"ಕೈ ನೋವು ಬಂತೆನಾ ನಿಂಗೆ, ನಾಕೊಳ್ಳು ಹೂರಣ ಬೀಸದು ಸುಲಭದ್ ಕೆಲ್ಸಲ್ಲ, ಏಳು , ಈ ಒಳ್ಳು ಆನೆ ಬೀಸ್ಕೊಡ್ತಿ" ಅಪ್ಪನ ಕಣ್ಣುಗಳನ್ನೆ ನಿಟ್ಟಿಸಿದಳು ನಕ್ಷತ್ರ, ಅಲ್ಲಿ ಕಕ್ಕುಲಾತಿ ಬಿಟ್ಟರೆ ಬೇರೇನಿರಲಿಲ್ಲ, "ಇಲ್ಲೆ ಅಪ್ಪ, ಸುಸ್ತೇನು ಆಗಲ್ಲೆ, ಇನ್ನೊಂದು ಒಳ್ಳಾಗ್ತು ಅಷ್ಟೆಯಾ, ನೀನು ಬ್ಯಾಗ ಪೂಜಿಗೆ ರೆಡಿ ಮಾಡ್ಕ್ಯ" ಎಂದವಳೆ ಬೇಳೆ ಮಿಶ್ರಣವನ್ನ ಹದಾ ಸೌಟಲ್ಲಿ ಒರಳಿಗೆ ದಬ್ಬತೊಡಗಿದಳು, ದೀಪಾವಳಿಯಲ್ಲವೆ ಕೆಲಸದ ಹೊರೆ ಕಾಯುತ್ತಿತ್ತು, ಸೂರ್ಯ ಮತ್ತು ಜಿತುವಿನ ಮಾತು ಜಗಲಿಯಿಂದ ಒಳ್ಳುಕಲ್ಲು ಇಟ್ಟಿದ್ದ ಹಿತ್ತಿಲವರೆಗು ಕೇಳುತ್ತಿತ್ತು, ಹೌದಲ್ಲ, ತೋರಣ ಕಟ್ಟಬೇಕು, ತುರುರೊಟ್ಟಿ ಚೆಂಡು ಶೇವಂತಿಗೆ ಹಾರ ಕೊಟ್ಟಿಗೆ ಯಲ್ಲಿ ನ ಅಷ್ಟೂ ಜೀವಗಳಿಗೆ, ಮೊನ್ನೆ ಬಂದವನೆ ಜಿತು ಅವಕ್ಕೆ ಎಣ್ಣೆ ನೀರು ಹಾಕಿ ಹೇನು ನೊಣ ತೆಗೆದು ನೀಟಾಗಿ ಸ್ನಾನ ಮಾಡಿಸಿದ್ದ, ಬೆಳ್ಳಿ ದನಕ್ಕೆ ಅವನ ದನಿ ಕೇಳಿದರೆ ಖುಷಿ, ಎರಡು ಸಾರಿ ಹೆಚ್ಚೆ ಅಂಬಾ ಅನ್ನುತ್ತಾಳೆ, ಅಪ್ಪ ಅವುಗಳನ್ನು ಪ್ರಾಣಿಗಳಲ್ಲ ದೇವತೆಯರು ಅನ್ನುತ್ತಿದ್ದ, ಸಮೃದ್ಧ ಹಾಲು ಹೈನು, ಹಸಿರಾದ ತೋಟ ಆದರು ತಾಯಿಲ್ಲದ ತವರು ಸಂಕಟವೆ, ಅಂಟಾಗಿ ಉಂಡೆ ಕಟ್ಟುವ ಹದಕ್ಕೆ ಬಂದು ನುಣ್ಣಗಾದ ಹೂರಣವನ್ನು ತೆಗೆದಳು ನಕ್ಷತ್ರ, ಒಳ್ಳು ಕಲ್ಲಿಗೆ ನೆನೆಯುವಷ್ಟು ನೀರು ಬಸಿದು ಏಳುವ ವೇಳೆಗಾಗಲೇ ಒಳಗಿನಿಂದ " ಈಶಾನ ಸರ್ವ ವಿದ್ಯಾನಾಂ ಈಶ್ವರ ಸರ್ವ ಭೂತಾನಾಂ, ಬ್ರಹ್ಮಾಧಿಪತಿರ್ ಬ್ರಹ್ಮಣೋಧಿಪತಿರ್ ಬ್ರಹ್ಮ, ಶಿವೋಮೆ ಅಸ್ತು ಸದಾ ಶಿವೋಹಮ್" ಅಂತ ಅಪ್ಪನ ಮಂತ್ರ ಧಾರೆಯಲ್ಲಿ ಕಳೆದು ಹೋದಳು ಕೈಗಳು ಯಾಂತ್ರಿಕವಾಗಿ ಕೆಲಸಗಳನ್ನು ಮಾಡುತ್ತಿದ್ದರೆ ಆಕೆ ನೆನಪುಗಳ ಲೋಕದಲ್ಲಿ ಅಮ್ಮನೆದುರು ಕೂತಿದ್ದಳು, ಅದೇ ಅಮ್ಮ, ಆರ್ದ್ರ ಕಣ್ಣಿನ ಗಂಟಲೊಳಗಡೆಯೆ ಹೂತುಹೋಗುತ್ತಿದ್ದ ಮಾತಿನ ಅಮ್ಮ, ಒಟ್ಟು ಕುಟುಂಬದ ಗಾಣದೆತ್ತು, ಕೆಲಸದವರಿಂದಲು ಕೂಡ ಬೋಳೆ ಅಮ್ಮ ಅನಿಸಿಕೊಂಡ ತನ್ನಮ್ಮ, ಎದುರು ಕೂತು ಮಾತಾಡುತಿದ್ದಳು" ಬ್ಯಾಡ ಕೂಸೆ, ನಿಂಗವ ಇಷ್ಟ ಹೇಳಿ ಸೈತ ಯಾರೆದ್ರಿಗು ಹೇಳಡ, ಮದ್ಲೆ ಮನೆಲಿ ನಿಮ್ಮಪ್ಪ ಕೋಲೆಬಸವ, ಆನು ದನಿ ಹೂತ್ ಹೋದೋಳು, ನಿನ್ ಬೆನ್ನಿಗೊಬ್ಬ ತಮ್ಮ ಇದ್ದ ಹೇಳಿ ಮರೆಯಡ, ಆನಂತು ಈ ಸಂಸಾರಕ್ಕೆ ತೇದು ತೇದು ಜೀವ ಹೈರಾಣ ಮಾಡ್ಕ್ಯಂಡಿ, ಆದ್ರು ಮಾತು ಕೇಳದು ತಪ್ಪದಿಲ್ಲೆ, ನೀ ಮತ್ತೆ ನಂಗಳ ತಲೆ ಮ್ಯಾಲೆ ಚಪ್ಪಡಿ ಕಲ್ಲು ಹಾಕಡ, ಆನಂತು ಬದ್ಕದಿಲ್ಲೆ, ಜನ ಮಾತು ಕೇಳೇ ಕೇಳೆ ಸತ್ತೋಗ್ತಿ" ಆಕೆಯ ಕಣ್ಣುಗಳು ಆಹ್, ಅದು ಕಣ್ಣಲ್ಲ ಸಾಗರ, ಪೂರ್ತಿ ನೀರು ತುಂಬಿತ್ತು, ತನಗೆ ವಿಚಿತ್ರ ಅನ್ನಿಸಿತ್ತು, ಯಾರೋ ಜನಕ್ಕಾಗಿ ಅಮ್ಮ ತನ್ನ ಮಗಳಬಲಿ ಕೊಡುತ್ತಾಳೆ ಜೀವ ತೆಗೆದುಕೊಳ್ಳುತ್ತಾಳೆ ಅನ್ನುವುದು ಅತ್ಯಂತ ಸೋಜಿಗ ತರುವ ವಸ್ತುವಾಗಿತ್ತು, ಜತೆಗೆ ಅಮ್ಮನ ಮೇಲೆ ಸಿಟ್ಟು ಬಂದಿತ್ತು, "ಬೇರೆ ಯಾರ್ಜೊತಿಗಾದ್ರು ಎನ್ ಮದ್ವೆ ಆಗದಾದ್ರೆ ನಾನೆ ಹೋಗಿ ಚೌಡಿ ಹೊಳಿಗೆ ಹಾರ್ಕತ್ತಿ, ಈ ಮಗಳು ನಿಂಗಳ್ ಪಾಲಿಗೆ ಸತ್ತೋದ ಅಂದ್ಕಳಿ" ಅಂದವಳೆ ಎದ್ದು ಮೆತ್ತು ಹತ್ತಿ ಧಡಾರ್ ಅಂತ ಬಾಗಿಲಿಳೆದುಕೊಂಡಿದ್ದೆ ತಾನು, ಅಮ್ಮನ ಸ್ವಭಾವವೆ ಅದಾಗಿತ್ತಾ? ಮೊದಲನೆಯ ಸೊಸೆ, ಮೂರು ಜನ ಅಣ್ಣ ತಮ್ಮಂದಿರು ಇರುವ ಮನೆಗೆ ಅಮ್ಮ ಎರಡು ಹಸು, ಒಂದು ಒಳ್ಳ್ಕಲ್ಲು ಒಂದು ಟ್ರಂಕು ಹಿಡಿದು ಗೃಹ ಪ್ರವೇಶ ಮಾಡಿದವಳು, ಅತ್ತೆ ಮಾವ ಇಬ್ಬರು ಇಲ್ಲದ ಸಂಸಾರಕ್ಕೆ ದಿಕ್ಕಾದವಳು, ಅಪ್ಪನೋ ಬೋಳೆಶಂಕರ, ತಮ್ಮಂದಿರು ಮದುವೆಯಾದರು, ಅವರ ಹೆಂಡದಿರಿಗೆ ಪೇಟೆಯ ಹುಚ್ಚು, ಒಬ್ಬಳು ಸದಾ ಸಾಗರದ ತವರುಮನೆಯಲ್ಲಿ ಝಾಂಡ, ಮತ್ತೊಬ್ಬಳು ಕೋಣೆಯಿಂದ ಕೆಳಗಿಳಿಯುತ್ತಿರಲಿಲ್ಲ, ಅವರಿವರ ಮಾತುಗಳು ಅಮ್ಮನ ಕಿವಿಯಲ್ಲಿ ಅದ್ಹೇಗೆ ಬೀಳುತ್ತಿತ್ತೋ, ,,"ಜನ ನೂರ್ ಹೇಳ್ಲಿ, ನಂಗವು ನಿಯತ್ತಲಿದ್ವಲ, ದೇವ್ರು ಕಾಯ್ತ, ಸುಮ್ನಿರು" ಅಂತ ಸಮಾಧಾನಿಸುತ್ತಿದ್ದ ಅಪ್ಪನ ಮಾತುಗಳು ಅವಳೆದೆಗೆ ನಾಟುತ್ತಲೆ ಇರಲಿಲ್ಲ, ಸದಾ ಯೋಚನೆಯಲ್ಲಿಯೆ ಇರುತ್ತಿದ್ದಳು, ತನಗು ಸದಾ ಅದೇ ಉಪದೇಶ" ಜನ್ರ ಬಾಯಿಗೆ ಶಿಕ್ಕಡ ಕೂಸೆ, ಜೀವ ಇದ್ಹಾಂಗೆ ಸಾಯಿಸ್ಬುಡ್ತ, ಒಳ್ಳೆ ಕಡಿಗೆ ನಿನ್ ಮದ್ವೆ ಆದ್ರೆ ಸಾಕು" ವಿಧಿಯ ಆಟ ಬೇರೆಯೆ ಇತ್ತು, ಹತ್ತು ವರ್ಷದಿಂದ ಪರಿಚಿತ ಕೈಸಾಲಿನ ಹುಡುಗ ಸೂರ್ಯನ ಸ್ನೇಹ ಸೆಳೆಯತೊಡಗಿತ್ತು, ಅವನು ಡೆಲ್ಲಿಗೆ ಹೊರಟು ನಿಂತಿದ್ದ, ತಾನು ನಿರ್ಧಾರ ಮಾಡುವಂತದ್ದೇನಿತ್ತು, ಜಾತಿಯವನೆ, ಮನೆಯಲ್ಲಿ ಅನುಕೂಲಸ್ಥ, ಅದೆಲ್ಲಕ್ಕಿಂತ ತಾನು ಒಲಿದದ್ದು ಅಪ್ಪನ ಸ್ವಭಾವಕ್ಕು ಅವನ ಸ್ವಭಾವಕ್ಕು ಇದ್ದ ಸಾಮ್ಯತೆಗೆ, ಅಮ್ಮನಿಗೆ ಅದೂ ಒಂದಿ ಮರ್ಯಾದೆ ತೆಗೆಯುವ ವಿಷಯವಾಗಿತ್ತು, ಯಾಕೆಂದರೆ ಅವ ಸಗೋತ್ರ, ಸಗೋತ್ರದ ಸಂಬಂಧಗಳು ಅಣ್ಣ ತಂಗಿ ಅಂತಾನೆ ಪರಿಗಣಿಸಲ್ಪಡುತ್ತದೆ ಅಂತ ಚಿಕ್ಕಪ್ಪಂದಿರು ಮಾತಾಡುತ್ತಿದ್ದದ್ದು ತಾನೂ ಕೇಳಿಸಿಕೊಂಡಿದ್ದಳು, ಅವರಿಗೂ ಹೆಣ್ಮಕ್ಕಳಿದ್ದರು ಎನ್ನುವುದನ್ನು ಮರೆತಂತೆ ಅವರು ಮಾತಾನಾಡುತ್ತಿದ್ದ ಪರಿ ತನ್ನ ಹಟವನ್ನು ಇನ್ನೂ ಹೆಚ್ಚಿಸಿತ್ತು, ಆ ಸಮಯದಲ್ಲಿ ಅಪ್ಪ ಜತೆ ನಿಂತಿದ್ದ, ಮಠದವರು ಸಗೋತ್ರ ವಿವಾಹ ನಿಶ್ಚಯಿಸಿದ್ದಕ್ಕೆ ಸೀಮೆಯ ಜನರನ್ನೆಲ್ಲ ಕರೆದು ಅವರೆದುರು ಅಪ್ಪನಿಗೆ ಛೀಮಾರಿ ಹಾಕಿದ್ದರು, ಆದರೆ ಅಪ್ಪನ ಮಾತೊಂದೆ" ನನ್ನ ಮಗಳು ಯಾವ ತಪ್ಪು ಮಾಡಿಲ್ಲ, ಅವಳಿಷ್ಟ ಪಟ್ಟರೆ ಹೊಲೇರ ಹುಡುಗಂಗೆ ಕೊಟ್ಟು ಬೇಕಾದರೆ ಮದುವೆ ಮಾಡತ್ತಿನಿ' ಅಪ್ಪನಲ್ಲೊಂದು ಅಂತ ಮನಸ್ಥಿತಿ ಇದ್ದದ್ದು ತನಗೆ ಗೊತ್ತಾದದ್ದೆ ಅವಾಗ, ತಾನು ರೂಪದಲ್ಲೆನೊ ಅಪ್ಪನ ಪಡಿಯಚ್ಚು ಆದರೆ ಕಣ್ಣುಗಳು ಮಾತ್ರ ಅಮ್ಮನವೆ ಅಂತ ಅಪ್ಪಯಾವಾಗ್ಲು ಹೇಳ್ತಿದ್ದರು, ಅಪ್ಪ ಗಟ್ಟಿ ನಿಂತು ಮದುವೆ ಮಾಡಿಸಿದರು, ಆದರೆ ಅಮ್ಮ ಮನಸ್ಪೂರ್ವಕ ಆಶೀರ್ವಾದ ಮಾಡಲೆ ಇಲ್ಲ, ಕೊಂಡಿ ಕಳಚಿದ ಬೇರಾದ ತಾನು ಪೇಟೆಗೆ ಬಂದೆನಾದರು ಮತ್ತೆ ಮನೆಯ ಸಂಪರ್ಕ ದಕ್ಕಲೆ ಇಲ್ಲ, ಆದರೆ ಜಿತು ಎಸ್ ಎಸ್ ಎಲ್ ಸಿ ಮುಗಿಸಿದವ ಬೆಂಗಳೂರಲ್ಲಿ ಪಿಯುಸಿ ಓದತಿದ್ದಾನೆ ಅಂತ ಊರಗೌಡರ ಮಗ ಪ್ರಶಾಂತ ಸಿಕ್ಕಿದಾಗ ಹೇಳಿದ್ದ, ತನ್ನ ಮನಸ್ಥಿತಿಯ ಅರಿವಿದ್ದ ಸೂರ್ಯ ತನ್ನ ಜತೆಗೆ ಬಂದು ಕಾಲೇಜು ಹುಡುಕಿದ್ದ, ತಾನು ಬರುವಾಗ ಐದನೆ ತರಗತಿಯಿದ್ದ ಮುದ್ದು ಕೆನ್ನೆಯ ತಮ್ಮ ತನ್ನೆತ್ರಕ್ಕೆ ಬೆಳೆದಿದ್ದು ನೋಡಿ ಖುಷಿಯಾಗಿತ್ತು ತನಗೆ, ಅವನು ಅಷ್ಟೇ ನಿಧಾನಕ್ಕೆ ಅದೇ ಸಲಿಗೆ ಪ್ರೀತಿಗೆ ಮರಳಿದ್ದ, ಮನೆಯ ಸುದ್ದಿಯೆಲ್ಲ ತಿಳಿದಿತ್ತು, ಚಿಕ್ಕಪ್ಪನ ಮೊದಲನೆ ಮಗಳು ಸ್ವಾತಿ ವಿದೇಶಕ್ಕೆ ಗೌಡರ ಹುಡುಗನೊಂದಿಗೆ ರಿಜಿಸ್ಟರ್ ಮದುವೆ ಮಾಡಿಕೊಂಡು ಹಾರಿದ್ದನ್ನು, ಮತ್ತೊಬ್ಬ ಚಿಕ್ಕಪ್ಪನ ಒಂದೇ ಮಗಳು ಗ್ಯಾರೇಜಿನ ಅನ್ವರನೊಂದಿಗೆ ಓಡಿಹೋಗಿ ಕಾಣೆಯಾದ ಸುದ್ದಿಗಳು ತನ್ನ ತಲುಪುತ್ತಲೆ ಇದ್ದವು, ಅಮ್ಮ ಸದಾ ತನ್ನ ಸುದ್ದಿ ಮಾತಾಡುವ ಸಂದರ್ಭದಲ್ಲಿ ಕಣ್ಣು ತುಂಬಿಕೊಳ್ಳುವುದನ್ನು ಕೇಳಿದಾಗಲೆಲ್ಲ ತನಗೆಷ್ಟು ಬಾರಿ ಓಡಿ ಹೋಗಿ ತೆಕ್ಕೆ ಬೀಳಬೇಕೆಂದನಿಸಿರಲಿಲ್ಲ, ಆದರೆ ಅದೇ ಸಮಯಕ್ಕೆ ಸೂರ್ಯನ ಕೆಲಸ ಅಮೆರಿಕಾದಲ್ಲಿ ಒಂದು ವರ್ಷದ ಕಾಂಟ್ರಾಕ್ಟ್ ಮೇಲಾಗಿತ್ತು,ಅವನನ್ನ ಕಳಿಸಿ , ಮನೆಗೆ ಮೊದಲ ಬಾರಿ ಹೊರಟು ನಿಂತಾಗ, ಅಮ್ಮನ ನೋಡುವ ಕಾತರವಿತ್ತು, ಅದೇ ಕಾತರದಲ್ಲೆ ಬಂದವಳಿಗೆ ಸಿಕ್ಕಿದ್ದು ನಿಸ್ತೇಜ ಅಮ್ಮ, ಸಣ್ಣ ದನಿಯಲ್ಲಿ ವಿಚಾರಿಸಿದ್ದಳು " ಅಂತು ಬಂದ್ಯಲ್ಲ, ಎಷ್ಟ್ವರ್ಷಾತೆ ನಿನ್ ಮದ್ವೆ ಆಗಿ? ಸ್ವಾತಿ ಬಸುರಿಯಡ, ನಿಂಗೆ ಇನ್ನು ಸುದ್ದಿ ಇಲ್ಲೆ, ಚೆಕ್ ಮಾಡ್ಸಕ್ಕಾಯಿತ್ತು, ಅವ ಚೆನಾಗಿದ್ನ ನಿನ್ನತ್ರ, ಮನೆ ತಗಳ್ಳಲ ಇನ್ನೂ? ಸ್ವಾತಿಯವು ಬೆಂಗಳೂರಲಿ ಮನೆ ತಗಂಡ್ವಡ, ಎಂಗೊತ್ತಿಲ್ಯಪ, ನಿಮ್ ಚಿಕ್ಕಿ ಹೋಗಿತ್ತು ಹಂಗಾಗಿ ಹೇಳ್ದಿ, ಅಷ್ಟೇ " ಅಂತೆಲ್ಲ ತನಿಖೆ ಶುರು ಮಾಡಿದಾಗ ಎಷ್ಟು ಮನಸ್ಸಿಗೆ ನಿರಾಸೆಯಾಗಿತ್ತು, ಮನೆಗೆ ತಂದ ಫ್ರಿಜ್ಜು ವಾಶಿಂಗ್ ಮಷೀನು, ಮಿಕ್ಸಿ ಎಲ್ಲ ತೋರಿಸಿ ಅದೆಲ್ಲ ಸ್ವಾತಿಯೆ ಕೊಟ್ಟದ್ದು ಅಂದಾಗ ಇನ್ನು ಒಂಥರಾ ಅನಿಸಿತ್ತು ತನಗೆ, ಹೌದು ಸೂರ್ಯ ತಾನು ದೇಶ ಸುತ್ತಿದ್ದೆವು, ಇಬ್ಬರು ಮಗುವಿನ ಬಗ್ಗೆ ಯೋಚಿಸಿರಲಿಲ್ಲ, ಅದಕ್ಕೆ ಸರಿಯಾಗಿ ದೋಷಗಳೆ ಇಲ್ಲದಿದ್ದರು ಮಕ್ಕಳಾಗಿರಲಿಲ್ಲ, ಮನೆಯ ಬಗ್ಗೆ ಇಬ್ಬರಿಗೂ ಅಂತಹ ವ್ಯಾಮೋಹ ಇರಲಿಲ್ಲ" ಆಗ ಕಾಲಕ್ಕೆ ಆಗ್ತು ಬಿಡು ಪುಟ್ಟಿ, ಅಮ್ಮನ್ ಮಾತು ಮನಸಿಗೆ ತಗಳಡ" ಅಂದ ಅಪ್ಪನನ್ನ ಅಪ್ಪಿ ಅತ್ತಿದ್ದೆ ತಾನು, ಅಮ್ಮನಿಗೆ ಅಷ್ಟು ಸೂಕ್ಷ್ಮ ಇಲ್ಲದೆ ಹೋಯಿತೆ? ಯಾಕೆ ಹೀಗೆ ಈ ಅಮ್ಮ? ತನಗೆ ಅರ್ಥವೆ ಆಗಿರಲಿಲ್ಲ, ಮತ್ತೆ ಹೋಗುವದಕ್ಕು ಮನಸಾಗಲಿಲ್ಲ ತನಗೆ ಅದಾಗಿ ಒಂದೇ ವರ್ಷಕ್ಕೆ ಅಮ್ಮ ಮೂಳೆ ಸವೆತಕ್ಕೊಳಗಾಗಿ ಹಾಸಿಗೆ ಹಿಡಿದ ಸುದ್ದಿ ಕೇಳಿ ಓಡಿ ಬಂದಿದ್ದೆ ತಾನು ಸೂರ್ಯ ನೊಂದಿಗೆ, ಉಳಿಸಿಕೊಳ್ಳಲಾಗಲೆ ಇಲ್ಲ, ಅವಳ ಕೊನೆಯ ಮಾತುಗಳು ಇನ್ನೂ ಕಿವಿಯಲ್ಲಿ ಸುತ್ತುತ್ತಿವೆ"ಮಕ್ಕಳು ಬೇಕೆ ಬೇಕು ಕೂಸೆ, ನಿಂಗಕ್ಕಾಗ್ಲೆ ಅಂದ್ರೆ ದತ್ತು ತಗಳಿ, ಜಿತುಗೆ ಒಳ್ಳೆ ಅವ ಇಷ್ಟ ಪಡ ಹುಡ್ಗಿನೆ ಮದ್ವೆ ಮಾಡಿ, ಎಂತಕ್ಕು ಯೋಚನೆ ಮಾಡಡ, ಎರಡೆಳೆ ಸರ ನಿಂಗೆ ಮತ್ತೆ ಬರ ಸೊಸೆಕೂಸಿಗೆ ಮಾಡ್ಸಿದ್ದಿ, ಇನ್ನು ಆನು ಉಳಿತ್ನಲ್ಲೆ, ಎಂಗೆ ಗೊತ್ತಾಯ್ದು, ಹಾ, ನಿಂಗೊಂದು ವಿಷಯ ಹೇಳಕ್ಕು, ನೀನು ಹುಟ್ಟಿದ್ದು ಒಳ್ಳುಕಲ್ಲು ಪೂಜೆ ದಿನ, "ಗಳೆಗೆಮಟ್ಟಿ" ಗೆ ಪ್ರತಿ ವರ್ಷ ದೀಪಾವಳಿ ಪೂಜೆ ತಪ್ಸಡ, ಒಳ್ಳೆದಾಗ್ತು" ಅದಾಗಿ ನಾಲ್ಕೆ ದಿನಕ್ಕೆ ತವರು ಖಾಲಿಯಾಗಿತ್ತು, ದುಃಖ ಹೊತ್ತ ಹಿತ್ತಿಲ ತುಂಬೆಲ್ಲ ಅಮ್ಮನೆ ಇದ್ದಾಳೆ ಎನಿಸಿಬಿಟ್ಟಿತ್ತು, ಈ ಮಾತಿಗೀಗ ಎರಡನೆ ವರ್ಷ, ಭೂಮಿ ಹುಣ್ಣಿಮೆ ದಿನ ಅಮ್ಮ ದೂರವಾಗಿದ್ದು, ದೀಪಾವಳಿ ಅಲ್ಲಿಂದ ಬರೀ ಎರಡು ವಾರಕ್ಕಿಂತ ಕಮ್ಮಿ ದಿನಗಳು, ಇವತ್ತು ತಾನಿಲ್ಲಿ ಅವಳ ಜಾಗದಲಿ ಕೂತು ಅವಳಂತಾಗದ ಮನಸ್ಥಿತಿಯಲ್ಲಿ ಪೂಜೆಗೆ ಅಣಿ ಮಾಡುತ್ತಿದ್ದೇನೆ ಎಂತ ಕಾಲ, ಯಾವುದನ್ನು ಬದಲಾಯಿಸಿಬಿಡುತ್ತದೆ, " ಅಂದುಕೊಂಡಳು ನಕ್ಷತ್ರ, ಹಬ್ಬದ ಸಡಗರ ಗಳಿಗೆ ಮಟ್ಟಿಯ ಪೂಜೆ ಮಾಡಿ ಬಲಿರಾಯನನ್ನು ರಾತ್ರಿ ದೀಪಗಳ ಮೆರವಣಿಗೆಯಲ್ಲಿ ಕಳಿಸಿಕೊಟ್ಟು ಮುಗಿಯಿತು, ಮರುದಿನ ಹಾಯಾಗಿ ಕಾಲುಚಾಚಿ ಎಲ್ಲ ಜಗಲಿಕಟ್ಟೆಯ ಮೇಲೆ ಕೂತಾಗ
ನಕ್ಷತ್ರ ನುಡಿದಳು"ಅಪ್ಪ, ಎರಡು ವಿಷಯ ಮಾತಾಡಕ್ಕು,ಈಗ ಮಾತಾಡಲಡ್ಯಿಲ್ಲ್ಯ?" ಅಪ್ಪ ಮುಗುಳ್ನಕ್ಕು ನುಡಿದರು"ಮದಲ್ನೆ ವಿಷ್ಯ ಎಂಗೊತ್ತಾಯ್ದು, ಎರಡನೆದು ಹೇಳು" ನಾಚಿಗೆಯ ತೆರೆಯಲ್ಲಿ "ಹು ನಂಗೆ ನಾಕು ತಿಂಗಳು ಈಗ , ಅಪ್ಪ, ಜಿತು ಮದ್ವೆಯಾಗಿದ್ರೆ ಈ ಮನೆಗೊಂದು ದಿಕ್ಕಾಗ್ತಿತ್ತು, ನಂಗವು ಇಲ್ಲೆ ಅರಿಶಿನಗೇರಿಲಿ ತೋಟ ಮನೆ ತಗತ್ಯ, ನಿಂಗೆ ಹತ್ರ ಇದ್ದಾಂಗಾತು ಹೇಳಿ ಸೂರ್ಯ ಅವರಪ್ಪ ಅಮ್ಮ ಎಲ್ಲ ತೀರ್ಮಾನ ತಗೈಂದ, ಇನ್ನು ಒಂದ್ವಿಷ್ಯ ಇದ್ದು, ಎನ್ನ ಮನೆಯವರ ಆಫೀಸು ಗೆಳೆಯನ ಮಗಳು ಒಂದಿದ್ದು, ಅದಕ್ಕೆ ಹಳ್ಳಿ ಜೀವನವೆ ಬೇಕಡ, ಜಿತುಗೆ ಮುವತ್ತೆರಡು ಅದಕ್ಕೆ ಇಪ್ಪತ್ತೇಳಾತು, ಜಾತಿ ಸಲ್ಪ ಬೇರೆದೆ ಆಗ್ತು ಆದ್ರೆ ಹುಡ್ಗಿ ಒಳ್ಳೆದೆ, ಹೆಂಗು ನಮ್ಮನೆ ಅಪ್ಪಿ ಇಲ್ಲೆ ಕೆಲಸ , ಒಳ್ಳೆ ಜೋಡಿ, ಒಬ್ಬರನ್ನೊಬ್ಬರು ಇಷ್ಟ ಪಟ್ಟಿದ್ದ, ನೀ ಹೂ ಅಂದ್ರೆ ಕರ್ಕಬತ್ತಿ ಮುಂದಿನ್ವಾರ" ಅಪ್ಪನ ಕಣ್ಣು ಪಸೆಗಟ್ಟಿತು ಅನಿಸಿತಾ? "ಆಗ್ಲಿ, ಹೆಣ್ಣು ಗಂಡು ಒಪ್ಪಿದ್ದ ಅಂದ್ಮೇಲೆ ನಂದೇನಿದ್ದು, ಕೂತ್ಕ ಬಾ ಇಲ್ಲಿ" ಅಂದ ಅಪ್ಪನ ಪಕ್ಕ ಕೂತಳು ನಕ್ಷತ್ರ, ಅಪ್ಪನ ಕೈ ಮಗಳ ತಲೆ ಸವರುತ್ತಿತ್ತು, ಮಗ್ಳೆ ಹೆಣ್ಮಕ್ಕಳು ಹೃದಯ ಒಳ್ಳುಕಲ್ಲು ಇದ್ದಂಗೆ, ನಾವೇನ್ ಪದಾರ್ಥ ಹಾಕ್ತು ಅದನ್ನ ತಿರುಳು ಸಮೇತ ಅರೆದು ರುಚಿಯಾಗಿ ಮಾಡ್ತ ಬದುಕನ್ನ, ನೀನು ನಿನ್ನಮ್ಮನ ತರ ದ್ವಂದದಲ್ಲಿ ಬದುಕ್ಲೆ, ನನ್ ತರ ಎಲ್ಲದನ್ನು ಒಪ್ಕ್ಕ್ಯಂಡು ಬದುಕ್ಲೆ, ಜೀವ್ನ ಅಂದಮೇಲೆ ಎಲ್ಲದು ಇರ್ತು, ನಿನ್ನ ಚಿಕಪ್ಪದಿಕ್ಕಳು ಇವತ್ತು ಬತ್ವಡ ಊಟಕ್ಕೆ, ರೆಡಿ ಮಾಡನ ಏಳು, ಸೂರ್ಯನ್ನ ಕರಿ, ಪೂಜೆ ಮಾಡ್ಲಿ ಅವ, ಆ ಕಾಲಕ್ಕೆ ಆ ನಿಯಮಗಳು ಈ ಕಾಲಕ್ಕೆ ಇದೆ ಸತ್ಯ, ಹತ್ತು ವರುಷಕ್ಕೊಂದ್ಸಾರಿ ಸಮಾಜದ ಕಟ್ಟಳೆ ಎಲ್ಲ ಅಷ್ಟಷ್ಟು ಬದಲಾಗ್ತಾ ಹೋಗ್ತು, ಹೊಸದೆಷ್ಟೆ ಬಂದರು ಹಳತು ಚೂರುಪಾರು ಇರವು, ಅವಾಗ್ಲೆ ಚೆನ್ನ " ಅಂತ ಮುಗುಳ್ನಕ್ಕ ಅಪ್ಪನ ಕಣ್ಣಲ್ಲಿ ಅಮ್ಮನ ಹೊಸ ಅವತಾರ ಕಂಡು ಕಣ್ಣು ತುಂಬಿತು ನಕ್ಷತ್ರ ಳಿಗೆ
ಬಯಲ ಬೇಲಿಯ ದಾಟಿ ಮಲ್ಲಿಗೆಯ ಕಂಪು ಮನದ ಬೇಲಿಯ ದಾಟಿತು ಮಂದಾರದ ನುಣುಪು, ಬದುಕ ಹಾಡು ಮಲ್ಲಿಗೆ,ಬಯಕೆ ಹಾಡು ಮಂದಾರ!!!
Thursday, December 15, 2016
ಬದುಕೆಂಬ ಬೀಸುಗಲ್ಲು
Subscribe to:
Posts (Atom)