ತುಣುಕು-೧
ಚಂದಿರ,ನಿನ್ನದು ಕಾಲಕ್ಕೊಂದು ಬಣ್ಣ,ವಸಂತನ ತೆಕ್ಕೆಯಲ್ಲಿ
ನಾನು ಅರಳಿದ ಹೂವು
ನಿನ್ನ ಬೆಳದಿಂಗಳ ಪ್ರೇಮದಲೆಗಳಲ್ಲಿ
ನಗ್ನಳಾಗಿ ನನ್ನ ಬಯಕೆಗಳ
ತೋಯಿಸಿಕೊಂಡೆ
ಶ್ರಾವಣದ ಕುಳಿರ್ಗಾಳಿ ನನ್ನ
ತಟ್ಟುವಾಗ ಮೋಡಗಳ ನಡುವೆ
ನನ್ನ ಭಾವಗಳ ನಡುವೆ
ನಿನ್ನ ಕಣ್ಣಮುಚ್ಚಾಲೆ
ಒದ್ದೆಯಾಯ್ತು ನನ್ನೆದೆಯ
ರಂಗಸ್ಥಳ
ಇಂದು...ಶಿಶಿರನಾಗಮನ..
ನಿನ್ನ ಬಯಸುವ ಬರೀ ಬರಡು
ಭೂಮಿ ನಾನು
ಅಲ್ಲಿ ನೂರು ತಾರೆಯರ ನಡುವೆ
ನಿನ್ನ ರಾಸಲೀಲೆಯ ದರ್ಬಾರು
ವಿರಹದಲ್ಲಿ ನಡುಗುವ ಭಾವಗಳ ಬಚ್ಚಿಟ್ಟು
ನಾನು ಬದುಕಲೂ ಆರೆ, ಚಂದಿರ ನೀನೇಕೆ ಭಾವ ಶೂನ್ಯ??
ತುಣುಕು-೨
ನನ್ನ ಮನಸಿನ ಸಾಗರದಲ್ಲಿ
ಉಕ್ಕೇರುವ ಅಲೆಗಳ
ನಡುವೆ ನಿನ್ನ ಕುಣಿತ..ತಕಧಿಮಿತ!!
ನೂರೊಂದು ರತ್ನಗಳ ಬಚ್ಚಿಟ್ಟೂ
ನಿನ್ನ ಒಲವಿಂದ ತಿರಸ್ಕೃತೆ
ನಾನು ನಿಜದಿ ರತ್ನಗರ್ಭೆ
ಹುಚ್ಚೇಳುವ ಭಾವಗಳ ಅಲೆ
ಕೇವಲ ನಿನಗಾಗಿ
ಅರಿತಿದ್ದೂ
ಕಾಯಿಸುವ ನನ್ನ ನೋಯಿಸುವ
ನಿನ್ನ ಪ್ರೀತಿ
ನನ್ನ ಒಡಲಲ್ಲಿ ತುಂಬಿದೆ
ವಿಷಾದದ ಹಾಲಾಹಲ
ಪ್ರಳಯವಾಗಲಿದೆ ಚಂದಿರ
ನಾ ಇಲ್ಲವಾದರೆ
ನಿನ್ನ ಇರುವಿಕೆಯ ಗತಿ ಏನು??
ತುಣುಕು-೩
ಎಲ್ಲಿ ಚಂದಿರ ಎಲ್ಲಿಯ ಭೂಮಿ
ಎಂದಿಗಾದರೂ ಮಿಲನ ಸಾಧ್ಯವೇ??
ಸೆಳೆತ ನಿರಂತರ
ಕಾಯುವಿಕೆಯೂ ನಿರಂತರ
ಎಷ್ಟು ಯುಗಗಳು ಉರುಳಿದವೋ
ಎಷ್ಟು ಸಾವಿರ ಋತುಗಳು ಆದವೋ
ತನ್ನವನೇ ಆದರು
ತಾರೆಗಳ ತೋಟ ಬಿಟ್ಟು ಬರದ ಚಂದಿರ
ತನ್ನೊಲವ ಒಳಗಿಟ್ಟ
ಜ್ವಾಲಮುಖಿ ಭೂಮಿ
ಎಂದಿಗಾದರೂ ಮಿಲನ ಸಾಧ್ಯವೇ??
ಕನಸಿಗೂ ವಾಸ್ತವಕ್ಕೂ ಇಹುದು
ಬಲು ಅಂತರ
ಅಂತೆಯೇ ಭೂಮಿ ಇಂದ
ದೂರ ದೂರ ನಿಜದಿ ಚಂದಿರ!!
ಂಊರು ತುಣುಕುಗಳಲ್ಲೂ ಭಾವ ತೀವ್ರತೆ ನನಗೆ ಮೊದಲು ಇಷ್ಟವಾಯಿತು.
ReplyDeleteಕವಿಯತ್ರಿಯ ಪ್ರಾಮಾಣಿಕ ಪ್ರಯತ್ನ.
"ಎಂದಿಗಾದರೂ ಮಿಲನ ಸಾಧ್ಯವೇ??" ಎಂಬ ನಿರೀಕ್ಷೆಯೇ ಬದುಕು.
oh ee blog nimmadena shammi gotte irlilla... tumba chennagi bariteeri
ReplyDelete