Saturday, October 13, 2012

ಒಂದು ಕವನ ಗುಚ್ಛ

ಇಲ್ಲಿ ಕೆಲ ಪುಟ್ಟ ಪುಟ್ಟ ಕವನಗಳಿವೆ...ಕೆಲವು ಏಕಾಂತದಲ್ಲಿ ಕೆಲವು ಕೆಲಸದ ಒತ್ತಡದಲ್ಲಿದ್ದಾಗ ಬರೆದದ್ದು...ನಿಮಗೂ ಇಷ್ಟವಾದೀತು ಅನ್ನೋ ನಂಬಿಕೆ ನನ್ನದು...

ಇಬ್ಬನಿ
ಶಿಶಿರದ ರಾತ್ರಿಗಳಲ್ಲಿ
ತಣ್ಣಗೆ ಸುರಿವ ಚಳಿಗೆ
ವಸುಂಧರೆ ನಡುಗುತ್ತಾಳೆ

ಚಂದಿರನೂ ನನ್ನ ಸಂತೈಸುವ
ಬದಲು ವಿರಹದ ಶೀತಲ
ಕಿರಣಗಳ ಸುರಿದ
ಎಂದು ಅಳುತ್ತಾಳೆ

ಅವಳ ನೋವ ನೋಡಲಾಗದ
ಗೆಣೆಕಾರ ದಿನಕರ
ಚುಮು ಚುಮು ಬೆಳಗಿನ
ಬಿಸಿಲ ಅಪ್ಪುಗೆಯಲ್ಲಿ
ಒರೆಸುತ್ತಾನೆ ಅವಳ
ಕಂಬನಿ
ಮುಂಜಾವಿನ ಇಬ್ಬನಿ!!

ಪ್ರಶ್ನೋತ್ತರ(ನಾನು ಮತ್ತು ನನ್ನ ಝೆನ್ ಗುರು)
 ನಾ ಕೇಳಿದೆ "ಬೆಲೆಯೇನು?
ಅವ"ತಕ್ಕೊಂಡಿದ್ದೇನು ಇಲ್ಲ" 

’ನಾ ದೇವರ ನೋಡಬೇಕಿತ್ತು’

"ಮಾವಿನ ಮರವಾಗು" ಅಂದ

’ಕಣ್ಣಲ್ಲಿ ಬೆಳಕು ಯಾರದ್ದು”
ಉತ್ತರ "ಹೂಗಳು ಅರಳುವುದ ನೋಡು"

ನಾ ಹೇಳಿದೆ ’ನನ್ನ ಮೊತ್ತ ಸೊನ್ನೆ’
"ಮೊದಲು ಕೊಡುವುದ ಕಲಿ"

’ನಾ ಬೆಳಕಾಗಬೇಕು’
ಉತ್ತರ ಹೀಗಿತ್ತು
"ನಿಲ್ಲದ ಪಯಣಕ್ಕೆ ತಯಾರಾಗು"

ಮುತ್ತು
ನಲ್ಲ ...
ನಿನ್ನ ತುಟಿಗಳ ಅಂಚಿನಲ್ಲಿ
ಸುರಿವ ಮುಗ್ಧ ನಗೆಯ
ಮೋಡಿಯಲ್ಲಿ ಮರೆತರೆ
ಹೊತ್ತು
ಕಣ್ಣ ತುಂಬಿ ನಿನ್ನ 
ಬೀಳ್ಕೊಡುವಾಗ 
ಮರೆತೇ ಹೋದೇನು
ವಾಡಿಕೆಯ ಸಿಹಿ
ಮುತ್ತು!!

ಸಿಕ್ಕಿದ್ದು
ನಿನ್ನ ನೆನಪುಗಳ ಸಾಗರವ
ಸೋಸಿದಾಗ ಸಿಕ್ಕಿದ್ದು
ಬೊಗಸೆ ತುಂಬಾ ಕಣ್ಣ ಹನಿ 
ಎದೆಯ ತುಂಬಾ 
ಕವಿತೆಗಳ ಸಾಲು ಸಾಲು!!

ಆಫೀಸು ಮತ್ತು ನಾನು
ಈ ಮಧ್ಯಾಹ್ನದ ನೀರವ 
ಏಕಾಂತದಲ್ಲಿ
ಲೆಡ್ಜರು ರೆಸಿಪ್ಟು ಇನ್ವಾಯ್ಸುಗಳ
ಮಧ್ಯೆ ನನ್ನ ಧ್ವನಿ ಕಳಕೊಂಡಿದ್ದೇನೆ
ತಣ್ಣನೆಯ ಈ ಕೊಠಡಿಯಲ್ಲಿ
ಕುಳಿತು ಹೊರ ಜಗತ್ತಿನ
ಆಗುಹೋಗುಗಳ ನಿರುಕಿಸುವ 
ನಾನು ನಮ್ಮ ಆಫೀಸಿನ
ಗಡಿಯಾರಕ್ಕಿಂತ ಬೇರೆ ಅಲ್ಲ 
ಅನ್ನುವ ಸತ್ಯದ ಅರಿವಾದಂತೆ
ನನ್ನ ಕಳೆದು ಹೋದ ಭಾವಗಳ
ಬೆನ್ನು ಹತ್ತಿ ಒಮ್ಮೆ ಬೆವರಿದ್ದೇನೆ!!

ಉಳಿದದ್ದು 
ನಿನ್ನ ಒಲುಮೆಯ ಸಾಗರದ 
ಮೇಲೆ ತೇಲುವ ನನ್ನ 
ಭರವಸೆಯ ದೋಣಿಯನ್ನು
ಹುಸಿ ಆಣೆ ಪ್ರಮಾಣಗಳ 
ಬಿರುಗಾಳಿ ಮುಳುಗಿಸಿದೆ 
ಆದರೂ
ಮಾತೆಲ್ಲ ಮುಗಿದಿದೆ
ಒಲವೊಂದೆ ಉಳಿದಿದೆ!! 
 

 

Tuesday, October 9, 2012

ವಿದಾಯ

ನೀ ಮಾತು ಬಿಟ್ಟ  ಕ್ಷಣದಿಂದ
ನಾ ಮೌನಿಯಾದೆ
ನನ್ನ ಜಗತ್ತು ಸ್ತಬ್ಧವಾಯ್ತು
ಎನ್ನಲಾರೆ
ನಿನ್ನ ಮಾತು ನಿಂತ ಮರು ಗಳಿಗೆಯೆ
ಹೃದಯ ಅರಳಿತು
ಹೊಸಾ ಕನಸೊಂದು ಮರಳಿತು

ಈ ದಡದಿಂದ ಆ ದಡಕ್ಕೆ ಮತ್ತೆ ನಿಲ್ಲದ ಪಯಣ
ನಡುವೆ ಆಸೆಗಳ ಮಹಾಪೂರ
ನಿನ್ನ ಕಂಗಳಲ್ಲಿ ಸುಖದ ಕೈ ಹುಟ್ಟು
ಹುಡುಕುವಾಸೆ ಬಿಟ್ಟು ಬಿಟ್ಟಿದ್ದೇನೆ
ಕನಸ ದೋಣಿಯನ್ನೇರಿ ಒಂಟಿಯಾಗಿ
ದಿಗ್ವಿಜಯಕ್ಕೆ ಹೊರಟಿದ್ದೇನೆ

ಸಾಧ್ಯವಾದರೆ ಒಮ್ಮೆ ನಿಂತು ಹಾರೈಸಿಬಿಡು
ವರ್ತಮಾನದಿಂದ ಭವಿಷ್ಯಕ್ಕೆ ನಿನ್ನ ಕ್ರೂರ ನಡತೆಯ
ನೆನಪುಗಳ ಕೊಂಡೊಯ್ಯುವಾಸೆ ಇಲ್ಲ
 ಈಗ ನನ್ನಲ್ಲಿ ನಿನಗಾಗಿ ದ್ವೇಷ ಕೂಡ ಇಲ್ಲ

ನೀ ನನ್ನ  ಭೂತಕಾಲಕ್ಕೆ ಸೇರಿದವನಾದ್ದರಿಂದಲೇ
ಮಾತು ಬಿಟ್ಟ ಕ್ಷಣದಿಂದ
ಆಪ್ತನಾದೆ!!

Sunday, October 7, 2012

ಹಾಗೊಂದು ಝಲಕ್


ಈ ಕೆಂಪುದೀಪದ
ಬೀದಿಗಳಲ್ಲಿ
ನಾನು ದಿನಾಲೂ ಓಡಾಡುವೆ
ಬತ್ತಿದ ಪುಟ್ಟ ಕೈಗಳ
ಬಾಲಕಿ
ತನ್ನಿರವಿನ ಅರಿವಿಲ್ಲದೆ
ಅಮ್ಮನ
ಧಂಧೆ ನೋಡುತ್ತಾ
ತನ್ನಷ್ಟಕ್ಕೆ ಒಳ ಲಂಗಕ್ಕೆ
ಕೈ
ಹಾಕುವಾಗುಮ್ಮೆ ತಣ್ಣಗೆ
ಬೆಚ್ಚಿದ್ದೇನೆ,
ನನ್ನ ಕೈಗಳಲ್ಲಿದ್ದ ಟೀ
ಲೋಟಗಳಂತೆ
ಬಿಸಿ ಬಿಸಿ ಎಂದು ಬದುಕ
ಮಾರುವದನ್ನು
ಕಾಣುತ್ತಲೇ ಇರುವೆ
ತಂತಿ ಮೇಲಿದ್ದ
ಕಾಗೆ ಗುಬ್ಬಿಯನ್ನ ಕಚ್ಚದಿರುವುದ
ಕಂಡು ಬೆರಗಾಗುತ್ತೇನೆ,
ಅಲ್ಲಿ ನಗರದ ದೊಡ್ದ ಹೋಟೆಲುಗಳಲ್ಲಿ
ಗಂಡನಿಲ್ಲದ
ನೀರವ ಮಧ್ಯಾಹ್ನಗಳಲ್ಲಿ
ದೊಡ್ಡ ಕುಂಕುಮದ ಪತಿವ್ರತೆಯರು
ಕಾಮಸೂತ್ರದ ಜಾಹೀರಾತಿನ
ಹೆಂಗಳೆಯರಾಗುವುದು
ನಿಜವೇ? ಇಲ್ಲಿ
ಕೆಂಪು ದೀಪದಡಿಯಲ್ಲಿ
ನಿಂತು ಇನ್ನೂ
ಮೀಸೆ ಮೂಡದ ನನ್ನ
ಕಣ್ಣು ಮಿಟುಕಿಸಿ ಎದೆ
ತೆರೆಯುವ ಹೆಣ್ಗಳು
ಇದು ಬದುಕಿಗಾಗಷ್ಟೇ
ಎನ್ನುವ ನಿರಾಳತೆಯಲ್ಲಿದ್ದರೆ
ಗಂಡನೊಡನೆ ರಾತ್ರಿ
ಎದೆಯ ಗಾಯ
ಮುಚ್ಚಿಟ್ಟು
ಮಿಥುನದಲ್ಲಿ ತೊಡಗುವ
ದೊಡ್ಡ ಕುಂಕುಮದ
ಪತಿವ್ರತೆಯರಿಗೆ
ಯಾವುದರ ಚಿಂತೆ?