ನಟ್ಟನಡು ರಾತ್ರಿಯಲಿ
ಚಂದಿರನ ಮೀರಿಸುವ ಬೆಳಕೊಂದು ಬಂತು
ನನ್ನೆದೆಯ ಮಂದಿರದಿ
ತುಂಬಿದ್ದ ಕತ್ತಲ
ಸರಿಸಿತ್ತು
ಈ ಬೆಳಕಿನಾ ತಂತು..
"ಅವನ್ಯಾರು ಆ ದಡದಲ್ಲಿ,ಯಮುನೆಯತಿಳಿನೀರಲ್ಲಿ ಅವನ ಬಿಂಬ ಕಾಣದಲ್ಲ..ಕೈಯ ತೋಳ ಚಾಚಿ ಕರೆಯುವ ಭುವಿಯ ಚಂದ್ರಮ..ನಾನು ಧಾವಿಸಿದೆ..ಉಟ್ಟ ಉಡುಗೆ ಜಾರಿತ್ತು..ನನ್ನಿರವು ಮಾಸಿತ್ತು..ಹತ್ತಿರ ಹೋಗಿ ನಿಂತೆ.."ನೋಡು ನನ್ನ ಮೊಗವನ್ನು..ನಾ ಸುಂದರಿ ಅಲ್ಲವೆ?" ಅವ ನಕ್ಕ.."ನಿನ್ನ ದೇಹದ ಅರಿವ ಮೀರಿ ನಿಲ್ಲು..ನೀ ಎಂದಿಗು ಸುಂದರಿಯೇ"
ಮತ್ತೆ ಮಾತಾಡಲು ಅವನಿಲ್ಲ..ಅವನಿದ್ದ ತಾವಲ್ಲಿ ಅರಳಿವೆ ನೂರು ಬಣ್ಣದ ಹೂಗಳು"
ಬೆಚ್ಚಿ ಬಿದ್ದು ಎದ್ದು ಕೂತೆ..ಇದೆಂಥಾ ಕನಸು??ಮರುಳು ಮನಸಿನ ಕಲ್ಪನೆಯೆ?? ಕಂಡದ್ದು ಕನಸೆ ಆದರು ಅದಕ್ಕೊಂದು ಸೊಗವಿತ್ತು..ಕಣ್ಣ ಉಜ್ಜಿ ಸುತ್ತ ನೋಡಿದೆ..ಸಮಯ ಎಷ್ಟಿರಬಹುದು?? ರಾತ್ರಿಯ ಮೂರನೆ ಯಾಮ..ಅಂದರೆ ಬೆಳಗಾಗಲು ಬಹಳಷ್ಟು ಸಮಯವಿದೆ..ಇಂದು ಬೇಗ ಹೋಗಬೇಕು ನಂದನ ಅರಮನೆಗೆ..ಬಸುರಿಯರಲ್ಲವೇ ಇಬ್ಬರೂ ರಾಣಿಯರು..ದಿನ ತುಂಬುತ್ತಿದೆ.."ನನಗೆ ಚಂದನವ ತರುವೆಯೇನು..ನೀನೆ ಪೂಸಿ ಕೊಡುವೆ ಏನು?
ಯಾಕೋ ಬೆನ್ನ ಹುರಿಯೆಲ್ಲ ನೋವು,ಬುವಿ ಭಾರವೆಲ್ಲ ನಾನೆ ಹೊತ್ತಂತೆ" ನಿನ್ನೆ ಅಳಲಿದ್ದಳು ರಾಣಿ ಯಶೋಧಾ,ವಸುದೇವನ ರೋಹಿಣಿ ಬಿಳಚಿದ್ದಳು, ಗಂಡನ ದುಸ್ಥಿತಿಗಾಗಿ ಮರುಗಿದ್ದವಳಿಗೆ, ತನ್ನ ಒಡಲಲ್ಲಿ ಚಿಗುರುತ್ತಿರುವ ಮಗುವಿನ ಆಗಮನ ವಸಂತನ ಸಮನಾಗಿತ್ತು, ಸರಳೆಯು ಸುಂದರಿಯು ಆದ ಆಕೆಯ ಮೊಗದಲ್ಲಿ ನೂರು ತಾರೆಯರ ಹೊಳಪು, ಆದರೆ ತನಗೆಂತ ಮೋಹ, ಹುಟ್ಟಲಿರುವ ಮಗುವಿನ ಬಗ್ಗೆ ತಾಯಂದಿರೂ ಕನಸುತ್ತಾರೋ ಇಲ್ಲವೋ ತನಗಂತೂ ದಿನಾ ಅದೇ ಕನಸು, ಆ ಮಗುವಿನ ಮುದ್ದು ಮುಖ ನೋಡುವ ಎತ್ತುವ ಮುದ್ದಾಡುವ ಬಯಕೆ, ಅದರ ಗಂಧ ಹೊತ್ತ ಗಾಳಿಯ ಪುಲಕವನ್ನ, ಸಂಗೀತ ಸದೃಶ ಅಳುವನ್ನ ಕೇಳುವಾಸೆ, ಮುಕ್ತಿಗಾಗಿ ಕಾದ ತಾಪಸಿಯಂತೆ ಮಗುವಿನ ಬರವಿಗೇಕೆ ತಾನು ಕಾಯುತ್ತಿರುವೆ?
ಎದ್ದು ಕೂತೆ, ದೂರದಲ್ಲಿ ಕುಕ್ಕುಟನ ಕರೆ, ಅರುಣ ಅದಷ್ಟೆ ಬಾನ ದಾರಿಯನ್ನು ಅರ್ಕನ ಆಗಮನಕ್ಕೆ ಸಜ್ಜುಗೊಳಿಸುತಿರುವನು, ದನದ ಅಂಬಾ ಕೂಗು, ಹಕ್ಕಿಗಳ ಕಲರವ, ಜತೆಜತೆಗೆ ಯಮುನೆಯ ನಿನಾದ, ಮುನಿಗಳ ವೇಧಸುಧೆ, ಹೌದಲ್ಲ ಸಾಂದೀಪನಿಗಳ ಆಶ್ರಮದಲ್ಲಿ ವೇದಪಾಠ ಆಗಲೆ ಶುರುವಾದಂತಿದೆ, ದಡಬಡಿಸಿ ಯಮುನೆಯ ಕಡೆಗೋಡಿದೆ, ಸ್ನಾನಾದಿಗಳೆಲ್ಲ ಮುಗಿಸಿ ಮನೆಗೆ ಕಾಲಿಟ್ಟಾಗ ಬೆಳಕು ಬೆಟ್ಟದ ತಿರುವಿನಲ್ಲಿ ಮಾಯಾಲೋಕ ರಚಿಸಿತ್ತು. ಆ ನಿಯಾಮಕನನ್ನು ನೆನೆಯುತ್ತಾ ಚಂದನ ಗಂಧವನ್ನು ತೇಯಲಾರಂಭಿಸಿದೆ...
(ಮುಂದುವರೆಯುವುದು)
Lovely.....
ReplyDeleteWud prefer sometimes in english too
ReplyDeleteಮಸ್ತ್ :) ಹಿಂಗಿಂಗೇ ಬರ್ಯವು ನಾನೂವಾ, ಒಂದಿನ ಬರೀತಿ. :)
ReplyDeleteಮಸ್ತ್ :) ಹಿಂಗಿಂಗೇ ಬರ್ಯವು ನಾನೂವಾ, ಒಂದಿನ ಬರೀತಿ. :)
ReplyDeleteಇದೆಲ್ಲ ಯಾವ್ ಮಹಾ.ಬರಿಲಕ್ಕು ತಗಾ ಶರತ, ಬರ್ತಿರು ಹಿಂಗೆ
Deleteಇದೆಲ್ಲ ಯಾವ್ ಮಹಾ.ಬರಿಲಕ್ಕು ತಗಾ ಶರತ, ಬರ್ತಿರು ಹಿಂಗೆ
Deleteಮೊದಲ ಭಾಗವು ಮನಮೋಹಕವಾಗಿದೆ.
ReplyDeleteಉಳಿದ ಧಾರವಾಹಿಯನ್ನೂ ಕಂತುಗಳಲ್ಲೇ ಓದುವೆ.