Friday, December 7, 2012

ಆ ಹುಡುಗಿ...

ಅವಳ ಕಣ್ಣುಗಳಲ್ಲಿ ನೀರಿನ ಪಸೆಯಿತ್ತು,ಆರದ ನೋವಿನ ಊಟೆ ಹೊತ್ತು ನಡೆಯಲಾಗದವಳಂತೆ ಬಗ್ಗಿ ನಡೆಯುತ್ತಿದ್ದಳು,ಆದರೂ ಆ ನಡಿಗೆಯಲ್ಲೊಂದು ಪ್ರಶಾಂತತೆಯಿತ್ತು,ಅವಸರದ ಸುಳಿವಿಲ್ಲದ ಬೇಸಿಗೆಯ ಗಾಳಿ ಆಕೆಗೇನೋ ಎಂಬಂತೆ ತೀರ ತಂಪಲ್ಲದೆ ಬೀಸುತ್ತಿತ್ತು,ಸುತ್ತ ಬೆಂಕಿ ಪೊಟ್ಟಣಗಳಂತೆ ಕಾಣುತ್ತಿರುವ ಸಾವಿರಾರು ಮನೆಗಳಿಂದ ಕೇಳುವ ಶಬ್ದ ಆಕೆಗೆ ಕೇಳಿಸುತ್ತಿಲ್ಲ, ಸುತ್ತ ನಿಂತು ಒಮ್ಮೆ ಸುಮ್ಮನೆ ಧೇನಿಸಿದಳು, ಆ ಮನೆಯ ಕಾಂಪೌಂಡಿನ ಸುತ್ತ ಇರುವ ವಸ್ತುಗಳ ಕಂಡು ಆಕೆಯ ಕಣ್ಣರಳಿತು,ಒಂದೊಂದಾಗಿ ಆರಿಸಿ ತನ್ನ ಪುಟ್ಟ ಕೈ ಚೀಲಕ್ಕೆ ತುಂಬಿದಳು, ಮುಂದೆ ಹೊರಟಾಕೆ ಮತ್ತೇನೋ ಹುಡುಕುವಂತೆ ಎರಡು ಹೆಜ್ಜೆ ಹಿಂದೆ ಬಂದಳು,ಆ ಮನೆಯ ಸೌಂದರ್ಯ ಆಕೆಯ ಮನ ಸೆಳೆಯಿತು,ಬಾಗಿಲಿನ ಹೊಸಾ ಚಿತ್ತಾರ ಕರೆಯಿತು, ಒಳಗೆ ಹೆಜ್ಜೆ ಇಡಬೇಕೆನ್ನುವಷ್ಟರಲ್ಲಿ ಮುದ್ದಾದ ಮಗು ಅವಳತ್ತಲೇ ನಡೆದು ಬಂತು. ಅದರ ಮುದ್ದು ಮೊಗ ಆಕೆ ಜಾಹೀರಾತಿನ ಪೋಸ್ಟರಿನಲ್ಲಿದ್ದ ಮುಖವನ್ನೇ ನೆನಪಿಗೆ ತಂತು.
ಹತ್ತಿರ ನಿಂತು ಕೈ ಚಾಚಿದಳು,

ಆ ಮಗು ಬಂತು,ಅಗೋ ಬಂದೇ ಬಿಟ್ಟಿತಲ್ಲ,

ಅರೆರೆ!! ಜೊತೆಗೆ ಅವರಮ್ಮನೂ, ಕೈಯಲ್ಲಿ ಮಲ್ಲಿಗೆಯ ಮಾಲೆ ಹಿಡಿದು!!

"ಮಗು ಯಾರಮ್ಮ ನೀನು?? ಇಲ್ಲೇನು ಮಾಡ್ತಾ ಇದ್ದೀಯಾ?"

ತಾನು ಯಾರು?,ನೆನಪಿಸಿಕೊಳ್ಳಲೆತ್ನಿಸಿದಳು, ಆಗಲಿಲ್ಲ, ಸುಮ್ಮನೆ ಕಾಲ್ಬೆರಳು ನೆಲ ಗೀರತೊಡಗಿತು,

"ಮಗೂ,ಊಟವಾಯ್ತೇ ನಿನ್ನದು??"

ಊಟ ,ಹಾಗೆಂದರೇನು?? ಹಾ!! ನೆನಪಾಯ್ತು,ಅಮ್ಮ ಹೇಳುತ್ತಿದ್ದಳಲ್ಲ,

"ಅಲ್ಲೆಲ್ಲೋ ಸುಂದರ ಜಗತ್ತೊಂದಿದೆಯಂತೆ,ಅಲ್ಲಿ ಗಂಜಿ ಬದಲು ಸುವಾಸನೆಯುಳ್ಳ ಅಕ್ಕಿಯೆಂಬ ವಸ್ತು ತಿನ್ನಲು ಸಿಗುತ್ತದಂತೆ!!ಇದು ಅದೇ",
ಪಸೆಯಿದ್ದ ಕಂಗಳಲ್ಲಿ ದೀಪವೊಂದು ಬೆಳಗಿತು,

"ಬಾ,ಮಗೂ,ನಮ್ಮ ಪುಟ್ಟನ ಹುಟ್ಟಿದ ದಿನ ಇವತ್ತು"

ಇವಳು ಅರ್ಥವಾಗದೆ ಸುಮ್ಮನೆ ನಿಂತೇ ಇದ್ದಳು,ಆದರೆ ಎಲ್ಲಿಂದಲೋ ಎರಡು ಕೈಗಳು ಬಂದು ಒಳಗೆಳೆದುಕೊಂಡವು, ಮತ್ಯಾವುದೋ ಎರಡು ಕೈಗಳು ಆಕೆಗೆ ಬಡಿಸಿದವು,ಹೆಸರೇ ಗೊತ್ತಿಲ್ಲದ ಅನೇಕ ವಸ್ತುಗಳು ಎಲೆಯ ಮೇಲೆ ಬಂದು ಬೀಳುತ್ತಿದ್ದರೆ ಆಕೆ ಕುಳಿತೇ ಇದ್ದಳು ನಿಶ್ಚಲವಾಗಿ,

"ಕ್ಲಿಕ್" ದೊಡ್ಡದಾದ ಬೆಳಕೊಂದು ಬಂದಂತಾಯಿತು, ಬೇರೆಯದೇ ಜಗತ್ತಿನಲ್ಲಿ ವಿಹರಿಸುತ್ತಿದ್ದ ಆಕೆ ವಾಸ್ತವಕ್ಕಿಳಿದಳು,

ಆದಷ್ಟು ಜಾಸ್ತಿ ತಿನ್ನಲೆತ್ನಿದಳು,ಆಗದೇ ಎಲೆಯ ಬಿಟ್ಟು ಏಳುವಾಗ ಕಂಗಳು ತುಂಬಿ ಬಂದವು, ಮತ್ತದೇ ಸ್ವರ ಕೇಳಿತು,

"ಮಗೂ ನಿನ್ನಮ್ಮ ಅಪ್ಪ ಎಲ್ಲಿ?"

"ಅಮ್ಮ ಮೇಲೆ ಇದಾರೆ,ಮತ್ತೆ ಅಪ್ಪ ಗೊತ್ತಿಲ್ಲ"

"ಈ ಪುಟ್ಟನ ಜೊತೆ ಇರ್ತೀಯಾ?"

ಆಕೆ ಹೇಳಲೋ ಬೇಡವೋ ಎಂಬಂತೆ ಸಣ್ಣಗೆ "ಹುಂ" ಎಂದದ್ದೇ ಮುಂದೆ ನಡೆದದ್ದೆಲ್ಲಾ ಕನಸು!! ಅಮ್ಮ ಹೇಳುತ್ತಿದ್ದ "ಸ್ವರ್ಗ"ವೆಂದರೆ ಇದು,ಆ ಹೆಂಗಸೇ "ಕಿನ್ನರಿ" ಅಂದುಕೊಂಡ ಆ ಎಳಸು ಕಂಗಳಿಗೆ ದಣಿವಾಗುತ್ತಲೇ ನಿದ್ರೆ ಆವರಿಸಿತ್ತು.

"ಯೋಯ್, ಯಾರಮ್ಮಾ ಅದು,ಎಲ್ಲಿಂದ ಬಂದು ಸಾಯ್ತಾವೋ ನಮ್ ತಲೇ ತಿನ್ನಕ್ಕೆ, ಒಯ್ ರಂಗಾ ಯಾವುದೋ ಚಿಂದಿ ಹುಡುಗಿ ಇಲ್ಲೇ ಬಿದ್ಬಿಟ್ಟಿದೆ,ಗಾಡಿ ತೆಗೆಯಕ್ಕೆ ಆಗ್ತಾ ಇಲ್ಲ,ನೀನೆಲ್ಲೊ ಹೋಗಿದ್ದೆ ಸಾಯಕ್ಕೆ?" ಗಡಸು ದ್ವನಿ ಕಿರುಚಿತು,

"ಸಾರ್, ಬಂದೇ, ಇವತ್ತು ಬೆಳಗಿನ ಜಾವ ಬಂದಿರ್ಬೇಕೇನೋ, ಅರೆರೆ!!ಅಯ್ಯೋ ಸಾರ್ ಜೀವ ಹೋಗ್ಬಿಟ್ಟಿದೆ!!ಯೇನ್ ಮಾಡೋದು ??"

"ನಗರ ಪಾಲಿಕೆ ವ್ಯಾನ್ಗೆ ಫೋನ್ ಮಾಡು ಭೇವ್ಕೂಫ!! ಅದನ್ನ ಎಳದು ಆ ಕಡೆ ಹಾಕು,ಇಲ್ಲೇ ಬಿದ್ದಿದ್ರೆ ಮೀಡಿಯಾದೋರು ದೊಡ್ಡ ಹಗರಣ ಮಾಡ್ತಾರೆ"

"ಸರಿ ಸಾರ್,"

ಮರುದಿನದ ಪತ್ರಿಕೆಯಲ್ಲಿ ಸಣ್ಣದಾಗಿ ಕ್ರೈಮ್ ವಿಭಾಗದಲ್ಲಿ ಸುದ್ದಿಯೊಂದು ಪ್ರಕಟವಾಗಿತ್ತು

"ಎಂಟು ವರ್ಷದ ಚಿಂದಿ ಆಯುವ ಬಾಲಕಿಯ ಶವ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳ ಮನೆಯ ಎದುರು ರೋಡಿನಲ್ಲಿ ಪತ್ತೆಯಾಗಿದ್ದು, ಮಾನ್ಯ ಮಂತ್ರಿಗಳು ಆಕೆಯ ತಂದೆ ತಾಯಿಗಳಿಗೆ ಐವತ್ತು ಸಾವಿರದ ಪರಿಹಾರ ಪ್ರಕಟಿಸಿದ್ದಾರೆ".

ಮಲ್ಲಿಗೆಯೊಂದು ಅರಳುವ ಮೊದಲೇ ಹಸಿವಿಂದ ಬಾಡಿ ಹೋದದ್ದು ಯಾರಗಮನಕ್ಕೂ ಬರಲೇ ಇಲ್ಲ!!

3 comments:

 1. ಅತ್ಯಂತ ಮನ ಮಿಡಿಯುವ ಬರಹ ಇದು.

  ಸಮಾಜದ ಓರೆ ಕೋರೆಗಳ ನೈಜತೆಯ ಪ್ರತಿಬಿಂಬ.

  ReplyDelete
 2. ಹುಫ್ಹ್ಹ್ಹ್ ಶಮ್ಮಿ ಎಂಥಾ ಕಥೆ ಬರೆದಿದ್ದೀರಿ... ಬಡತನ ಬೇಗೆಯಲ್ಲಿ ಬೇಯುವವರ ಸ್ಥಿತಿ ಇದೇ. ಚೆನ್ನಾಗಿದೆ ನಿರೂಪಣೆ

  ReplyDelete
 3. chennaagide baredi rIti....magu beLeyuva munnavE sattiddu besara tarisitu.... antya nOvu tantu...

  ReplyDelete