ಯು.ಬಿ.ಸಿಟಿಯ ಬಿಯರ್ರೆ ಲೌಂಜಿನಲ್ಲಿ ಎರಡು ಮನಸುಗಳು ಬೀರಿನ ಜತೆ ಬಿಕ್ಕುತ್ತಿದ್ದವು, ಒಂದು ವಿದೇಶದ್ದು, ಮತ್ತೊಂದು ಅಪ್ಪಟ ಸ್ವದೇಶಿ, ಸೂಕ್ಷ್ಮ ಗಮನಿಸಿದರೆ ಅವೆರಡೂ ರೋಗಪೀಡಿತ ವಾದವು ಅಂತ ಎಲ್ಲರಿಗೂ ಗೊತ್ತಾಗುತ್ತಿತ್ತು, ಎದುರು ಮೂಲೆಯವನು ಅದಾವುದೋ ಅರಿಸಿನದ ದ್ರವವನ್ನು ಕುಡಿಯುತ್ತಾ ಹಲುಬುತ್ತಿದ್ದ"bro I left the new York for her bro, she told me to be vegan, see now am pure vegan, I don't eat meat, I left my favorite beef, am ready to put that holy thread also " ಅವ ಹಲುಬುತ್ತಿದ್ದರೆ ಇವ ಹೇಳುತ್ತಿದ್ದ, " ನನ್ನಮಗನೆ, ನಮಗೆ ಬುದ್ದಿ ಇಲ್ಲ, ನೀನು ತಿನ್ನೋದು ಬಿಟ್ಟೆ ನಾನು ಅವಳಿಗಾಗೆ ಕಲಿತೆ, ನೋಡು ಮೇಲೆ ಹೋಗಿ ಒಬ್ಬಳೇ ಕುಣೀತಿದ್ದಾಳೆ ಹೊಸಬರು ಯಾರಾದರೂ ಸಿಕ್ಕುತ್ತಾರೆ " ಅವನು ತಣ್ಣನೆಯ ದ್ರವವನ್ನು ಗುಟುಕರಿಸಿ ತಲೆ ತಗ್ಗಿಸಿದ್ದ, ಆ ಕತ್ತಲ ಮೂಲೆಯಲ್ಲಿ ಕುಳಿತ ಅವಳು ಸುಮ್ಮನೆ ಕೈಲಿರುವ ಸಿಗರೇಟನ್ನು ನೋಡಿ ನಗುತ್ತಿದ್ದಳು, "life is paradox, ಅದಿಲ್ಲ ಅಂದರೆ ಇಡೀ ಜಗತ್ತನ್ನು ಧಿಕ್ಕರಿಸಿ ಈ ಬ್ರಾಹ್ಮಣ ಹುಡುಗನ್ನ ನಾನ್ಯಾಕೆ ಮದುವೆಯಾಗಬೇಕಿತ್ತು, ನಾನಿವನಿಗೆ ಕುಡಿಯುವುದು ಮಾಂಸ ತಿನ್ನುವುದು ಕಲಿಸಿದೆನಾ, ಅಷ್ಟಕ್ಕು ಆ ಸಮಯದಲ್ಲಿ ಅದೆಲ್ಲ ಯಾವ ಲೆಕ್ಕಕ್ಕಿಲ್ಲದ ವಿಷಯಗಳು, ಅವನು ಕಲಿತಿದ್ದು ಇದನ್ನು ಮುಂಚೆ, ಶೋಕಿಗೆ, ತಾನಿವನಿಗಾಗಿ ಸಂಸ್ಕೃತ ಕಲಿತೆ ಶ್ಲೋಕ ಕಲಿತೆ, ಹಾಳಾದ್ದು ಸಿಗರೇಟು ಒಂದು ಬಿಟ್ಟರೆ ಇನ್ ಯಾವ ದುರಭ್ಯಾಸ ಇಲ್ಲ ತನಗೆ, ಅದು ಹೇಗೆ ಸುಳ್ಳನ್ನೆ ಕುಡಿಯುತ್ತಾನೆ ಅವ ದಿನಾಲು ಸೋಜಿಗ ತನಗೆ, ಹತ್ತು ಬಾರಿ ಹೇಳಿದರೆ ಸುಳ್ಳು ಸತ್ಯವಾಗುತ್ತದಂತೆ, ಇದೂ ಅದೆ ಇರಬಹುದು ಅಂದವಳಿಗೆ ಅವನ ಎದುರು ಕೂತ ವಿದೇಶಿ ಇಷ್ಟವಾಗತೊಡಗಿದ್ದ, ಯಾವ ದೇಶವೊ ಏನೋ ಇಲ್ಲಿ ಬಂದು ಅವಳಿಗಾಗಿ ಎಲ್ಲ ತ್ಯಾಗ ಮಾಡಿದ ಅವನು ಗ್ರೇಟ್ ಅನ್ನಿಸತೊಡಗಿದ, ಆದರೆ ಅಲ್ಲಿಂದ ಮಿಸುಕಲಿಲ್ಲ ಅವಳು, ಈ ಮೂವರನ್ನು ಸಾಮಾನ್ಯವಾಗಿ ಅಲ್ಲಿಯೆ ನೋಡುತ್ತಿದ್ದ ಪಕ್ಕದ ಅಸಾಮಿಗೆ ಜೋರಾದ ನಗು ಬರುತ್ತಿತ್ತು , "ಕುಡಿಯೋದಿಕ್ಕೆ ಕಾರಣ ಬೇಕಾ, ಸುಳ್ಳು, ಮೊದಮೊದಲು ಕಾರಣ ನಮ್ಮನ್ನು ಹುಡುಕತ್ತೆ, ಆಮೇಲಾಮೇಲೆ ನಾವೆ ಹುಡುಕ್ಕೊಳ್ಳೋದು, ಅದು ಮುಗಿದ ಮೇಲೆ ತನ್ನ ತರಾ, ಸುಮ್ಮನೆ ಕುಡಿಯುವುದು" ಲೌಂಜಿನ ಸೀಟುಗಳೆಲ್ಲ ಭರ್ತಿಯಾಗಿದ್ದವು, ದೊಡ್ಡ ಮಗ್ಗಿನಲ್ಲಿ ಕಾಣುತ್ತಿದ್ದ ದ್ರವದಲ್ಲಿ ಸಂಜೆ ರಾತ್ರಿಗೆ ಕೆಂಪಾಗತೊಡಗಿತ್ತು, ಮತ್ತು ಗಾಳಿಯಲ್ಲಿದ್ದ ನಶೆಗೆ ಸತ್ಯ ಸುಳ್ಳಾಗಿಯು ಸುಳ್ಳು ಸತ್ಯವಾಗಿಯು ನಿಚ್ಚಳವಿಲ್ಲದ ಅಲ್ಲಿಯ ಜಗತ್ತು ಅಮಲಿನಲ್ಲಿ ಲೀನವಾಗತೊಡಗಿತ್ತು, ಸದ್ದು ಮರೆಯಾಗಿ ಮಾತಾಡಬೇಕಾದ್ದು ಇನ್ನೇನೋ ಆಗಿ ಸುತ್ತಲಿನ ವಾತಾವರಣದಲ್ಲಿ ಸುಟ್ಟುಕೊಂಡ ಹೃದಯಗಳು ಮತ್ತೆಂದು ಸರಿಯಾಗಲಾರದಂತೆ ಬಣ್ಣಬಣ್ಣದ ದ್ರವಗಳಲ್ಲಿ ಮುಳುಗುತ್ತಾ ತೇಲುತ್ತಾ ಮೈ ಮರೆತಿದ್ದವು😊
No comments:
Post a Comment