೧
ಕವಿತೆ
ನೀ ಕತೆ ಬರೀ ಬರೀ ಅಂತ ಹಟ ಮಾಡಿದ್ದಕ್ಕೆನಾ ಬರೆದದ್ದೆಲ್ಲ ನಿನ್ನದೇ ಕವಿತೆ...
ಕಥೆ ಬರೆಯಲು ರಾಜಕುಮಾರನನ್ನ ಹುಡುಕಬೇಕು
ಕವಿತೆಗಾದರೆ ನಿನ್ನ ಮುಗುಳ್ನಗೆ ಸಾಕು!!
ಅಂದು ಮಳೆಯಲ್ಲಿ ಇಬ್ಬರೂ ತೋಯ್ದಾಗ
ನೀ ತುಟಿಯಂಚಲೇ ಮುಗುಳ್ನಕ್ಕು ನುಡಿದದ್ದು
ನನ್ನ ಎದೆ ಬಡಿತ ಏರುಪೇರಾದದ್ದು
ಕಥೆಯಾ? ಅಲ್ಲ ಅದು ಕವಿತೆ,
ಏಕಾಂತದಲ್ಲಿ ನನ್ನ ಮುಂಗುರುಳ ಮಧ್ಯೆ
ಸಿಕ್ಕಿ ಹಾಕಿಕೊಂಡ ನಿನ್ನ ಹೃದಯದ
ಮಾತುಗಳ ಬಿಡಿಸುತ್ತಾ ತುಟಿಯಂಚಿಗೆ
ತುಟಿಗಳ ತಂದದ್ದು ಕಥೆಯಾ? ಅಲ್ಲ ಕವಿತೆ
ನನ್ನ ಮನದ ಕನ್ನಡಿಯ ಜೋಪಾನವಾಗಿ
ಒರೆಸಿ ಬಿಂಬಗಳ ಅಳಿಸಿದ್ದರೂ ಅಳಿಸದ
ನಿನ್ನ ಬಿಂಬವೊಂದು ಮತ್ತೆ ಮತ್ತೆ ಹೇಳುವುದು..
ನೀ ನನಗೆ ನಾ ನಿನಗೆ ಕಥೆಯಾ?ಅಲ್ಲ ಕವಿತೆ...
೨
ಕತ್ತಲು
ಈ ರಸ್ತೆಗೆ ಇರುವುದೊಂದೇ ಒಂಟಿ ದೀಪ
ಸುತ್ತಲ ಮರಗಳ ಎಲೆ ಅಲುಗಿದಂತೆಲ್ಲಾ
ಕತ್ತಲ ಲೋಕದ ಅನಾವರಣ
ಮನೆ ಮನಗಳ ಮೂಲೆಯಲ್ಲಿ ಮುದುರಿಕೊಂಡಿದ್ದ
ಕತ್ತಲು ನೆರಳು ಕಾಣೆಯಾದಂತೆಲ್ಲಾ
ಬೆಂಕಿಯಂತುರಿಯುತ್ತದೆ
ಸಹಸ್ರ ಲಿಂಗ ಯೋನಿಗಳು ಹುಟ್ಟುತ್ತಾ ಸಾಯುತ್ತಾ
ಅಗ್ನಿಕುಂಡಕ್ಕೆ ಆಹುತಿಯಾಗುವ
ಹೊತ್ತಿನಲ್ಲೇ ಮಾಯದಂತ ಗಾಯಕ್ಕೆ
ಉಪ್ಪೆರಚಿದಂತೆ ಕಿರುಚುವ ನಾಯಿ
ಬರಲಿರುವ ಬೆಳಕನ್ನು ಹೆದರಿಸಿದಂತೆನಿಸಿ
ಆತ್ಮವೊಂದು ಒಂಟಿ ದೀಪದ ಬುಡಕ್ಕೆ ಬಿದ್ದ
ನೆರಳಾಗಿ ಕತ್ತಲನ್ನೇ ಕನವರಿಸಿದೆ!!
೩
ಸಾಕ್ಷಿ
ಅವನು ನೀನು ನಾನು
ಮತ್ತೊಂದು ದೀಪ
ಹೂಕುಂಡಗಳ ಕೆಳಗೆ ಬಿದ್ದ ಪಕಳೆಗಳಂತೆ
ಕಳಚಿಕೊಳ್ಳುವ ನಿಮಿಷಗಳು
ಮಾತಿನ ಹಂಗಿಲ್ಲದೆಯೆ
ಪ್ರೀತಿಸಬಹುದು
ಬಿಡು,ಚೌಕಟ್ಟಿನಲ್ಲಿ
ಬಂದಿತ ಪದಗಳ ಕೊಲಾಜ್
ನನ್ನ ಕಲೆಯಲ್ಲ
ಕಣ್ಣಲ್ಲಿ ಪ್ರೀತಿಯೇ ಮೂಡದ
ಮೇಲೆ ಬೆರಳುಗಳ
ತುದಿಗೆ ಅದು ತಿಳಿದೀತು ಹೇಗೆ??
ಅಳಿಯದೆ ಉಳಿದಿರುವೆ,
ಮತ್ತೆ ಹುಡುಕದಿರು ನಮ್ಮ
ನಡುವೆ
ನಿನ್ನ ಪ್ರೇಮಕ್ಕೆ ಸಾಕ್ಷಿ!!
೪
ಅರಿಕೆ
ಪ್ರೀತಿ ಎಂದರೆ ನಂಬಿಕೆ ಅನಿಸಿತ್ತು
ನಿನ್ನ ಪ್ರೀತಿ??
ಬಿಡು ಪ್ರೀತಿಸುವುದೋ ಬಿಡುವುದೋ
ಎಂಬ ಸಂಶಯವೇ
ನಮ್ಮಿಬ್ಬರ ಬದುಕಗೊಡುವುದು
ನಿನಗಾಗಿ ಪದಕೋಶಗಳ ಹುಡುಕಿದ್ದೆ
ಅಲ್ಲೆಲ್ಲೋ ನಗರದ ಮೂಲೆಯಲ್ಲಿನ ಕೋಣೆಯಲ್ಲಿ
ಜಗ ಮರೆತು ಪದಗಳ ಜಾಲದಲ್ಲಿ
ಬಂಧಿಯಾಗಿ ನಿದ್ರಿಸುತ್ತಿರುವವನೇ ಕೇಳು
ನಿನ್ನ ಅರಿವುದು ಯಾರಿಗೆ ಬೇಕು
ಮಾತನಾಡದೇ ಪ್ರೀತಿಸುವ ನೋಯಿಸುವ
ನಿನ್ನ ಕಲೆ ಕಲಿಸು ಸಾಕು!!
chitrakRupe-internet