Thursday, February 14, 2013

ಹಾಲುಂಡ ತವರೀಗೆ..

ಹೆಣ್ಣಿನ ತವರಾಸೆ ಹೊಸದಲ್ಲ..ಹಳತೂ ಆಗದ ಭಾವ ಬಂಧ ಅದು...ಬೇರು ಬಿಟ್ಟ ಗಿಡ ಮರವಾಗುವ ಹೊತ್ತಿಗೆ..ಹೊರ ಜಗತ್ತಿಗೆ ತನ್ನ ವಿಸ್ತಾರ ನೆರಳನ್ನು ಚಾಚಿ ಅಶ್ರಯದಾತಳಾಗುವ ಹೊತ್ತಿಗೆ ಆ ಬೇರು ಆಳಕ್ಕಿಳಿದಿರುತ್ತದೆ..ಯಾವ ಕೊಡಲಿಗೂ ಸಿಲುಕದ ಬೇರು..ತನ್ನ ಕಷ್ಟಗಳ ಕಾಲದಲ್ಲಿ ತಾಯೊಡಲು ಭೂಮಿಯ ಎದೆಯ ಒರತೆ ಎತ್ತಿ ತನ್ನ ಪೋಷಿಸಿಕೊಳ್ಳು ವೃಕ್ಷದಂತೆ ಹೆಣ್ಣೂ ಕೂಡ..ತನ್ನ ಬೆಳೆಸಿದ ತಂದೆ ತಾಯಿ..ಎತ್ತಿ ಆಡಿಸಿದ ಊರ ಜನ..ತುಂಟತನದ ಬಾಲ್ಯಕ್ಕೆ..ಹುಡುಗುತನದ ಕಿಶೋರತ್ವಕ್ಕೆ, ಕನಸು ತುಂಬಿದ ಬಣ್ಣಗಳ ಸರದಿ ಯೌವನಕ್ಕೆ ಆಶ್ರಯದಾತ ಪರಿಸರವನ್ನು  ಎಂದೂ ಮರೆಯಲಾರಳು...
ನನ್ನ ತವರೂರನ್ನ ನಾನು ತವರು ಅಂದುಕೊಂಡಿಲ್ಲ...ಅದು ನನ್ನೂರು ಅಷ್ಟೆ!!ಮರಗಿಡಗಳ ನಡುವಿನ ಕತ್ತಲು ಬೆಳಕಿನಾಟ..ಬೇಕೆಂದಾಗಲೆಲ್ಲಾ ತಂಪು ಸೋಕುವ ಗಾಳಿರಾಯ..ಆಲದ ಮರದ ಬಿಳಲುಗಳಂತೆ ಅಮ್ಮನ ತೋಳ್ತೆಕ್ಕೆಗೆ ಬಿದ್ದ ಮಕ್ಕಳ ಪ್ರೀತಿ..ಹಾವಿನಂತೆ ಬಿದ್ದ ಹಾದಿಯ ನಡುವಿನ ತಿರುವುಗಳಲ್ಲಿ ಕಾಣ ಸಿಗುವ ಪರಿಚಿತ ನಗು ಮುಖಗಳು..ತಮ್ಮ ಮನೆ ಮಗಳು ಬಂದಂತೆ ಮಾತಾಡಿಸುವ ದನಿಯ ಆತ್ಮೀಯತೆ..ನನ್ನೂರ ಹಾದಿಯೇ ಒಂದು ಸದಾ ಹೊಸ ಅನುಭವ...ಹಾಸಿದ ಎಲೆ ರಾಶಿಯ ಮೇಲೆ ಹೆಜ್ಜೆ ಇಟ್ಟ ಕಡೆಯಲ್ಲ ನೆನಪುಗಳ ಚಲನ ಚಿತ್ರ...

ಮನಸ್ಸು ಈಗಿಗ ಹೋಲಿಕೆಯನ್ನ ಕಲಿತಿದೆ...ಹಕ್ಕಿಗಳ ಕಲರವದ ಇಂಪು ಹೊತ್ತ ಅಲ್ಲಿನ ಮುಂಜಾವಿನಲ್ಲಿ ಮೊದಲಿನ ಸ್ನಿಗ್ಧತೆ ಇಲ್ಲದಿದ್ದರೂ ಆ ತೆಳುವಾದ ನಶೆ ಕಮ್ಮಿಯಾಗಿಲ್ಲ..ಬದುಕ ಕಟ್ಟಿದ ಮನೆ ...ನನ್ನಲ್ಲಿ ಅನವರತ  ಛಲ ತುಂಬಿ ಗಟ್ಟಿಗಿತ್ತಿಯನ್ನಾಗಿಸಿದ ಅಪ್ಪ ಅಮ್ಮನ ಪ್ರೇಮಧಾರೆ..ದೈವಸ್ಥಾನ  ಅದೋ ನನ್ನ ಮನೆ...ನೀವಿಲ್ಲಿ ಕಾಣದ ಅದೆಷ್ಟೊ ಘಟಿಸಿದ ಘಟನೆಗಳಿವೆ..ಬಾಯೊಂದು ಇದ್ದಿದ್ದರೆ  ಮನೆಯ ಗೋಡೆ ಗೋಡೆಗಳೂ ಕಥಿಸುತ್ತಿದ್ದವು ನನ್ನ ಕಥೆಯನ್ನ..

ಬದುಕಿನ ಬೆನ್ನು ಹತ್ತಿ..ಮನಮೆಚ್ಚಿದವನೊಡನೆ..ಈ ಮಹಾನಗರದಲ್ಲಿ ಬದುಕು ಕಟ್ಟಿಕೊಂಡ ನನಗೆ ಒಮ್ಮೊಮ್ಮೆ ಅನಿಸುವುದು
ಅಲ್ಲಿನ ನೀರಿನಂತೆ ಇಲ್ಲಿನ ನೀರು ರುಚಿ ಕಟ್ಟಲಾರದು...ಅಲ್ಲಿನ ನೆಮ್ಮದಿಭರಿತ ಗಾಢ ನಿದ್ದೆ,ಸುಖಭರಿತ ಸಂಜೆಗಳು ಇಲ್ಲಿ ಯಾವತ್ತೋ ಕಾಣೆಯಾಗಿವೆ..ತಿರುಗಿದಷ್ಟು ನೆನಪುಗಳು..ಪರಿಚಿತ ವ್ಯಕ್ತಿಗಳು..ನನ್ನ ಬಾಳ ಕಾದಂಬರಿಯ ನೂರೊಂದು ಪಾತ್ರಗಳು..ದುಖ:ದ  ಕ್ಷಣಗಳಲ್ಲಿ ಈಗಲು ಮನಸು ಅಮ್ಮನ ಮಡಿಲಿನ ಮಗುವಾಗ ಬಯಸುತ್ತದೆ....ಅಮ್ಮನ ನೆನೆದು ಶಾಂತತೆಯೊಂದು ಮನದಲ್ಲಿ ತುಂಬುತ್ತದೆ..ಅವಸರದಿಂದ ದೀಪ ಹಚ್ಚುವಾಗ ಅದರ ಮಂದ ಬೆಳಕಿನಲ್ಲಿ ಅಪ್ಪ ಅಮ್ಮನ ಮುಖ ಕಾಣುತ್ತೇನೆ..ದೂರವಾಣಿಯಲ್ಲಿ ಅವರ ಮಾತು ಆಲಿಸುವಾಗ ಮನಸ್ಸು ಅದರದೇ ವೇಗದಲ್ಲಿ ನನ್ನೂರು ತಲುಪಿರುತ್ತದೆ..
ವಾಹನಗಳ ಭರಾಟೆಯಲ್ಲಿ ನನ್ನ ಧ್ವನಿ ಕಳೆದು ಹೋದಾಗ ಅಂತರಾತ್ಮದ ಯಾವುದೋ ಮೂಲೆಯಲ್ಲಿ ಅಪ್ಪನ ದನಿ..ಅಮ್ಮನ ಸಾಂತ್ವನ..ಬೀಡಾಡಿ ದನಗಳ ಪ್ಲಾಸ್ಟಿಕ್ ತಿಂದು ಹೊಟ್ಟೆ ತುಂಬಿಸಿಕೊಳ್ಳುವಾಗ " ರಜನಿ, ಗಂಗೆ" ಯರ ನೆನಪು ಗಾಢವಾಗಿ ಕಾಡುತ್ತದೆ..


ಎಂಥಾ ದಿನಗಳವು..ಎಲ್ಲಿ ಮರೆಯಾದವು??

ಮಾಯಾ ಪೆಟ್ಟಿಗೆಯ ಮುಂದೆ ಕುಳಿತ ಗಂಡ ಮಗ ನನ್ನ ಇರುವನ್ನೇ ಮರೆತು ಕಾಲ್ಪನಿಕ ಲೋಕದಲ್ಲಿ ಮುಳುಗುವಾಗ ನನ್ನೆದುರು ಕಳೆದ ಗತಕಾಲದ ಸಂಜೆಗಳು ಬಿಚ್ಚಿಕೊಳ್ಳುತ್ತವೆ. ಮನೆ ಮುಂದಿನ ಕಟ್ಟೆಯಲ್ಲಿ ಕುಳಿತು ಊರವರ ಕತೆ ಕೇಳುತ್ತಿದ್ದ ದಿನಗಳು..ಸಂಜೆ ಆಗುತ್ತಿದ್ದಂತೆ ಭಾರತ ವಾಚನ ಮಾಡುತ್ತಿದ್ದ ಅಪ್ಪನ ರಾಗ ಭರಿತ ದನಿ...ಅದೆಷ್ಟುಬಾರಿ ನಾನು ದ್ರೌಪದಿಯಂತೆ ಸುಂದರಿಯೇ?? ಎಂದು ಕನ್ನಡಿ ನೋಡಿಕೊಂಡಿಲ್ಲ..ಅಮೇಲಾಮೇಲೆ ಆಕೆಯ ಬದುಕು ನನಗೆ ಬೇಡ ಅನ್ನಿಸಿದ್ದು ಅದೆಷ್ಟು ಸಲ..ಅಪ್ಪನ ವಾಚನವೇ ಹಾಗೆ..ಪಾತ್ರಗಳಿಗೆ ಜೀವ ತುಂಬಿ ಕಣ್ಣೆದುರು ನಿಲ್ಲಿಸುತ್ತಿತ್ತು..ಕಳೆದು ಹೋಗುತ್ತಿದ್ದ ದಿನಗಳಲ್ಲಿ ಸೊರಬದ ಗಂಧದ ಅಗರಬತ್ತಿಯ ಸುವಾಸನೆ ಇತ್ತಲ್ಲ.....

ಎಂಥಾ ಹದವಿತ್ತೆ ಗೆಳತಿ..ಹರೆಯಕೆ ಏನು ಮುದವಿತ್ತೇ??

ಗೆಳೆತನಗಳಲ್ಲಿದ್ದದ್ದು ಗುಬ್ಬಿ ಎಂಜಲಿನ ಸವಿ..ನೆಲ್ಲಿಕಾಯಿಯ ಒಗರು..ಬುಕ್ಕಿ ಹಣ್ಣಿನ ಸ್ವಾದ...ಮುಳುಗುತ್ತಿದ್ದ ಸೂರ್ಯನ ಹಿಂದೆಯೇ ಹೊತ್ತಿದ ಸೀಮೆ ಎಣ್ಣೆ ಬುರುಡಿಯ ದೀಪದ ಮಂದ ಬೆಳಕು..ಕಟು ವಾಸನೆ..ಬಗ್ಗಿ ಓದುವಾಗ ಸುಟ್ಟ ಕೂದಲಿನ ಕೆಟ್ಟ ವಾಸನೆ.. ಬೆಳಕು ಮಂದವಿತ್ತು ನಿಜ..ಆದರೆ ಮಾತು ಕತೆಗಳು ನೇರ ಇರಾದೆಗಳು ನೇರ..ಅಪ್ಪನಂತೆ.. ವಿದ್ಯುತ್ತಿನ ಹಾಲು ಬೆಳಕಿನಲ್ಲಿ ಇಂದು ಮನಸುಗಳು ಮಬ್ಬಾದಂತೆ ಅನ್ನಿಸುವಾಗ..ಗೆಳೆತನಗಳು ಸ್ವಾರ್ಥಪೂರಿತ ಅನ್ನಿಸಿದಾಗ..ನಮ್ಮ ಮನೆಯ ಸೀಮೆ ಬುಡ್ಡಿಯ ಬೆಳಕೇ ಶ್ರೇಷ್ಠ ಅನ್ನಿಸಿ ಬಿಡುತ್ತದೆ...ಜಾತಿ-ಮತಗಳ ಮೀರಿತ ಮಾನವ ಧರ್ಮವ ಕಲಿತದ್ದು ಅಲ್ಲಿಯೇ!!

ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ..ಕೈ ಹಿಡಿದು ನಡೆಸೆನ್ನನೂ...

ಗೋಡೆಯ ಮೇಲಿನ ಹಸೆ ಚಿತ್ತಾರದಂತೆ ನನ್ನ ಮಾನಸಲೋಕದ ತುಂಬೆಲ್ಲಾ ರಂಗು ತುಂಬಿದ ನನ್ನ ಮನೆ ಮತ್ತುಊರು ನನ್ನೊಳಗೆ ಅಚ್ಚಾಗಿರುತ್ತದೆ..ನನ್ನ ಕಷ್ಟಗಳ ನಡುವೆ ನನಗೆ ಊರುಗೊಲಾಗಿ..ಗೆಳೆಯನಾಗಿ..ತನ್ನ ಇರುವಿಕೆ ಇಂದಲೇ ಸಂತೈಸುತ್ತದೆ....ಹೇಳಿ ತವರೆಂದು ಕರೆದು ನನ್ನೂರ ನಾನಷ್ಟಕ್ಕೆ ಸೀಮಿತ ಮಾಡಬಹುದೇ.....ಬೇರಿಂದ ಮರವ ದೂರ ಮಾಡಬಹುದೇ??

4 comments:

 1. ಹುಟ್ಟಿದ ಊರು...ಬಾಲ್ಯವನ್ನು ಬಾಲ್ಯದ ರೀತಿಯಲ್ಲಿಯೇ ಕಳೆದ ತಾಣ...ಎಷ್ಟು ಸುಂದರ...ಆ ನೆನಪುಗಳನ್ನ ತಾಜಾ ಮಾಡಿಕೊಡುವ ಇಂತಹ ಲೇಖನ ಸುಮಧುರ ಭಾವವನ್ನು ಬಡಿಸುತ್ತದೆ..ಸುಂದರ ಲೇಖನ..ತುಂಬಾ ಮನಸ್ಸಿಗೆ ಇಷ್ಟವಾದ ಲೇಖನ..ಅಭಿನಂದನೆಗಳು ಮೇಡಂ

  ReplyDelete
  Replies
  1. Tumbaa dhanyavaada...heege erali bimma protsaaha...

   Delete
 2. ಬಾಲ್ಯ, ಹುಟ್ಟೂರು ಮತ್ತು ಸವಿ ನೆನಪುಗಳು ಮಾಸದ ಇತಿಹಾಸ ನಮ್ಮೆಲ್ಲರ ಸ್ಮೃತಿಪಟಲದಲ್ಲಿ. ಸುಂದರ ನೆನಪುಗಳನ್ನು ಅಂದವಾಗಿ ಹಂಚಿಕೊಂಡಿದ್ದೀರಿ ಶಮ್ಮಿ..ಅಭಿನಂದನೆಗಳು.

  ReplyDelete
 3. ಇದು ಮಹಿಯವರ ಅತ್ಯುತ್ತಮ ಲೇಖನ.

  ಬಾಲ್ಯವನ್ನೂ ಪರಿಸರವನ್ನೂ ಅಮೋಘವಾಗಿ ಕಟ್ಟಿಕೊಟ್ಟಿದ್ದಾರೆ.

  ReplyDelete