Monday, September 15, 2014

ಈ ಕಿಟಕಿ(published in Sakhi magazine)







ಮನೆಯೇ ಹಾಗೆ..ಮನೆಗಿಂತ ಚಂದದ್ದು ಕಿಟಕಿ , ವಿಶಾಲ  ಕಿಟಕಿಯ ಪಕ್ಕ ಕೂತರೆ ಸಾಕು ಜಗದ ಹಾದರಗಳೆಲ್ಲಾ ನಮ್ಮ ಕಣ್ಣೆದುರೇ ನಡೆಯೋ ಹಾಗೆ ..ನಾನದೆಷ್ಟು ಸಂಜೆಗಳ ಕಿಟಕಿಯ ಸಾಂಗತ್ಯದಲ್ಲಿ ಕಳೆದೆ ಲೆಕ್ಕವಿಲ್ಲ..ಕನ್ನಡಿಯೋಳಗಣ  ಬಿಂಬದ ಹಾಗೆ ಹಗಲು ರಾತ್ರಿಗಳು ದಿನ ತಿಂಗಳು ಕೊನೆಗೆ ವರ್ಷಗಳಾಗಿ !!

ಅದು ಮದುವೆಯಾದ ಹೊಸತು..ಬೆಳ್ ಬೆಳಗ್ಗೆ ಮಾಗಿಯ ಚಳಿಗಾಲದ ಸೂರ್ಯ ಚೆನ್ನಾಗಿರ್ತಾನೆ ಅಂತ ಅವನೇ ಬಿಸಿ ಬಿಸಿ ಕಾಫೀ ಮಾಡಿ ತರುತ್ತಿದ್ದ..ಒಂದೆ ಮಗ್ಗಿನಲ್ಲಿ ಕುಡಿಯುತ್ತಾ, ಕುಡಿಸುತ್ತಾ ಹಿಂದಿನಿಂದ ಬಿಗಿಯಾಗಿ ಅಪ್ಪಿ ಎದೆಗವಚಿಕೊಂಡು ಮುತ್ತಿಡುತ್ತಿದ್ದ... ಸ್ವರ್ಗವೊಂದೆ ಬಾಕಿ!! ಸೂರ್ಯ ಹುಟ್ಟುವ ಹೊತ್ತಿಗಾಗಲೇ ಎರಡು ಬಾರಿ ಬೆವರಿದ್ದಾಗಿರುತ್ತಿತ್ತು!! ಹಗಲಿಗಿಂತ ಮತ್ತು ನಶೆ ಸಂಜೆಗೆ! ಭಾನುವಾರವೊಂದು ಹಾಗೆ ಸಂಜೆಗಳಲ್ಲಿ ಇಳಿದು ಹೋಗುವ ನಶೆ ಬೇರೆಯೆ..ಪ್ರತಿ ವಾರದಲ್ಲೂ!!

ಕಿರಿಕಿರಿಗಳೇ ಇಲ್ಲದ ಬದುಕು ಕೂಡ ಆಷ್ಟು ಚನ್ನಾಗಿರೋಲ್ಲ, ಅಲ್ಲಿನ ಸಂಜೆಗಳ ಏಕತಾನತೆ ಸಾಗುವ ಬದುಕು ಎಲ್ಲಾ ಹಾಗಯೇ ನಿಂತ ಹಾಗಿದೆ ಅನ್ನಿಸೋಕೆ ಶುರುವಾದ ಕ್ಷಣ ಪುಸ್ತಕಗಳಿಗೆ ಮತ್ತೆ ಮೊರೆ ಹೋದೆ..ಪ್ಯಾಬ್ಲೊ ನೆರೂಡನ ಹೆಣ್ಣಿನ ದೇಹ ,ಸಿಲ್ವಿಯಾಳ ಸೆನ್ಷುಅಲ್ ಕವಿತೆಗಳು ಒಂದಷ್ಟು ಎದೆ ಹಗುರಾಗಿಸಿದವು...

ಇತ್ತೀಚೆಗೆ ಅವ ತುಂಬಾ ಲೇಟ್ ಆಗಿ ಬರುತ್ತಾನೆ ಅಥವಾ ಕುಡಿದು ಬರುತ್ತಾನೆ.. ಹೊರಗಡೆ ಮಳೆ ಮತ್ತೆ ಬೆಳದಿಂಗಳು...ಬದಲಾಗುತ್ತಿದೆ ಕಿಟಕಿಯಲ್ಲೂ ಋತುಗಳು...ನನಗೆ ನೆನಪಿದ್ದ ಹಳೆಯ ವಸಂತನಿಗ ಶಿಶಿರನ ಜತೆ ಜಗಳ...

ನಾನೂ ಅಷ್ಟಿಷ್ಟು ಕುಡಿದು ಅಭ್ಯಾಸವಿದ್ದವಳೇ..ನನ್ನ ಒಂಟಿತನ ಮತ್ತೆ ಕೆಂಪು ಕೆಂಪು ವೈನ್ ಜೊತೆಯಾದರು..ಕಿಟಕಿಯಲ್ಲಿನ ಸಂಜೆಗಳಿಗೆ....ನನ್ನ ಮಲಗಿದ್ದ ಹಳೆಯ ಗಿಟಾರು ಮತ್ತೆ ಹೊರ ಬಂದಿತು ..ಒಬ್ಬಳೇ ಎಲ್ಟೊನ್ ಜಾನ್ ಸೇ ಸೊ ಮಚ್ ತುಂಬಾ ಹೊತ್ತು ಬಾರಿಸುತ್ತಾ ಹಾಗೆಯೆ ಮಲಗಿರುತ್ತಿದ್ದೆ.ಬೆಳ್ಗಿನ ಕಿರಣ ಮೈ ಸೋಕುವವರೆಗೂ... ವಿಷಾದ ಹೊತ್ತ ಬೆಳಗಿಗಾದರೂ ಯಾಕೆ ಮತ್ತೆ ಜೀವದ ಇರುವನ್ನ ಸೂಚಿಸುವ ತವಕವೋ ನಾ ಕಾಣೆ...ಅವ ಬಂದದ್ದು ಗೊತ್ತಿಲ್ಲ..ಬಹುಶ: ಬರಲಿಲ್ಲ...

ನವಂಬರಿನ ಚಳಿ... ಅವತ್ತು ಸಲ್ಪ ಜಾಸ್ತಿಯೇ ಇತ್ತು...ಸಂಜೆಯ ಕೆಂಪು ಕಿರಣಗಳನ್ನ ತಿಂದು ಹಾಕುತ್ತಿರುವ ಮಂಜು...ಮನೆಯ ಬಾಗಿಲಲ್ಲಿ ಅಕ್ಕ!! ನನ್ನ ಮುಖದಲ್ಲಿ ಯಾವ ಭಾವವಿತ್ತೊ ನನಗೆ ಅರಿವಿಲ್ಲ...ಒಳ ಬಂದಳು
ಅವತ್ತು ರಾತ್ರಿ ಇಡೀ ಹಾಡು ಹಾಡು ಮತ್ತೆ ನಗು.. ಮಧ್ಯ ರಾತ್ರಿ ಇಡೀ ರಸ್ತೆಯ ತುಂಬಾ ತಡವರಿಸಿ ಓಡಾಡಿದೆವು..ಅಕೆಯೋ ಮಾತಿನ ಬುಗ್ಗೆ...ನಾ ನೋಡಿರದಿದ್ದ ಮುಖಗಳೆಲ್ಲ ನನ್ನ ಸಂಜೆಯ ಮೆಹಫಿಲ್ ಗೆ
ಹಾಜರಾಗತೊಡಗಿದವು.ಅಕ್ಕ ಇದ್ದ ಎರಡು ತಿಂಗಳು ಒಂದು ದಿನವೂ ನಾ ಕಿಟಕಿಯನ್ನ ಮತ್ತೆ ಪ್ರೀತಿಸದೆ ಹೋದೆ!!
ಇಂತಹ ಒಂದು ಮಂಜಿನ ರಾತ್ರಿ ಅಕ್ಕ ನನ್ನ ನೈಟ್ಔಟ್ ಹೋಗೋಣ ಎಂದು ಎಬ್ಬಿಸಿದಳು..ಚುಮು ಚುಮು ಚಳಿ ಹೊಸ ವರ್ಷದ ಆರಂಭಕ್ಕೆ ತಯಾರಾದ ರಸ್ತೆಗಳು..ಪಾನ್ ಶಾಪಿನಲ್ಲಿ ಕೆಂಪು ತುಟಿಗಳಲ್ಲಿ ಮುಗುಳ್ನಕ್ಕು ಆಹ್ವಾನವೀಯುವ ಮರ್ಯಾದಸ್ಠ ಗಂಡಸರು...ನನ್ನ ಕುತ್ತಿಗೆಗೆ ಸುತ್ತಿದ್ದ ಮಫ್ಲರು ಕಪ್ಪಾಗಿತ್ತು..ಥೇಟ್ ಬದುಕಿನಂತೆ..ಆದರೆ ರಾತ್ರಿ ರಸ್ತೆಗಳಿಗೆ ಕಡು ಹಳದಿ ಬಣ್ಣ...ನಾನು ಸುತ್ತಿದ್ದೆ ಸುತ್ತಿದ್ದು..

ಬೆಳಗ್ಗೆ ನಾಲ್ಕರ ಹೊತ್ತಿಗಾಗಲೇ ಹತ್ತಿರದ ಪಬ್ಬಲ್ಲಿ ಅಕ್ಕ ಎಲ್ಲರ ಬೆರಗಾಗಿದ್ದಳು..ಅವರು ಕುಡಿಯುತ್ತಿದ್ದ ವೈನು ಗ್ಲಾಸುಗಳಲ್ಲಿ ಕಾಣುವ ಬಿಳೀ ಮಾತಾಗಿದ್ದಳು..ನಾನು ಬದಿಯಲ್ಲಿ ಪ್ರತಿಮೆಯಂತೆ ನಿಂತಿದ್ದೆ...ಆ ಜಾಗದಿಂದ ಹೊರಡುವ ಮುನ್ನ ಒಮ್ಮೆ ನರ್ತಿಸಬೆಕಿತ್ತು ನನಗೆ..ಸ್ಟೇಜಿನ ಮೇಲೆ ಯಾವುದೋ ಕುಯ್ ಸ್ವರದಲ್ಲಿ ಹಾಡುತ್ತಿದ್ದ ಬೆಕ್ಕಿನ ಕಣ್ಣಿನವಳನ್ನ ಸರಿಸಿ..ಸೌಜನ್ಯ ಇಲ್ಲದಂತೆ ಗಿಟಾರ್ ಕಿತ್ತುಕೊಂಡೆ..ಬೆರಳುಗಳು ಸರಾಗವಾಗಿ ಆಡಿದವು...ಕುಳಿತಿದ್ದವರೆಲ್ಲ "ಹೋ" ಎಂದು ಕಿರುಚಿದರು!!
ಮಧ್ಯ ಅವ ಬಂದದ್ದು ಗೊತ್ತಾಗಲೆ ಇಲ್ಲ......ಕಡು ಕಂದು ಕಣ್ಣುಗಳಲ್ಲಿ ಮಂಜು ಸುರಿಯುತ್ತಿತ್ತು.ನನ್ನೊಡನೆ ಐದು ನಿಮಿಷ ನರ್ತಿಸಿದ ಹೋಗುವ ಮುಂಚೆ.ಅದ್ಭುತ ಘಳಿಗೆಗಳು..ನನ್ನ ಕಡಿದು ಹೋದ ಭಾಗವೊಂದು ಸೇರಿ  ಪೂರ್ಣ ಆದಂತೆ ಭಾಸ...ನನ್ನ ಹೆಸರು ವಿಳಾಸ ಪಡೆದು ಕಣ್ಣಲ್ಲೊಂದು ಮೆಚ್ಚುಗೆಯ ವಿಳಾಸ ವಾಪಾಸು ಕೊಟ್ಟು ಹೊರಟು ಹೋದ...
ಇಡೀ ದಿನದ ನಿದ್ದೆ ಮುಗಿದು ಮತ್ತೆ ಮಬ್ಬೇರುತ್ತಿರುವ ಸಮಯ ಕರೆಗಂಟೆಯ ಸದ್ದಿಗೆ ಎಚ್ಚರವಾಯ್ತು..ಎದ್ದು ಕಣ್ಣೊರೆಸುತ್ತಾ ಬಾಗಿಲು ತೆಗೆದೆ...ಕೈಯಲ್ಲೊಂದು ಹೂಗುಚ್ಚ..ಒಂದಷ್ಟು ಐರಿಶ್ ಚಾಕೋಲೇಟ್ಸ್,ಬಗಲಲ್ಲಿ ವೈನ್ ಬಾಟಲಿ ಹಿಡಿದು ಹೋತದ ಗಡ್ಡ ಕೆಂಚ್ ಕೂದಲ ಹೊತ್ತವ ನಿಂತಿದ್ದ..ತೀರ ಪರಿಚಿತನ ನಗುವೊಂದನ್ನ ಹೊತ್ತು...
"ಒಳಗೆ ಕರಿಯೊದಿಲ್ವೇನು, ನಿಮ್ಮಲ್ಲಿ ಬಾಗಿಲಿಂದ ಹೊರ ನಿಲ್ಲಿಸಿ ಮಾತಾಡೋದು ಪದ್ಧತಿಯಾ?"
ಒಳ ಬಂದಾಗಿದೆ ..ಬೇಡವೆಂದರೆ ಹೋಗುವವನಲ್ಲ..ನಾನು ಸರಿದು ಜಾಗ ಕೊಟ್ಟೆ.ಹಿಂದಿಂದ ಬಂದ ವ್ಯಕ್ತಿ ನೋಡಿ ದಂಗಾದೆ..ನನ್ನ ಗಂಡಸು..ನನ್ನ ಕಣ್ಣಲ್ಲಿ ಆಶ್ಚರ್ಯ ನೋಡಿ"ಯೆಸ್ ಯುವರ್ ಮ್ಯಾನ್..ನಿನ್ನ ಗಂಡ ಅಂತ ನಂಗೊತ್ತಿರ್ಲಿಲ್ಲ..ನಿನ್ನೆ ರಾತ್ರಿ ನೀನು ಕುಣಿಯುವಾಗ ಅವನು ಮೂಲೆಲಿ ಕೂತು ಕುಡಿತಿದ್ದ , ಅಷ್ಟೇ ಅಲ್ಲ ೩ ತಿಂಗಳಿಂದ ನನ್ನ ರೂಮಿನಲ್ಲೇ ಬಿದ್ಕೋತಾ ಇದ್ದಾನೆ..ಕುಡಿತ ಬಿಟ್ಟರೆ ಇನ್ಯಾವ ಕೆಟ್ಟ ಅಭ್ಯಾಸ ಇಲ್ಲ"  ನನ್ನ ಜಗತ್ತು ಕಂಪಿಸ ತೊಡಗಿತ್ತು.. "ನನಗೆ  ಯಾಕೆ..." ಮಾತು ಕಡಿಯುವ ಮುಂಚೆ ಅವ "ನಮ್ಮ ಪರಿಚಯ ಇರಲಿಲ್ಲ ಮತ್ತು ಅವನ ಮನೆ ಯಾವ ರಸ್ತೆಯಲ್ಲಿದೆ ಅಂತಲು ಹೇಳಲಿಲ್ಲ.ಇಂಥ ಚಂದದ ಹೆಂದತಿಯೂ ಇದ್ದಾಳೆ ಎಂದು ಗೊತ್ತಿರ್ಲಿಲ್ಲ" ಅವನ ಮುಖ ನೋಡಿದೆ ತೀರ ನಿರ್ಲಿಪ್ತ ಭಾವ..ಇಷ್ತು ದಿನದ ನಂತರ ನೋಡುತ್ತಿದ್ದಾನೆ ಪರಿಚಿತತೆ ಇಲ್ಲದ ಭಾವಗಳೆ ಇಲ್ಲದ ಮುಖ ..ಇಬ್ಬರೂ ಒಳ ಹೋದರು..ನನ್ನ  ಉಸಿರು ಮತ್ತೆ ಸಿಕ್ಕಿಹಾಕಿಕೊಂಡಿತು...

ಇದು ನ್ಯೂ ಇಯರ್ ಈವ್.. ಅಕ್ಕ ಬಿಳಿ ವೈನ್ ಹಾಕಿ ಕ್ವಿಕ್ ಚಿಕ್ಕನ್ ಮಾಡುತ್ತಿದ್ದಲು ಅಂತ ಕಾಣುತ್ತೆ ಮನೆ ತುಂಬ ಹೊಗೆ..ನಾನು ಅದೆ ಕಿಟಕಿಯ ಪಕ್ಕ ಕುಳಿತಿದ್ದೆ.. ಕಣ್ಣುಗಳು ಹೊರಗೆ ನೆಟ್ಟಿತ್ತು..ಶಾಲ್ಮಲಿಯ ನೆತ್ತಿಯಲ್ಲಿ ಕೆಂಪು ಕೋಳಿ ಜುಟ್ಟಿನಂತ ಹೂಗಳು.ಮರಳಿನಲ್ಲಿ ಕಟ್ಟಿದ್ದ ಮನೆಯನ್ನ ಅಲೆಗಳು ಬಂದು ಕೊಚ್ಚಿ ಹಾಕಿದ ದಿನ ಅದೆಷ್ತು ಅಳುತ್ತಿದ್ದೆ..ಪ್ರತೀ ಬಾರಿಯೂ ಅಪ್ಪ ಸಂತೈಸಿ ಒಂದಷ್ಟು ಚಾಕೋಲೇಟ್ ಕೊದಿಸುತ್ತಿದ್ದರು..ನಾನು ಅದಕ್ಕೆ ಅಳುತ್ತೇನೆ ಅಂತ ಅಕ್ಕ ವಾದಿಸುತ್ತಿದ್ದಳು...ನೆನೆದು ನಗು ಬಂತು ಹಿಂದೆ ವಿಶಾದವೂ..ಇವತ್ತು ನೆಲೆಯೇ ಇಲ್ಲದೆ ಬಯಲು ಆಲಯದಲ್ಲಿ ನಿಂತಿದ್ದೆನೆ..ಸೈಂಟ ಅಲೊಶಿಯಸ್ ಪ್ರೇಯರ್ ನೆನಪಾಯ್ತು..ಜ಼ೊತೆಗೇ ಕನ್ನಡ ಮಾಸ್ತರರ ಅಲ್ಲಮನ ವಚನಗಳೂ.ಜಾರುತ್ತಿದ್ದ ಕಂಬನಿಯನ್ನ ತೊಡೆಯಲು ಹೋಗದೆ ಹಾಗೆ ಬಿಟ್ಟೆ...

ಹೊಸ ವರ್ಶದ ದಿನಗಳು ಹಾಗೆ ಕಳೆದು ಹೋದವು..ಇವನು ಮನೆಗೆ ಬರುತ್ತಿದ್ದ ಇದ್ದರು ಇಲ್ಲದಂತೆ..ಕಂದು ಕಣ್ಣಿನವ ಅಕ್ಕನ ಸ್ನೆಹಿತ ಈಗ...ಹಾ ಅಕ್ಕ ಇವತ್ತು ಹೊರಡಲಿದ್ದಾಳೆ.ಜ಼ನವರಿಯ ಹಿತವಾದ ಚಳಿ..ಒಂದಷ್ಟು ಶಾಲ್ ಕೋಟ್ ಕೊಟ್ತ ಅಕ್ಕ ಬೆಚ್ಚಗಿರುವಂತೆ..ನಗುತ್ತಿರುವಂತೆ ಹಾರೈಸಿದಳು. ಮತ್ತೆ ಬಸ್ಸು ಹತ್ತುವ ಮುನ್ನ ಕಿವಿಯಲ್ಲಿ ಉಸುರಿದಳು" ನೀನೀಗ ಹಕ್ಕಿ.ಹಾರಲೇ ಬೇಕಿದೆ..ನೋಡು ರೆಕ್ಕೆಗಳಿವೆ...ನನ್ನ ಕಿನ್ನರಿ ನಿನ್ನವ ಗಂಡಸಲ್ಲ..ಸ್ನೇಹಿತ ಮಾತ್ರ ಈಗ"

ನಾನು ನಕ್ಕು ಕೈ ಬೀಸಿದೆ...ಮನೆಯ ದಾರಿಯಲ್ಲಿ ಹಾಸಿದ್ದ ನೀಲಿ ಹೂಗಳ ಹಾಸು ಅಹ್ಲಾದಕರವಿತ್ತು.ಜ಼ೊತೆಗೆ ಆ ಪಕ್ಕ ಅವನಿದ್ದ ನಿರ್ಭಾವುಕ ಗೋಡೆಯಂತೆ..ಈ ಪಕ್ಕ ನನ್ನ ತುಟಿ ತೆರೆವ ಕ್ಷಣಗಳಿಗಾಗಿ ಕಾದ ಇವನು..ಅಕ್ಕ ನನಗಾಗಿ ಹೊಸಾ ದಾರಿಯೊಂದು ತೆರೆದಿದ್ದಳು..

ಓಕ್ಲೇನ್ ರೆಸಾರ್ಟಿನ ಸಂಜೆಯ ಹಾಡು ಈಗ ನನ್ನದೇ..ತುಂಬಾ ಅಭಿಮಾನಿಗಳಿದ್ದಾರೆ ಅಲ್ಲಿ..

ನಾನು ನೀಲಿ ಹೂಗಳ ಹಾದಿಯಲ್ಲಿ ಹಿತವಾಗಿ ನಡೆದಿದ್ದೇನೆ..ಇಬ್ಬರನ್ನೂ ಹಿಂದೆ ಬಿಟ್ಟು ...ನನ್ನ ಜಗತ್ತು ಬದಲಾಗುತ್ತಿತ್ತು..ಮನೆಗೆ ಮಕ್ಕಳು ಕಲಿಯಲು ಬರುತ್ತಿದ್ದಾರೆ..ನನ್ನದೆ ಕ್ಲಾಸುಗಳು ಶುರುವಾಗಿದೆ..ಒಂಟಿ ಜೀವನ ಹಿತವಾಗಿದೆ..ಅವನು ಇವನು ಗೆಳೆತನ ಉಳಿಸಿಕೊಳ್ಳುವ ಮಾತು ಕೊಟ್ಟಿದ್ದಾರೆ.....

ಆದರೂ ಕಿಟಕಿಯ ಪಕ್ಕ ಕೂತ ಕ್ಷಣ ಬೆಂಕಿಯಂಥ ಶಾಲ್ಮಲಿಯ ದಳ..ಪಾದಕ್ಕೆ ಬಿದ್ದು "ಹೇಳು ಸುಖವಾಗಿದ್ದಿಯಾ?" ಅನ್ನುತ್ತದೆ..ನಾನು ನಕ್ಕು ಗಿಟಾರು ಕೈಗೆತ್ತಿಕೊಳ್ಳುತ್ತೇನೆ...ಪಕ್ಕದಲ್ಲಿ ಪುಸ್ತಕಗಳು..ಪತ್ರಗಳು ಮತ್ತು ನಿನ್ನೆ  ರಾತ್ರಿ ನನ್ನ ಕೈಹಿಡಿದು ನರ್ತಿಸಿದ ಎತ್ತರದ ಹುಡುಗ..

ಕಿಟಕಿ ಇದೆಲ್ಲವನ್ನು ನೋಡುತ್ತಾ ಮತ್ತೆ ವಸಂತಕ್ಕೆ ಅಣಿಯಾಗಿದೆ..ನನ್ನಂತೆ!! ಈ ಮನೆ ಈ ಕಿಟಕಿ ನಾನು ಮತ್ತು ಸಂಜೆಗಳು ಅನಂತವಾದ ಮುರಿಯದ ಸಂಬಂಧ!!