Thursday, April 24, 2014

ವ್ಯಾಪ್ತಿ-ಪ್ರಾಪ್ತಿ

ಭಾಗ (೧) : ಪ್ರಕಾಶ್ ಹೆಗಡೆಯವರ "ಬೇಲಿ" http://ittigecement.blogspot.in/2014/04/blog-post.html

ಭಾಗ (೨) : ದಿನಕರ್ ಮೋಗೆರರವರ "ದಣಪೆ" http://dinakarmoger.blogspot.in/2014/04/blog-post_14.html 

ಭಾಗ (೩) : ಬಾಲು ಸರ್ ರವರ "ಎಲ್ಲೆಯ ಮಿಂಚು" http://nimmolagobba.blogspot.in/2014/04/blog-post_1912.html

ಭಾಗ (೪) : "ಮಿತಿ" ರೂಪಾ ಸತೀಶ್ http://www.bilimugilu.blogspot.in/2014/04/blog-post_24.html

ಇದನ್ನ ಮುಂದುವರೆಸುವ ಪುಟ್ಟ ಪ್ರಯತ್ನ

ವ್ಯಾಪ್ತಿ-ಪ್ರಾಪ್ತಿ

ಹಾ... ಈ ನಂಬರ್ ಅವರ ಆಫೀಸಿನದ್ದಲ್ಲ ಮ ನೆ ಯ ವ್ಯವಹಾರಗಳಿಗಾಗಿ ಇಟ್ಟುಕೊಂಡ ಮತ್ತೊಂದು ನಂಬರು ..ಆದರೆ ಉಪಯೋಗಿಸಿದ್ದು ಬಹಳ ಕಮ್ಮಿ.. ನಮ್ಮ ನಿತ್ಯದ ವ್ಯವಹಾರಕ್ಕೂ ಅವರು ಅಫೀಸಿನ ಫೋನನ್ನೇ ಬಳಸುತ್ತಿದ್ದರು . ಅಷ್ಟಕ್ಕೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಹುಡುಕುವ ಯಾವ ಪ್ರಮೇಯವೂ ಬಂದಿರಲಿಲ್ಲ ..ನಾನು  ಅನುಮಾನಿಸಿದವಳಲ್ಲ.. ಕೈಯಲ್ಲಿದ್ದ ಮೊಬೈಲು..ಅದರಲ್ಲಿದ್ದ ನೂರೆಂಟು ಪ್ರೇಮಮಯ ಸಂದೇಶಗಳು ನನ್ನ ನಂಬಿಕೆಯ ಭಧ್ರ ಕೋಟೆಯನ್ನ ಒಂದೇ ಏಟಿಗೆ ಹೊಡೆದುರುಳಿಸಿತ್ತು...

ಈ ಕ್ಷಣಕ್ಕೆ ಬಂದ ಕೋಪಕ್ಕೆ ಬಟ್ಟೆ ಎಲ್ಲಾ ಪ್ಯಾಕ್ ಮಾಡಿ ಹೋಗಿಬಿಡಲೇ? ಇಲ್ಲ ಇಲ್ಲ ...ಕಾಲ್ ಮಾಡಿ"ನಿಮ್ಮ ಮಂಗಳಕರ ಬುದ್ಧಿ ಗೊತ್ತಾಯ್ತು " ಎಂದು ಕೂಗಾಡಿ ಡೈವೋರ್ಸ್ಗೆ ಅಪ್ಪ್ಲೈ ಮಾಡ ಬೇಕು ..ಈ ಗಂಡಿಗೆ ಸರಿಯಾಗಿ ಬುದ್ಧಿ ಕಲಿಸಬೇಕು..ಹಾಗೆ ಆಕೆಗೂ ... "ಅಹಹ .. ಡೈವೋರ್ಸೆ ಮಾಡಿದ್ರೆ ನಿನ್ನ ಗಂಡ  ಸರಿ  ಹೋಗ್ತಾನಾ? ಮಳ್ಳು ನಿನಗೆ.. ಹಾಳಾಗಿ ಹೋಗ್ತಾನೆ..ಇನ್ನೂ ಒಳ್ಳೇದೆ ಆಗುತ್ತೆ..ಈಗ ಕದ್ದು ಮುಚ್ಚಿ ನಡೀತಿರೋದು..ಮನೆಯಲ್ಲೇ ಶುರುವಾಗುತ್ತೆ " ಅಂತರಾತ್ಮ ಚುಚ್ಚತೊಡಗಿತ್ತು ... ಏನೂ ತೋಚದವಳಮ್ತೆ ಹಾಸಿಗೆಯ ಮೇಲೆ ಬಿದ್ದೆ .. ಮಾನಸಿಕ ತುಮುಲಕ್ಕೆ ಒಳಗಾದ ದೇಹ ನಿದ್ರೆಗೆ ಶರಣಾದ್ದು ತಿಳಿಯಲಿಲ್ಲ

ಎಚ್ಚರವಾಯ್ತು... ಬೆಚ್ಚಿಬಿದ್ದು ನೋಡಿದೆ  ಗಂಟೆ ೨.ರಾತ್ರಿ  ತಿನ್ನದೇ ಮಲಗಿದ್ದಕ್ಕೆ ಹೊಟ್ಟೆ ಚುರುಗುಟ್ಟುತ್ತಿತ್ತು..ಉರುಳಿ ಹೋಗುತ್ತಿರುವ ಸಾಮ್ರಾಜ್ಯದ ಸಾಮ್ರಾಜ್ಞಿ ನಾನು ...ಇಂತಹ ಶೂನ್ಯದಲ್ಲು ಹೊಟ್ಟೆ ಹಸಿವಾಯ್ತು ಹೇಗೆ..ತಿನ್ನಲೇ ಬಾರದು..ಇದು ಪಾಪಿಯ ಮನೆ ಓಡಿ ಹೋಗಬೇಕು ..ಇಂತದ್ದೆ ಯೊಚನೆಗಳು.."ಯಾಕೆ... ಇವತ್ತಷ್ಟೇ ನಿನ್ನ ಗೆಳೆಯ ಕಾವಲಿದ್ದ ಕೋಟೆಗೆ ನುಗ್ಗಿರಲಿಲ್ಲವೇ? ಆಗ  ನಿನ್ನ ವಿವೇಕ ಎಲ್ಲಿತ್ತು?... " ಅಂತರಾತ್ಮ ಮತ್ತೆ ಚುಚ್ಚಿತು ..ಇದ್ದಕ್ಕಿದ್ದಂತೆ ಓಶೋ  ನೆನಪಾದರೂ..ಅಪ್ಪ ಮತ್ತು ಅಮ್ಮ ನೆನಪಾದರು. ವರ್ಷ ಹೊತ್ತು ಹೆತ್ತು ಮುದ್ದಾಡಿದ್ದ ಮಗು ನೆನಪಾಯ್ತು... ನಾನು ಸಾಯಬೇಕು  ಅನ್ನಿಸುತ್ತಿತ್ತು ... ಹಿಂದೆಯೇ..ಸತ್ತರೇನು ಪ್ರಯೋಜನ..ಇದ್ದಾಗಲೇ ಸರಿಯಾಗದ್ದು ಇಲ್ಲದಿದ್ದಾಗ ಸರಿ ಆಗುತ್ತದೆಯೇ?.ಅನ್ನಿಸಿತು ...

ದೇವರ ಮನೆಯ ನಂದಾ  ದೀಪದ  ಮಂದ ಬೆಳಕು ಕರೆದಿತ್ತು..ಹೋಗಿ ಸುಮ್ಮನೆ ಕುಳಿತೆ...ಮನದಲ್ಲಿದ್ದ ಆತಂಕ ನಿಧಾನಕ್ಕೆ ಕಮ್ಮಿ ಯಾದದ್ದು ಗಮನಕ್ಕೆ ಬರುತ್ತಾ ಹೋಯಿತು... ಓಶೋ ಮಾತು ನೆನಪಾಯ್ತು.."ಕಾಮ ಮೂಲದಿಂದ ಹುಟ್ಟಿದ ಎಲ್ಲ ಸಂಬಂಧಗಳಲ್ಲೂ ದು:ಖ ಸ್ಥಾಯಿ ..ಯಾವ ನಿರ್ಧಾರವು(ಗಂಡನನ್ನ ಅಥವಾ ಹೆಂಡತಿಯನ್ನ ಬದಲಿಸುವ ) ಹೆಣ  ಹೊತ್ತ ಹೆಗಲನ್ನು ಬದಲಾಯಿಸುವಷ್ಟೆ  ನಿರರ್ಥಕ...." "ಈಗ ಆದದ್ದಾದರೂ  ಏನು? ಒಂದಷ್ಟು ನಿನ್ನ ಮನಸ್ಸಿಗೆ ಆತಂಕ ಹುಟ್ಟಿಸುವ ಸಂದೇಶಗಳು ..ಅಷ್ಟೇ  ತಾನೇ ...ದೋಷ  ನನ್ನದು ಇದೆ..ಅವನದ್ದು ಕೂಡ .. ಬದುಕಿಗೆ ಬೆನ್ನು ತಿರುಗಿಸೋ ಯಾವ ಯೋಚನೆಯು ಬದುಕು ಕಟ್ಟಲಾರದು ..ಇದಕ್ಕೆ ನಿನ್ನ ಆತ್ಮಶಕ್ತಿಯೇ ಬೆಳಕು..ತೀರ ಕೈ ಮೀರಿದರೆ ಒಂಟಿ ಬದುಕು.... ಆದರೆ ಪ್ರಯತ್ನಿಸಲೇ ಬೇಕು..ಹೇಡಿಯಾಗಬಾರದು" ನಿರ್ಧಾರವೊಂದು  ಮನಕ್ಕೂ ಕಾಲಿಗೂ ಶಕ್ತಿ ನೀಡಿತ್ತು ..

ಕುಕ್ಕರಿನಲ್ಲಿ ಇದ್ದ ಸಲ್ಪ ಅನ್ನವನ್ನು ,ಮೊಸರಿನೊಂದಿಗೆ ತಿಂದೆ. ಮಧ್ಯ ರಾತ್ರಿಯ ಮೀಟಿಂಗು .ರಾತ್ರಿ  ಲೇಟ್ ಬರುತ್ತಿದ್ದ ಹಿಂದಿನ ನಿಜ ಕಾರಣಗಳೆಲ್ಲಾ ಈಗ ನಿಚ್ಚಳವಾಗಿದ್ದವು.. ಆದರು ತಪ್ಪು ತನ್ನದೇ ತುಂಬಾ ದಿವಸದಿಂದ ಅವರು ಕರೆಯುತ್ತಲೇ ಇದ್ದರು .."ಮನೆಯಲ್ಲೇ ಕೂತು ಏನು ಮಾಡುತ್ತಿ ..ಆಫೀಸಿಗೆ ಬಾ...ಮ್ಯಾನೇಜ್ ಮೆಂಟು  ನಿಂದೆ " ಇವತ್ತಿಂದ ಹೋಗಲೇ ಬೇಕು ..ನಿರ್ಧರಿಸಿದೆ ..ಸಮಯ ನೋಡಿದೆ..ಐದು ಗಂಟೆ .... ಕನ್ನಡಿಯ ಮುಂದೆ ನಿಂತೆ ... ಕನ್ನಡಿಯಲ್ಲಿದ್ದಾಕೆ ಅಷ್ಟು ಅಸಹ್ಯವಿರಲಿಲ್ಲ..ನೋವು ತುಂಬಿದ ನಿದ್ದೆ ಇಲ್ಲದ ಕಣ್ಣುಗಳನ್ನು ಬಿಟ್ಟರೆ ದೇಹದಲ್ಲಿ ಜಾಸ್ತಿ ಇರಬಹುದಾದ ಮೂರು ಕೆಜಿ ಕೊಬ್ಬು ಮಡಿಕೆ ಆಗಿತ್ತು..ಇವತ್ತಿಂದ ಜಿಮ್ಮಿಗೂ ಹೋಗಬೇಕು ಅಂದುಕೊಂಡೆ ... ಮಗು ನೆನಪಾಯ್ತು .. ಅಮ್ಮನ ಹತ್ತಿರ ಸಲ್ಪ ಮಾತಾಡಿ ಹಾಗೆ ಅಲ್ಲಿಂದ ಆಫಿಸಿಗೆ ಹೋಗೋಣ ಎಂದು ತೀರ್ಮಾನಿಸಿ ಸ್ನಾನಕ್ಕೆ ನಡೆದೆ ....

ಈಗ ಅಮ್ಮನ ಮನೆ ಮುಂದಿದ್ದೇನೆ ..ಪಾಪುವಿನೋಂದಿಗೆ ಬಂದ ಅಮ್ಮ ನನ್ನ ನೋಡಿ ಆಶ್ಚರ್ಯ ಪಟ್ಟರು .."ಏನೇ ಇದು ಇಷ್ಟ್  ಬೆಳಗ್ಗೆ?" " ಏನಿಲ್ಲ  ಅಮ್ಮಾ .ಅವರು ಮನೇಲಿಲ್ಲ..ವ್ಯವಹಾರದ ಸಲುವಾಗಿ ಎಲ್ಲೋ ಹೋಗಿದ್ದಾರೆ. .. ಮನೇಲಿ ಒಬ್ಳೇ ..ಬೇಜಾರಾಯ್ತು ಬಂದೆ... " ಅವಳು ಅಮ್ಮ ಅಲ್ವೇ ನನ್ನ ತುಮುಲ ಆಕೆಯ ಮಮತೆಗೆ ನಿಚ್ಚಳ ... "ಸುಳ್ಳು ಹೇಳ್ತಿದ್ದಿ  ಅಂತ ಗೊತ್ತು ..ಬಾ ಒಳಗೆ..." ಅಪ್ಪ ಪತ್ರಿಕೆ ಓದುತ್ತಿದ್ದವರು ತಲೆ ಎತ್ತಿ "ಪುಟ್ಟಾ ಕುತ್ಕೊ... ನಿಂಗೆ ಏನೋ ಹೇಳ್ಬೇಕು"
"ಏನಪ್ಪಾ" ಅಂದೆ ಕೂತ್ಕೊಳ್ತಾ .."ನೀನಿದನ್ನ ತಪ್ಪು ತಿಳಿಬೇಡ ..ನೋಡು  ಮಗು ನಮಗೆ ಅಡ್ಜಷ್ಟ್  ಆಗಿದಾನೆ ..ನೀನಿಗ ನಿನ್ನ ಬದುಕು ನೋಡ್ಕೊ ಬೇಕಮ್ಮ ...ಹೆಣ್ಣು ಮಕ್ಕಳು ಮನೆಯಲ್ಲಿ ಕೂತರೆ ಸದರ ..ನಿಮ್ಮದೆ ಆಫಿಸು ಇದೆ..ಗಂಡ ನೀನು ಒಟ್ಟಿಗಿದ್ದರೆ ಕಂಪನಿ ಬೆಳೆಯುತ್ತೆ.. ಹಾಗು ಮನಸ್ಸಿಗೂ ನೆಮ್ಮದಿ".... ನನ್ನ ಕಣ್ಣುಗಳು ಅಪ್ಪನ ಕಣ್ಣುಗಳನ್ನ ಸಂಧಿಸಿದವು..ತಳಮಳ"ಅಪ್ಪನಿಗೆ ಎಲ್ಲವು ಗೊತ್ತೇ .ಆದಕ್ಕೆ  ಹೀಗನ್ನುತ್ತಿದ್ದಾರೆಯೇ..ಅಲ್ಲವೇ ಮತ್ತೆ ಇದರ ಹಿಂದಿನ ಮರ್ಮ ಏನಿರಲಿ..ನನ್ನ ಒಳ್ಳೇದಕ್ಕೆ ತಾನೆ... " ಮನಸ್ಸು ಯೋಚಿಸುತ್ತಿತ್ತು "ಹೂ ಅಪ್ಪಾ..ಅದನ್ನೇ ಹೇಳೋಣ ಅಂತ ಬಂದೆ ..ಇವತ್ತಿಂದ  ಆಫೀಸಿಗೆ ಹೋಗ್ತಾ ಇದ್ದೀನಿ ..ಪಾಪುನಾ ಸಂಜೆ ಬಂದು ಕರ್ಕೊಂಡು ಹೋಗ್ತಿನಿ.." ನನ್ನ ನೋಡಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಿ ಬಂದು ಅಪ್ಪಿದ ಪುಟ್ಟ ದೇವರ ತೋಳುಗಳಲ್ಲಿ ನನಗೆ ನನ್ನ ಗುರಿ ಸ್ಪಷ್ಟವಾಯ್ತು ...

ಮನೆಯಲ್ಲಿ ಅಮ್ಮನ ಕೈ ಉಪ್ಪಿಟ್ಟು ತಿಂದು..ಮಗುಗೆ ಸಂಜೆ ಬರುವ ಪ್ರಾಮಿಸ್ ಮಾಡಿ ಆಫೀಸಿಗೆ ನಡೆದಿದ್ದೇನೆ ... ಇದೋ ನಮ್ಮದೇ ಅಲ್ಲ ಇನ್ನು ನನ್ನದೇ ಆಫೀಸು..ಬಾಗಿಲು ತೆರೆದಿದೆ... ಒಳ ನುಗ್ಗಿದೆ .. ಯಾರು ಇರಲಿಲ್ಲ... ಸೀದಾ  ಇವರ ಕ್ಯಾಬಿನ್ ಹತ್ತಿರ ಹೋದೆ...ಬಾಗಿಲು ಹಾಕಿರಲಿಲ್ಲ .. ನೂಕಿದೆ ...  ಒಳಗಿದ್ದ ವ್ಯಕ್ತಿಯನ್ನ ನೋಡಿ ನನಗು ನನ್ನ ನೊಡಿ ಆ ವ್ಯಕ್ತಿಗೂ ಶಾಕ್ ಆಯಿತು "ನೀನು ಇಲ್ಲಿ..??".........

(ಮುಂದುವರೆಯುವುದು ...)