Wednesday, April 24, 2013

ಏನೆಂದು ಹೆಸರಿಡಲಿ?

ಮನಸು ಮಾಯಾಮೃಗ...ಹಿಡಿತಕ್ಕೆ ಸಿಕ್ಕಿತೋ ಆಗಲೇ ಮತ್ತಾವುದೋ ಆಮಿಷದ ಹಿಂದೆ ಓಟ..ಮಾನಸ ಲೋಕಕ್ಕೆ ಏಕಾಗ್ರತೆ ತರುವುದು ಪ್ರೇಮ..ಅದು ಎಂಥ ಪ್ರೇಮವೂ ಆಗಿರಬಹುದು..ಒಂದೇ ವಸ್ತುವನ್ನೇ ಧೇನಿಸುವ ಸ್ಥಿತಿಗೆ ನಾನು ಪ್ರೇಮ ಅಂದದ್ದು..ಒಬ್ಬೊಬ್ಬರಿಗೆ ಒಂದೊಂದು ವಸ್ತು ವಿಷಯದ ಮೇಲೆ ಪ್ರೇಮ.. ಆದರೆ ಜಗತ್ತಿನ ಆದಿ-ಅಂತ್ಯಕ್ಕೆ ಕಾರಣ ಒಂದೇ ಪ್ರೇಮ..ಹುಟ್ಟು ಸಾವುಗಳಿಗೆ ಕಾರಣ ಒಂದೇ ಪ್ರೇಮ -ಅದು ಪ್ರಕೃತಿ -ಪುರುಷರ ಆದಿ ಅಂತ್ಯವಿಲ್ಲದ ಪ್ರೇಮ...
ಕಣ್ಣಲ್ಲಿ ಬಯಕೆಗಳ ಹೊತ್ತ ಹೆಸರಿಡದ ಹೆಣ್ಣೊಂದು ತನ್ನ ಹೆಸರಿಡದ ನಲ್ಲನಿಗೆ ಹೆಸರ ಯೋಚಿಸುವ ಪರಿ ಈ ಕವನದಲ್ಲಿ ಮೂಡಿದೆ....ಇಷ್ಟವಾದೀತೆ?(ವರ್ಷದ ಹಿಂದೆ ಬರೆದದ್ದು)

ಗಾಢಾಂಧಕಾರದಲಿ  ಕಣ್ಮುಚ್ಚಿ ಮಲಗಿದ್ದೆ
ಸುಮ್ಮನೇ ಅಲವರಿದೆ,ಕನಸುಗಳ ಗರ್ಭದಲಿ
ಹುದುಗಿದ್ದ ನಿನಗೊಂದು ರೂಪಿತ್ತು
ಜೊತೆ ಮಾಡಿಕೊಂಡೆ ,ನನ್ನಾತ್ಮಕ್ಕೆ
ಜೊತೆಯಾದವನೆ,ಹೆಸರ ಯೋಚಿಸುತಿರುವೆ
ಏನಿಡಲಿ ನಿನಗೊಂದು ಹೆಸರು?


ಕೆನ್ನೆಗಳ ಇಳಿಜಾರಲ್ಲಿ ಹಾರುವ
ಕೂದಲ ನನ್ನ ಅಂಕೆಯ ಮೀರಿ
ಚುಂಬಿಸಿದ,ತುಂಟಾಟವಾಡುವ
ಹೆಸರಿಲ್ಲದೆ ಸಲಿಗೆ ತೋರುವ
ಮೈ ತೀಡುವ ನಿನ್ನ ಅಲಪಿಗೆ
ತಂಬೆಲರಂಥವನೆ, ಏನಿಡಲಿ ಹೆಸರು??

ತೆರೆದ ನನ್ನ ನಸುಗೆಂಪು ಅಧರಗಳ
ನಡುವೆ ನೀ ಸುರಿದೆ ನಿನ್ನ ಅಧರಗಳ
ತಣ್ಬನಿ,ತನಿ ತನಿಯಾಗಿ ನಾ
ಹೀರುವಾಗ ನಿನ್ನ ಕಂಗಳಲ್ಲಿ ಕಂಡ
ತುಸು ತುಂಟ ನಗುವಿಗೆ  ಏನಿಡಲಿ ಹೆಸರು??


ಸುಮಗಳು ಸುರಿದ ತಂಪು ತಂಪು
ಹಾದಿಯಲ್ಲಿ ಕೈ ಹಿಡಿದು ನಡೆವ,
ಮತ್ತೊಮ್ಮೆ ಏಕಾಂತದಲಿ ಹರಡಿದ
ನನ್ನ ಹೆರಳ ನಡುವಿಂದ ಮೃದು
ಕೆನ್ನೆಯ ಮೇಲೆ ಗೀರುವ ಸ್ವಚ್ಚಂದ
ಬೆರಳೇ,ಏನಿಡಲಿ ನಿನಗೆ ಹೆಸರು??

ತಡೆದ ಕಣ್ಗಪ್ಪಿನ ಕಂಬನಿಯಲಿ
ನಿನ್ನೆದೆಯ ಕೂದಲುಗಳ ತೊಳೆದೆ,
ಕಣ್ಣು ಒರೆಸುತ್ತಾ ಎದೆಗೊತ್ತಿಕೊಂಡು
ನನ್ನ ನೀ ಮಗುವಂತೆ ನಲಿದವನೆ
ನಿನ್ನ ಪ್ರೇಮದ ಪರಿಗೆ ಏನಿಡಲಿ ಹೆಸರು??


ನೋವು ಬಿರಿದ ಬಿಸಿಲ ಎದೆಗೆ ಹಿಮದ
ಮಳೆಯಾದವನೆ,ಹೆಸರಿಲ್ಲದೇ ಕನಸುಗಳ
ನಡುವಿಂದ ಬಂದು ಬಾಳ ಹಸನಾಗಿಸಿದ
ನಿನ್ನ ಜೊತೆಗಿನಾಟ-ಬೇಟಕ್ಕೆ
ಹೆಸರೊಂದು ಬೇಕೆ??
ನೀನೇ ಎಂದಂತೆ ಬದುಕ
ಹಾದಿಯಲ್ಲಿ ನಾವುಗಳು
ಹೆಸರೇ ಇಲ್ಲದ ಹೂವುಗಳು
ಹೆಸರ ಹಂಗೊಂದು ಏಕೆ??