Tuesday, December 25, 2012

ಆತ್ಮ ಸಂಗಾತಿ


ಪ್ರೇಮ ಎಂದರೆ ಏನು?? ನಿಮಗೆ ನನ್ನ ಪ್ರಶ್ನೆ ಕೇಳಿ ನೂರು ಉತ್ತರಗಳು ಹೊಳೆದಿರಬಹುದು.ಪ್ರೇಮ ಅಂದರೆ ಹಾಗೆ..ಬಯಕೆ..ಆಸೆ..ಹೀಗೆ..ಮುಂತಾಗಿ..ಆದರೆ ನನ್ನ ಅಭಿಪ್ರಾಯದಲ್ಲಿ ಪ್ರೇಮ ಎಂದರೆ ಆತ್ಮಗಳ ಮಿಲನ..ವ್ಯಕ್ತಿಯ ಬಣ್ಣ,ರೂಪು,ಕೆಲಸ,ಜಾತಿಗಳ ಮೀರಿದ ಕಲ್ಪನೆ..ಅಂತಹ ಪ್ರೇಮ ಸುಲಭ ಸಾಧ್ಯವಲ್ಲ..ಆದರೆ ಒಮ್ಮೆ ದಕ್ಕಿದರೆ ಅದು ಜನ್ಮ ಜನ್ಮಾಂತರದ ಬಂಧ!! (ಕೆಳಗಿನ ಕವಿತೆ ಈಗ ೧೦ ತಿಂಗಳ ಹಿಂದೆ ಬರೆದದ್ದು)

ಹುಣ್ಣಿಮೆಯ ಬೆಳಕಲ್ಲಿ ಹೊರಟ
ಚಕೋರಗಳ ದಿಬ್ಬಣ
ಕಡಲ ಅಲೆಗಳಿಗೀಗ ಚಂದ್ರನೊಂದು
ಹಿತವಾದ ತಲ್ಲಣ

ಅಲೆಗಳ ಚುಂಬಿಸುವ
ಕಿರಣಗಳ ತವಕ
ಹಾಗೇ ಎರಡು ಜೀವಗಳ ಬಂಧಿಸುವುದು
ಪ್ರೇಮ ಎಂಬ ಪಾವಕ

ನಾನು ನೀನು! ನಿನ್ನ ನನ್ನ
ತೋಳತೆಕ್ಕೆ ಬಂಧನ
ಉಸಿರ ಬಿಸಿಯು ತಾಕುತಿರಲು
ಭಾವಗಳಿಗೆ ಕಂಪನ

ಕಪ್ಪೂ ಒಪ್ಪು,ಬೆಳ್ಳಿ ಚಂದ
ಒಂದನೊಂದು ಬೆರೆತವು
ತುಟಿಯ ಜೊನ್ನ ದೊನ್ನೆಯಲ್ಲಿ
ಕನಸುಗಳು ಕಲೆತವು

ಬಯಕೆ ಎಂಬ ಅಗ್ನಿಕುಂಡ
ಕಾಮವುರಿದು ಹೋಗಲಿ
ನನ್ನ ನಿನ್ನ ಮಿಲನದಲ್ಲಿ
ಆತ್ಮಗಳು ಬೆರೆಯಲಿ

ಆತ್ಮಗಳ ಮಿಲನದಲ್ಲಿ
ದೈವವೆಮಗೆ ಒಲಿವುದು
ಅವನ ಒಲುಮೆ ಬಾಳಿನಲ್ಲಿ
ಸುಖದ ಧಾರೆ ಸುರಿವುದು!!

3 comments:

  1. ಪ್ರೇಮವೊಂದು ಪಥ.. ನಡೆವುದು ಸಜೆ ಎನ್ನುವವರಿಗೆ ನಡೆಯುವುದೇ ಸಜೆ, ಗುನುಗುನಿಸಿ ಹೊರಟರದು ಹಾಡು, ದಾರಿಗುಂಟಾ ಪರಿಸರ ಸವಿದರೆ ಅದೊಂದು ಕವಿತೆ, ಎಲ್ಲಾ ಆಗು ಹೋಗುಗಳ ಮೆಲುಕುತ್ತಾ ನಡೆದರೆ ಕಥೆ, ಆದುದಕ್ಕೆ ಚಿಂತಿಸಿ ದುಃಖಿಸಿದರದು ವ್ಯಥೆ, ಎಲ್ಲ ಹೆಜ್ಜೆಗೂ ಒಂದರ್ಥ ಸಾರ್ಥಕತೆ ತುಂಬಿದರೆ ರಸಿಕಪ್ರೇಮ ಕವನ,,,,!!! ಅದೇ ಆಗಿದೆ ನಿಮ್ಮ ಕವನದ ಮೂಲಕ ಪ್ರೇಮ.

    ReplyDelete
  2. ಪ್ರೇಮದಲ್ಲಿ ಸ್ನೇಹದಲ್ಲಿ ಕೋಪವು ತಾಪವು ಎರಡು ಚೆನ್ನ..ಚಂದಿರನಿಂದ ಶುರುವಾದ ಪಯಣ ಎಲ್ಲ ಹಾದಿಯನ್ನು ತೆವಳಿ ಸಾಗಿ ಬಂದ ರೀತಿ ಖುಷಿ ಕೊಡುತ್ತದೆ..ಸಾಲುಗಳ ಜೋಡಣೆ ಸುಂದರ..

    ReplyDelete
  3. ಮೊದಲ ಬಾರಿಗೆ ನಿಮ್ಮ ಬ್ಲಾಗಿಗೆ ಬಂದೆ..ತುಂಬಾ ಇಷ್ಟವಾಯ್ತು ರಚನೆಯ ಶೈಲಿ..ಎರಡು ಪದಗಳ ಸಾಲಿನಲ್ಲಿ ಅದೆಷ್ಟು ಭಾವವನ್ನು ಹುದುಗಿಸಿಟ್ಟಿದ್ದೀರಿ..ಬಹಳ ಚೆನ್ನಾಗಿದೆ..ಇಷ್ಟವಾಯ್ತು
    ಪದಗಳೂ ಸಹ ಕಣ್ಣಿಗೆ ಹಬ್ಬವೆ..ಒಂದಿಷ್ಟು ಹೊಸ ಪದ ಕಲಿತೆ ನಿಮ್ಮಿಂದ..
    ನನ್ನಂಥರದವರಿಗೆ ಸಹಾಯ ಆದೀತೇನೋ ಎಂದು ನನಗೆ ತಿಳಿದಂತೆ ಅವುಗಳ ಅರ್ಥ ಹೇಳುವ ಪುಟ್ಟ ಪ್ರಯತ್ನ ...
    ಚಕೋರ:ಬೆಳದಿಂಗಳನ್ನೇ ಸೇವಿಸ ಬದುಕಬಹುದೆಂಬ ಆಸೆಹೊತ್ತಿರುವ ಹಕ್ಕಿ,
    ಪಾವಕ:ಬೆಂಕಿ..

    ಅಭಿಮಾನಿಯಾದೆ ನಿಮ್ಮ ಬರಹಕ್ಕೆ...ಬರೆಯುತ್ತಿರಿ..ಖಂಡಿತಾ ಓದುತ್ತೇವೆ..ಬಹಳ ಸಂತೋಷವಾಯ್ತು..
    ನಮಸ್ತೆ

    ReplyDelete