Tuesday, April 16, 2013

ಮಳೆ ಎಂಬ ಪುಳಕ

ಮಳೆ ಬರುವ ಮುನ್ನ..


ಭಾವಗಳ ಮೋಡದ ಜೋಲಿಯಲ್ಲಿ
ಇಣುಕುವ ನೀನು ನನ್ನ ಭಾನು
ಹಸಿಯಾದ ಎದೆ ನೆಲದಿ ಮೊಳಕೆ ಒಡೆಯಿತೇ
ಬಯಕೆಗಗಳ ಭವಿಷ್ಯದ ಕಾನು?

ಹೊಳೆಯುತಿಹ ಕಂಗಳಲ್ಲಿ
ಮಳೆಯ ಮುನ್ನಿನ ಮಿಂಚು
ವರುಣನಂತೆನ್ನ ಇಳೆಯಾಗಿಸಿ
ಬಳಸಿ ತಬ್ಬುವ ಹೊಂಚು

ನಿಲ್ಲು ನಲ್ಲ..
ನಿನ್ನ ಒಲವ ಸುಧೆಗೆ ಮೈ
ಒಡ್ಡುವ ನನ್ನ
ಒಮ್ಮೆ ಕಾಯಿಸಿ ನೋಡು
ಮಳೆ ಬರುವ ಮುನ್ನ!!

ಮಳೆ ಬಂತು

ಬಿರು ಬಿಸಿಲಿಗೆ ಕಾದ
ಭುವಿಗೆ ಬಿದ್ದ ಮೊದಲ
ಮಳೆಯ ಹನಿ
ಕಡಲ ಒಡಲ ಚಿಪ್ಪೊಂದರಲ್ಲಿ
ಸದ್ದಿಲ್ಲದೆ ಕಾಯುತಿದೆ
ರೂಪಾಂತರಿಸಲು
ಒಂದು ಸುಂದರ ಮುತ್ತು!

ಕಾಗೆ ಗುಬ್ಬಿಗಳಿಗೀಗ
ಒಂದೇ ಮರದ ಆಶ್ರಯ
ಬರುವ ಮುಸಲಧಾರೆಯಂತ 
ಮಳೆಗೆ ಗೂಡು ಕಟ್ಟಿ 
ಬೆಚ್ಚಗಾಗುವ ತವಕ

ಬಂದೇ ಬಂತು ಮಳೆ
ನನ್ನೆದೆಯ ಇಳೆಗೆ
ನೀ ಬಂದ ಗಳಿಗೆ!!

ಮಳೆಯ ನಂತರ


ತಂತಿಗಳಲ್ಲಿ ಜೋತು ಬಿದ್ದ
ಹನಿಗಳಿಗ್ಯಾವ ಅವಸರವಿಲ್ಲ
ಉಕ್ಕುವ ನದಿಗಳಿಗೆ 
ಹರೆಯದ ಪುಳಕ
ಕೆರೆಗಳೋ ನಮ್ಮ ಕಿರುತನದ 
ಬಿಂಬ ತೋರುತಿವೆ

ನನ್ನ ನಲ್ಲ...

ವರುಣನಾಗಿ ನನ್ನೆದೆಗೆ 
ನೀ ಪ್ರೇಮ ಸುರಿಸಿ
ಹನಿಗಳ ಧಾರೆಯಲ್ಲಿ 
ನನ್ನ ವರಿಸಿ
ಹೆಣ್ಣಾಗಿಸಿದೆ!!

ಹಸಿರ ಚಲ್ಲಿದ ಹಾದಿಯಲ್ಲಿ
ಉದುರಿದ ನಿರೀಕ್ಷೆಯ
ಎಲೆಗಳು
ನಮ್ಮ ಸ್ವಾಗತಿಸಿದೆ 
ಶಾಲ್ಮಲಿಯ ದಳಗಳು

ನಾನೀಗ ಇಳೆ
ನಿನ್ನಾತ್ಮದಷ್ಟು 
ಪರಿಶುದ್ಧ
ನಿನ್ನ ಒಲವ ಮಳೆ
ತೊಳೆಯಿತು
ನನ್ನೆಲ್ಲ ಕೊಳೆ!!


 
 (Image curtecy:Internet)






4 comments:

  1. ಬದುಕಿನ ಮೂರು ಮಜಲುಗಳ ಸುಂದರ ಅನಾವರಣ..
    ಇಷ್ಟ ಆಯಿತು ಅಕ್ಕಾ..

    ಸ್ಪೆಷಲಿ,
    "ತಂತಿಗಳಲ್ಲಿ ಜೋತು ಬಿದ್ದ
    ಹನಿಗಳಿಗ್ಯಾವ ಅವಸರವಿಲ್ಲ
    ಉಕ್ಕುವ ನದಿಗಳಿಗೆ
    ಹರೆಯದ ಪುಳಕ"
    Just Wow... :)

    ReplyDelete
  2. ಬದುಕಿನ ಮೂರು ಕಾಲಗಟ್ಟಗಳಲ್ಲಿ ನಲ್ಲನ ನೆನಪು, ವರ್ಣನೆ ತುಂಬಾ ಸೊಗಸಾಗಿ ಚಿತ್ರಿಸಿದ್ದೀರಿ.
    ಅದರಲ್ಲೂ
    ಹೊಳೆಯುತಿಹ ಕಂಗಳಲ್ಲಿ
    ಮಳೆಯ ಮುನ್ನಿನ ಮಿಂಚು........ಅರ್ಥಪೂರ್ಣಸಾಲುಗಳು ಮೆಚ್ಚುಗೆಯಾಯಿತು, ಮತ್ತಷ್ಟು ನಿಮ್ಮಬರಹಗಳು ಬರುತ್ತಿರಲಿ.

    ReplyDelete
  3. ಶಮ್ಮಿ, ನಿಜವಾಗಲೂ ಸುಂದರ ಸಾಲುಗಳು,ಪ್ರೀತಿ ಪ್ರೇಮಕ್ಕೂ,ನಲ್ಲ ನಲ್ಲೆಯರ ಹೋಲಿಕೆ ಈಳೆಗೂ ಭೂಮಿಗೂ .ಮನದಾಳದ ಮಾತನ್ನು ಎಲ್ಲರ ಮನ ಮುಟ್ಟುವ ರೀತಿಯಲ್ಲಿ,ಸರಳವಾದ ಪದಗಳನ್ನು ಬಳಸಿ, ಮೂರು ಹಂತಗಳಾಗಿ ಸತ್ಯವನ್ನು ಹೊರ ಹೊಮ್ಮಿಸಿದ್ದೀರಿ. ಸಂತೋಷವಾಯಿತು ಓದಿ,ಹ್ರದಯ ತುಂಬಿತು.

    ReplyDelete
  4. ಮಳೆ ಬಂತು ಮಳೆ ಕೊಡೆ ಹಿಡಿದು ನಡೆ ಎನ್ನುವ ಪದ್ಯ ನೆನಪಿಗೆ ಬಂತು. ಭೂತ, ಭವಿಷ್ಯತ್, ವರ್ತಮಾನಗಳ ಮೂರು ಮೆಟ್ಟಿಲನ್ನು ವಿವರಿಸುವ ಸಾಲುಗಳು ಸೊಗಸಾಗಿದೆ. ಮಳೆಗಾಗಿ ಪ್ರೀತಿ
    ಮಳೆಯಿಂದ ಪ್ರೇಮ
    ಮಳೆಗೋಸ್ಕರ ಕವನ
    ಸೂಪರ್

    ReplyDelete