Thursday, September 14, 2017

ಬದುಕೊಂದು ಮುಗಿಯದ ಉತ್ಸವ

ಪಕ್ಕದ ಮನೆಯವಳ ನೋಂಪಿ, ಅವರಲ್ಲಿ ಅದನ್ನ ಪರಬು ಅಂತ ಕರೀತಾರಂತೆ,ಮಕ್ಕಳ ಆರೋಗ್ಯದ ಸಲುವಾಗೊಮ್ಮೆ,ಮತ್ತೆ ಅವಳ ತಾಳಿ ಭಾಗ್ಯದ ಸಲುವಾಗೊಮ್ಮೆ, ಅವಳಿಗೆ ಅದು ಅನಿವಾರ್ಯ ಕರ್ಮ(ಬಿಹಾರಿಗಳಲ್ಲಿ ವ್ರತ ಮಾಡದಿರುವುದು ಬಹಿಷ್ಕಾರಕ್ಕೆ ಅರ್ಹ ಅಪರಾಧ ಹೆಣ್ಣು ಮಕ್ಕಳಿಗೆ ಮಾತ್ರ!)ಅವಳ ಗಂಡ ಯಥಾ ಪ್ರಕಾರ ಬೆಳಗ್ಗೆ ೧೨ ಗಂಟೆಗೆ ಎದ್ದು ಜೋರಾಗಿ ಗೋವಿಂದ ಗೋವಿಂದ ಎಂದು ಪೂಜೆ ಮಾಡಿ ಹೋದರೆ ಬರುವುದು ಮಧ್ಯ ರಾತ್ರಿ ಮೂರುಗಂಟೆಗೆ ಫುಲ್ಲಿ ಟೈಟಗಿ....ಇಂತಿಪ್ಪ ಗಂಡನ ಹೆಂಡತಿ ಇಡೀ ದಿನ ತೊಟ್ಟು ನೀರು ಕುಡಿಯದೆ ಇರುವ ಎರಡು ಸೈತಾನನಂತ ಮಕ್ಕಳನ್ನು ಸಂಭಾಳಿಸಿ ಸುಸ್ತು ಬಿದ್ದು ಹೋದಳು..ತಾಳಲಾರದೆ ನಾನು ಮಕ್ಕಳಿಗಾದರೂ ಉಣ್ಣಲು ಮಾಡಿಕೊಡಲೇ ಅಂತ ಕೇಳಿದೆ..ಅಷ್ಟು ಕೇಳಿದ್ದೆ ತಡ ಅವಳ ಮಕ್ಕಳು ಗಂಡ ಅತ್ತೆ ಮಾವ ಎಲ್ಲರ ಮೇಲಿನ ಸಿಟ್ಟು ಅವಳಿಗೆ ಉಕ್ಕಿ ಬಂತು,ಮಕ್ಕಳನ್ನು ಒಳಗೆ ಕರೆದು ಮತ್ತೊಮ್ಮೆ ಚನ್ನಾಗಿ ಚಚ್ಚಿದಳು, ನನಗೆ ಈ ಭಾಗ್ಯಕ್ಕೆ ವ್ರತಗಳನ್ನ ಮಾಡಬೇಕಾದರೂ ಯಾಕೆ ಅನ್ನಿಸಿತು...

ಜಗತ್ತು ವೇಗವಾಗಿ  ಮುಂದುವರೆದಿದೆ...ಅಷ್ಟೇ  ವೇಗದ ತಂತ್ರಜ್ಞಾನಗಳು...ಆದರೆ ಮನುಷ್ಯ? ತನ್ನ ಒಳಗಣ ವ್ಯಕ್ತಿಯಲ್ಲಿದ್ದ ಮಾನವತೆಯನ್ನ ಸಾಯಲು ಬಿಟ್ಟು ಹಣದ ಹೆಣದ ಮೇಲೆ ನಡೆದಾಡುತ್ತಿದ್ದಾನೆ...ಅವನಿಗೆ ಗೊತ್ತಿಲ್ಲದಂಥ ಉಸಿರಾಟಕ್ಕೂ ಕಷ್ಟವಾದ ಹೊಟ್ಟೆಕಿಚ್ಚಿನ ಲೋಕದಲ್ಲಿ ಬದುಕುತ್ತಿದ್ದಾನೆ, 

ಏನೇನೋ ನಡೆದಿಹುದು ವಿಜ್ಞಾನ ಸಂಧಾನ

ಮಾನುಷ್ಯ ಭಾಂಡವ್ಯವೊಂದು ಮುರಿದಿಹುದು

ತಾನೊಡರ್ಚಿದಹೊನ್ನ ರಸವೇ ನರನ ಕೊರಳ್ಗೆ

ನೇಣಾಗಿಹುದು ನೋಡು ಮರುಳ ಮುನಿಯ!!

ಹಣವೊಂದೇ ಬದುಕಲ್ಲ ಹಾಗಂತ ಅದು ಅನಿವಾರ್ಯ... ಕಾಂಚನಮೂಲ ಜಗತ್ತು ಅಂತ ಅವತ್ತು ಚಾಣಕ್ಯ ಹೇಳಿದ ನೀತಿ ಇವತ್ತಿಗೂ ಸರ್ಮಸಮ್ಮತವೇ..ಹಾಗಾದರೆ ನೆಮ್ಮದಿ ಎಲ್ಲಿದೆ? ಸಲ್ಪ ಇದ್ದವನಿಗೆ ತನಗಿಂತ ಜಾಸ್ತಿ ಇದ್ದವನ ಮೇಲೆ ಕರುಬು, ಜಾಸ್ತಿ ಇದ್ದವನಿಗೆ ಇನ್ನೂ ಜಾಸ್ತಿ ಇದ್ದವನ ಮೇಲೆ ಉರಿ, ಅವನಂತೆ ಇವನಾಗಲು ಇವನಂತೆ ಅವನಾಗಲು ಹಾರಾಟ ನಿಲ್ಲದ ಹೋರಾಟ, ಇದು ಹಣಕ್ಕಷ್ಟೆ ಅಲ್ಲ, ಓದಿಕೊಂಡ ಸಜ್ಜನರಲ್ಲೂ ಬುದ್ದಿಮತ್ತೆ ಪ್ರದರ್ಶನ ನಿಲ್ಲದ ಕಾಲೆಳೆಯುವ ಆಟ,

ಅವನ ಕಣ್ಗಿವನ ಬಾಳ್ಕುಣಿದಾಟಗಳು ತಪ್ಪು

ಇವನ ಕಣ್ಗಿವನಿರವು ನೋಟಗಳು ಬೆಪ್ಪು

ಅವನವನಿಗವನವನ ಹುಚ್ಚಾಟದಲಿ ನಚ್ಚು

ಶಿವನಿಗಿದೆಲ್ಲವು ಮೆಚ್ಚು ಮರುಳ ಮುನಿಯ!!

ನಾವು ಇನ್ನೊಬ್ಬರಿಗೆ ಸಲಹೆ ನೀಡೋದರಲ್ಲಿ ಅವರನ್ನ ಇದಮಿತ್ಥಂ ಅಂತ ಅಳೆಯೋದರಲ್ಲಿ ಬಹಳ ನಿಪುಣರು, ಇದು ಅನಾದಿಕಾಲದಿಂದ ನಡಕೊಂಡು ಬಂದದ್ದು, ಅನವಶ್ಯಕ ಇನ್ನೊಬ್ಬರ ವಿಷ್ಯದಲ್ಲಿ ಮೂಗು ತೂರಿಸೋದು ಬೇಕಾದವರನ್ನ ಹೊಗಳಿ ಬೇಡದ ಜನಗಳನ್ನ ದಬಾರ್ ಅಂತ ಕೆಳಗೆ ಬೀಳಿಸೋದು ಎಲ್ಲಾ ಮೈಂಡ್ ಗೇಮ್...ಕಾರ್ಪೋರೇಟ್ ಜಗತ್ತು ಇMತಹ ಆಟಗಳನ್ನ ಆಡುತ್ತಲೇ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತದೆ,  ಅದು ನಮ್ಮ ಸರ್ವ ಮದಗಳಿಗೂ ಪ್ರೋತ್ಸಾಹ ನೀಡಿ ನಮ್ಮನ್ನ ಪಗಡೆಯಾಗಿ ನಡೆಸಿ ಮಾನವತೆಯನ್ನ ಮರೆಸುತ್ತದೆ...ದೊಡ್ಡದಾಗಿ ನಡೆಸುವ ಚಾರಿಟಿ ಶೋಗಳು ಚಂದಾ ಸಂಗ್ರಹಿಸುವ ಅಭಿಯಾನಗಳು ಒಂಚೂರಾದರೂ ಅಸಮಾನತೆ ಹೊಡೆದೋಡಿಸುತ್ತವೆಯಾ?? ತಿಳಿಯದು....

ಇಂಥ ಪರಿಸ್ಥಿತಿಯಲ್ಲಿ ಬಸವಣ್ಣನ ವಚನದ ಮನನ ಎಷ್ಟು ಪ್ರಸ್ತುತ...ನಿಮ್ಮ ನಿಮ್ಮ ಮಾನವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ಜಗದ ಡೊಂಕು ತಿದ್ದಲು ನಾವೇನು ಅಲ್ಲ,

ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ ।

ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ ।।

ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿ- ।

ನ್ನುದ್ಧಾರವೆಷ್ಟಾಯ್ತೊ? - ಮಂಕುತಿಮ್ಮ ।।

ಹೌದು..ಮನಸ್ಸು ಶಾಂತವಾಗಿಟ್ಟುಕೊಳ್ಳಬೇಕು..ಅದಕ್ಕೆ ಯಾವುದೋ ಸಾವಿರಾರು ರೂಪಾಯಿಗಳ ಕೋರ್ಸಿಗೆ ಸೇರಬೇಕೆ..ವಿಷಾದವೆಂದರೆ ಪ್ರತಿ ಮನುಷ್ಯನಿಗೂ ಅವಶ್ಯಕವಾದ ಬದುಕುವ ಕ್ರಿಯೆಗಳನ್ನು ಮಾರಾಟದ ಸರಕು ಮಾಡಿ ಕೇವಲ ದುಡ್ಡಿದ್ದವರಾಷ್ಟೆ ಅನುಭವಿಸುವ ಸಂಪತ್ತಾಗಿ ಕುಡಿಟ್ಟಿರುವುದು, ಹಾಗಿದ್ದರೂ ಹಿಂದಿನ ಜೀವಗಳು ನಮಗಿಂತ ಚನ್ನಾಗಿ ಬದುಕಿರಲಿಲ್ಲವೇ, ಅಲ್ಲೂ ಕೆಟ್ಟದ್ದಿತ್ತು, ಒಳ್ಳೆಯದೂ...ಅದೇ...ಹಾಗೆ ಹೇಗೆ ಬದುಕಿದರವರು??ಹೇಳಿದಷ್ಟು ಸುಲಭಕ್ಕೆ ನಮ್ಮ ಆಸೆಗಳನ್ನ ನಿಯಂತ್ರಿಸಲಾದೀತೇ? ಇಲ್ಲ.. ಆದರೆ ಪ್ರಯತ್ನಿಸಬಹುದು....

ಅದು ತುಂಬಾ ಸುಲಭ..ಕಳಚಿಕೊಳ್ಳುವುದು ಅಸಾಧ್ಯವೇನಲ್ಲ..

ಹಿಂದಿನವರು ಈ ತರದ ವೈರುಧ್ಯಗಳಿಗೆ ಹೊರತಾಗಿರಲಿಲ್ಲ, ಕೆಲವು ಆತ್ಮಗಳ ಬೆಳಕು(ನಮ್ಬುವದಾದರೆ) ಜೋರಾಗಿ ಪ್ರಕಾಶಿಸಿತು, ಕೆಲವು ತಣ್ಣಗೆ ಹಣತೆಯಷ್ಟೆ ಬೆಳಕು ಚೆಲ್ಲಿ ಹತ್ತಿರ ಬಂದವರ ಬಾಳನ್ನುದ್ಧರಿಸಿ ನಂದಿ ಹೋಯಿತು...ಆ ಸ್ಥಿತಿ ಇಂದಿಗೂ ಇದೆ..ಕಾಲ ಬದಲಾಗಿದೆ ಎನ್ನುವ ಮಾತೆ ತಪ್ಪು, ಮತ್ತೆ ಮಾಡಿದುದನ್ನೇ ಮಾಡುತ್ತಾ ಆಡಿದುದನ್ನೇ ಆಡುತ್ತಾ ತೊಟ್ಟ ಬಟ್ಟೆಗಳೆಷ್ಟೋ, ಆದರೂ ಅಹಂಕಾರ ಅಳಿಯದು, ಅಂಟು ತೊಳೆಯದು.

ಅಂಟುವುದು ಮನಸ್ಸಿನ ಸಹಜ ಕ್ರಿಯೆ,ಅಂಟಿಕೊಂಡು ಕಳಚಲಾರದೆ ಒದ್ದಾಡಿ ನರಳುವುದು ಕೂಡ ಸಹಜ,ಆದರೆ ಇದು ಕೊಡುವ ನೋವು ತನ್ನನ್ನು ಸುತ್ತಲಿನವರನ್ನು ಭಾದಿಸಬಾರದಷ್ಟೆ,ಅಂಟು ಬಿಡಿಸುವುದು ಸುಲಭಲ್ಲ, ಅದು ಸಂಭಂಧದ ಅಂಟು,ಅಥವಾ ಆಸ್ತಿ ಹಣ ವೈಭವ ಪ್ರಸಿದ್ಧಿ ಯಾವುದಾಗಿರಬಹುದು...ಅದು ಅಂಟಿಕೊಳ್ಳುವ ಮುನ್ನವೇ ಶೋಧಕ್ಕೆ ಒಳಪಡಿಸಿಕೊಳ್ಳುವ ಕ್ರಿಯೆ, ಹಾಗನ್ದಾಕ್ಶಣಕ್ಕೆ, ನಮ್ಮ ಮನಸ್ಸಿನ ಸುತ್ತ ನಿಗ್ರಹದ ಕೋಟೆ ಕಟ್ಟಬೇಕೆ? ಬೇಡ..ಬಂದದ್ದನ್ನ ಅನುಭವಿಸೋದು,ಬಾರದ್ದನ್ನ ಅದರ ಪಾಡಿಗೆ ಬಿಡೋದು, ಬಯಸದೆ ಇರೋದು,ಇವತ್ತಿನದನ್ನ ಇವತ್ತೇ ಅಳಿಸಿ ಹಾಕೋದು,ಹತ್ತರಲ್ಲೊಬ್ಬರಂತೆ ಎಲೆಮರೆಯ ಕಾಯಾಗಿ ಕೈಲಾದಷ್ಟು ಸಹಾಯ ಮಾಡಿ ಹೊಟ್ಟೆ ತುಂಬಾ ಉಂಡು ಜೊತೆಯಲ್ಲಿದ್ದವರಿಗೂ ತಿನ್ನಿಸಿ,ನಕ್ಕು ಹರಟಿ,ಯಾರಿಗೂ ನೋಯಿಸದೆ ನಗುತ್ತಾ ಬದುಕೋದು...ಆಗಲ್ವೆ? ಖಂಡಿತಾ ಆಗುತ್ತೆ ಅದಕ್ಕೆ ಬೇಕಾದ್ದು ಗಾಳಿಯಷ್ಟು ತೇಲುವ ಹಗುರ ಹೃದಯ,ಅಲ್ಲಿ ಕ್ಷಮೆ ಪ್ರೀತಿ ಬಿಟ್ಟರೆ ಇನ್ನೇನು ಸಿಗಬಾರದು, ಮದ ಮಾತ್ಸರ್ಯಗಳ ಬದಲು ದೊಡ್ಡ ಸೊನ್ನೆ, ಖಾಲಿ ಖಾಲಿ ಜಾಗ, ಯಾರು ಬರಬಹುದು ಯಾರು ಹೋಗಬಹುದು,ಯಾವ ಜಂಜಡಗಳಿಲ್ಲ, ನಮ್ಮನ್ನ ನಾವು ಅರ್ಥ ಮಾಡಿಸುವುದು ಸಲ್ಲದು,ಅರ್ಥ ಮಾಡಿಕೊಳ್ಳದೆ ಹೊರ ಹೋದವರನ್ನ ಕಾಡಿಸುವುದು ಸಲ್ಲದು...

ಯೋಚಿಸಿ..ನಾವೊಂದು ದೊಡ್ಡ ಕಾಡು ಅಥವಾ ಬಯಲು ಅಥವಾ ಮರಳುಗಾಡು, ಅಲ್ಲಿರುವ ಯಾವ ಪಕ್ಷಿ ಪ್ರಾಣಿ ಚರ ಚಿರಗಳ ಮೇಲೆ ನಮ್ಮ ಹಕ್ಕಿದೆಯೇ? ಇಲ್ಲ, ನಾವು ನಿಮಿತ್ತಕ್ಕೆ ಇದ್ದು ಬಿಡಬೇಕು, ನೋವೋ ಸಾವೊ ಕಣ್ಣಿರೋ ಮಳೆಹನಿಯೋ ಎಲ್ಲಕ್ಕೂ ತೆರೆದುಕೊಂಡು...ಎಲ್ಲ ಋತುಗಳನ್ನ ಭಾವದ ವಿಷವೋ ಸಾಂತ್ವನದ ಸಿಹಿಯೋ ಯಾವುದು ಅಲ್ಲದಂತೆ...ಸಾಧ್ಯವೇ..ಯೋಚಿಸಿ...ಖಂಡಿತಾ ಸಾಧ್ಯವಿದೆ,...

ಹೀಗೊಂದು ಕ್ರಿಯೆ ನಿರಂತರ ನಡೆದಲ್ಲಿ ಬುದ್ಧಿಪೂರ್ವಕ, ಕೆಲದಿನಗಳ ನಂತರ ನಾವೇ ಹಗುರಾಗುತ್ತೇವೆ...ಅದೊಂದು ಮನಸ್ಸು ಭಾವಗಳು ಇಲ್ಲದಂತೆ ಬಾಸವಾಗುತ್ತೇವೆ,ಒಳಿತು ಕೆಡಕುಗಳು ಗೋಚರಿಸುತ್ತವೆ,ಹಾಗೆ ಮನಸ್ಸು ಹೊಸಾ ಸವಾಲಿಗು ಸದಾ ಎಚ್ಚರಿರುತ್ತದೆ,ಸಾಧನೆಗಿಂತ ಕೀರ್ತಿಗಿಂತ ಸವಿಯಾದ್ದು ಬೇರೇನೋ ಇದೆ ಅನ್ನೋದು ಪ್ರೀತಿಯಾಗಿ ಮಾರ್ಪಡುತ್ತೆ,ಆಗ ಅಂಟು ಕಷ್ಟ ಆಗುತ್ತದೆ...ಮತ್ತು ಹೊರಜಗತ್ತಿನ ತೋರ್ಪಡೆಗಾಗಿ  ಮಾಡೋ ಎಲ್ಲ ಕ್ರಿಯೆಗಳು ವ್ರತಗಳು ಪೂಜೆಗಳು ಅವಿವೇಕ ಅನ್ನಿಸುತ್ತದೆ...ಯಾರನ್ನೋ ದ್ವೇಷಿಸೋದು,ಅವಮಾನಿಸೋದು, ಅಥವಾ ಯಾರೋ ಗೊತ್ತಿಲ್ಲದವರು ಅವಮಾನಿಸಿದ್ದಕ್ಕೆ ಕೊರಗೋದು ಯಾವುದು ಇರಲಾರದು....ಬದುಕು ಉತ್ಸವವಾಗುತ್ತೆ....ಅಲ್ವೇ?

4 comments:

 1. Loved the whole write up... prati manushyanoo preetige hambalistane.. anumanave illa.. hanchabekaste..

  ReplyDelete
  Replies
  1. ತುಂಬು ಹೃದಯದ ವಂದನೆಗಳು ಮತ್ತೆ ಬರುತ್ತಿರಿ ಇಲ್ಲಿಗೆ

   Delete
  2. This comment has been removed by the author.

   Delete
 2. ಅರ್ಥ ಮಾಡಿಕೊಳ್ಳದೆ ಹೊರ ಹೋದವರನ್ನ ಕಾಡಿಸುವುದು ಸಲ್ಲದು...arthapoornavaagide
  Baraha tumba ishta vaayithu madom

  ReplyDelete