Thursday, July 13, 2017

ಅವನಿಗೆ


ಅವನಿಗೆ ,
ಕೇಳು
ತಣ್ಣನೆಯ ನೀರು ತಲೆಯ ಮೇಲೆ ಬೀಳುತ್ತಿತ್ತು, ಯಾವುದೋ ಜನುಮದ ಪಾಪ ತೊಳೆಯುವಂತೆ ಕಣ್ಣಿಂದ ಜಾರಿದ ಹನಿಯೊಂದು ನೀರ ಜತೆ ಸೇರಿ ಹರಿದು ಹೋಯಿತು ಅದೆಷ್ಟು ಕಣ್ಣ ಹನಿಗಳು ಸೇರಿ ಸಾಗರ ಉಪ್ಪಾಯಿತು? ನಾನು ಕಣ್ಣೊರಸಿ ಬಿಕ್ಕು ತಡೆ ಹಿಡಿದೆ. ಕಾರಣವೇ ಇಲ್ಲದೆ ಬರುವ ಕಣ್ಣೀರು ಒಂದೋ ಸುಖದ್ದು ಕೃತಜ್ಞತೆಯದ್ದು ಮತ್ತೊಂದು ಬಹುಶಃ , ಗತ ಕಾಲದ ನೆನಪುಗಳದ್ದು ಕಹಿಯಾದ್ದು. ನನ್ನ ಕಣ್ಣಿನ ಹನಿ ಅವೆರಡಕ್ಕೂ ಸೇರಿದ್ದಾಗಿರಲಿಲ್ಲ, ನೀರು ಹಿಡಿದಿಟ್ಟ ಮೋಡ ನಾನು , ಸಣ್ಣದ್ದನ್ನು ಸಹಿಸದ ಸೂಕ್ಷ್ಮ ಮನಸ್ಥಿತಿ ಹಾಗಿದ್ದರೆ ಒಳ್ಳೆಯದಿತ್ತೇನೋ , ಆದರೆ ಎಲ್ಲ ಬದಲಾಯಿತು

ಪೂಜೆ  ಮುಗಿಸಿ ಕೂತಾಗ ಏನೋ ಮರೆತಂತನಿಸಿ  ಕ್ಯಾಲೆಂಡರ್ ನೋಡಿದೆ, ಜುಲೈ ಹದಿಮೂರು ಅಂತ ತೋರಿಸುತ್ತಿತ್ತು ತಟ್ಟನೆ ನೆನಪಾಯಿತು ಇವತ್ತು ಅವನ ಜನ್ಮದಿನ , ಒಂದು ಸಣ್ಣ ಸೆಳಕು ಎದೆಯಲ್ಲಿ, ವಾಟ್ಸಾಪಿನಲ್ಲಿ ನೋಡಿದೆ ನನ್ನ ಶುಭೋದಯಕ್ಕೆ ನಿತ್ಯ ಬರುತ್ತಿದ್ದ ಉತ್ತರವಿಲ್ಲ, ಅವನ ಸಣ್ಣ ಮುನಿಸಿಗೆ ಕಾರಣ ನನಗೆ ಗೊತ್ತಿಲ್ಲದ್ದೇನು ಅಲ್ಲ, ಆದರೆ ನಾನು ಸಂಸಾರದ ನೂರು ಬಳ್ಳಿಗಳಲ್ಲಿ ಬಂಧಿತಳು , ಸೆರಗಲ್ಲಿ ಕೆಂಡದಂತ ಬದುಕನ್ನು ಕಟ್ಟಿಕೊಂಡು ನಿತ್ಯ ಒದ್ದಾಡುತ್ತಿರುವವಳು ಯಾವತ್ತೋ ಅದನ್ನು ಕಿತ್ತು ಓಡಿಹೋಗುತ್ತೇನೆ ಎನ್ನುವ ಹುಚ್ಚು ಭರವಸೆಯಲ್ಲಿ ಪ್ರಜ್ಞಾಪೂರ್ವಕವಾಗಿ ಮೋಹವನ್ನು ಮಮತೆಯನ್ನು ಬಟ್ಟೆಯಾಗಿ ಸುತ್ತಿಕೊಂಡವಳು , ಮನಸ್ಸೇನೋ ಸದಾ ಸಂಚಾರಿ ಆದರೆ ನಿತ್ಯ ಕೆಲಸಕ್ಕೆ ಅದನ್ನ ಕಟ್ಟಿ ಹಾಕಲೇ ಬೇಕಲ್ಲ, ಬೇಕೆಂದಾಗ ಬೇಕೆನಿಸಿದವರನ್ನ ನೋಡುವ ಅವಕಾಶ ಅದೆಷ್ಟು ಜನಕ್ಕೆ ಸಿಕ್ಕೀತು ನಾನಂತು ಹುಟ್ಟಾ ಪಾಪಿ ಕಾಲಿಟ್ಟ ಕಡೆ ಮುಳ್ಳು ಮನಸ್ಸಿನ ಹೃದಯಗಳು ಹೂಗಳ ಮುಖವಾಡ ಹಾಕಿ ಚುಚ್ಚುವಾಗಲು ಸಹಿಸಿ ನಾಳೆ ಎನ್ನುವ ಆಶಾವಾದಕ್ಕೆ ಜೋತು  ಬಿದ್ದವಳು ಆದರೆ ಗಂಡು ಎನ್ನುವ ಪ್ರಭೇದದ ಬದುಕು ಈ ಭೂಮಿಯಲ್ಲಿ ಬಹಳ ಸುಲಭವಿದೆ, ಇಷ್ಟೆಲ್ಲಾ ಕಷ್ಟ ಪಡಬೇಕಿಲ್ಲ ಅಲ್ಲವೇ, ಬಹುತೇಕ ಎಲ್ಲ ಸಾರವಜನಿಕ ಮತ್ತು ಖಾಸಗಿ ಜಾಗಗಳಲ್ಲಿ ಜಗತ್ತು ಹೇಗಿದ್ದರೂ ಗಂಡು ಎನ್ನುವ ಪಟ್ಟ ಕಟ್ಟಿ ವಿನಾಯತಿ ಕೊಟ್ಟುಬಿಡುತ್ತದೆ
ನಾನು ಯೋಚನೆಗಳಲ್ಲಿ ಕಳೆದು ಹೋಗಿದ್ದೆ, ನನ್ನ ಮನಸ್ಸು ಮಾತ್ರ ನೋಡ ಬಯಸುತ್ತಿತ್ತು,  ಅವನನ್ನ,ಆದರೆ ನಾನು ನೋಡ ಬಯಸಿದ್ದ ಅವನು ಅವನಾಗೆ ಉಳಿದಿರಲಿಲ್ಲ, ಸುಮ್ಮನೆ ಮುನಿಸು, ನಮ್ಮ ಬದಲಾದ ಬದುಕುಗಳ ಜತೆ ಜತೆಗೆ ಬದಲಾದ ಪ್ರಾಮುಖ್ಯತೆಗಳನ್ನ ಅರ್ಥೈಸದೆ ಹಳೆಯ ನೆನಪುಗಳಿಗೆ ಅದು ಕೊಡುವ ನೋವುಗಳಿಗೆ ನಾನೇ ಕಾರಣ ಅನ್ನುವ ಮಾತು ನನ್ನ ಚುಚ್ಚಿ ನೋಯಿಸುವುದು, ನನಗೆ ನಿಜವೆಂದರೆ ಈ ಜಗತ್ತಿನಲ್ಲಿ ಯಾರು ಬೇಕಿಲ್ಲ, ನೀನೊಬ್ಬ ಸಾಕು ಎನ್ನುವ ನನ್ನ ಮನಸ್ಥಿತಿಯನ್ನ ಮುಚ್ಚಿಡಲು ಪ್ರತಿಬಾರಿಯೂ ಪ್ರಯತ್ನಿಸಿ ಸೋತಿದ್ದೇನೆ,ಮತ್ತೆ ಮತ್ತೆ ಬದಲಾಗುವ ಪರಿಸ್ಥಿತಿಗಳ ನಡುವೆಯೂ ನೀನೊಬ್ಬ ಮಾತ್ರ ಬದಲಾಗದ ಅದೇ ಸ್ಥಾನದಲ್ಲಿ ಹೃದಯದಲ್ಲಿ ಕೂತಿದ್ದೀಯಾ ಎನ್ನಲು ಪ್ರಯತ್ನಿಸಿ ಸೋತಿದ್ದೇನೆ ಕೊನೆಗೆ ಇದೆಲ್ಲವೂ ಹನಂಬಿಕೆ ಇಲ್ಲದ ಅವನಲ್ಲಿ ಹೇಳುವದಕ್ಕಿಂತ ಮೌನಿಯಾಗಿರುವುದೇ ಲೇಸು ಅನ್ನಿಸಿ ಮೌನವು ಆಗಿಬಿಟ್ಟಿದ್ದೇನೆ,
ನದಿ ತನ್ನ ಪಾತ್ರಗಳನ್ನು ಸದಾ ಬದಲಿಸಬೇಕಾಗುತ್ತದೆ,ಭೂಮಿಯ ಏರಿಳತಗಳಿಗೆ ತಕ್ಕಂತೆ ಆದರೆ ಕೊನೆಯ ತನಕವೂ ದಡಗಳೆರಡೂ ನದಿಯೊಡನೆ ಮೌನವಾಗಿ ಪಯಣಿಸುತ್ತದೆ, ನೋವಿನಲ್ಲಿ ನಲಿವಿನಲ್ಲಿ ಅದೇ ತಬ್ಬುಗೆಯಲ್ಲಿ ಸಂತೈಸುತ್ತಾ ಸಾಗರನ ಒಡಲು  ಸೇರುವವರೆಗೂ , ಆ ಮಹಾಯಾತ್ರೆಯಲ್ಲಿ  ನದಿಗೆ ಈ ಸಾಂಗತ್ಯ ಕೊಡುವ ಆತ್ಮಬಲ ಬಣ್ಣಿಸಲಾಗದ್ದು, ನನ್ನ ಚಂದ್ರಮ ಹಾಗೆಯೆ , ಅವನು ಜತೆಗಿರಲಿ ಇಲ್ಲದಿರಲಿ, ಮುನಿಸಿರಲಿ ಸೊಗವಿರಲಿ ಅವನಿರದೆ ಈ ಬದುಕೆಂಬ ನದಿಗೆ ಯಾವದಡಗಳಿಲ್ಲ ನಾನೆಲ್ಲಿ ಹೋದರು ಅವನ ನೆನಪಿನ ಬಾಹುಗಳು ಕಾಳಜಿಯ ಕಣ್ಣುಗಳು ಸದಾ ನನ್ನ ಜತೆಗಿರುತ್ತವೆ, ಜೀವವೊಂದು ಮತ್ತೊಂದು ಜೀವಕ್ಕೆ ದೇಹದ ಅರಿವಿಲ್ಲದೆ ಅಂಟಿಕೊಂಡ ಹಾಗೇ
ಅ ವನೇ, ನಾನು ಉರಿಯುತ್ತಿರುತ್ತೇನೆ , ನಿನ್ನ ಅದೃಶ್ಯ ಸಹಾಯದೊಂದಿಗೆ, ನಿನ್ನ ಮುನಿಸು ಕರಗಲಿ, ಮತ್ತದೇ ಬೆಚ್ಚನೆಯ ಪುಳಕ ಇಬ್ಬರ ಹಾದಿಯಲ್ಲಿ ಚೆಲ್ಲಿಕೊಳ್ಳಲಿ, ನಿನ್ನ ಅರೋಗ್ಯ ನಗು ನನಗಾಗಿಯಾದರೂ  ಸದಾ ನಳನಳಿಸುತ್ತಿರಲಿ
ನಿತ್ಯವೂ ಹುಟ್ಟಿದ ಹಬ್ಬವಾಲಿ
ಇಂತಿ ನಿನ್ನವಳಾಗದ ನಿನ್ನವಳು ಇವಳು