Saturday, August 19, 2017

ಅವನಿಗೆ

ಆಧುನಿಕ ಮನುಷ್ಯರಲ್ಲಿ ಇತರರ ನೋವನ್ನು, ಅವಮಾನವನ್ನು ನೋಡಿ ಸಂತೋಷಪಡುವ ಪ್ರವೃತ್ತಿ ಹೆಚ್ಚುತ್ತಿದೆ_ಯೆಂದು ಆತಂಕ ವ್ಯಕ್ತಪಡಿಸಿದ್ದಾನೆ.

ಎಸ್ ದಿವಾಕರ್ ಅವರು ಅನುವಾದಿಸಿದ ಸಾಲುಗಳನ್ನು ಓದುತ್ತ ತಟ್ಟನೆ ನಿನ್ನ ನೆನಪಾಯ್ತು. ನೀನು ಕಳಿಸಿದ ಕೊನೆಯ ಮೆಸೇಜು, "ಸಾರಿ ದಟ್ ವಾಸ್ ವೆರಿ unfortunate , sincerely sorry if I hurt you" ಜೊತೆಗೆ ನನ್ನ ಅವಮಾನಿಸಿ ಹೊರ ಕಳುಹಿಸಿದ ನಂತರ ನನ್ನ ಕಿವಿಗಪ್ಪಳಿಸಿದ ನಿನ್ನ ನಗುವು ಮತ್ತದರ ಹಿಂದೆ ನೀನು ದೊಡ್ಡ ಸಾಧನೆ ಮಾಡಿದವನಂತೆ ಹೇಳಿದ ವಾಕ್ಯಗಳು , ನಾನಾಗೆ ನಿನ್ನ ಬಾಗಿಲಿಗೆ ಯಾವತ್ತೂ ಬಂದಿರಲಿಲ್ಲ  ನಾನು ಮನಸ್ಸು ಮಾಡಿದ್ದರೆ ಅವಷ್ಟು ಮೆಸೇಜುಗಳನ್ನ ನಿನ್ನ ಯೋಗ್ಯತೆಯನ್ನು ಇವತ್ತು ಬೀದಿಗೆಳೆಯಬಹುದು, ಅಥವಾ ಇನ್ನೇನೋ ಮಾಡಬಹುದು, ನೀನು ಮಾಡಿದ ಮೊಸವಿದೆಯಲ್ಲ ಅಂತೆಸಿಟಿ ಅನ್ನುವ ಅಂತೆಕಂತೆಗಳಲ್ಲಿ ನಿನ್ನ ನೀನು ಸುಳ್ಳಿಗೆ ಮಾರಿಕೊಂಡ ಅವನ್ಯಾರೋ ಎಳೆ ನಿಂಬೇಕಾಯಿಯ ಆಟಗಳನ್ನು ನಿನ್ನ ನಿಯತ್ತಿಗೆ ಬಲಿಕೊಟ್ಟ ನಿನ್ನ ಅಸಹಾಯಕತೆ, ರಕ್ತದಲ್ಲಿ ಅದ್ದಿದ ನಿನ್ನ ಆದರ್ಶಗಳು ಛೇ ಅಸಹ್ಯ ಹೇಸಿಗೆ  ಗಬ್ಬು ಹೊಲಸನ್ನ ಬಿಟ್ಟು ಇನ್ಯಾವುದೇ ಪದವಿದ್ದರೂ ಅದನ್ನ ನಾನು ಬಳಸ ಬಯಸುವೆ , ನನ್ನ ಅಸಹಾಯಕ ಸ್ಥಿತಿಯನ್ನು ಬಳಸಿಕೊಂಡು ಆಡಿದ ಆಟವಿದೆಯಲ್ಲ, ಎಂಥ ಕೀಳು ಭಿಕ್ಷುಕ ಕೂಡ ಆ ಕೆಲಸ ಮಾಡಲಾರ. ನಿನಗೆ ನಿನ್ನ ಲ್ಯಾಂಡ್ಮಾರ್ಕ್ ಕೋರ್ಸು ಸುಳ್ಳನ್ನು authentic ಆಗಿ ಹೇಳುವುದನ್ನು ಕಲಿಸಿಕೊಟ್ಟಿದೆಯಷ್ಟೇ,  ನಿನ್ನ ವೃತ್ತಿಯ ಮೂಲ ಸ್ವಭಾವವೇ ಹಾಗಿರುವಾಗ ಇಂತಹ ಘಟನೆಗಳು ಇನ್ನಷ್ಟು ಆ ವೃತ್ತಿಯ ಬಗ್ಯೆ ಅಸಹ್ಯವನ್ನೇ ಹುಟ್ಟು ಹಾಕುತ್ತದೆ ಅಷ್ಟೇ, ಇಂತಹ ದುರಾದೃಷ್ಟ ನಿನ್ನದು, ಯಾವತ್ತೂ ನಿನಗೆ ನನ್ನ ಬೆಲೆ ಅರಿವಾಗಲೇ ಇಲ್ಲ ಹಣದ ಮುಂದೆ, ನನ್ನ ಅದಮ್ಯ ನಂಬಿಕೆ ವಿಶ್ವಾಸಗಳನ್ನ ಮುರಿದ ನಿನ್ನ ಅದ್ಯಾವ ಹಾರೈಕೆ ಕಾಪಾಡುವುದು"ಅವಳ" ಆಶ್ರಯವು ಕಾಪಾಡಲಾರದು, ನೀನು ಅದೆಷ್ಟು ಸುಳ್ಳುಗಳ ಬಚ್ಚಿಟ್ಟಿದ್ದಿ, ಆಹಾ
ಪ್ರಖ್ಯಾತ ಮನೋವಿಶ್ಲೇಷಣಾ ತಜ್ಞ ಎರಿಕ್ ಪ್ರಾಮ್ ತನ್ನ *`ದಿ ಅನಾಟಮಿ ಆಫ್ ಹ್ಯೂಮನ್ ಡಿಸ್ಟ್ರಕ್ಟಿವ್‌ನೆಸ್'* ಎಂಬ ಗ್ರಂಥದಲ್ಲಿ ಬರೆದಿರುವಂತೆ _`ಇತರರನ್ನು ಹಂಗಿಸುವ, ಅವರ ಭಾವನೆಗಳ ಮೇಲೆ ಹಲ್ಲೆ ಮಾಡುವ ಮಾನಸಿಕ ಕ್ರೌರ್ಯವಿದೆಯಲ್ಲ, ಅದು ದೈಹಿಕ ಕ್ರೌರ್ಯಕ್ಕಿಂತ ಹೆಚ್ಚು ವ್ಯಾಪಕ. ಇಂಥ ಕ್ರೌರ್ಯ ಎಸಗುವವನು ಸ್ವತಃ ಸುರಕ್ಷಿತವಾಗಿರುತ್ತಾನೆ. ಯಾಕೆಂದರೆ ಅವನು ಉಪಯೋಗಿಸುವುದು ದೈಹಿಕ ಶಕ್ತಿಯನ್ನಲ್ಲ, `ಕೇವಲ' ಶಬ್ದಗಳನ್ನು ಮಾತ್ರ. ಆದರೆ ಮಾನಸಿಕ ಆಘಾತ ದೈಹಿಕ ಬಾಧೆಗಿಂತ ಹೆಚ್ಚು ಮಾರಕವಾಗಬಲ್ಲುದು... ಕೇವಲ ಒಂದು ಸೂಕ್ತ ಶಬ್ದದ ಮೂಲಕ ಅಥವಾ ಹಾವಭಾವದ ಮೂಲಕ ಇತರರಿಗೆ ಮುಜುಗರವುಂಟುಮಾಡುವ ಅಥವಾ ತೇಜೋವಧೆ ಮಾಡುವ `ಕಲಾವಿದ' ಯಾರಿಗೆ ಗೊತ್ತಿಲ್ಲ? ಈ ಬಗೆಯ ಸ್ಯಾಡಿಸಂ ಅನ್ನು ಇತರರ ಸಮ್ಮುಖದಲ್ಲಿ ಪ್ರಯೋಗಿಸಿದಾಗ ಅದು ಹೆಚ್ಚು ಪರಿಣಾಮಕಾರಿಯಾಗುತ್ತದೆ'._
ನೀನು ಮಾಡಿದ್ದು exactly ಇದನ್ನೇ , ಒಳ್ಳೆಯದಾಗಲಿ, ನಿನ್ನನ್ನ ಹರಿದು ಬಿಸಾಡುವುದು ಎಷ್ಟೋತ್ತಿನ ಕೆಲಸ, ಆದರೆ ನೀನು ಬದುಕಿರಬೇಕು, ಹೀಗೆ ನನ್ನ ಪಡೆಯಲಾರದೆ ಎಸಗಿದ ಅನ್ಯಾಯ ಅವಮಾನಗಳ ನೆರಳಿನಲ್ಲಿ, ಕೊನೆಗೆ ಮಾಡುವ ಪ್ರತಿ ಪೂಜೆ ಪ್ರತಿ ದಾನ ಪ್ರತಿ ಪ್ರಾರ್ಥನೆಯ ಹಿಂದೆಯೂ ನೀನು ಹೂತು ಹಾಕಿದ ನಿನ್ನ ಸುಳ್ಳು ಬೇಟೆಯಾಡುತ್ತದೆ, ಮುಂದೆ ಸಾಯುವ ಮುನ್ನವಾದರು ನಿನ್ನ ಕ್ಷಮೆಗಳ ಪಟ್ಟಿಯಲ್ಲಿ ನನ್ನದು ಮೊದಲಿರುತ್ತದೆ
ಬದುಕಿಕೊ ಹೋಗ್!😊

Thursday, August 17, 2017

ಮಧುಮಾಸ ಚಂದ್ರಮ

ಇವತ್ತು ನಿನ್ನ ನೆನಪಾಗ್ತಿದೆ, ತುಂಬಾ ಅಂದರೆ ತುಂಬಾ, ಸಣ್ಣಗೆ ಬಿಸಿಲು ಕಾಯುವ ಮಧ್ಯಾಹ್ನಗಳಲ್ಲಿ ನಾನ್ಯಾವತ್ತೂ ನಿನ್ನೇ ಕಾಯುತ್ತಿದ್ದೆ, ಪುಟ್ಟ ಪಾರಿವಾಳವೊಂದು ಬೆಚ್ಚನೆಯ ಗೂಡಿಂದ ಕಾಣೆಯಾದರೆ ಅದೆಂಥ ಆಘಾತ ಅಲ್ಲವಾ?
ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮಾ
ಒಲವಿನ ಲೋಕಕೆ ನೀ ತಂದೆ ಪೂರ್ಣಿಮಾ....
ನೀನು ಹೊಸಬನಲ್ಲ, ಹಳಬನು ಅಲ್ಲ, ನಮ್ಮ ಪ್ರೇಮಕಥೆಗೆ ಅದ್ವಿತೀಯ ನಾಯಕನಲ್ಲ, ಆದರೂ ಬಾರಿ ಬಾರಿ ನಿನ್ನೇ ಬಯಸಿದ್ದು, ತನ್ಮೂಲಕ ನಾನು ಬಹುಶಃ ನನ್ನೇ ಹುಡುಕಿದ್ದು ನನಗೆ ಗೊತ್ತಿರುವ ವಿಷಯ, ನಿಜ ವರುಷ ಕಳೆದಂತೆಲ್ಲಾ ಜವಾಬ್ದಾರಿಗಳು ಬದಲಾಗುತ್ತವೆ, ಪ್ರಾಮುಖ್ಯತೆಗಳೂ, ಆದರೆ ಅದಕ್ಕೆಲ್ಲ ಮೂಲ ಪ್ರೇಮವನ್ನೇ ಬಿಟ್ಟು ಬೇರೆಲ್ಲ ಕಡೆ ಕೈ ಚಾಚಿದರೆ ನೆಮ್ಮದಿ ದೊರಕುತ್ತದಾ? ಇಲ್ಲ. ನೀನೀಗ ಅದನ್ನೇ ಮಾಡುತ್ತಿದ್ದಿ.
ನಾನಿಲ್ಲೆ ಇದ್ದೇನೆ ಎಂದು ಒಮ್ಮೆ ತೋಳ್ ಚಾಚಿ ನೀನಪ್ಪಬಾರದೆ? ನನ್ನ ತಲೆ ನೇವರಿಸಿ ಒಮ್ಮೆ ನೀನಿರು ಜತೆಗೆ, ಈ ಪ್ರಯಾಣ ಸುಗಮ ಅನ್ನಬಾರದೆ? ಮಾತುಗಳನ್ನೆಲ್ಲ ಅದಾವ ತಿಜೋರಿಯಲ್ಲಿ ಬಚ್ಚಿಟ್ಟು ಕೀ ಕಳೆದು ಕೊಂಡೆ?ದೂರವಿದ್ದು ಹತ್ತಿರ ಇರುವ ಪರಿಪಾಠ (ಪಡಿಪಾಟಲು ಕೂಡ)ನಾನು ನೋಡಿದ್ದೇನೆ
ಹತ್ತಿರವಿದ್ದು ಅದೆಷ್ಟೋ ಮೈಲಿಗಳ ಅಂತರವನ್ನು ಅದೆಷ್ಟು ಸಲೀಸಾಗಿ ಸ್ಥಾಪಿಸಿದ್ದೀ ನೀನು?ನನಗೆ ಅಷ್ಟು ದೂರಾ ಹೊರಳಿ ನಡೆಯಲಾಗದು, ನೀರಿರದ ನದಿಯ ದಡದಲ್ಲಿ ನಿಂತ ಒಂಟಿ ನಾವೆಯಂತೆ ನಾನು ಕಾಯುತ್ತಲೇ ಇರುವೆ, ನಿನ್ನ ಆ ದಡಕ್ಕೆ ನನ್ನ ತಲುಪಿಸಲಿ ಅಂತ, ನಮ್ಮ ನಡುವಿನ ಅಂತರ ಕೊಚ್ಚಿ ಹೋಗುವ ಪ್ರೇಮ ಮಳೆಯೊಂದು ಬರಲಿ, ನಾನು ಕಾದು ಕಾದು ಸೋತಿದ್ದೇನೆ. ನಿನಗಾಗಿ, ನನ್ನ ಕ್ಷೀಣ ದನಿ ನಿನಗೆ ಈ ಬಾರಿಯಾದರೂ ಕೇಳಲಿ
ಒಮ್ಮೆ ಬಾರೋ ಒಮ್ಮೆ ಬಾರೋ
ಹೇಗೆ ನೀನಿದ್ದರೂ
ಒಮ್ಮೆ ಬಾರೋ ಒಮ್ಮೆ ಬಾರೋ
ಎಲ್ಲೆ ನೀನಿದ್ದರೂ
ಸುರಿ ಮಳೆ ಸುರಿಯುವ ಸೂಚನೆ
ಶುರುವಾಗಿದೆ ಶುರುವಾಗಿದೆ
ಜತೆಯಲಿ ನೆನೆಯಲು ನಲ್ಲನೆ ಮನಸಾಗಿದೆ, ಮನಸೋತಿದೆ.....
(copy paste)
(Devakanagile)