Tuesday, October 16, 2012

ಪ್ರೇಮ ಎಂದರೆ...

ಅವಳ ಕಣ್ಣುಗಳಲ್ಲಿ ಕಾಂತಿ ಇಲ್ಲ ಈ ದಿನ..ನಾನು ಅರ್ಥೈಸಿದ ಪ್ರಕಾರ ಯಾವಾಗಲೂ ಹಸನ್ಮುಖಿ,ಮಂದದನಿಯ ಮಾತುಗಾತಿ ನನ್ನೀ ಗೆಳತಿ..ಅವಳನ್ನ ಪೂರ್ತಿ ಅಲ್ಲದಿದ್ದರೂ ಮುಕ್ಕಾಲಾದರೂ ಅರ್ಥೈಸಿಕೊಂಡಿದ್ದೇನೆ ಇಷ್ಟು ದಿನದ ಸಾಂಗತ್ಯದಲ್ಲಿ ಅನ್ನೋದು ನನ್ನ ಬಲವಾದ ನಂಬಿಕೆ...ಕೆಲಸದ ಒತ್ತಡದಲ್ಲಿ ಮಧ್ಯಾಹ್ನದ ತನಕ ಮಾತಾಡಲಿಲ್ಲ...ಊಟದ ಸಮಯ ಅಂದರೆ ನಮಗೆ ಹಂಚಿಕೊಳ್ಳುವ ಸಮಯ..ತಂದ ಊಟದೊಂದಿಗೆ ನೂರಾರು ವಿಷಯಗಳ ಚರ್ಚೆ ತುಂಬಾ ಸಾಮಾನ್ಯ..ಆದರೆ ಈ ದಿನ ಆಕೆ ಮಹಾ ಮೌನಿ..ನನ್ಗೋ ಕೇಳಬೇಕೇನು ತಿಳಿಯುತ್ತಲಿಲ್ಲ,ಎಲ್ಲಾ ತಿಳಿದೂ ಮತ್ತೆ ಹೇಳು ಅನ್ನಲೇ..ಕೇಳದೇ ಸುಮ್ಮನೆ ಉಳಿದು ಬಿಡಲೇ..ಕೊನೆಗೂ ಕೇಳಲೆಬೇಕು ಅಂತ ನಿರ್ಧರಿಸಿದೆ...
"ಯಾಕೆ ಮಂಕಾಗಿದೀಯ ಕಣೇ ಹೇಳು" ನನ್ನ ಪ್ರಶ್ನೆಗೆ ಕಾದಿದ್ದಂತೆ ಕಣ್ಣ ಅಂಚಿನಲ್ಲಿ ಕಂಡ ಬಿಂದುವನ್ನು ಒರೆಸಿ ಹೇಳಿದ್ದು ಇಷ್ಟು.."ನಿಂಗೇ ಗೊತ್ತಲ್ಲಾ ಮತ್ತೆ ಜಗಳ ಮನೆಯಲ್ಲಿ,ನಾನು ಇಲ್ಲಿಂದ ದುಡಿದು ಸಾಕಾಗಿ ಹೋಗಿರ್ತೀನಿ,ಒಂದು ಮಾತಿಲ್ಲ ಕತೆ ಇಲ್ಲ..ಟೀವಿ ನೋಡ್ತಾ ಕುತಿರೋರು ಏಳೊದಿರಲಿ,ಬಂದ್ಯಾ?ಹೇಗಿತ್ತು ಕೆಲಸ ಅಂತ ಕೇಳೊದಿಲ್ಲ,ಮಾತಾಡಿದರೂ ಸಾಕು ಬರೀ ಕೊಂಕುಗಳೆ,ಜೀವನಾನೇ ಬೇಸರ ಕಣೆ..ನೀ ಏನೇ ಹೇಳು..ಒಂಟಿ ಜೀವನಾನೆ ಎಷ್ಟೋ ಪರವಾಗಿಲ್ಲ,ನಂಗೆ ಅವರ ಆಸರೆ ಅಥವಾ ದೈಹಿಕ ಪ್ರೀತಿ ಬೇಕಾಗಿಲ್ಲ ನಾನು ಆ ಮಟ್ಟವನ್ನ ಯಾವತ್ತೋ ದಾಟಿದ್ದೀನಿ,ಆದರೆ ಇಷ್ಟು ವರ್ಷದ ಸಾಂಗತ್ಯ ಒಂದು ಮಾತು ಒಂದು ಕಾಳಜಿ ಅದಕ್ಕೂ ನಾನು ಬೇಡವಾದವಳಾ?"
ನನಗೆ ಮಾತಾಡಲಾಗಲಿಲ್ಲ..ಏನಂತ ಹೇಳಲಿ..ಎಲ್ಲರದ್ದು ಇದೇ ಸಮಸ್ಯೆ ಅನ್ನಲೇ..ನಾನು ನಿನ್ನಂತೆ ಕಣೇ ಅನ್ನಲೇ..ಭಾವನೆಗಳೇ ಇಲ್ಲದ ಜೀವನದಲ್ಲಿ ಎಲ್ಲಿಂದ ತರಬಹುದು ಭಾವಗಳನ್ನ..ಸಮಯದ ಪರಿಧಿಯಲ್ಲಿ ದಾಂಪತ್ಯ ಯಾಕೆ ರಸರಹಿತ ಆಗುತ್ತೆ..ನಮ್ಮ ಹೆಣ್ಣು ಮನಸೇ ಹಾಗೆ..ಒಂದು ಭರವಸೆಯೊಂದಿಗೆ ಇಡೀ ಬದುಕನ್ನ ಕಳೆಯಬಲ್ಲದು..ಇಂದಲ್ಲ ನಾಳೆ ಹೊಸಾ ಬೆಳಕಿಗಾಗಿ ಕಾಯುತ್ತಾ ,ನಮ್ಮನ್ನ ನಮ್ಮ ಮನಸನ್ನ ಅರ್ಥ ಮಾಡಿಕೊಲ್ಲುವ ಆ ಪ್ರಕ್ರಿಯೆಗಾಗಿ ಕಾಯುತ್ತಾ..ಆದರೆ ಅದು ಅರ್ಥ ಆಗುವದಾದರೂ ಹೇಗೆ ನಮ್ಮ ಸಂಗಾತಿಗೆ? ಯಾಕೆ ಒಂದು ಪ್ರೇಮ ಬದುಕಿನ ಮೂಸೆಯಲ್ಲಿ ಬಂಗಾರವಾಗುವ ಬದಲು,ನಮ್ಮ ದೌರ್ಬಲ್ಯ,ಶಕ್ತಿಗಳು ಒಪ್ಪಿಗೆ ಆಗುವ ಬದಲು, ನಗೆಪಾಟಲಾಗುತ್ತವೆ? ಸದರ ಇರಬೇಕು ಆದರೆ ಅದು ಮಿತಿಯನ್ನ ದಾಟಬಾರದು..ಹತ್ತು ಹೊಡೆತಗಳ ನೋವನ್ನು ಸಹಿಸಬಹುದೇನೋ ಆದರೆ ಮಾತಿನ ಇರಿತ..ನಿಂತಲ್ಲಿಯೇ ನಮ್ಮನ್ನ ಜೀವಂತ ಸಮಾಧಿ ಮಾಡುತ್ತದೆ..

ಪ್ರೇಮ ದಾಂಪತ್ಯ ಅಂದರೆ ಅದೊಂದು ಮಹಾಯಾನ...ಕೈ ಹಿಡಿದು ಜೊತೆ ಜೊತೆಗೆ ಸಾಗುವ..ನಂಬಿಕೆ ದೋಣಿಯ ಪಯಣ..ನಂಬಿಕೆಯ ತಳವಿಲ್ಲದ ದೋಣಿ ಸಾಗೀತು ಎಷ್ಟು ದೂರ??ತಾಳ್ಮೆ,ಅರ್ಥೈಸಿಕೊಳ್ಳುವಿಕೆಯ ಹುಟ್ಟುಗಳು ನಿರಂತರ ನಮ್ಮನ್ನ ದಡದತ್ತ ತಳ್ಳುತ್ತವೆ..ಭಾವಗಳ ಜೊತೆ ಬೇಕು..ಹಾಗೆ ರಸಗಳ ಸುಂದರ ನೋಟವೂ ಬೇಕು..ಯಾಕೆಂದರೆ ನಾವೆಲ್ಲ ಬರೀ ಮನುಷ್ಯರು ಕಣ್ರೀ..ಒಂದು ನಿರಂತರ ಆಸಕ್ತಿ ಒಂದು ನಿರಂತರ ನಿಶ್ಚಲ ಪ್ರೇಮದ ಒರತೆ ಎದೆಯಲ್ಲಿರಬೇಕು..ಬದುಕಿಗೆ ಹಣ ಬೇಕೇ ಬೇಕು..ಆದರೆ ಹಣವೊಂದೇ ಜೀವನ ಅಲ್ಲ..ಸರಿಯಾದ ಸಾಂಗತ್ಯ ಇಲ್ಲದ ಜೀವನ ಎಂದಿಗೂ ಸಾರ್ಥಕ ಆಗಲಾರದು..ನಾವೇನೂ ದೊಡ್ ತ್ಯಾಗ ಮಾಡಬೇಕಿಲ್ಲ,ಚಿಕ್ಕ ಚಿಕ್ಕ ವಿಚಾರಗಳಿಗೆ ಗಮನ ಕೊಟ್ಟರೆ ಸಾಕು..ಬದುಕು ಬಂಗಾರವಾದೀತು..
"ಏಯ್,ನೀನ್ಯಾಕೆ ಮೌನ ಆಗಿಬಿಟ್ಟೆ ಯಾಕೆ ಏನಾಯ್ತು.." ಗೆಳತಿಯ ಕೈ ನನ್ನ ಕೆನ್ನೆ ಒರೆಸಿದಾಗ ನನಗೆ ಎಚ್ಚರವಾಯ್ತು...
ನಾತಿಚರಾಮಿ ಅಂತ ಾಯಿಮಾತಲ್ಲಿ ಹೇಳೋದಲ್ಲ ಹಾಗೆ ನಡೆದರೆ ನಮ್ಮ ಎಲ್ಲಾ ಸಂಪ್ರದಾಯಗಳಿಗೆ ಅದೆಷ್ಟು ಸುಂದರ ಚೌಕಟ್ಟು ಸಿಕ್ಕೀತು..ಅಂದು ಕೊಳ್ಳುತಾ..ಎದ್ದೆ..

Saturday, October 13, 2012

ಒಂದು ಕವನ ಗುಚ್ಛ

ಇಲ್ಲಿ ಕೆಲ ಪುಟ್ಟ ಪುಟ್ಟ ಕವನಗಳಿವೆ...ಕೆಲವು ಏಕಾಂತದಲ್ಲಿ ಕೆಲವು ಕೆಲಸದ ಒತ್ತಡದಲ್ಲಿದ್ದಾಗ ಬರೆದದ್ದು...ನಿಮಗೂ ಇಷ್ಟವಾದೀತು ಅನ್ನೋ ನಂಬಿಕೆ ನನ್ನದು...

ಇಬ್ಬನಿ
ಶಿಶಿರದ ರಾತ್ರಿಗಳಲ್ಲಿ
ತಣ್ಣಗೆ ಸುರಿವ ಚಳಿಗೆ
ವಸುಂಧರೆ ನಡುಗುತ್ತಾಳೆ

ಚಂದಿರನೂ ನನ್ನ ಸಂತೈಸುವ
ಬದಲು ವಿರಹದ ಶೀತಲ
ಕಿರಣಗಳ ಸುರಿದ
ಎಂದು ಅಳುತ್ತಾಳೆ

ಅವಳ ನೋವ ನೋಡಲಾಗದ
ಗೆಣೆಕಾರ ದಿನಕರ
ಚುಮು ಚುಮು ಬೆಳಗಿನ
ಬಿಸಿಲ ಅಪ್ಪುಗೆಯಲ್ಲಿ
ಒರೆಸುತ್ತಾನೆ ಅವಳ
ಕಂಬನಿ
ಮುಂಜಾವಿನ ಇಬ್ಬನಿ!!

ಪ್ರಶ್ನೋತ್ತರ(ನಾನು ಮತ್ತು ನನ್ನ ಝೆನ್ ಗುರು)
 ನಾ ಕೇಳಿದೆ "ಬೆಲೆಯೇನು?
ಅವ"ತಕ್ಕೊಂಡಿದ್ದೇನು ಇಲ್ಲ" 

’ನಾ ದೇವರ ನೋಡಬೇಕಿತ್ತು’

"ಮಾವಿನ ಮರವಾಗು" ಅಂದ

’ಕಣ್ಣಲ್ಲಿ ಬೆಳಕು ಯಾರದ್ದು”
ಉತ್ತರ "ಹೂಗಳು ಅರಳುವುದ ನೋಡು"

ನಾ ಹೇಳಿದೆ ’ನನ್ನ ಮೊತ್ತ ಸೊನ್ನೆ’
"ಮೊದಲು ಕೊಡುವುದ ಕಲಿ"

’ನಾ ಬೆಳಕಾಗಬೇಕು’
ಉತ್ತರ ಹೀಗಿತ್ತು
"ನಿಲ್ಲದ ಪಯಣಕ್ಕೆ ತಯಾರಾಗು"

ಮುತ್ತು
ನಲ್ಲ ...
ನಿನ್ನ ತುಟಿಗಳ ಅಂಚಿನಲ್ಲಿ
ಸುರಿವ ಮುಗ್ಧ ನಗೆಯ
ಮೋಡಿಯಲ್ಲಿ ಮರೆತರೆ
ಹೊತ್ತು
ಕಣ್ಣ ತುಂಬಿ ನಿನ್ನ 
ಬೀಳ್ಕೊಡುವಾಗ 
ಮರೆತೇ ಹೋದೇನು
ವಾಡಿಕೆಯ ಸಿಹಿ
ಮುತ್ತು!!

ಸಿಕ್ಕಿದ್ದು
ನಿನ್ನ ನೆನಪುಗಳ ಸಾಗರವ
ಸೋಸಿದಾಗ ಸಿಕ್ಕಿದ್ದು
ಬೊಗಸೆ ತುಂಬಾ ಕಣ್ಣ ಹನಿ 
ಎದೆಯ ತುಂಬಾ 
ಕವಿತೆಗಳ ಸಾಲು ಸಾಲು!!

ಆಫೀಸು ಮತ್ತು ನಾನು
ಈ ಮಧ್ಯಾಹ್ನದ ನೀರವ 
ಏಕಾಂತದಲ್ಲಿ
ಲೆಡ್ಜರು ರೆಸಿಪ್ಟು ಇನ್ವಾಯ್ಸುಗಳ
ಮಧ್ಯೆ ನನ್ನ ಧ್ವನಿ ಕಳಕೊಂಡಿದ್ದೇನೆ
ತಣ್ಣನೆಯ ಈ ಕೊಠಡಿಯಲ್ಲಿ
ಕುಳಿತು ಹೊರ ಜಗತ್ತಿನ
ಆಗುಹೋಗುಗಳ ನಿರುಕಿಸುವ 
ನಾನು ನಮ್ಮ ಆಫೀಸಿನ
ಗಡಿಯಾರಕ್ಕಿಂತ ಬೇರೆ ಅಲ್ಲ 
ಅನ್ನುವ ಸತ್ಯದ ಅರಿವಾದಂತೆ
ನನ್ನ ಕಳೆದು ಹೋದ ಭಾವಗಳ
ಬೆನ್ನು ಹತ್ತಿ ಒಮ್ಮೆ ಬೆವರಿದ್ದೇನೆ!!

ಉಳಿದದ್ದು 
ನಿನ್ನ ಒಲುಮೆಯ ಸಾಗರದ 
ಮೇಲೆ ತೇಲುವ ನನ್ನ 
ಭರವಸೆಯ ದೋಣಿಯನ್ನು
ಹುಸಿ ಆಣೆ ಪ್ರಮಾಣಗಳ 
ಬಿರುಗಾಳಿ ಮುಳುಗಿಸಿದೆ 
ಆದರೂ
ಮಾತೆಲ್ಲ ಮುಗಿದಿದೆ
ಒಲವೊಂದೆ ಉಳಿದಿದೆ!! 
 

 

Tuesday, October 9, 2012

ವಿದಾಯ

ನೀ ಮಾತು ಬಿಟ್ಟ  ಕ್ಷಣದಿಂದ
ನಾ ಮೌನಿಯಾದೆ
ನನ್ನ ಜಗತ್ತು ಸ್ತಬ್ಧವಾಯ್ತು
ಎನ್ನಲಾರೆ
ನಿನ್ನ ಮಾತು ನಿಂತ ಮರು ಗಳಿಗೆಯೆ
ಹೃದಯ ಅರಳಿತು
ಹೊಸಾ ಕನಸೊಂದು ಮರಳಿತು

ಈ ದಡದಿಂದ ಆ ದಡಕ್ಕೆ ಮತ್ತೆ ನಿಲ್ಲದ ಪಯಣ
ನಡುವೆ ಆಸೆಗಳ ಮಹಾಪೂರ
ನಿನ್ನ ಕಂಗಳಲ್ಲಿ ಸುಖದ ಕೈ ಹುಟ್ಟು
ಹುಡುಕುವಾಸೆ ಬಿಟ್ಟು ಬಿಟ್ಟಿದ್ದೇನೆ
ಕನಸ ದೋಣಿಯನ್ನೇರಿ ಒಂಟಿಯಾಗಿ
ದಿಗ್ವಿಜಯಕ್ಕೆ ಹೊರಟಿದ್ದೇನೆ

ಸಾಧ್ಯವಾದರೆ ಒಮ್ಮೆ ನಿಂತು ಹಾರೈಸಿಬಿಡು
ವರ್ತಮಾನದಿಂದ ಭವಿಷ್ಯಕ್ಕೆ ನಿನ್ನ ಕ್ರೂರ ನಡತೆಯ
ನೆನಪುಗಳ ಕೊಂಡೊಯ್ಯುವಾಸೆ ಇಲ್ಲ
 ಈಗ ನನ್ನಲ್ಲಿ ನಿನಗಾಗಿ ದ್ವೇಷ ಕೂಡ ಇಲ್ಲ

ನೀ ನನ್ನ  ಭೂತಕಾಲಕ್ಕೆ ಸೇರಿದವನಾದ್ದರಿಂದಲೇ
ಮಾತು ಬಿಟ್ಟ ಕ್ಷಣದಿಂದ
ಆಪ್ತನಾದೆ!!

Sunday, October 7, 2012

ಹಾಗೊಂದು ಝಲಕ್


ಈ ಕೆಂಪುದೀಪದ
ಬೀದಿಗಳಲ್ಲಿ
ನಾನು ದಿನಾಲೂ ಓಡಾಡುವೆ
ಬತ್ತಿದ ಪುಟ್ಟ ಕೈಗಳ
ಬಾಲಕಿ
ತನ್ನಿರವಿನ ಅರಿವಿಲ್ಲದೆ
ಅಮ್ಮನ
ಧಂಧೆ ನೋಡುತ್ತಾ
ತನ್ನಷ್ಟಕ್ಕೆ ಒಳ ಲಂಗಕ್ಕೆ
ಕೈ
ಹಾಕುವಾಗುಮ್ಮೆ ತಣ್ಣಗೆ
ಬೆಚ್ಚಿದ್ದೇನೆ,
ನನ್ನ ಕೈಗಳಲ್ಲಿದ್ದ ಟೀ
ಲೋಟಗಳಂತೆ
ಬಿಸಿ ಬಿಸಿ ಎಂದು ಬದುಕ
ಮಾರುವದನ್ನು
ಕಾಣುತ್ತಲೇ ಇರುವೆ
ತಂತಿ ಮೇಲಿದ್ದ
ಕಾಗೆ ಗುಬ್ಬಿಯನ್ನ ಕಚ್ಚದಿರುವುದ
ಕಂಡು ಬೆರಗಾಗುತ್ತೇನೆ,
ಅಲ್ಲಿ ನಗರದ ದೊಡ್ದ ಹೋಟೆಲುಗಳಲ್ಲಿ
ಗಂಡನಿಲ್ಲದ
ನೀರವ ಮಧ್ಯಾಹ್ನಗಳಲ್ಲಿ
ದೊಡ್ಡ ಕುಂಕುಮದ ಪತಿವ್ರತೆಯರು
ಕಾಮಸೂತ್ರದ ಜಾಹೀರಾತಿನ
ಹೆಂಗಳೆಯರಾಗುವುದು
ನಿಜವೇ? ಇಲ್ಲಿ
ಕೆಂಪು ದೀಪದಡಿಯಲ್ಲಿ
ನಿಂತು ಇನ್ನೂ
ಮೀಸೆ ಮೂಡದ ನನ್ನ
ಕಣ್ಣು ಮಿಟುಕಿಸಿ ಎದೆ
ತೆರೆಯುವ ಹೆಣ್ಗಳು
ಇದು ಬದುಕಿಗಾಗಷ್ಟೇ
ಎನ್ನುವ ನಿರಾಳತೆಯಲ್ಲಿದ್ದರೆ
ಗಂಡನೊಡನೆ ರಾತ್ರಿ
ಎದೆಯ ಗಾಯ
ಮುಚ್ಚಿಟ್ಟು
ಮಿಥುನದಲ್ಲಿ ತೊಡಗುವ
ದೊಡ್ಡ ಕುಂಕುಮದ
ಪತಿವ್ರತೆಯರಿಗೆ
ಯಾವುದರ ಚಿಂತೆ?

Saturday, October 6, 2012

ಒಮ್ಮೆ ಬಂದು ಬಿಡು...

ಹೀಗೆ ಏನೊಂದೂ ಕೇಳದೆ

 ಒಮ್ಮೆಲೇ ಬಂದು ಬಿಡು..

ನನ್ನ ಆಶ್ಚರ್ಯ ಸಂತಸ ತುಂಬಿದ

ಕಂಗಳಲ್ಲಿರುವ

ನಿನ್ನ ನೆನಪಿನದೊಂದು ಕಂಬನಿಯ

ನಿನ್ನ ತುಟಿಗಳಲ್ಲಿ ಒರೆಸಿಬಿಡು..

ನಿನಗಾಗಿ ಕಾದಿಟ್ಟ ಒಂದಿಷ್ಟು

ಕಾತರವಿದೆ

ಅದುರುವ ತುಟಿಗಳಲ್ಲಿ ಕೇವಲ

ನಿನ್ನ ಹೆಸರಿದೆ

ನೀನಿಲ್ಲದ ಈ ಕ್ಷಣ

ಈ ದಿನ ಶೂನ್ಯ

ನನ್ನ ಮನದಾಸೆಗಳ ಅರಿತೂ

ನಟಿಸುವೆ ಏಕೆ  ಅನ್ಯ??




Thursday, October 4, 2012

ಹೇಳು ಸಾಕಿ!!

ಸಾಕಿ,
ಭರೋ ಇನ್ ಆಂಕೋಮೆ ಫಿರ್ ಸೆ ವೊ ನಶಾ
ಜೈಸೆ ಇನ್ ಗಿಲಾಸೊಮೆ ಭರ್ ತಿ ಹೋ ತುಮ್ ಮಧು!
ಶಾಯದ್ ವೊ ನಹೀ ಆನೆವಾಲಾ ಆಜ್ ಭಿ
ಕೋಯಿ ಸಂದೇಸಾ ನಹಿ ಆಯಾ ಆಜ್ ಭಿ

ಕರೆ ಕೈಸೇ ಹರ್ ದಿನ್  ಐಸಾ ಇಂತಝಾರ್?
ಕುಛ್ ತೊ ಹಮೇ ಆಜ್ ಪೀನೆದೋ
ಟೂಟಾ ಹೈ ದಿಲ್ ಫಿರ್ ಇಕ್ ಬಾರ್

ಹಮಾರೆ ಜಾನ್  ಚೋಡ್ ಕರ್ ಸಬ್ ಕುಚ್ ಲೇಗಯಾ
ಇತನಿ ದರ್ದ್ ಪತ ನಹೀ ಕೈಸೇ ದೇಗಯಾ??

ಆಜ್ ಭಿ ಫೂಲ್ ಖಿಲಾ ಹೈ ಸಾಕಿ ಭಾಗೋಮೆ
ಲೇಕಿನ್ ಹಮಾರೆ ಪ್ಯಾರ್ ಕ್ಯೂಂ ಇತನಾ ಬಿಚಡ್ ಗಯಾ??

ಹಮ್ ತೊ ಉನ್ಹೇ ತನ್-ಮನ್ ದೇ ಬೈಠೇ ಥೇ

ಹರ್ ಇಶ್ಕ್ ಕಾ ಕ್ಯೂಂ ಐಸಾ ಅಂಜಾಮ್ ಹೋತಾ ಹೈ
ಪ್ಯಾರ್ ಮೆ ಬೋಲೊ ಏ ಖಯಾಮತ್ ಕೈಸಾ ಹೊತಾ ಹೈ

ಸಾಕಿ,ಭರೋ ಇನ್ ಗಿಲಾಸೋಮೆ, ಹಮೇ ಪೀನಾ ಹೈ ಜೀ ಭರ್ ಕೆ
ಖೋನಾ ಹೈ ಇಸ್ಕೆ ನಶೇ ಮೆ ದರ್ದ್ ಸೆಹನಾ ಹೈ ಮರ್ ಮರ್ ಕೆ!!

ಸಾಕಿ ,
ತುಂಬು ನನ್ನ ಮಧು ಪಾತ್ರೆಯನ್ನು
ಅವ ತುಂಬಿದಂತೆ ನನ್ನ ಕಂಗಳಲ್ಲಿ ಪ್ರೇಮದ ನಿಶೆಯನ್ನು!!

ಅವ ಬರಲೊಲ್ಲ ಸಾಕಿ,
ಇಂದೂ ಬರಲಿಲ್ಲ....

ಕಾದದ್ದೇ ಬಂತು ರಸ್ತೆಯೆಲ್ಲಾ ಕಣ್ಣಾಗಿ
ಹುಟ್ಟಿದ್ದು ತಪ್ಪೇ ಹೇಳು ಹೆಣ್ಣಾಗಿ??

ನಾನಿಂದು ಕುಡಿಯಬೇಕು, ಮೈ ಮನ ಮರೆಯಬೇಕು
ಆದರೂ...ಆತ ನೆನಪಾಗುವನಲ್ಲೇ??
ಮಾಡಲೇನೀಗ?
ಹೂಗಳು ಇಂದೂ ಅರಳಿವೆ ಎಂದಿನಂತೆ
ಹಕ್ಕಿಗಳ ಕಲರವವಿದೆ ಎಂದಿನಂತೆ
ನನಗೇನಾಗಿದೆ ನಾನೇಕಿಲ್ಲ ಮುಂಚಿನಂತೆ??

 ಮರದಂತೆ ನಾನೀಗ ಎಲ್ಲ ಕೊಟ್ಟು ಬಿಟ್ಟಿದ್ದೇನೆ
 ಹೂ ಕಾಯಿ ಹಣ್ಣು  ಎಲ್ಲಾ ಅವನದೇ
ಆದರು ಯಾಕೆ ನೆನಪಿಲ್ಲ ಹೇಳು ಅವನಿಗೆ??

ಪ್ರೇಮದಲ್ಲಿ ಈ ವಿರಹವೇಕೆ ಸಾಕಿ....

ತುಂಬು ನನ್ನ ಮಧು ಪಾತ್ರೆಯನ್ನು
ನಾನವನ ಮರೆಯ ಬೇಕು
ನೀ ನೀಡುವ ಮಧುವೆಲ್ಲ ಕುಡಿಯಬೇಕು!!




Saturday, September 29, 2012

ಹೀಗೊಂದು ಬೇಡಿಕೆ



ನಿನ್ನ ಕಣ್ಣುಗಳಿಂದ ಜಾರಿದ ಬಿಂದುವಿಗೆ ಕೊಡದಿರು

ನನ್ನ ಹೆಸರು

ನಿನ್ನ ಸಂತಸಕ್ಕೆ ಸಾಕ್ಷಿ  ನಿನ್ನ

ಈ ಬಿಸಿಯುಸಿರು

ನೀರವ ರಾತ್ರಿಗಳಲ್ಲಿ

ನಿನ್ನ ನೆನಪಲ್ಲಿ ನಾನಷ್ಟು

ತಾರೆಗಳ ನೋಯಿಸಿರುವೆ

ನಿನ್ನ ಹೆಸರ ಬೆಳದಿಂಗಳಿಗೆ ಇಟ್ಟು

ನನ್ನ ಕಣ್ಣ ಇಬ್ಬನಿಯಲ್ಲಿ ತೋಯಿಸಿರುವೆ

ಇಂದು ಬೆಳದಿಂಗಳಿಗೊಂದು ಉದ್ವೇಗವಿದೆ

ನಿನ್ನ ಕನಸಿನ ಮರಕ್ಕೆ ಹಬ್ಬಿದ ನನ್ನ ಆಸೆಗಳ

 ಹೂ-ಬಳ್ಳಿಯಿದೆ

ಒಂಟಿ ನೀನಲ್ಲ
ಒಂಟಿ ನಾನಲ್ಲ

ನಡುವೆ ಪಿಸುಗುಟ್ಟುವ ಒಂಟೊಂಟಿ

ಏಕಾಂತವಿದೆ

ನಾ ಬಲ್ಲೆ ಬೆಳಗಾದರೆ ನಡುವೆ ನನ್ನ

ನಿನ್ನ ನಡುವೆ  ತೀರಗಳ ಅಂತರವಿದೆ

ಈ ದಿನ ಈ ಕ್ಷಣ

ದೂಡು ಎಲ್ಲ ಅಂತರಗಳ

ನನ್ನ ಭಾವಗಳ ಸಾಗರ ಉಕ್ಕೇರಲಿ

ಈ ದಿನ ನನ್ನ ಮನದ ಕಡಲಿಗೆ ನಿನ್ನ

ಬಯಕೆಗಳ  ಚೆಲ್ವ ಬೆಳದಿಂಗಳಿಳಿಯಲಿ

ನಿನ್ನ ಬಾಹುಗಳ ಬಂಧನದಿ

ಭದ್ರ ಕೋಟೆಯಲ್ಲಿ

ಏಳು ಸುತ್ತಿನ ಮಲ್ಲಿಗೆಯು

ಅರಳಲಿ....




Friday, January 9, 2009

ಕನಸುಗಳು ಕೊಲೆಯಾಗಿವೆ!!

ಮೈಯೆಲ್ಲಾ ರಕ್ತಮಯ
ಕನಸುಗಳ ಕೊಲೆಯಾಗಿದೆ!!
ಕೊಲೆ ಮಾಡಿದವ ನೀನೆ,ಅದೇ ನನಗೀಗ
ತೊಂದರೆ,ಸಾಕ್ಷಿ ನಿನ್ನ ವಿರುದ್ಧ ಹೇಳಲಾರೆ!!
ನೀ ತೊಟ್ಟಿದ್ದ ತಿಳೀ ಗುಲಾಬಿ
ಬಣ್ಣದ ಮೇಲಿದೆ ನೋಡು ರಕ್ತದ
ಕಲೆ, ಏನು ಹಾಕಿದರೂ
ಹೋಗದು ಈ ಕಲೆ

ನಿನ್ನ ಗಾಡಿಯ ಹಿಂದೆ ನನ್ನ
ಹೆಸರಿದೆಯಲ್ಲಾ ಅದೇ
ಆ ಗಾಲಿಗಳ ಅಡಿಯಲ್ಲಲ್ಲವೇ,ನನ್ನ
ಕನಸುಗಳು ಹ್ಯಾಂಡ್ ಬ್ಯಾಗಿನಿಂದ
ಜಾರಿ ಬಿದ್ದದ್ದು, ಗಾಲಿಗಳ
ಸ್ವಚ್ಚ ಮಾಡಿಸು,ತುಕ್ಕು ಹಿಡಿಯಬಹುದು
ಹಾಗೇ ಹೋಗದು

ರಕ್ತದ ಕಲೆ.

ನನಗೀಗೀಗ ಹುಚ್ಚು ಅಂದೆಯಲ್ಲಾ
ಹೌದು,ನಿನ್ನ ಪ್ರತೀ ವಸ್ತುವಿನಲ್ಲು
ನನಗೆ
ನನ್ನ ಕೊಲೆಯಾದ ಕನಸುಗಳು
ಕಾಡಲಾರಂಭಿಸಿದೆ
ಭೂತದಂತೆ
ನೀನು,ನಿನ್ನ ಅಂಗಿ
ಬೈಕು,ಈ ಕೀ ಚೈನ್
ಮೊಬೈಲ್
ಎಲ್ಲಾ ರಕ್ತಮಯ

ಕೆಂಪು,ಕೆಂಪು ತೊಳೆದರೂ
ಹೋಗದ ರಕ್ತದ ಕಲೆ
ತೊಳೆದೂ,ತೊಳೆದೂ
ಹಿಡಿಯುತ್ತಿದೆ ಹುಚ್ಚು
ಆದರೂ ಹಾಗೇ ಹೋಗದು ಇದು
ಕನಸಿನ ರಕ್ತದ ಕಲೆ!!

Sunday, January 4, 2009

ಮಧು-ಮತ್ತ ಗಳಿಗೆ

ಮಧುವೇ! ನೀ ನನ್ನ ತಾಯಿ,ನಿನ್ನ
ಮುದ್ದಿನ ಪರಿಗೆ ಬದುಕಿದೆ,ನಾ ಬಡಪಾಯಿ!
ನೀನೆ ಆಹಾರ,ನೀನೆ ನೀರು
ರಾತ್ರಿ ಚುಕ್ಕಿಯಲ್ಲಿ ನೀನೆ ನನ್ನ ಚಾರಪಾಯಿ!!

ನೋಡು ಅವಳಿಟ್ಟ ಹೆಜ್ಜೆಗಳು ಮನದ ತುಂಬಾ
ನಿನ್ನಲ್ಲೂ ಕಾಣುವುದು ಅವಳ ಮೋಸದ ಬಿಂಬ!
ಖಬರಿಲ್ಲದೆ ಹೋಯಿತೆ ಎನಗೆಅವಳ ಹೆಜ್ಜೆಯ ಪರಿಯು
ನಾನಿಲ್ಲಿ ಒಂಟಿಹಕ್ಕಿ ಹಾರಲಾರೆ,ಕಿತ್ತಳಲ್ಲ ಕನಸಿನ ರೆಕ್ಕೆಯ!!

ಆದರೂ ನಾ ನಿನ್ನ ನಂಬಿರುವೆ"ಸಾಲಿ"! ನೀಗುವೆಯ ದುಮ್ಮಾನ
ನೀನವಳಿಗಿಂತ "ಧೋಕಾ"!ಬಟ್ಟಲಲ್ಲಿದ್ದರೂ ಅದೆಷ್ಟು ನಿನ್ನ ಸುಮ್ಮಾನ!
ಸಾಗುತಿದೆ ಕಾಲುಗಳು ಬಾನಿನ ಕಡೆಗೆ,ಎದೆಯೊಳಗೆ ತುಂಬಿತು ನಿನ್ನ ಕಡಲು
ಹಾಸಿಹಳು ಸೆರಗು ಗೆಳತಿ ಇನ್ನಾರಿಗೋ ನೀನಾದರೂ ಕೇಳು ಎನ್ನ ಅಳಲು!!

ಮುಳುಗುತಿದೆ ಏಳುತಿದೆ ಚಂದ್ರನ ಬಿಂಬ,ಎದೆಯಲ್ಲಿ ಹಾಲಾಹಲದ ಹಾಲು
ಈ ರಾತ್ರಿ ಆಗಸದಲ್ಲಿ ಸೂರ್ಯನ ಮರಣದ ಕಾರಾವಾನ್, ಖಾಲಿ ಖಾಲಿ ಭೂಮಿಯ ಒಡಲು

ಹೂವು ಸುಡುವ ಪರಿಯ ನಾ ತಡಕೊಂಡಿರುವೆ,ಮತ್ತೆ
ನೀನೂ ನನ್ನ ಸುಡುವೆಯಾ?
ಸುಟ್ಟರೂ ಸರಿಯೆ, ನಿನ್ನ ಝಲಕ್ಕಿಗೆ ಮರುಳು!
ನಾ ನಿನ್ನ ಪರವಾನಾ ತಿಳಿದೆಯಾ!!

ನಿನ್ನ ಸೌಂದರ್ಯದ ಮುಂದೆ,ಗೆಳತಿಯೇನು?
ಈ ಜೀವನವನ್ನೇ ನಿನಗೆ ಒತ್ತೆ ಇಡಬಲ್ಲೆ ನಾನು!!
ನಾನು ನೀನು ಕೂಡಿ ಕಳೆದ ಎಲ್ಲಾ ಮತ್ತ-ಗಳಿಗೆ
ಅದರೂ ಉಳಿವ ಶೇಷ ಮೊತ್ತ ಅವಳೇ ಕೊನೆಗೆ!!

Friday, January 2, 2009

ಒಂದಷ್ಟು ಹನಿಗಳು(ಸ್ವಂತದ್ದು)

ಸುಖ-ದು:ಖ

ಹೇಮಂತನ ಮಂದಾನಿಲ
ಹೊತ್ತು ತಂದ ವಿಷಾದ,
ಅದ ಮರೆಸಲು ತಿಳಿ ಬಿಸಿಲ
ಕೋಲ ಆ ಅರುಣ ಬೀಸಿದ
ಹೀಗೆ ಬದುಕಲೂ ನಡೆವುದು
ಋತುಗಳ ಆಟ,
ಸಿಹಿ ,ಕಹಿಗಳ ಮಿಶ್ರ
ಕೂಟ,
ದು:ಖದ ನಂತರ ಸುಖ
ಎನ್ನುವುದು ಬದುಕಿನ ರೀತಿ,
ಕತ್ತಲೆಯ ನಂತರವೆ ಬೆಳಕು
ಇದು ಸೃಷ್ಟಿಯ ನೀತಿ.

ಬಯಕೆ
ಮತ್ತೆ ಇವತ್ತು ಬೆಳ ಬೆಳಗ್ಗೆ
ತುಂತುರು ಮಳೆ ಹನಿ
ಎದೆಯೊಳಗೂ ಹೊರಗೂ
ತಂಪೋ ತಂಪು,
ಅಮ್ಮನಂತೆ ಬಾನು,
ಅಪ್ಪನಂತೆ ವರುಣ
ಕರುಳ ಕುಡಿಯಂತೆ ಅವನಿ,
ಅಲ್ಲಿ ನಾನು,ನೀನು,
ಅವನು
ಅವಳು
ಧನ್ಯೆ ಧರಣಿ,
ಕುಡಿಯೊಡೆಯುತಿವೆ ಕನಸುಗಳು
ನನ್ನಲ್ಲು,ಅವನಲ್ಲೂ
ಬಯಕೆ ಬುತ್ತಿಯ ಉಣ್ಣುವ ಸಮಯ
ಮಳೆಯೆಂಬ ಹಬ್ಬದ ಸಮಯ!!

ಮಗು
ತೊಟ್ಟಿಲ ತೂಗುವ ತಾಯಿಯ
ಮನದಲ್ಲು,
ಬೆಟ್ಟವ ಹತ್ತುವ ಯಾತ್ರಿಯ
ಎದೆಯಲ್ಲೂ
ಮಲಗಿದೆ ಪುಟ್ಟ ಮಗು
ಶ್ರದ್ಧೆಯ ರೂಪದಿ,
ಹಾಲುಣ್ಣುವ ಕಂದನ
ಕಣ್ಣಲ್ಲಿದೆ ಅಮ್ಮನ
ಚಂದ್ರಬಿಂಬ
ಹಾಲೂಡುವ ತಾಯಿಗೋ
ತನ್ನ ಮುದ್ದುಮಗುವೇ
ಮನಸಿನ ತುಂಬ
ಕಲ್ಲಲ್ಲೂ ಹೂವಿನ
ಕುರುಹು ಅರಳಲಿ
ಮಾನವನೆದೆಯಲಿ
ಪುಟ್ಟ ಮಗುವೊಂದು
ಸದಾ ನಲಿಯಲಿ!!

ದಾರಿ

ನಾ ನಿಂತಿದ್ದೆ
ನಿನ್ನ ಮನೆ ಬಾಗಿಲ ಮುಂದೆ,
ಕರೆಯಲು ಸ್ವರವೇ ಇರಲಿಲ್ಲ,
ನಾ ನಿಂತಿದ್ದೆ
ನೀ ಬರುವ ದಾರಿಯಲ್ಲಿ
ಅಂದು ಅಲ್ಲಿ ನೀ ಬರಲೇ ಇಲ್ಲ
ನದಿಯಂತೆ ನಿನ್ನ ಸೇರುವ
ಆಸೆ ಹೊತ್ತು ಬಂದೆ
ನೀನೇಕೆ ಸಮುದ್ರವಾದರೂ
ಹಿಂದೆ ಸರಿದೆ??
ಪ್ರೇಮದ ಮಹಲಿನೆಡೆಗೆ ಜೊತೆಯಲ್ಲಿ
ನಡೆಯಲಿತ್ತು ನಮ್ಮ ಪಯಣ
ಬೇರೆಯಾಯಿತೇಕೆ ದಾರಿ
ಮುಗಿತೇಕೆ ಕಥೆ ಆರಂಭದಲ್ಲಿ?