Monday, May 13, 2013

ಒಂದೆರಡೆರಡೇ ಹನಿ...ಮುಂದಾಗುವುದು ಧಾರೆ...

ಹನಿ-೧
ತನ್ನದೇ ಬಿಂಬವ ಕಂಡು
ಕಿಟಕಿಯ ಗಾಜಿನಲ್ಲಿ
ಕುಕ್ಕುವ ಪುಟ್ಟ ಹಕ್ಕಿಯೇ
ನಿನ್ನ ಅಳಲ ಕೇಳುವ ಸಖರಿಲ್ಲ
(ತಟ್ಟೆಯಲ್ಲಿ ನೀರಿದೆ ನಾನಿತ್ತ ಕಾಳಿದೆ)
ಮಾನವರ ದುರಾಸೆಯ ಮೊತ್ತವೆಲ್ಲ
ನಿನ್ನ ಪಿಳುಗುಡುವ ಕಣ್ಣಲ್ಲಿ
ಭಯವಾಗಿ ಕಾಡುವಾಗ
ನನ್ನ ಅಸ್ತಿತ್ವ ನನಗೆ
ಬೇಕಾಗಿ ಕಾಣುವದಿಲ್ಲ!!

ಹನಿ-೨

ಬರೆದರು ಪ್ರೀತಿ ಪ್ರೇಮದ
ಮೇಲೆ ನೂರು ಸಾವಿರ ಸಾಲು
ಬರೆದರೂ ಕಥನ..ಕಥೆ..ಕವಿತೆ
ಸಾಲದಾಯಿತು ಬಾಳು
ಅರಿವುದ ಮರೆತರು,
ಪ್ರೇಮವೆಂಬುದು ಅವಿನಾಶಿ
ಸೂರ್ಯ ಚಂದ್ರರಿರುವ ತನಕ
ಅದರ ಬೆಳಕಿನಲಿ ಬದುಕುವುದು
ಜೀವರಾಶಿ..
(ಅದೂ ಪ್ರೇಮ ಅಲ್ಲವೇ?)

ಹನಿ-೩
ನಿನ್ನ ಮಾಸದ ನಗುವಿಗೆ
ಕಾರಣವೇನು ?
ಕೇಳುತ್ತಲೆ ಇದ್ದಾನೆ ಅವನು
ನಾ ಹೇಳಲಿಲ್ಲ
ನನ್ನೆದೆಯ
ದು:ಖದ ಸಾಗರದಿ
ತೇಲಿಬಿಟ್ಟಿದ್ದೇನೆ
ನಗೆಯ ಹಾಯಿದೋಣಿ
ಮನದ ತೀರದಲ್ಲಿ
ನನಗಾಗಿ
ಕಾಯುತ್ತಿರುವುದು
ಇರುಳು
ನಾ ನಗುತ್ತಲಿರುವೆ
ತೋರಿ ಚಂದ್ರನೆಡೆಗೆ ನನ್ನ ಬೆರಳು!!
(ಅಡಿಗರು ನೆನಪಾದರು!!)

ಧಾರೆ-೧

ಹೀಗೇ ಸುಮ್ಮನೆ  ನಿನ್ನ ನೆನಪಲ್ಲಿ
ಬಿಳಿಗೋಡೆಯ ಮೇಲೆ
ಬರೆಯದ ಚಿತ್ರಗಳ ಕಾಣುತಿರುವೆ

ಅಲ್ಲಿ ದೂರದಲ್ಲೆಲ್ಲೋ ಇರುವ ನಿನ್ನ
ಮನಸಿನ ಅಲೋಚನೆಗಳ
ನನ್ನ ಪದಗಳಲ್ಲಿ ಬಂಧಿಸಿಡುವುದು
ವ್ಯರ್ಥ ಪ್ರಯತ್ನ

ಬರುವೆಯೋ ಬಾರೆಯೋ?
ನಾ ನಿನಗೆ ಇಷ್ಟವಾದೇನೆ?
ನೂರುಪ್ರಶ್ನೆಗಳ ಹೊತ್ತ
ಮನಸಿನ ದ್ವಂದ್ವ ಗಾಯನ

ಉಕ್ಕಿಬರುವ ಭಾವಗಳ
ನದಿಗೆ ಕಟ್ಟಿರುವೆ
ಸಂಯಮದ ತಡೆಗೋಡೆ
ಎಂದು ಬೀಳುವುದೋ
ಎಂಬ ಆತಂಕದೆಡೆಯಲ್ಲೇ
ಸಂಭ್ರಮವೊಂದು ನುಗ್ಗಿಬರಲು
ಹವಣಿಸಿದೆ!!

ನಿನ್ನೆಡೆಗೆ ತುಡಿವ ನನ್ನ ಆಸೆಗಳ
ಬಾನಲ್ಲಿ ಬೆಳಗಿನ ರವಿಯಾಗಿ
ಕಾರ್ಗತ್ತಲ ಶಶಿಯಾಗಿ
ಒಂದಷ್ಟು ಹರುಷ ಚೆಲ್ಲು
ನೀ ಹೊತ್ತ ನಿನ್ನ
ಹೆಸರು ಸಾರ್ಥಕವಾದೀತು
(ನೀ ಭುವನ-ಚಂದ್ರನಲ್ಲವೇ?)


 ಧಾರೆ-೨

ಜೀವನ ಎಂದರಿದೇ!!
ಎಂದೆನೆ??

ಬರದ ನಾಳೆಗಳ ಬಾಗಿಲಿಗೆ
ನಿರೀಕ್ಷೆಗಳ ತೋರಣವ ಪೋಣಿಸಿ
ಇರುವ ವರ್ತಮಾನವ ಬೂದಿಗೆ
ಎಳಸುವ ಮನಸು

ಕಹಿ ಬೀಜಗಳು ಚೆಲ್ಲಿದ ನೆನಪುಗಳ
ಅಂಗಳಕ್ಕೆ ಸುರಿದ ಮರೆತ
ಮುಖಗಳ ಹೊಸಾ ಪರಿಚಯದ
ಮುಸಲಧಾರೆ

ಮೊಳಕೆಯೊಡೆವ ಸಂದಿನಲ್ಲಿ
ಕೀಟನಾಶಕಗಳ ಸುರಿದು
ಬೆಳಸುತ್ತಲೇ ಕೊಲ್ಲಲೆಳಸುವ
ವಿಕೃತಮಾನವೀಯರು

ಆದರು ಅಲ್ಲಲ್ಲಿ ಇದ್ದವರು..
ವರುಣರು!!ಅಮೃತವಾಹಿನಿಯ
ತುಂತುರಲಿ ಹರಿಸಿ ಸಂತೈಪರು
ಅಹಮಿಕೆಯ ಭೂಮಿಕೆಯಲ್ಲಿ
ವೈಶಾಲ್ಯತೆಯ ಹಸಿರ
ಸಾವಯವ ಕೃಷಿಯ ಬೆಳೆವರು!!

ಅದಕೆಂದೆ ಎಂದೆ..
ಜೀವನವ ಅರಿತೆ ಎಂದೆನೆ??
ಅರಿಯದಾದೆ ಎಂದರೂ ತಪ್ಪು..
ಅರಿತೆ ಎಂದರು ತಪ್ಪು
ಕಲಿವಿಕೆಯ ಈ ವಿದ್ಯಾಲಯದಿ
ನಾ ನಿತ್ಯ ನೂತನ ವಿದ್ಯಾರ್ಥಿ
ಅದೇ ಸರಿ,ಅದೆ ಒಪ್ಪು!!










3 comments:

  1. ಹನಿ 1 : ಮನುಜನ ಸ್ವಾರ್ಥತೆಯ ಬಿಂಬ
    ಹನಿ 2 : ನಿಜ ಕೈಗೆಟಕುವ ಕಣ್ಣೀಗೆ ಕಾಣುವ ಒಲುಮೆಯನ್ನು ಗುರುತಿಸರು ಪಾಪ!
    ಹನಿ 3 : ನೆಮ್ಮದಿಗೊಳಿಸುವ ಯತ್ನ
    ಧಾರೆ 1 :
    "ಸಂಯಮದ ತಡೆಗೋಡೆ
    ಎಂದು ಬೀಳುವುದೋ" ಆತಂಕ ಇದೆಯಲ್ಲ ಅದೇ ಒಳ್ಳೆಯ ಬದುಕಿಗೆ ಸೋಪಾನ.
    ಧಾರೆ 2 : ಸರಿಯಾಗಿ ಬಾಳನ್ನು ವಿಶ್ಲೇಷಿಸಿದ್ದೀರಾ
    "ಕಲಿವಿಕೆಯ ಈ ವಿದ್ಯಾಲಯದಿ
    ನಾ ನಿತ್ಯ ನೂತನ ವಿದ್ಯಾರ್ಥಿ" ಎಂದು ಒಪ್ಪಿಕೊಂಡಾಗಲೇ ನಮಗೆ ಗೆಲುವು.

    ReplyDelete
  2. ಅಯ್ಯೋ ಹನಿಗಳ ಮಳೆಯಲ್ಲಿ ತೊಯ್ದು ಮುದ್ದೆ ಆದೆ ನಾನು...ಒಂದು ಬಿದ್ದಾಗ ಚೇತರಿಸ್ಕೊಳ್ಳೋದ್ರೊಳಗೆ ಇನ್ನೊಂದು ದಬಕ್....
    ಚನ್ನಾಗಿವೆ ಶಮ್ಮಿ ಎಲ್ಲಾ....
    ನನಗೆ ಇಷ್ಟವಾಗಿದ್ದು...ಈ ಸಾಲುಗಳು
    ಕಹಿ ಬೀಜಗಳು ಚೆಲ್ಲಿದ ನೆನಪುಗಳ
    ಅಂಗಳಕ್ಕೆ ಸುರಿದ ಮರೆತ
    ಮುಖಗಳ ಹೊಸಾ ಪರಿಚಯದ
    ಮುಸಲಧಾರೆ

    ReplyDelete
  3. ಎಲ್ಲವೂ ಇಷ್ಟವದವು...
    ಕೊನೆಯಲ್ಲಿ - ಕಲಿವಿಕೆಯ ಈ ವಿದ್ಯಾಲಯದಿ
    ನಾ ನಿತ್ಯ ನೂತನ ವಿದ್ಯಾರ್ಥಿ
    ಅದೇ ಸರಿ,ಅದೆ ಒಪ್ಪು!!
    ಎಂಬಲ್ಲಿಗೆ ಕವಿ ಮನಕ್ಕೆ ಶರಣು...

    ReplyDelete