Tuesday, September 2, 2014

ನನ್ನ ಬದುಕಿನ ನದಿಯೇ

ಎಂದೋ ದಾರಿ ತಪ್ಪಿದ ನದಿಗೆ ಮತ್ತೆ ಸಾಗರನೆಡೆಗೆ ತುಡಿವ ತವಕ,ಮತ್ತ್ಯಾವ ಹಾದಿಯೋ,ಮರುಭೂಮಿಯೋ? ವರುಣನ ಸ್ನೇಹವೊಂದಿದ್ದರೆ ಉಕ್ಕಿ ಪ್ರವಹಿಸಿ ಅವನ ಒಡಲಲ್ಲಿ ಒಂದಾಗುವ ಬಯಕೆ...ದ್ವೈತವೋ ಅದ್ವೈತವೋ ಸಮ್ಮಿಲನದ ನಂತರ ತತ್ವಗಳ ಲೆಕ್ಕವಿತ್ತರಾರು? ಆತ್ಮಗಳು ಅಷ್ಟೆ ಅಂತೇ ನದಿಗಳಂತೆ ಪ್ರವಹಿಸುವುದು, ಮತ್ತೆ ಮರಣ ಮತ್ತೆ ಜನನ, ಅದೇ ಭಾವೋದ್ವೇಗಗಳು, ಮೀರಿದೆವು ಅಂದರೂ ಉಸಿರ ದೀಪ್ತಿ ಆರುವನಕ ಉರಿಸುವ ನವರಸಗಳು,ಅಷ್ಟ ಮದಗಳು,ಕೊನೆಗಿದಾವುದು ನನ್ನ ಗುರಿಯಲ್ಲ ಎಂದು ಅರಿವ ವೇಳೆಗೆ ಮತ್ತೊಂದು ತೊಗಲು,ಅಲ್ಲಲ್ಲಿ ಬೆಳಕ ತೋರುವ ಚೇತನಗಳನ್ನ ನಾವೇ ಅಲಕ್ಷಿಸುತ್ತೇವೆಯೋ..ಅಥವಾ ಕಾಣಲಿಕ್ಕೆ ಸಿಕ್ಕುವುದಿಲ್ಲವೋ..ಬಲ್ಲವರ್ಯಾರು??ಅರಿತೆವು ಅನ್ನೋದೊಂದು ಅಹಂಕಾರವೇ ಹೊರತು, ಉಗುರ  ತುದಿಯಷ್ಟು  ನಾವು ಅರಿತಿರಲಾರೆವು ಅನ್ನೋದು ಕಟು ಸತ್ಯ...ಸತ್ಯಾನ್ವೇಷಣೆಗೆ ಮುನ್ನ ಬರಗೆಟ್ಟ ಬದುಕನ್ನ, ಬಿಕರಿಗಿಟ್ಟ ಭಾವಗಳನ್ನ ಹದ ಹಾಕಬೇಕು, ಕಷ್ಟಗಳ ಸಾಣೆಗೆ , ನಷ್ಟಗಳ ಉರುಳಿಗೆ ಅಂಜದೆ ಅಳುಕದೆ ಕೊರಳೊಡ್ಡಬೇಕು, ಇದ್ದದ್ದರಲ್ಲೇ ಹಂಚಿ ತಿನ್ನುವ ಬುದ್ಧಿ ಬೇಕು,ಮತ್ತೆ ದುರಾಸೆ ಪಡದೆ ಕ್ರೋಢಕ್ಕೆ ಮನಗೊಡದೆ ದಿವ್ಯ ಪ್ರೇಮಕ್ಕಷ್ಟೆ ಮನ ಸೋಲಬೇಕು, ಅದನ್ನೇ ಕೊಡಬೇಕು, ವಿನಿಮಯಿಸಿ ವ್ಯವಹರಿಸಬೇಕು...
ಯಾಕೋ ದಾಸರು ನೆನಪಾಗುತ್ತಿದ್ದಾರೆ...ಜೊತೆಗೆ ಬಸವಣ್ಣನೂ...ಅಕ್ಕನೂ..ಅಲ್ಲಮನೂ...
ನನ್ನ ಬದುಕಿನ ನದಿಯೇ...ನಿನ್ನ ಸಾಗರವಿಲ್ಲೆ..ನಿನ್ನ ಎಡೆಯಲ್ಲೇ...ತುಸು ಧೈರ್ಯ...ತುಸು ತಾಳ್ಮೆ...ತುಸು ಜಾಣ್ಮೆ..ಅವನೊಲಿವ...ಕಾಯಬೇಕು ಕಣೆ!!

ಆ ಮಿಲನವೊಂದು ಮಹಾ ಪುರಾಣದಂತೆ..ನಿನಗೆ ಗೊತ್ತೇ ಬದುಕೇ..ಸಾಗರನಂಥ ಸಾಗರ ಯಾವ ನದಿಯನ್ನು ಅಷ್ಟು ಸುಲಭಕ್ಕೆ ಒಳಬಿಟ್ಟುಕೊಳ್ಳುವುದಿಲ್ಲ...ಹಾಗೆ ನನ್ನ ಒಳತೋಟಿಗಳು ನಿಲ್ಲುವನಕ ಅವನ ಮಿಲನ ಸಾಧ್ಯವಿಲ್ಲ, ಕೊಲ್ಲಿಯುದ್ದಕ್ಕೂ ಪ್ರಕೃತಿ ಬೆದರುವದು...ಹೆದರುವದು..ಮತ್ತು ಶಾಂತ ಸಾಗರನ ವಿಸ್ತಾರ ಪರಿಧಿಗೆ ತೆರೆದುಕೊಳ್ಳುವ ತನಕವೂ ಉಸಿರಾಡುವದನ್ನೇ ನಿಲ್ಲಿಸಿಬಿಡುವುದು...ಒಮ್ಮೆ ಮತ್ತೆಲ್ಲ ಶಾಂತ ..ಹಾಗೆ...
ಒಮ್ಮೆ ಅವನೊಳ ಜಗತ್ತಿಗೆ ಪ್ರವೇಶಿಸಿದ ನಂತರ ಅಲ್ಲಿ ಅಹಮ್ಮಿನ ಹುಯ್ದಾಟವಿಲ್ಲ,ನೂರು ಅನಿವಾರ್ಯತೆಗಾಗಳ ಕೆನೆದಾಟವಿಲ್ಲ, ಹಸಿದ ಆತ್ಮವೊಂದು ತಾಯ ಕಂಡ ಮಗುವಂತೆ ತಣ್ಣಗೆ ಮಲಗುವದು...ಬಡಬಾಗ್ನಿಯೆಲ್ಲ ಆರುವುದು ....ಅಸ್ತಿತ್ವವೇ ಇಲ್ಲದ ನಿರಾಳತೆಯೊಂದು ನಗುವುದು...ಅಲ್ಲಿಯತನಕ ಬದುಕೇ ನೀ ಸಂಯಮ ತೋರು...

1 comment:

  1. ಒಮ್ಮೆ ಅವನೊಳ ಜಗತ್ತಿಗೆ ಪ್ರವೇಶಿಸಿದ ನಂತರ ಅಲ್ಲಿ ಅಹಮ್ಮಿನ ಹುಯ್ದಾಟವಿಲ್ಲ,ನೂರು ಅನಿವಾರ್ಯತೆಗಾಗಳ ಕೆನೆದಾಟವಿಲ್ಲ, ಹಸಿದ ಆತ್ಮವೊಂದು ತಾಯ ಕಂಡ ಮಗುವಂತೆ ತಣ್ಣಗೆ ಮಲಗುವದು...ಬಡಬಾಗ್ನಿಯೆಲ್ಲ ಆರುವುದು ....ಅಸ್ತಿತ್ವವೇ ಇಲ್ಲದ ನಿರಾಳತೆಯೊಂದು ನಗುವುದು...ಅಲ್ಲಿಯತನಕ ಬದುಕೇ ನೀ ಸಂಯಮ ತೋರು..HEART TOUCHING BARAHA...

    ReplyDelete