ಯಾರೋ ಹೇಳಿದ್ರು,
ನೋಡೂ ನಿನ್ನ ಕಣ್ಣು ಚಂದ ಇಲ್ಲ
ಇನ್ಯಾರೋ ಕೂಗಿದ್ರು
ಓ, ಅದೇ ಆ ಬಣ್ಣ ನಿನಗೆ ಚಂದ ಕಾಣೋದಿಲ್ಲ
ಕೂದಲು ಹಾರಿಬಿಡಬೇಡ
ಇನ್ನೊಂದು ದನಿ ನನಗೆ ನಿನ್ನ ಯಾವ ವಿಷಯ ಕೂಡ ಇಷ್ಟವಾಗೋದಿಲ್ಲ
ನಿನ್ನ ಕೂದಲು ಯಾಕೆ ಹೀಗೆ ಗುಂಗುರು
ನಿನ್ನ ತುಟಿ ಯಾಕೆ ಸಣ್ಣ
ನೀನೇಕೆ ತೆಳ್ಳಗಿಲ್ಲ
ನನ್ನ ದೇಹದ ಮೇಲೆ
ಮನಸಿನ ಮೇಲೆ ನಡೆಸಿಧ
ಅದೆಷ್ಟೋ ಧಾಳಿಗಳ ನಡುವೆ
ನಾನು ನಾನಾಗಿ ನಿಂತಿದ್ದೇನೆ
ಅವತ್ತು ನೀನು ದಬ್ಬಿ ಹೊರಹಾಕಿದ
ರಸ್ತೆಗಳಲ್ಲಿ ಅಕ್ಷರಶಃ ಪ್ರತಿ ಕ್ಷಣ ನಾನು
ಜೀವಿಸಿದ್ದೇನೆ
ವೈಯುಕ್ತಿಕ ಧಾಳಿಗಳು ಹೇಡಿತನದ ಲಕ್ಷಣ
ಹಾಗೆಂದೇ ಧೈರ್ಯವಾಗಿ
ವಿರೋಚಿತವಾಗಿ ಎಲ್ಲ ಎದುರಿಸಿ ಮುಂದೆ ಸಾಗಿದ್ದೇನೆ
ನಾನು ನನ್ನಂತೆಯೇ ಇದ್ದು!😊
ಶಮ್ಮಿ
ಬಯಲ ಬೇಲಿಯ ದಾಟಿ ಮಲ್ಲಿಗೆಯ ಕಂಪು ಮನದ ಬೇಲಿಯ ದಾಟಿತು ಮಂದಾರದ ನುಣುಪು, ಬದುಕ ಹಾಡು ಮಲ್ಲಿಗೆ,ಬಯಕೆ ಹಾಡು ಮಂದಾರ!!!
Friday, November 10, 2017
ನಾನು ನನ್ನಂತೆ
Thursday, September 14, 2017
ಬದುಕೊಂದು ಮುಗಿಯದ ಉತ್ಸವ
ಪಕ್ಕದ ಮನೆಯವಳ ನೋಂಪಿ, ಅವರಲ್ಲಿ ಅದನ್ನ ಪರಬು ಅಂತ ಕರೀತಾರಂತೆ,ಮಕ್ಕಳ ಆರೋಗ್ಯದ ಸಲುವಾಗೊಮ್ಮೆ,ಮತ್ತೆ ಅವಳ ತಾಳಿ ಭಾಗ್ಯದ ಸಲುವಾಗೊಮ್ಮೆ, ಅವಳಿಗೆ ಅದು ಅನಿವಾರ್ಯ ಕರ್ಮ(ಬಿಹಾರಿಗಳಲ್ಲಿ ವ್ರತ ಮಾಡದಿರುವುದು ಬಹಿಷ್ಕಾರಕ್ಕೆ ಅರ್ಹ ಅಪರಾಧ ಹೆಣ್ಣು ಮಕ್ಕಳಿಗೆ ಮಾತ್ರ!)ಅವಳ ಗಂಡ ಯಥಾ ಪ್ರಕಾರ ಬೆಳಗ್ಗೆ ೧೨ ಗಂಟೆಗೆ ಎದ್ದು ಜೋರಾಗಿ ಗೋವಿಂದ ಗೋವಿಂದ ಎಂದು ಪೂಜೆ ಮಾಡಿ ಹೋದರೆ ಬರುವುದು ಮಧ್ಯ ರಾತ್ರಿ ಮೂರುಗಂಟೆಗೆ ಫುಲ್ಲಿ ಟೈಟಗಿ....ಇಂತಿಪ್ಪ ಗಂಡನ ಹೆಂಡತಿ ಇಡೀ ದಿನ ತೊಟ್ಟು ನೀರು ಕುಡಿಯದೆ ಇರುವ ಎರಡು ಸೈತಾನನಂತ ಮಕ್ಕಳನ್ನು ಸಂಭಾಳಿಸಿ ಸುಸ್ತು ಬಿದ್ದು ಹೋದಳು..ತಾಳಲಾರದೆ ನಾನು ಮಕ್ಕಳಿಗಾದರೂ ಉಣ್ಣಲು ಮಾಡಿಕೊಡಲೇ ಅಂತ ಕೇಳಿದೆ..ಅಷ್ಟು ಕೇಳಿದ್ದೆ ತಡ ಅವಳ ಮಕ್ಕಳು ಗಂಡ ಅತ್ತೆ ಮಾವ ಎಲ್ಲರ ಮೇಲಿನ ಸಿಟ್ಟು ಅವಳಿಗೆ ಉಕ್ಕಿ ಬಂತು,ಮಕ್ಕಳನ್ನು ಒಳಗೆ ಕರೆದು ಮತ್ತೊಮ್ಮೆ ಚನ್ನಾಗಿ ಚಚ್ಚಿದಳು, ನನಗೆ ಈ ಭಾಗ್ಯಕ್ಕೆ ವ್ರತಗಳನ್ನ ಮಾಡಬೇಕಾದರೂ ಯಾಕೆ ಅನ್ನಿಸಿತು...
ಜಗತ್ತು ವೇಗವಾಗಿ ಮುಂದುವರೆದಿದೆ...ಅಷ್ಟೇ ವೇಗದ ತಂತ್ರಜ್ಞಾನಗಳು...ಆದರೆ ಮನುಷ್ಯ? ತನ್ನ ಒಳಗಣ ವ್ಯಕ್ತಿಯಲ್ಲಿದ್ದ ಮಾನವತೆಯನ್ನ ಸಾಯಲು ಬಿಟ್ಟು ಹಣದ ಹೆಣದ ಮೇಲೆ ನಡೆದಾಡುತ್ತಿದ್ದಾನೆ...ಅವನಿಗೆ ಗೊತ್ತಿಲ್ಲದಂಥ ಉಸಿರಾಟಕ್ಕೂ ಕಷ್ಟವಾದ ಹೊಟ್ಟೆಕಿಚ್ಚಿನ ಲೋಕದಲ್ಲಿ ಬದುಕುತ್ತಿದ್ದಾನೆ,
ಏನೇನೋ ನಡೆದಿಹುದು ವಿಜ್ಞಾನ ಸಂಧಾನ
ಮಾನುಷ್ಯ ಭಾಂಡವ್ಯವೊಂದು ಮುರಿದಿಹುದು
ತಾನೊಡರ್ಚಿದಹೊನ್ನ ರಸವೇ ನರನ ಕೊರಳ್ಗೆ
ನೇಣಾಗಿಹುದು ನೋಡು ಮರುಳ ಮುನಿಯ!!
ಹಣವೊಂದೇ ಬದುಕಲ್ಲ ಹಾಗಂತ ಅದು ಅನಿವಾರ್ಯ... ಕಾಂಚನಮೂಲ ಜಗತ್ತು ಅಂತ ಅವತ್ತು ಚಾಣಕ್ಯ ಹೇಳಿದ ನೀತಿ ಇವತ್ತಿಗೂ ಸರ್ಮಸಮ್ಮತವೇ..ಹಾಗಾದರೆ ನೆಮ್ಮದಿ ಎಲ್ಲಿದೆ? ಸಲ್ಪ ಇದ್ದವನಿಗೆ ತನಗಿಂತ ಜಾಸ್ತಿ ಇದ್ದವನ ಮೇಲೆ ಕರುಬು, ಜಾಸ್ತಿ ಇದ್ದವನಿಗೆ ಇನ್ನೂ ಜಾಸ್ತಿ ಇದ್ದವನ ಮೇಲೆ ಉರಿ, ಅವನಂತೆ ಇವನಾಗಲು ಇವನಂತೆ ಅವನಾಗಲು ಹಾರಾಟ ನಿಲ್ಲದ ಹೋರಾಟ, ಇದು ಹಣಕ್ಕಷ್ಟೆ ಅಲ್ಲ, ಓದಿಕೊಂಡ ಸಜ್ಜನರಲ್ಲೂ ಬುದ್ದಿಮತ್ತೆ ಪ್ರದರ್ಶನ ನಿಲ್ಲದ ಕಾಲೆಳೆಯುವ ಆಟ,
ಅವನ ಕಣ್ಗಿವನ ಬಾಳ್ಕುಣಿದಾಟಗಳು ತಪ್ಪು
ಇವನ ಕಣ್ಗಿವನಿರವು ನೋಟಗಳು ಬೆಪ್ಪು
ಅವನವನಿಗವನವನ ಹುಚ್ಚಾಟದಲಿ ನಚ್ಚು
ಶಿವನಿಗಿದೆಲ್ಲವು ಮೆಚ್ಚು ಮರುಳ ಮುನಿಯ!!
ನಾವು ಇನ್ನೊಬ್ಬರಿಗೆ ಸಲಹೆ ನೀಡೋದರಲ್ಲಿ ಅವರನ್ನ ಇದಮಿತ್ಥಂ ಅಂತ ಅಳೆಯೋದರಲ್ಲಿ ಬಹಳ ನಿಪುಣರು, ಇದು ಅನಾದಿಕಾಲದಿಂದ ನಡಕೊಂಡು ಬಂದದ್ದು, ಅನವಶ್ಯಕ ಇನ್ನೊಬ್ಬರ ವಿಷ್ಯದಲ್ಲಿ ಮೂಗು ತೂರಿಸೋದು ಬೇಕಾದವರನ್ನ ಹೊಗಳಿ ಬೇಡದ ಜನಗಳನ್ನ ದಬಾರ್ ಅಂತ ಕೆಳಗೆ ಬೀಳಿಸೋದು ಎಲ್ಲಾ ಮೈಂಡ್ ಗೇಮ್...ಕಾರ್ಪೋರೇಟ್ ಜಗತ್ತು ಇMತಹ ಆಟಗಳನ್ನ ಆಡುತ್ತಲೇ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತದೆ, ಅದು ನಮ್ಮ ಸರ್ವ ಮದಗಳಿಗೂ ಪ್ರೋತ್ಸಾಹ ನೀಡಿ ನಮ್ಮನ್ನ ಪಗಡೆಯಾಗಿ ನಡೆಸಿ ಮಾನವತೆಯನ್ನ ಮರೆಸುತ್ತದೆ...ದೊಡ್ಡದಾಗಿ ನಡೆಸುವ ಚಾರಿಟಿ ಶೋಗಳು ಚಂದಾ ಸಂಗ್ರಹಿಸುವ ಅಭಿಯಾನಗಳು ಒಂಚೂರಾದರೂ ಅಸಮಾನತೆ ಹೊಡೆದೋಡಿಸುತ್ತವೆಯಾ?? ತಿಳಿಯದು....
ಇಂಥ ಪರಿಸ್ಥಿತಿಯಲ್ಲಿ ಬಸವಣ್ಣನ ವಚನದ ಮನನ ಎಷ್ಟು ಪ್ರಸ್ತುತ...ನಿಮ್ಮ ನಿಮ್ಮ ಮಾನವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ಜಗದ ಡೊಂಕು ತಿದ್ದಲು ನಾವೇನು ಅಲ್ಲ,
ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ ।
ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ ।।
ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿ- ।
ನ್ನುದ್ಧಾರವೆಷ್ಟಾಯ್ತೊ? - ಮಂಕುತಿಮ್ಮ ।।
ಹೌದು..ಮನಸ್ಸು ಶಾಂತವಾಗಿಟ್ಟುಕೊಳ್ಳಬೇಕು..ಅದಕ್ಕೆ ಯಾವುದೋ ಸಾವಿರಾರು ರೂಪಾಯಿಗಳ ಕೋರ್ಸಿಗೆ ಸೇರಬೇಕೆ..ವಿಷಾದವೆಂದರೆ ಪ್ರತಿ ಮನುಷ್ಯನಿಗೂ ಅವಶ್ಯಕವಾದ ಬದುಕುವ ಕ್ರಿಯೆಗಳನ್ನು ಮಾರಾಟದ ಸರಕು ಮಾಡಿ ಕೇವಲ ದುಡ್ಡಿದ್ದವರಾಷ್ಟೆ ಅನುಭವಿಸುವ ಸಂಪತ್ತಾಗಿ ಕುಡಿಟ್ಟಿರುವುದು, ಹಾಗಿದ್ದರೂ ಹಿಂದಿನ ಜೀವಗಳು ನಮಗಿಂತ ಚನ್ನಾಗಿ ಬದುಕಿರಲಿಲ್ಲವೇ, ಅಲ್ಲೂ ಕೆಟ್ಟದ್ದಿತ್ತು, ಒಳ್ಳೆಯದೂ...ಅದೇ...ಹಾಗೆ ಹೇಗೆ ಬದುಕಿದರವರು??ಹೇಳಿದಷ್ಟು ಸುಲಭಕ್ಕೆ ನಮ್ಮ ಆಸೆಗಳನ್ನ ನಿಯಂತ್ರಿಸಲಾದೀತೇ? ಇಲ್ಲ.. ಆದರೆ ಪ್ರಯತ್ನಿಸಬಹುದು....
ಅದು ತುಂಬಾ ಸುಲಭ..ಕಳಚಿಕೊಳ್ಳುವುದು ಅಸಾಧ್ಯವೇನಲ್ಲ..
ಹಿಂದಿನವರು ಈ ತರದ ವೈರುಧ್ಯಗಳಿಗೆ ಹೊರತಾಗಿರಲಿಲ್ಲ, ಕೆಲವು ಆತ್ಮಗಳ ಬೆಳಕು(ನಮ್ಬುವದಾದರೆ) ಜೋರಾಗಿ ಪ್ರಕಾಶಿಸಿತು, ಕೆಲವು ತಣ್ಣಗೆ ಹಣತೆಯಷ್ಟೆ ಬೆಳಕು ಚೆಲ್ಲಿ ಹತ್ತಿರ ಬಂದವರ ಬಾಳನ್ನುದ್ಧರಿಸಿ ನಂದಿ ಹೋಯಿತು...ಆ ಸ್ಥಿತಿ ಇಂದಿಗೂ ಇದೆ..ಕಾಲ ಬದಲಾಗಿದೆ ಎನ್ನುವ ಮಾತೆ ತಪ್ಪು, ಮತ್ತೆ ಮಾಡಿದುದನ್ನೇ ಮಾಡುತ್ತಾ ಆಡಿದುದನ್ನೇ ಆಡುತ್ತಾ ತೊಟ್ಟ ಬಟ್ಟೆಗಳೆಷ್ಟೋ, ಆದರೂ ಅಹಂಕಾರ ಅಳಿಯದು, ಅಂಟು ತೊಳೆಯದು.
ಅಂಟುವುದು ಮನಸ್ಸಿನ ಸಹಜ ಕ್ರಿಯೆ,ಅಂಟಿಕೊಂಡು ಕಳಚಲಾರದೆ ಒದ್ದಾಡಿ ನರಳುವುದು ಕೂಡ ಸಹಜ,ಆದರೆ ಇದು ಕೊಡುವ ನೋವು ತನ್ನನ್ನು ಸುತ್ತಲಿನವರನ್ನು ಭಾದಿಸಬಾರದಷ್ಟೆ,ಅಂಟು ಬಿಡಿಸುವುದು ಸುಲಭಲ್ಲ, ಅದು ಸಂಭಂಧದ ಅಂಟು,ಅಥವಾ ಆಸ್ತಿ ಹಣ ವೈಭವ ಪ್ರಸಿದ್ಧಿ ಯಾವುದಾಗಿರಬಹುದು...ಅದು ಅಂಟಿಕೊಳ್ಳುವ ಮುನ್ನವೇ ಶೋಧಕ್ಕೆ ಒಳಪಡಿಸಿಕೊಳ್ಳುವ ಕ್ರಿಯೆ, ಹಾಗನ್ದಾಕ್ಶಣಕ್ಕೆ, ನಮ್ಮ ಮನಸ್ಸಿನ ಸುತ್ತ ನಿಗ್ರಹದ ಕೋಟೆ ಕಟ್ಟಬೇಕೆ? ಬೇಡ..ಬಂದದ್ದನ್ನ ಅನುಭವಿಸೋದು,ಬಾರದ್ದನ್ನ ಅದರ ಪಾಡಿಗೆ ಬಿಡೋದು, ಬಯಸದೆ ಇರೋದು,ಇವತ್ತಿನದನ್ನ ಇವತ್ತೇ ಅಳಿಸಿ ಹಾಕೋದು,ಹತ್ತರಲ್ಲೊಬ್ಬರಂತೆ ಎಲೆಮರೆಯ ಕಾಯಾಗಿ ಕೈಲಾದಷ್ಟು ಸಹಾಯ ಮಾಡಿ ಹೊಟ್ಟೆ ತುಂಬಾ ಉಂಡು ಜೊತೆಯಲ್ಲಿದ್ದವರಿಗೂ ತಿನ್ನಿಸಿ,ನಕ್ಕು ಹರಟಿ,ಯಾರಿಗೂ ನೋಯಿಸದೆ ನಗುತ್ತಾ ಬದುಕೋದು...ಆಗಲ್ವೆ? ಖಂಡಿತಾ ಆಗುತ್ತೆ ಅದಕ್ಕೆ ಬೇಕಾದ್ದು ಗಾಳಿಯಷ್ಟು ತೇಲುವ ಹಗುರ ಹೃದಯ,ಅಲ್ಲಿ ಕ್ಷಮೆ ಪ್ರೀತಿ ಬಿಟ್ಟರೆ ಇನ್ನೇನು ಸಿಗಬಾರದು, ಮದ ಮಾತ್ಸರ್ಯಗಳ ಬದಲು ದೊಡ್ಡ ಸೊನ್ನೆ, ಖಾಲಿ ಖಾಲಿ ಜಾಗ, ಯಾರು ಬರಬಹುದು ಯಾರು ಹೋಗಬಹುದು,ಯಾವ ಜಂಜಡಗಳಿಲ್ಲ, ನಮ್ಮನ್ನ ನಾವು ಅರ್ಥ ಮಾಡಿಸುವುದು ಸಲ್ಲದು,ಅರ್ಥ ಮಾಡಿಕೊಳ್ಳದೆ ಹೊರ ಹೋದವರನ್ನ ಕಾಡಿಸುವುದು ಸಲ್ಲದು...
ಯೋಚಿಸಿ..ನಾವೊಂದು ದೊಡ್ಡ ಕಾಡು ಅಥವಾ ಬಯಲು ಅಥವಾ ಮರಳುಗಾಡು, ಅಲ್ಲಿರುವ ಯಾವ ಪಕ್ಷಿ ಪ್ರಾಣಿ ಚರ ಚಿರಗಳ ಮೇಲೆ ನಮ್ಮ ಹಕ್ಕಿದೆಯೇ? ಇಲ್ಲ, ನಾವು ನಿಮಿತ್ತಕ್ಕೆ ಇದ್ದು ಬಿಡಬೇಕು, ನೋವೋ ಸಾವೊ ಕಣ್ಣಿರೋ ಮಳೆಹನಿಯೋ ಎಲ್ಲಕ್ಕೂ ತೆರೆದುಕೊಂಡು...ಎಲ್ಲ ಋತುಗಳನ್ನ ಭಾವದ ವಿಷವೋ ಸಾಂತ್ವನದ ಸಿಹಿಯೋ ಯಾವುದು ಅಲ್ಲದಂತೆ...ಸಾಧ್ಯವೇ..ಯೋಚಿಸಿ...ಖಂಡಿತಾ ಸಾಧ್ಯವಿದೆ,...
ಹೀಗೊಂದು ಕ್ರಿಯೆ ನಿರಂತರ ನಡೆದಲ್ಲಿ ಬುದ್ಧಿಪೂರ್ವಕ, ಕೆಲದಿನಗಳ ನಂತರ ನಾವೇ ಹಗುರಾಗುತ್ತೇವೆ...ಅದೊಂದು ಮನಸ್ಸು ಭಾವಗಳು ಇಲ್ಲದಂತೆ ಬಾಸವಾಗುತ್ತೇವೆ,ಒಳಿತು ಕೆಡಕುಗಳು ಗೋಚರಿಸುತ್ತವೆ,ಹಾಗೆ ಮನಸ್ಸು ಹೊಸಾ ಸವಾಲಿಗು ಸದಾ ಎಚ್ಚರಿರುತ್ತದೆ,ಸಾಧನೆಗಿಂತ ಕೀರ್ತಿಗಿಂತ ಸವಿಯಾದ್ದು ಬೇರೇನೋ ಇದೆ ಅನ್ನೋದು ಪ್ರೀತಿಯಾಗಿ ಮಾರ್ಪಡುತ್ತೆ,ಆಗ ಅಂಟು ಕಷ್ಟ ಆಗುತ್ತದೆ...ಮತ್ತು ಹೊರಜಗತ್ತಿನ ತೋರ್ಪಡೆಗಾಗಿ ಮಾಡೋ ಎಲ್ಲ ಕ್ರಿಯೆಗಳು ವ್ರತಗಳು ಪೂಜೆಗಳು ಅವಿವೇಕ ಅನ್ನಿಸುತ್ತದೆ...ಯಾರನ್ನೋ ದ್ವೇಷಿಸೋದು,ಅವಮಾನಿಸೋದು, ಅಥವಾ ಯಾರೋ ಗೊತ್ತಿಲ್ಲದವರು ಅವಮಾನಿಸಿದ್ದಕ್ಕೆ ಕೊರಗೋದು ಯಾವುದು ಇರಲಾರದು....ಬದುಕು ಉತ್ಸವವಾಗುತ್ತೆ....ಅಲ್ವೇ?
Friday, August 25, 2017
ನಮ್ಮ ಗಣಪ ಗೌರಿಯರು ಮಣ್ಣಿಂದಲೆ ಬಂದು ಮಣ್ಣಲ್ಲೇ ಬೆರೆತು
Tuesday, August 22, 2017
ಅಪ್ಪ ಹೇಳಿದ ನಿಯಮಗಳು
೧) ಇವಳ ಗಂಡ(ಸಧ್ಯ ಬರಲಾರ , ಆರು ದಿನದ ಚೀನಾ ಪ್ರವಾಸ)
೨)ನನ್ನ ಹೆಂಡತಿ ( ಇದು ದೊಡ್ಡ ಸಮಸ್ಯೆ)
೩)ಕೆಲಸ-( ಕೊಲೆ ಕೇಸಿನಲ್ಲಿ ಸಿಕ್ಕಿ ಬಿದ್ದರೆ ಖಂಡಿತಾ ಉಳಿಯುವುದಿಲ್ಲ)
ತಕ್ಷಣಕ್ಕೆ ಈ ವಿಷಯ ಯಾರಲ್ಲಿ ಹೇಳಲಿ? ಯಾರು ನಂಬಿಗಸ್ಥರು ಅನ್ನುವುದು ನನಗೆ ತೋಚುತ್ತಿರಲಿಲ್ಲ, ನನ್ನ ಆತ್ಮ ಬಲವೆಲ್ಲ ಪಣಕ್ಕಿಟ್ಟು ಧೈರ್ಯ ತಂದುಕೊಂಡೆ, ಈಗ ಹೆದರಿದರೆ ಕೆಲಸವಾಗದು,ಅಲ್ಲಿಯೇ ತಡಕಾಡಿದೆ, ಎದ್ದು ಗೋಡೆಯ ಮೇಲೆ ಕೈಯಾಡಿಸುತ್ತಾ ನಾಲ್ಕು ಹೆಜ್ಜೆ ನಡೆದೇ. ದೀಪದ ಸ್ವಿಚ್ಚು ಕೈಗೆ ತಗಲಿತು , ಒಂದೊಂದಾಗಿ ಹಾಕುತ್ತ ಬಂದೆ ಮೂರನೆಯದ್ದು ಹಾಲಿನದ್ದು ಹೊತ್ತಿಕೊಂಡಿತು, ಬೆಳಕು ಕಣ್ಣು ಕುಕ್ಕುತ್ತಿತ್ತು, ಅವಳ ದೇಹ ಎತ್ತಲಾಗದ ಭಾರವಿತ್ತು, ಪ್ರಯತ್ನಿಸಲಿಲ್ಲ, ಕೈ ಉಗುರುಗಳನ್ನ ನೋಡಿದೆ, ಒಹ್ ಒಂದೇ ಗಂಟೆಯಾದ್ದರಿಂದ ಜೀವಂತ ಇದ್ದಂತೆಯೇ ಅನಿಸುತ್ತಿದ್ದವು,ಪಕ್ಕದಲ್ಲೇ ಕೂತು ಯೋಚಿಸತೊಡಗಿದೆ
ಸ್ಯಾಮುಯೆಲ್ - ಹೇಳಬಹುದು, ಒಳ್ಳೆಯವ , ಆದರೆ ನಂಬಿಕೆ ಇಲ್ಲ
ದೀಪಾ- ಸೀದಾ ಮನೆಗೆ ವಿಷಯ ತಲುಪುವುದು
ಮನೋಹರ- ಇಂತಹ ವಿಷಯದಲ್ಲೆಲ್ಲ ಹೈ ಇಂಪ್ಲ್ಯೂಯೆನ್ಸ್ ಮಾಡಿಸಬಹುದು, ಆದರೆ ಅವನಿಗೆ ನನ್ನವಳ ಮೇಲೆ ಅತಿಯಾದ ಆದರವಿದೆ , ಇದು ಅಪಾಯ, ಕೈ ಬಿಟ್ಟರು ಬಿಟ್ಟನೇ
ಹೆಂಡತಿ- ಹೋದ ಸಾರಿ ದೀಪಾಳ ಮನೆಯಲ್ಲಿ ಅವಳ ಗಂಡ ಮೋಸ ಮಾಡಿದ್ದನ್ನು ಕಂಡು ದಿಪಾಳಿಗೂ ಹೇಳದೆ ಅವನನ್ನು ಕರೆದು ಬೆದರಿಕೆ ಹಾಕಿ ಸರಿ ದಾರಿಗೆ ತಂದದ್ದನ್ನು ಕಂಡಿದ್ದೇನೆ ತಾನು, ಈಗ ತಾನು ಅದೇ ದಾರಿಯಲ್ಲಿದ್ದೆಯೆಂದರೆ ಏನು ಮಾಡುವಳು? ತಿಳಿಯದು, ಸಣ್ಣದಾಗಿ ತಲೆ ಸಿಡಿಯಲಾರಂಭಿಸಿತು, ಕಣ್ಣು ಕತ್ತಲೆಗಟ್ಟಿತು ಅಷ್ಟೇ!
ಎಚ್ಚರಾದಾಗ ಅವಳು ಎದುರು ಕೂತಿದ್ದಳು , ಕೈ ಚಾಚಿದೆ, ಮೃದುವಾಗಿ ಬೆರಳೊಡನೆ ಆಟವಾಡುತ್ತಾ ಸವರಿದಳು, ಮೈ ಝುಮ್ಮೆನ್ನುವ ಅನುಭವ, ಹಿತವಾಗಿ ಮುಗುಳ್ನಕ್ಕಳು, ನಾನು ನಂಬದವನಂತೆ ಪದೇ ಪದೇ ಕಣ್ಣುಜ್ಜಿದೆ, ಸೋಫಾದ ಕೆಳಗೆ ನೋಡಿದೆ, ಅಲ್ಲಿ ದೇಹ ಬಿದ್ದಿದ್ದ ಯಾವ ಗುರುತು ಇರಲಿಲ್ಲ,"ನಾನು ಭೂತವಾಗಿದ್ದೀನಾ ಅಂತ ಪರೀಕ್ಷಿಸುತ್ತಿದ್ದೀಯಾ?" ಅವಳ ತಣ್ಣನೆಯ ಹರಿತ ದನಿ ತೇಲಿಬಂತು, ಬಲವಂತದ ನಗು ನಕ್ಕೆ, "ಹೇಳು, ನನ್ನ ಯಾಕೆ ಬಿಟ್ಟು ಹೋದೆ?" "ಅ ... ಅ ... ಅದೂ , ಪ್ಲೀಸ್ ಈಗ್ಯಾಕೆ ಹಿಂದಿನ ಮಾತು , ಬಿಟ್ಟು ಬಿಡು, ಈಗ ನನ್ನ ಬರಹೇಳಿದ್ಯಾಕೆ ಮೊದಲು ಹೇಳು , ಪ್ಲೀಸ್" ನಾನು ಅಂಗಲಾಚಿದೆ, "ಇಲ್ಲ, ಕಾರಣ ಹೇಳಲೇಬೇಕು, ನೀನು ಕಾರಣ ಹೇಳಿದರೆ ನಾನು ನಿನಗೆ ಅತಿ ಮುಖ್ಯ ವಿಷಯ ಹೇಳೋದು" ಅವಳು ತುಂಟತನದಲ್ಲಿ(ಬಹುಶಃ ಅದು ನನ್ನ ಕಲ್ಪನೆಯೇ? ನನಗರ್ಥವಾಗಲಿಲ್ಲ)ಅವಳ ಕೆಳ ತುಟಿ ಕಚ್ಚಿದಳು, ನಾನು ಸಲ್ಪ ಹಗುರಾದೆ.
"ನಿಜ ಹೇಳಲಾ,ಸುಳ್ಳ?" ಓ , ಇದು ನಾವಿಬ್ಬರು ಯಾವಾಗಲೂ ಆಡುತ್ತಿದ್ದ ಆಟ , ತುಂಬಾ ಸಾರಿ ಅವಳು ಪರವಾಗಿಲ್ಲ ಸುಳ್ಳೇ ಹೇಳು ಅಂತಿದ್ದಳು , ನನಗೆ ಹೂ ಮಲೆಯಲ್ಲಿ ಕಳೆದ ರಾತ್ರಿ ನೆನಪಾಗಿ ಮೈ ಬಿಸಿಯಾಯ್ತು,
ಅವತ್ತು ಪೂರ್ಣ ಬೆಳದಿಂಗಳ ದಿನ , ಇವತ್ತು ರಾತ್ರಿ ಬರ್ತಿಯಾ? ಅಂತ ಅವಳನ್ನ ಕೇಳಿದ್ದೆ ಎಲ್ಲಿಗೆ ಅಂತ ತಡವರಿಸಿದ್ದಳು ಹೂ ಮಲೆಯ ತುದಿಗೆ ಹೋಗೋಣ, ಇವತ್ತು ಹುಣ್ಣಿಮೆ ಅಂದಾಗ ಭಯವಾಗುತ್ತೆ ಅಂದಿದ್ದಳು, ನಾನು ಒತ್ತಾಯಿಸಿದಾಗ ಒಪ್ಪಿ ನಾನು ಹೇಳಿದ ಜಾಗಕ್ಕೆ ಬಂದಿದ್ದಳು, ನಂತರ ಒಂದು ಗಂಟೆ ಉಸಿರು ಬಿಗಿ ಹಿಡಿದು ಹತ್ತಿದ್ದೆವು, ಹಾಲು ಮಂಟಪ, ಅದರ ತುದಿಯ ಮೇಲೆ ಸೂರ್ಯನ ಬೆಳಕು ಅಥವಾ ಚಂದ್ರನ ಬೆಳಕು ಯಾವುದು ಬಿದ್ದರು ಇಡೀ ಮಂಟಪದಲ್ಲಿ ಬೆಳಕು ಕೋರೈಸುತ್ತಿತ್ತು, ಹಾಗೆಂದೇ ಅದಕ್ಕೆ ಹಾಲು ಮಂಟಪ ಅನ್ನುತ್ತಿದ್ದರು ಯಾವ ದೊರೆಯೊ ಯಾವ ಪ್ರೇಯಸಿಗೋ ಕಟ್ಟಿದ ಕಥೆ ಊರ ತುಂಬೆಲ್ಲ ಹಾಡಾಗಿ ಕಥೆಯಾಗಿ ಹರಿದಾಡಿಕೊಂಡಿತ್ತು , ನನ್ನ ಅತಿ ರಹಸ್ಯಗಳನ್ನೆಲ್ಲ ಬಚ್ಚಿಟ್ಟುಕೊಂಡ ಈ ಮಂಟಪ ನನಗೆ ಬಹಳವೇ ಪ್ರಿಯವಾದ್ದು, ಅವತ್ತು ಕುಳಿತು ಬೆದರಿಕೆಯ ಕಣ್ಣಲ್ಲಿ ಬೆಳಗು ಹರಿವುದರೊಳಗೆ ನನಗೆ ನಮ್ಮನೆಯ ಹಿತ್ತಲಿಗೆ ಬಿಟ್ಟು ಬಿಡು ಅಂದಾಗ ನನಗೆ ಆ ಭಯ ತಮಾಷೆಯಂತೆ ಕಾಣಿಸಿತ್ತು ಮತ್ತೆ ಅವಳನ್ನು ಕೆಣಕಿದ್ದೆ ಸತಾಯಿಸಿದ್ದೆ ಅವಳು ಸತ್ಯ ಹೇಳು, ನಿನಗೆ ನಾನೇಕಿಷ್ಟ ಅಂದಾಗ ಸುಳ್ಳು ಹೇಳಲಾ ಸತ್ಯ ಹೇಳಲಾ ಅಂತ ಕೇಳಿದ್ದೆ, ಅವಳು ಮುಗ್ಧೆಯಾಗಿ ಸತ್ಯ ಹೇಳು ಅಥವಾ ನಿನಗಿಷ್ಟ ಆಗಿದ್ರೆ ಸುಳ್ಳು ಹೇಳು ಅಂದಾಗ ನನಗೆ ಈ ಕ್ಷಣಕ್ಕೆ ನೀನಿಷ್ಟ ಅಂದು ಸುಮ್ಮನಾಗಿದ್ದೆ, ಅವಳೂ ಹಠಕ್ಕೆ ಬಿದ್ದವಳಂತೆ ನನಗೆ ನೀನಿಷ್ಟವೇ ಇಲ್ಲ ಅಂದಿದ್ದಳು ಬಹುಶಃ ಅವಳ ಕಾಣುಗಳಲ್ಲಿದ್ದ ನೀರು ಪಸೆ ನನ್ನ ಕೈಗಂಟಿತ್ತು, ಅದನ್ನೊರೆಸುತ್ತ್ತ ಹೋದ ಬೆರಳಿಗೆ ಅವಳ ಮೂಗಿನ ನತ್ತು ಹಣೆಯ ಬೆವರು ಅದುರುತ್ತಿದ್ದ ತುಟಿಗಳೂ ಏರಿಳಿಯುತ್ತಿದ್ದ ಎದೆಯ ಲಯತಪ್ಪಿದ ಹಾಡೂ ಕೇಳಿಸಿತ್ತು, ನಾನು ಉನ್ಮತ್ತನಾಗಿದ್ದೆ ಅವಳ ದೇಹದ ತುಂಬೆಲ್ಲ ಅಂತಿದ್ದ ಅದಾವುದೋ ಮಾಯಕದ ಸುವಾಸನೆ ನನ್ನ ಕಟ್ಟಿ ಹಾಕಿತ್ತು, ಅವಳು ಅವತ್ತು ಬೆಳದಿಂಗಳಿನಲ್ಲಿ ಕನವರಿಸಿದ್ದಳು"ನಿನ್ನ ಬಿಟ್ಟು ಬದುಕಲಾರೆ, ಈ ಸುಖದಾಣೆ ಸತ್ಯ"
"ಮತ್ತೆ ನನ್ನ ಹಾಲು ಮಂಟಪಕ್ಕೆ ಕರಿಬೇಡ"ಅವಳ ದನಿ ಎಚ್ಚರಿಸಿತು, ತಬ್ಬಿಬ್ಬಾಗಿ ನೋಡಿದೆ, ಇವಳು ನಿಜವಾಗಲೂ ನನ್ನ ಎದುರಿಗಿದ್ದಾಳೆ ಅನ್ನುವುದು ರೋಮಾಂಚನವನ್ನು ಭಯವನ್ನು ಒಟ್ಟಿಗೆ ತರುತ್ತಿತ್ತು, ನನ್ನ ಮನಸ್ಸನ್ನು ಓದುತ್ತಿದ್ದಾಳೆ ಅನ್ನುವುದು ಭಯವನ್ನು ಇನ್ನು ಹೆಚ್ಚಿಸಿತ್ತು, "ನೀನ್ಯಾವತ್ತು ಅಷ್ಟು ಕ್ರೂರಿಯಾಗಿ ನನ್ನ ಕಣ್ಣಿಗೆ ಕಾಣಲೇ ಇಲ್ಲ, ಅದೆಷ್ಟೋ ಸಾರಿ ನಿನ್ನ ಕ್ಷಮಿಸಿದ್ದೀನಿ ಅನ್ನೋ ಭ್ರಮೆಯಲ್ಲಿ ಬದುಕೋಕೆ ಪ್ರಯತ್ನಿಸಿದೆ, ನೀನು ಸಿಕ್ಕಿದ ಜಾಗಗಳನ್ನೆಲ್ಲ ಒಂದೊಂದಾಗಿ ನಿರಾಕರಿಸುತ್ತಾ ನಿರಾಕರಿಸುತ್ತ.... ಈಗ ಇಡೀ ಜಗತ್ತೇ ಬೇಡ ಅನಿಸಿಬಿಟ್ಟಿದೆ," ಅವಳು ಮಾತಾಡುತ್ತಾ ಹೋದಳು"ಅಷ್ಟಕ್ಕೂ ಯಾರನ್ನಾದರೂ ಈ ತರಹ ನಮ್ಮೊಳಗೇ ಬಿಟ್ಟು ಕೊಳ್ಳುವ ಅವಶ್ಯಕತೆ ಏನಿರುತ್ತೆ? ನನಗೆ ಉತ್ತರ ಸಿಕ್ಕಿಲ್ಲ, ನೀನವತ್ತು ಹಿಡಿದ ಕೈ ಕೊಡವಿ ಬಸ್ಸು ಹತ್ತಿದೆ ಅಲ್ಲ ಅವತ್ತು ನನ್ನ ಮನಸಿಗೆ ಖಾತ್ರಿ ಆಗಿತ್ತು ತಿರುಗಿ ಬರಲಾರೆ ಅಂತ, ಆದರೂ ನೋಡು ಆಗದ್ದನ್ನ ಆಗೇ ಬಿಡುತ್ತೆ ಅಂತ ಬಯಸುತ್ತಾ ಅದಕ್ಕಾಗಿ ಭ್ರಮಿಸುತ್ತಾ ಹುಡುಕಾಡುತ್ತಾ ಮನಸ್ಸು ತನ್ನ ತಪ್ಪಿದ ಲಯ ಕಂಡುಕೊಳ್ಳೋಕೆ ಪ್ರಯತ್ನಿಸುತ್ತೆ, ನೀನು ಹೋದ ಮೇಲೆಯೇ ನಾನು ನಿನ್ನ ಬಗ್ಗೆ ಬಹಳಷ್ಟು ತಿಳಿದುಕೊಂಡೆ, ನೀನು ನನ್ನಿoದ ಮುಚ್ಚಿಟ್ಟ ಎಲ್ಲ ವಿಷಯಗಳು ನನಗೆ ಗೊತ್ತಾಗುತ್ತಾ ಹೋದವು, ನೀನೊಂದು ಭ್ರಮೆಯಲ್ಲಿ ನನ್ನ ಬದುಕಲು ಬಿಟ್ಟಿದ್ದೆ, ನಾನು ಅದನ್ನೇ ಬಹಳ ಕಾಲ ಜೀವಿಸಿದ್ದೆ ಅನ್ನುವ ಸತ್ಯ ನನಗೆ ಅರಿವಾಗುತ್ತಾ ಹೋಯಿತು, ಆದರೆ ಈಗ ಬಂದದ್ದು ಮಾತ್ರ ನಿನ್ನ ಬಾಯಿಂದ ಕಾರಣ ಕೇಳಲು, ಹೇಳು , ಅದು ಯಾವ ಕಾರಣ ನಿನ್ನ ಇಲ್ಲಿಗೆ ನನ್ನಿಂದ ದೂರ ಎಳೆದು ತಂದದ್ದು" ಅವಳ ದ್ವನಿ ತೀವ್ರ ವಾಗುತ್ತಾ ಸಾಗಿತ್ತು , ನಾನು ಮಾತಾಡಲೇ ಬೇಕಿತ್ತು "ನಿನ್ನ ಬಿಟ್ಟು ಬರಲು ಅಂಥಾ ಕಾರಣ ಏನಿರಲಿಲ್ಲ, ಆದರೂ ನಾನು ಬಹುಶಃ ಬಂಧನಗಳಿಗೆ ಹೆದರಿದ್ದೆ, ಅಥವಾ ಪಲಾಯನ ನನ್ನ ರಕ್ತದಲ್ಲಿಯೇ ಇದೆ ಅ೦ದರು ಸರಿಯಾದೀತು, ನನಗೆ ಇನ್ಯಾವುದೋ ಕಾಣದ ಸೆಳೆತದ ಹುಡುಕಾಟ ಇತ್ತು ಅನಿಸುತ್ತೆ" ನನ್ನ ಮಾತು ಮುಗಿವ ಮೊದಲೇ ಜೋರಾಗಿ ನಕ್ಕಳು ಅವಳು, ತೀರಾ ಅಸಹಜ ನಗು, ನನ್ನ ಹೃದಯ ಬಡಿತ ಮತ್ತೆ ಏರಿತು, ಭಯದಲ್ಲಿ, ಭಯವನ್ನು ಮುಚ್ಚಿಡಲು ಯತ್ನಿಸುತ್ತಾ ಅವಳನ್ನೇ ನೋಡಿದೆ"ಹುಚ್ಚಾ , ಆತ್ಮಸಾಕ್ಷಿ ಸತ್ತು ಹೋಗಿದೆ ನಿಂಗೆ ಏಳೋ ಎದ್ದೇಳು, ನಿನಗೆ ಪಲಾಯನ ವಾದವಲ್ಲ, ಹತ್ತಿದ್ದು ದೇಹಗಳ ಸುವಾಸನೆಯ ಮತ್ತು, ನಿನ್ನೊಳಗಿನ ಮೃಗ ಕೇವಲ ದೇಹದ ಸಾಂಗತ್ಯ ಅಷ್ಟೇ ಬಯಸಿದ್ದು, ಅದಕ್ಕೆ ಬೇರೆಯ ಹೆಸರಿಟ್ಟು ವಂಚಿಸುತ್ತಾ ಬಂದವ ನೀನು" ಬೆ೦ಕಿಯ ಧಾರೆ ದನಿಯಲ್ಲಿ,
ನಾನು ನಡುಗಿದೆ , "ನಿನೊಂದೆ ಅಲ್ಲ ನಿನ್ನಂಥ ಎಲ್ಲರಿಗು ಇದೊಂದೇ ದಾರಿ ಬದುಕಿನ ಸತ್ಯಗಳನ್ನ ಎದುರಿಸಲಾಗದೆ ಓಡುತ್ತಾ ಓಡುತ್ತಾ ದಾರಿಗಳೇ ಇಲ್ಲದ ಕಡೆ ತಲುಪಿಬಿಡುತ್ತೀರಿ, ನೀನು ನನ್ನಿಂದ ಕಿತ್ತುಕೊಂಡಿದ್ದು ಏನು ಗೊತ್ತಾ, ಪಾಪ ಪ್ರಜ್ಞೆ, ನಾನು ಸತ್ತು ಹುಟ್ಟಿದೆ, ಬಹಳ ಸಲ, ಇನ್ನೀಗ ನಿನ್ನ ಸರದಿ" ನಾನು ಬಾಯ್ತೆರೆವ ಮೊದಲೇ ಅವಳು ನಕ್ಕಳು "ನೀನು ಮದುವೆಯಾಗಿದ್ದೀಯಲ್ಲ, ಸುಖ ಸಿಕ್ಕಿತಾ, ನೀನು ಹುಡುಕುತ್ತಿದ್ದ ಆ ನೆಮ್ಮದಿ, ನನ್ನ ಬಿಟ್ಟು ಇನ್ನೊಂದು ದೇಹದಲ್ಲಿ ನೀನು ಅರಸುತ್ತಿದ್ದ ಆ ನೆಮ್ಮದಿ ಕ್ಷಣವಾದರೂ ಸಿಕ್ಕಿತಾ? ಇರುವ ಇಷ್ಟು ಸಣ್ಣ ಜೀವನವನ್ನ ಹೊಂದಿಕೆ ಇಲ್ಲದೆ ಅಳುತ್ತ ಕಳೆಯುತ್ತೀದ್ದಿ , ನಿನಗೆ ನಂಬಿಕೆ ಇಲ್ಲ ಯಾವುದರಲ್ಲೂ, ಸ್ವತಃ ನಿನ್ನಲ್ಲೂ ,ಅದಕ್ಕೆ ಬರಿ ಭ್ರಮೆಯಾದ ನಾನು ನಿನಗೆ ಕಾಣುತ್ತಿರುವುದು" ಎಂದು ನಕ್ಕಳು, ನಾನು ಅವಳನ್ನೇ ನಂಬಲಾರದವನಂತೆ ನೋಡಿದೆ, ಕೈ ಚಾಚಿದಳು , ನಾನು ತಪ್ಪಿಸಿಕೊಳ್ಳಲೆತ್ನಿಸಿ ಓದಿದೆ ಓಡಿದೆ , ಕೈಗಳು ಕಬಂಧವಾಗಿ ನನ್ನ ಹಿಡಿಯುತ್ತಲೇ ಹಿಂದೆ ಬಂದಿತು , ಅಷ್ಟೊತ್ತಿಗೆ ನಾನು ಟೆರ್ರೇಸಿನ ಮೇಲಿದ್ದೆ , ಕೆಳಗೆ ಹಾರಿದ್ದಷ್ಟೇ ಗೊತ್ತು, ಕಣ್ಣು ಮತ್ತೆ ಕತ್ತಲೆಗಟ್ಟಿತು
ಎಚ್ಚರಾದಾಗ ಎದುರಲ್ಲಿ ಅವಳ ದೇಹ ಇರಲಿಲ್ಲ ಬಹುಶಃ ನಾನು ಯಾವ ಅವಸ್ಥೆಯಲ್ಲಿ ಕನಸು ಕಂಡೆನೋ , ನನಗೆ ಸತ್ಯ ಸುಳ್ಳುಗಳ ವ್ಯತ್ಯಾಸ ತಿಳಿಯಲಿಲ್ಲ, ಮೊಬೈಲ್ ಆನ್ ಮಾಡಿದೆ ಮನೆಯಿಂದ ಬಂಡ ಬಹಳಷ್ಟು ಕಾಲ್ಗಳು, ಇಲ್ಲ ಇವತ್ತು ಸುಳ್ಳು ಹೇಳಲಾರೆ, ಹೆಂಡತಿಗೆ ಫೋನಾಯಿಸಿದೆ " ಸುಜೀ , " "ರೀ ಏನ್ರೀ ಎಲ್ಲಿ ಇದ್ದೀರಾ. ಬೇಗ ಬನ್ನಿ " ಇಲ್ಲೆಲ್ಲೋ ಸಿಕ್ಕಾಕಿಕೊಂಡಿದ್ದೀನಿ ಈಗ ಸಮಯ ಎಷ್ಟು ಹೇಳು" "ಅಯ್ಯೋ ಕೈಲಿ ಮೊಬೈಲ್ ಇಲ್ವಾ, ಎಲ್ಲಿದ್ದೀರಾ ಹೇಳಿ, ನಾನು ವಿಳಾಸ ಕೊಟ್ಟೆ, ನಂತರ ಒಳ ಹೋಗಿ ನೀರು ಕುಡಿದು ಸೋಫಾದ ಮೇಲೆ ಕಾಲುಚಾಚಿದೆ , ಅವಳ ಬಿಸಿಯುಸಿರು ನನ್ನ ಎದೆಗೆ ತಾಕುತ್ತಿತ್ತು ಸಣ್ಣದಾದ ಮುಗುಳ್ನಗುವು, ಹೂ ಮಳೆಯ ಬಳದಿಂಗಳಲ್ಲಿ ನಾನು ಅವಳ ಕೈ ಹಿಡಿದ ಕ್ಷಣಗಳೆಲ್ಲ ಕಣ್ಣೆದುರೇ ನಡೆಯಲಾರಂಭಿಸಿದವು , ಮನೆಯ ಬಾಗಿಲು ತಟ್ಟಿದ ಶಬ್ದ , ನಂತರ ತೆರೆದ ಶಬ್ದ , ನಾನು ದಿಗ್ಭ್ರಮೆ ಹಿಡಿದವನಂತೆ ನೋಡುತ್ತಿದ್ದೆ,
ನನ್ನ ಹೆಂಡತಿಯನ್ನು ಒಳಗೆ ಬರ ಮಾಡುತ್ತಿದ್ದವಳು ಅವಳು, ಹಿಂದೆಯೇ ದೀಪಾ , ಸ್ಯಾಮ್ಯುಯೆಲ್ ಎಲ್ಲರು ಒಳ ಬಂದರು,
ಅವಳು ನನ್ನ ಕಡೆ ಕೈ ತೋರಿಸಿ ಗಾಭರಿ ಇಂದ ಏನೋ ಹೇಳುತ್ತಿದ್ದಳು, ನನ್ನ ಹೆಂಡತಿ ಚೀರಿದ್ದು ಕೇಳಿಸಿತು, ಜತೆಗೆ ಜೋರಾಗಿ ಅಳುವ ಶಬ್ದವೂ , ನಾನು ಅತ್ತಲೂ ಹೋಗಲಾಗದೆ ಅವಳನ್ನು ಬಿಡಲಾಗದೆ ಹೂಮಾಲೆಯ ಹಾದಿಯಲ್ಲಿ ಅಲೆಯುತ್ತಿದ್ದ ಭ್ರಮೆಗೆ ಸಿಕ್ಕಿದೆ,
ಸತ್ತಿದ್ದು ಯಾರು, ನನಗೆ ನಿಜವಾಗಲೂ ತಿಳಿಯುತ್ತಿಲ್ಲ
ಹೃದಯದ ಭಾಷೆ
Saturday, August 19, 2017
ಅವನಿಗೆ
ಆಧುನಿಕ ಮನುಷ್ಯರಲ್ಲಿ ಇತರರ ನೋವನ್ನು, ಅವಮಾನವನ್ನು ನೋಡಿ ಸಂತೋಷಪಡುವ ಪ್ರವೃತ್ತಿ ಹೆಚ್ಚುತ್ತಿದೆ_ಯೆಂದು ಆತಂಕ ವ್ಯಕ್ತಪಡಿಸಿದ್ದಾನೆ.
ಎಸ್ ದಿವಾಕರ್ ಅವರು ಅನುವಾದಿಸಿದ ಸಾಲುಗಳನ್ನು ಓದುತ್ತ ತಟ್ಟನೆ ನಿನ್ನ ನೆನಪಾಯ್ತು. ನೀನು ಕಳಿಸಿದ ಕೊನೆಯ ಮೆಸೇಜು, "ಸಾರಿ ದಟ್ ವಾಸ್ ವೆರಿ unfortunate , sincerely sorry if I hurt you" ಜೊತೆಗೆ ನನ್ನ ಅವಮಾನಿಸಿ ಹೊರ ಕಳುಹಿಸಿದ ನಂತರ ನನ್ನ ಕಿವಿಗಪ್ಪಳಿಸಿದ ನಿನ್ನ ನಗುವು ಮತ್ತದರ ಹಿಂದೆ ನೀನು ದೊಡ್ಡ ಸಾಧನೆ ಮಾಡಿದವನಂತೆ ಹೇಳಿದ ವಾಕ್ಯಗಳು , ನಾನಾಗೆ ನಿನ್ನ ಬಾಗಿಲಿಗೆ ಯಾವತ್ತೂ ಬಂದಿರಲಿಲ್ಲ ನಾನು ಮನಸ್ಸು ಮಾಡಿದ್ದರೆ ಅವಷ್ಟು ಮೆಸೇಜುಗಳನ್ನ ನಿನ್ನ ಯೋಗ್ಯತೆಯನ್ನು ಇವತ್ತು ಬೀದಿಗೆಳೆಯಬಹುದು, ಅಥವಾ ಇನ್ನೇನೋ ಮಾಡಬಹುದು, ನೀನು ಮಾಡಿದ ಮೊಸವಿದೆಯಲ್ಲ ಅಂತೆಸಿಟಿ ಅನ್ನುವ ಅಂತೆಕಂತೆಗಳಲ್ಲಿ ನಿನ್ನ ನೀನು ಸುಳ್ಳಿಗೆ ಮಾರಿಕೊಂಡ ಅವನ್ಯಾರೋ ಎಳೆ ನಿಂಬೇಕಾಯಿಯ ಆಟಗಳನ್ನು ನಿನ್ನ ನಿಯತ್ತಿಗೆ ಬಲಿಕೊಟ್ಟ ನಿನ್ನ ಅಸಹಾಯಕತೆ, ರಕ್ತದಲ್ಲಿ ಅದ್ದಿದ ನಿನ್ನ ಆದರ್ಶಗಳು ಛೇ ಅಸಹ್ಯ ಹೇಸಿಗೆ ಗಬ್ಬು ಹೊಲಸನ್ನ ಬಿಟ್ಟು ಇನ್ಯಾವುದೇ ಪದವಿದ್ದರೂ ಅದನ್ನ ನಾನು ಬಳಸ ಬಯಸುವೆ , ನನ್ನ ಅಸಹಾಯಕ ಸ್ಥಿತಿಯನ್ನು ಬಳಸಿಕೊಂಡು ಆಡಿದ ಆಟವಿದೆಯಲ್ಲ, ಎಂಥ ಕೀಳು ಭಿಕ್ಷುಕ ಕೂಡ ಆ ಕೆಲಸ ಮಾಡಲಾರ. ನಿನಗೆ ನಿನ್ನ ಲ್ಯಾಂಡ್ಮಾರ್ಕ್ ಕೋರ್ಸು ಸುಳ್ಳನ್ನು authentic ಆಗಿ ಹೇಳುವುದನ್ನು ಕಲಿಸಿಕೊಟ್ಟಿದೆಯಷ್ಟೇ, ನಿನ್ನ ವೃತ್ತಿಯ ಮೂಲ ಸ್ವಭಾವವೇ ಹಾಗಿರುವಾಗ ಇಂತಹ ಘಟನೆಗಳು ಇನ್ನಷ್ಟು ಆ ವೃತ್ತಿಯ ಬಗ್ಯೆ ಅಸಹ್ಯವನ್ನೇ ಹುಟ್ಟು ಹಾಕುತ್ತದೆ ಅಷ್ಟೇ, ಇಂತಹ ದುರಾದೃಷ್ಟ ನಿನ್ನದು, ಯಾವತ್ತೂ ನಿನಗೆ ನನ್ನ ಬೆಲೆ ಅರಿವಾಗಲೇ ಇಲ್ಲ ಹಣದ ಮುಂದೆ, ನನ್ನ ಅದಮ್ಯ ನಂಬಿಕೆ ವಿಶ್ವಾಸಗಳನ್ನ ಮುರಿದ ನಿನ್ನ ಅದ್ಯಾವ ಹಾರೈಕೆ ಕಾಪಾಡುವುದು"ಅವಳ" ಆಶ್ರಯವು ಕಾಪಾಡಲಾರದು, ನೀನು ಅದೆಷ್ಟು ಸುಳ್ಳುಗಳ ಬಚ್ಚಿಟ್ಟಿದ್ದಿ, ಆಹಾ
ಪ್ರಖ್ಯಾತ ಮನೋವಿಶ್ಲೇಷಣಾ ತಜ್ಞ ಎರಿಕ್ ಪ್ರಾಮ್ ತನ್ನ *`ದಿ ಅನಾಟಮಿ ಆಫ್ ಹ್ಯೂಮನ್ ಡಿಸ್ಟ್ರಕ್ಟಿವ್‌ನೆಸ್'* ಎಂಬ ಗ್ರಂಥದಲ್ಲಿ ಬರೆದಿರುವಂತೆ _`ಇತರರನ್ನು ಹಂಗಿಸುವ, ಅವರ ಭಾವನೆಗಳ ಮೇಲೆ ಹಲ್ಲೆ ಮಾಡುವ ಮಾನಸಿಕ ಕ್ರೌರ್ಯವಿದೆಯಲ್ಲ, ಅದು ದೈಹಿಕ ಕ್ರೌರ್ಯಕ್ಕಿಂತ ಹೆಚ್ಚು ವ್ಯಾಪಕ. ಇಂಥ ಕ್ರೌರ್ಯ ಎಸಗುವವನು ಸ್ವತಃ ಸುರಕ್ಷಿತವಾಗಿರುತ್ತಾನೆ. ಯಾಕೆಂದರೆ ಅವನು ಉಪಯೋಗಿಸುವುದು ದೈಹಿಕ ಶಕ್ತಿಯನ್ನಲ್ಲ, `ಕೇವಲ' ಶಬ್ದಗಳನ್ನು ಮಾತ್ರ. ಆದರೆ ಮಾನಸಿಕ ಆಘಾತ ದೈಹಿಕ ಬಾಧೆಗಿಂತ ಹೆಚ್ಚು ಮಾರಕವಾಗಬಲ್ಲುದು... ಕೇವಲ ಒಂದು ಸೂಕ್ತ ಶಬ್ದದ ಮೂಲಕ ಅಥವಾ ಹಾವಭಾವದ ಮೂಲಕ ಇತರರಿಗೆ ಮುಜುಗರವುಂಟುಮಾಡುವ ಅಥವಾ ತೇಜೋವಧೆ ಮಾಡುವ `ಕಲಾವಿದ' ಯಾರಿಗೆ ಗೊತ್ತಿಲ್ಲ? ಈ ಬಗೆಯ ಸ್ಯಾಡಿಸಂ ಅನ್ನು ಇತರರ ಸಮ್ಮುಖದಲ್ಲಿ ಪ್ರಯೋಗಿಸಿದಾಗ ಅದು ಹೆಚ್ಚು ಪರಿಣಾಮಕಾರಿಯಾಗುತ್ತದೆ'._
ನೀನು ಮಾಡಿದ್ದು exactly ಇದನ್ನೇ , ಒಳ್ಳೆಯದಾಗಲಿ, ನಿನ್ನನ್ನ ಹರಿದು ಬಿಸಾಡುವುದು ಎಷ್ಟೋತ್ತಿನ ಕೆಲಸ, ಆದರೆ ನೀನು ಬದುಕಿರಬೇಕು, ಹೀಗೆ ನನ್ನ ಪಡೆಯಲಾರದೆ ಎಸಗಿದ ಅನ್ಯಾಯ ಅವಮಾನಗಳ ನೆರಳಿನಲ್ಲಿ, ಕೊನೆಗೆ ಮಾಡುವ ಪ್ರತಿ ಪೂಜೆ ಪ್ರತಿ ದಾನ ಪ್ರತಿ ಪ್ರಾರ್ಥನೆಯ ಹಿಂದೆಯೂ ನೀನು ಹೂತು ಹಾಕಿದ ನಿನ್ನ ಸುಳ್ಳು ಬೇಟೆಯಾಡುತ್ತದೆ, ಮುಂದೆ ಸಾಯುವ ಮುನ್ನವಾದರು ನಿನ್ನ ಕ್ಷಮೆಗಳ ಪಟ್ಟಿಯಲ್ಲಿ ನನ್ನದು ಮೊದಲಿರುತ್ತದೆ
ಬದುಕಿಕೊ ಹೋಗ್!😊
Thursday, August 17, 2017
ಮಧುಮಾಸ ಚಂದ್ರಮ
ಒಲವಿನ ಲೋಕಕೆ ನೀ ತಂದೆ ಪೂರ್ಣಿಮಾ....
ನಾನಿಲ್ಲೆ ಇದ್ದೇನೆ ಎಂದು ಒಮ್ಮೆ ತೋಳ್ ಚಾಚಿ ನೀನಪ್ಪಬಾರದೆ? ನನ್ನ ತಲೆ ನೇವರಿಸಿ ಒಮ್ಮೆ ನೀನಿರು ಜತೆಗೆ, ಈ ಪ್ರಯಾಣ ಸುಗಮ ಅನ್ನಬಾರದೆ? ಮಾತುಗಳನ್ನೆಲ್ಲ ಅದಾವ ತಿಜೋರಿಯಲ್ಲಿ ಬಚ್ಚಿಟ್ಟು ಕೀ ಕಳೆದು ಕೊಂಡೆ?ದೂರವಿದ್ದು ಹತ್ತಿರ ಇರುವ ಪರಿಪಾಠ (ಪಡಿಪಾಟಲು ಕೂಡ)ನಾನು ನೋಡಿದ್ದೇನೆ
ಹತ್ತಿರವಿದ್ದು ಅದೆಷ್ಟೋ ಮೈಲಿಗಳ ಅಂತರವನ್ನು ಅದೆಷ್ಟು ಸಲೀಸಾಗಿ ಸ್ಥಾಪಿಸಿದ್ದೀ ನೀನು?ನನಗೆ ಅಷ್ಟು ದೂರಾ ಹೊರಳಿ ನಡೆಯಲಾಗದು, ನೀರಿರದ ನದಿಯ ದಡದಲ್ಲಿ ನಿಂತ ಒಂಟಿ ನಾವೆಯಂತೆ ನಾನು ಕಾಯುತ್ತಲೇ ಇರುವೆ, ನಿನ್ನ ಆ ದಡಕ್ಕೆ ನನ್ನ ತಲುಪಿಸಲಿ ಅಂತ, ನಮ್ಮ ನಡುವಿನ ಅಂತರ ಕೊಚ್ಚಿ ಹೋಗುವ ಪ್ರೇಮ ಮಳೆಯೊಂದು ಬರಲಿ, ನಾನು ಕಾದು ಕಾದು ಸೋತಿದ್ದೇನೆ. ನಿನಗಾಗಿ, ನನ್ನ ಕ್ಷೀಣ ದನಿ ನಿನಗೆ ಈ ಬಾರಿಯಾದರೂ ಕೇಳಲಿ
ಒಮ್ಮೆ ಬಾರೋ ಒಮ್ಮೆ ಬಾರೋ
ಹೇಗೆ ನೀನಿದ್ದರೂ
ಒಮ್ಮೆ ಬಾರೋ ಒಮ್ಮೆ ಬಾರೋ
ಎಲ್ಲೆ ನೀನಿದ್ದರೂ
ಸುರಿ ಮಳೆ ಸುರಿಯುವ ಸೂಚನೆ
ಶುರುವಾಗಿದೆ ಶುರುವಾಗಿದೆ
ಜತೆಯಲಿ ನೆನೆಯಲು ನಲ್ಲನೆ ಮನಸಾಗಿದೆ, ಮನಸೋತಿದೆ.....
Friday, July 21, 2017
ಎರಡು ಕಣ್ಣುಗಳು
Monday, July 17, 2017
ಧಾರವಾಹಿ ಸುಗಂಧಿನಿ - ಭಾಗ ೩
ತಟದಲ್ಲಿ ನಿಂತು ಹಣೆಯ ಮೇಲೆ ಕೈ ಇತ್ತು ದೂರದೆಡೆಗೆ ಕಣ್ಣು ಹಾಯಿಸಿದೆ , ಸುಶೇಷಣ ತನ್ನ ದೋಣಿಯನ್ನು ದಡದಲ್ಲಿದ್ದ ಮಾಮರಕ್ಕೆ ಕಟ್ಟಿ ಮಾಯವಾಗಿದ್ದ, ಬಹುಶಃ ನಿನ್ನೆ ಬಹಳ ದಣಿದಿದ್ದನೇನೋ ಎದ್ದಿರಲಿಲ್ಲ, ಉಳಿದ ಮೀನುಗಾರರು ಯಮುನೆಯ ಆ ತುದಿಯಲ್ಲಿ ಚುಕ್ಕಿಗಳಂತೆ ಕಾಣುತ್ತಿದ್ದರು . ಆ ದಡ ತಲುಪಿಸಲು ಯಾವ ಮಾಯಾವಿ ಬಂದಾನು? ಆದರೆ ನನಗೆ ಅಲ್ಲಿಗೆ ತಲುಪಲೇ ಬೇಕಿತ್ತು. ಅದೂ ಬಹಳ ತುರ್ತಾಗಿ ರಾಣಿ ರೋಹಿಣಿಯ ಸಂದೇಶ ಹೊತ್ತು , ತಾಯಿ ದೇವಕಿಯನ್ನು ನೋಡಲು, ಮತ್ತೆ ಮೈಯೆಲ್ಲಾ ಪುಳಕಿಸಿತು,ಕೈಯಲ್ಲಿದ್ದ ಗಂಧ ಚಂದನದ ಪೆಟ್ಟಿಗೆ, ಜತೆಗೆ ರಾಣೀವಾಸದವರು ನೀಡಿದ್ದ ಪುಟ್ಟ ಬುಟ್ಟಿ , ಕೈಗಳು ನೋಯಲಾರಂಭಿಸಿತ್ತು
ಇದ್ದಕ್ಕಿದ್ದಂತೆ ಆ ಕಡೆಯಿಂದ ಒಂದು ದೋಣಿ ಇತ್ತ ಬರುತ್ತಿರುವಂತೆ ಕಾಣಿಸಿತು, ಓ ಅದು ಸೈನಿಕರ ದೋಣಿ ಅವರಿಗೆ ಇಲ್ಲೇನು ರಾಜಕಾರ್ಯ, ನನಗರ್ಥವಾಗಲಿಲ್ಲ, ಉಗ್ರಸೇನ ಮಥುರೆಯ ಪಟ್ಟದಲ್ಲಿದ್ದಾಗ ನಂದನನ್ನು ಮತ್ತು ನಂದನ ತಂದೆಯನ್ನು ಪ್ರಾಣಕ್ಕೆ ಸ್ನೇಹಿತರಂತೆ ನೋಡಿದ್ದ, ಆದರೆ ಅವನ ಇದ್ದೊಬ್ಬ ಮಗ ರಾಜ್ಯದ ಮಾನವನ್ನು ಸೂರೆಗೈಯತೊಡಗಿದ, ಸಾಲದು ಅಂತ ತಂದೆಯನ್ನು ಪಟ್ಟದಿಂದ ಕೆಳಗಿಳಿಸಿ ಸ್ವಯಂ ಪಟ್ಟಾಭಿಷೇಕ ಮಾಡಿಕೊಂಡ, ತಂದೆಯ ಸಲಹೆಗಳಿಗೆ ಕಿವಿಗೊಡದೆ, ರಾಜ್ಯದ ಸಾಮಂತರಿಗೆ ಕೊಡಲಾಗುತ್ತಿದ್ದ ಗೌರವ ಮತ್ತು ಮರ್ಯಾದೆ ಕಿತ್ತೆಸೆದು ತೆರಿಗೆ ಮತ್ತು ದಂಡಗಳನ್ನು ಹೆಚ್ಚಿಸಿದ. ಅವನ ಮಾತು ಕೆಳದವರನ್ನು ಮೂಲೆಗೊತ್ತಿದ, ಅಂತೆಲ್ಲಾ ಹಲವಾರು ಕಥೆಗಳು ಆ ದಡದಿಂದ ತೇಲಿ ಬರುತ್ತಿದ್ದವು , ನಾನು ರಾಜಕಾರಣ ಅರಿತವಳಲ್ಲ, ಆದರೂ ನಮ್ಮ ವ್ರಜ ಭೂಮಿಗೆ ಯಾವತ್ತೂ ಕೆಟ್ಟದ್ದು ತಡೆದುಕೊಳ್ಳುವ ಶಕ್ತಿ ಇರಲಿಲ್ಲ, ಅದು ನಂದ ರಾಜನಂತೂ ರಿಷಿ ಸಮಾನ ರಾಜ, ಆಚಾರ ವಿಚಾರದಲ್ಲಾಗಲಿ ಅವನು ಯಾರನ್ನು ನೋಯಿಸಿದ್ದೆ ಇಲ್ಲ, ಮಕ್ಕಳಿಂದ ವೃದ್ಧರವರೆಗೆ ಅದೇ ಆದರೆ ಅದೇ ಪ್ರೀತಿ, ಅಷ್ಟು ಸಮ ತೂಗುವ ಅವನ ಪ್ರಾಮಾಣಿಕತೆಯನ್ನು ಇತ್ತೀಚಿಗೆ ಕಂಸ ಪ್ರಶ್ನಿಸಲಾರಂಭಿಸಿದ್ದ , ಕಂಸ ನಂದನನ್ನು ಬಲ್ಲದಿದ್ದವನೇನಲ್ಲ , ವಸುದೇವ ನಂದ ಕಂಸ ಮೂವರ ಗೆಳೆತನ ಹಳೆಯದ್ದೇ, ಯಾವತ್ತೋ ಒಮ್ಮೆ ವಾಸುದೇವ ಕುಂತಿಯನ್ನು ಕಂಸನಿಗೆ ಕೊಟ್ಟು ವಿವಾಹ ನೆರವೇರಿಸಬೇಕೆಂದುಕೊಂಡಿದ್ದನಂತೆ, ಅವನೋ ಕುಂತಲ ರಾಜ್ಯದ ರಾಜಕುಮಾರನಾದರೂ ಕಂಸನ ಮೇಲೆ ಅತಿಯಾದ ವಿಶ್ವಾಸ, ಅದೆಲ್ಲವೂ ಈಗ ಮರೆತ ಕಥೆ.
ದೂರದಲ್ಲಿದ್ದ ದೋಣಿ ಹತ್ತಿರಕ್ಕೆ ಬಂದಿತ್ತು , ಅದು ಎರಡೆರಡು ಸೈನಿಕರನ್ನು ಹೊತ್ತು ತಂದಿತ್ತು ಒಬ್ಬ ಕಾಂಗದ , ಮತ್ತೊಬ್ಬ ನಿರೂಪ ಇಬ್ಬರು ಇದು ಎರಡನೇ ಸಲ ಬರುತ್ತಿರುವುದು, ಪಾಪ ಅವರೇನು ಮಾಡಿಯಾರು, ಜೀವಂತ ಇರಬೇಕಾದರೆ ರಾಜ ಹೇಳಿದ ಕೆಲಸ ಮಾಡಲೇಬೇಕು, ನನ್ನೆದೆಯಲ್ಲಿ ಯಾಕೋ ಅವರಿಗಾಗಿ ತುಸು ಆರ್ದ್ರ ಭಾವವೊಂದು ಅವತ್ತೇ ಹುಟ್ಟಿತ್ತು, ಹಾಗೆಯೇ ನಂದರಾಜರ ಬಗ್ಯೆ ಕಾಳಜಿಯೂ, ದಡಕ್ಕೆ ದೋಣಿ ಕಟ್ಟಿ ಇಬ್ಬರೂ ಕಟ್ಟಿ ಹಿಡಿದು ಇಳಿದರು , ನನ್ನ ನೋಡುತ್ತಲೇ ಪರಿಚಿತ ಭಾವವೊಂದು ನಗೆಯಲ್ಲಿ ಕೊನೆಯಾಯಿತು, "ತ್ರಿವಕ್ರೆ, ನಂದರಾಜರು ಲಭ್ಯವಿರುವರೇನು? ನಾವು ಬಂದ ವಿಷಯ ಅವರಿಗೆ ತಿಳಿಸಬೇಕಿತ್ತು" ಸಣ್ಣದಾದ ನಡುಕವೊಂದು ನನ್ನೇ ಆವರಿಸಿತು, ತಕ್ಷಣ ಎಚ್ಚೆತ್ತು ನುಡಿದೆ"ನನಗೆ ತಿಳಿಯದು, ನೀವು ಅರಮನೆಯ ಹತ್ತಿರ ಹೋಗಿ ಕೇಳಬೇಕು" "ನೀನು ದೋಣಿಗಾಗಿ ಕಾಯುತ್ತಿರುವೆಯಾ ಸಹೋದರಿ, ನಮ್ಮ ವಿಶಂಕು ನಿನ್ನ ಆ ದಡಕ್ಕೆ ತಲುಪಿಸಿ ಬರುವ, ಸರಿಯೆನು?" ನಿರೂಪನ ದನಿ, ಅದರಲ್ಲಿದ್ದ ನಿಜ ಕಾಳಜಿಗೆ ಕರಗಿದೆ ನಾನು, ನನ್ನ ಯೋಗ್ಯತೆಯನ್ನು ಅರ್ಹತೆಯನ್ನು ಕೇವಲ ನನ್ನ ರೂಪದಿಂದಲೇ ಅಳೆವವರ ಮಧ್ಯೆ ನನಗೆ ಗೌರವಿಸಿ ಅರ್ಥೈಸಿಕೊಳ್ಳುವವರು ಬಹಳೇ ಕಮ್ಮಿ. ಮರು ಮಾತಾಡದೆ ದೋಣಿ ಹತ್ತಿ ಕುಳಿತೆ. ದೋಣಿ ಸಾಗಿತು ಯಮುನೆಯ ನೊರೆ ನೊರೆ ತೆರೆ ಸೀಳುತ್ತ.
(ಮುಂದುವರೆಯುವುದು)
Thursday, July 13, 2017
ಅವನಿಗೆ
ಅವನಿಗೆ ,
ಕೇಳು
ತಣ್ಣನೆಯ ನೀರು ತಲೆಯ ಮೇಲೆ ಬೀಳುತ್ತಿತ್ತು, ಯಾವುದೋ ಜನುಮದ ಪಾಪ ತೊಳೆಯುವಂತೆ ಕಣ್ಣಿಂದ ಜಾರಿದ ಹನಿಯೊಂದು ನೀರ ಜತೆ ಸೇರಿ ಹರಿದು ಹೋಯಿತು ಅದೆಷ್ಟು ಕಣ್ಣ ಹನಿಗಳು ಸೇರಿ ಸಾಗರ ಉಪ್ಪಾಯಿತು? ನಾನು ಕಣ್ಣೊರಸಿ ಬಿಕ್ಕು ತಡೆ ಹಿಡಿದೆ. ಕಾರಣವೇ ಇಲ್ಲದೆ ಬರುವ ಕಣ್ಣೀರು ಒಂದೋ ಸುಖದ್ದು ಕೃತಜ್ಞತೆಯದ್ದು ಮತ್ತೊಂದು ಬಹುಶಃ , ಗತ ಕಾಲದ ನೆನಪುಗಳದ್ದು ಕಹಿಯಾದ್ದು. ನನ್ನ ಕಣ್ಣಿನ ಹನಿ ಅವೆರಡಕ್ಕೂ ಸೇರಿದ್ದಾಗಿರಲಿಲ್ಲ, ನೀರು ಹಿಡಿದಿಟ್ಟ ಮೋಡ ನಾನು , ಸಣ್ಣದ್ದನ್ನು ಸಹಿಸದ ಸೂಕ್ಷ್ಮ ಮನಸ್ಥಿತಿ ಹಾಗಿದ್ದರೆ ಒಳ್ಳೆಯದಿತ್ತೇನೋ , ಆದರೆ ಎಲ್ಲ ಬದಲಾಯಿತು
ಪೂಜೆ ಮುಗಿಸಿ ಕೂತಾಗ ಏನೋ ಮರೆತಂತನಿಸಿ ಕ್ಯಾಲೆಂಡರ್ ನೋಡಿದೆ, ಜುಲೈ ಹದಿಮೂರು ಅಂತ ತೋರಿಸುತ್ತಿತ್ತು ತಟ್ಟನೆ ನೆನಪಾಯಿತು ಇವತ್ತು ಅವನ ಜನ್ಮದಿನ , ಒಂದು ಸಣ್ಣ ಸೆಳಕು ಎದೆಯಲ್ಲಿ, ವಾಟ್ಸಾಪಿನಲ್ಲಿ ನೋಡಿದೆ ನನ್ನ ಶುಭೋದಯಕ್ಕೆ ನಿತ್ಯ ಬರುತ್ತಿದ್ದ ಉತ್ತರವಿಲ್ಲ, ಅವನ ಸಣ್ಣ ಮುನಿಸಿಗೆ ಕಾರಣ ನನಗೆ ಗೊತ್ತಿಲ್ಲದ್ದೇನು ಅಲ್ಲ, ಆದರೆ ನಾನು ಸಂಸಾರದ ನೂರು ಬಳ್ಳಿಗಳಲ್ಲಿ ಬಂಧಿತಳು , ಸೆರಗಲ್ಲಿ ಕೆಂಡದಂತ ಬದುಕನ್ನು ಕಟ್ಟಿಕೊಂಡು ನಿತ್ಯ ಒದ್ದಾಡುತ್ತಿರುವವಳು ಯಾವತ್ತೋ ಅದನ್ನು ಕಿತ್ತು ಓಡಿಹೋಗುತ್ತೇನೆ ಎನ್ನುವ ಹುಚ್ಚು ಭರವಸೆಯಲ್ಲಿ ಪ್ರಜ್ಞಾಪೂರ್ವಕವಾಗಿ ಮೋಹವನ್ನು ಮಮತೆಯನ್ನು ಬಟ್ಟೆಯಾಗಿ ಸುತ್ತಿಕೊಂಡವಳು , ಮನಸ್ಸೇನೋ ಸದಾ ಸಂಚಾರಿ ಆದರೆ ನಿತ್ಯ ಕೆಲಸಕ್ಕೆ ಅದನ್ನ ಕಟ್ಟಿ ಹಾಕಲೇ ಬೇಕಲ್ಲ, ಬೇಕೆಂದಾಗ ಬೇಕೆನಿಸಿದವರನ್ನ ನೋಡುವ ಅವಕಾಶ ಅದೆಷ್ಟು ಜನಕ್ಕೆ ಸಿಕ್ಕೀತು ನಾನಂತು ಹುಟ್ಟಾ ಪಾಪಿ ಕಾಲಿಟ್ಟ ಕಡೆ ಮುಳ್ಳು ಮನಸ್ಸಿನ ಹೃದಯಗಳು ಹೂಗಳ ಮುಖವಾಡ ಹಾಕಿ ಚುಚ್ಚುವಾಗಲು ಸಹಿಸಿ ನಾಳೆ ಎನ್ನುವ ಆಶಾವಾದಕ್ಕೆ ಜೋತು ಬಿದ್ದವಳು ಆದರೆ ಗಂಡು ಎನ್ನುವ ಪ್ರಭೇದದ ಬದುಕು ಈ ಭೂಮಿಯಲ್ಲಿ ಬಹಳ ಸುಲಭವಿದೆ, ಇಷ್ಟೆಲ್ಲಾ ಕಷ್ಟ ಪಡಬೇಕಿಲ್ಲ ಅಲ್ಲವೇ, ಬಹುತೇಕ ಎಲ್ಲ ಸಾರವಜನಿಕ ಮತ್ತು ಖಾಸಗಿ ಜಾಗಗಳಲ್ಲಿ ಜಗತ್ತು ಹೇಗಿದ್ದರೂ ಗಂಡು ಎನ್ನುವ ಪಟ್ಟ ಕಟ್ಟಿ ವಿನಾಯತಿ ಕೊಟ್ಟುಬಿಡುತ್ತದೆ
ನಾನು ಯೋಚನೆಗಳಲ್ಲಿ ಕಳೆದು ಹೋಗಿದ್ದೆ, ನನ್ನ ಮನಸ್ಸು ಮಾತ್ರ ನೋಡ ಬಯಸುತ್ತಿತ್ತು, ಅವನನ್ನ,ಆದರೆ ನಾನು ನೋಡ ಬಯಸಿದ್ದ ಅವನು ಅವನಾಗೆ ಉಳಿದಿರಲಿಲ್ಲ, ಸುಮ್ಮನೆ ಮುನಿಸು, ನಮ್ಮ ಬದಲಾದ ಬದುಕುಗಳ ಜತೆ ಜತೆಗೆ ಬದಲಾದ ಪ್ರಾಮುಖ್ಯತೆಗಳನ್ನ ಅರ್ಥೈಸದೆ ಹಳೆಯ ನೆನಪುಗಳಿಗೆ ಅದು ಕೊಡುವ ನೋವುಗಳಿಗೆ ನಾನೇ ಕಾರಣ ಅನ್ನುವ ಮಾತು ನನ್ನ ಚುಚ್ಚಿ ನೋಯಿಸುವುದು, ನನಗೆ ನಿಜವೆಂದರೆ ಈ ಜಗತ್ತಿನಲ್ಲಿ ಯಾರು ಬೇಕಿಲ್ಲ, ನೀನೊಬ್ಬ ಸಾಕು ಎನ್ನುವ ನನ್ನ ಮನಸ್ಥಿತಿಯನ್ನ ಮುಚ್ಚಿಡಲು ಪ್ರತಿಬಾರಿಯೂ ಪ್ರಯತ್ನಿಸಿ ಸೋತಿದ್ದೇನೆ,ಮತ್ತೆ ಮತ್ತೆ ಬದಲಾಗುವ ಪರಿಸ್ಥಿತಿಗಳ ನಡುವೆಯೂ ನೀನೊಬ್ಬ ಮಾತ್ರ ಬದಲಾಗದ ಅದೇ ಸ್ಥಾನದಲ್ಲಿ ಹೃದಯದಲ್ಲಿ ಕೂತಿದ್ದೀಯಾ ಎನ್ನಲು ಪ್ರಯತ್ನಿಸಿ ಸೋತಿದ್ದೇನೆ ಕೊನೆಗೆ ಇದೆಲ್ಲವೂ ಹನಂಬಿಕೆ ಇಲ್ಲದ ಅವನಲ್ಲಿ ಹೇಳುವದಕ್ಕಿಂತ ಮೌನಿಯಾಗಿರುವುದೇ ಲೇಸು ಅನ್ನಿಸಿ ಮೌನವು ಆಗಿಬಿಟ್ಟಿದ್ದೇನೆ,
ನದಿ ತನ್ನ ಪಾತ್ರಗಳನ್ನು ಸದಾ ಬದಲಿಸಬೇಕಾಗುತ್ತದೆ,ಭೂಮಿಯ ಏರಿಳತಗಳಿಗೆ ತಕ್ಕಂತೆ ಆದರೆ ಕೊನೆಯ ತನಕವೂ ದಡಗಳೆರಡೂ ನದಿಯೊಡನೆ ಮೌನವಾಗಿ ಪಯಣಿಸುತ್ತದೆ, ನೋವಿನಲ್ಲಿ ನಲಿವಿನಲ್ಲಿ ಅದೇ ತಬ್ಬುಗೆಯಲ್ಲಿ ಸಂತೈಸುತ್ತಾ ಸಾಗರನ ಒಡಲು ಸೇರುವವರೆಗೂ , ಆ ಮಹಾಯಾತ್ರೆಯಲ್ಲಿ ನದಿಗೆ ಈ ಸಾಂಗತ್ಯ ಕೊಡುವ ಆತ್ಮಬಲ ಬಣ್ಣಿಸಲಾಗದ್ದು, ನನ್ನ ಚಂದ್ರಮ ಹಾಗೆಯೆ , ಅವನು ಜತೆಗಿರಲಿ ಇಲ್ಲದಿರಲಿ, ಮುನಿಸಿರಲಿ ಸೊಗವಿರಲಿ ಅವನಿರದೆ ಈ ಬದುಕೆಂಬ ನದಿಗೆ ಯಾವದಡಗಳಿಲ್ಲ ನಾನೆಲ್ಲಿ ಹೋದರು ಅವನ ನೆನಪಿನ ಬಾಹುಗಳು ಕಾಳಜಿಯ ಕಣ್ಣುಗಳು ಸದಾ ನನ್ನ ಜತೆಗಿರುತ್ತವೆ, ಜೀವವೊಂದು ಮತ್ತೊಂದು ಜೀವಕ್ಕೆ ದೇಹದ ಅರಿವಿಲ್ಲದೆ ಅಂಟಿಕೊಂಡ ಹಾಗೇ
ಅ ವನೇ, ನಾನು ಉರಿಯುತ್ತಿರುತ್ತೇನೆ , ನಿನ್ನ ಅದೃಶ್ಯ ಸಹಾಯದೊಂದಿಗೆ, ನಿನ್ನ ಮುನಿಸು ಕರಗಲಿ, ಮತ್ತದೇ ಬೆಚ್ಚನೆಯ ಪುಳಕ ಇಬ್ಬರ ಹಾದಿಯಲ್ಲಿ ಚೆಲ್ಲಿಕೊಳ್ಳಲಿ, ನಿನ್ನ ಅರೋಗ್ಯ ನಗು ನನಗಾಗಿಯಾದರೂ ಸದಾ ನಳನಳಿಸುತ್ತಿರಲಿ
ನಿತ್ಯವೂ ಹುಟ್ಟಿದ ಹಬ್ಬವಾಲಿ
ಇಂತಿ ನಿನ್ನವಳಾಗದ ನಿನ್ನವಳು ಇವಳು