Sunday, July 13, 2014

ಕಥೆಯಲ್ಲದ ಕಥೆ


ಇವತ್ತು ಜುಲೈ ಹದಿಮೂರಾ? ಇವನದ್ದು ಬರ್ತಡೆ, ಬೆಳ್ ಬೆಳಗ್ಗೇನೇ ಎದ್ದು ಅವನಿಗಿಷ್ಟದ ಜಾಮೂನು ಮಾಡಿ, ಎಣ್ಣೆ ತಲೆಗೆ ತಟ್ಟಿ ಮೈಗೆಲ್ಲ ಹಚ್ಚಿ ಅರಿಸಿನ ಕೆನ್ನೆಗೆ ಬಳಿದು ಕೂರಿಸಿ ಮಸಾಜು ಮಾಡಿದ್ದಾಯ್ತು, ತಲೆಗೆ ಬಿಸಿ ಬಿಸಿ ನೀರು ಹೋಯ್ತಾ ಇದ್ದ ಹಾಗೆ ನೆನಪಾಯ್ತು...ಇವತ್ತು ಅವನದ್ದೂ ಹುಟ್ಟಿದ ಹಬ್ಬ, ಅಲ್ಲಿ ಅವನ ಹೆಂಡತಿಯೂ ನನ್ನ ಹಾಗೆ ಮಾಡಿ ಮಕ್ಕಳೆಲ್ಲ ಆಟಕ್ಕೆ ಹೋದಮೇಲೆ ಗಂಡನ್ನ ಅಗತ್ಯಕ್ಕಿಂತ ಇವತ್ತು ಸಲ್ಪ ಜಾಸ್ತಿಯೇ ಮುದ್ದಿಸಿರಬಹುದು ಅಂತ ಕಲ್ಪಿಸಿಕೊಳ್ಳುತ್ತಿದ್ದ ಹಾಗೆ  ತಲೆ ತಿಕ್ಕುತ್ತಿದ್ದ ಕೈಗಳು ತಡೆದು ನಿಂತವು, ಕಂಪಿಸುತ್ತಿದ್ದ ಕಣ್ಣ ಹನಿಗಳನ್ನ ಅಲ್ಲಿಯೇ ತೊಡೆದು ಮತ್ತೆ ದಿನವಿಡೀ ಅವನದೇ ಧ್ಯಾನ,

ತಪ್ಪು ಸರಿಗಳ ಗೊತ್ತು ಹೊತ್ತು ಮೀರಿದ ಸ್ನೇಹ ಅದು, ಅಷ್ಟಕ್ಕೂ ನಾನು ಬಯಸಿದ್ದು ಏನು?? ನನಗೇ ಗೊತ್ತಿರಲಿಲ್ಲ, ತಪ್ಪಿ ಹೋದ ಸಂದೇಶದಿಂದ ಶುರುವಾದ ಕಥೆಯೊಂದು ಸುಂದರ ಪ್ರೇಮಕಾವ್ಯವೋ ಇಲ್ಲ ದೊಡ್ಡದೊಂದು ವಿರಹವೇದನೆಯ ಮೇಘಸಂದೇಶವೋ ಆಗಬಹುದಾದ ಎಲ್ಲ ಲಕ್ಷಣ ಹೊಂದಿತ್ತು, ನನಗಾಗ ಭದ್ರತೆಯ ಅವಶ್ಯಕತೆ ಇತ್ತೇ? ಯಾವುದು ಈಗ ಹೊಳೆಯುತ್ತಿಲ್ಲಾ...ಒಟ್ಟಾರೆ ಅವನ ಸ್ಪಂದನೆ ನನ್ನ ಕರೆಯಿತು, ಹುಟ್ಟಾ ಸರಸಿಯೊಬ್ಬಳಲ್ಲಿ ಸತ್ತು ಹೋಗಿದ್ದ ಜೀವಂತಿಕೆಯನ್ನ ಕೆಣಕಿತು, ಅವನಾವ ಮನ್ಮಥನಲ್ಲ, ಆದರೆ ಅವನ ಮುಗ್ಧತೆಯ ಅವನ ಕಾಳಜಿ ಜಗತ್ತಿನ ಎಲ್ಲ ಸಂಪತ್ತನ್ನು ಮೀರಿಸುವಷ್ಟಿತ್ತು(ಅಥವಾ ಅದು ನನ್ನ ಕಲ್ಪನೆಯಾಗಿತ್ತಾ? ಗೊತ್ತಿಲ್ಲ)


ಹಗಲಿಲ್ಲ ಇರುಳಿಲ್ಲದೆ ಅದೆಷ್ಟು ದಿನ ರಾತ್ರಿಗಳು ಕಳೆದವೋ, ನಿದ್ರೆ ಇಲ್ಲದ ಇಬ್ಬರು ಅವಾಗವಾಗ ಭೇಟಿ ಆಗ್ತಿದ್ದೆವು, ಇದು ಪ್ರೇಮಿಗಳ ನಗರವಲ್ಲ ನೋಡಿ, ಮುದ್ದಿಸುವ ಅವಕಾಶಗಳು ದೊರೆಯುತ್ತಿರಲಿಲ್ಲ, ಅವನ ಪುಟ್ಟ ಕಾರಿನಲ್ಲಿ ಅಷ್ಟು ದೂರ ಬೆಳಗ್ಗೆಯ ವಾಕಿಂಗ್ ನಡೆಯುತ್ತಿತ್ತು, ಅವನ ಕಾರು ಅದೆಷ್ಟು ತಿರುವುಗಳಲ್ಲಿ ನನ್ನ ಹೊತ್ತು ಇವನನ್ನ ಶಪಿಸಿತ್ಟೋ ಬಲ್ಲವರಾರು,ಬಿಗಿಯಾಗಿ ಕೈ ಹಿಡಿದು ಒಂದು ಗಂಟೆ ಮುಖ ನೋಡುತ್ತಾ ಮಾತಾಡುತ್ತಾ, ಶಿಶಿರನ ಛಳಿಯೂ ಬಿಸಿ ಹುಟ್ಟಿಸಿದ್ದ ದಿನಗಳವು...


ಎಲ್ಲ ಸಂಬಂಧಗಳಿಗೂ, ಸುಮಧುರ ಕ್ಷಣಗಳಿಗೂ ಒಂದು ಕೊನೆ ಇರುತ್ತದಂತೆ, ಹಾಗೆ ಅವನ ಪ್ರತಿ ವಿಜಯದಲ್ಲೂ ನನ್ನ ಮರೆಯದೆ ನನ್ನವಳು(?) ಅಂದುಕೊಳ್ಳುತ್ತಿದ್ದವನಿಗೆ ನನ್ನ ಅವಶ್ಯಕತೆ(?) ಬೇಕಾಗಿ ಬರಲಿಲ್ಲವಾ,ಅವನ ಜೀವನದ ಭಾಗ ನಾನೆಂದೂ ಆಗಲಾರೆ ಅನ್ನೋ ಸತ್ಯ ನನ್ನ ಚೂರು ಮಾಡಿತಾ?? ಗೊತ್ತಿಲ್ಲ, ಅವನ ಅವಶ್ಯಕತೆಗಳು, ಅವನ ಮುಖ್ಯ ಸಂಗತಿಗಳಲ್ಲಿ ನಾನಿಲ್ಲದ ವೇದನೆಯನ್ನ ವರ್ಷಗಟ್ಟಲೆ ಅನುಭವಿಸುತ್ತಿದ್ದ ನಾನು ಕಡಿಮೆಯಾದ ಮಾತುಕತೆ ಸಂವಹನಕ್ಕೆ ಮೊದಮೊದಲು ಕಿತ್ತಾಡುತ್ತಿದ್ದ ನಾನು ಕ್ರಮೇಣ ಮೌನವಾದೆ, ಅವನ ಪರಿಧಿ ಇಂದ ದೂರವುಳಿದೆ, ಆದರೆ ಅವನತ್ತ ಇವತ್ತಿಗೂ ಪ್ರಾರ್ಥನೆಯೊಂದು ಕಳಿಸುತ್ತೇನೆ,ಮತ್ತೆ ಮುಂದಿನ ಜನ್ಮವೊಂದಿದ್ದರೆ ಅವನಿಗೆ ನಾನು ತಾಯಾಗಬೇಕು...

ಹೀಗೆ ನನ್ನೆಲ್ಲ ಕಸಿವಿಸಿ ಪ್ರಶ್ನೆ ದುಮ್ಮಾನಗಳಿಗೆ ಕಿವುಡಾಗಿ ಬಾರಿ ಬಾರಿ ದೂರಾದ ಅವನಿಗೂ ಕೂಡ ಹುಟ್ಟುಹಬ್ಬದ ಶುಭಾಶಯಗಳು...ಯಾಕೆಂದರೆ ಸಂಬಂಧಗಳ ಸಿಹಿ ಕಹಿ ಎರಡು ತೋರಿಸಿದವ ಅವನು..ಮತ್ತೆ ಮತ್ತೆ ಮರೆಯದ ನೆನಪಾಗಿ ನನ್ನ ಮುಳುಗಿದ ಆಕಾಂಕ್ಷೆಗಳ ಗೋಪುರವಷ್ಟೇ ಆಗಿ ಉಳಿದವ ಅವನು..

ಋತುಗಳು ಬದಲಾಗಬಹುದು,ಕಾಲಗಳು...ನನ್ನ ಇಂದಿದ್ದ ಯೌವನ ನಾಳೆ ಮಾಸಬಹುದು, ಅವನ ಜೊತೆ ಕಳೆದ ಪ್ರತಿ ನಿಮಿಷಗಳಿಗೆ ಸಾವು ಬಾರದಂತೆ ಮುದ್ರೆಯೊತ್ತಿ ಅತ್ಮದೊಳಕ್ಕೆ ಇಳಿಸಿದ್ದೀನಿ..ಮತ್ತೆ ಅವನಿಗೆ ಹೇಳಬೇಕಿದೆ, ಸಮರ್ಥನೆ ಬೇಕಿಲ್ಲ ಪ್ರೇಮಕ್ಕೆ, ನಾನು ಮುಟ್ಟಲಾರದಷ್ಟು ದೂರದ ತಾರೆಯಲ್ಲ, ನೀನು ನನ್ನ ಅಂಗಳದ ಚಂದ್ರಮ, ನಾನು ಮಾತ್ರವೇ ನಿನ್ನ ರೋಹಿಣಿಯಾಗಬೆಕಾದವಳು!!

3 comments:

  1. ಯಾಕೋ ಯಾರದೋ ಹುಟ್ಟಿದ ಹಬ್ಬದ ದಿನ ನನಗೂ ನೆನಪಾಯಿತು.
    ಮನಸನ್ನು ಮೀಟುವ ಕಲೆ ಸುಲಭದಲ್ಲ! ಬರವಣಿಗೆಯ ಮೂಲಕ ನಮ್ಮ ಕೈಗೂ ಕನ್ನಡಿ ಕೊಡುವ ನಿಮ್ಮ ಶೈಲಿಗೆ ನನ್ನ ಶರಣು.

    ReplyDelete
  2. Heluva shaili chennagide adare katheyalli spasta chittrana illa....swalpa aakade amana harisi....dhanyavadagalu....

    ReplyDelete