ಮನಸು ಮಾಯಾಮೃಗ...ಹಿಡಿತಕ್ಕೆ ಸಿಕ್ಕಿತೋ ಆಗಲೇ ಮತ್ತಾವುದೋ ಆಮಿಷದ ಹಿಂದೆ ಓಟ..ಮಾನಸ ಲೋಕಕ್ಕೆ ಏಕಾಗ್ರತೆ ತರುವುದು ಪ್ರೇಮ..ಅದು ಎಂಥ ಪ್ರೇಮವೂ ಆಗಿರಬಹುದು..ಒಂದೇ ವಸ್ತುವನ್ನೇ ಧೇನಿಸುವ ಸ್ಥಿತಿಗೆ ನಾನು ಪ್ರೇಮ ಅಂದದ್ದು..ಒಬ್ಬೊಬ್ಬರಿಗೆ ಒಂದೊಂದು ವಸ್ತು ವಿಷಯದ ಮೇಲೆ ಪ್ರೇಮ.. ಆದರೆ ಜಗತ್ತಿನ ಆದಿ-ಅಂತ್ಯಕ್ಕೆ ಕಾರಣ ಒಂದೇ ಪ್ರೇಮ..ಹುಟ್ಟು ಸಾವುಗಳಿಗೆ ಕಾರಣ ಒಂದೇ ಪ್ರೇಮ -ಅದು ಪ್ರಕೃತಿ -ಪುರುಷರ ಆದಿ ಅಂತ್ಯವಿಲ್ಲದ ಪ್ರೇಮ...
ಕಣ್ಣಲ್ಲಿ ಬಯಕೆಗಳ ಹೊತ್ತ ಹೆಸರಿಡದ ಹೆಣ್ಣೊಂದು ತನ್ನ ಹೆಸರಿಡದ ನಲ್ಲನಿಗೆ ಹೆಸರ ಯೋಚಿಸುವ ಪರಿ ಈ ಕವನದಲ್ಲಿ ಮೂಡಿದೆ....ಇಷ್ಟವಾದೀತೆ?(ವರ್ಷದ ಹಿಂದೆ ಬರೆದದ್ದು)
ಸುಮ್ಮನೇ ಅಲವರಿದೆ,ಕನಸುಗಳ ಗರ್ಭದಲಿ
ಹುದುಗಿದ್ದ ನಿನಗೊಂದು ರೂಪಿತ್ತು
ಜೊತೆ ಮಾಡಿಕೊಂಡೆ ,ನನ್ನಾತ್ಮಕ್ಕೆ
ಜೊತೆಯಾದವನೆ,ಹೆಸರ ಯೋಚಿಸುತಿರುವೆ
ಏನಿಡಲಿ ನಿನಗೊಂದು ಹೆಸರು?
ಕೆನ್ನೆಗಳ ಇಳಿಜಾರಲ್ಲಿ ಹಾರುವ
ಕೂದಲ ನನ್ನ ಅಂಕೆಯ ಮೀರಿ
ಚುಂಬಿಸಿದ,ತುಂಟಾಟವಾಡುವ
ಹೆಸರಿಲ್ಲದೆ ಸಲಿಗೆ ತೋರುವ
ಮೈ ತೀಡುವ ನಿನ್ನ ಅಲಪಿಗೆ
ತಂಬೆಲರಂಥವನೆ, ಏನಿಡಲಿ ಹೆಸರು??
ತೆರೆದ ನನ್ನ ನಸುಗೆಂಪು ಅಧರಗಳ
ನಡುವೆ ನೀ ಸುರಿದೆ ನಿನ್ನ ಅಧರಗಳ
ತಣ್ಬನಿ,ತನಿ ತನಿಯಾಗಿ ನಾ
ಹೀರುವಾಗ ನಿನ್ನ ಕಂಗಳಲ್ಲಿ ಕಂಡ
ತುಸು ತುಂಟ ನಗುವಿಗೆ ಏನಿಡಲಿ ಹೆಸರು??
ಸುಮಗಳು ಸುರಿದ ತಂಪು ತಂಪು
ಹಾದಿಯಲ್ಲಿ ಕೈ ಹಿಡಿದು ನಡೆವ,
ಮತ್ತೊಮ್ಮೆ ಏಕಾಂತದಲಿ ಹರಡಿದ
ನನ್ನ ಹೆರಳ ನಡುವಿಂದ ಮೃದು
ಕೆನ್ನೆಯ ಮೇಲೆ ಗೀರುವ ಸ್ವಚ್ಚಂದ
ಬೆರಳೇ,ಏನಿಡಲಿ ನಿನಗೆ ಹೆಸರು??
ತಡೆದ ಕಣ್ಗಪ್ಪಿನ ಕಂಬನಿಯಲಿ
ನಿನ್ನೆದೆಯ ಕೂದಲುಗಳ ತೊಳೆದೆ,
ಕಣ್ಣು ಒರೆಸುತ್ತಾ ಎದೆಗೊತ್ತಿಕೊಂಡು
ನನ್ನ ನೀ ಮಗುವಂತೆ ನಲಿದವನೆ
ನಿನ್ನ ಪ್ರೇಮದ ಪರಿಗೆ ಏನಿಡಲಿ ಹೆಸರು??
ನೋವು ಬಿರಿದ ಬಿಸಿಲ ಎದೆಗೆ ಹಿಮದ
ಮಳೆಯಾದವನೆ,ಹೆಸರಿಲ್ಲದೇ ಕನಸುಗಳ
ನಡುವಿಂದ ಬಂದು ಬಾಳ ಹಸನಾಗಿಸಿದ
ನಿನ್ನ ಜೊತೆಗಿನಾಟ-ಬೇಟಕ್ಕೆ
ಹೆಸರೊಂದು ಬೇಕೆ??
ನೀನೇ ಎಂದಂತೆ ಬದುಕ
ಹಾದಿಯಲ್ಲಿ ನಾವುಗಳು
ಹೆಸರೇ ಇಲ್ಲದ ಹೂವುಗಳು
ಹೆಸರ ಹಂಗೊಂದು ಏಕೆ??
ಒಂದು ವಸ್ತುವನ್ನು ಗುರುತಿಸಲು ಹೆಸರು ಬೇಕು, ಹೆಸರಿಲ್ಲದ ಒಂದು ಬಂಧವನ್ನು ಗುರುತಿಸಲು ಮನದ ಕಣ್ಣುಗಳು ಸಾಕು. ಸುಂದರವಾಗಿದೆ ಕವನಗಳ ಭಾವ. ಅದಕ್ಕೆ ಅಲ್ಲವೇ ಪ್ರಕಾಶ್ ಹೆಗಡೆ ಬರೆಯುವ ಪುಸ್ತಕಗಳಿಗೆ ಹೆಸರಿನ ಹಂಗಿಲ್ಲ. ಉಪೇಂದ್ರ ನಿರ್ದೇಶಿಸುವ ಚಿತ್ರಗಳ ಬಳಿ ಹೆಸರೇ ತಾಕೊಲ್ಲಾ ತಾಕೋಲ್ಲ ಅಲ್ಲವೇ
ReplyDeleteಅನುಭಾವದ ಭಾವ ಬಾಂಧವ್ಯಕೆ ಹೆಸರಿಡುವ ಹಂಗೇಕೆ...
ReplyDeleteಇಷ್ಟವಾಯಿತು ಭಾವ ಬರಹ....
ನನ್ನಾತ್ಮಬಂಧು ಅಥವಾ ಆತ್ಮಬಂಧು!
ReplyDelete"ಮಹಿ"ಮೆ ಗಳಿಗೆ ಹೆಸರು ಬೇಕಿಲ್ಲ.. ಅವುಗಳು ಯಾವತ್ತೂ ಕೃತಿ ಮತ್ತು ಪರಿಣಾಮಗಳ ಮೂಲಕ ಪರಿಚಿತ.. ವರ್ಷದ ಹಿಂದೆ ಬರೆದಿದ್ದರೂ ತಾಜಾತನ ಮಾತ್ರ ಇನ್ನೂ ಎಳಸು.. ಇಷ್ಟವಾಯ್ತು.. :) :)
ReplyDeleteಮೊದಲು ಪ್ರಸ್ತಾವನೆ ಮತ್ತು ನಂತರ ಕವನ ಈ ಪದ್ಧತಿ ನಮಗೆ ಮಾದರಿಯಾಗಲಿ.
ReplyDeleteಹಾದಿಯಲ್ಲಿ ನಾವುಗಳು
ಹೆಸರೇ ಇಲ್ಲದ ಹೂವುಗಳು
ಹೆಸರ ಹಂಗೊಂದು ಏಕೆ??
ಎನ್ನುವ ನಿಮ್ಮ ಶೈಲಿ ಇದೆಯಲ್ಲ, ಅದರ ಬಗ್ಗೆ ಎರಡು ಮಾತಿಲ್ಲ. ಕವನವನ್ನು ಇಷ್ಟು ಆಪ್ತವಾಗಿ ಬರೆಯುವ ನಿಮ್ಮ ಗುಟ್ಟು ನಮಗೂ ಹೇಳಿಕೊಡಿ ದಯಮಾಡಿ ಕವಿಯತ್ರೀ.