"ಆ ಪುಟ್ಟ ಕಿಟಕಿ, ಪುಟ್ಟ ಕಿಟಕಿಯಲ್ಲಿ ಅದೆಷ್ಟು ವಿಶಾಲ ಬಾನು ತುರುಕಿಸಲಾದೀತು? ತೀರಾ ನೀಲಿ ಅಷ್ಟೇ ಕಾಣಿಸುವ ರಾತ್ರಿಯಲ್ಲಿ ದೂರ ತಾರೆಗಳು ಮಸುಕಾಗಿ ಹೊಳೆವಷ್ಟೇ ಜಾಗ, ಅದೇ ಹಸಿರು, ಅದೇ ಪಕ್ಕದ ಮನೆಯ ಕಿಟಕಿ ಅದೇ ವಾಹನಗಳ ಶಬ್ದ. ಹೊರ ನೆಟ್ಟ ಎರಡು ಕಣ್ಣುಗಳು ಮನೆಯಿಡೀ ಸುತ್ತಾಡಿ ಮತ್ತೆ ಬಂದು ಅದೇ ಕಿಟಕಿಯಲ್ಲಿ ಹಣುಕುತ್ತವೆ , ಹೊರಗಿನ ಜಗತ್ತಿಗೆ ಮೈಯಾಗುತ್ತವೆ,ಮಧ್ಯಾಹ್ನ ೨ ಗಂಟೆಯ ತನಕ ಬೇರೆ ಕೆಲಸವೇ ಇಲ್ಲ ಅನ್ನುವ ಹಾಗೆ , ೨ ರ ನಂತರ ಗೇಟಿನ ಶಬ್ದ, ಕಣ್ಣಲ್ಲೊಂದು ದೀಪ ಸೆರಗು ಹೊದ್ದು ಓಡಾಡುವುದು, ಆಗೀಗ ಸದ್ದು ಕೇಳುವುದು , ಮತ್ತೆ ಸ್ವಲ್ಪ ಹೊತ್ತಿನ ನಂತರ ಹೊರಗೆ ಗೇಟಿನ ಶಬ್ದ, ಮತ್ತದೇ ಮೌನ, ನಾಲ್ಕು ಗಂಟೆಗೆ ಪಕ್ಕದ ಬಿಲ್ಡಿಂಗಿನಲ್ಲಿ ಗಲಾಟೆ, ಕಣ್ಣುಗಳು ಮತ್ತಷ್ಟು ದೂರ ಹಿಗ್ಗಿ ನೋಡಲು ಪ್ರಯತ್ನಿಸುತ್ತಿವೆ, ಹೌದು ಪಕ್ಕದ ಮನೆಗೆ ಯಾವುದೋ ಬಾಡಿಗೆಯವರು ಬಂದಿರಬೇಕು. ಸ್ವಲ್ಪ ಹೊತ್ತಿಗೆಲ್ಲ ಸದ್ದು ಕಮ್ಮಿಯಾಗುವುದು , ಪಕ್ಕದ ಮನೆಯ ಕಿಟಕಿ ದೊಡ್ಡದಾಗಿ ತೆರೆಯುತ್ತಲಿದೆ, ಅಲ್ಲೆರಡು ಜೋಡಿ ಕಣ್ಣುಗಳು , ಬಹುಶಃ ಈ ಕಣ್ಣುಗಳಿಗೆ ಸಂಕೋಚವೇ, ಕಿಟಕಿ ತುಸು ಓರೆಯಾಯಿತು, ಮರುದಿನ ಒಂಬತ್ತಕ್ಕೆಲ್ಲ ಮತ್ತೆ ತೆರೆದ ಕಿಟಕಿ, ಮತ್ತದಕ್ಕೆ ಅಂಟಿದ ಕಣ್ಣುಗಳು , ಆ ಕಡೆಯ ಕಿಟಕಿಯಲ್ಲೂ ಎರಡು ಕಣ್ಣುಗಳು ಆದರೆ ಇವತ್ತು ಚೂರು ಬಾನು ಕಣ್ಣಲ್ಲೂ ಮಿನುಗಿತ್ತಾ? ನೀಲಿ ಕಣ್ಣುಗಳೆರಡೂ ದಿಟ್ಟಿಸುತ್ತವೆ, ಆ ಕಿಡಕಿಯಲ್ಲಿ ಕಣ್ಣು ಅರಳುತ್ತದೆ, ದಿನ ಕಳೆದಂತೆಲ್ಲ ಅದೇನು ಸಂಭಾಷಣೆ , ಮೌನದಲ್ಲಿ ಕಳೆದು ಹೋಗುತ್ತಿದ್ದ ಮಧ್ಯಾಹ್ನಗಳಲ್ಲಿ ಈಗ ಸಂಗೀತ , ಕಣ್ಣುಗಳೋ ರಾತ್ರಿ ತಾರೆಗಳನ್ನು ಕದ್ದು ಕೆಡಗಿಕೊಂಡಂತೆ ಹೊಳೆಯುತ್ತವೆ, ನಿರೀಕ್ಷೆಯಲ್ಲಿ, ಬಹುಶಃ ಗಂಟೆಗಳು ನಿಮಿಷಗಳಾಗಿ.
ಬಹಳ ದಿನಗಳ ನಂತರ ಮತ್ತೆ ಕಿಟಕಿಯಲ್ಲಿ ಅವೇ ಎರಡು ಕಣ್ಣುಗಳು . ಪಕ್ಕದ ಮನೆಯ ಕಿಟಕಿಗಳು ಮುಚ್ಚಿವೆ ಹೊರಗೆಲ್ಲ ಚೂರೇ ಚೂರು ಕಾಣಿಸುತ್ತಿದ್ದ ನೀಲಿ ಬಾನು, ರಾತ್ರಿಯ ಚುಕ್ಕಿ ಚಂದ್ರಮರು ಈಗ ಕಾಣಿಸುವುದಿಲ್ಲ, ಅಲ್ಲಿ ಮತ್ತೊಂದು ಮಹಡಿ ಏಳುತ್ತಿದೆ. ಬರಿ ಧೂಳು , ಶಬ್ದ ಅಷ್ಟೇ, ಕಿಟಕಿಯಲ್ಲಿನ ಕಣ್ಣುಗಳು ಕಂಬನಿಯಲ್ಲಿ ತೊಳೆಯುತ್ತಿವೆ, ಧೂಳಿಗೋ "
ಬರೆದಿಟ್ಟು ಪುಸ್ತಕ ಮುಚ್ಚಿದೆ...ಬೆಳಗ್ಗೆ ನಾಲ್ಕರ ಮುಂಜಾವು...ಎದುರಿನ ಮನೆಯ ದೊಡ್ಡ ಜಾಗದಲ್ಲಿ ಇರುವ ಐದು ಮರಗಳಲ್ಲಿ ಹಳದಿ ನೇರಳೆ ಗುಲಾಬಿ ಬಣ್ಣದ ಹೂಗಳು ಮಂದ ಬೀದಿ ದೀಪದ ಬೆಳಕಿನಲ್ಲಿ ನಿತ್ಯ ದರ್ಶನ...ಇದು ಗೇಟ್‌ವೇ ಕಮ್ಯೂನಿಟಿ, ನಮ್ಮ ಮನೆಯ ಪಕ್ಕದ್ದು ಎರಡು ದೊಡ್ಡ ಸೈಟ್ ಅಲ್ಲಿ ಕಟ್ಟಿದ ಮನೆ...ದೊಡ್ಡ ಲಾನ್, ಮರಗಳು ರಸ್ತೆಯ ಬದಿಗೆ, ನಮ್ಮ ಮನೆಯ ಮಹಡಿಯ ಕೋಣೆಯ ಕಿಟಕಿಯಿಂದ ಈ ಹತ್ತು ವರ್ಷ ಅದೇ ದೃಶ್ಯ...
ಬೆಳಗ್ಗೆ ಐದಕ್ಕೆ ಅವರ ಮನೆಯ ಬಾಗಿಲು ತೆರೆಯುತ್ತದೆ.ಕೆಲಸದವಳು ಗುಡಿಸಿ ರಂಗವಲ್ಲಿ ಹಾಕಿ ಒಳಹೋಗುತ್ತಾಳೆ.ನಂತರ ಲಾನಿನ ಪಕ್ಕದ ರೂಮ್ ಗಾಜಿನಲ್ಲಿ ಗಂಡ ಹೆಂಡತಿ ಇಬ್ಬರೂ ಜಿಮ್ ಮಾಡುತ್ತಿರುವುದು ಕಾಣಿಸುತ್ತದೆ.ಮೊದಮೊದಲು ನನಗೆ ವಿಶೇಷ ಅನ್ನಿಸಿದ್ದು, ಅಲ್ಲಿರುವ ಅಷ್ಟು ಹೊತ್ತು ಇಬ್ಬರೂ ಅಪ್ಪಿತಪ್ಪಿ ಕೂಡ ಒಂದು ಮಾತಾಡುತ್ತಿರಲಿಲ್ಲ.ತೀರಾ ಸಹಜ ದೃಶ್ಯ ಆದ್ದರಿಂದ ಇತ್ತೀಚೆಗೆ ನಾನು ಧೀರ್ಘ ಓದಿನಲ್ಲಿ ಮುಳುಗಿಹೋಗುತ್ತಿದ್ದೆ.ಅದೇ ದೃಶ್ಯಗಳನ್ನು ನೋಡಿ ಅದರಲ್ಲಿ ಏನೂ ಸ್ವಾರಸ್ಯ ಇಲ್ಲ ಅಂತ ಅನಿಸುತ್ತಿತ್ತು...
ಎಂಟು ಗಂಟೆ ಆಗುವುದಕ್ಕಿಲ್ಲ ಸರಿಯಾಗಿ ನಾನು ಸ್ನಾನಕ್ಕೆ ಹೊರಡುವ ಹೊತ್ತು, ಗಂಡ ಲ್ಯಾಪ್‌ಟಾಪ್ ಬ್ಯಾಗ್ ಹಿಡಿದು ಬರುತ್ತಿದ್ದ, ಅವಳು ಹಿಂದೆಯೇ ಬಂದು ಟಾಟಾ ಮಾಡುತ್ತಿದ್ದಳು, ಜೊತೆಗೆ ಗಂಡ ಇವಳಿಗೊಂದು ಮುತ್ತು ಕೊಟ್ಟರೆ ವಾಪಸು ಇವಳೊಂದು ಕೊಡುತ್ತಿದ್ದಳು.ಈ ದೃಶ್ಯ ನನಗೆ ವೈಯಕ್ತಿಕವಾಗಿ ಅಪ್ಯಾಯಮಾನ.ಎಲ್ಲವೂ ಸರಿಯಿದೆ ಆ ಮನೆಯಲ್ಲಿ ಎಂಬುದರ ಸೂಚಕ.ನಾನು ನನ್ನ ಗೆಳೆಯರೊಂದಿಗೆ ಸಂಜೆ ವಾಕಿಂಗ್ ಮುಗಿಸಿ ಬರುವಾಗ, ಪಕ್ಕದ ಮನೆಯವನ ಕಾರು ಮನೆ ಎದಿರು ಜೋರು ಹಾರ್ನ್ ಹಾಕುತ್ತಿರುತ್ತದೆ.ಸಮಯವೆಂದರೆಸಮಯ.
ಕಮ್ಯೂನಿಟಿಯ ಯಾರೂ ಜಾಸ್ತಿ ಅವರ ಮನೆಗೆ ಹೋಗುವುದಿಲ್ಲ, ಮೊನ್ನೆ ನಮ್ಮ ಸಂಘದ ಚುನಾವಣೆಯಲ್ಲಿ ಸೆಕ್ರೆಟರಿ ಹುದ್ದೆಗೆ ಸ್ಪರ್ಧಿಸಿ ಅಂತ ಕೇಳಲು ಅವನ ಮನೆಗೆ ಹೋಗಿದ್ದಾಗ ಕೆಲಸದವನನ್ನು ಕಳಿಸಿ ಬ್ಯುಸಿ ಅಂತ ಹೇಳಿಕಳಿಸಿದನಂತೆ. ವಿಚಿತ್ರ ಅನಿಸಿತ್ತು ನನಗೆ. ನಾನೊ, ಹರೆಯದಲ್ಲಿ ಹೆಂಡತಿಯನ್ನು ಕಳೆದುಕೊಂಡ ವಿದುರ. ಮನೆಯಲ್ಲಿ ಇದ್ದೊಬ್ಬ ಮಗ ವಿದೇಶ ವಾಸಿ.ಓದು ತಿರುಗಾಟದ ಹುಚ್ಚು ನನ್ನ ಒಂದೇ ಕಡೆ ಕಟ್ಟಿ ಹಾಕಲು ಸಮರ್ಥವಾಗಿರಲಿಲ್ಲ.ಆದರೂ ಕೊನೆಗೆ ನನ್ನನ್ನೇ ಸೆಕ್ರೆಟರಿ ಅಂತ ಆರಿಸಿದ್ದರು.ಅವತ್ತು ಗೆಟ್ ಟುಗೆದರ್ ಗೆ ಕರೆಯಲು ಅವರ ಮನೆಗೆ ಹೋಗಿದ್ದೆ. ಮಾತುಕತೆಯ ನಡುವೆ ಅವನ ಹೆಂಡತಿ ಕೂಡ ಬಂದು ಸೇರಿಕೊಂಡಳು. ನೋಡಲು ಸುಂದರವಾದ ಜೋಡಿ. ಅರ್ಧ ಗಂಟೆ ಹರಟಿ ನಾನು ಹೊರಟಾಗ ಆತ'ಮತ್ತೊಮ್ಮೆ ಬನ್ನಿ'ಅಂತ ಔಪಚಾರಿಕವಾಗಿ ಆಹ್ವಾನಿಸಿದ.ಮನೆಯ ಬಾಗಿಲಿಗೆ ಬಂದು ಬರುತ್ತೇನೆ ಅಂತ ನೋಡಿದೆ.. ಅವನ ಹೆಂಡತಿಯ ಕಣ್ಣುಗಳಲ್ಲಿ ಏನೋ ನೋವಿದ್ದಂತೆ ಅನಿಸಿತು ಒಂದು ಕ್ಷಣ, ಆಕೆ ಕಣ್ಣು ತಪ್ಪಿಸಿ ಒಳ ಹೋದಳು.