Sunday, February 24, 2013

"ಅವನು" ಎಂಬ ಕಾಣದ ಮಾಯೆ....

ಸುಳಿಯದಿರು ಮುಂದೆಂದೂ ನನ್ನ ಕಣ್ಣ ಮುಂದೆ..
ಓಡುವುದು ಮನಸು ಮತ್ತೆ ಗತಕಾಲ ಹಿಂದೆ!!

ನಿನ್ನ  ನೋಡಬಾರದಿತ್ತು..ಅದೂ ಇಷ್ಟು ವರುಷಗಳ ನಂತರ...ನೋಡಿದರೂ ನೀ ನನ್ನ ಮಾತಾಡಿಸಬಾರದಿತ್ತು..
ನಿನ್ನ ನನ್ನೆದೆಯ ಸಾಗರದ ಒಳಸುಳಿಯಾಗಿ ಬಚ್ಚಿಟ್ಟಿರುವೆ...ಅದ ಕೆಣಕುವ ನಿನ್ನ ಸಾಹಸಕ್ಕೆ ನಾ ಏನ ಹೇಳಲಿ??
ನನಗೆ ಸಂತಸವಾಯ್ತು..ನಿನ್ನ ಸಂಸಾರ ಸಮೇತ ಸಂತಸವಾಗಿ ನೋಡಿ..
"ಆರು ವರ್ಷಗಳ ಕಾಲ ಆರದ ಪ್ರೇಮದ ದೀಪವ ಕಣ್ಣಕುಡಿಯಂತೆ ಸಲಹಿದ್ದೆವು..ಯಾಕೆ ನನ್ನ ದೂರ ಮಾಡಿದೆ?? "
ಹೇಳು ಈಗ್ಯಾಕೆ ಬೇಕಿತ್ತು ಈ ಪ್ರಶ್ನೆ??
ನಿನ್ನಂತೆ ನನ್ನೊಳಗು ಒಂದು ಆರದ ದೀಪವಿತ್ತು..ಕಾಪಿಡುವ ಬಯಕೆಯೂ ಇತ್ತು..

ನೀನೆ ಹೇಳುತ್ತಿದ್ದ ಮಾತು ನೆನಪಿದೆಯಾ?? ನಾನೊಂದು ಸ್ವತಂತ್ರ ಹಕ್ಕಿ ಅಂತ..

ಬಾನಿನಲ್ಲಿ ಚುಕ್ಕಿಯಾಗಿ
ಹಾರುವ ನಿನಗೇಕೆ
ಬಂತು ಮೌನ?
ಮೌನದ ಮಾತಿನೆಲ್ಲೆಯ ಮೀರಿ
ದೂರದ ತೀರದಲ್ಲಿ
ಬರೀ ಖಾಲಿ ದೊಡ್ಡ ಶೂನ್ಯ !!
ನೀ ಅಲ್ಲೆ ನಿನ್ನ ಬಯಕೆಗಳ
ಮೊಟ್ಟೆ ಇಡ್ತಿಯಂತಲ್ಲ
ಹೋಮಾ??*
ನೀನಿವತ್ತು ಇಟ್ಟದ್ದು ನಿನ್ನ ಮೊಟ್ಟೆಯೋ
ನನ್ನ ಬರಡು ಬಯಕೆಗಳೋ??

ನೀನು ಗರುಡದ ಗೂಡು ನೋಡಿದ್ದೀಯಾ?? ನೋಡಿಲ್ಲ ಅಲ್ವಾ??ಅದು ಕಾಣೋದು ಅಪರೂಪ ಅಂತೆ..

 ನಾ ಯಾವತ್ತು ನಿನ್ನ ಬದಲಿಸ ಯತ್ನಿಸಿರಲಿಲ್ಲ...ಕಾರಣ ಇಷ್ಟೇ..ನಂಗೆ ನನ್ನ ತರ ನಾನು, ಅವನ ತರ ಅವನೇ ಇರೋ ಅಂತವ ಬೇಕಿತ್ತು..
ಹಾಗಂತ ನಾ ನಿನ್ನ ಪ್ರೀತಿಸಲಿಲ್ಲ ಅಂದುಕೋ ಬೇಡ..
ಮೊದಲ ಪ್ರೇಮ ಒಂದು ಅದ್ಭುತ..ಅದೂ ನಮ್ಮ ಪತ್ರಗಳಲ್ಲಿ ಬರೆದ ಪ್ರೇಮ ಕಾವ್ಯ..ನಿಜಕ್ಕು ಒಬ್ಬ ಹುಡುಗ ಹುಡುಗಿ ಪತ್ರಗಳಲ್ಲೇ ಪ್ರೀತಿಸಿದ್ರಾ?? ಅಂತ ಈಗ ಅಷ್ಟು ಆಶ್ಚರ್ಯ ನಂಗೇ!!

ಪ್ರೇಮಪತ್ರಗಳಲ್ಲಿ ನಾ ನಿನ್ನ
ನೀ ನನ್ನ  ಹುಡುಕಿದೆವು
ಸಿಗದ ಅದೃಷ್ಟದ ಚಿಂತಾಮಣಿಗಾಗಿ
ಮಿಡುಕಿದೆವು..!!!

ನಿನ್ನ ಬಿಟ್ಟು ಈ ಊರಿಗೆ ಬರೋ ಸಾಹಸ ನಂಗೆ ಬೇಕಿರಲಿಲ್ಲ ಕಣೋ...ಶಿವಮೊಗ್ಗದಲ್ಲಿಯೆ ಹಾಯಾಗಿ ಏನೋ ಮಾಡ್ಕೊಂಡು ಇಬ್ರೂ ಇದ್ಬಿಡಬಹುದಿತ್ತು..ಆದ್ರೆ ನಾ ಓದಿದ ಓದು ನನ್ನ ಪುತ್ತೂರಿನ ಯಾವ್ದೋ ಮೂಲೆಗೆ ಸೇರಿಸ್ತು..ಮೊದಲೇ ಪತ್ರಗಳಲ್ಲಿ ಬೆಳೆದ ಪ್ರೇಮ..ಮೊದಲು ವಾರಕ್ಕೆಒಂದಿತ್ತು..ಅಮೇಲೆ ತಿಂಗಳಿಗೆ ಒಂದಾಯ್ತು..ಮನಸಿನ ಮಾತುಗಳು ಬಂದಾಯ್ತು..

ನಂಗೆ ಗೊತ್ತು..ನಿನ್ನ ಮನಸಲ್ಲಿ ನೀನು ಕಮ್ಮಿ ಓದಿದವ ಅನ್ನೋ ಭಾವನೆ ಯಾವತ್ತೂ ಇತ್ತು..ಬೆಂಗಳೂರಿಗೆ ಕಾಲಿಟ್ಟ ಮೇಲೂ ನಿನ್ನ ಅದೆಷ್ಟು ಬಾರಿ ಮಾತಡಿಸಲು ಯತ್ನಿಸಿದೆ..ಮನೆಯ ಮೊದಲ ಮಗನಾಗಿ ನಿನಗಿದ್ದ ಜವಾಬ್ದಾರಿಗಳು ನನ್ನ ಮೂಕಿ ಮಾಡಿದವು..ನಿನ್ನ ಹೆತ್ತ ತಾಯಿಯಿಂದ ನಿನ್ನ ದೂರ ಮಾಡಿ ಆಕೆ ಮಗನಿಗಾಗಿ ಕಟ್ಟಿದ್ದ ಕನಸುಗಳನ್ನ ಚೂರು ಮಾಡಿ ನಿನ್ನ ಓಡಿಸಿಕೊಂಡು ಬರುವ ಉಪಾಯ ನಂಗೆ ಇಷ್ಟ ಆಗಲಿಲ್ಲ..ಎಷ್ಟೋ ಸಾರಿ ಅನ್ನಿಸಿದ್ದುಂಟು..ನಾನೇ ಹುಡುಗ ನೀನೇ ಹುಡುಗಿ ಆಗಿರ್ಬೇಕಿತ್ತು ಅಂತ..
ನನ್ನ ಆಸೆಗಳ ಹಕ್ಕಿ ಜೀವನದ ಕಹಿಸತ್ಯಗಳ ಕತ್ತಲಲ್ಲಿ ರೆಕ್ಕೆ ಮುರ್ಕೊಂಡು ಬಿತ್ತು..ನಂಗೆ ಊರಲ್ಲೆಲ್ಲ ಕೆಟ್ಟ ಹೆಸರೂ ಬಂತು..ಆದರೆ ನಿಂಗೊತ್ತಾ..ನಾನೆಷ್ಟು ಮಾತ್ರೆ ನುಂಗಿದೆ ಎರಡು ವರುಷ ಅಂತಾ?? ಹೋಗಲಿ ಬಿಡು..ನಂಗೆ ಗುಂಡಿಗೆ ಗಟ್ಟಿ ಮಾಡಿದ್ದೇ ನೀನಿತ್ತ ವಿರಹ..ಅಥವಾ ನಾನೇ ತಂದು ಕೊಂಡ ವಿರಹ..
ಈಗ ಕಾವೇರಿ ತುಂಗೇಲಿ ಸಾಕಷ್ಟು ನೀರು ಹರಿದು ಹೋಗಿದೆ..ನಾನು ನೀನು ಜೊತೆಯಾಗಿ ಕಳೆದ ಮಳೆಗಾಲದಲ್ಲಿ ಚಿಗುರು ಒಡೆದ ಪುಟ್ಟ ಸಸಿಗಳು ಯೌವನಕ್ಕೆ ಕಾಲಿಟ್ಟಿವೆ..ನಾವಿಬ್ಬರೂ ಕೈ ಹಿಡಿದು ನಡೆದ ದಾರಿಗಳಲ್ಲಿ ಮರಗಳನ್ನ ಕಡಿದು ಅರಣ್ಯ ಇಲಾಖೆಯವರ ಅಕೇಶಿಯಾ ಗಿಡ ನೆಡಲಾಗಿದೆ..
ಆದರೂ..
ಈಗಲೂ ಬೇಜಾರದ್ರೆ ಮೊದಲು ನೆನಪಾಗೋದೆ ನೀನು..ಕಟ್ಟಿ ಕೊಂಡವ ಬಾಯಿಗೆ ಬಂದದ್ದೆಲ್ಲಾ ಬೈಯ್ತಾ ಇದ್ರೆ..ನಂಗೆ ಅನ್ನಿಸ್ತಿರುತ್ತೆ.."ಇದು ನಿನ್ನ ಶಾಪದ ಫಲವಾ" ಅಂತ..ನಂಗೆ ಈಗೊಂದು ಸತ್ಯದ ಮಹಾ ದರ್ಶನ ಆಗಿದೆ  ಮಾರಾಯ..ಜೀವನದಲ್ಲಿ ಸುಖ ಅನ್ನೋದು ಒಗ್ಗರಣೆ ತರ..ಬಾಕೀದೆಲ್ಲ ಸರಿಯಾಗಿದ್ರೂ ಅದು ಬೀಳದೆ ಇದ್ರೆ ಅಡಿಗೆ ರುಚಿಯಾಗಲ್ಲ..ಹಾಗಂತ ದಿನಾ ಒಗ್ಗರಣೆ ಹಾಕೋದು ಈ ತುಟ್ಟಿ ಕಾಲದಲ್ಲಿ ಬಲು ಕಷ್ಟ..

ನೀ ಹಾಡ್ತಾ ಇದ್ದ ಹಾಡು ನೆನಪಾಗ್ತಿದೆ ಕಣೋ..(ತುಂಬಾ ನೆನಪಾದಾಗಲೆಲ್ಲಾ ಇದೇ ಹಾಡೋದು ನಾನು)

ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ....

 ನಿನಗಾಗಿ ಬರೆದ ಕವನವೊಂದು..ಒಪ್ಪಿಸಿಕೋ..ಕಣ್ಣ ಹನಿಗಳೊಂದಿಗೆ(ಸಧ್ಯಕ್ಕೆ ಅದೊಂದೇ ನಂದು ಅಂತ ಉಳಿದಿರೋದು!!)

ಕತ್ತಲ ಬದುಕಲ್ಲಿ ಬೆಳಕ ತರಬಲ್ಲ ಕಾಲ
ಭವಿಷ್ಯತ್ತಿನ ಎಲ್ಲ ಕನಸ
ಒಂದೇ ಕ್ಷಣದಲ್ಲಿ ಬೂದಿ ಮಾಡುವ
ವರ್ತಮಾನದ ಸಿಕ್ಕುಗಳ ನಡುವೆ
ನಿನ್ನನ್ನೆಲ್ಲೋ ಕಳಕೊಂಡಿದ್ದೇನೆ...

ಉಕ್ಕಿ ಬರುವ ಸಮುದ್ರದ ಅಲೆಗಳಿಗೀಗ
ಮೊದಲಿನ ಬಿರುಸಿಲ್ಲ...
ಹುಣ್ಣಿಮೆಯ ಬೆಳಕಲ್ಲಿ
ಈಗ ಕೇವಲ ವಿಷಾದ...
ನನ್ನ ಬದುಕಿನ ಪುಟಗಳಲ್ಲೀಗ
ಬರೇ ಹೇಮಂತ,

ಬಾಳು ಬೆಂಗಾಡಾಗಿ
ಮುರಿದ ಕಿಟಕಿ
ಗೆದ್ದಲು ತಿಂದ ಬಾಗಿಲು
ನಿಧಾನವಾಗಿ ಆಶಾಸೌಧಗಳ
ಅಂತ

ಕತ್ತಲಕೋಣೆಯಲಿ ಕಾಣುತಿರುವೆ
ಬೆಳಕಿನ ಕನಸು..
ಯಾವುದಾದರೂರಾಜಕುಮಾರ
ಬೆಳಕ ದೀವಿಗೆ ತಂದಾನು
ಎಂದು ಅನಂತದೆಡೆಗೆ
ನೆಟ್ಟ ಕಣ್ಣುಗಳಲ್ಲಿ
ಕೇವಲ ನಿನ್ನ ನಿರೀಕ್ಷೆ..

(ವಿ.ಸೂ:ಹೋಮಾ-ರೋಮನ್ನರ ಪುರಾಣಗಳಲ್ಲಿ ಬರುವ ಪಕ್ಷಿ..ಇದು ಗಗನದಲ್ಲೇ ಮೊಟ್ಟೆ ಇಡುತ್ತದಂತೆ..ಆ ಮೊಟ್ಟೆ ಭೂಮಿಗೆ ಬರುವ ಮೊದಲೇ ಒಡೆದು ಪಕ್ಷಿಯಾಗಿ..ತಾಯಿ ಪಕ್ಷಿಯೊಡನೆ ಹಾರಿ ಹೋಗ್ತದಂತೆ(ನನ್ನ ಚಾಟ್ ರೂಮ್ ರೋಮನ್ ಗೆಳೆಯ ಹೇಳಿದ್ದು!!)
6 comments:

 1. ಚೆನಾಗಿದೆ...
  ಹೋಮಾ ಪಕ್ಷಿಯ ವಿಚಾರ ತುಂಬಾ ಆಕರ್ಷಕವಾಗಿದೆ...
  "ಸಿಗದ ಅದೃಷ್ಟದ ಚಿಂತಾಮಣಿಗಾಗಿ
  ಮಿಡುಕಿದೆವು..!!! "
  ಎನ್ನುವ ಸಾಲುಗಳು ತೀರಾ ಹೊಸದೆನಿಸಿದವು..
  ವಂದನೆಗಳು..
  ಬರೆಯುತ್ತಿರಿ..
  ನಮಸ್ತೆ..

  ReplyDelete
 2. ಮೊದಲಿಗೆ ಯಾಕೆ ನಮಗೆ ಹಳೇ ಪ್ರೇಮಗಳನ್ನು ನೆನಪಿಸಿ ಬೇಜಾರ್ ಮಾಡ್ತೀರೋ ನೀವು. ಮರೆತ ಹಳೇ ಭಗ್ನ ಪ್ರೇಮಗಳ ಗಾಯಗಳಲ್ಲೇ ನಮ್ಮ ಬದುಕನ್ನು ಕಟ್ಟಿಕೊಂಡಿರುವ ನನ್ನಂತಹ ಹಳೇ ಮಜನೂಗಳನ್ನು ಕೇಣಕಬೇಕಿತ್ತೇ ಮಹೀ ನೀವು?

  ಎರಡನೆಯದಾಗಿ, ವಿಷಯ ಪ್ರಸ್ತಾವನೆಯ ಭಾವ ತೀವ್ರ ತಂತ್ರಗಾರಿಕೆಯ ಅನಾವರಣ ಇಲ್ಲಿದೆ. ಬರಹ ಮತ್ತು ಅರ್ಥಪೂರ್ಣ ಕವನಗಳೂ ಮನತಟ್ಟಿದವು.
  "ಸಿಗದ ಅದೃಷ್ಟದ
  ಚಿಂತಾಮಣಿಗಾಗಿ ಮಿಡುಕಿದೆವು..!!! "
  ಅಲ್ಲವೇ ಮತ್ತೇ?

  ReplyDelete
 3. ಚೆನ್ನಾಗಿದೆ...ಇಷ್ಟವಾಯಿತು...

  ReplyDelete
 4. "ಜೀವನದಲ್ಲಿ ಸುಖ ಅನ್ನೋದು ಒಗ್ಗರಣೆ ತರ"
  ಇಡಿ ಕವಿತಾಲೇಖನದ ಆಶಯ ಈ ಸಾಲುಗಳಲ್ಲಿ ಬಂದಿದೆ
  ನೆನಪುಗಳು ಕಾಡುವ, ಕೊಡುವ ಅನುಭವ ಸುಂದರ. ಸೊಗಸಾದ ಬರಹ ಏರಿಳಿತಗಳು ಮಿಳಿತವಾಗಿ ಹದವಾಗಿ ಬೆರೆತಿದೆ.

  ReplyDelete