ಯು.ಬಿ.ಸಿಟಿಯ ಬಿಯರ್ರೆ ಲೌಂಜಿನಲ್ಲಿ ಎರಡು ಮನಸುಗಳು ಬೀರಿನ ಜತೆ ಬಿಕ್ಕುತ್ತಿದ್ದವು, ಒಂದು ವಿದೇಶದ್ದು, ಮತ್ತೊಂದು ಅಪ್ಪಟ ಸ್ವದೇಶಿ, ಸೂಕ್ಷ್ಮ ಗಮನಿಸಿದರೆ ಅವೆರಡೂ ರೋಗಪೀಡಿತ ವಾದವು ಅಂತ ಎಲ್ಲರಿಗೂ ಗೊತ್ತಾಗುತ್ತಿತ್ತು, ಎದುರು ಮೂಲೆಯವನು ಅದಾವುದೋ ಅರಿಸಿನದ ದ್ರವವನ್ನು ಕುಡಿಯುತ್ತಾ ಹಲುಬುತ್ತಿದ್ದ"bro I left the new York for her bro, she told me to be vegan, see now am pure vegan, I don't eat meat, I left my favorite beef, am ready to put that holy thread also " ಅವ ಹಲುಬುತ್ತಿದ್ದರೆ ಇವ ಹೇಳುತ್ತಿದ್ದ, " ನನ್ನಮಗನೆ, ನಮಗೆ ಬುದ್ದಿ ಇಲ್ಲ, ನೀನು ತಿನ್ನೋದು ಬಿಟ್ಟೆ ನಾನು ಅವಳಿಗಾಗೆ ಕಲಿತೆ, ನೋಡು ಮೇಲೆ ಹೋಗಿ ಒಬ್ಬಳೇ ಕುಣೀತಿದ್ದಾಳೆ ಹೊಸಬರು ಯಾರಾದರೂ ಸಿಕ್ಕುತ್ತಾರೆ " ಅವನು ತಣ್ಣನೆಯ ದ್ರವವನ್ನು ಗುಟುಕರಿಸಿ ತಲೆ ತಗ್ಗಿಸಿದ್ದ, ಆ ಕತ್ತಲ ಮೂಲೆಯಲ್ಲಿ ಕುಳಿತ ಅವಳು ಸುಮ್ಮನೆ ಕೈಲಿರುವ ಸಿಗರೇಟನ್ನು ನೋಡಿ ನಗುತ್ತಿದ್ದಳು, "life is paradox, ಅದಿಲ್ಲ ಅಂದರೆ ಇಡೀ ಜಗತ್ತನ್ನು ಧಿಕ್ಕರಿಸಿ ಈ ಬ್ರಾಹ್ಮಣ ಹುಡುಗನ್ನ ನಾನ್ಯಾಕೆ ಮದುವೆಯಾಗಬೇಕಿತ್ತು, ನಾನಿವನಿಗೆ ಕುಡಿಯುವುದು ಮಾಂಸ ತಿನ್ನುವುದು ಕಲಿಸಿದೆನಾ, ಅಷ್ಟಕ್ಕು ಆ ಸಮಯದಲ್ಲಿ ಅದೆಲ್ಲ ಯಾವ ಲೆಕ್ಕಕ್ಕಿಲ್ಲದ ವಿಷಯಗಳು, ಅವನು ಕಲಿತಿದ್ದು ಇದನ್ನು ಮುಂಚೆ, ಶೋಕಿಗೆ, ತಾನಿವನಿಗಾಗಿ ಸಂಸ್ಕೃತ ಕಲಿತೆ ಶ್ಲೋಕ ಕಲಿತೆ, ಹಾಳಾದ್ದು ಸಿಗರೇಟು ಒಂದು ಬಿಟ್ಟರೆ ಇನ್ ಯಾವ ದುರಭ್ಯಾಸ ಇಲ್ಲ ತನಗೆ, ಅದು ಹೇಗೆ ಸುಳ್ಳನ್ನೆ ಕುಡಿಯುತ್ತಾನೆ ಅವ ದಿನಾಲು ಸೋಜಿಗ ತನಗೆ, ಹತ್ತು ಬಾರಿ ಹೇಳಿದರೆ ಸುಳ್ಳು ಸತ್ಯವಾಗುತ್ತದಂತೆ, ಇದೂ ಅದೆ ಇರಬಹುದು ಅಂದವಳಿಗೆ ಅವನ ಎದುರು ಕೂತ ವಿದೇಶಿ ಇಷ್ಟವಾಗತೊಡಗಿದ್ದ, ಯಾವ ದೇಶವೊ ಏನೋ ಇಲ್ಲಿ ಬಂದು ಅವಳಿಗಾಗಿ ಎಲ್ಲ ತ್ಯಾಗ ಮಾಡಿದ ಅವನು ಗ್ರೇಟ್ ಅನ್ನಿಸತೊಡಗಿದ, ಆದರೆ ಅಲ್ಲಿಂದ ಮಿಸುಕಲಿಲ್ಲ ಅವಳು, ಈ ಮೂವರನ್ನು ಸಾಮಾನ್ಯವಾಗಿ ಅಲ್ಲಿಯೆ ನೋಡುತ್ತಿದ್ದ ಪಕ್ಕದ ಅಸಾಮಿಗೆ ಜೋರಾದ ನಗು ಬರುತ್ತಿತ್ತು , "ಕುಡಿಯೋದಿಕ್ಕೆ ಕಾರಣ ಬೇಕಾ, ಸುಳ್ಳು, ಮೊದಮೊದಲು ಕಾರಣ ನಮ್ಮನ್ನು ಹುಡುಕತ್ತೆ, ಆಮೇಲಾಮೇಲೆ ನಾವೆ ಹುಡುಕ್ಕೊಳ್ಳೋದು, ಅದು ಮುಗಿದ ಮೇಲೆ ತನ್ನ ತರಾ, ಸುಮ್ಮನೆ ಕುಡಿಯುವುದು" ಲೌಂಜಿನ ಸೀಟುಗಳೆಲ್ಲ ಭರ್ತಿಯಾಗಿದ್ದವು, ದೊಡ್ಡ ಮಗ್ಗಿನಲ್ಲಿ ಕಾಣುತ್ತಿದ್ದ ದ್ರವದಲ್ಲಿ ಸಂಜೆ ರಾತ್ರಿಗೆ ಕೆಂಪಾಗತೊಡಗಿತ್ತು, ಮತ್ತು ಗಾಳಿಯಲ್ಲಿದ್ದ ನಶೆಗೆ ಸತ್ಯ ಸುಳ್ಳಾಗಿಯು ಸುಳ್ಳು ಸತ್ಯವಾಗಿಯು ನಿಚ್ಚಳವಿಲ್ಲದ ಅಲ್ಲಿಯ ಜಗತ್ತು ಅಮಲಿನಲ್ಲಿ ಲೀನವಾಗತೊಡಗಿತ್ತು, ಸದ್ದು ಮರೆಯಾಗಿ ಮಾತಾಡಬೇಕಾದ್ದು ಇನ್ನೇನೋ ಆಗಿ ಸುತ್ತಲಿನ ವಾತಾವರಣದಲ್ಲಿ ಸುಟ್ಟುಕೊಂಡ ಹೃದಯಗಳು ಮತ್ತೆಂದು ಸರಿಯಾಗಲಾರದಂತೆ ಬಣ್ಣಬಣ್ಣದ ದ್ರವಗಳಲ್ಲಿ ಮುಳುಗುತ್ತಾ ತೇಲುತ್ತಾ ಮೈ ಮರೆತಿದ್ದವು😊
ಬಯಲ ಬೇಲಿಯ ದಾಟಿ ಮಲ್ಲಿಗೆಯ ಕಂಪು ಮನದ ಬೇಲಿಯ ದಾಟಿತು ಮಂದಾರದ ನುಣುಪು, ಬದುಕ ಹಾಡು ಮಲ್ಲಿಗೆ,ಬಯಕೆ ಹಾಡು ಮಂದಾರ!!!
Saturday, July 9, 2016
ಅವಳು
ನನಗೆ ತಲೆ ಸುತ್ತುತ್ತಿತ್ತು, ಸುತ್ತ ನಡೆಯುತ್ತಿದ್ದ ಯಾವ ವಿದ್ಯಮಾನವೂ ನನಗೆ ತಲುಪದ ಉನ್ಮತ್ತ ಸ್ಥಿತಿ, ಹಾಗೊಂದು ಕ್ರಿಯೆ ನಡೆದದ್ದೆ ಹೌದೋ ಅಲ್ಲವೋ ಎಂಬಂತೆ ಸುತ್ತಲಿನ ಗೋಡೆ ದೀಪಗಳು ಸುಮ್ಮನೆ ನಿಂತಿದ್ದವು, ಆದರೆ ಕನ್ನಡಿಯಲ್ಲಿ ಕಾಣುತ್ತಿದ್ದ ಕೆಂಪಾಗಿ ರಕ್ತ ಒಸರುವಂತಾದ ತುಟಿಗಳು ನಡೆದದ್ದಕ್ಕೆ ಸಾಕ್ಷಿ ಒದಗಿಸಿ ದಂತೆ ವಕ್ರವಾಗಿದ್ದವು, ಅದೆಂಥದ್ದೋ ಆಘಾತಕ್ಕೊಳಗಾದ ಮನಸ್ಸು ಅದೇ ಘಟನೆಯನ್ನು ನೆನೆಯುತ್ತಿತ್ತು, ಸೆಟ್ ವೆಟ್ ಹಚ್ಚಿ ಸ್ಪೈಕ್ ಮಾಡಿದ್ದ ಕೂದಲು ಚದುರಿತ್ತು, ಕನ್ನಡಿಯಲ್ಲಿ ನೋಡುತ್ತಾ ಸರಿಮಾಡಿಕೊಂಡೆ, ತುಟಿಯ ಗುರುತು ಅಳಿಸಲು ಇಷ್ಟವಿರಲಿಲ್ಲ, ಹಾಕಿದ್ದ ಕ್ಯಾಲ್ವಿನ್ ಕೈನ್ ಸುಗಂಧದ ಜತೆ ಮತ್ತಾವುದೋ ಹೂಗಳ ಸುಗಂಧ ಬೆರೆತಂತಿತ್ತು, ಇನ್ ಶರ್ಟ್ ಮಾಡಿ ಮತ್ತೊಮ್ಮೆ ಬೆರಳುಗಳಲ್ಲೆ ಸ್ಪೈಕ್ ಸರಿ ಮಾಡಿ ರೆಸ್ಟ್ ರೂಮಿನಿಂದ ಹೊರಬರುವಾಗ ಅರ್ಧ ಗಂಟೆ ನಿಮಿಷದಂತೆ ಕಳೆದಿತ್ತು, ಅವಳ ಕ್ಯಾಬಿನ್ನಿನತ್ತ ನೋಡಿದೆ, ಏನೂ ನಡೆದೇ ಇಲ್ಲದವಳಂತೆ ಸಲೀಸಾಗಿ ನಗುತ್ತಾ ಓಡಾಡುತ್ತಿದ್ದಳು, ಹೌದು, ಇನ್ನೆರಡೆ ದಿನ ತಾನು ಈ ಕಂಪನಿಯ ಅತಿಥಿ, ನನಗೆ ಒಂಥರದ ಖುಷಿ, ಅದರ ಜತೆ ಈಗ ಸಿಕ್ಕದ್ದು ಉಡುಗೊರೆಯೆ? ಜತೆಗೆ ಇದ್ದೆವಲ್ಲ ನಾಲ್ಕು ವರ್ಷ, ಬೇಕೆಂದದ್ದನ್ನ ಪಡೆಯದೆ ಬಿಡದ ತಾನು , ಅದೇ ಮನೋಭಾವದ ಅವಳು, ಈ ಕಂಪನಿಗೆ ಫ್ರೆಶರ್ ಆಗಿ ಸೇರಿದ್ದ ತನ್ನ ಟೀಮಿಗಾಗಲೆ ಅವಳು ಮ್ಯಾನೇಜರ್, ಐದಡಿ ಏಳಿಂಚು, ಹೆಚ್ಚು ಕಮ್ಮಿ ಬೇರ್ ಆಗಿಯೆ ಇರುತ್ತಿದ್ದ ನೀಳ ಕಾಲುಗಳು ಮತ್ತದರ ಮೇಲಿನ ಚಿಟ್ಟೆ ಟಾಟೂ, ಬೇಡವೆಂದರೂ ಕಾಣುತ್ತಿದ್ದ ಕರ್ವ್ ದೇಹ, ದಪ್ಪ ಕೂಡ ಒಂಥರದ ಸೌಂದರ್ಯ ಅನಿಸೋಕೆ ಶುರುವಾದ್ದೆ ಅವಳನ್ನು ನೋಡಿದಾಗ, ಹತ್ತಿರ ಬಂದು "ಹಲೋ" ಅಂದಾಗ ತೇಲಿಬಂದ ಸುಗಂಧ ಅವಳ ಅಭಿರುಚಿಯನ್ನು ತಿಳಿಸಿತ್ತು, ತಾನು ಪೆಕರನಂತೆ ಬೆರಗಿನ ಕಣ್ಣುಬಿಟ್ಟು ಆಕೆಯನ್ನೆ ನೋಡುತ್ತ ನಿಂತು ಬಿಟ್ಟಿದ್ದೆ, ಆಕೆ ಮುಗುಳ್ನಕ್ಕು ಇದೆಲ್ಲ ನಾರ್ಮಲ್ ಅನ್ನೋ ಹಾಗೆ ಸರಿದು ಹೋಗಿದ್ದಳು , ನಂತರದ ದಿನಗಳಲ್ಲಿ ಅರಿವಾದದ್ದು, ಅವಳು ಬರೀ ಸುಂದರಿ ಅಷ್ಟೇ ಅಲ್ಲ ವಿಷ ತುಂಬಿದ ಹೆಣ್ಣು, ನನಗಂತು ಹತ್ತಲಾಗದ ಬೆಟ್ಟದಂತೆ, ಆದರೂ ಇದೇನು ದೊಡ್ಡದಲ್ಲ ಅನ್ನೋ ಲೆಕ್ಕದಲ್ಲಿ ನಾನು ಕೇರ್ ಲೆಸ್ ಆಗಿ ಇರಲಾಂಬಿಸಿದ್ದೆ, ಅವಳಿಗೂ ಗೊತ್ತಾಗಿತ್ತೇನೋ, ಕೆಲಸದಲ್ಲಿ ತಪ್ಪು ಹುಡುಕಲಾಗದೆ ಸುಮ್ಮನಾಗಿದ್ದಳು, ಆದರೆ ಅದೊಂದು ದಿನ ಇದ್ದಕ್ಕಿದ್ದಂತೆ ಬಂದು ತನ್ನ ಕ್ಯಾಬಿನ್ನಿಗೆ ಎಳೆದೊಯ್ದುಕೂರಿಸಿ "ನೋಡೂ, ನೀನು ನನ್ನ ಕಾಲು ನೋಡೋದು, ಕತ್ತಿನ ಕೆಳಗೆ ಆಸೆಯಿಂದ ನೋಡೋದು ಎಲ್ಲ ಗೊತ್ತಾಗುತ್ತೆ,you know its so obvious in your age, you are bomman boy with a good family back ground, and more over that, I am six years older than you, so there is no intention to get involve with you physically, don't see like that, if I get mad your survival will be in question" ಸುಮ್ಮನೆ ತಲೆಯಾಡಿಸಿದ್ದೆ, ಆದರೆ ಕನಸಿನಲ್ಲಿ ಆ ಕಾಲ್ಗಳು ಮತ್ತು ಟಾಟು, ಕುತ್ತಿಗೆಯ ಚೂರು ಕೆಳಗೆ ಕಾಣುತ್ತಿದ್ದ ಪ್ಲಮೇರಿಯ ಟಾಟು ನನ್ನ ಹುಚ್ಚಿಗೆಬ್ಬಿಸಿದ್ದವು,ಕೆಲಸದ ವಿಷಯದಲ್ಲಿ ಯಾವ ಭಿನ್ನಾಭಿಪ್ರಾಯ ಇರದಿದ್ದರೂ ಅವಳು ಮಾತ್ರ ಇದೆಲ್ಲದಕ್ಕಿಂತ ಮುಖ್ಯವಿಷಯವಾಗಿ ನನಗೆ ಕಾಡುತ್ತಿದ್ದಳು, ನನ್ನ ಕಣ್ಣಲ್ಲಿನ ಆರಾಧನೆ ಗೊತ್ತೆ ಆಗದವಳಂತೆ ನಿಭಾಯಿಸುತ್ತಿದ್ದ ಚತುರತೆ ಮತ್ತಷ್ಟು ಮೋಹ ಹುಟ್ಟಿಸುತ್ತಿತ್ತು.
ಬೇರೆ ಹುಡುಗಿಯರು ಮನಸ್ಸಿಗೆ ಹಿಡಿಸುತ್ತಿರಲಿಲ್ಲ ಅಂತ ಏನಲ್ಲ, ಅದೇನೋ ಸಿಗಲಾರದ್ದೆ ಜಾಸ್ತಿ ನೆನಪಾಗುವಂತೆ ಅವಳು, ಇಲ್ಲಿನ ಏಕತಾನತೆ, ಅವಳ ತೀವ್ರ ನಿರ್ಲಕ್ಷ್ಯ ನಾನು ಮತ್ತೊಂದು ಆಫರ್ ಅನ್ನು ಪರಿಗಣಿಸುವಂತೆ ಮಾಡಿತ್ತು, ದೊಡ್ಡ ಕಂಪನಿ, ಇಲ್ಲಿಯದಕ್ಕಿಂತ ಜಾಸ್ತಿಯೆ ಸ್ಯಾಲರಿ ಅಪ್ಪ ಅಮ್ಮ ನೋಡಿದ ಹೆಣ್ಣನ್ನೆ ಮದುವೆಯಾದರೆ ಒಂಥರಕ್ಕೆ ಲೈಫು ಸೆಟಲ್, ಆ ನಿರ್ಧಾರದಲ್ಲೆ ಬಹಳ ನಿರಾಳ ಮನಸ್ಥಿತಿಯಲ್ಲಿಯೆ ಇವತ್ತು ಆಫೀಸು ತಲುಪಿ ವಿಷಯ ತಿಳಿಸಿದಾಗ ಇಡೀ ಟೀಮ್ ಅಭಿನಂದಿಸಿತ್ತು, ಅದೇ ಗುಂಗಿನಲ್ಲಿ ರೆಸ್ಟ್ ರೂಮಿನೆಡೆಗೆ ನಡೆದಿದ್ದೆ, ಅಲ್ಲೆ ಅವಳು ಅದೇ ತಿರುವಿನಲ್ಲಿ ಬೇಟೆಗಾಗಿ ಕಾದವಳಂತೆ ಒಮ್ಮೆಲೆ ಹಿಂದಿನಿಂದ ಅಪ್ಪಿದ್ದಳು, ಅದನ್ನು ನಂಬಲಾಗದ ಮನಸ್ಥಿತಿಯಲ್ಲಿದ್ದ ನನ್ನ ಐದು ನಿಮಿಷ ಬಿಟ್ಟೂ ಬಿಡದಂತೆ ತೀವ್ರವಾಗಿ ಚುಂಬಿಸಿ ಮರೆಯಾಗಿದ್ದಳು, ಇದು ಏನಂತಲೆ ಅರ್ಥವಾಗಿರಲಿಲ್ಲ ನನಗೆ, ಅವಳಿಗೆ ನನ್ನ ಮೇಲೆ ಪ್ರೀತಿಯಾ, ಅಥವಾ ಹೋಗುತ್ತಿದ್ದೀನಿ ಅನ್ನೋ ದುಃಖವಾ, ಏನಂತ ಗೊತ್ತಾಗದೆ ಗೊಂದಲಕ್ಕೆ ಬಿದ್ದಿದ್ದ ನನಗುಳಿದ ಎರಡು ದಿನ ಸರಿದದ್ದೆ ಗೊತ್ತಾಗಲಿಲ್ಲ.
ಹೊಸಾ ಆಫೀಸಿನ ಮೊದಲ ದಿನ, ದೊಡ್ಡದಾದ ಸ್ಪೇಸ್, ನನಗೊಂದು ಸಪರೇಟ್ ಕ್ಯಾಬಿನ್ ಜೀವನ ಸಾರ್ಥಕವಾದಂತನ್ನಿಸಿತು ,ನಾನೀಗ ಕ್ಲೈಂಟ್ ಮ್ಯಾನೇಜ್ಮೆಂಟ್ ಹೆಡ್, ಹ್ಮ್, ಹೂಗುಚ್ಚವೊಂದು ನನ್ನ ಕ್ಯಾಬಿನ್ನಿನಲ್ಲಿ ನನಗಾಗಿ ಕಾಣುತ್ತಿತ್ತು, ಮತ್ತು ಅದನ್ನ ಹಿಡಿದು ಕಾಯುತ್ತಿದ್ದ ಅವಳು?
Wednesday, June 29, 2016
ಅವಳೆಂಬ ಮಾಯೆ
"ಬೀಪ್" ಮೆಸೇಜ್ ಬಂದ ಸದ್ದು, ಹ್ಮ್ ಇವತ್ತು ಎಂಟನೆಯ ತಾರೀಖು, ಮನೆಗೆ ಮಾಡಿದ ಸಾಲ ಬ್ಯಾಂಕ್ ಸೇರಿದ್ದು, ಇದೊಂದಾದರೆ ಕೈಯಲ್ಲಿ ಬರೋಬ್ಬರಿ ಐವತ್ತು ಸಾವಿರ ಉಳಿತಾಯ, ವೀಕೆಂಡು ಅದೂ ಇದೂ ಶಾಪಿಂಗ್ ಮಾಡಿದರೂ ಹತ್ತು ಸಾವಿರ ಖರ್ಚಾಗಲಿಕ್ಕಿಲ್ಲ, ಮನೆಯ ಖರ್ಚೆಲ್ಲ ಅವಳ ಸಂಪಾದನೆಯಲ್ಲಿ, ತನಗೇನೂ ಭಾರೀ ಆಸೆಯಿಲ್ಲ, ಅವಳಿಗೆ ಊರು ಸುತ್ತುವ ಆಸೆ ಅದೂ ಐಷಾರಾಮಿಯಾಗಿ, ಅದಕ್ಕಾಗಿ ಉಳಿಸುತ್ತಾಳೆ,
"ನೀನೂ ಉಳಿಸು, ಉಳಿಸುವ ಹೆಂಡತಿ ಉಳಿಸುವ ಮಕ್ಕಳು ಮತ್ತು ಉಳಿಸುವ ನೀನು, ಸುಂದರ ಸುಖೀ ಸಂಸಾರ, ವಾರಕ್ಕೊಮ್ಮೆ ಸಿನೆಮಾ, ಶಾಪಿಂಗು ಇಲ್ಲ ಹತ್ತಿರದಲ್ಲಿರುವ ಯಾವುದೋ ದೇವಸ್ಥಾನ, ಪಾರ್ಕ್, ವರ್ಷಕ್ಕೊಮ್ಮೆ ವಿದೇಶ, ಬೀರುವಿನಲ್ಲಿ ಇಡಲು ಆಭರಣಗಳು ಮತ್ತು ಕಾಣೆಯಾದ ನೆಮ್ಮದಿ" ಅವಳ ಖಿಲ ಖಿಲ ನಗು ಎದೆಯಲ್ಲಿ ಚುಚ್ಚಿ ತಲೆಯಲ್ಲೊಮ್ಮೆ ಕೈಯಾಡಿಸಿಕೊಂಡೆ,ಅವಳ ನೆನಪಾದಾಗೆಲ್ಲ ಒಂಥರದ ಸೆಳಕು ಎದೆಯಲ್ಲಿ, ಆ ಸೆಳೆತ, ಆ ಮಾದಕ ನೋಟ, ಅಬ್ಬ ಗಟ್ಟಿ ಗುಂಡಿಗೆಯ ಹೆಣ್ಣು, ಅವಳು ಇಷ್ಟಪಟ್ಟಿದ್ದಳು, ನಾನೂ, ಮದುವೆಯಾಗುವಾ ಅಂದೆ, ಮದುವೆಯಾದರೆ? ಅಂತ ಮರುಪ್ರಶ್ನೆ, ಅದಕ್ಕೆ ತಾನೇ ನಾಚಿ ತಲೆ ತಗ್ಗಿಸಿದ್ದೆ, ಅರ್ದ ಗಂಟೆ ಜೋರಾಗಿ ನಕ್ಕು ನಂತರ "ನೀನು ಒಳ್ಳೆಯ ಹುಡುಗ, ನಿನಗೆ ಒಳ್ಳೆಯ ಹುಡುಗಿ ಸಿಗಲಿ"
ತನ್ನದು ಅವಳೇ ಬೇಕೆಂಬ ಹಟ, ತೋರುಬೆರಳಲ್ಲಿ ಕ್ಷಿತಿಜಕ್ಕೆ ಕೈ ಮಾಡಿ ತೋರಿದ್ದಳು, ನೋಡು, ನಾನು ಹೇಗಿದ್ದೀನಿ ಹಾಗೆ ಒಪ್ಪತೀಯಾ? ನಿಮ್ಮ ಸಮಾಜ ನನ್ನ ಒಪ್ಪುತ್ತದಾ? ಅಪ್ಪ ಅಮ್ಮ? ನಾನು ಸ್ವತಂತ್ರ ಬದುಕಿದವಳು, ಆ ಖುಷಿಯನ್ನ ಕಳೆಯದೆ ನಾನು ನಿನ್ನ ಹೆಂಡತಿಯಾಗಿ ಇರಬಹುದಾ? ಯೋಚಿಸು, ಇದು ನಿನ್ನ ನಿರ್ಧಾರ, ಅಷ್ಟಕ್ಕು ಈ ಸಂಬಂಧಕ್ಕೆ ಮದುವೆಯೆ ಕೊನೆ ಅಂತ ಏನಿದೆ? ಸ್ನೇಹ ಪ್ರೀತಿ ಇವೆಲ್ಲ ತೀವ್ರ ಭಾವನೆಗಳು, ಕೊಚ್ಚಿಹೋಗಬೇಡ, " ಆಕೆಯ ಪ್ರಾಮಾಣಿಕತೆ ದಿಗಿಲು ಹುಟ್ಟಿಸುತ್ತಿತ್ತು,ಅವಳ ಸ್ನೇಹಿತರು , ಸ್ವಚ್ಛಂದ ಹಕ್ಕಿಯಂತೆ ಸದಾ ಲವಲವಿಕೆಯ ಮನಸ್ಸು , ಸುತ್ತ ಇರುತ್ತಲಿದ್ದ ಹುಡುಗರ ಹಿಂಡು ಅವರ ಆರಾಧನೆಯ ನೋಟಗಳು,
ತಾನು ದೂರಾಗುವ ಮುಂಚೆ ಇರಬೇಕು, ಮನೆಗೊಂದು ಹುಡುಗರು ಓಡಿಸುವ ದೊಡ್ಡ ಬೈಕು ತಂದಿದ್ದಳು, ನಾಲ್ಕೆ ದಿನದಲ್ಲಿ ಕಲಿತು ಅದೆಲ್ಲಿಗೋ ಟ್ರಿಪ್ ಹೋಗಿ ಬಂದವಳ ಜತೆ ಅದಾವುದೋ ಹುಡುಗನನ್ನು ಕರೆ ತಂದಿದ್ದಳು, ಅವನ ಜತೆ ಮದುವೆಯಾಗುವುದಿಲ್ಲ ಆದರೆ ಅವನು ತನ್ನ ಬಿಸಿನೆಸ್ ಗೆ ಹೆಲ್ಪ್ ಮಾಡುತ್ತಾನೆಂದು ಹೇಳಿದ್ದಳಲ್ಲ, ತನಗೆ ಇದ್ದ ಒಂದು ನಿರೀಕ್ಷೆ ಕಳಚಿಕೊಂಡಿತ್ತು, ಹೋಗುತ್ತೇನೆ ಅಂದಾಗ ಆಕೆ ಹೇಳಿದ್ದು ಈಗಲು ಕಿವಿಯಲ್ಲಿಯೆ ಇದೆ" ಹೋಗ್ತೀನಿ ಅನ್ಬೇಡ, ಹಾಗೆ ಹೋಗೋದು ಬರೋದು ಇರೋದೆಲ್ಲ ಸಾಂಕೇತಿಕ ಮಾತ್ರ, ಅಲ್ಲ ಮಾರಾಯ ಭೂಮಿ ಗುಂಡಗಿದೆ ಅಂತ ಕೇಳಿಲ್ವಾ, ಜತೆಗೆ ಇರ್ತೀನಿ ಹೋಗು" ಅವಳ ಆತ್ಮವಿಶ್ವಾಸ , ಹೆಗಲ ಮೇಲೆ ಕೈ ಹಾಕಿ ಸಮಾಧಾನಿಸಿದ ಕ್ಷಣಗಳನ್ನೆಲ್ಲ ಹೊತ್ತು ಬದುಕು ಶುರು ಮಾಡಿದ್ದೆ,
ಅದೇ ಹೆಂಡತಿ ಮಕ್ಕಳು, ಹಾಹಾ ನಗು ಬಂತು, ಮೊನ್ನೆ ಟೀವಿಯಲ್ಲಿ ಅವಳನ್ನು ನೋಡಿದಾಗ ನಂಬಿಕೆಯೆ ಬರಲಿಲ್ಲ ಹಾಗೆಯೆ ಇದ್ದಳು, ಮುಖದ ಮೇಲಿನ ಮುಗುಳ್ನಗು,ಅದೇ ಪ್ರಭಾವಲಯ ಅದೇ ಮಾದಕತೆ, ಮತ್ತಷ್ಟು ದೃಢ ಧ್ವನಿ, ಬೆಟ್ಟ ಹತ್ತುವ ತರಬೇತಿಯನ್ನು ಕಲಿಸುತ್ತಿದ್ದಳು, ಅವಳನ್ನೊಮ್ಮೆ ಭೇಟಿಯಾಗಲೆ ಅಂದುಕೊಂಡವನು ಮತ್ತೆ ಸುಮ್ಮನಾದೆ, ಹೌದು ಅವಳು ಎಲ್ಲರಂತಲ್ಲ ಅಥವಾ ನಾನು ಸಾಮಾನ್ಯ, ಅತೀ ಸಾಮಾನ್ಯ, ಭೆಟ್ಟಿಯಿಂದ ಬದುಕು ಬಹಳ ಬದಲೇನೂ ಆಗಲಾರದು ಅನ್ನಿಸತೊಡಗಿತು, ಬ್ಯಾಂಕಿನಿಂದ ಬಂದ ಮೆಸೇಜು ನೋಡಿ ಉಳಿದ ಹಣದಲ್ಲಿ ಮಗದೊಂದು ಸೈಟು ನೋಡಲು ನಮ್ಮ ರಿಯಲ್ ಎಸ್ಟೇಟ್ ಏಜೆಂಟನಿಗೆ ಫೋನಾಯಿಸಿದೆ.ಅವನು ಅದಾವುದೋ ವೆಬ್ ಸೈಟಿನಲ್ಲಿ ನೋಂದಾಯಿಸಿದ್ದೇನೆ ಎಂದೂ, ಮೆಸೇಜಿನಲ್ಲಿಯೆ ಎಲ್ಲ ವಿವರಗಳು ಬರುತ್ತದೆಂದು ಹೇಳಿದ, ಅವಳು ನಿಧಾನಕ್ಕೆ ಬರಲು ಶುರುವಾದ ಮೆಸೇಜ್ ಗಳ ಬೀಪ್ ಸದ್ದಿನಲ್ಲಿ ಮರೆಯಾದಳು.
Tuesday, June 21, 2016
ಧಾರಾವಾಹಿ ಸುಗಂಧಿನಿ ಭಾಗ-೨
ನಂದನ ತಲಬಾಗಿಲು ದೂರವೇನಿಲ್ಲ, ಇಲ್ಲಿಂದ ಕೂಗಿದರೆ ಅವರ ಮನೆಯ ಹಂಸನಂದಿ ಅಂಬಾ ಅನ್ನುತ್ತದೆ, " ದಾರಿ ದೂರ ತೋರುವುದಿಲ್ಲ, ಹುಚ್ಚು ಸೆಳೆತಕ್ಕೆ ಯಾವ ದಾರಿಯು ದೂರವಲ್ಲ" ಮನದೊಳಗಿನ ದನಿ ಪಿಸುಗುಟ್ಟಿತು, ಯಮುನೆಯಾಚೆಗಿನ ದಡ ಸದಾ ಹಸಿರಾಗಿ ಸೆಳೆಯುತ್ತಿತ್ತು, ಈ ದಿನ ಅಲ್ಲಿಂದ ತೇಲಿಬಂದ ದೇವಗಂಧ ಮೂಗಿಗಡರಿತು, ನನಗೋ ಭ್ರಮೆ, ಇದೆಂಥ ಭ್ರಮೆ, ಹರೆಯ ಕಾಲಿಡುವ ಸಮಯ, ನನಗೆ ಸಹಜವಲ್ಲವಾ ಈ ಕಳವಳ, ಬಯಕೆ, ಭ್ರಮೆಗಳು? ಉಹುಮ್, ನಾನು ಎಲ್ಲರಂತಲ್ಲ, ಕನಸುವ ಹಕ್ಕು ನನಗಿಲ್ಲ, ಹುಟ್ಟಿದಾಗಿನಿಂದ ಬಾಗಿದ ಬೆನ್ನು, ನಿಲ್ಲದ ತಲೆ, ತಿರಿಚಿದ ಕಾಲುಗಳು, ಹರೆಯ ಬಂದಿತ್ತು, ಮುಖ ತೊಳೆವ ಮುಂಚೆ ನಾ ಯಮುನೆಯ ನೀರಲ್ಲಿ ನೋಡಿದ ಬಾಲೆಗೆ ಉದ್ದ ಕೂದಲಿತ್ತು ಹೊಳೆವ ಕಣ್ಣಿತ್ತು, ಆದರೆ ...
ಯೋಚನೆಗಳು ಅಲ್ಲಿಗೆ ನಿಂತವು, ಎದುರಿಂದ ಕಾಮಿನಿ ಬರುತ್ತಿದ್ದಳು, ಅವಳ ಕೈಯಲ್ಲಿ ಹೂ ದಂಡೆ, ಅದು ಬಹುಶಃ ಪುಣ್ಯಕೋಟಿಗೋ, ಹಂಸ ನಂದಿಗೋ? ಪುಣ್ಯಕೋಟಿಗೆ ಅದು ಎರಡನೆಯ ಬಸಿರು, ಹಂಸನಂದಿ ಚೊಚ್ಚಲ ಬಸುರು, ರಾಣಿಯರು ಅರಮನೆಯಲ್ಲಿ ಬೆಳಕಿತ್ತರೆ ಇವೆರಡೂ ಕಾಮಧೇನುಗಳು ನಂದನ ಕೊಟ್ಟಿಗೆಯ ಪಟ್ಟದರಸಿಯರು, ಇವರಿಬ್ಬರಿಗೆ ಗೋಗ್ರಾಸ ಕೊಡದೆ ಬೆಳಗಿನ ಜಾವ ತೊಟ್ಟು ನೀರು ಕುಡಿವುದಿಲ್ಲ ನಂದ ಯಶೋದೆಯರು,ಅದು ನನಗೆ ಹೊತ್ತಿದ್ದ ವಿಷಯವೇ, ಕಾಮಿನಿ ಲಗುಬಗೆಯಲ್ಲಿ ಕೈಗೆ ಮಾಲೆ ಇತ್ತು, ನನ್ನ ಕೈಲಿದ್ದ ಸುಗಂಧ ದ್ರವ್ಯಗಳ ಬುಟ್ಟಿಯನ್ನು ಕಸಿದು" ಇವತ್ತು ಪುಣ್ಯಕೋಟಿಗೆ ಈ ಹಾರ ನೀನೆ ಹಾಕಬೇಕು, ಹಾಗೆಯೆ ಒಳಮನೆಗೆ ಬಂದುಬಿಡು, ರಾಣಿಯರು ಕಾಯುತ್ತಿದ್ದಾರೆ" ಅಂದು ಓಡಿದಳು, ಗೆಜ್ಜೆಯ ಸದ್ದು ಮರೆಯಾಯ್ತು, ನನಗೆ ಆನಂದವಾಯ್ತು, ಪುಣ್ಯಕೋಟಿ ಬಿಳಿಯ ಹಸು ಹಣೆಯ ಮೇಲೊಂದು ದೈವದತ್ತ ಕಪ್ಪು ಗುರುತು, ಸದಾ ನಗುತ್ತಿರುವಳೋ ಅನ್ನುವ ಹಾಗೆ, ಇಡೀ ಕೊಟ್ಟಿಗೆಯಲ್ಲಿ ಆಕೆಯ ಸಂತಾನವೆ ಜಾಸ್ತಿ, ನಾನು ನಿಧಾನಕ್ಕೆ ಒಳ ಕಾಲಿಟ್ಟೆ, ಕತ್ತಿನಲ್ಲಿದ್ದ ಗಂಟೆ ನಿನಾದಿಸಿತು, ನನ್ನ ಗೂನಿಗೆ ತನ್ನ ಕೆನ್ನೆಯಿಟ್ಟು ಲಾಲಿಸಿದಳು ಪುಣ್ಯಕೋಟಿ, ಹೌದು ಹುಟ್ಟಿದಾಗಿನಿಂದ ತಾತ್ಸಾರ ಹಳಿಯುವ ಮಾತುಗಳನ್ನೆ ಕೇಳಿ ಬೆಳೆದ ನನಗೆ ಮೂಕ ಪ್ರಾಣಿಗಳ ಮೌನದ ಭಾಷೆ ಅರ್ಥವಾಗುತ್ತಿತ್ತು, ಇವತ್ತು ಪುಣ್ಯಕೋಟಿ ಸಂಭ್ರಮ ದಲ್ಲಿದ್ದ ಳು, ನಾನೂ , ನಿಧಾನವಾಗಿ ಮಲ್ಲಿಗೆಯ ಹೂದಂಡೆ ಅವಳಿಗೇರಿಸಿ ನನ್ನ ಸಂಭ್ರಮ ಪಿಸುಗುಟ್ಟಿದೆ, ಆಕೆ ತನ್ನ ಹಾಲು ನೆಲದ ಮೇಲೆಲ್ಲ ಸುರಿದು ಯಾವುದೋ ಆಹ್ಲಾದ ವ್ಯಕ್ತಪಡಿಸಿ ನನ್ನ ಬಲು ಪ್ರೀತಿಯಿಂದ ನೆಕ್ಕಿದಳು, ಪಕ್ಕದಲ್ಲಿದ್ದ ಹಂಸನಂದಿ ಸಂತಸದ ಕಣ್ಣೀರು ಸುರಿಸುತ್ತಿದ್ದಳು
ಹಗುರಾಗಿ ಅರಮನೆಯತ್ತ ನಡೆಯತೊಡಗಿದೆ.
ತೊಟ್ಟಿಯ ಮನೆಯಲ್ಲಿ ಗೋಪಿಯರ ಮಾತು ಸಲ್ಲಾಪಗಳು ಮುಗಿಲು ಮುಟ್ಟಿತ್ತು, ಹಾದಿಯಲ್ಲಿ ಎದುರಾದ ಸೂಲಗಿತ್ತಿ ಶ್ಯಾಮಲೆಯು "ಬಂದೆಯಾ ತ್ರಿವಕ್ರೆ, ನೋಡು, ರಾಣಿಯರ ಮುಖದ ಕಳೆ, ನಾಳೆಅಥವಾ ನಾಡಿದ್ದು ಶುಭ ಸುದ್ದಿ ಖಂಡಿತಾ" ಎಂದು ನಕ್ಕಳು. ರಾಣಿಯರ ಬೆನ್ನಿಗೆ ನಿಧಾನವಾಗಿ ಚಂದನ ಸವರಿ ಕೈಗಳಲ್ಲಿ ಹಗುರಾಗಿ ತಿಕ್ಕುತ್ತಾ ಗಂಧ ಲೇಪನಕ್ಕೆ ನನ್ನ ಬುಟ್ಟಿಯೆಡೆಗೆ ತಿರುಗಿದೆ, ಎಲ್ಲಿಂದ ಬಂತು ಅಲ್ಲಿ ಗಂಧದ ಬಟ್ಟಲಲ್ಲಿ ಎರಡು ಪುಟ್ಟ ಹೆಜ್ಜೆಯ ಗುರುತುಗಳು, ನಾನು ಮತ್ತೆ ವಿಭ್ರಮೆಗೆ ಬಿದ್ದೆ, ಮತ್ತದೇ ದೇವಗಂಧ, ನನ್ನ ಕರೆಯುತ್ತಲಿರುವಂತೆ ಯಮುನೆಯ ದಡದಲ್ಲಿ ಕನಸಿನ ಸಂಗತಿ ಮತ್ತೆ ಮರುಕಳಿಸಿದಂತೆ , ಈ ಬಾರಿ ಬೆಚ್ಚಲಿಲ್ಲ, ಲೇಪನವನ್ನು ಅರ್ಧ ಗಳಿಗೆಯ ನಂತರ ನಿಧಾನಕ್ಕೆ ತೆಗೆಯಲು ಹೇಳಿ, ಕೆನ್ನೆ ಕತ್ತಿಗೆಲ್ಲ ಕಣಗಿಲೆಯ ಸುಗಂಧ ಲೇಪಿಸಿ ಹೊರಡಲಣಿಯಾದೆ,ರೋಹಿಣಿ ಕರೆದು ಕೈಗೆ ಬಂಗಾರದ ನಾಣ್ಯ ಇತ್ತು ಮೃದುವಾಗಿ ನನ್ನ ಕೈ ಹಿಡಿದು ಬೇಡಿದಳು" ಮಥುರೆಗೆ ಹೋಗಿ ದೇವಕಿಗೆ ನನ್ನ ಸಂದೇಶ ಮತ್ತು ನಿನ್ನ ಸೇವೆ ಮುಟ್ಟಿಸುವೆಯಾ, "
ನನಗೆ ಮಾತು ಹೊರಡಲಿಲ್ಲ, ಎತ್ತ ಇತ್ತು ಚಿತ್ತ? ಆಚೆಯ ದಡದ ಸೆಳೆತ ಯಾವ ಕಾಣದ ಕೊರಳಿನ ಕರೆ ತಿಳಿಯಲೆ ಇಲ್ಲ, ಅರ್ಧ ಘಳಿಗೆಯಲ್ಲಿ ನಾನು ಯಮುನೆಯ ದಡದಲ್ಲಿದ್ದೆ.
(ಮುಂದುವರೆಯುವುದು)
Wednesday, June 15, 2016
ಧಾರಾವಾಹಿ ಸುಂಗಂಧಿನಿ-ಭಾಗ ೧
ನಟ್ಟನಡು ರಾತ್ರಿಯಲಿ
ಚಂದಿರನ ಮೀರಿಸುವ ಬೆಳಕೊಂದು ಬಂತು
ನನ್ನೆದೆಯ ಮಂದಿರದಿ
ತುಂಬಿದ್ದ ಕತ್ತಲ
ಸರಿಸಿತ್ತು
ಈ ಬೆಳಕಿನಾ ತಂತು..
"ಅವನ್ಯಾರು ಆ ದಡದಲ್ಲಿ,ಯಮುನೆಯತಿಳಿನೀರಲ್ಲಿ ಅವನ ಬಿಂಬ ಕಾಣದಲ್ಲ..ಕೈಯ ತೋಳ ಚಾಚಿ ಕರೆಯುವ ಭುವಿಯ ಚಂದ್ರಮ..ನಾನು ಧಾವಿಸಿದೆ..ಉಟ್ಟ ಉಡುಗೆ ಜಾರಿತ್ತು..ನನ್ನಿರವು ಮಾಸಿತ್ತು..ಹತ್ತಿರ ಹೋಗಿ ನಿಂತೆ.."ನೋಡು ನನ್ನ ಮೊಗವನ್ನು..ನಾ ಸುಂದರಿ ಅಲ್ಲವೆ?" ಅವ ನಕ್ಕ.."ನಿನ್ನ ದೇಹದ ಅರಿವ ಮೀರಿ ನಿಲ್ಲು..ನೀ ಎಂದಿಗು ಸುಂದರಿಯೇ"
ಮತ್ತೆ ಮಾತಾಡಲು ಅವನಿಲ್ಲ..ಅವನಿದ್ದ ತಾವಲ್ಲಿ ಅರಳಿವೆ ನೂರು ಬಣ್ಣದ ಹೂಗಳು"
ಬೆಚ್ಚಿ ಬಿದ್ದು ಎದ್ದು ಕೂತೆ..ಇದೆಂಥಾ ಕನಸು??ಮರುಳು ಮನಸಿನ ಕಲ್ಪನೆಯೆ?? ಕಂಡದ್ದು ಕನಸೆ ಆದರು ಅದಕ್ಕೊಂದು ಸೊಗವಿತ್ತು..ಕಣ್ಣ ಉಜ್ಜಿ ಸುತ್ತ ನೋಡಿದೆ..ಸಮಯ ಎಷ್ಟಿರಬಹುದು?? ರಾತ್ರಿಯ ಮೂರನೆ ಯಾಮ..ಅಂದರೆ ಬೆಳಗಾಗಲು ಬಹಳಷ್ಟು ಸಮಯವಿದೆ..ಇಂದು ಬೇಗ ಹೋಗಬೇಕು ನಂದನ ಅರಮನೆಗೆ..ಬಸುರಿಯರಲ್ಲವೇ ಇಬ್ಬರೂ ರಾಣಿಯರು..ದಿನ ತುಂಬುತ್ತಿದೆ.."ನನಗೆ ಚಂದನವ ತರುವೆಯೇನು..ನೀನೆ ಪೂಸಿ ಕೊಡುವೆ ಏನು?
ಯಾಕೋ ಬೆನ್ನ ಹುರಿಯೆಲ್ಲ ನೋವು,ಬುವಿ ಭಾರವೆಲ್ಲ ನಾನೆ ಹೊತ್ತಂತೆ" ನಿನ್ನೆ ಅಳಲಿದ್ದಳು ರಾಣಿ ಯಶೋಧಾ,ವಸುದೇವನ ರೋಹಿಣಿ ಬಿಳಚಿದ್ದಳು, ಗಂಡನ ದುಸ್ಥಿತಿಗಾಗಿ ಮರುಗಿದ್ದವಳಿಗೆ, ತನ್ನ ಒಡಲಲ್ಲಿ ಚಿಗುರುತ್ತಿರುವ ಮಗುವಿನ ಆಗಮನ ವಸಂತನ ಸಮನಾಗಿತ್ತು, ಸರಳೆಯು ಸುಂದರಿಯು ಆದ ಆಕೆಯ ಮೊಗದಲ್ಲಿ ನೂರು ತಾರೆಯರ ಹೊಳಪು, ಆದರೆ ತನಗೆಂತ ಮೋಹ, ಹುಟ್ಟಲಿರುವ ಮಗುವಿನ ಬಗ್ಗೆ ತಾಯಂದಿರೂ ಕನಸುತ್ತಾರೋ ಇಲ್ಲವೋ ತನಗಂತೂ ದಿನಾ ಅದೇ ಕನಸು, ಆ ಮಗುವಿನ ಮುದ್ದು ಮುಖ ನೋಡುವ ಎತ್ತುವ ಮುದ್ದಾಡುವ ಬಯಕೆ, ಅದರ ಗಂಧ ಹೊತ್ತ ಗಾಳಿಯ ಪುಲಕವನ್ನ, ಸಂಗೀತ ಸದೃಶ ಅಳುವನ್ನ ಕೇಳುವಾಸೆ, ಮುಕ್ತಿಗಾಗಿ ಕಾದ ತಾಪಸಿಯಂತೆ ಮಗುವಿನ ಬರವಿಗೇಕೆ ತಾನು ಕಾಯುತ್ತಿರುವೆ?
ಎದ್ದು ಕೂತೆ, ದೂರದಲ್ಲಿ ಕುಕ್ಕುಟನ ಕರೆ, ಅರುಣ ಅದಷ್ಟೆ ಬಾನ ದಾರಿಯನ್ನು ಅರ್ಕನ ಆಗಮನಕ್ಕೆ ಸಜ್ಜುಗೊಳಿಸುತಿರುವನು, ದನದ ಅಂಬಾ ಕೂಗು, ಹಕ್ಕಿಗಳ ಕಲರವ, ಜತೆಜತೆಗೆ ಯಮುನೆಯ ನಿನಾದ, ಮುನಿಗಳ ವೇಧಸುಧೆ, ಹೌದಲ್ಲ ಸಾಂದೀಪನಿಗಳ ಆಶ್ರಮದಲ್ಲಿ ವೇದಪಾಠ ಆಗಲೆ ಶುರುವಾದಂತಿದೆ, ದಡಬಡಿಸಿ ಯಮುನೆಯ ಕಡೆಗೋಡಿದೆ, ಸ್ನಾನಾದಿಗಳೆಲ್ಲ ಮುಗಿಸಿ ಮನೆಗೆ ಕಾಲಿಟ್ಟಾಗ ಬೆಳಕು ಬೆಟ್ಟದ ತಿರುವಿನಲ್ಲಿ ಮಾಯಾಲೋಕ ರಚಿಸಿತ್ತು. ಆ ನಿಯಾಮಕನನ್ನು ನೆನೆಯುತ್ತಾ ಚಂದನ ಗಂಧವನ್ನು ತೇಯಲಾರಂಭಿಸಿದೆ...
(ಮುಂದುವರೆಯುವುದು)
Monday, June 13, 2016
ಉತ್ತರವಿರದ ಪ್ರಶ್ನೆಗಳು
ಸಂಸಾರವನ್ನೇ ಮರೆತವಳಂತೆ ಪುಸ್ತಕ ಹಿಡಿದು ಕೂತಿದ್ದೆ ... ಬಹುಷಃ ಬೆಳಗಿನ ಜಾವದ ೨ ಗಂಟೆ ಇರಬಹುದು... ಮೊಬೈಲ್ ಗುರ್ ಗುರ್ ಅಂತ ಸದ್ದು ಮಾಡಿತ್ತು .. ನೋಡಿದೆ ಅವಳದ್ದೇ ಮೆಸ್ಸೇಜು ..ಇಷ್ಟ್ ಹೊತ್ತಲ್ಲಿ ಏನ್ ತಲೆಬಿಸಿ ತಂದಿಟ್ಟಳಪ್ಪ ಅಂತ ಪೂರ್ತಿ ಓದತೊಡಗಿದೆ .."ಅಕ್ಕಾ ನಿಮ್ಮಿಂದ ಒಂದು ಉಪಕಾರ ಆಗಬೇಕಿತ್ತು ,ನನಗೆ ಯಾವ್ದಾದ್ರು ಒಳ್ಳೆ ಗೈನಕಾಲಜಿಷ್ಟ್ ಹತ್ರ ಹೋಗಬೇಕಿದೆ ಬರ್ತೀರಾ? ಇವತ್ತು ನಿಮಗೆ ಸಮಯ ಇದೆಯಾ ಅಂತ ಕೇಳಬೇಕಿತ್ತು " ನನ್ನ ಪರಿಚಯದ ಒಬ್ಬರ ಹೆಸರು ಮರು ಸಂದೇಶದಲ್ಲಿ ಕಳಿಸಿ ಅವಳಿಗೆ ಯಾವ ಸಮಯ ಸರಿಯಾದೀತು ಎಂದು ಕೇಳಿದೆ, ಅವಳು ಹನ್ನೊಂದಕ್ಕೆ ಹೋಗುವಾ ಅನ್ನುವಲ್ಲಿಗೆ ನಮ್ಮ ಸಂಭಾಷಣೆ ಮುಕ್ತಾಯವಾಯ್ತು ... ಮುಕ್ತಾಯಕ್ಕನ
ಆರು ಇಲ್ಲದವಳೆಂದು ಆಳಿಗೊಳಲು ಬೇಡ ಆಳಿಗೊಂಡೆಡೆ ಆನು ಅಂಜುವವಳಲ್ಲ ಒಲವಿನ ಒತ್ತೆ ಕಲ್ಲನು ಬೆವರಿಸಬಲ್ಲೆ ಕಾಣಿರೊ ಅಪ್ಪಿದವರನಪ್ಪಿದಡೆ ತರಗೆಲೆಯಂತೆ ರಸವನು ಅರಸಿದಡುಂಟೇ ಅಜಗಣ್ಣ ತಂದೆ!
ಓದಿ ಅಲ್ಲಿಯೂ ಇಲ್ಲಿಯೂ ಸಲ್ಲದ ನನ್ನಂತಹ ತ್ರಿಶಂಕುಗಳ ಸ್ಥಿತಿ ನೆನೆದು ನಿಟ್ಟುಸಿರಿಟ್ಟು ನಿದ್ದೆ ಹೋದೆ .....
ಮರು ದಿನ ಹನ್ನೊಂದು ಗಂಟೆಗೆ ಸರಿಯಾಗಿ ನಾನು ಆಸ್ಪತ್ರೆಯ ಮುಂದಿದ್ದೆ ,ಆಕೆಗೆ ಕಾಯುತ್ತಾ ಅರ್ಧ ಗಂಟೆ ಕಳೆಯಿತು, ಸಂದೇಶಕ್ಕೆ ಕರೆಗೆ ಉತ್ತರವಿಲ್ಲ ,ಕೊನೆಗೆ ಸುಮ್ಮನೆ ವಾಪಾಸು ಹೋಗುವ ಬದಲು ನಮ್ಮ ದಾಕ್ಟರನ್ನ ಕಂಡು ಹೋದರಾಯ್ತೆಂದು ಒಳ ಹೋದೆ ,ಅವರು ನನ್ನಲ್ಲಿ ಬಹಳ ಆತ್ಮೀಯತೆ ಇಂದ ಮಾತಾಡುತ್ತಿದ್ದರು, ಮಗುವಾಗುವ ಮುಂಚಿನಿಂದ ನಂತರ ಇವತ್ತಿನವರೆಗೂ ನನ್ನ ಬಲ್ಲವರು ಅವರು,ನಿನ್ನದು ಅತ್ಯಂತ ಆರೋಗ್ಯಕರ ಗರ್ಭಕೋಶ ಅಂತ ಆಗಾಗ ತಮಾಷೆ ಮಾಡುತ್ತಿದ್ದರು ,ಒಳ ಹೋಗಿ ಕೂತೆ ಕೊನೆಯ ಗರ್ಭಿಣಿ ಉಸ್ಸಪ್ಪ ಅಂತ ಹೊರಬಂದಾಯ್ತು ,ಇನ್ನೇನು ನಾನು ಒಳ ನುಗ್ಗಬೇಕು ಅವಳ ಕಾಲ್" ಅಕ್ಕ ಇಲ್ಲೇ ಇದ್ದೀನಿ ಸಲ್ಪ ಹೊರಬನ್ನಿ" ನಾನು ಸೀದಾ ಹೊರಗೆ ಓಡಿದೆ ಹೌದು ಅವಳ ದ್ವನಿಯಲ್ಲಿ ಗಾಭರಿ ಇತ್ತು,
ಹಿನ್ನೆಲೆ ಹೇಳಿ ಬಿಡಬೇಕು ಆಕೆಗೆ ೨೦ ವರ್ಷ,ಇತ್ತೀಚೆಗಷ್ಟೇ ಮದುವೆಯಾಗಿದ್ದಾಳೆ ಓದುವ ಇಷ್ಟವಿತ್ತು ಯುನಿವರ್ಸಿಟಿಯ ಪ್ರತಿಭಾವಂತೆ,ಆದರೆ ಏನು ಮಾಡುವುದು,ಅಪ್ಪನ ದರ್ಪ,ಅಣ್ಣಂದಿರ ಬೆದರಿಕೆ,ಅಮ್ಮನ ಅಳು ಅಕೆಯನ್ನ ಮದುವೆಗೆ ಬಲವಂತವಾಗಿ ದೂಡಿತ್ತು ,ಮದುವೆಯಾದ ನಂತರ ಓದಿಸುವೆ ಅಂದಿದ್ದ ಹುಡುಗ ಮಾತು ಮರೆತಿದ್ದ,ಬೆಂಗಳೂರಿಗೆ ಬಂದ ನಂತರ ಅರಿವಾದದ್ದು ಆಕೆ ಬರಿ ಮದುವೆಯಾಗಿಲ್ಲ ಜೊತೆಗೆ ದೊಡ್ಡದಾದ ಕಂದರಕ್ಕೆ ಬಿದ್ದಿದ್ದಾಳೆ ಎಂದು, ಯಾವುದೋ ದೊಡ್ದ ಕಂಪನಿಯ ಹೆಸರು ಹೇಳಿ ಮದುವೆಯಾಗಿದ್ದ ಆತ ನಿಜವಾಗಲು ಯಾವ ಕೆಲಸದಲ್ಲೂ ಇರಲಿಲ್ಲ , ಅವನ ಅಪ್ಪ ಅಮ್ಮ ಇವಳ ಮನೆ ಇಂದ ಬರುವ ದೊಡ್ದ ಮೊತ್ತಕ್ಕಾಗಿ ಕಾದು ಕುಳಿತವರು,ಅವಳ ತಂದೆ ಬೆಂಗಳೂರಿನಲ್ಲಿ ಸೈಟ್ ಕೊಡಿಸುವ ವಾಗ್ದಾನದಲ್ಲಿ ಮದುವೆಯಾಗಿತ್ತು, ದೂರದ ಸಂಭಂಧ ಬೇರೆ,ಮಾವ ಅತ್ತೆ ಇಬ್ಬರು ಕೆಲಸದಲ್ಲಿದ್ದರು,ಜಾಸ್ತಿ ವಿಚಾರ ಮಾಡದೆ ಇದ್ದೊಬ್ಬ ಮಗಳು ಮದುವೆಯಾದರೆ ಸಾಕು ಎಂದು ಅವಳ ಒಪ್ಪಿಗೆಗೂ ಕಾಯದೆ ತಾಳಿ ಬಿಗಿಸಿದ್ದರು,ಆದರೆ ಅದೇಕೋ ಕೊನೆ ಸಮಯಕ್ಕೆ ಸೈಟನ್ನು ಮಗಳ ಹೆಸರಿಗೆ ಮಾಡಿದ್ದರು ,ಅಲ್ಲಿಂದ ಆಕೆಯ ನರಕ ಯಾತನೆ ಶುರುವಾಯ್ತು,ಮದುವೆಯಾದ ಎರಡೇ ದಿನಕ್ಕೆ ದರ್ಪ ದಬ್ಬಾಳಿಕೆ ಶುರುವಾಯ್ತು,ಇದೆಲ್ಲಾ ಸಹಿಸಿಯೇ ಇರದಿದ್ದ ಆಕೆ ಎರಡೆ ತಿಂಗಳಿಗೆ ಕಡ್ದಿಯಾಗಿದ್ದಳು,ಈಗ ಹೊಸದೊಂದು ವರಾತ ಶುರುವಾಗಿತ್ತು ಅವರತ್ತೆ ಮಾವನದ್ದು, "ಬೇಗ ಮಗು ಬೇಕು, ನಿನಗೆಲ್ಲಿ ಮಗು ಆಗುತ್ತೆ,ಕಡ್ಡಿ ತರಾ ಇದ್ದೀಯ"
ಒಂದು ದಿನ ರಾತ್ರೋ ರಾತ್ರಿ ಆಟೋದಲ್ಲಿ ನಮ್ಮನೆಗೆ ಓಡಿ ಬಂದಿದ್ದಳು, ನನಗೋ ಗಾಭರಿ ,ಒಳ ಬಂದವಳೇ ತೆಕ್ಕೆ ಬಿದ್ದು ಅತ್ತಳು,ಏನಾಯ್ತೇ ಅಂದದ್ದಕ್ಕೆ ಉಟ್ಟ ಬಟ್ಟೆಯನ್ನೆಲ್ಲ ಕಿತ್ತು ಬಿಸಾಕಿ ನಿಂತಳು, ಮೈ ತುಂಬಾ ರಕ್ತ ಬರುವಂತೆ ಕಚ್ಚಿದ್ದ ಸುಟ್ಟ ಗುರುತುಗಳು,ತೊಡೆಗಳಲ್ಲಿ ರಕ್ತ ಇಳಿಯುತ್ತಿತ್ತು,ಸೀದಾ ಹತ್ತಿರವಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋದೆ ,ಮೊದಲು ಅಡ್ಮಿಟ್ ಮಾಡಲು ಹಿಂಜರಿದರೂ ,ನನ್ನ ಪರಿಚಯದ ಮೇಲೆ ಆಕೆಗೆ ಪ್ರಥಮ ಚಿಕಿತ್ಸೆ ಕೊಟ್ಟರು,"ನಿನ್ನ ಗಂಡನಾ ರಾಕ್ಷಸನಾ ? ಅದು ಮೊದಲ ಬಾರಿ ಹೆಂಗೆ ನಡ್ಕೋಬೆಕು ಅಂತ ಗೊತ್ತಿಲ್ವಾ , ಅವನೇನಾದರು ನನ್ನ ಕೈಗೆ ಸಿಗಬೇಕು" ಅಂತ ಅವಳ ಗಾಯಗಳನ್ನ ತೊಳೀತಿದ್ದ ನರಸಮ್ಮ ಹೇಳಿದ್ದು ನಂಗೆ ಚೆನ್ನಾಗಿ ನೆನಪಿದೆ, ಮರುದಿನ ನಾನೇ ಅವಳ ಮನೆಗೆ ಹೋಗಿ ಬಿಟ್ಟು ಬಂದೆ,ಏನು ಹೇಳಲು ಅವಳು ಬಿಡಲಿಲ್ಲ, ಈಗ ಹದಿನೈದು ದಿನವಾಯ್ತು ನಾವು ಅಲ್ಲಿಂದ ಮನೆ ಬದಲಾಯಿಸಿ ಈ ಏರಿಯಾ ಬಂದು,ಅಷ್ಟರಲ್ಲಿ ಮತ್ತೇನು ಎಂದು ಅರಿವಾಗಲಿಲ್ಲ ..
ಆಸ್ಪತ್ರೆಯ ಹೊರಹೋದೆ, ಅಲ್ಲೆ ಇದ್ದಳು,ಅಳುಮುಖ ಹೊತ್ತ ಆಕೆ"ಅಕ್ಕಾ ನಾ ಬದುಕೋದಿಲ್ಲ ನನ್ನ ಸಾಯ್ಸಿ ಬಿಡ್ತಾರೆ,ಇವತ್ತು ಮಗು ಬೇಕು ಅನ್ನೋ ಸಲುವಾಗೇ ನನ್ನ ಹೊರ ಹಾಕಿದರು ಇಡಿ ರಾತ್ರಿ,ಸರಿ ಊಟ ತಿಂಡಿ ಕೊಡ್ತಾ ಇಲ್ಲ ಏನ್ ಮಾಡೊದು,ಮಾತೆತ್ತಿದ್ರೆ ಅತ್ತೆ ನಾನ್ ದುಡಿತೀನಿ ನಿನ್ ಮನೆ ಕೆಲಸ ಮಾಡ್ಕೊಂಡಿರು,ಅವನು ದುಡಿದಿದ್ರೇನಾಯ್ತು,ನಿಮ್ಮಪ್ಪ ಮಾಡಿರೋ ಸೈಟು ಅವಂದೆ ಆಲ್ವಾ,ಮೊಮ್ಮಗು ಬೇಕೇ ಬೇಕು ಈ ವರ್ಷಾನೇ, ಅಂತಾರೆ,ಇವನು ರಾಕ್ಷಸನ ಹಾಗೆ ಮೈ ಮೇಲೆ ಬರ್ತಾನೆ,ಅಪ್ಪ ಅಮ್ಮ ಇದೆಲ್ಲಾ ಮಗು ಆದ್ರೆ ಸರಿ ಆಗುತ್ತೆ ಹೋಗ್ ತೋರ್ಸು ಅಂತಿದ್ದಾರೆ ,ಅದ್ಕೆ ಬಂದೆ" ಅಂದಳು.
ಸರಿ ಅಂತ ನನ್ನ ಖರ್ಚಿನಲ್ಲಿ ಅವಳ ಚಿಕಿತ್ಸೆಗೆ ಮುಂದಾದೆ, ವೈದ್ಯರು ಅವಳಿಗೆ ಎಲ್ಲ ರೀತಿಯ ಟೆಸ್ಟ್ ಬರೆದುಕೊಟ್ಟರು, ಆಕೆಗೆ ಹಿಮೋಗ್ಲೋಬಿನ್ ಕೊರತೆ ಮತ್ತು ಗರ್ಭಕೋಶದ ಬೆಳವಣಿಗೆಯ ಕೊರತೆ ಅಂತ ರಿಪೋರ್ಟ್ ಬಂತು, ಅದನ್ನ ಮನೆಯವರಿಗೆ ತೋರಿಸಲಿ ಹೇಗೆ ಅನ್ನೋದು ಅವಳ ಅಳಲು, ನಾನು ಗಂಡನನ್ನು ಕೂಡ ಟೆಸ್ಟ್ಗೆ ಕರೆದುಕೊಂಡು ಬರಲು ಸಲಹೆ ನೀಡಿದೆ,ಅದು ಅವಳಿಂದ ಅಸಾಧ್ಯ ಅನ್ನೋದು ನನಗು ಗೊತ್ತಿತ್ತು , ನನಗೀಗ ಉಳಿದದ್ದು ಒಂದೇ ದಾರಿ ಅವಳ ಮನೆಯವರ ಹತ್ತಿರ ಮಾತಾಡುವುದು, ಮತ್ತು ತಂದೆ ತಾಯಿಗಳ ಹತ್ತಿರ ಹೇಳುವುದು, ಆಕೆಯ ಅಣ್ಣ ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ, ಅವನನ್ನು ಸಂಪರ್ಕಿಸಲು ಪ್ರಯತ್ನಿಸಿದೆ, ಅವನು ನನ್ನ ಮಾತುಗಳನ್ನು ನಂಬಲು ಸಿಧ್ಧನಿರಲಿಲ್ಲ, ಹಾಗೇನಾದರು ಇದ್ದರೆ ಅವಳು ನನ್ನ ಹತ್ತಿರ ಹೇಳ್ತಿದ್ದಳು, ಅಂತ ವಾದಿಸಿದನೆ ಹೊರತು ಬೇರೆ ಮಾತಾಡಲಿಲ್ಲ
ಆಕೆಯ ಚಿಕಿತ್ಸೆ ನಡೆಯುತ್ತಿತ್ತು, ಅದನ್ನ ಅವಳು ಗಂಡನ ಮನೆಯವರೆದುರು ಮುಚ್ಚಿಟ್ಟಿದ್ದಳು, ಒಂದು ನಾಲ್ಕು ತಿಂಗಳ ನಂತರ ಗರ್ಭ ನಿಂತ ಸುದ್ದಿ ಬಂತು, ಆಗಾಗ ಭೇಟಿಯಾಗುತ್ತಿದ್ದೆ , ಗಂಡನ ಮನೆಯವರ ಸುದ್ದಿಯನ್ನು ಆಕೆಯ ತೊಂದರೆಗಳನ್ನು ಬಚ್ಚಿಡುತ್ತಿದ್ದುದು ಸ್ಪಷ್ಟವಾಗಿ ತಿಳಿಯುತ್ತಿತ್ತು, ನಾಲ್ಕೆ ತಿಂಗಳು, ಬಸಿರಿಳಿಯಿತು, ಮತ್ತೆ ಚಿಕಿತ್ಸೆ ಮುಂದುವರೆಸಿದರು ನಮ್ಮ ಡಾಕ್ಟರು, ಮತ್ತೊಮ್ಮೆ ಹಾಗೆ ಆದಾಗ, ನನಗೆ ಕರೆದರು, ನನ್ನ ಹತ್ತಿರ ಹೇಳಿದರು, ಅದು ಬಲಿಯುತ್ತಿರುವ ಗರ್ಭಕೋಶ, ಇದೇ ತರ ಆಗುತ್ತಿದ್ದರೆ ಮುಂದೆ ಗರ್ಭ ಕಟ್ಟದೆ ಇರುವ ಸಾಧ್ಯತೆ ಕೂಡ ಇದೆ ಎಂದರು, ಮತ್ತು ಆಕೆಗೆ ಬೇರೆ ಮಾನಸಿಕ ಕಾಯಿಲೆ ಇರಬಹುದಾದ ಸಂಶಯ ಕೂಡ ವ್ಯಕ್ತ ಪಡಿಸಿ, ಒಬ್ಬ ಪ್ರಸಿದ್ಧ ಹೋಮಿಯೋಪಥಿ ಡಾಕ್ಟರ್ ಮತ್ತು ಮನೋತಜ್ಞರಿಗೆ ಭೇಟಿಮಾಡಲು ಬರೆದು ಕೊಟ್ಟರು.
ಅವಳನ್ನು ಕರೆದುಕೊಂಡು ಹೇಳಿದ ಕಡೆಗೆ ಹೋದೆ, ಎಷ್ಟು ಚಂದದ ಹುಡುಗಿ ಹಿಂಡಿದ ಕಬ್ಬಿನಂತೆ ಬಿಳಚಿದ್ದಳು, ಹೋಮಿಯೋಪಥಿ ಅವಳಿಗೆ ಒಗ್ಗಿತು, ಆದರೂ ಮತ್ತೊಮ್ಮೆ ಗರ್ಭಪಾತವಾದಾಗ ನನಗೆ ಸಹನೆಗೆಟ್ಟಿತು.
ಮಾನಸಿಕ ತಜ್ಞರು ನನ್ನೊಡನೆ ಕೆಲ ವಿಷಯ ಹಂಚಿಕೊಳ್ಳಲು ಕರೆದಿದ್ದರು,ಉಭಯ ಕುಶಲೋಪರಿಯ ನಂತರ ನಿಮಗೆ ಆಕೆ ಎಷ್ಟು ವರುಷದ ಪರಿಚಯ ಅಂತ ಪ್ರಶ್ನಿಸಿದರು, ನಾನು ಹೇಳಿದೆ, ಅವರು " ನೀವಾಕೆಗೆ ಮೊದಲೆ ಪರಿಚಯವಾಗಿದ್ದರೆ ಒಳ್ಳೆಯದಿತ್ತು, ಅವಳ ಮದುವೆ ಈ ಗರ್ಭಪಾತ ಎರಡೂ ತಪ್ಪಿಸಬಹುದಿತ್ತು ಮೊದಲನೆಯದು ಆಕೆಗೆ ಓದಿನ ಹಂಬಲ, ಎರಡನೆಯದು ಆಕೆ ಇನ್ನು ಗಂಡನನ್ನು ಒಪ್ಪಿಕೊಂಡಿಲ್ಲ, ಗರ್ಭಕೋಶದ ಬೆಳವಣಿಗೆಗೆ ಕೊಟ್ಟ ಔಷಧ ಪ್ರಯೋಜನ ಆದರು ಆಕೆಗೆ ಅದು ಇಷ್ಟ ಇಲ್ಲದ ಕಾರಣಕ್ಕೆ ಗಂಡನ ಅತಿರೇಕದ ವರ್ತನೆ ಮನೆಯವರ ನಡವಳಿಕೆ ಗರ್ಭಪಾತಕ್ಕೆ ನೇರ ಕಾರಣ" ನನಗೆ ಶಾಕ್ ಆಯಿತು, ಹೌದಲ್ಲ, ಆಕೆಗೆ ನಾನು ಕೊಡಿಸಬೇಕಾದದ್ದು ಬೇರೆಯದೆ ಚಿಕಿತ್ಸೆ ಅನ್ನಿಸಿತು, ಡಾಕ್ಟರ್ ಹತ್ತಿರ ಮಾತಾಡಿ ಅದನ್ನು ತಿಳಿಸಿದೆ, ಒಪ್ಪಿದ ಅವರು" ನಿಮ್ಮ ಗೆಳೆತನದ ಮೇಲಿನ ನಂಬಿಕೆಗೆ ಈ ಕೆಲಸ ಮಾಡಿಕೊಡುತ್ತೇನೆ" ಎಂದರು.
ಈ ಮಾತಿಗೆ ಈಗ ಮೂರು ವರ್ಷ, ಮೊನ್ನೆ ಮೊನ್ನೆತನಕ ನಾನು ಬರೋಬ್ಬರಿ ಎರಡು ವರ್ಷ ಆಕೆಯನ್ನು ಭೇಟಿಯಾಗಿರಲಿಲ್ಲ, ಯಾವುದೋ ಕಂಪನಿಗೆ ಅಪ್ಲೈ ಮಾಡಿದ್ದೆ ಕೆಲಸಕ್ಕೆ, ಅಲ್ಲಿ ಸಂದರ್ಶನಕ್ಕೆ ಕರೆ ಬಂದಿತ್ತು, ಹೋದಾಗ ಭೆಟ್ಟಿಯಾಯಿತು, ಅದೆಷ್ಟು ಖುಷಿಯಾಯಿತೆಂದರೆ ನಿಮಗೆ ಹೇಳಲಾರೆ..
ಆಕೆಗೆ ನಾನು ಕೊಡಿಸಿದ್ದು ಆರು ತಿಂಗಳ ಆತ್ಮವಿಶ್ವಾಸದ ಮತ್ತು ನಿರ್ಧಾರ ತೆಗೆದುಕೊಳ್ಳುವ ಆಪ್ತ ಸಲಹೆ, ಮನೆಯವರನ್ನು ಒಪ್ಪಿಸಿ ಮದುವೆಯಿಂದ ಆದ ತೊಂದರೆಯನ್ನು ವಿವರಿಸಿ ಮತ್ತೆ ಹೊಸ ಬದುಕಿಗೆ ಮರಳುವ ಭರವಸೆ, ಕೆಲಸದಲ್ಲಿದ್ದೆ ಓದುತ್ತಿರುವ ಆಕೆ ನನ್ನ ಪ್ರತಿಬಿಂಬದಂತೆ ಕಂಡದ್ದು ಸುಳ್ಳಲ್ಲ, ಆದರೂ ಸಮಾಜದ ನೀತಿಗಳಲ್ಲಿ ಆಸರೆಯಿರದೆ ಕಳೆದೆ ಹೋಗುವ ಹೆಣ್ಣುಗಳ ಸಂಖ್ಯೆ ನನಗೆ ಗಾಭರಿ ಹುಟ್ಟಿಸುತ್ತದೆ, ಅತಂತ್ರ ಸ್ಥಿತಿಯಲ್ಲಿ ಬದುಕುವ ಅವರನ್ನು ತಲುಪಲಾಗದ ನಮ್ಮ ಅಸಹಾಯಕತೆಯ ಬಗ್ಗೆ ಜಿಗುಪ್ಸೆಯೂ, ಕೊನೆಗೂ ಪ್ರಶ್ನೆಗಳೆಷ್ಟೋ ಉತ್ತರವಿರದೆ ಜಡಪಡಿಸುತ್ತವೆ..