ಬೇಸರಾಗುತಿದೆ ಬೇಸರಾಗುತಿದೆ
ಎದೆಯೊಳಗೊಂದೇ ರಾಗ
ಕೊರತೆಯಿಲ್ಲದ ಜೀವನದಿಗೋ
ಒರತೆಯೇ ಬತ್ತುವ ಯೋಗ
ಬಂದಿತೋ ಬಾರದೋ
ಸಂತಸದ ಹನಿಯೊಂದು ಎದೆಗೆ?
ಬಯಕೆಯೇ ಇಲ್ಲದೆ
ಎಳೆಯುವ ಬದುಕಿದು ಎಲ್ಲಿಗೆ??
ಎಲ್ಲ ಸಂದೇಶ,ಬಗೆ ಬಗೆಯ
ಸಲಹೆಗಳು ಬೇಸರದ ಒಡಲಿಗೆ!
ಲಾವದೊಳಕ್ಕೆ ಬಿದ್ದ ನೀರ
ಬಿಂದುವಾಯಿತಲ್ಲ ಕೊನೆಗೆ!!
ಕನ್ನಡಿಯ ನೋಡಿ ನಕ್ಕರೆ
ಅದೋ ಅಳುತಿದೆ ನನ್ನದೇ ಬಿಂಬ,
ಯಾವ ಘಟನೆ ಗೀಚುತಿದೆ ಈ
ಬೇಸರವ ಮನ ತುಂಬ?
ಯೋಚಿಸಿದೆ, ಯೋಚನೆಯ ಒಳಗೇ
ನಕ್ಕಿತಲ್ಲ ಜಂಗಮವಾಣಿ
ಹಾ!ಸಿಕ್ಕಿಬಿಟ್ಟಿತು ನೋಡಿ
ಬೇಸರದ ಮೂಲವೇಣಿ,
ಬೇಸರದ ಮೂಲವರಿಯಲು
ಕಾದು ಕುಳಿತು ಹೀಗೆ
ಮರೆತಿತು ಹೇಗೆ ಮನಸು ಬೇಸರದ
ಮೂಲ ಬರದ ಅವನ ಒಸಗೆ!!