Monday, June 13, 2016

ಉತ್ತರವಿರದ ಪ್ರಶ್ನೆಗಳು

ಸಂಸಾರವನ್ನೇ ಮರೆತವಳಂತೆ ಪುಸ್ತಕ ಹಿಡಿದು ಕೂತಿದ್ದೆ ... ಬಹುಷಃ ಬೆಳಗಿನ ಜಾವದ ೨ ಗಂಟೆ ಇರಬಹುದು... ಮೊಬೈಲ್ ಗುರ್ ಗುರ್ ಅಂತ ಸದ್ದು ಮಾಡಿತ್ತು .. ನೋಡಿದೆ ಅವಳದ್ದೇ ಮೆಸ್ಸೇಜು ..ಇಷ್ಟ್ ಹೊತ್ತಲ್ಲಿ ಏನ್ ತಲೆಬಿಸಿ ತಂದಿಟ್ಟಳಪ್ಪ ಅಂತ ಪೂರ್ತಿ ಓದತೊಡಗಿದೆ .."ಅಕ್ಕಾ ನಿಮ್ಮಿಂದ ಒಂದು ಉಪಕಾರ ಆಗಬೇಕಿತ್ತು ,ನನಗೆ ಯಾವ್ದಾದ್ರು ಒಳ್ಳೆ ಗೈನಕಾಲಜಿಷ್ಟ್ ಹತ್ರ ಹೋಗಬೇಕಿದೆ ಬರ್ತೀರಾ? ಇವತ್ತು  ನಿಮಗೆ ಸಮಯ ಇದೆಯಾ ಅಂತ ಕೇಳಬೇಕಿತ್ತು " ನನ್ನ ಪರಿಚಯದ ಒಬ್ಬರ ಹೆಸರು ಮರು ಸಂದೇಶದಲ್ಲಿ ಕಳಿಸಿ ಅವಳಿಗೆ ಯಾವ ಸಮಯ ಸರಿಯಾದೀತು  ಎಂದು ಕೇಳಿದೆ, ಅವಳು ಹನ್ನೊಂದಕ್ಕೆ ಹೋಗುವಾ ಅನ್ನುವಲ್ಲಿಗೆ ನಮ್ಮ ಸಂಭಾಷಣೆ ಮುಕ್ತಾಯವಾಯ್ತು ...  ಮುಕ್ತಾಯಕ್ಕನ

 ಆರು ಇಲ್ಲದವಳೆಂದು ಆಳಿಗೊಳಲು ಬೇಡ ಆಳಿಗೊಂಡೆಡೆ ಆನು ಅಂಜುವವಳಲ್ಲ ಒಲವಿನ ಒತ್ತೆ ಕಲ್ಲನು ಬೆವರಿಸಬಲ್ಲೆ ಕಾಣಿರೊ ಅಪ್ಪಿದವರನಪ್ಪಿದಡೆ ತರಗೆಲೆಯಂತೆ ರಸವನು ಅರಸಿದಡುಂಟೇ ಅಜಗಣ್ಣ ತಂದೆ!   

ಓದಿ  ಅಲ್ಲಿಯೂ ಇಲ್ಲಿಯೂ ಸಲ್ಲದ ನನ್ನಂತಹ ತ್ರಿಶಂಕುಗಳ ಸ್ಥಿತಿ ನೆನೆದು ನಿಟ್ಟುಸಿರಿಟ್ಟು ನಿದ್ದೆ ಹೋದೆ ..... 

ಮರು ದಿನ ಹನ್ನೊಂದು ಗಂಟೆಗೆ ಸರಿಯಾಗಿ ನಾನು ಆಸ್ಪತ್ರೆಯ ಮುಂದಿದ್ದೆ ,ಆಕೆಗೆ ಕಾಯುತ್ತಾ ಅರ್ಧ ಗಂಟೆ ಕಳೆಯಿತು, ಸಂದೇಶಕ್ಕೆ ಕರೆಗೆ ಉತ್ತರವಿಲ್ಲ ,ಕೊನೆಗೆ ಸುಮ್ಮನೆ ವಾಪಾಸು ಹೋಗುವ ಬದಲು ನಮ್ಮ ದಾಕ್ಟರನ್ನ ಕಂಡು ಹೋದರಾಯ್ತೆಂದು ಒಳ ಹೋದೆ ,ಅವರು ನನ್ನಲ್ಲಿ ಬಹಳ ಆತ್ಮೀಯತೆ ಇಂದ ಮಾತಾಡುತ್ತಿದ್ದರು, ಮಗುವಾಗುವ ಮುಂಚಿನಿಂದ ನಂತರ ಇವತ್ತಿನವರೆಗೂ ನನ್ನ ಬಲ್ಲವರು ಅವರು,ನಿನ್ನದು ಅತ್ಯಂತ ಆರೋಗ್ಯಕರ ಗರ್ಭಕೋಶ ಅಂತ ಆಗಾಗ ತಮಾಷೆ ಮಾಡುತ್ತಿದ್ದರು ,ಒಳ ಹೋಗಿ ಕೂತೆ ಕೊನೆಯ ಗರ್ಭಿಣಿ ಉಸ್ಸಪ್ಪ ಅಂತ  ಹೊರಬಂದಾಯ್ತು ,ಇನ್ನೇನು ನಾನು ಒಳ ನುಗ್ಗಬೇಕು ಅವಳ ಕಾಲ್" ಅಕ್ಕ ಇಲ್ಲೇ ಇದ್ದೀನಿ ಸಲ್ಪ ಹೊರಬನ್ನಿ" ನಾನು ಸೀದಾ ಹೊರಗೆ ಓಡಿದೆ ಹೌದು ಅವಳ ದ್ವನಿಯಲ್ಲಿ ಗಾಭರಿ ಇತ್ತು,

ಹಿನ್ನೆಲೆ ಹೇಳಿ ಬಿಡಬೇಕು ಆಕೆಗೆ ೨೦ ವರ್ಷ,ಇತ್ತೀಚೆಗಷ್ಟೇ ಮದುವೆಯಾಗಿದ್ದಾಳೆ ಓದುವ ಇಷ್ಟವಿತ್ತು ಯುನಿವರ್ಸಿಟಿಯ ಪ್ರತಿಭಾವಂತೆ,ಆದರೆ ಏನು ಮಾಡುವುದು,ಅಪ್ಪನ ದರ್ಪ,ಅಣ್ಣಂದಿರ ಬೆದರಿಕೆ,ಅಮ್ಮನ ಅಳು ಅಕೆಯನ್ನ ಮದುವೆಗೆ ಬಲವಂತವಾಗಿ ದೂಡಿತ್ತು ,ಮದುವೆಯಾದ ನಂತರ ಓದಿಸುವೆ ಅಂದಿದ್ದ ಹುಡುಗ ಮಾತು ಮರೆತಿದ್ದ,ಬೆಂಗಳೂರಿಗೆ ಬಂದ ನಂತರ ಅರಿವಾದದ್ದು ಆಕೆ ಬರಿ ಮದುವೆಯಾಗಿಲ್ಲ ಜೊತೆಗೆ ದೊಡ್ಡದಾದ ಕಂದರಕ್ಕೆ  ಬಿದ್ದಿದ್ದಾಳೆ ಎಂದು, ಯಾವುದೋ ದೊಡ್ದ ಕಂಪನಿಯ ಹೆಸರು ಹೇಳಿ ಮದುವೆಯಾಗಿದ್ದ ಆತ ನಿಜವಾಗಲು ಯಾವ ಕೆಲಸದಲ್ಲೂ ಇರಲಿಲ್ಲ , ಅವನ ಅಪ್ಪ ಅಮ್ಮ ಇವಳ ಮನೆ ಇಂದ ಬರುವ ದೊಡ್ದ ಮೊತ್ತಕ್ಕಾಗಿ ಕಾದು  ಕುಳಿತವರು,ಅವಳ ತಂದೆ ಬೆಂಗಳೂರಿನಲ್ಲಿ ಸೈಟ್ ಕೊಡಿಸುವ ವಾಗ್ದಾನದಲ್ಲಿ ಮದುವೆಯಾಗಿತ್ತು, ದೂರದ ಸಂಭಂಧ ಬೇರೆ,ಮಾವ ಅತ್ತೆ ಇಬ್ಬರು ಕೆಲಸದಲ್ಲಿದ್ದರು,ಜಾಸ್ತಿ ವಿಚಾರ ಮಾಡದೆ ಇದ್ದೊಬ್ಬ ಮಗಳು ಮದುವೆಯಾದರೆ ಸಾಕು ಎಂದು ಅವಳ ಒಪ್ಪಿಗೆಗೂ ಕಾಯದೆ ತಾಳಿ ಬಿಗಿಸಿದ್ದರು,ಆದರೆ ಅದೇಕೋ ಕೊನೆ ಸಮಯಕ್ಕೆ ಸೈಟನ್ನು ಮಗಳ ಹೆಸರಿಗೆ ಮಾಡಿದ್ದರು ,ಅಲ್ಲಿಂದ ಆಕೆಯ ನರಕ ಯಾತನೆ ಶುರುವಾಯ್ತು,ಮದುವೆಯಾದ ಎರಡೇ ದಿನಕ್ಕೆ ದರ್ಪ ದಬ್ಬಾಳಿಕೆ ಶುರುವಾಯ್ತು,ಇದೆಲ್ಲಾ ಸಹಿಸಿಯೇ ಇರದಿದ್ದ ಆಕೆ ಎರಡೆ ತಿಂಗಳಿಗೆ ಕಡ್ದಿಯಾಗಿದ್ದಳು,ಈಗ ಹೊಸದೊಂದು ವರಾತ ಶುರುವಾಗಿತ್ತು ಅವರತ್ತೆ ಮಾವನದ್ದು, "ಬೇಗ ಮಗು ಬೇಕು, ನಿನಗೆಲ್ಲಿ ಮಗು ಆಗುತ್ತೆ,ಕಡ್ಡಿ ತರಾ ಇದ್ದೀಯ"

ಒಂದು ದಿನ ರಾತ್ರೋ ರಾತ್ರಿ ಆಟೋದಲ್ಲಿ ನಮ್ಮನೆಗೆ ಓಡಿ  ಬಂದಿದ್ದಳು, ನನಗೋ ಗಾಭರಿ ,ಒಳ ಬಂದವಳೇ ತೆಕ್ಕೆ ಬಿದ್ದು ಅತ್ತಳು,ಏನಾಯ್ತೇ ಅಂದದ್ದಕ್ಕೆ ಉಟ್ಟ  ಬಟ್ಟೆಯನ್ನೆಲ್ಲ ಕಿತ್ತು ಬಿಸಾಕಿ ನಿಂತಳು, ಮೈ ತುಂಬಾ ರಕ್ತ ಬರುವಂತೆ ಕಚ್ಚಿದ್ದ ಸುಟ್ಟ ಗುರುತುಗಳು,ತೊಡೆಗಳಲ್ಲಿ  ರಕ್ತ ಇಳಿಯುತ್ತಿತ್ತು,ಸೀದಾ ಹತ್ತಿರವಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋದೆ ,ಮೊದಲು ಅಡ್ಮಿಟ್ ಮಾಡಲು ಹಿಂಜರಿದರೂ ,ನನ್ನ  ಪರಿಚಯದ ಮೇಲೆ ಆಕೆಗೆ ಪ್ರಥಮ ಚಿಕಿತ್ಸೆ ಕೊಟ್ಟರು,"ನಿನ್ನ ಗಂಡನಾ ರಾಕ್ಷಸನಾ ? ಅದು ಮೊದಲ ಬಾರಿ ಹೆಂಗೆ ನಡ್ಕೋಬೆಕು ಅಂತ ಗೊತ್ತಿಲ್ವಾ , ಅವನೇನಾದರು ನನ್ನ ಕೈಗೆ ಸಿಗಬೇಕು" ಅಂತ ಅವಳ ಗಾಯಗಳನ್ನ ತೊಳೀತಿದ್ದ ನರಸಮ್ಮ ಹೇಳಿದ್ದು ನಂಗೆ ಚೆನ್ನಾಗಿ ನೆನಪಿದೆ, ಮರುದಿನ ನಾನೇ ಅವಳ ಮನೆಗೆ ಹೋಗಿ ಬಿಟ್ಟು ಬಂದೆ,ಏನು ಹೇಳಲು ಅವಳು ಬಿಡಲಿಲ್ಲ, ಈಗ ಹದಿನೈದು ದಿನವಾಯ್ತು ನಾವು ಅಲ್ಲಿಂದ ಮನೆ ಬದಲಾಯಿಸಿ ಈ ಏರಿಯಾ ಬಂದು,ಅಷ್ಟರಲ್ಲಿ ಮತ್ತೇನು ಎಂದು ಅರಿವಾಗಲಿಲ್ಲ ..

ಆಸ್ಪತ್ರೆಯ ಹೊರಹೋದೆ, ಅಲ್ಲೆ ಇದ್ದಳು,ಅಳುಮುಖ ಹೊತ್ತ ಆಕೆ"ಅಕ್ಕಾ ನಾ ಬದುಕೋದಿಲ್ಲ ನನ್ನ ಸಾಯ್ಸಿ ಬಿಡ್ತಾರೆ,ಇವತ್ತು ಮಗು ಬೇಕು ಅನ್ನೋ ಸಲುವಾಗೇ ನನ್ನ ಹೊರ ಹಾಕಿದರು ಇಡಿ ರಾತ್ರಿ,ಸರಿ ಊಟ  ತಿಂಡಿ ಕೊಡ್ತಾ ಇಲ್ಲ ಏನ್ ಮಾಡೊದು,ಮಾತೆತ್ತಿದ್ರೆ ಅತ್ತೆ ನಾನ್ ದುಡಿತೀನಿ ನಿನ್ ಮನೆ ಕೆಲಸ ಮಾಡ್ಕೊಂಡಿರು,ಅವನು ದುಡಿದಿದ್ರೇನಾಯ್ತು,ನಿಮ್ಮಪ್ಪ ಮಾಡಿರೋ ಸೈಟು  ಅವಂದೆ  ಆಲ್ವಾ,ಮೊಮ್ಮಗು ಬೇಕೇ ಬೇಕು ಈ ವರ್ಷಾನೇ, ಅಂತಾರೆ,ಇವನು ರಾಕ್ಷಸನ ಹಾಗೆ ಮೈ ಮೇಲೆ ಬರ್ತಾನೆ,ಅಪ್ಪ ಅಮ್ಮ ಇದೆಲ್ಲಾ ಮಗು ಆದ್ರೆ ಸರಿ ಆಗುತ್ತೆ ಹೋಗ್ ತೋರ್ಸು ಅಂತಿದ್ದಾರೆ ,ಅದ್ಕೆ ಬಂದೆ" ಅಂದಳು. 

ಸರಿ ಅಂತ ನನ್ನ ಖರ್ಚಿನಲ್ಲಿ ಅವಳ ಚಿಕಿತ್ಸೆಗೆ ಮುಂದಾದೆ, ವೈದ್ಯರು ಅವಳಿಗೆ ಎಲ್ಲ ರೀತಿಯ ಟೆಸ್ಟ್ ಬರೆದುಕೊಟ್ಟರು, ಆಕೆಗೆ ಹಿಮೋಗ್ಲೋಬಿನ್ ಕೊರತೆ ಮತ್ತು ಗರ್ಭಕೋಶದ ಬೆಳವಣಿಗೆಯ ಕೊರತೆ ಅಂತ ರಿಪೋರ್ಟ್ ಬಂತು, ಅದನ್ನ ಮನೆಯವರಿಗೆ ತೋರಿಸಲಿ ಹೇಗೆ ಅನ್ನೋದು ಅವಳ ಅಳಲು, ನಾನು ಗಂಡನನ್ನು ಕೂಡ ಟೆಸ್ಟ್ಗೆ ಕರೆದುಕೊಂಡು ಬರಲು ಸಲಹೆ ನೀಡಿದೆ,ಅದು ಅವಳಿಂದ ಅಸಾಧ್ಯ ಅನ್ನೋದು ನನಗು ಗೊತ್ತಿತ್ತು , ನನಗೀಗ ಉಳಿದದ್ದು ಒಂದೇ ದಾರಿ ಅವಳ ಮನೆಯವರ ಹತ್ತಿರ ಮಾತಾಡುವುದು, ಮತ್ತು ತಂದೆ ತಾಯಿಗಳ ಹತ್ತಿರ ಹೇಳುವುದು, ಆಕೆಯ ಅಣ್ಣ‌ ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ, ಅವನನ್ನು ಸಂಪರ್ಕಿಸಲು ಪ್ರಯತ್ನಿಸಿದೆ, ಅವನು ನನ್ನ ಮಾತುಗಳನ್ನು ನಂಬಲು ಸಿಧ್ಧನಿರಲಿಲ್ಲ, ಹಾಗೇನಾದರು ಇದ್ದರೆ ಅವಳು ನನ್ನ ಹತ್ತಿರ ಹೇಳ್ತಿದ್ದಳು, ಅಂತ ವಾದಿಸಿದನೆ ಹೊರತು ಬೇರೆ ಮಾತಾಡಲಿಲ್ಲ

ಆಕೆಯ ಚಿಕಿತ್ಸೆ ನಡೆಯುತ್ತಿತ್ತು, ಅದನ್ನ ಅವಳು ಗಂಡನ ಮನೆಯವರೆದುರು ಮುಚ್ಚಿಟ್ಟಿದ್ದಳು, ಒಂದು ನಾಲ್ಕು ತಿಂಗಳ ನಂತರ ಗರ್ಭ ನಿಂತ ಸುದ್ದಿ ಬಂತು, ಆಗಾಗ ಭೇಟಿಯಾಗುತ್ತಿದ್ದೆ , ಗಂಡನ ಮನೆಯವರ ಸುದ್ದಿಯನ್ನು ಆಕೆಯ ತೊಂದರೆಗಳನ್ನು ಬಚ್ಚಿಡುತ್ತಿದ್ದುದು  ಸ್ಪಷ್ಟವಾಗಿ ತಿಳಿಯುತ್ತಿತ್ತು, ನಾಲ್ಕೆ ತಿಂಗಳು, ಬಸಿರಿಳಿಯಿತು, ಮತ್ತೆ ಚಿಕಿತ್ಸೆ ಮುಂದುವರೆಸಿದರು ನಮ್ಮ ಡಾಕ್ಟರು, ಮತ್ತೊಮ್ಮೆ ಹಾಗೆ ಆದಾಗ, ನನಗೆ ಕರೆದರು, ನನ್ನ ಹತ್ತಿರ ಹೇಳಿದರು, ಅದು ಬಲಿಯುತ್ತಿರುವ ಗರ್ಭಕೋಶ, ಇದೇ ತರ ಆಗುತ್ತಿದ್ದರೆ ಮುಂದೆ ಗರ್ಭ ಕಟ್ಟದೆ ಇರುವ ಸಾಧ್ಯತೆ ಕೂಡ ಇದೆ ಎಂದರು, ಮತ್ತು ಆಕೆಗೆ ಬೇರೆ ಮಾನಸಿಕ ಕಾಯಿಲೆ ಇರಬಹುದಾದ ಸಂಶಯ ಕೂಡ ವ್ಯಕ್ತ ಪಡಿಸಿ, ಒಬ್ಬ ಪ್ರಸಿದ್ಧ ಹೋಮಿಯೋಪಥಿ ಡಾಕ್ಟರ್ ಮತ್ತು ಮನೋತಜ್ಞರಿಗೆ ಭೇಟಿಮಾಡಲು ಬರೆದು ಕೊಟ್ಟರು.

ಅವಳನ್ನು ಕರೆದುಕೊಂಡು ಹೇಳಿದ ಕಡೆಗೆ ಹೋದೆ, ಎಷ್ಟು ಚಂದದ ಹುಡುಗಿ ಹಿಂಡಿದ ಕಬ್ಬಿನಂತೆ ಬಿಳಚಿದ್ದಳು, ಹೋಮಿಯೋಪಥಿ ಅವಳಿಗೆ ಒಗ್ಗಿತು, ಆದರೂ ಮತ್ತೊಮ್ಮೆ ಗರ್ಭಪಾತವಾದಾಗ ನನಗೆ ಸಹನೆಗೆಟ್ಟಿತು.

ಮಾನಸಿಕ ತಜ್ಞರು ನನ್ನೊಡನೆ ಕೆಲ ವಿಷಯ ಹಂಚಿಕೊಳ್ಳಲು ಕರೆದಿದ್ದರು,ಉಭಯ ಕುಶಲೋಪರಿಯ ನಂತರ ನಿಮಗೆ ಆಕೆ ಎಷ್ಟು ವರುಷದ ಪರಿಚಯ ಅಂತ ಪ್ರಶ್ನಿಸಿದರು, ನಾನು ಹೇಳಿದೆ, ಅವರು " ನೀವಾಕೆಗೆ ಮೊದಲೆ ಪರಿಚಯವಾಗಿದ್ದರೆ ಒಳ್ಳೆಯದಿತ್ತು, ಅವಳ ಮದುವೆ ಈ ಗರ್ಭಪಾತ ಎರಡೂ ತಪ್ಪಿಸಬಹುದಿತ್ತು  ಮೊದಲನೆಯದು ಆಕೆಗೆ ಓದಿನ ಹಂಬಲ, ಎರಡನೆಯದು ಆಕೆ ಇನ್ನು ಗಂಡನನ್ನು ಒಪ್ಪಿಕೊಂಡಿಲ್ಲ,  ಗರ್ಭಕೋಶದ ಬೆಳವಣಿಗೆಗೆ ಕೊಟ್ಟ ಔಷಧ ಪ್ರಯೋಜನ ಆದರು ಆಕೆಗೆ ಅದು ಇಷ್ಟ ಇಲ್ಲದ ಕಾರಣಕ್ಕೆ ಗಂಡನ ಅತಿರೇಕದ ವರ್ತನೆ ಮನೆಯವರ ನಡವಳಿಕೆ ಗರ್ಭಪಾತಕ್ಕೆ ನೇರ ಕಾರಣ"  ನನಗೆ ಶಾಕ್ ಆಯಿತು, ಹೌದಲ್ಲ, ಆಕೆಗೆ ನಾನು ಕೊಡಿಸಬೇಕಾದದ್ದು ಬೇರೆಯದೆ ಚಿಕಿತ್ಸೆ ಅನ್ನಿಸಿತು, ಡಾಕ್ಟರ್ ಹತ್ತಿರ ಮಾತಾಡಿ ಅದನ್ನು ತಿಳಿಸಿದೆ, ಒಪ್ಪಿದ ಅವರು" ನಿಮ್ಮ ಗೆಳೆತನದ ಮೇಲಿನ ನಂಬಿಕೆಗೆ ಈ ಕೆಲಸ ಮಾಡಿಕೊಡುತ್ತೇನೆ" ಎಂದರು. 

ಈ ಮಾತಿಗೆ ಈಗ ಮೂರು ವರ್ಷ, ಮೊನ್ನೆ ಮೊನ್ನೆತನಕ ನಾನು ಬರೋಬ್ಬರಿ ಎರಡು ವರ್ಷ ಆಕೆಯನ್ನು ಭೇಟಿಯಾಗಿರಲಿಲ್ಲ, ಯಾವುದೋ ಕಂಪನಿಗೆ ಅಪ್ಲೈ ಮಾಡಿದ್ದೆ ಕೆಲಸಕ್ಕೆ, ಅಲ್ಲಿ ಸಂದರ್ಶನಕ್ಕೆ ಕರೆ ಬಂದಿತ್ತು, ಹೋದಾಗ ಭೆಟ್ಟಿಯಾಯಿತು, ಅದೆಷ್ಟು ಖುಷಿಯಾಯಿತೆಂದರೆ ನಿಮಗೆ ಹೇಳಲಾರೆ..

ಆಕೆಗೆ ನಾನು ಕೊಡಿಸಿದ್ದು ಆರು ತಿಂಗಳ ಆತ್ಮವಿಶ್ವಾಸದ ಮತ್ತು ನಿರ್ಧಾರ ತೆಗೆದುಕೊಳ್ಳುವ ಆಪ್ತ ಸಲಹೆ, ಮನೆಯವರನ್ನು ಒಪ್ಪಿಸಿ ಮದುವೆಯಿಂದ ಆದ ತೊಂದರೆಯನ್ನು ವಿವರಿಸಿ ಮತ್ತೆ ಹೊಸ ಬದುಕಿಗೆ ಮರಳುವ ಭರವಸೆ, ಕೆಲಸದಲ್ಲಿದ್ದೆ ಓದುತ್ತಿರುವ ಆಕೆ ನನ್ನ ಪ್ರತಿಬಿಂಬದಂತೆ ಕಂಡದ್ದು ಸುಳ್ಳಲ್ಲ, ಆದರೂ ಸಮಾಜದ ನೀತಿಗಳಲ್ಲಿ ಆಸರೆಯಿರದೆ ಕಳೆದೆ ಹೋಗುವ ಹೆಣ್ಣುಗಳ ಸಂಖ್ಯೆ ನನಗೆ ಗಾಭರಿ ಹುಟ್ಟಿಸುತ್ತದೆ, ಅತಂತ್ರ ಸ್ಥಿತಿಯಲ್ಲಿ ಬದುಕುವ ಅವರನ್ನು ತಲುಪಲಾಗದ ನಮ್ಮ ಅಸಹಾಯಕತೆಯ ಬಗ್ಗೆ ಜಿಗುಪ್ಸೆಯೂ,  ಕೊನೆಗೂ ಪ್ರಶ್ನೆಗಳೆಷ್ಟೋ ಉತ್ತರವಿರದೆ ಜಡಪಡಿಸುತ್ತವೆ.. 








4 comments:

  1. ನಮ್ಮ ಸುತ್ತ ಮುತ್ತ ನಡೆಯುವ ನೈಜ ಘಟನೆಗಳಿಗೆ ಬಹಳ ಹತ್ತಿರವಾದ ಪಾತ್ರಗಳು ಅನ್ಸುತ್ತೆ, ಸನ್ನಿವೇಶದ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ. ಓದಿದರೆ ಮನಸು ಭಾರವಾಗುತ್ತದೆ.

    ReplyDelete
  2. hi madam,

    If you dont mind can i re publish your articles in http://kannada.mylifemystory.in/. can you please confirm with mail to mylifemystory.in@gmail.com

    ReplyDelete