆನೇ?
ಅಬ್ಬಾ??ಅದೇನು ಸದ್ದು..ತಲೆ ಎತ್ತಲು ಪ್ರಯತ್ನಿಸಿತು...ಯವೊದೋ ಆನೆಯಂತ ಪಾದ..ಇನ್ನು ತನ್ನ ಸಾವು ಖಚಿತ..
ಉಸಿರು ಬಿಗಿ ಹಿಡಿಯಿತು..ಹತ್ತಿರ ಬರುತ್ತಿರುವ ಹೆಜ್ಜೆಗಳ ಸದ್ದಿಗೆ ದಳಗಳು ಮುದುಡಿತು..ಓಓ ಇನ್ನೇನು..ಸತ್ತೇ ಬಿಟ್ಟೆ..ಪಾಪಿಗಳಾ ಯಾರಿಗೂ ನನ್ನ ಸೌಂದರ್ಯ ಬೇಡಾಯಿತೇ?? ಎದೆಯಲ್ಲಿಟ್ಟಿದ್ದ ಮುಂಜಾವಿನ ಇಬ್ಬನಿ ಕಣ್ಣೀರಾಗಿ ಸುರಿಯಿತು...
ಕಣ್ಣು ಬಿಟ್ಟಾಗ"ಅರೆ..ತನಗೇನಾಗಿಲ್ಲ"
ದನಿಯೊಂದು ಕೇಳಿತು.."ಶಮ್ಮಿ,ಅದ್ಯಾಕೇ ಬಿದ್ದ ಹೂವು ಎತ್ತಿ ಮುಡಿದೆ" ಹೆಣ್ಣು ಕಂಠ ನುಡಿಯಿತು.."ಅದು ಹೂವು..ಅದರಲ್ಲೂ ಗುಲಾಬಿ..ನೋಡು ಹೇಗೆ ಅಳ್ತಿದೆ ಅಂತ...ಅದಕ್ಕೇ!!..
ಹೆಮ್ಮೆ ಇಂದ ಗುಲಾಬಿ ತಲೆ ಎತ್ತಿತು..ಮತ್ತೆ ಕನ್ನಡಿಯಲ್ಲಿ ತನ್ನ ಕಂಡು ಹರುಶದಲ್ಲಿ ನಾಚಿತು!!