ನೀನು ನೀನಲ್ಲ, ನಾನಾ ಅಂದರೆ ಅದೂ ನೀನಾಗಲಿಲ್ಲ, ಎಲ್ಲ ಸಂಬಂಧಗಳು ಮಧುರವಾಗಿಯೆ ಕೊನೆಯಾಗಬೇಕು ಅನ್ನೋ ಹಪಾಹಪಿ ಒಳ್ಳೆಯದು ಅಲ್ಲ, ನಾವು ನಮ್ಮ ನಮ್ಮ ದಾರಿಯಲ್ಲೆ ಇದ್ದೆವು, ಆದರೆ ಪ್ರತಿ ದಾರಿಯೂ ಮತ್ತೊಂದು ದಾರಿಯನ್ನು ಯಾವುದೋ ತಿರುವಿನಲ್ಲಿ ದಾಟಲೇ ಬೇಕು, ಅಲ್ಪ ದೂರ ಜತೆಯಾಗಿ ಮತ್ತೆ ಕಳ್ಳ ಬಳ್ಳಿ ಹರಿದಂತೆ ಹರಿದು ದಾರಿ ಬೇರಾಗಲೆ ಬೇಕು, ನಾನು ಬದಲಾದೆ ಅಂತ ದೂರುವವನೆ ನಿನ್ನ ಮನೆಯಲ್ಲಿ ಗಡಿಯಾರದ ಸದ್ದು ನಿಲ್ಲುವುದಾ? ಹೇಳು ಒಂದಿದ್ದ ಕಾರು ಎರಡಾಯಿತು, ಒಂದೆ ಇದ್ದ ಮನೆ ಮಹಡಿಯಾಯಿತು, ನಿನ್ನ ಅತೀವ ಆಕಾಂಕ್ಷೆಗಳ ಅಡಿಯಲ್ಲಿ ನಾನು ಗತವಾದೆ, ನಿಜ ಅಂದರೆ ನೀನೆದಲ್ಲ ಮಾಡಿದ್ದು ತಪ್ಪು ಅನ್ನಲು ಮನಸ್ಸು ಬರುತ್ತಿಲ್ಲ, ಅದು ನಿನ್ನ ಜೀವನ, ಕಂಡಕಂಡವರ ಮಾತಿಗೆ ಸೆರಗಿನಲ್ಲಿ ಕೆಂಡಕಟ್ಟಿಕೊಂಡು ಸುಂದರ ಸ್ನೇಹ ಬಲಿಕೊಟ್ಟ ಅನೇಕ ಜನರನ್ನು ಕಣ್ಣೆದುರಿಗೆ ನೋಡಿದ್ದೀನಿ, ಅಂತಾದ್ದರಲ್ಲು ನೀನು ಸುಮ್ಮನಾದರು ನನ್ನ ದೂರುತ್ತೀಯಲ್ಲ ಆಗ ಸುಮ್ಮ ಸುಮ್ಮಗೆ ಖುಷಿಯಾಗುತ್ತದೆ
ಇಲ್ಲಿ ಕೇಳು, ವಯಸ್ಸೇನು ಹಿಂದೆ ಓಡುವುದಿಲ್ಲ, ನಿನ್ನ ಕೂದಲುಗಳು ಆಗಲೆ ಬಿಳಿಯಾಗಿವೆ, ನಾನೇನು ಚಿರಯೌವನದ ವರ ಪಡೆದು ಬಂದವಳಲ್ಲ, ದಿನಾಲು ಬಿಳಿಯ ಕೂದಲು ಕೀಳಲು ಸಮಯವು ಇಲ್ಲ, ತಣ್ಣಗೆ ನಾಲ್ಕು ಮಾತಾಡಲು ನಿನಗೆ ಯಾವ ರೋಗ? ಹೋಗಲಿ ತೀರ ವಯಸ್ಸಾದ ಕಾಲಕ್ಕೆ ನಿನ್ನ ನೆನಪುಗಳಲ್ಲಾದರು ನಾನು ಖಂಡಿತಾ ಜೀವಂತವಿರುತ್ತೀನಿ, ಅದಷ್ಟೆ ನನಗೆ ಸಮಾಧಾನ ಅಂದ್ಕೊಬೇಡ, ನೀನು ಬರಲಾರದ ಬಾರದ ಹಾದಿಯಲ್ಲಿ ಬಹುದೂರ ತೆರಳಿದವನು, ಪ್ರಸಿದ್ಧಿಯ ತೆವಲು ಯಾರನ್ನು ಸುಮ್ಮನಿರಗೊಡುವುದಿಲ್ಲ, ಭೂಮಿಯ ಗುರುತ್ವ ತಪ್ಪಿಸಿಕೊಂಡ ನನ್ನ ಕಥೆಯ ಚಂದ್ರಮ ಬ್ರಹ್ಮಾಂಡದ ತೀರ ಕಾವಳದಲ್ಲಿ ಎಷ್ಟೋ ಲಕ್ಷ ಬೆಳಕಿನ ದೂರ ಚಲಿಸಿದ್ದಾನೆ, ಆದರೂ ಮೋಹದ ಬೇಡಿಕೆ ಒಂದೇ, ಎಂದಾದರೂ ತಿರುಗಿ ಬರುವ ಅಂತ, ವಿಚಿತ್ರ ಅಂದರೆ ಅದೊಂದು ಸುಳ್ಳು ಮತ್ತು ಅದೇ ಸುಳ್ಳುಗಳಲ್ಲಿ ಜೀವಿಸಲು ಇಷ್ಟ ಪಡುವ ಮನಸ್ಸು ಒಂಥರಾ ಹೇಸಿಗೆ ಹುಟ್ಟಿಸುತ್ತೆ ನನ್ನಲ್ಲಿ , ಆದರೂ ನಿನಗೆ ಕೊಡಲಾಗದ ಹುಟ್ಟುಹಬ್ಬದ ಉಡುಗೊರೆಯನ್ನ ನೋಡುತ್ತಾ ನೀನು ಸಿಗದಿದ್ರೆ ಚೆಂದ ಅಂದುಕೋತೀನಿ ಯಾಕೆಂದರೆ ಸಿಕ್ಕೆ ಬಿಟ್ಟೆ ಅಂದುಕೋ ಆ ಸತ್ಯವನ್ನು ಒಪ್ಪಲಾಗದಷ್ಟು ನಿನ್ನ ಗೈರುಹಾಜರಿಯನ್ನ ಮನಸ್ಸು ಒಪ್ಪಿಬಿಟ್ಟಿದೆ, ಎಲ್ಲಿದ್ದರು ಸರಿ ಆರಾಮಲ್ಲಿರು, ನಾನು ಬರೆದು ಬರೆದು ನಿಸೂರಾಗುತ್ತೇನೆ, ಬದುಕಿನ ಎಣ್ಣೆ ತೀರುವ ತನಕ...
ಬಯಲ ಬೇಲಿಯ ದಾಟಿ ಮಲ್ಲಿಗೆಯ ಕಂಪು ಮನದ ಬೇಲಿಯ ದಾಟಿತು ಮಂದಾರದ ನುಣುಪು, ಬದುಕ ಹಾಡು ಮಲ್ಲಿಗೆ,ಬಯಕೆ ಹಾಡು ಮಂದಾರ!!!
Sunday, June 5, 2016
ನೀನು ನೀನಲ್ಲ
Subscribe to:
Posts (Atom)