Friday, January 9, 2009

ಕನಸುಗಳು ಕೊಲೆಯಾಗಿವೆ!!

ಮೈಯೆಲ್ಲಾ ರಕ್ತಮಯ
ಕನಸುಗಳ ಕೊಲೆಯಾಗಿದೆ!!
ಕೊಲೆ ಮಾಡಿದವ ನೀನೆ,ಅದೇ ನನಗೀಗ
ತೊಂದರೆ,ಸಾಕ್ಷಿ ನಿನ್ನ ವಿರುದ್ಧ ಹೇಳಲಾರೆ!!
ನೀ ತೊಟ್ಟಿದ್ದ ತಿಳೀ ಗುಲಾಬಿ
ಬಣ್ಣದ ಮೇಲಿದೆ ನೋಡು ರಕ್ತದ
ಕಲೆ, ಏನು ಹಾಕಿದರೂ
ಹೋಗದು ಈ ಕಲೆ

ನಿನ್ನ ಗಾಡಿಯ ಹಿಂದೆ ನನ್ನ
ಹೆಸರಿದೆಯಲ್ಲಾ ಅದೇ
ಆ ಗಾಲಿಗಳ ಅಡಿಯಲ್ಲಲ್ಲವೇ,ನನ್ನ
ಕನಸುಗಳು ಹ್ಯಾಂಡ್ ಬ್ಯಾಗಿನಿಂದ
ಜಾರಿ ಬಿದ್ದದ್ದು, ಗಾಲಿಗಳ
ಸ್ವಚ್ಚ ಮಾಡಿಸು,ತುಕ್ಕು ಹಿಡಿಯಬಹುದು
ಹಾಗೇ ಹೋಗದು

ರಕ್ತದ ಕಲೆ.

ನನಗೀಗೀಗ ಹುಚ್ಚು ಅಂದೆಯಲ್ಲಾ
ಹೌದು,ನಿನ್ನ ಪ್ರತೀ ವಸ್ತುವಿನಲ್ಲು
ನನಗೆ
ನನ್ನ ಕೊಲೆಯಾದ ಕನಸುಗಳು
ಕಾಡಲಾರಂಭಿಸಿದೆ
ಭೂತದಂತೆ
ನೀನು,ನಿನ್ನ ಅಂಗಿ
ಬೈಕು,ಈ ಕೀ ಚೈನ್
ಮೊಬೈಲ್
ಎಲ್ಲಾ ರಕ್ತಮಯ

ಕೆಂಪು,ಕೆಂಪು ತೊಳೆದರೂ
ಹೋಗದ ರಕ್ತದ ಕಲೆ
ತೊಳೆದೂ,ತೊಳೆದೂ
ಹಿಡಿಯುತ್ತಿದೆ ಹುಚ್ಚು
ಆದರೂ ಹಾಗೇ ಹೋಗದು ಇದು
ಕನಸಿನ ರಕ್ತದ ಕಲೆ!!

Sunday, January 4, 2009

ಮಧು-ಮತ್ತ ಗಳಿಗೆ

ಮಧುವೇ! ನೀ ನನ್ನ ತಾಯಿ,ನಿನ್ನ
ಮುದ್ದಿನ ಪರಿಗೆ ಬದುಕಿದೆ,ನಾ ಬಡಪಾಯಿ!
ನೀನೆ ಆಹಾರ,ನೀನೆ ನೀರು
ರಾತ್ರಿ ಚುಕ್ಕಿಯಲ್ಲಿ ನೀನೆ ನನ್ನ ಚಾರಪಾಯಿ!!

ನೋಡು ಅವಳಿಟ್ಟ ಹೆಜ್ಜೆಗಳು ಮನದ ತುಂಬಾ
ನಿನ್ನಲ್ಲೂ ಕಾಣುವುದು ಅವಳ ಮೋಸದ ಬಿಂಬ!
ಖಬರಿಲ್ಲದೆ ಹೋಯಿತೆ ಎನಗೆಅವಳ ಹೆಜ್ಜೆಯ ಪರಿಯು
ನಾನಿಲ್ಲಿ ಒಂಟಿಹಕ್ಕಿ ಹಾರಲಾರೆ,ಕಿತ್ತಳಲ್ಲ ಕನಸಿನ ರೆಕ್ಕೆಯ!!

ಆದರೂ ನಾ ನಿನ್ನ ನಂಬಿರುವೆ"ಸಾಲಿ"! ನೀಗುವೆಯ ದುಮ್ಮಾನ
ನೀನವಳಿಗಿಂತ "ಧೋಕಾ"!ಬಟ್ಟಲಲ್ಲಿದ್ದರೂ ಅದೆಷ್ಟು ನಿನ್ನ ಸುಮ್ಮಾನ!
ಸಾಗುತಿದೆ ಕಾಲುಗಳು ಬಾನಿನ ಕಡೆಗೆ,ಎದೆಯೊಳಗೆ ತುಂಬಿತು ನಿನ್ನ ಕಡಲು
ಹಾಸಿಹಳು ಸೆರಗು ಗೆಳತಿ ಇನ್ನಾರಿಗೋ ನೀನಾದರೂ ಕೇಳು ಎನ್ನ ಅಳಲು!!

ಮುಳುಗುತಿದೆ ಏಳುತಿದೆ ಚಂದ್ರನ ಬಿಂಬ,ಎದೆಯಲ್ಲಿ ಹಾಲಾಹಲದ ಹಾಲು
ಈ ರಾತ್ರಿ ಆಗಸದಲ್ಲಿ ಸೂರ್ಯನ ಮರಣದ ಕಾರಾವಾನ್, ಖಾಲಿ ಖಾಲಿ ಭೂಮಿಯ ಒಡಲು

ಹೂವು ಸುಡುವ ಪರಿಯ ನಾ ತಡಕೊಂಡಿರುವೆ,ಮತ್ತೆ
ನೀನೂ ನನ್ನ ಸುಡುವೆಯಾ?
ಸುಟ್ಟರೂ ಸರಿಯೆ, ನಿನ್ನ ಝಲಕ್ಕಿಗೆ ಮರುಳು!
ನಾ ನಿನ್ನ ಪರವಾನಾ ತಿಳಿದೆಯಾ!!

ನಿನ್ನ ಸೌಂದರ್ಯದ ಮುಂದೆ,ಗೆಳತಿಯೇನು?
ಈ ಜೀವನವನ್ನೇ ನಿನಗೆ ಒತ್ತೆ ಇಡಬಲ್ಲೆ ನಾನು!!
ನಾನು ನೀನು ಕೂಡಿ ಕಳೆದ ಎಲ್ಲಾ ಮತ್ತ-ಗಳಿಗೆ
ಅದರೂ ಉಳಿವ ಶೇಷ ಮೊತ್ತ ಅವಳೇ ಕೊನೆಗೆ!!

Friday, January 2, 2009

ಒಂದಷ್ಟು ಹನಿಗಳು(ಸ್ವಂತದ್ದು)

ಸುಖ-ದು:ಖ

ಹೇಮಂತನ ಮಂದಾನಿಲ
ಹೊತ್ತು ತಂದ ವಿಷಾದ,
ಅದ ಮರೆಸಲು ತಿಳಿ ಬಿಸಿಲ
ಕೋಲ ಆ ಅರುಣ ಬೀಸಿದ
ಹೀಗೆ ಬದುಕಲೂ ನಡೆವುದು
ಋತುಗಳ ಆಟ,
ಸಿಹಿ ,ಕಹಿಗಳ ಮಿಶ್ರ
ಕೂಟ,
ದು:ಖದ ನಂತರ ಸುಖ
ಎನ್ನುವುದು ಬದುಕಿನ ರೀತಿ,
ಕತ್ತಲೆಯ ನಂತರವೆ ಬೆಳಕು
ಇದು ಸೃಷ್ಟಿಯ ನೀತಿ.

ಬಯಕೆ
ಮತ್ತೆ ಇವತ್ತು ಬೆಳ ಬೆಳಗ್ಗೆ
ತುಂತುರು ಮಳೆ ಹನಿ
ಎದೆಯೊಳಗೂ ಹೊರಗೂ
ತಂಪೋ ತಂಪು,
ಅಮ್ಮನಂತೆ ಬಾನು,
ಅಪ್ಪನಂತೆ ವರುಣ
ಕರುಳ ಕುಡಿಯಂತೆ ಅವನಿ,
ಅಲ್ಲಿ ನಾನು,ನೀನು,
ಅವನು
ಅವಳು
ಧನ್ಯೆ ಧರಣಿ,
ಕುಡಿಯೊಡೆಯುತಿವೆ ಕನಸುಗಳು
ನನ್ನಲ್ಲು,ಅವನಲ್ಲೂ
ಬಯಕೆ ಬುತ್ತಿಯ ಉಣ್ಣುವ ಸಮಯ
ಮಳೆಯೆಂಬ ಹಬ್ಬದ ಸಮಯ!!

ಮಗು
ತೊಟ್ಟಿಲ ತೂಗುವ ತಾಯಿಯ
ಮನದಲ್ಲು,
ಬೆಟ್ಟವ ಹತ್ತುವ ಯಾತ್ರಿಯ
ಎದೆಯಲ್ಲೂ
ಮಲಗಿದೆ ಪುಟ್ಟ ಮಗು
ಶ್ರದ್ಧೆಯ ರೂಪದಿ,
ಹಾಲುಣ್ಣುವ ಕಂದನ
ಕಣ್ಣಲ್ಲಿದೆ ಅಮ್ಮನ
ಚಂದ್ರಬಿಂಬ
ಹಾಲೂಡುವ ತಾಯಿಗೋ
ತನ್ನ ಮುದ್ದುಮಗುವೇ
ಮನಸಿನ ತುಂಬ
ಕಲ್ಲಲ್ಲೂ ಹೂವಿನ
ಕುರುಹು ಅರಳಲಿ
ಮಾನವನೆದೆಯಲಿ
ಪುಟ್ಟ ಮಗುವೊಂದು
ಸದಾ ನಲಿಯಲಿ!!

ದಾರಿ

ನಾ ನಿಂತಿದ್ದೆ
ನಿನ್ನ ಮನೆ ಬಾಗಿಲ ಮುಂದೆ,
ಕರೆಯಲು ಸ್ವರವೇ ಇರಲಿಲ್ಲ,
ನಾ ನಿಂತಿದ್ದೆ
ನೀ ಬರುವ ದಾರಿಯಲ್ಲಿ
ಅಂದು ಅಲ್ಲಿ ನೀ ಬರಲೇ ಇಲ್ಲ
ನದಿಯಂತೆ ನಿನ್ನ ಸೇರುವ
ಆಸೆ ಹೊತ್ತು ಬಂದೆ
ನೀನೇಕೆ ಸಮುದ್ರವಾದರೂ
ಹಿಂದೆ ಸರಿದೆ??
ಪ್ರೇಮದ ಮಹಲಿನೆಡೆಗೆ ಜೊತೆಯಲ್ಲಿ
ನಡೆಯಲಿತ್ತು ನಮ್ಮ ಪಯಣ
ಬೇರೆಯಾಯಿತೇಕೆ ದಾರಿ
ಮುಗಿತೇಕೆ ಕಥೆ ಆರಂಭದಲ್ಲಿ?

Thursday, January 1, 2009

ಆ ಹುಡುಗಿ!

ಅವಳ ಕಣ್ಣುಗಳಲ್ಲಿ ನೀರಿನ ಪಸೆಯಿತ್ತು,ಆರದ ನೋವಿನ ಊಟೆ ಹೊತ್ತು ನಡೆಯಲಾಗದವಳಂತೆ ಬಗ್ಗಿ ನಡೆಯುತ್ತಿದ್ದಳು,ಆದರೂ ಆ ನಡಿಗೆಯಲ್ಲೊಂದು ಪ್ರಶಾಂತತೆಯಿತ್ತು,ಅವಸರದ ಸುಳಿವಿಲ್ಲದ ಬೇಸಿಗೆಯ ಗಾಳಿ ಆಕೆಗೇನೋ ಎಂಬಂತೆ ತೀರ ತಂಪಲ್ಲದೆ ಬೀಸುತ್ತಿತ್ತು,ಸುತ್ತ ಬೆಂಕಿ ಪೊಟ್ಟಣಗಳಂತೆ ಕಾಣುತ್ತಿರುವ ಸಾವಿರಾರು ಮನೆಗಳಿಂದ ಕೇಳುವ ಶಬ್ದ ಆಕೆಗೆ ಕೇಳಿಸುತ್ತಿಲ್ಲ, ಸುತ್ತ ನಿಂತು ಒಮ್ಮೆ ಸುಮ್ಮನೆ ಧೇನಿಸಿದಳು, ಆ ಮನೆಯ ಕಾಂಪೌಂಡಿನ ಸುತ್ತ ಇರುವ ವಸ್ತುಗಳ ಕಂಡು ಆಕೆಯ ಕಣ್ಣರಳಿತು,ಒಂದೊಂದಾಗಿ ಆರಿಸಿ ತನ್ನ ಪುಟ್ಟ ಕೈ ಚೀಲಕ್ಕೆ ತುಂಬಿದಳು, ಮುಂದೆ ಹೊರಟಾಕೆ ಮತ್ತೇನೋ ಹುಡುಕುವಂತೆ ಎರಡು ಹೆಜ್ಜೆ ಹಿಂದೆ ಬಂದಳು,ಆ ಮನೆಯ ಸೌಂದರ್ಯ ಆಕೆಯ ಮನ ಸೆಳೆಯಿತು,ಬಾಗಿಲಿನ ಹೊಸಾ ಚಿತ್ತಾರ ಕರೆಯಿತು, ಒಳಗೆ ಹೆಜ್ಜೆ ಇಡಬೇಕೆನ್ನುವಷ್ಟರಲ್ಲಿ ಮುದ್ದಾದ ಮಗು ಅವಳತ್ತಲೇ ನಡೆದು ಬಂತು. ಅದರ ಮುದ್ದು ಮೊಗ ಆಕೆ ಜಾಹೀರಾತಿನ ಪೋಸ್ಟರಿನಲ್ಲಿದ್ದ ಮುಖವನ್ನೇ ನೆನಪಿಗೆ ತಂತು.

ಹತ್ತಿರ ನಿಂತು ಕೈ ಚಾಚಿದಳು,

ಆ ಮಗು ಬಂತು,ಅಗೋ ಬಂದೇ ಬಿಟ್ಟಿತಲ್ಲ,

ಅರೆರೆ!! ಜೊತೆಗೆ ಅವರಮ್ಮನೂ, ಕೈಯಲ್ಲಿ ಮಲ್ಲಿಗೆಯ ಮಾಲೆ ಹಿಡಿದು!!

"ಮಗು ಯಾರಮ್ಮ ನೀನು?? ಇಲ್ಲೇನು ಮಾಡ್ತಾ ಇದ್ದೀಯಾ?"

ತಾನು ಯಾರು?,ನೆನಪಿಸಿಕೊಳ್ಳಲೆತ್ನಿಸಿದಳು, ಆಗಲಿಲ್ಲ, ಸುಮ್ಮನೆ ಕಾಲ್ಬೆರಳು ನೆಲ ಗೀರತೊಡಗಿತು,

"ಮಗೂ,ಊಟವಾಯ್ತೇ ನಿನ್ನದು??"

ಊಟ ,ಹಾಗೆಂದರೇನು?? ಹಾ!! ನೆನಪಾಯ್ತು,ಅಮ್ಮ ಹೇಳುತ್ತಿದ್ದಳಲ್ಲ,

"ಅಲ್ಲೆಲ್ಲೋ ಸುಂದರ ಜಗತ್ತೊಂದಿದೆಯಂತೆ,ಅಲ್ಲಿ ಗಂಜಿ ಬದಲು ಸುವಾಸನೆಯುಳ್ಳ ಅಕ್ಕಿಯೆಂಬ ವಸ್ತು ತಿನ್ನಲು ಸಿಗುತ್ತದಂತೆ!!ಇದು ಅದೇ",
ಪಸೆಯಿದ್ದ ಕಂಗಳಲ್ಲಿ ದೀಪವೊಂದು ಬೆಳಗಿತು,

"ಬಾ,ಮಗೂ,ನಮ್ಮ ಪುಟ್ಟನ ಹುಟ್ಟಿದ ದಿನ ಇವತ್ತು"

ಇವಳು ಅರ್ಥವಾಗದೆ ಸುಮ್ಮನೆ ನಿಂತೇ ಇದ್ದಳು,ಆದರೆ ಎಲ್ಲಿಂದಲೋ ಎರಡು ಕೈಗಳು ಬಂದು ಒಳಗೆಳೆದುಕೊಂಡವು, ಮತ್ಯಾವುದೋ ಎರಡು ಕೈಗಳು ಆಕೆಗೆ ಬಡಿಸಿದವು,ಹೆಸರೇ ಗೊತ್ತಿಲ್ಲದ ಅನೇಕ ವಸ್ತುಗಳು ಎಲೆಯ ಮೇಲೆ ಬಂದು ಬೀಳುತ್ತಿದ್ದರೆ ಆಕೆ ಕುಳಿತೇ ಇದ್ದಳು ನಿಶ್ಚಲವಾಗಿ,

"ಕ್ಲಿಕ್" ದೊಡ್ಡದಾದ ಬೆಳಕೊಂದು ಬಂದಂತಾಯಿತು, ಬೇರೆಯದೇ ಜಗತ್ತಿನಲ್ಲಿ ವಿಹರಿಸುತ್ತಿದ್ದ ಆಕೆ ವಾಸ್ತವಕ್ಕಿಳಿದಳು,

ಆದಷ್ಟು ಜಾಸ್ತಿ ತಿನ್ನಲೆತ್ನಿದಳು,ಆಗದೇ ಎಲೆಯ ಬಿಟ್ಟು ಏಳುವಾಗ ಕಂಗಳು ತುಂಬಿ ಬಂದವು, ಮತ್ತದೇ ಸ್ವರ ಕೇಳಿತು,

"ಮಗೂ ನಿನ್ನಮ್ಮ ಅಪ್ಪ ಎಲ್ಲಿ?"

"ಅಮ್ಮ ಮೇಲೆ ಇದಾರೆ,ಮತ್ತೆ ಅಪ್ಪ ಗೊತ್ತಿಲ್ಲ"

"ಈ ಪುಟ್ಟನ ಜೊತೆ ಇರ್ತೀಯಾ?"

ಆಕೆ ಹೇಳಲೋ ಬೇಡವೋ ಎಂಬಂತೆ ಸಣ್ಣಗೆ "ಹುಂ" ಎಂದದ್ದೇ ಮುಂದೆ ನಡೆದದ್ದೆಲ್ಲಾ ಕನಸು!! ಅಮ್ಮ ಹೇಳುತ್ತಿದ್ದ "ಸ್ವರ್ಗ"ವೆಂದರೆ ಇದು,ಆ ಹೆಂಗಸೇ "ಕಿನ್ನರಿ" ಅಂದುಕೊಂಡ ಆ ಎಳಸು ಕಂಗಳಿಗೆ ದಣಿವಾಗುತ್ತಲೇ ನಿದ್ರೆ ಆವರಿಸಿತ್ತು.

"ಯೋಯ್, ಯಾರಮ್ಮಾ ಅದು,ಎಲ್ಲಿಂದ ಬಂದು ಸಾಯ್ತಾವೋ ನಮ್ ತಲೇ ತಿನ್ನಕ್ಕೆ, ಒಯ್ ರಂಗಾ ಯಾವುದೋ ಚಿಂದಿ ಹುಡುಗಿ ಇಲ್ಲೇ ಬಿದ್ಬಿಟ್ಟಿದೆ,ಗಾಡಿ ತೆಗೆಯಕ್ಕೆ ಆಗ್ತಾ ಇಲ್ಲ,ನೀನೆಲ್ಲೊ ಹೋಗಿದ್ದೆ ಸಾಯಕ್ಕೆ?" ಗಡಸು ದ್ವನಿ ಕಿರುಚಿತು,

"ಸಾರ್, ಬಂದೇ, ಇವತ್ತು ಬೆಳಗಿನ ಜಾವ ಬಂದಿರ್ಬೇಕೇನೋ, ಅರೆರೆ!!ಅಯ್ಯೋ ಸಾರ್ ಜೀವ ಹೋಗ್ಬಿಟ್ಟಿದೆ!!ಯೇನ್ ಮಾಡೋದು ??"

"ನಗರ ಪಾಲಿಕೆ ವ್ಯಾನ್ಗೆ ಫೋನ್ ಮಾಡು ಭೇವ್ಕೂಫ!! ಅದನ್ನ ಎಳದು ಆ ಕಡೆ ಹಾಕು,ಇಲ್ಲೇ ಬಿದ್ದಿದ್ರೆ ಮೀಡಿಯಾದೋರು ದೊಡ್ಡ ಹಗರಣ ಮಾಡ್ತಾರೆ"

"ಸರಿ ಸಾರ್,"

ಮರುದಿನದ ಪತ್ರಿಕೆಯಲ್ಲಿ ಸಣ್ಣದಾಗಿ ಕ್ರೈಮ್ ವಿಭಾಗದಲ್ಲಿ ಸುದ್ದಿಯೊಂದು ಪ್ರಕಟವಾಗಿತ್ತು

"ಎಂಟು ವರ್ಷದ ಚಿಂದಿ ಆಯುವ ಬಾಲಕಿಯ ಶವ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳ ಮನೆಯ ಎದುರು ರೋಡಿನಲ್ಲಿ ಪತ್ತೆಯಾಗಿದ್ದು, ಮಾನ್ಯ ಮಂತ್ರಿಗಳು ಆಕೆಯ ತಂದೆ ತಾಯಿಗಳಿಗೆ ಐವತ್ತು ಸಾವಿರದ ಪರಿಹಾರ ಪ್ರಕಟಿಸಿದ್ದಾರೆ".

ಮಲ್ಲಿಗೆಯೊಂದು ಅರಳುವ ಮೊದಲೇ ಹಸಿವಿಂದ ಬಾಡಿ ಹೋದದ್ದು ಯಾರಗಮನಕ್ಕೂ ಬರಲೇ ಇಲ್ಲ!!