Thursday, September 19, 2013

ಕವನ ಗುಚ್ಛ


ಕವಿತೆ

ನೀ ಕತೆ ಬರೀ ಬರೀ ಅಂತ ಹಟ ಮಾಡಿದ್ದಕ್ಕೆ
ನಾ ಬರೆದದ್ದೆಲ್ಲ ನಿನ್ನದೇ ಕವಿತೆ...
ಕಥೆ ಬರೆಯಲು ರಾಜಕುಮಾರನನ್ನ ಹುಡುಕಬೇಕು
ಕವಿತೆಗಾದರೆ ನಿನ್ನ ಮುಗುಳ್ನಗೆ ಸಾಕು!!

ಅಂದು ಮಳೆಯಲ್ಲಿ ಇಬ್ಬರೂ ತೋಯ್ದಾಗ
ನೀ ತುಟಿಯಂಚಲೇ ಮುಗುಳ್ನಕ್ಕು ನುಡಿದದ್ದು
ನನ್ನ ಎದೆ ಬಡಿತ ಏರುಪೇರಾದದ್ದು
ಕಥೆಯಾ? ಅಲ್ಲ ಅದು ಕವಿತೆ,

ಏಕಾಂತದಲ್ಲಿ ನನ್ನ ಮುಂಗುರುಳ ಮಧ್ಯೆ
ಸಿಕ್ಕಿ ಹಾಕಿಕೊಂಡ ನಿನ್ನ ಹೃದಯದ
ಮಾತುಗಳ ಬಿಡಿಸುತ್ತಾ  ತುಟಿಯಂಚಿಗೆ
ತುಟಿಗಳ ತಂದದ್ದು ಕಥೆಯಾ? ಅಲ್ಲ ಕವಿತೆ

ನನ್ನ ಮನದ ಕನ್ನಡಿಯ ಜೋಪಾನವಾಗಿ
ಒರೆಸಿ ಬಿಂಬಗಳ ಅಳಿಸಿದ್ದರೂ ಅಳಿಸದ
ನಿನ್ನ ಬಿಂಬವೊಂದು ಮತ್ತೆ ಮತ್ತೆ ಹೇಳುವುದು..
ನೀ ನನಗೆ ನಾ ನಿನಗೆ ಕಥೆಯಾ?ಅಲ್ಲ  ಕವಿತೆ...




ಕತ್ತಲು

ಈ ರಸ್ತೆಗೆ ಇರುವುದೊಂದೇ ಒಂಟಿ ದೀಪ
ಸುತ್ತಲ ಮರಗಳ ಎಲೆ ಅಲುಗಿದಂತೆಲ್ಲಾ
ಕತ್ತಲ ಲೋಕದ ಅನಾವರಣ
ಮನೆ ಮನಗಳ ಮೂಲೆಯಲ್ಲಿ ಮುದುರಿಕೊಂಡಿದ್ದ 
ಕತ್ತಲು ನೆರಳು ಕಾಣೆಯಾದಂತೆಲ್ಲಾ
ಬೆಂಕಿಯಂತುರಿಯುತ್ತದೆ
ಸಹಸ್ರ ಲಿಂಗ ಯೋನಿಗಳು ಹುಟ್ಟುತ್ತಾ ಸಾಯುತ್ತಾ
ಅಗ್ನಿಕುಂಡಕ್ಕೆ ಆಹುತಿಯಾಗುವ
ಹೊತ್ತಿನಲ್ಲೇ ಮಾಯದಂತ ಗಾಯಕ್ಕೆ
ಉಪ್ಪೆರಚಿದಂತೆ ಕಿರುಚುವ ನಾಯಿ
ಬರಲಿರುವ ಬೆಳಕನ್ನು ಹೆದರಿಸಿದಂತೆನಿಸಿ
ಆತ್ಮವೊಂದು ಒಂಟಿ ದೀಪದ ಬುಡಕ್ಕೆ ಬಿದ್ದ 
ನೆರಳಾಗಿ ಕತ್ತಲನ್ನೇ ಕನವರಿಸಿದೆ!!


ಸಾಕ್ಷಿ

ಅವನು ನೀನು ನಾನು
ಮತ್ತೊಂದು ದೀಪ
ಹೂಕುಂಡಗಳ ಕೆಳಗೆ ಬಿದ್ದ ಪಕಳೆಗಳಂತೆ
ಕಳಚಿಕೊಳ್ಳುವ ನಿಮಿಷಗಳು
ಮಾತಿನ ಹಂಗಿಲ್ಲದೆಯೆ
ಪ್ರೀತಿಸಬಹುದು
ಬಿಡು,ಚೌಕಟ್ಟಿನಲ್ಲಿ
ಬಂದಿತ ಪದಗಳ ಕೊಲಾಜ್
ನನ್ನ ಕಲೆಯಲ್ಲ
ಕಣ್ಣಲ್ಲಿ ಪ್ರೀತಿಯೇ ಮೂಡದ 
ಮೇಲೆ ಬೆರಳುಗಳ
ತುದಿಗೆ ಅದು ತಿಳಿದೀತು ಹೇಗೆ??
ಅಳಿಯದೆ ಉಳಿದಿರುವೆ,
ಮತ್ತೆ ಹುಡುಕದಿರು ನಮ್ಮ 
ನಡುವೆ
ನಿನ್ನ ಪ್ರೇಮಕ್ಕೆ ಸಾಕ್ಷಿ!!



ಅರಿಕೆ

ಪ್ರೀತಿ ಎಂದರೆ ನಂಬಿಕೆ ಅನಿಸಿತ್ತು
ನಿನ್ನ ಪ್ರೀತಿ??
ಬಿಡು ಪ್ರೀತಿಸುವುದೋ ಬಿಡುವುದೋ 
ಎಂಬ ಸಂಶಯವೇ
ನಮ್ಮಿಬ್ಬರ ಬದುಕಗೊಡುವುದು
ನಿನಗಾಗಿ ಪದಕೋಶಗಳ ಹುಡುಕಿದ್ದೆ
ಅಲ್ಲೆಲ್ಲೋ ನಗರದ ಮೂಲೆಯಲ್ಲಿನ ಕೋಣೆಯಲ್ಲಿ
ಜಗ ಮರೆತು ಪದಗಳ ಜಾಲದಲ್ಲಿ 
ಬಂಧಿಯಾಗಿ ನಿದ್ರಿಸುತ್ತಿರುವವನೇ ಕೇಳು
ನಿನ್ನ ಅರಿವುದು ಯಾರಿಗೆ ಬೇಕು
ಮಾತನಾಡದೇ ಪ್ರೀತಿಸುವ ನೋಯಿಸುವ
ನಿನ್ನ ಕಲೆ ಕಲಿಸು ಸಾಕು!!


chitrakRupe-internet



















6 comments:

  1. ಬಂಧಿಯಾಗಿ ನಿದ್ರಿಸುತ್ತಿರುವವನೇ ಕೇಳು
    ನಿನ್ನ ಅರಿವುದು ಯಾರಿಗೆ ಬೇಕು
    ಮಾತನಾಡದೇ ಪ್ರೀತಿಸುವ ನೋಯಿಸುವ
    ನಿನ್ನ ಕಲೆ ಕಲಿಸು ಸಾಕು!!
    ಸಾಕು!!
    ಸಾಕು!!...................

    ReplyDelete
  2. ಶಮ್ಮಿ ಜೀ -
    ತುಂಬಾನೇ ಇಷ್ಟವಾಯಿತು...

    ReplyDelete
  3. excellant, superb, tumba tumba ista aaytu. prema bhaavakke sallisuva gouravakke nannadondu sharamu.

    ReplyDelete
  4. ವಾಹ್ ಶಮ್ಮಿ...ಒಂದಕ್ಕಿಂತಾ ಒಂದು ಸುಂದರ ಭಾವ ಚನ್ನಾಗಿದೆ ಕವನ ಸರಣಿ

    ReplyDelete
  5. ಕವಿತೆ: ಅದು ನೀಳ್ಗತೆ ಗೆಳತಿ - ಕವಿತೆಯೆಂಬ ಭ್ರಮೆ! ಒಮ್ಮೊಮ್ಮೆ ಹರಿ ಕಥೆ. ಅದು ಅಗಣಿತ ಪುಟಗಳ ನಿಜ ಕಾದಂಬರಿ!
    ಕತ್ತಲು: ಅವ್ಯಕ್ತ ಭಯ ಮತ್ತು ನಿಘೂಡತೆಯ ಸಂಕೇತ ಈ ಕತ್ತಲು. ಭಯಗ್ರಸ್ತ ಮನಸ್ಸುಗಳಿಗೆ ಅದು ಪರೀಕ್ಷಾ ಸಮಯ. ನಿರ್ಲಿಪ್ತ ಸಾಂಗತ್ಯ ಶೋಧನೆಗೆ ಪರ್ವಕಾಲ.
    ಸಾಕ್ಷಿ: ಹಲವು ಆಧುನಿಕಾರ್ಥ ಕೋಲಾಜುಗಳ ಸಂಗಮವೇ ಬದುಕು. ಇಲ್ಲಿ ಸಾಕ್ಷಿಯಾಗುವುದು ನಿನ್ನೆಗಳು ಮಾತ್ರ. ಇಂದು ರೂಪಿತವಲ್ಲ ನಾಳೆ ಯೋಜಿತವಲ್ಲ. ಅವಳು ಮತ್ತು ನಾನು ಇವೆರಡೂ ಧ್ರುವವಗಳ ಅರ್ಥ ಚಿಂತಾಮಣಿ.
    ಅರಿಕೆ: ಎಲ್ಲಿಯೋ ಹುಟ್ಟುವ ಪದ, ಸರಿಯಾದ ವ್ಯಾಕರಣಕ್ಕೆ ಸಿಕ್ಕು, ವಾಕ್ಯವಾಗುವ ವಿಶಿಷ್ಟ ಪ್ರಕ್ರಿಯೆ ಗೆಳೆತನ- ದಾಂಪತ್ಯ ಅಥವಾ ಅರ್ಥಕ್ಕೇ ಸಿಗದ ಬರೀ 'ಅರ್ಥ'ಕ್ಕೆ ಮಾತ್ರ ಜೋತು ಬೀಳೋ ಬಾಂಧವ್ಯ!

    4ಊ ಉತ್ತಮೋತ್ತಮ.

    ReplyDelete
  6. tumba sogasada kavitegaLu ondakkinda ondu chennagive

    ReplyDelete