Thursday, September 19, 2019

ಸಾವಿ ನೊಂದಿಗೆ ಮುಖಾಮುಖಿ

ಸಾವಿನ ಮನೆಯಲ್ಲಿ ಸೂತಕ, ನನಗೆ ಈ ಲೋಕವನ್ನ ಬಿಟ್ಟು ಹೋದವರ ಬಗ್ಗೆ ದುಃಖವಾಗುವುದಿಲ್ಲ, ಅವರು ಪ್ರಯಾಣ ಮುಂದುವರೆಸುವರು ಅನ್ನುವ ದಿವ್ಯ ನಂಬಿಕೆ ಇರುತ್ತದೆ, ಆದರೆ ಇಲ್ಲಿ ಅವರ ಅನುಪಸ್ಥಿತಿಯಲ್ಲಿ ನಿತ್ಯವೂ ಹಲವಾರು ಬಾರಿ ಸಾವನ್ನಪ್ಪುವ ಜೀವಗಳಿಗೆ ನನ್ನ ದುಃಖ ಸಾಂತ್ವನ ಸಲ್ಲುತ್ತದೆ...ಅವರ ಕಣ್ಣೀರಿಗೆ ನನ್ನ ಕಣ್ಣ ಹನಿ ಸೇರುತ್ತದೆ..ಆದರೂ ಬದುಕೇ...ನೀನು ನಾಳೆ ಮತ್ತು ಇವತ್ತುಗಳ ನಡುವೆ ಮರೆವಿನ ಕೊಂಡಿಯೊಂದನ್ನು ಇಟ್ಟು ಕಳಚುವ ಜಾಣ ಕಾಲನ ವಶವರ್ತಿ....ಮತ್ತೆ ವಸಂತ ಬಂದೆ ಬರುವ...ಯಾವ ರೂಪದಲ್ಲಾದರೂ...ಸಮಸ್ಥಿತಿಯನ್ನು ಕಾಯ್ದುಕೊಳ್ಳುವ ತಾಳ್ಮೆಯೊಂದಿರಬೇಕು ಅಷ್ಟೇ

ಕೊಂಡಿ ಎರಡು

ಜೀವನದಲ್ಲಿ ಒಮ್ಮೆಯಾದರೂ ಶವಸಂಸ್ಕಾರ ನೋಡಬೇಕು,ನಾವು ಅಷ್ಟೆಲ್ಲ ಪ್ರೀತಿಸಿದ ಜೀವವೊಂದು ಹಿಡಿ ಬೂದಿಯಾಗಿ ಹೋಗುವಾಗ
ನಮ್ಮ ದೇವರು ದೆವ್ವ ಇತ್ಯಾದಿ ನಂಬಿಕೆಗಳೆಲ್ಲ ಹುಡಿ ಹುಡಿಯಾಗಿ ಬೆಂಕಿಯ ಕಿಡಿಯಲ್ಲಿ ಕರಗಿ ಸುಟ್ಟು ಹೋಗುತ್ತದೆ. ತಪ್ಪು ಸರಿಗಳಿಗೆಲ್ಲ ಅರ್ಥವೇ ಇಲ್ಲದೆ ಜೀವನ ಬರಿದೆ ಖಾಲಿ ಪಾತ್ರೆಯಂತೆ ತೋಚುತ್ತದೆ. ನಮ್ಮ ಅಹಂಕಾರ ಅಭಿಮಾನಗಳೆಲ್ಲ, ಗಾಳಿಯಲ್ಲಿ ಬೆರೆತು, ಈ ದೇಹ ಕಡ ತಂದದ್ದು ಎನ್ನುವ ಅರಿವಿನ ಕಿಚ್ಚು ನಮ್ಮೊಳಗೆ ಜ್ವಲಿಸುತ್ತದೆ. ಇದೆಲ್ಲಾ ನಿಮಗಾಗಲಿಲ್ಲ ಅಂದರೆ ನೀವು ಸ್ಮಶಾನಕ್ಕೂ ಸಂಭ್ರಮಕ್ಕೂ ಅನರ್ಹರು.

ಪುಟ್ಟ ದೇವರು ಮತ್ತು ನಾನು

ಮಗ್ಗುಲಲ್ಲಿ ಮಲಗಿದ ಮುದ್ದಾದ ಹೂ, ಅಮ್ಮನ ಕೈ ಬೆರಳನ್ನ ಗಟ್ಟಿಯಾಗಿ ಹಿಡಿದು ಅವುಚಿಕೊಂಡಿದೆ ತನ್ನೆದೆಗೆ
ಹೊರಮನೆಯಲ್ಲಿ ಕ್ರಿಕೆಟ್ಟು ಹಾಕಿದ ಅಪ್ಪ  ಉದ್ವೇಗದಲ್ಲಿ ಗೊತ್ತಿಲ್ಲದೆ ಟಿವಿ ಶಬ್ದ ಜಾಸ್ತಿ ಮಾಡಿದ್ದಾನೆ, ಅಮ್ಮನಿಗೆ ಅಡಿಗೆ ಮನೆಯ ಸಿಂಕಿನಲ್ಲಿ ಬಿದ್ದ ಪಾತ್ರೆ, ಸ್ಟವ್ ಮೇಲೆ ಹರಡಿಕೊಂಡ ಕಸ, ಜೋಡಿಸಲು ಬಿದ್ದಿರುವ ಬಟ್ಟೆಗಳ ಧ್ಯಾನ
ನಿಧಾನಕ್ಕೆ ಉಪಾಯದಲ್ಲಿ ಕೈ ಬಿಡಿಸಿ ಹೊದಿಕೆ ಹೊಚ್ಚಿ ಮುದ್ದು ಮುಖ ನೋಡಿ ಅದರೊಡನೆ ಅವುಚಿಕೊಂಡು ಮಲಗುವ ಸುಖ ಅಲ್ಪಕಾಲಕ್ಕಾದರು ತಪ್ಪಿ ಹೋದ ಸಂಕಟಕ್ಕೆ ಮರುಗುತ್ತಾ ಎದ್ದು ಬಂದು ಸಿಂಕಿನಲ್ಲಿ ಬಿದ್ದ ಪಾತ್ರೆಗೆ ಕೈ ಹಾಕುತ್ತಾಳೆ
ಒಂದೈದು ನಿಮಿಷವಾಗಲಿಕ್ಕಿಲ್ಲ ಹಿಂದಿನಿಂದ ಪುಟ್ಟ ತೋಳು ಅಮ್ಮನ ಸೊಂಟದ ಸುತ್ತಲೂ ಬಾಚಿ ತಬ್ಬುತ್ತದೆ. "ಅಮ್ಮಾ, ನೀನ್ಯಾಕಮ್ಮಾ ಎದ್ದು ಹೋಗ್ತೀಯಾ, ಒಂದು ದಿನ ಪಾತ್ರೆ ಅಪ್ಪ ತೊಳಿಲಿ, ನಂಜೊತೆ ಮಲಗು ಪ್ಲೀಸ್" ಅಂತ ಗೋಗರೆವ ನಿದ್ದೆಗಣ್ಣುಗಳ ಮೋಡಿಗೆ ಒಳಗಾಗಿ ಆ ಮಾಯಕ್ಕಾರನ ಹಿಂದೆ ಕೀಲಿ ಕೊಟ್ಟ ಗೊಂಬೆಯ ತೆರದಿ ಅಮ್ಮ ಇದ್ದ ಬದ್ದ ಕೆಲಸವೆಲ್ಲ ಬಿಟ್ಟು ಹೋಗಿ ಮಲಗುತ್ತಾಳೆ...
ಸುಖವೊಂದು ಮುದ್ದು ನಗುವಿನ ರೂಪದಲ್ಲೀಗ ಮಂಚದ ಮೇಲೆ  ಬೆಳದಿಂಗಳ ಹಾಗೆ ಹೊದ್ದಿದೆ....
ಕೆಲಸ ಬೊಗಸೆ ಹಾಳುಬಿದ್ದುಹೋಗಲಿ... ಇದರ ಮುಂದೆ ಬೇರೇನಿಲ್ಲ
#ಅಮ್ಮತನವೆಂಬಖಾಸಗಿಸುಖ

ಈ ದಿನ ೧೯/೯/೧೯


"ಪುಟ್ಟ ಎಳೆ ಮಕ್ಕಳು ಮುದ್ದು ಮಾಡ್ತಾವಲ್ಲ, ಅವಾಗ ಕಣ್ಣು ತನ್ನಿಂತಾನೆ ಮುಚ್ಕೊಳುತ್ತೆ, ಹೊರಜಗತ್ತಿನ ಎಲ್ಲ ಸ್ಪರ್ಶಗಳು ಕಳಚಿಕೊಳ್ಳುತ್ತೆ, ಆ ಎಳೇ ಬೆರಳುಗಳು ಮುಖ ಸವರಿ ತೋಳುಗಳು ಕತ್ತಿನ ಸುತ್ತ ಬಿಗಿದ ಕ್ಷಣ, ಅದು ಬಂಧನವಲ್ಲ ಬಿಡುಗಡೆ ಅನ್ನಿಸ್ತಿರುತ್ತೆ, ಮುತ್ತಿಟ್ಟರಂತು ಆ ಎಳೇ ತುಟಿಗಳಿಂದ ಮಾಧುರ್ಯವೊಂದು ಹರಿದು ದೇಹವಿಡಿ ಹರಿದಾಡಿ, ಕ್ಷಣಕ್ಕಾದರು ಸರಿ ನಾವು ಲೋಕಾತೀತರು ಅನ್ನಸಿಬಿಡುತ್ತೆ, ದೇವರಿದ್ದಾನೆ ಅಂತ ನಂಬದಿದ್ದರು ಪರವಾಗಿಲ್ಲ, ಮಕ್ಕಳ ಸ್ಪರ್ಶ ಮಾತ್ರ ಸಪ್ತಲೋಕಗಳ ಮೀರಿಸೋದು ಸತ್ಯ,"
ಅಂತ ಮಾತಾಡ್ತಿದ್ದರೆ ಮಡಿಲ ಮಗುವಾಗಿ ಅವನು ತಾರೆಗಳತ್ತ ಬೆರಳು ತೋರುತ್ತಾ ಅಣಕಿಸಿದ, "ಸರೀ, ಇವತ್ತು ರಾತ್ರಿ ಅಲ್ಲಿಂದ ಅದನ್ನ ಕಿತ್ತು ನಿನ್ನ ಹೊಕ್ಕಳ ಹೂವಾಗಿಸುತ್ತೇನೆ"
ಸಣ್ಣಗೆ ಮುಗುಳ್ನಕ್ಕ ಸಂಜೆ ಸೆರಗನಡಿಯಲ್ಲಿ ಮರೆಯಾಯ್ತು!

ಸೀರಿಯಸ್ಸಾಗಿ ಚಂದರ ತಾರೆ ಚುಕ್ಕಿ ಅವನು ಅಂತೆಲ್ಲ ಬರಕೊಂಡು, ನನ್ನದೇ ಭಾವಲೋಕದಲ್ಲಿ ತೇಲಿಕೊಂಡು ಅವನನ್ನ ಮನಸ್ಸಿನ ತುಂಬಾ ತುಂಬಿಕೊಂಡು ಹುಚ್ಚಿ ತರಹ ಇರೋ ನನಗೆ, "ನಾರ್ಮಾಲಾಗಿರೋದು ಯಾವಾಗ?" ಅಂತ ಅವನು ಅಣಕಿಸ್ತಾ ಇರ್ತಾನೆ, ಹೌದಲ್ಲಾ? ನಾನು ಅಷ್ಟೊಂದು ಖಾಲಿ ಜೀವನ ಯಾವತ್ತು ಜೀವಿಸಿದ್ದೆ, ನನಗೆ ಮರೆತೇ ಹೋಗಿದೆ, ಸಾಲು ಸಾಲು ಆಘಾತಗಳು, ನೋವುಗಳು ಉದ್ವೇಗಗಳು ವಿಪರೀತ ಚಟುವಟಿಕೆ ಇದೆಲ್ಲಾ ಇವತ್ತಿಗೂ ನನ್ನ ಬದುಕು,
ಬಹುಶಃ ಅದನ್ನ ಮೀರಿದ ಏನೋ ಆತ್ಮಸಂತೋಷವೊಂದು ಇವುಗಳ ನಡುವೆಯೇ ನನ್ನ ಸಮತೋಲನದಲ್ಲಿಟ್ಟಿದೆ,ಅದನ್ನ ವಿವರಿಸಲಾರೆ. ಆದರೂ ಅವ ಅತಿಯಾದ ನೈಜತೆಯನ್ನು ಬದುಕುವವ. ಅವನಿಗೆ ಹೌದು ಎಂದರೆ ಹೌದು ಅಂತ ಹೇಳಲಿಕ್ಕೆ ಗೊತ್ತಷ್ಟೆ, ಬಣ್ಣ ಹಚ್ಚಲು ಬರುವುದಿಲ್ಲ, ಪ್ರೀತಿಸಲು ಅಷ್ಟೇ ಬಹುಶಃ ಪಾಮಾಣಿಕವಾಗಿ ಪ್ರೀತಿಸಬಹುದು, ಸುಳ್ಳು ಹೇಳಲು ಬರುವುದಿಲ್ಲ. ಮತ್ತು ಅವನು ನನ್ನ ನಾನಾಗಲಾರದ ಕನ್ನಡಿಯೊಂದನ್ನು ನನಗೆ ತೋರುತ್ತಾನೆ, ಹಾಗಾಗಿಯೇ ಎಲ್ಲ ಸಣ್ಣ ಪುಟ್ಟ ಮುನಿಸು ಜಗಳಗಳ ನಡುವೆ ಅವನು ನನ್ನಲ್ಲಿ ಜೀವಂತವಿದ್ದಾನೆ ನನ್ನ ಪ್ರತಿಬಿಂಬವಾಗಿ...ದೂರವಿದ್ದಷ್ಟೂ ಹತ್ತಿರವಾಗಿ


ಈ ಹಸಿವಿಗೆ ಮಾಪಕಗಳಿಲ್ಲ, ಹಸಿವೆ ಆಗುತ್ತಿಲ್ಲ ಎಂದರು ತಪ್ಪಾದೀತು
ಇದು ಹರಿವ ನದಿಯ ಅಲೆಗಳಲ್ಲಿ ಕುಣಿವ ಧ್ಯಾನದ ಸ್ಥಿತಿ
ಅದೇ ಅಕ್ಕ ಕದಳಿಯಲ್ಲಿ ಬಯಲಾಗುವ ಮುನ್ನ ಕಂಡಿರಾ ಕಂಡಿರಾ
ಎಂದು ಗೋಗರೆದು ಹುಡುಕಿದ ಸ್ಥಿತಿ
ನಾನೆನ್ನುವ ಮೈ ಅರಿವು ತಪ್ಪಿ ಹೋಗಿ ಎಲ್ಲೆಲ್ಲೂ ಅವನ ಬಿಂಬವೊಂದೇ ಕಾಣುವ ಸ್ಥಿತಿ
ಎಲ್ಲದರಲ್ಲೂ ಅವನು ನಾನಾಗಿ ನಾನು ಅವನಾಗಿ ಈ ಹಸಿವು ಜಾಸ್ತಿಯಾಯಿತೆ ಹೊರತು ಇಂಗಲಿಲ್ಲ
ಅಣುರೇಣು ತೃಣ ಕಾಷ್ಟಗಳಲ್ಲಿ ಅವನನ್ನೇ ಕಾಣುವಾಗ ಭುಂಜಿಸಲಿ ಏನನ್ನು?
ಅವನ ರೂಪ ನನ್ನದೇ ಆಗಿರುವಾಗ ಈ ಹಸಿವು ತಣಿಯಲು ಉಣ್ಣುವುದೇನನ್ನು?

ಅಮಾವಾಸ್ಯೆ ದಿನ ನನ್ನ ಜತೆ ಅವನು ಮಾತಾಡ್ಬಾರ್ದು ಅಂತ ಏನಾದ್ರೂ ನಿಯಮ ಇದ್ಯಾ? ನಮಗೆ ಕಾಲ ತಿಥಿಗಳ ಹಂಗಿಲ್ಲ...ಅವನ ಕಂದು ಕಣ್ಣುಗಳಲ್ಲಿ ಕಣ್ಣಿಟ್ಟ ಕ್ಷಣ  ತಿಂಗಳು ಎದೆಗಿಳಿಯುತ್ತದೆ, ಮಾಯದ ವೇಗದಲ್ಲಿ ಸಮಯ ನಮ್ಮಿಬ್ಬರನ್ನು ಈ ನಿಮ್ಮ ನಿಮ್ಮ ಅಂಗಡಿಮುಗ್ಗಟ್ಟುಗಳ  ಸವಾರಿ ಮಾಡಿಸುತ್ತದೆ. ನಾವು ಕೊಳ್ಳುಗರಲ್ಲ, ಈ ಸಂತೆಯಲ್ಲೂ ಕೈಹಿಡಿದು ನಗುವಿನೊಂದಿಗೆ ಹೃದಯ ವಿನಿಮಯ ಮಾಡಿಕೊಂಡವರು...ಅವನ ಹಿಂದೆ ಕೂತು ಬೆಚ್ಚಗೆ ಅಪ್ಪಿಕೊಂಡರೆ ಸವಾರಿ ಸೀದಾ ನಿಮ್ಮ ನಿಮ್ಮ ಕಲ್ಪನೆಯ ಸ್ವರ್ಗಕ್ಕೆ..ಅವ ಅರ್ಧ ಕುಡಿದ ಕಾಫಿಗೆ ನಾನು ತುಟಿಯಿಡುತ್ತೇನೆ ತಣ್ಣಗೆ ಅವ ಅಮೃತವನ್ನೆಲ್ಲ ತನ್ನ ಕಣ್ಣಲ್ಲೇ ಹೀರುತ್ತಾನೆ..ಮತ್ತು ಇದನ್ನೆಲ್ಲ ನೋಡುವ ಕೇಳುವ.ಹೊಟ್ಟೆ ಉರ್ಕೊಳ್ಳುವವರಿಗೆ ನಾವು ಜವಾಬ್ದಾರರಲ್ಲ

Tuesday, September 17, 2019

ಈ ದಿನ 17/9

1
ಪ್ರೇಮದಲ್ಲಿ
ಕೊಟ್ಟೆ ಅನ್ನುವುದು ಘಾತಕ
ನಿರೀಕ್ಷೆ ಮಹಾ ಪಾತಕ

ಬಾನಿಗೆ ಕೈ ಚಾಚಿ
ಚಂದಿರನ್ನ ಕರೆದು
ಬೆಳದಿಂಗಳ ಕಿರಣ ಹಿಡಿದು
ನಗುವ
ಮಗು
ಪ್ರೇಮ

ಶೂನ್ಯಕ್ಕೆ ಕೈ ಹಾಕಿ
ಬಾಚಿ ಬಾಚಿಕೊಂಡಮೇಲು
ಶೂನ್ಯವೆ ಆಗಿ ಉಳಿವುದು ಪ್ರೇಮ

ಎಲ್ಲ ಇದ್ದರೂ ಇಲ್ಲದಂತಿರುವುದು
ತುಂಬಿದ್ದರು ಖಾಲಿ ಇರುವುದು
ಭ್ರಮೆಗಳಾಚೆಗೊಂದು ನೋಟ ತೋರುವುದು
ಪ್ರೇಮ

ನಡೆದೇ ತೀರುವೆ ಅನ್ನುವ ಪಯಣಿಗನ
ಕಾಲಕೆಳ ಭೂಮಿಯಲ್ಲಿ
ಮುಳ್ಳಿನ ಮೇಲರಳುವ
ನಂಬಿಕೆಯ ಹೂ ಪ್ರೇಮ

ಮಗು

ಪ್ರೇಮ!😊

2

ಕರೆದು ತಾ...
ಕರಗಿ ಹೋದ ಈ ಕೆನ್ನೆಕೆಂಪು
ಆ ದಿನಗಳ ತಂಗಾಳಿ
ಹೆಜ್ಜೆ ಇಟ್ಟಲ್ಲೆಲ್ಲ ಅರಳುತ್ತಿದ್ದ ಮರುಳ ಹೂ

ಕರೆದು ತಾ
ಕನ್ನಡಿಯಲ್ಲಿ ಇಣುಕುತ್ತಿದ್ದ ನಾಚಿಕೆ
ಏನನ್ನೋ ಹುಡುಕುತ್ತಿದ್ದ ಹಂಬಲ
ಆ ಮೊದಲ ನೋಟದ ಕೆಣಕುವಿಕೆ
ಇಲ್ಲೆಲ್ಲೋ ಕಳಕೊಂಡ ಹಾಗಿದೆ
ಕಾಲನ ಕೈಯಲ್ಲಿ ಸಿಕ್ಕು ಈಗ ತೀರದ ನೋವಿದೆ

ಕರೆದು ತಾ
ಮತ್ತೆ ಆ ವಸಂತ, ವರುಷಗಳ  ನಡುವೆಯೆಲ್ಲೋ
ಕಳಚಿಕೊಂಡು ದೂರ ಸರಿದ
ಆಕರ್ಷಣೆ
ನಡುಗಾಲದ ತುಟಿಗಳಲ್ಲಿ ಬತ್ತಿದ ಮಕರಂದ
ಏನಿಲ್ಲದಿದ್ದರು ಎಲ್ಲವೂ ಇದ್ದಂತೆ ಭ್ರಮಿಸುತ್ತಿದ್ದ
ಹರೆಯಕ್ಕಷ್ಟೇ ಮೀಸಲಾದ ಆ ಅಂದ ಚಂದ

ಮರಳಿ ತಾ
ಇವನೇ...
ನಿನ್ನ ಬೆರಳುಗಳಲ್ಲಿ ಇರುವ ಕೊಳಲಿನಂದದಿ
ಮಧುರವಾಗಿ ನುಡಿದ ರಾಗ
ಆ ಮೊರೆವ ಪಿಸುನುಡಿಗಳ ಭೋರ್ಗರೆತ
ಮರೆತೇ ಹೋದಂತನಿಸಿದ ಶ್ರಾವಣದ ಕನಲಿಕೆ
ಈಗೇಕೋ ನಡುಕ ,ಸುಸ್ತು,  ದೂರ ತೀರದ ಬಳಲಿಕೆ
3
ಇಷ್ಟೇ ಪ್ರೀತಿ
ಅಂತ ಪಾಲು ಮಾಡಿ ಪ್ರೀತಿಸಬಹುದಾ?
ಕೇಳು ನದಿಯ ಪಾತ್ರಗಳ
ಕಡಲ ತೀರಗಳ
ಪದೇ ಪದೇ ಕಳಚಿಕೊಳ್ಳುವ ನೋವಿದ್ದರು
ಎದೆಗುಂದದೆ ಸುರಿವ ಮೋಡಗಳ
ತಲ್ಲಣಗಳ ರೆಪ್ಪೆಯಡಿಯಲ್ಲಿ ಬಚ್ಚಿಟ್ಟು
ಕ್ಷಣದಲ್ಲಿ ನಿನಗಾಗಿ ತುಂಟಿಯಾಗಿ ಬಿಡುವ ನಾನು
ಬತ್ತಿ ಹೋದರೂ ಸರಿಯೆ
ಹುಚ್ಚಾಗಿ ಹರಿದೇನು
ಆಗಸದ ಉಪಮೆಗಳ ಮೀರುವ ತನಕ!

4

ನೋಡೂ,
ಅವರು ನಡೆದ ದಾರಿ ಬೇರೆ
ತಿರುವುಗಳು ಬೇರೆ
ಮತ್ತು ಬೆಸೆದ ಬಂಧಗಳು ಬೇರೆ
ನೀನು ದಾರಿಬಿಟ್ಟವಳು
ಕರುಣೆಯಷ್ಟೆ ಕನ್ನಡಿಯನ್ನಾಗಿಸಿ
ಮುಖವಾಡಗಳ ಕಳಚಿಟ್ಟವಳು
ನಿನ್ನ ಒಳಗಿನ ಬೆಳಕಿಗೆ ನೀನೆ ಮರುಳಾಗುತ್ತಾ
ಕಂಬನಿಯ ಚಿಟ್ಟೆಗಳ ಸಿಂಗರಿಸಿ ಹೊಕ್ಕಳ ಘಮ ಸವರಿ
ಬಾನತ್ತ ತೂ......ರಿ ಬಿಟ್ಟವಳು
ಒಡೆದ ಮಡಿಕೆಯ ಮನಸೊಳಗೆ
ಅಮೃತದ ಬಿಂದು
ಹಾದು ಹೋದ ಹಾದಿಹೋಕರಿಗೆಲ್ಲ
ಅರಿವೇ ಆಗದಂತೆ ಆನಂದದ ಅನುಭೂತಿ ಇತ್ತವಳು,
ಹೆಣ್ಣೆ, ಹೀಗೇ ಇರು,
ಎತ್ತಣದ ಗಾಳಿಯು ನಿನ್ನ ಗತಿ ಬದಲಿಸದಿರಲಿ
ಚಿಟ್ಟೆಗೆ ದಾರಿಯ ಹಂಗಿಲ್ಲ ಕಣೇ!

5

ಈ ಜಗತ್ತಿನ ಸದ್ದು ಗದ್ದಲದ ನಡುವೆ
ದೊಡ್ಡದಾಗಿ ದನಿಯೆತ್ತಿ ದಣಿಯಬೇಡ
ನಿನ್ನ ಎದೆಯ ಬಡಿತದಷ್ಟೇ ಹಗುರವಾಗಿ
ನನ್ನ ಕೂಗು...

ಹಕ್ಕಿ ರೆಕ್ಕೆಯ ಪುಕ್ಕ ಕಳಚಿಕೊಂಡು
ಬಾನೆತ್ತರ ಈ ಧೂಮಹೋಮದ
ಗಡಿ ದಾಟಿ ಗಾಳಿಯಲ್ಲಿ ಮೆಲ್ಲಗೆ
ಮೇಲೇರುವಂತೆ
ನನ್ನ ಕೂಗು....

ಕವುಚಿಕೊಂಡ ಮೋಡ
ಬೆಟ್ಟದೊಡಲಿಗೆ ಸುರಿದು ತನ್ನೆಲ್ಲ ದುಃಖ
ಸದ್ದಿಲ್ಲದಂತೆ ಸರಿದು ಹೋಗುವ ತೆರದಿ
ನನ್ನ ಕೂಗು....

ಕೇಳಿಸದೇನೋ ಎನಬೇಡ
ನನ್ನೆದೆಯಲ್ಲಿ ನಿ ನೆಟ್ಟ ಪ್ರಣಯಬೀಜ
ಹೊಕ್ಕಳಲ್ಲಿ ಚಿಗುರಿ ನಿಡಿದಾಗಿ
ಮೈಮುರಿದು ಮೈತುಂಬ ಪುಲಕದ
ಹೂ ಅರಳುವಂತೆ
ನನ್ನ ಕೂಗು.....
-ಶಮ್ಮಿ