ನಾನು..
ನಿನ್ನ ರಾಧೆಯಲ್ಲ ...
ನೀನು ಮುರಳಿಯಾಗಲಿಲ್ಲ ..
ಯಮುನೆಯ ತಟದ ನೀರವ
ರಾತ್ರಿಗಳಲಿ
ನಿನ್ನ ಮೋಹ ಗಾನಕ್ಕೆ
ಗೆಜ್ಜೆ ಕಟ್ಟಿ ಕುಣಿಯಲಿಲ್ಲ ....
ನಾನು..
ನಿನ್ನ ಶಬರಿಯಲ್ಲ...
ಯಾರೂ ಬಾರದೂರಿನಲ್ಲಿ
ಯಾರೂ ಕಾಣದೂರಿನಲ್ಲಿ
ನಿನ್ನ ಧ್ಯಾನ ಮಾಡಲಿಲ್ಲ
ಹಣ್ಣುಗಳ ಆಯ್ದು ತಂದು
ಕಚ್ಚಿ ನಿನಗೆ ನೀಡಲಿಲ್ಲ
ನಿನ್ನೊಳೈಕ್ಯವಾಗಲಿಲ್ಲ
ನಾನು..
ನಿನ್ನ ಮೀರಾಳಲ್ಲ ....
ಕಿಶೋರ ಕಂಗಳಲ್ಲಿ
ನಿನ್ನ ಬಿಂಬ ನೆಲೆಸಲಿಲ್ಲ
ರಾಜ್ಯ ಕೋಶ ತೊರೆದು
ನಿನ್ನ ನೆನಪಲಿ ಅಲೆಯಲಿಲ್ಲ
ಹಾಡ ಹಾಡಿ ಮೈ ಮರೆತು ಕುಣಿಯಲಿಲ್ಲ
ಉರಿವ ಜ್ಯೋತಿಯಾಗಿ ನಿನ್ನ ಸೇರಲಿಲ್ಲ
ನನ್ನ ನಲ್ಲ..
ನಾ ನಿನ್ನ ಅಭಿಸಾರಿಕೆ
ನೀ ನನ್ನ ಶಿಲ್ಪಿಯಾದರೆ
ನಿನ್ನ ಉಳಿಗಳ ತಾಳಕ್ಕೆ ನರ್ತಿಸುವ
ಜೀವಂತ ಶಿಲಾಬಾಲಿಕೆ!!