ಅವತ್ತು ಸಂಜೆಯಾಗುವಂತಿಲ್ಲ, ನಮ್ಮೂರ ಚಿಲ್ಟರಿ ಪಿಲ್ಟಾರಿಗಳ ದಂಡು ಕೆರೆ ಏರಿ ಮೇಲೆ ಜಮಾಯಿಸುತ್ತಿತ್ತು. ಆಚೆ ಕಡೆ ಕೇರಿಯಿಂದ, ಒಂದೊಂದೇ ತಾವರೆ ಮುಡಿದ ತುರುಬುಗಳೂ, ಚೆಂಬು, ಗಂಟೆ ಸದ್ದು ಊದುಬತ್ತಿಯ ಹೊಗೆಯೂ ಕೆರೆ ಕಡೆಗೆ ಬರಲು ಶುರುವಾಗುತ್ತಿತ್ತು. ಅಲ್ಲಿ ಅದೇ ಕೆಳಗಿದ್ದ ಕಲ್ಲ ಮೇಲೆ ತಂದ ಪೂಜಾಸಾಮಾಗ್ರಿಗಳನ್ನಿಟ್ಟು ಸುಂದರಿಯರು ಗಂಗವ್ವನಿಗೆ ನಮಿಸುತ್ತಿದ್ದರು ಹೂವು ದೀಪ ತೇಲಿಬಿಟ್ಟು ತಂದ ಚೆಂಬಿನ ತುಂಬಾ ನೀರು ತುಂಬಿ ಸಿಂಬೆಸುತ್ತಿದ ತಲೆಯ ಮೇಲಿಟ್ಟು ಸಾಲಾಗಿ ನಡೆಯತೊಡಗಿದರೆ, ನನಗೋ ಆಗಷ್ಟೇ ನೋಡಿದ ಸಿನೆಮಾದ ಹಾಡುಗಳು ನೆನಪಾಗುತ್ತಿದ್ದವು. ಆಮೇಲಿನ ಸಂಭ್ರಮ ನೋಡಬೇಕು, ನಮ್ಮನೆ ಕೆಲಸಕ್ಕೆ ಬರುತ್ತಿದ್ದ ಹನುಮಿ ಮೈಲಿ ಶಾಂತಿ ಶಣ್ಣಿ ಮಂಜುಳೆಯರು ಮಧ್ಯಾಹ್ನಕ್ಕೆಲ್ಲ "ಅಮ್ಮಾ ಗೌರಿ ಕೂರ್ಸೇವಿ ಕುಂಕುಮಕ್ಕೆ ಬಾಗ್ನಕ್ಕೆ ಜನ ಬತ್ತಾರೆ, ನಾಳೆ ಬಂದ್ ಮಾಡ್ಕೊಡ್ತೇವಿ ಉಳಿದ್ ಕೆಲ್ಸ ಆತಾ" ಅಂತ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ ತಾವರೆ ಹೂವಿನ ಕಿರೀಟ ಮುಗಿಲೆತ್ತರಕ್ಕೆತ್ತಿ ನಡೆದುಬಿಡುತ್ತಿದ್ದರು, ಸಂಜೆಗೆ ನಾವ್ಗಳು ಅವರ ಮನೆಗೆ ಹೋದರೆ ಸಾಕು, ಮಾಡಿದ ಕಜ್ಜಾಯ ಕರ್ಜಿಕಾಯಿ ಎಲ್ಲ ಕೈತುಂಬ ಕೊಟ್ಟು,"ಕೂಸೇ ತೋರ್ಸ್‌ಬ್ಯಾಡ ಮುಚ್ಚೀಟ್‌ಕಂಡು ತಿನ್" ಅಂತ ಕಟ್ಟಪ್ಪಣೆ ಹೊರಿಸಿ ಕಳಿಸುತ್ತಿದ್ದರು.
ಇತ್ತ ನಮ್ಮನೆಯಲ್ಲಿ ಬಾಳೆ ಕಂಬವೂಕಾಯುತ್ತಿತ್ತು ನಮ್ಮ ಹಾದಿ. ಮನೆಯ ಇಷ್ಟೆತ್ತರದ ಬಾಗಿಲಿಗೆ ತೋರಣ ಕಟ್ಟುವ ಸಡಗರ, ಅಕ್ಕನಿಗೆ ನನಗೆ ಅಮ್ಮ ಮಾಡಿದ ಚಕ್ಕುಲಿ ಹಿಟ್ಟನ್ನು ನಾದಿ ಚಕ್ಕುಲಿ ಒರಳಿನಲ್ಲಿ ತುಂಬಿ ಒತ್ತಿ ಸುತ್ತುವ ಕೆಲಸಾಮ್ಮ ಅದನ್ನ ಕೆಂಪಗೆ ಹದಾ ಕರಿದು ಎಣ್ಣೆ ಎಲ್ಲ ತೆಗೆದು, ಚಕ್ಕುಲಿಯನ್ನ ದೊಡ್ಡದೊಂದು ಡಬ್ಬಿಗೆ ತುಂಬಿಡುತ್ತಿದ್ದರು. ಮಲಗುವ ಮುನ್ನ ಮಂಟಪದ ವ್ಯವಸ್ಥೆ ನೋಡುವುದು ಅಪ್ಪ ತಮ್ಮನ ಸರದಿ, ನನಗೆ ಅಕ್ಕನಿಗೆ ನಾವಿಬ್ಬರೂ ಸೇರಿ ಮಾಡಿದ(ನನ್ನಕ್ಕ ತುಂಬಾ ಚೊಕ್ಕ ಕೆಲಸಗಳಲ್ಲಿ) ಹತ್ತಿಯ . ಹಾರ ಮುಗಿಸುವ ಕೆಲಸ, ಹೂ ಬತ್ತಿ ದೀಪದ ಬತ್ತಿ ಮಾಡಿ ಮತ್ತು ಗೆಜ್ಜೆ ವಸ್ತ್ರಕ್ಕೆ ಅರಿಸಿನ ಕುಂಕುಮ ಹಚ್ಚಿ ತೆಗೆದಿಡುತ್ತಿದ್ದೆವು, ಜತೆಗೆ ಬಗೆಬಗೆಯ ಆರತಿ ತಟ್ಟೆಗಳನ್ನು ಸಜ್ಜು ಮಾಡಿಟ್ಟು ಮಲಗುತ್ತಿದ್ದೆವು.
ಬೆಳಗ್ಗೆದ್ದು ಅಂಗಳವನ್ನ ಸಗಣಿಯಲ್ಲಿ ಬಳಿದು, ಚಂದ ಚಂದದ ರಂಗೋಲಿ ಹಾಕಿ ಒಳಬಂದರೆ ಅಮ್ಮ ಮಾಡುತ್ತಿರುವ ಪಂಚಕಜ್ಜಾಯದ ಘಮ ಹೊಸಿಲು ದಾಟಿ ಹೊರಹೋಗಲು ಹವಣಿಸುತ್ತಿತ್ತು ಇಡ್ಲಿ ಚಟ್ನಿ, ಕಾಯಿಕಡುಬು, ಮೋದಕ, ಉಂಡೆಪಾಯಸ ಕೋಸಂಬರಿ ಅಂಬೊಡೆಯ ಘಮ ಮನೆಯ ತುಂಬಾ ವ್ಯಾಪಿಸಿ ಹೊಟ್ಟೆಯೊಳಗೆ ಹಸಿವಿರದಿದ್ದರು ಹಸಿವು ಹುಟ್ಟುತ್ತಿತ್ತು, ಬಹುಶಃ ಇಂಥ ಕರ್ಮಠ ಬೆಳಗ್ಗೆಗೇ ಅಂತಾನೆ ಬ್ರಾಹ್ಮಣರ ಮನೆಗಳಲ್ಲಿ ಒಂದು ತಿಂಡಿ ಇರುತ್ತೆ, ಅದು ಅರಳು, ಅದಕ್ಕೆ ಮೊಸರು ಬೆಲ್ಲ ಹಾಕಿ ತಿಂದರೆ ಮುಗಿಯಿತು ಮತ್ತೆ ಪೂಜೆ ಮುಗಿವವರೆಗೂ ಹೊಟ್ಟೆ ಗಟ್ಟಿ, ಆದರೆ ಈ ಭಾಗ್ಯ ಮಕ್ಕಳಿಗೆ ಮಾತ್ರ, ಪೂಜೆ ಮುಗಿವ ತನಕ ಅಪ್ಪ ಅಮ್ಮ ಇಬ್ಬರು ಕಾಪಿ ಅಂಬ ಕಷಾಯದ ಬಲದ ಮೇಲೆಯೇ ಇರಬೇಕಾಗುತ್ತಿತ್ತುನಮ್ಮನೆಯ ಗಣಪ ಬೆಳ್ಳಿಯ ಗಣಪ, ಸಣ್ಣವ, ನಾವು ಬೆಳಗ್ಗೆಯೇ ಎದ್ದು ಕೊಯಿದ ದುರ್ವೆಯಲ್ಲಿ ಮುಳುಗಿಬಿಡುವ, ಒಬ್ಬೊಬ್ಬರು ೧೦೮ ದೂರ್ವೆ ಕೊಯ್ಯಲೆ ಬೇಕಾದ್ದು ನಿಯಮ, ಸ್ನಾನ ಆಗದೆ ಅಡಿಗೆ ಮನೆ ಮತ್ತು ದೇವರ ಮನೆಗೆ ಪ್ರವೇಶವೇ ಇಲ್ಲ. ಸ್ನಾನವಾಯಿತೋ ಅಪ್ಪನ ಪೂಜೆಗೆ ಕೈ ಕೆಲಸಕ್ಕೆ ಹತ್ತಿರ ಒಬ್ಬರು ಇರಲೇ ಬೇಕಿತ್ತು, ಅದರ ಭಾಗ್ಯ ತಮ್ಮನಿಗೆ ಅಥವಾ ನನಗೆ, ಅಪ್ಪನ ನ್ಯಾಸಾದಿಗಳ ನಂತರ ಶಾಸ್ತ್ರೋಕ್ತವಾಗಿ ಗಣಪತಿಯನ್ನ ಅರ್ಘ್ಯಪಾದಾದಿಗಲಿನ್ದ ಸತ್ಕರಿಸಿ ಅವನನ್ನು ಸ್ನಾನಕ್ಕೆ ಕರೆದು ಸ್ನಾನ ಮಾಡಿಸಿ ವಸ್ತ್ರಗಳನ್ನು ಅರ್ಪಿಸಿ ಪಂಚಲೋಹದ ಹರಿವಾಣದಲ್ಲಿ ಅಕ್ಕಿ ಕಡಲೆ ಕಾಯಿಯನ್ನಿಟ್ಟು ಪೀಠದಲ್ಲಿ ಕುಳ್ಳಿರಿಸಿ ಗ ಕಾರ ಗಣಪತಿ ಸಹಸ್ರನಾಮ ಓದಲು ಆರಂಭಿಸುತ್ತಿದ್ದರು, ಅಪ್ಪ ಇದೆಲ್ಲ ಮಾಡುತ್ತಿದ್ದುದು ಬಹಳ ಸಾವಕಾಶವಾಗಿ , ಅಲ್ಲೊಂದು ಪ್ರೀತಿಸುವ ಜೀವವಿದೆ ಅದಕ್ಕೆ ಇದೆಲ್ಲ ಮಾಡುತ್ತಿರುವುದು ಎನ್ನುವ ಅತೀವ ಆತ್ಮೀಯ ಭಾವದಲ್ಲಿ, ಸಹಸ್ರನಾಮದ ಹೊತ್ತಿಗೆಲ್ಲ ಅಮ್ಮನ ನೈವೇದ್ಯದ ತಯಾರಿ ಮುಗಿದು.ಎಲ್ಲ ಭಕ್ಷ್ಯಗಳು ಬಾಳೆ ಎಲೆಯಲ್ಲಿ ಮುಚ್ಚಿಕೊಂಡು ನಿಧಾನವಾಗಿ ದೇವರಮನೆಗೆ ಬಂದು ಸ್ಥಾಪಿತವಾಗುತ್ತಿದ್ದವು. ಅಪ್ಪ ಧೂಪಾರತಿಯ ನಂತರ ನೈವೇಧ್ಯವನ್ನು ಸ್ವೀಕರಿಸಲು ವಿನಂತಿಸಿ ಗೋಗ್ರಾಸಕ್ಕೂ ಅಲ್ಲಿಯೇ ಹಾಕುತ್ತಿದ್ದರು, ನೈವೇದ್ಯದ ನಂತರ ಮಹಾ ಮಂಗಳಾರತಿ, ನಮಸ್ಕಾರ,ತೀರ್ಥ ಪ್ರಸಾದ ಸ್ವೀಕಾರಣೆ. ನಮ್ಮ ಗಣಪ, ಪುರೋಹಿತರಿಗೆ ದಾನ ರೂಪದಲ್ಲಿ ಕೊಡಲ್ಪಡುವವನು, ಹಾಗಾಗಿ ಪ್ರಾಣ ಪ್ರತಿಷ್ಟೆಯಾದ ದಿನವೇ ಉದ್ವಾಸನೆಯೂ ಆಗಬೇಕಿತ್ತು, ಅದೇನಿದ್ದರೂ ಸಂಜೆಗೆ, ಮಂಗಳಾರತಿಯ ನಂತರ ಹಬ್ಬ ಮುಗಿಯುವ ಬದಲು ಇನ್ನಷ್ಟು ರಂಗೇರುತ್ತಿತ್ತು.
ಊಟ ಮಾಡಿ ಸುಧಾರಿಸಿ ಹೊಸಾ ಬಟ್ಟೆ ತೊಟ್ಟು ಇಪ್ಪತ್ತೊಂದು ಗಣಪತಿಯನ್ನು ದರ್ಶನ ಮಾಡಿ ಬರುವ ಕೆಲಸ, ಇದಕ್ಕೆ ಬೇಗನೆ ಹೊರಡುತ್ತಿದ್ದೆವು. ಸಂಜೆಗತ್ತಲೊಳಗೆ ಮನೆಗೆ ವಾಪಾಸು ತಲುಪಬೇಕಿತ್ತು, ಚಂದ್ರ ಭಯಕ್ಕೆ ಹೆಜ್ಜೆಗಳು ತಡವರಿಸುತ್ತಿದ್ದವು, ಹಾಗೂ ನಾನು ತಲೆಯೆತ್ತಿ ನೋಡಿ, ನನಗೆ ಚಂದ್ರ ಕಂಡರೆ ಬೇರೆಲ್ಲರಿಗೂ ಮಂಗ ಮಾಡಿ ತೋರಿಸಿ ನಾನೊಬ್ಬಳೇ ಅಪಮಾನಕ್ಕೊಳಗಾಗುವ ಭೀತಿಯಿಂದ ತಪ್ಪಿಸಿಕೊಳ್ಳುತ್ತಿದ್ದೆ! ಪಟಾಕಿಯ ಗರ್ನಾಲಿನ ಸದ್ದು ನನ್ನ ಬಾಲ್ಯಕ್ಕಿರಲಿಲ್ಲ, ಹಾಗೆಯೇ ಡಿಜೆ ಕುಣಿತ ಸಂಗೀತವು ನಮಗೆ ಗೊತ್ತಿರಲಿಲ್ಲ, ನಮ್ಮ ಗಣಪ ಗೌರಿಯರು ಮಣ್ಣಿಂದಲೆ ಬಂದು ಮಣ್ಣಲ್ಲೇ ಬೆರೆತು ಹೋಗುತ್ತಿದ್ದರು. ಗಣಪ ಮಾತ್ರ ಮನಸು ಮೈಯೊಳಗೆಲ್ಲ ಆವರಿಸಿ, ಮತ್ತೆ ಮತ್ತೆ ಅವನು ಬರುವ ದಿನಕ್ಕೆ ಎದುರು ನೋಡುವಂತೆ ಮಾಡುತ್ತಿದ್ದ. ನನ್ನ ಬಾಲ್ಯದಲ್ಲಿ ಬಹುಶಃ ಈಗಿನ ಜಾತಿಬೇಧಗಳು ಇರಲಿಲ್ಲ, ಮೂರನೆಯ ದಿನ ಗೌರಿ ಕಳಿಸುವ ದಿನ,ಆವತ್ತು ಕೆರೆದಂಡೆಯಲ್ಲಿ ಜಾತ್ರೆ ನೆರೆಯುತ್ತಿತ್ತು, ಆ ನಸುಗತ್ತಲು ಹೂವು ಸಂಭ್ರಮ ಕಳಿಸಿದ ನಂತರ ನಮ್ಮೂರಿನ ತುಂಬಾ ಅವರಿಸುತ್ತಿದ್ದ ಆ ಮೌನ, ಥೇಟು ಗಂಡನ ಮನೆಗೆ ಮಗಳನ್ನ ಕಳಿಸಿದ ತವರಿನದ್ದೆ ಚಿತ್ರಿಕೆ. ಹಬ್ಬಗಳೆಂದರೆ ನನ್ನ ಬಾಲ್ಯದ ಹಬ್ಬಗಳು ಚಿತ್ರಿಸಿದ ನೆನಪಿನ ಮೆರವಣಿಗೆ, ಮುಗ್ಧತೆಯಲ್ಲೇ ನಂಬಿಕೆಯೂ ಶ್ರದ್ಧೆಯು ಮೇಳೈಸಿದ್ದ ಆ ಕಾಲ ಇವತ್ತಿಗೂ ನನ್ನ ಮಗುವಾಗಲು ಪ್ರೇರೇಪಿಸುತ್ತದೆ, ಮಾಧ್ಯಮಗಳು ನಿರ್ಮಿಸಿದ ಕಂದರಗಳ ನಡುವೆಯೂ ಮನುಷ್ಯ ಮನುಷ್ಯರ ನಡುವೆ ಬೆಸೆವ ಆತ್ಮೀಯತೆಯ ಸೇತುವೆಯಾಗಿ ಈ ಹಬ್ಬಗಳು ನನಗೆ ಗೋಚರಿಸುತ್ತವೆ!