Thursday, September 12, 2013

ಖಾಲಿ ನೀಲಿ ಹಾಯ್ಕುಗಳು..

 ೧

ನಿನ್ನ ಬೆವರಿನ ಗಂಧವಿಲ್ಲದ ತಂಗಾಳಿಗೆ
ನನ್ನ ಮನೆಯಂಗಳದಿ ಪ್ರವೇಶ
ನಿರಾಕರಿಸಲಾಗಿದೆ!!


ಸ್ನಾನ ಮಾಡುವಾಗ ಕದ್ದು ನೋಡುವ ಕನ್ನಡಿಯೇ !!
ನಿನ್ನ  ಮರ್ಯಾದೆಯ  ಮಿತಿ ಮೀರದಿರು,
ಅವನಂತೆ !!


ಹೆರಳಿಂದ ಉದುರಿದ ನೀರ ಹನಿಗಳ ಉಂಡು
ಹುಲುಸಾದೆ ನನ್ನ ಗುಲಾಬಿ ಗಿಡವೇ..
ನಾಚು ಸ್ವಲ್ಪ..ದುಂಬಿ ಬರುವ ಸಮಯಕ್ಕೆ!!


ಯಾಕೆ ಪ್ರೇಮ ಕವಿತೆಗಳ ಬರೆವೆ ಎಂದ...
ನಿಜಕ್ಕೆ ನಿಲುಕದ ನಿನ್ನ  ನನ್ನ ಪದಗಳಲ್ಲಿ
ಹಿಡಿದಿಡುವ ಪ್ರಯತ್ನ ಎಂದೆ ...


ಕಥೆ  ಕೇಳಲು ನಾನೇ ಬೇಕಾಗಿಲ್ಲ ಈ ಕಿಟಕಿ..
ತೆರೆದ ಬಾಗಿಲು.. ಮಡಿಯದ ಹಾಸಿಗೆಯ
ಸುಕ್ಕುಗಳ ಕೇಳಿ ..




 ಮಧುವು ರುಚಿಸುತ್ತಿಲ್ಲವಂತೆ ಅವನಿಗೆ
 ಇತ್ತೀಚೆಗೆ, ನನ್ನ ಕಣ್ಣ ರೆಪ್ಪೆಯಲ್ಲಿ ಕರಗಿದ
ಕಾಡಿಗೆಯ ಮತ್ತೇರಿರಬೇಕು!!



ಪ್ರೇಮವೆಂದರೆ  ಬಿಸಿಯುಸಿರಿನ ರಾತ್ರಿಗಳ
ನಂತರ ಉಳಿವ ಬಂಧ..ನನ್ನ ನಾಚಿಕೆ...
ಅವನ ಬೆವರಿನ ಗಂಧ!!




ಪೋಲಿ ಎಂದು ದೂರದಿರಿ ನನ್ನವನ,
ಅವ ಉಬ್ಬುತಗ್ಗುಗಳ ಮೀರಿ ಮನದ ಮಡಿಕೆಯಲ್ಲಿ
ಬಣ್ಣ ಬಿಡಿಸುವ ಅಜಾತ ಕಲಾವಿದ!!


ಚಿತ್ರ ಕೃಪೆ-ಗೂಗಲ್

Monday, September 9, 2013

ನಿರೀಕ್ಷೆ

ಮೋಡ ತುಂಬಿದ ಬಾನಲ್ಲಿ 
ಚೆಲ್ಲದೇ ಕಾದಿದೆ ಹನಿಗಳು 

ಸೋರಿ ಹೋಯಿತು ನನ್ನ ತಾರುಣ್ಯ 
ನಿನ್ನ ಬದುಕ ಅಡಿಪಾಯದಡಿಗೆ 
ಆರಿ ಹೋಯಿತು ಜೀವನದ ಚಿಲುಮೆ 
ನಿನ್ನ ದರ್ಪದ ಉರಿಗೆ 
ಬದುಕಿದ್ದೆ ಜೀವಂತ ಶವವಾಗಿ,,

ಎತ್ತಣಿಂದಲೊ ತೂರಿ ಬರುವ 
ಬಿಡುಗಡೆಯ ಬಾಳಿಗಾಗಿ ಕಾದಿದ್ದೆ.. 
ಬಂದೇ  ಬಂತು ಗಾಳಿ ಆದರೆ 
ನಾ ಉಸಿರಾಡುವ ಮುನ್ನ
ನನ್ನ ಬದುಕು ಸತ್ತಿತ್ತು 

ಇಂದು ನನ್ನ ಭಾವಗಳ 
ಹೆಣದ ಮೆರವಣಿಗೆ!!
ಈಗಾದರೂ ಬರುವುದೇ 
ಪ್ರೀತಿಯ ಮಳೆ ಇಳೆಗೆ??