Tuesday, April 16, 2013

ಮಳೆ ಎಂಬ ಪುಳಕ

ಮಳೆ ಬರುವ ಮುನ್ನ..


ಭಾವಗಳ ಮೋಡದ ಜೋಲಿಯಲ್ಲಿ
ಇಣುಕುವ ನೀನು ನನ್ನ ಭಾನು
ಹಸಿಯಾದ ಎದೆ ನೆಲದಿ ಮೊಳಕೆ ಒಡೆಯಿತೇ
ಬಯಕೆಗಗಳ ಭವಿಷ್ಯದ ಕಾನು?

ಹೊಳೆಯುತಿಹ ಕಂಗಳಲ್ಲಿ
ಮಳೆಯ ಮುನ್ನಿನ ಮಿಂಚು
ವರುಣನಂತೆನ್ನ ಇಳೆಯಾಗಿಸಿ
ಬಳಸಿ ತಬ್ಬುವ ಹೊಂಚು

ನಿಲ್ಲು ನಲ್ಲ..
ನಿನ್ನ ಒಲವ ಸುಧೆಗೆ ಮೈ
ಒಡ್ಡುವ ನನ್ನ
ಒಮ್ಮೆ ಕಾಯಿಸಿ ನೋಡು
ಮಳೆ ಬರುವ ಮುನ್ನ!!

ಮಳೆ ಬಂತು

ಬಿರು ಬಿಸಿಲಿಗೆ ಕಾದ
ಭುವಿಗೆ ಬಿದ್ದ ಮೊದಲ
ಮಳೆಯ ಹನಿ
ಕಡಲ ಒಡಲ ಚಿಪ್ಪೊಂದರಲ್ಲಿ
ಸದ್ದಿಲ್ಲದೆ ಕಾಯುತಿದೆ
ರೂಪಾಂತರಿಸಲು
ಒಂದು ಸುಂದರ ಮುತ್ತು!

ಕಾಗೆ ಗುಬ್ಬಿಗಳಿಗೀಗ
ಒಂದೇ ಮರದ ಆಶ್ರಯ
ಬರುವ ಮುಸಲಧಾರೆಯಂತ 
ಮಳೆಗೆ ಗೂಡು ಕಟ್ಟಿ 
ಬೆಚ್ಚಗಾಗುವ ತವಕ

ಬಂದೇ ಬಂತು ಮಳೆ
ನನ್ನೆದೆಯ ಇಳೆಗೆ
ನೀ ಬಂದ ಗಳಿಗೆ!!

ಮಳೆಯ ನಂತರ


ತಂತಿಗಳಲ್ಲಿ ಜೋತು ಬಿದ್ದ
ಹನಿಗಳಿಗ್ಯಾವ ಅವಸರವಿಲ್ಲ
ಉಕ್ಕುವ ನದಿಗಳಿಗೆ 
ಹರೆಯದ ಪುಳಕ
ಕೆರೆಗಳೋ ನಮ್ಮ ಕಿರುತನದ 
ಬಿಂಬ ತೋರುತಿವೆ

ನನ್ನ ನಲ್ಲ...

ವರುಣನಾಗಿ ನನ್ನೆದೆಗೆ 
ನೀ ಪ್ರೇಮ ಸುರಿಸಿ
ಹನಿಗಳ ಧಾರೆಯಲ್ಲಿ 
ನನ್ನ ವರಿಸಿ
ಹೆಣ್ಣಾಗಿಸಿದೆ!!

ಹಸಿರ ಚಲ್ಲಿದ ಹಾದಿಯಲ್ಲಿ
ಉದುರಿದ ನಿರೀಕ್ಷೆಯ
ಎಲೆಗಳು
ನಮ್ಮ ಸ್ವಾಗತಿಸಿದೆ 
ಶಾಲ್ಮಲಿಯ ದಳಗಳು

ನಾನೀಗ ಇಳೆ
ನಿನ್ನಾತ್ಮದಷ್ಟು 
ಪರಿಶುದ್ಧ
ನಿನ್ನ ಒಲವ ಮಳೆ
ತೊಳೆಯಿತು
ನನ್ನೆಲ್ಲ ಕೊಳೆ!!


 
 (Image curtecy:Internet)






Wednesday, April 10, 2013

ಬೆಳಕು-ಅವಳು ಮತ್ತೆರಡು ಕಥೆಗಳು

ಯುಗಾದಿ ಬಂದಿದೆ..ನಾವೆಲ್ಲಾ ಕಾಲನ ಚಕ್ರಕ್ಕೆ ತಲೆಕೊಟ್ಟು ನಿಂತಿದ್ದೇವೆ ಮತ್ತೆ  ಭೂತ-ವರ್ತಮಾನ-ಭವಿಷ್ಯಗಳ ಅದೇ ಗೊಂದಲದ ನಡುವೆ,ಬದುಕು ಕೆಲವರಿಗೆ ಭಾರೀ ಬದಲಾದರೆ,ಕೆಲವರಿಗೆ ಪರವಾಗಿಲ್ಲ ಎನ್ನಿಸಿತೋ?, ಇನ್ನೂ ನನ್ನಂತವರಿಗೆ ಕಾಡಿಗೆಯ ಕಂಗಳ ನಡುವೆ ಕಣ್ಣೀರ ಮುಚ್ಚಿಟ್ಟು..ಸಿಹಿ ಮಾತುಗಳ ನುಡಿಸಿ..ಕಹಿಯಾಗಿ ನಗುವುದ ಕಲಿಸಿದೆ!!ಕಾಲನೇ ನಿನ್ನ ವಿಶ್ವರೂಪಕ್ಕೊಂದು ನಮನ....ಮತ್ತಷ್ಟು ಸ್ರವಿಸುವ ಋತುಗಳು..ಇನ್ನಷ್ಟು ಉದ್ದದ ಬದುಕು..ನಿರಂತರ ಅಭಾವ ವೈರಾಗ್ಯ..ನಿನ್ನ ಕಾಲವೋ ನನ್ನ ಕಾಲವೋ ಮುಗಿಯುವಷ್ಟು ಬದುಕು..ಸಾರ್ಥಕವಾಗಿದ್ದರೆ ಸಾಕು..ಶುಭಾಶಯಗಳು ನನ್ನೆಲ್ಲ ಬಂಧುಗಳಿಗೆ..ಎಲ್ಲಕ್ಕಿಂತ ಸವಿ ಸ್ನೇಹದ್ದು..ಅದು ಬೆಲ್ಲವನ್ನು..ವಾಸ್ತವದ ಬೇವಿನ ಕಹಿಯನ್ನೂ ಮರೆಸಿ ಬಿಡುತ್ತದೆ..

ಬೆಳಕಿಗೂ ಹುಡುಕಾಟಕ್ಕೂ ಆಧ್ಯಾತ್ಮಕ್ಕೂ ಮುಗಿಯದ ನಂಟು..ಕೆಳಗಿನೆರಡು ಭಾವಬಿಂದುಗಳು (ಕಥೆ ಎನ್ನಲಾರೆ..ಅದನ್ನು ನೀವೇನು ಕರೆಯಬಹುದು) ನಿಮಗಾಗಿ..ಓದಿ..ಅನಿಸಿಕೆ ತಿಳಿಸಿ...

ಬೆಳಕು -೧


ಕತ್ತಲಿತ್ತು..ನಸು ಕತ್ತಲಿಗೂ ಮೂಡಣದ ಉಷೆಗೂ ನಿಲ್ಲದ ವಾದ-ಪ್ರತಿವಾದದ ಸಮಯ..
ಇಲ್ಲಿ ಆಕೆ ಕಾದದ್ದು ಇವರಿಬ್ಬರಿಗೂ ಅಲ್ಲ..ಗೊತ್ತು ಗುರಿ ಇರದ ಪಯಣದಲಿ ಸಿಕ್ಕು ಮರೆಯಾದ ಅವನಿಗಾಗಿ...
ಹುಡುಕುವ ಭ್ರಮರ..ಎಲ್ಲ ಬಂಧಗಳ ಬಿಟ್ಟು ಅವನ ಆಸೆ ಹೂ ಗಂಧದ ಬೆನ್ನು ಹತ್ತಿದ ತಿತಲಿ..
ತನ್ನ ಗುರುತ್ವಾಕರ್ಷಣೆಯ ಮೀರಿದ ಅದ್ಯಾವದೋ ಅಯಸ್ಕಾಂತೀಯ ಸೆಳೆತಕ್ಕೆ ಅರಿವಿಲ್ಲದೆ ಸಿಕ್ಕಿದ ಕಬ್ಬಿಣದ ತುಂಡು..
ತಾನು ಮೀರಾಳೋ ರಾಧೆಯೋ ಇನ್ನೇನೊ ಇರಬಹುದಾದ ಕಲ್ಪನೆ ಆಕೆಗೆ ಇದ್ದಂತಿಲ್ಲ..
ಬೇಟಕ್ಕೆ ಕಾದ ಹೆಣ್ಣು ಹುಲಿಯೇ? ಅನಿಸುತ್ತಿಲ್ಲ..ಮುಖದಲ್ಲಿ ಮುಗ್ಧತೆ..ಕೆನ್ನೆಯಲ್ಲಿ  ಮೂಡಣದ್ದೆ ಕೆಂಪು,
ಕಣ್ಣಲ್ಲಿ ಯಾರನ್ನೋ ಹುಡುಕುತ್ತಿರುವ ಸೂಚನೆ..
ಯಾರದ್ದೋ ನೆರಳಾಡಿತು..ಅವನೇ ಇರಬೇಕು..ಕಣ್ಣರಳಿತು..
ಮತ್ತೆ ಸಣ್ಣಗಾದ ಪಾಪೆಯಲ್ಲಿ ಕಂಡದ್ದು ಅವನದಲ್ಲ..ಇವನ ಬಿಂಬ..
ಯಾಕೆ ಬಂದೆ? ಎನ್ನಲಿಲ್ಲ..
ಅವನು ಸುಡುವ ಬೆಂಕಿಯ ಕಣ್ಣಲ್ಲಿ ಹೊತ್ತಿದ್ದ ಕಾಮಣ್ಣ..
ಆಸೆಗಳ ಬಳ್ಳಿಯಲ್ಲಿ ಅರಳಿದ್ದ ಹೂವು ಕಮರಿಬಿಡಬೇಕು ಅವನ ಕಾಮಾಗ್ನಿಯಲ್ಲಿ..
ಕೈ ಹಡಿದ..ಹತ್ತಿರಕ್ಕೆಳೆದ..
ದೇಹದ ಕಣಕಣವೂ ಮಿದುವಾಗುವ ಸಮಯ..ಅವನ ಬಲಿಷ್ಟ ಹಿಡಿತದಲ್ಲಿ..
ಅವಳ ಹೆಣ್ತನ ಎಂದಿನಂತೆ ಕರಗಲೇ ಬೇಕು..
ಆದರೆ?..
ಅವನ ಸುರತದ ಕರೆಗೆ ಆವಳ ದೇಹ ಕೆರಳಲಿಲ್ಲ..
ಅವನ ಸ್ಪರ್ಶದ ಮೋಡಿಗೆ ದೇಹ ವೀಣೆ ಮಿಡಿಯಲಿಲ್ಲ..
ಅವ ಅವಳ ಇಡಿ ಇಡಿಯಾಗಿ ಜಾಲಾಡಿ ಸೋತ..
ಅಹಂ ಬೆವರಾಗಿ ಹರಿದಿತ್ತು..ಆಕೆ ಇದ್ದಳು ಕೊರಡಿನಂತೆ..
ಅವಳ ಅವನೆಂದು ಇವನಾಗಲು ಸಾಧ್ಯವಿಲ್ಲ......
ಮತ್ತೆ ಹೋಗುವ ಮುನ್ನ..
ಅವನ ತುಟಿಗಳಲ್ಲಿದ್ದದ್ದು ಪ್ರಶ್ನೆ.. ಯಾಕೆ ಹೀಗಾಯ್ತು?..
ಅವಳ ಮನಸು ಉತ್ತರಿಸಿತ್ತು.."ಅಂದು ನೀ ಅವನಾಗಿದ್ದೆ ಪ್ರೇಮ ಮೂರ್ತಿ..ಇಂದು ಕೇವಲ ನೀನು ಸ್ವಾರ್ಥಿ!!  ನೀನವನಲ್ಲ!!" ಕಾಮದ ಕತ್ತಲು ಓಡಿತ್ತು..ಬೆಳಕು ಗೆದ್ದಿತ್ತು..

ಬೆಳಕು ೨


"ನಾ ಬರಲೇ?" ಧ್ವನಿಯೊಂದು ಕೇಳಿತು..
"ನಾತಿಚರಾಮಿ" ಎಂದು ಕೈ ಹಿಡಿದ ಜೀವವ್ಯಾವುದೋ "ನಾನೊಲ್ಲೆ" ಎಂದು ದೂರ ಸರಿಯಿತು..
ನಾನಂದೆ"ಇದು ಬಲು ದೂರದ ಪಯಣ..ನಿಲ್ಲಲಾಗದು..ಅಂತ್ಯವಿಲ್ಲ..ಬರುವೆಯಾದರೆ ಬಾ ಜೊತೆಗೆ"
ಉಹುಂ...ಧ್ವನಿ ಮತ್ತೆ ಮರೆಯಾಯಿತು..
ನಾ ನಡೆಯುತ್ತಲೇ ಇದ್ದೇನೆ..ಬೆಳಕಿರದ ದಾರಿಯಲ್ಲಿ..
ನಡು ನಡುವೆ ಬೆಳಕ ತೋರುವುದು ಪುಟ್ಟ ದೀಪದ ಕುಡಿಯೊಂದು..
ಸಣ್ಣ ಹಣತೆಯೊಂದು..ಕೇಳುವುದು"ಅಮ್ಮಾ..ಇಷ್ಟು ಬೆಳಕು ಸಾಕೇ"
ನಿಂತಿಲ್ಲ ನನ್ನ ಪಯಣ..ದೂರದಿ ರಿಂಗಣಿಸುವ ನೆನಪುಗಳ ಜಾತ್ರೆಯ ಸದ್ದು..
ನಡುನಡುವೆ ಕಿವಿಗಡಚಿಕ್ಕುವ ವಾಸ್ತವದ ಸಿಡಿಮದ್ದು..
ಎಲ್ಲಾ ಬರೀ ಶಬ್ದಗಳು..ನೋಟಕ್ಕೆ ನಿಲುಕದ ಅಸ್ಪಷ್ಟ ಚಿತ್ರಗಳು..
ಈ ಕತ್ತಲ ಕೂಪದಲ್ಲಿ ಹೃದಯದ ಕದವ ಹುಡುಕುವದೆಂತು??ತೆರೆಯುವದೆಂತು??
ಓ ಬೆಳಕೇ..ನಿನ್ನೆಡೆಗೆ ನಡೆಯುತ್ತಲೆ ಇದ್ದೇನೆ..ಆದರು ಈ ಬದುಕ ಯಾತ್ರೆ ಮುಗಿಯದಲ್ಲ..
ಇನ್ನೆಷ್ಟು ದಿನ ಈ ಒಂಟಿ ಪಯಣ ..

ಆಯಾಸಕ್ಕೆ ಒಮ್ಮೆ ನಿಂತು ನೋಡಿದರೆ ಅದು ಚಂದ್ರನಿರದ ನಭ..
ತಾರೆಗಳ ಕಿತ್ತು ತಿನ್ನುವಾಸೆಯಾಯ್ತು..ಕೈ ಚಾಚಿದೆ..ಕಣ್ಣು ಒದ್ದೆಯಾಯ್ತು..
ಅವನೆಲ್ಲಿಯ ಚಂದ್ರಮ??ಬದುಕಿಗೆ ಬೆಳಕು ತರುವನೆಂದ..
ಬಲು ದೊಡ್ಡ ಸ್ವಾರ್ಥಿ..ತನಗೆ ಬೇಕೆಂದಾಗ ಓಲೈಸುವ..ಬೇಡವೆಂದಾಗ ನನ್ನಿರವ
ಕಿತ್ತೆಸೆದು ಅಮವಾಸ್ಯೆಯಾಗುವನು..
ಜೀವವೇ ಮಿಡುಕದಿರು..ಆರಂಭವಿದೆ..ಅಂದರೆ ಅಂತ್ಯವಿರಲೇ ಬೇಕು..
ಅವರವರ ಬಾಳ ಪಯಣ ಅವರು ನಡೆಯಲೇ ಬೇಕು..
ಇಂದಲ್ಲ ನಾಳೆ ಬೆಳಕಿನ ಲೋಕಕ್ಕೆ ನಿನ್ನ ಕತ್ತಲ ಲೋಕ ತೆರೆಯಲೇ ಬೇಕು...
ಎಂದು ಮನಸಿಗೆ ಬುದ್ಧಿ ಹೇಳಿದ್ದೇನೆ..ನಾನೂ ನಡೆದಿದ್ದೇನೆ..
ನನ್ನಂತೆ ನೀವೂ...ನಿಮಗೆ ನೀವಿದ್ದ ಹಾದಿ ನಸು ಬೆಳಕಿರಬಹುದು..
ನಡುನಡುವೆ ಈ ಜಾತ್ರೆಯ ಸವಿಯಬಹುದು..ಅದು ನಿಮ್ಮ ವೈಭೋಗ..
ನನಗೆ ದಕ್ಕಿದುದು ಇಷ್ಟೇ..ಯಾಕೆಂದರೆ ನನ್ನ ಗುರಿ ಬೇರೆ ಇದೆ..
ಅದಕ್ಕೆ ನಡೆಯುತ್ತಲೇ ಇದ್ದೇನೆ..
ಒಂಟಿಯಾಗಿ..
ಅವನ ಬೆಳಕ ಲೋಕಕ್ಕೆ...
ಯಾವ ಬಂಧಗಳಿಲ್ಲದ ನಿರ್ಭೀತ ಸ್ವತಂತ್ರ ಜಗತ್ತಿಗೆ...ಅವನ ಸೇರಲು...




Sunday, March 31, 2013

ಬೇರು ಮತ್ತು ಬುಡ--ಸಂತ

ನೂರುಗಾವುದ ಹಬ್ಬಿದೆ
ಈ  ಮರ
ವಿಶಾಲ ಬಿಳಲುಗಳ ನಡುವೆ ತೂರುವದಿಲ್ಲ
ಸೂರ್ಯ ನಿನ್ನ ಬಿರುಬಿಸಿಲ ರಶ್ಮಿ
ನೂರುಕಥೆಗಳು..ನಾಲ್ಕು ಬುಡಗಳು
ಸುಯ್ಯೆಂದು ಬೀಸುವ ವಾಯುವಿಗೆ
 ಇಲ್ಲಿ ನಿತ್ಯ ಸಾಮಗಾನ
ಬುಡಗಳಲಿ ಮೂಲಾಧಾರ
ಕಾಮಕ್ರೋಧ ಆಸೆ-ನಿರಾಸೆಗಳ
ಸಾರ ನಿಸ್ಸಾರ ಸಂಸಾರ

ಆಧ್ಯಾತ್ಮವೆಂದೆ
ನೆರಳಲ್ಲಿ ವಿರಮಿಸಿದ ಸಾಧುಗಳ್ಯಾರು
ನನ್ನ ಕಂಡಿಲ್ಲ
ಕಟ್ಟಿದ ಹಕ್ಕಿ ಗೂಡುಗಲ ಬೆನ್ನೆಲುಬು ನಾ
ಚಕ್ರಾಧಾರ
ಬದುಕ ಅನುಭವ ಹೀರಿ ಕಂಡದ್ದು
ನಾ ಬೇರೆ ನೀಬೇರೆ
ಸೇರುವದಿದೆ ಒಂದೇ ಕಡಲು
ವಿಶಾಲ ನೀಲ ಶರಧಿ
ಮೇಲೊಂದು ಒಂಟಿ ಮುಗಿಲು

ತೆರೆ ಸರಿದ ಮೇಲೆ ಮೇಲೆರಿದ ಅನಿಕೇತನ
ಬುದ್ಧಿ ವಿಕಸಿತ ಹೃದಯ ಆಕಾಶ
ಇದೋ ನೀನಾದೆ ನನ್ನ ಸಹಸ್ರಾರ
ನೂರು ವಿಕಸಿತ ಸುಮಗಳು
ಒಂದೊಂದು ಒಂದೊಂದು ಬಣ್ಣ
ತೆರೆದಂತೆ ಕಾಣದ ಲೋಕವನ್ನ

ಬನ್ನಿ ಮಕ್ಕಳೇ ನಾ ತೋರುವೆ
ಉದುರಿದ ಒಣ ಎಲೆಗಳು
ಗೊಬ್ಬರವಾಗಿ ನನ್ನ ಒಡಲಿಗೆ ಸಾರವಾಗುವದನ್ನ,
ಆ ದಾರಿ ಈ ದಾರಿ ಎಲ್ಲ ದಾರಿಗಳು
ಬಂದೆನ್ನ ಸೇರುವದನ್ನ

ನಾ ಯಾರ ದೂರಲಿಲ್ಲ
ಕಟ್ಟಿದಿರಿ ನೀವು ಗೂಡು
ಒಂದೊಂದು ಕೊಂಬೆಗೊಂದೊಂದು
ಹೆಸರಿಟ್ಟಿರಿ,ಕಚ್ಚಾಡಿದಿರಿ
ಇನ್ನೂ ನನ್ನ ಬೇರ ಅರಿಯಲಿಲ್ಲ
ದೇವರೆಂದಿರಿ
ಅತಿಆಳಕ್ಕಿಳಿದ ನನ್ನ ಬೇರುಗಳಲ್ಲಿ
ಅತಿವಾದಿ ಅವಕಾಶಗಳಿಲ್ಲ
ಅಲ್ಲಿರುವನು ಧ್ಯಾನಸ್ಥ
ಅವಿಚಾರಿ ಸನಾತನಿ ಸಂತ
ನಾ ಚಾರ್ವಾಕ
ನಾಸ್ತಿಕನು ಎನ್ನದಿರಿ
ನಾನದೇ  ನೂರು ಗಾವುದ
ಹಬ್ಬಿದ ವಿಶಾಲ ಮರ !!













Sunday, March 24, 2013

ಬರೆದಷ್ಟೂ ಇದೆ ನಿನ್ನ ಕಥೆ...

ಕಥೆ-೧
ಆಗಷ್ಟೇ ಎಚ್ಚರವಾಗಿತ್ತು  ಚಿಂಕುವಿಗೆ, ಎಚ್ಚರವಾಗುತ್ತಿದ್ದ ಹಾಗೆ "ಅಮ್ಮಾ" ಎಂದು ಕರೆದಾಗ ಓಡಿ ಬರುತ್ತಿದ್ದ ಅವನ ಮುದ್ದು ಅಮ್ಮ ಅವನ ಮೇಲೆ ಮುತ್ತಿನ ಮಳೆ ಸುರಿಸಿ ಮುದ್ದಾಡಿ ,ಹಾಸಿಗೆ ಇಂದ ಎತ್ತಿಕೊಂಡು ಬಂದು ಸೋಫಾದ ಮೇಲೆ ಮಲಗಿಸುವುದು ನಿತ್ಯದ ವಾಡಿಕೆ..ಚಿಂಕು "ಅಮ್ಮ" ಕರೆದ,ಮುಸುಕು ಹೊದ್ದವನಂತೆ ನಾಟಕ ಮಾಡಿ ಮಲಗಿದ..ಅಮ್ಮ ಯಾಕೋ ಬರಲಿಲ್ಲ ಎಂದು ಮುಸುಕೆಳೆದು ನೋಡಿದ..ಮತ್ತೆ ಬೇಜಾರಾಯಿತು ,ನಿಧಾನಕ್ಕೆ ಎದ್ದ..ಕೈಯಲ್ಲಿ ಅಮ್ಮ ಜಾತ್ರೆಗೆ ತೆಗಿಸಿದ್ದ ಆಟದ ಪಿಸ್ತೂಲು ಹಿಡಿದು ಅಮ್ಮ ಎಲ್ಲಿ ಎಂದು ಹುಡುಕಿದ..ಮನೆ ತುಂಬಾ ಇದ್ದ ಜನಗಳ ಮಧ್ಯೆ ಅಮ್ಮ ಕಾಣಿಸಲಿಲ್ಲ..
ಸೀದಾ ಅಜ್ಜಿ ,ಅಪ್ಪ ಇಬ್ಬರೂ ಕೂತಿದ್ದ ಕೋಣೆಗೆ ಬಂದ,ಅಪ್ಪನ ಕಣ್ಣು ಕೆಂಪಾಗಿತ್ತು..
"ಅಪ್ಪಾ,ನಿನ್ನೆ ನಿದ್ದೆ ಮಾಡಿಸ್ತಾ ಅಮ್ಮ  ಇವತ್ತು ಬೆಳಗ್ಗೆ ಬರ್ತಾರೆ ಅಂದಿದ್ದೆ,ಯಾಕಪ್ಪ ಬರ್ಲಿಲ್ಲ"
ಚಿಂಕು ಕಣ್ಣಲ್ಲಿ ನೀರಿತ್ತು..ಅಪ್ಪ ಕಣ್ಣು ಮತ್ತೆ ಕೆಂಪಾಯ್ತು..ಕಣ್ಣಲ್ಲಿ ನಿನ್ನೆ ಹಾಗೆ ನೀರಿರಲಿಲ್ಲ ಅಷ್ಟೆ..
"ಪುಟ್ಟಾ,ನಿನ್ನ ನೋಡ್ಕೊಳ್ಳೋಕೆ ಹೊಸಾ ಅಮ್ಮ ಬರ್ತಾರೆ"
"ಇಲ್ಲಾ ನಂಗೆ ನನ್ನ ಅಮ್ಮ ಬೇಕು"
"ಏ ಹಾಳು ಶನಿ ಮುಂಡೇದು,ಇದರ ಬಾಯಲ್ಲಿ ಕೆಂಡಾ ಸುರಿಯಾ,ಎರಡು ಏಟು ಬಿಗೀತೀನಿ ನೋಡು,ಒಂದು ಪೈಸಾ ಅಪ್ಪನ ಮನೆ ಇಂದ ತರಲಿಲ್ಲ ನಿನ್ನ ಅಮ್ಮ,ಹೇಳಿದ್ವಿ ಅಂತ ಬೆಂಕಿ ಹಚಿಕೊಂಡು ನೆಗೆದು ಬಿದ್ಲು,ಈಗ ನನ್ನ ಕಡೆ ಸಂಬಂಧ ಆಗೋದ್ರಲ್ಲಿದೆ,ಕೆಟ್ಟ ಮಾತು ಆಡ್ಬೆಡ್ವೋ ಮುಂಡೇದೇ, ಯೆಯ್ ದಿವಾಕರ,ಈ ಮಗಿನ ಎತ್ಕೊಂಡು ಹೊರಗೆ ಹೋಗು"
"ಅಜ್ಜೀ ,ಅಜ್ಜೀ ನೀನು ಒಳ್ಳೆ ಅಜ್ಜಿ ಅಲ್ಲ,ಬರೀ ಕೆಟ್ಟ ಮಾತಾಡ್ತೀಯ,ನೀನೇ ಹಚ್ಚಿದ್ದು ಅಮ್ಮಂಗೆ ಬೆಂಕಿ..ನನ್ನ ಅವತ್ತು ಕೋಣೇಲಿ ಕೂಡಿದ್ದು ನೀನೇ..ಉಂ..ಊಂ..ಅಪ್ಪಾ ಅಪ್ಪ ಬಾ ಅಪ್ಪಾ,ನಾವು ಅಮ್ಮನ ಹತ್ತಿರ ಹೋಗೋಣ, ಅಜ್ಜಿ ಆ ಹೊಸಾ ಅಮ್ಮ ಬೇಕಾದ್ರೆ ಇಲ್ಲೇ ಇರ್ಲಿ"
ಚಿಂಕು ಅಪ್ಪನ ಹತ್ತಿರ ಓಡಿದ..ಅಪ್ಪ ಅಮ್ಮನ ಫೋಟೊ ಮುಂದೆ ಹೊಸ ಅಮ್ಮನ ಕೈ ಹಿಡಿದು ನಿಂತಿದ್ದು ನೋಡುತ್ತಿದ್ದ ಹಾಗೆ
ಚಿಂಕುಗೆ ಅಳು ಬಂತು,ಕೋಪವೂ ಬಂತು..ಕೈಯಲ್ಲಿದ್ದ ಆಟದ ಪಿಸ್ತೂಲನ್ನ ಅಪ್ಪ, ಹೊಸಾ ಅಮ್ಮ ಇಬ್ಬರಿಗು ತೋರಿಸಿ"ಢಂ" ಅನ್ನಿಸಿದ!!

ಕಥೆ-೨
ಅವಳು ಎದ್ದದ್ದು ಈಗಷ್ಟೇ..ಯಾಕೊ ಕೆಲಸಕ್ಕೆ ಹೋಗುವ ಮನಸಿಲ್ಲ ಆಕೆಗೆ..ಮುಖ ತೊಳೆದು ಬಂದು ಕನ್ನಡಿ ನೋಡಿದಳು..
ತನ್ನ ಮುಖವೆ ಅಲ್ಲ ಅನ್ನುವಷ್ಟು ವಿಚಿತ್ರವಾಗಿ ಕಾಣಿಸಿತು ಅವಳಿಗೆ..ಮೊಬೈಲ್ ರಿಂಗಣಿಸಿತು..ನೋಡಿದಳು..ಆ ಕಡೆ ಆಶಾ"ಯಾಕೇ ಇನ್ನು ರೆಡಿ ಆಗಿಲ್ವಾ?ಕ್ಯಾಬ್ ನಮ್ಮನೆ ಇಂದ ಹೊರಟಾಯ್ತು" ಫೋನ್ ಕಟ್..ಬೇಗ ಬೇಗ ಒಂದು ಸೀರೆ ಸುತ್ತಿ ವ್ಯಾನಿಟಿ ಬ್ಯಾಗು ಸಿಕ್ಕಿಸಿ,ಫೋನ್ ಹಿಡಿದು ತಯಾರಾದಳು.."ಸಂಜೆ ಬಂದು ನಾಕು ಚೆಂಬು ಸ್ನಾನ ಮಾಡಿದ್ರಾಯ್ತು" ಅಂದು ಚಪ್ಪಲಿ ಮೆಟ್ಟಿ ಬಾಗಿಲು ಬೀಗ ತೊಡಿಸಿ ರಸ್ತೆಯ ಕೊನೆಗೆ ಬಂದು ನಿಂತಳು..
ಕ್ಯಾಬ್ ಬಂದು ಪಕ್ಕದಲ್ಲಿ ನಿಂತಿತು.."ಅಬ್ಬಾ ಆಗ್ಲೆ ರೆಡಿ ಆಗಿದ್ಯಾ?? ಬಾ ಕುತ್ಕೋ, ನಂದೀಶ ನಡೀರಿ" ಎಂದು ಆಶಾ ಎಂದಿನಂತೆ ವಟ ವಟ ಶುರು ಮಾಡಿದಾಗ ಮನಸಿಗೆ ಎಷ್ಟೋ ಹಾಯೆನ್ನಿಸಿತು..ಅವಳೊಬ್ಬಳೇ ತಾನೇ ತನ್ನ ಯಾವಾಗ್ಲೂ ಕುಶಿಯಾಗಿ ನಗಿಸ್ತಾ ಇರೋಳು..ಮಾತು ಸಲ್ಪ ಜಾಸ್ತಿ ಆದ್ರೆ ಅದರಿಂದ ತನಗೇನು ತೊಂದರೆ ಇಲ್ಲ..ಬದಲಾಗಿ ಎಲ್ಲ ವಿಶಯಗಳೂ ತನಗೆ ತಿಳಿಯುತ್ತವೆ..ಆಕೆ ಇಂದಲೇ ಅಲ್ಲವೇ ಇವತ್ತು ದೀಪಕ್ ಮ್ಯಾನೇಜರ್ ಆಗಿ ತಮ್ಮ ಟೀಮ್ ಜಾಯಿನ್ ಆಗ್ತಾ ಇರೋ ವಿಶಯ ತಿಳಿದದ್ದು..
ಯೋಚನೆಯಲ್ಲಿ ಆಫೀಸ್ ಬಂದದ್ದೇ ತಿಳಿಯಲಿಲ್ಲ,ಹೋಗಿ ಐಡಿ ಕಾರ್ಡ್ ಸ್ವೈಪ್ ಮಾಡಿ ತನ್ನ ಕ್ಯುಬಿಕ್ ಬಳಿ ಬಂದಾಗ ಕಂಪ್ಯೂಟರ್ ಎದುರು ಒಂದು ಹೂವು ಮತ್ತು ಪತ್ರ ಕಾಣಿಸಿತು.."ನಿನಗಾಗಿ ಈ ದಿನ..ನನ್ನ ಕ್ಯಾಬಿನ್ ಅಲ್ಲಿ ಕಾಯ್ತಾ ಇರ್ತೀನಿ,ನಿನ್ನವ ದೀಪಕ್"
ತುಟಿಗಳ ಮೇಲೊಂದು ವಿಷಾದದ ನಗು ಸುಳಿದು ಹೋಯಿತು,"ಕಾಯುವದಾಗಿದ್ದರೆ ಯಾವತ್ತೋ ಕಾಯುತ್ತಿದ್ದೆ" ಮನಸು ಗೊಣಗಿತು..ಆಕೆಯ ಬದುಕಲ್ಲಿ ಬಿರುಗಾಳಿ ಎಬ್ಬಿಸಿದವ..ಕನಸುಗಳನ್ನೆಲ್ಲ ಚೂರು ಮಾಡಿ ತನ್ನ ಸಾಮ್ರಾಜ್ಯ ಕಟ್ಟಿ ಕೊಂಡವ,ಅವಳ ಅನಿವಾರ್ಯತೆಯನ್ನ ದೌರ್ಬಲ್ಯವಾಗಿ ಪರಿವರ್ತಿಸಿ ಆಕೆಯ ಬದುಕನ್ನೆ ನಾಶ ಮಾಡಿದವ,ಅವತ್ತು ಆಶಾ ಇಲ್ಲದೆ ಹೋಗಿರುತ್ತಿದ್ದರೆ ತಾನು ಜೀವಂತ ಉಳಿಯುವ ಪ್ರಶ್ನೆಯೇ ಇರುತ್ತಿರಲಿಲ್ಲ..ಅದು ಗೊತ್ತಿದ್ದೂ ಅದೆಂತಹ ಮನುಷ್ಯ ಈತ!!ಮತ್ತೆ ತನ್ನ ಬದುಕು ಸೂತ್ರ ತಪ್ಪಿದ ಪಟದಂತಾಗುವುದೇ??ಆಕೆಗೆ ಭಯವಾಯಿತು..
ಆದರೆ ಆಕೆ ಅಂದುಕೊಂಡಂತೆ ಏನಾಗಲಿಲ್ಲ..ದಿನಗಳು ಉರಳಿದವು..ತನ್ನ ಕಣ್ಣೆದುರೇ ದಿನ ಕಳೆದಂತೆ ಎಲ್ಲಾ ತಿಳಿದ ಅಶಾ ಅವನ ಕೈಗೊಂಬೆ ಆಗುತ್ತಿದ್ದನ್ನ ನೋಡುತ್ತಾ ಆಶ್ಚರ್ಯ ಚಕಿತಳಾಗುತ್ತಿದ್ದಳು ಅವಳು,ಆಶಾಳೊಡನೆ ಈ ವಿಶಯ ಚರ್ಚಿಸುವ ಆಕೆಯ ಪ್ರಯತ್ನಗಳು ವಿಫಲವಾಯಿತು"ಇದು ನನ್ನ ವೈಯುಕ್ತಿಕ ವಿಶಯ,ವ್ಯಕ್ತಿಗಳು, ಸಂದರ್ಭಗಳು ಬದಲಾಗುತ್ತಲೇ ಇರುತ್ತವೆ.ಅವನು ಆ ದಿನ ಬೇರೆ, ಈ ದಿನ ಬೇರೆ" ಎಂದು ಬಾಯಿ ಮುಚ್ಚಿಸಿದ್ದಳು..ಹೌದೇ? ಆ ಕ್ರೌರ್ಯ,ಹೆಣ್ಣೆಂದರೆ ಕಾಲ ಕಸದ ಮನೋಭಾವ ಅದು ಬದಲಾಗಬಹುದೇ?ಉತ್ತರವಿಲ್ಲ ಅವಳ ಬಳಿ.

ಹೀಗೊಂದು ಅಂತದ್ದೇ ದಿನ..ನಗು ನಗುತಾ ಆಶಾ ದೀಪಕ್ ಕ್ಯಾಬಿನ್ನಿಗೆ ಹೋದದ್ದು ಕಂಡಳು ಅವಳು..ನಂತರ ನಡೆದದ್ದು ದೊಡ್ಡ ಅವಾಂತರ..ಆಶಾ ಅಳುತ್ತಾ  ಬಂದದ್ದು ,ಅವತ್ತೇ ದೊಡ್ಡ ಮೀಟಿಂಗೊಂದು ಜರುಗಿ ದೀಪಕ್  ರಾಜೀನಾಮೆ ಕೊಟ್ಟದ್ದು ನಡೆಯಿತು..ತಾನೊಂದು ಸಾಕ್ಷಿಯಾಗಿ ಇದಕ್ಕೆ ಆಗಬೇಕಾದದ್ದೇನಿದೆ..ಅಂದು ಕೊಂಡಳು ಅವಳು..

ಮರುದಿನ ಕ್ಯಾಬಿನಲ್ಲಿ ಬರುತಾ ಆಶಾ ಹೇಳಿದಳು" ನಿನ್ನ ತರ ಮೊದ್ದು ಆಗಿದ್ರೆ ಏನೂ ನಡೆಯಲ್ಲ..ನಿನ್ನ ಗೋಳಾಡಿಸಿದ ಅವನನ್ನ ನಾ ಹಾದಿಗೆ ತಂದೆ ಅಷ್ಟೆ..ನಿನ್ನ ಬದುಕು ಹಾಳು ಮಾಡಿ ಆತ ಗೆದ್ದೆ ಅಂದುಕೊಂಡ.ಅವನ ಬದುಕು ಹಾಳು ಮಾಡಿ ನಿನ್ನ ನಾ ಗೆಲ್ಲಿಸಿದೆ,ನೀ ನನ್ನ ಬೈದುಕೊಂಡಿದ್ದೀಯಾ ಅಂತ ಗೊತ್ತು..ಆದರೆ ಅವನ ಮಾನ ತೆಗೆಯೊ ತನಕ ನನಗೆ ನಿನ್ನ ಜೊತೆ ಈ ನಾಟಕ ಅವಶ್ಯಕ ಆಗಿತ್ತು..ಹೇಳು ಸಮಾಧಾನವೇ?" ಅವಳ ಮೊಗದ ಮೇಲೊಂದು ನಿರ್ಲಿಪ್ತ ಮುಗುಳ್ನಗು ಹಾದು ಹೋಯಿತು!



Wednesday, March 13, 2013

ಗಂಧರ್ವ ಮತ್ತು ಅತ್ತರು

ಬರೆದ ಕವನಗಳಲ್ಲಿ ಸೂಸುತ್ತಿರುವುದು
ಕೇವಲ ನಿನ್ನ ನೆನಪುಗಳ ಪರಿಮಳ
ನನ್ನ ಕವನದ ಸಾರವೆಲ್ಲ ನಿನ್ನ ನೆನಪುಗಳ
ಒಟ್ಟೂ ಸಂಕಲನ!!

ನಿನ್ನೆದೆಯ ಕಡಲ ತಡಿಯ
ಮರಳ ರಾಶಿಯಲ್ಲಿ
ನನ್ನ ಒದ್ದೆಯಾದ ಹೆಜ್ಜೆ
ಗುರುತುಗಳ
ಹುಡುಕುವಾಸೆ ಹುಡುಗಾ!!

ಇಂದೇಕೆ ಸುಪ್ತ ಸಾಗರಕೆ ಈ ಅಬ್ಬರ
ನೂರು ಬಯಕೆಗಳ ಉಬ್ಬರ,
ಹುಣ್ಣಿಮೆಯೂ ಇಲ್ಲ ಎಂದಾಗ
ಕಂಡದ್ದು ನಿನ್ನ ಮುದ್ದು ಮುಖ!!

ಅಲೆಗಳೆಲ್ಲ ಬಂದು
ನನ್ನ ತೋಯಿಸುವಾಗ
ಬೊಗಸೆಯಲ್ಲಿದ್ದ
ಕಪ್ಪೆ ಚಿಪ್ಪಲ್ಲಿತ್ತು
ನೀ ಕೊಟ್ಟ ಮುತ್ತು!!

ಹೂಗಳ ತುಟಿಯಂಚಿನಲ್ಲಿ
ತುಳುಕಿದ ಮಧುವೆಲ್ಲ
ನಿನ್ನ ತುಂಟತನವ ನುಡಿದಿರಲು
ಮೌನದ ಬಾಹುಗಳಲ್ಲಿ ನಾನು ಬಂಧಿ!!

ಹೀಗೆಲ್ಲಾ ಮೈಮರೆತ ಮನಸಿಗೆ
ನಿನ್ನ ಸಾಕ್ಷಾತ್ಕಾರ
ಆದದ್ದು ಗಂಧರ್ವ
ಗೀತೆಯಂತೆ ನಿನ್ನ ದನಿ
ಕೇಳಿದಾಗಲೇ

ಹೇಳು ದೇವರ ಸ್ವಂತ ನಾಡಿನವನೇ!!

ದೂರದೂರಿನ ಗಾಳಿಯಲ್ಲಿ ಹೊತ್ತ
ನಿನ್ನ ಗಂಧವ ಕುಡಿದ
ಮನಸಿಗೆ ಮಾಯದ ಮತ್ತೇರಿದೆ,
ಮನೋವೇಗದಲ್ಲಿ ನಿನ್ನೂರ ತಲುಪಿ
ನಿನ್ನ ಕಣ್ಣಲ್ಲಿ ಕಣ್ಣನಿಡುವ ಹೊತ್ತು
ಕೇಳುವಾಸೆ
ಹೇಳು,
ನನ್ನ ಊರಲ್ಲಿ ಪ್ರೇಮದ ಅತ್ತರು
ಸೂಸುವ
ನಿನ್ನಂಥ
ಗಂಧರ್ವರಿಹರೇ??


Sunday, March 10, 2013

ಲಹರಿ-ಸಾಗರಿಕಾಳಿಗೊಂದು ಉತ್ತರ(ಪತ್ರ)

ಪ್ರಿಯ ಗೆಳತಿ ಸಾಗರಿ,
ಎಷ್ಟು ವಿಚಿತ್ರ ನೋಡು,ನಿನ್ನ ಪತ್ರ ನಿನ್ನ ಗೊಂದಲಮಯ ಮನಸ್ಸಿನ ಪ್ರತೀಕ,ಗೆಳತೀ  ನನಗೂ ಗೊತ್ತಮ್ಮಾ ಗೆಳೆತನ ನಮ್ಮನ್ನು ಅಲ್ಪವಾದರೂ ಬದಲಾಯಿಸಬೇಕು ಎಂದು,ಅಷ್ಟಿದ್ದೂ ಗೆಳೆಯರು ಯಾಕೆ ಬೇಕು ಹೇಳು? ಒಳ್ಳೆಯ ಗೆಳೆತನ ನಮ್ಮ ವ್ಯಕ್ತಿತ್ವದ
ದೌರ್ಬಲ್ಯಗಳನ್ನ ತುಂಬಾ ಚೆನ್ನಾಗಿ ಮರೆ ಮಾಚುತ್ತದೆ,ಒಂದು ರೀತಿಯ ಫುಲ್ ಫಿಲ್ ಮೆಂಟ್ ಅದು ಅಲ್ವಾ? ನಾನು ನಿನ್ನಂತೆ ಭಾವ ಜೀವಿಯಲ್ಲ,ಆದರೆ ನಿನ್ನ ಪತ್ರಕ್ಕೆ ನಾನು ಉತ್ತರಿಸಲೇ ಬೇಕು ಎನ್ನಿಸಿತು...ಅದಕ್ಕೆ ಈ ಮಾರೋಲೆ!!

ಮೂರು ವರ್ಷಗಳ ಹಿಂದೆ ಇದೇ ನಿನ್ನ ಶರೂ ಒಬ್ಬ ಸುಂದರ ಮನಸ್ಸಿನ ಗೆಳತಿಯನ್ನ ಭೇಟಿಯಾಗಿದ್ದು, ಆಕೆ ಸಾಹಿತ್ಯಾಸಕ್ತಳು,ಜಾಣೆ ಎಂದು ಖುಶಿ ಪಟ್ಟದ್ದೂ ಎಲ್ಲಾ ಸುಳ್ಳಲ್ಲ ,ಆದರೆ ಮೊದಮೊದಲು ತುಂಬಾ ಸರಳವಾಗಿರುತ್ತಿದ್ದ ನಿನ್ನ ಮಾತುಕತೆ ಒಗಟಂತಾದದ್ದು ಯಾಕೆ? ನಿನಗೆ ಗೊತ್ತಲ್ಲ, ನಾನು ಗುಡ್ ಲಿಸನರ್, ಅಷ್ಟಕ್ಕೆ ಬರಡು ಮನದವನಾದೆನೆ ಗೆಳತಿ?,ಒಪ್ಪಿದೆ,ನನಗೆ ನಿನ್ನಷ್ಟು ಎತ್ತರದಲ್ಲಿ ಯೋಚಿಸಲು ಬರದು, ಆದರೂ ನನಗೂ ಒಂದು ನೆಲೆಯಲ್ಲಿ ಇದ್ದ ನಿನ್ನ ಮೇಲಿನ ಗೌರವ ಪ್ರೀತಿ ಆದರವನ್ನ ಈ ಮೂರು ವರ್ಷಗಳಲ್ಲಿ ನೀನು ಅರಿತುಕೊಳ್ಳಲಿಲ್ಲ ಎಂದರೆ ನಾನೇನನ್ನಲಿ?

ಇನ್ನು ಗೆಳತಿ ಸಾಗರಿ, ನಾನು ಪುಸ್ತಕ ಮೇಳಕ್ಕೆ,ನಾಟಕಕ್ಕೆ ಬರಲಿಲ್ಲ ಎಂಬ ಸಣ್ಣ ಘಟನೆಗಳು ನಿನ್ನ ಯೋಚನೆಯಲ್ಲಿ ದೊಡ್ಡ ತಪ್ಪಾದದ್ದು ಯಾವಾಗ?ನಾನು ಸಾಮಾನ್ಯರಲ್ಲಿ ಸಾಮಾನ್ಯ,ನಿಮ್ಮ ಬುದ್ಧಿಜೀವಿಗಳ ಮಾತು-ಕತೆ,ನಡತೆ,ಚರ್ಚೆ,ಎಲ್ಲಾ ನನಗೆ ಅರ್ಥವಾಗದ ವಿಚಾರಗಳು, ನಾನು ಒಳ್ಳೆಯ ಸಾಹಿತ್ಯ ಮತ್ತು ಸಂಗಿತದ ಓದುಗ ಮತ್ತು ಕೇಳುಗ ಅಷ್ಟೇ, ಅದಕ್ಕಿಂತ ಹೆಚ್ಚಿನ ರಸಾಸ್ವಾದ ಮಾಡಲು ನನಗೆ ಆಗದು,ಅದು ನನ್ನ ಮಿತಿ,ನೀನು ನನ್ನನ್ನು ನನ್ನಂತೆಯೇ ಒಪ್ಪಿಕೊಳ್ಳಲು ಎಡವಿದ್ದು ಎಲ್ಲಿ? ನನ್ನ ಆರಡಿ ಎತ್ತರದ ದೇಹಕ್ಕೆ ನಿನ್ನ ಕನಸಿನ ಗೆಳೆಯನನ್ನ ಆರೋಪಿಸಿದ್ದು ನಿನ್ನದೇ ತಪ್ಪು ಅಲ್ಲವೇ?

ಹೇಳು ಗೆಳತಿ,ನಿನಗೆ ನನ್ನ ಸ್ನೇಹ ನಿನ್ನ ವ್ಯಕ್ತಿತ್ವದ ಅಪೂರ್ಣತೆಯನ್ನ ತುಂಬುವ ಒಂದು ಮಿಥ್ಯೆಯಾಗಿ ಮಾತ್ರ ಬೇಕಿತ್ತೆ?ನನ್ನನ್ನೇ ಬಯಸಿ ಬಯಸಿ ಪಡಕೊಂಡವಳಿಗೆ ಯಾಕೆ ಈ ಸೋಲು ಗೆಲವಿನ ದ್ವಂದ್ವ? ಹುಚ್ಚಿ, ಪ್ರೀತಿ ಸ್ನೇಹಗಳು ನಿಮ್ಮ ಬುದ್ಧಿವಂತಿಕೆಯ ಮಾತಲ್ಲಿ, ಬೌದ್ಧಿಕ ಕಸರತ್ತಿನಲ್ಲಿ ಅಡಗಿಲ್ಲ, ಜೀವಗಳ ಜೀವಾಳ ಅದು..ಅರ್ಥ ಮಾಡಿಕೋ..ನಿನ್ನ ಪುಸ್ತಕಗಳು(ನನಗಾಗಿ ತೆಗೆದು ಕೊಂಡದ್ದಲ್ಲವೇ) ಎಲ್ಲೂ ಹೋಗೋದಿಲ್ಲ.ನಾವು ಹುಡುಗರು ಕಣೇ,ಮಾತಿನಲ್ಲಿ ನಂಬಿಕೆಗಿಂತ ಕೃತಿಯಲ್ಲಿ ಜಾಸ್ತಿ, ನಿನ್ನ ಕಠೋರ ಪತ್ರ ನನ್ನನ್ನು ಪೆನ್ ಹಿಡಿಯೊ ಹಾಗೆ ಮಾಡಿತು ,ಅಷ್ಟೆ.


ನಿನ್ನ ಸ್ನೇಹ ನನಗಿನ್ನೂ ಬೇಕು,ಸಂಬಂಧಗಳ ನಿರಂತರತೆ ಹೀಗೆ ಜಾರಿಯಲ್ಲಿರಲಿ, ನಿನ್ನ ಹುಡುಕಾಟಕ್ಕೆ ಯಶಸ್ಸನ್ನು ಹಾರೈಸುತ್ತೇನೆ, ನನಗೂ ನಿನ್ನಂತೆ ಯೋಚಿಸುವುದಾಗಿದ್ದರೆ?ಬಿಡು,ಬರಿ ಪ್ರಶ್ನೆಗಳನ್ನೆ ನಂಬಿದವನಲ್ಲ ನಾನು,ಸಾಮಾನ್ಯತೆಯನ್ನ ಒಪ್ಪಿಕೊಂಡವನು.ನಿನ್ನ ಯಶಸ್ಸಿಗೆ ಹಾರೈಕೆ ಇದ್ದೇ ಇದೆ.ಆದರೆ ಒಂದು ಮಾತು, ನೀನು ನನ್ನನ್ನಗಲಿ, ಈ ಸಂಬಂಧದ ಕೊಂಡಿ ಕಳಚಿ ನಿನ್ನ ಗಮ್ಯವನ್ನ ಸೇರಲಾರೆ(ಹೇಳು ಸಾಧ್ಯವೇ), ನನಗೆ ಒಂದಷ್ಟು ಬದಲಾವಣೆ ಬೇಕು, ಈ ಪತ್ರ ಓದಿ ಉತ್ತರಿಸು,ನಾ ಸ್ವಲ್ಪವಾದರು ಬದಲಾಗಿದ್ದೇನೆಯೇ?ಇಲ್ಲವೇ? ಎಂದು. ಹೋಗುವದಾದರೆ ಈ ಬದುಕಿನ ಪಯಣದಲ್ಲಿ ನಾ ನಿನ್ನ ಜೊತೆಗಿದ್ದೇನೆ.
ಒಂದು ಬಿನ್ನಹ, ನನ್ನ ನನ್ನಂತೆಯೇ ಒಪ್ಪಿಕೋ,ಇದೊಂದೆ ನನ್ನ ಮನವಿ,ಬರಲೇ? ನಿನ್ನೆಲ್ಲ ಪ್ರಶ್ನೆಗಳಿಗು ಉತ್ತರ ಸಿಕ್ಕಿರಬಹುದು ಅಂದು ಕೊಂಡಿದ್ದೇನೆ.

                                                                                                           ಎಂದಿಗು ನಿನ್ನವ
                                                                                                            ಶರಧಿ


Sunday, February 24, 2013

"ಅವನು" ಎಂಬ ಕಾಣದ ಮಾಯೆ....

ಸುಳಿಯದಿರು ಮುಂದೆಂದೂ ನನ್ನ ಕಣ್ಣ ಮುಂದೆ..
ಓಡುವುದು ಮನಸು ಮತ್ತೆ ಗತಕಾಲ ಹಿಂದೆ!!

ನಿನ್ನ  ನೋಡಬಾರದಿತ್ತು..ಅದೂ ಇಷ್ಟು ವರುಷಗಳ ನಂತರ...ನೋಡಿದರೂ ನೀ ನನ್ನ ಮಾತಾಡಿಸಬಾರದಿತ್ತು..
ನಿನ್ನ ನನ್ನೆದೆಯ ಸಾಗರದ ಒಳಸುಳಿಯಾಗಿ ಬಚ್ಚಿಟ್ಟಿರುವೆ...ಅದ ಕೆಣಕುವ ನಿನ್ನ ಸಾಹಸಕ್ಕೆ ನಾ ಏನ ಹೇಳಲಿ??
ನನಗೆ ಸಂತಸವಾಯ್ತು..ನಿನ್ನ ಸಂಸಾರ ಸಮೇತ ಸಂತಸವಾಗಿ ನೋಡಿ..
"ಆರು ವರ್ಷಗಳ ಕಾಲ ಆರದ ಪ್ರೇಮದ ದೀಪವ ಕಣ್ಣಕುಡಿಯಂತೆ ಸಲಹಿದ್ದೆವು..ಯಾಕೆ ನನ್ನ ದೂರ ಮಾಡಿದೆ?? "
ಹೇಳು ಈಗ್ಯಾಕೆ ಬೇಕಿತ್ತು ಈ ಪ್ರಶ್ನೆ??
ನಿನ್ನಂತೆ ನನ್ನೊಳಗು ಒಂದು ಆರದ ದೀಪವಿತ್ತು..ಕಾಪಿಡುವ ಬಯಕೆಯೂ ಇತ್ತು..

ನೀನೆ ಹೇಳುತ್ತಿದ್ದ ಮಾತು ನೆನಪಿದೆಯಾ?? ನಾನೊಂದು ಸ್ವತಂತ್ರ ಹಕ್ಕಿ ಅಂತ..

ಬಾನಿನಲ್ಲಿ ಚುಕ್ಕಿಯಾಗಿ
ಹಾರುವ ನಿನಗೇಕೆ
ಬಂತು ಮೌನ?
ಮೌನದ ಮಾತಿನೆಲ್ಲೆಯ ಮೀರಿ
ದೂರದ ತೀರದಲ್ಲಿ
ಬರೀ ಖಾಲಿ ದೊಡ್ಡ ಶೂನ್ಯ !!
ನೀ ಅಲ್ಲೆ ನಿನ್ನ ಬಯಕೆಗಳ
ಮೊಟ್ಟೆ ಇಡ್ತಿಯಂತಲ್ಲ
ಹೋಮಾ??*
ನೀನಿವತ್ತು ಇಟ್ಟದ್ದು ನಿನ್ನ ಮೊಟ್ಟೆಯೋ
ನನ್ನ ಬರಡು ಬಯಕೆಗಳೋ??

ನೀನು ಗರುಡದ ಗೂಡು ನೋಡಿದ್ದೀಯಾ?? ನೋಡಿಲ್ಲ ಅಲ್ವಾ??ಅದು ಕಾಣೋದು ಅಪರೂಪ ಅಂತೆ..

 ನಾ ಯಾವತ್ತು ನಿನ್ನ ಬದಲಿಸ ಯತ್ನಿಸಿರಲಿಲ್ಲ...ಕಾರಣ ಇಷ್ಟೇ..ನಂಗೆ ನನ್ನ ತರ ನಾನು, ಅವನ ತರ ಅವನೇ ಇರೋ ಅಂತವ ಬೇಕಿತ್ತು..
ಹಾಗಂತ ನಾ ನಿನ್ನ ಪ್ರೀತಿಸಲಿಲ್ಲ ಅಂದುಕೋ ಬೇಡ..
ಮೊದಲ ಪ್ರೇಮ ಒಂದು ಅದ್ಭುತ..ಅದೂ ನಮ್ಮ ಪತ್ರಗಳಲ್ಲಿ ಬರೆದ ಪ್ರೇಮ ಕಾವ್ಯ..ನಿಜಕ್ಕು ಒಬ್ಬ ಹುಡುಗ ಹುಡುಗಿ ಪತ್ರಗಳಲ್ಲೇ ಪ್ರೀತಿಸಿದ್ರಾ?? ಅಂತ ಈಗ ಅಷ್ಟು ಆಶ್ಚರ್ಯ ನಂಗೇ!!

ಪ್ರೇಮಪತ್ರಗಳಲ್ಲಿ ನಾ ನಿನ್ನ
ನೀ ನನ್ನ  ಹುಡುಕಿದೆವು
ಸಿಗದ ಅದೃಷ್ಟದ ಚಿಂತಾಮಣಿಗಾಗಿ
ಮಿಡುಕಿದೆವು..!!!

ನಿನ್ನ ಬಿಟ್ಟು ಈ ಊರಿಗೆ ಬರೋ ಸಾಹಸ ನಂಗೆ ಬೇಕಿರಲಿಲ್ಲ ಕಣೋ...ಶಿವಮೊಗ್ಗದಲ್ಲಿಯೆ ಹಾಯಾಗಿ ಏನೋ ಮಾಡ್ಕೊಂಡು ಇಬ್ರೂ ಇದ್ಬಿಡಬಹುದಿತ್ತು..ಆದ್ರೆ ನಾ ಓದಿದ ಓದು ನನ್ನ ಪುತ್ತೂರಿನ ಯಾವ್ದೋ ಮೂಲೆಗೆ ಸೇರಿಸ್ತು..ಮೊದಲೇ ಪತ್ರಗಳಲ್ಲಿ ಬೆಳೆದ ಪ್ರೇಮ..ಮೊದಲು ವಾರಕ್ಕೆಒಂದಿತ್ತು..ಅಮೇಲೆ ತಿಂಗಳಿಗೆ ಒಂದಾಯ್ತು..ಮನಸಿನ ಮಾತುಗಳು ಬಂದಾಯ್ತು..

ನಂಗೆ ಗೊತ್ತು..ನಿನ್ನ ಮನಸಲ್ಲಿ ನೀನು ಕಮ್ಮಿ ಓದಿದವ ಅನ್ನೋ ಭಾವನೆ ಯಾವತ್ತೂ ಇತ್ತು..ಬೆಂಗಳೂರಿಗೆ ಕಾಲಿಟ್ಟ ಮೇಲೂ ನಿನ್ನ ಅದೆಷ್ಟು ಬಾರಿ ಮಾತಡಿಸಲು ಯತ್ನಿಸಿದೆ..ಮನೆಯ ಮೊದಲ ಮಗನಾಗಿ ನಿನಗಿದ್ದ ಜವಾಬ್ದಾರಿಗಳು ನನ್ನ ಮೂಕಿ ಮಾಡಿದವು..ನಿನ್ನ ಹೆತ್ತ ತಾಯಿಯಿಂದ ನಿನ್ನ ದೂರ ಮಾಡಿ ಆಕೆ ಮಗನಿಗಾಗಿ ಕಟ್ಟಿದ್ದ ಕನಸುಗಳನ್ನ ಚೂರು ಮಾಡಿ ನಿನ್ನ ಓಡಿಸಿಕೊಂಡು ಬರುವ ಉಪಾಯ ನಂಗೆ ಇಷ್ಟ ಆಗಲಿಲ್ಲ..ಎಷ್ಟೋ ಸಾರಿ ಅನ್ನಿಸಿದ್ದುಂಟು..ನಾನೇ ಹುಡುಗ ನೀನೇ ಹುಡುಗಿ ಆಗಿರ್ಬೇಕಿತ್ತು ಅಂತ..
ನನ್ನ ಆಸೆಗಳ ಹಕ್ಕಿ ಜೀವನದ ಕಹಿಸತ್ಯಗಳ ಕತ್ತಲಲ್ಲಿ ರೆಕ್ಕೆ ಮುರ್ಕೊಂಡು ಬಿತ್ತು..ನಂಗೆ ಊರಲ್ಲೆಲ್ಲ ಕೆಟ್ಟ ಹೆಸರೂ ಬಂತು..ಆದರೆ ನಿಂಗೊತ್ತಾ..ನಾನೆಷ್ಟು ಮಾತ್ರೆ ನುಂಗಿದೆ ಎರಡು ವರುಷ ಅಂತಾ?? ಹೋಗಲಿ ಬಿಡು..ನಂಗೆ ಗುಂಡಿಗೆ ಗಟ್ಟಿ ಮಾಡಿದ್ದೇ ನೀನಿತ್ತ ವಿರಹ..ಅಥವಾ ನಾನೇ ತಂದು ಕೊಂಡ ವಿರಹ..
ಈಗ ಕಾವೇರಿ ತುಂಗೇಲಿ ಸಾಕಷ್ಟು ನೀರು ಹರಿದು ಹೋಗಿದೆ..ನಾನು ನೀನು ಜೊತೆಯಾಗಿ ಕಳೆದ ಮಳೆಗಾಲದಲ್ಲಿ ಚಿಗುರು ಒಡೆದ ಪುಟ್ಟ ಸಸಿಗಳು ಯೌವನಕ್ಕೆ ಕಾಲಿಟ್ಟಿವೆ..ನಾವಿಬ್ಬರೂ ಕೈ ಹಿಡಿದು ನಡೆದ ದಾರಿಗಳಲ್ಲಿ ಮರಗಳನ್ನ ಕಡಿದು ಅರಣ್ಯ ಇಲಾಖೆಯವರ ಅಕೇಶಿಯಾ ಗಿಡ ನೆಡಲಾಗಿದೆ..
ಆದರೂ..
ಈಗಲೂ ಬೇಜಾರದ್ರೆ ಮೊದಲು ನೆನಪಾಗೋದೆ ನೀನು..ಕಟ್ಟಿ ಕೊಂಡವ ಬಾಯಿಗೆ ಬಂದದ್ದೆಲ್ಲಾ ಬೈಯ್ತಾ ಇದ್ರೆ..ನಂಗೆ ಅನ್ನಿಸ್ತಿರುತ್ತೆ.."ಇದು ನಿನ್ನ ಶಾಪದ ಫಲವಾ" ಅಂತ..ನಂಗೆ ಈಗೊಂದು ಸತ್ಯದ ಮಹಾ ದರ್ಶನ ಆಗಿದೆ  ಮಾರಾಯ..ಜೀವನದಲ್ಲಿ ಸುಖ ಅನ್ನೋದು ಒಗ್ಗರಣೆ ತರ..ಬಾಕೀದೆಲ್ಲ ಸರಿಯಾಗಿದ್ರೂ ಅದು ಬೀಳದೆ ಇದ್ರೆ ಅಡಿಗೆ ರುಚಿಯಾಗಲ್ಲ..ಹಾಗಂತ ದಿನಾ ಒಗ್ಗರಣೆ ಹಾಕೋದು ಈ ತುಟ್ಟಿ ಕಾಲದಲ್ಲಿ ಬಲು ಕಷ್ಟ..

ನೀ ಹಾಡ್ತಾ ಇದ್ದ ಹಾಡು ನೆನಪಾಗ್ತಿದೆ ಕಣೋ..(ತುಂಬಾ ನೆನಪಾದಾಗಲೆಲ್ಲಾ ಇದೇ ಹಾಡೋದು ನಾನು)

ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ....

 ನಿನಗಾಗಿ ಬರೆದ ಕವನವೊಂದು..ಒಪ್ಪಿಸಿಕೋ..ಕಣ್ಣ ಹನಿಗಳೊಂದಿಗೆ(ಸಧ್ಯಕ್ಕೆ ಅದೊಂದೇ ನಂದು ಅಂತ ಉಳಿದಿರೋದು!!)

ಕತ್ತಲ ಬದುಕಲ್ಲಿ ಬೆಳಕ ತರಬಲ್ಲ ಕಾಲ
ಭವಿಷ್ಯತ್ತಿನ ಎಲ್ಲ ಕನಸ
ಒಂದೇ ಕ್ಷಣದಲ್ಲಿ ಬೂದಿ ಮಾಡುವ
ವರ್ತಮಾನದ ಸಿಕ್ಕುಗಳ ನಡುವೆ
ನಿನ್ನನ್ನೆಲ್ಲೋ ಕಳಕೊಂಡಿದ್ದೇನೆ...

ಉಕ್ಕಿ ಬರುವ ಸಮುದ್ರದ ಅಲೆಗಳಿಗೀಗ
ಮೊದಲಿನ ಬಿರುಸಿಲ್ಲ...
ಹುಣ್ಣಿಮೆಯ ಬೆಳಕಲ್ಲಿ
ಈಗ ಕೇವಲ ವಿಷಾದ...
ನನ್ನ ಬದುಕಿನ ಪುಟಗಳಲ್ಲೀಗ
ಬರೇ ಹೇಮಂತ,

ಬಾಳು ಬೆಂಗಾಡಾಗಿ
ಮುರಿದ ಕಿಟಕಿ
ಗೆದ್ದಲು ತಿಂದ ಬಾಗಿಲು
ನಿಧಾನವಾಗಿ ಆಶಾಸೌಧಗಳ
ಅಂತ

ಕತ್ತಲಕೋಣೆಯಲಿ ಕಾಣುತಿರುವೆ
ಬೆಳಕಿನ ಕನಸು..
ಯಾವುದಾದರೂರಾಜಕುಮಾರ
ಬೆಳಕ ದೀವಿಗೆ ತಂದಾನು
ಎಂದು ಅನಂತದೆಡೆಗೆ
ನೆಟ್ಟ ಕಣ್ಣುಗಳಲ್ಲಿ
ಕೇವಲ ನಿನ್ನ ನಿರೀಕ್ಷೆ..

(ವಿ.ಸೂ:ಹೋಮಾ-ರೋಮನ್ನರ ಪುರಾಣಗಳಲ್ಲಿ ಬರುವ ಪಕ್ಷಿ..ಇದು ಗಗನದಲ್ಲೇ ಮೊಟ್ಟೆ ಇಡುತ್ತದಂತೆ..ಆ ಮೊಟ್ಟೆ ಭೂಮಿಗೆ ಬರುವ ಮೊದಲೇ ಒಡೆದು ಪಕ್ಷಿಯಾಗಿ..ತಾಯಿ ಪಕ್ಷಿಯೊಡನೆ ಹಾರಿ ಹೋಗ್ತದಂತೆ(ನನ್ನ ಚಾಟ್ ರೂಮ್ ರೋಮನ್ ಗೆಳೆಯ ಹೇಳಿದ್ದು!!)




Thursday, February 14, 2013

ಹಾಲುಂಡ ತವರೀಗೆ..

ಹೆಣ್ಣಿನ ತವರಾಸೆ ಹೊಸದಲ್ಲ..ಹಳತೂ ಆಗದ ಭಾವ ಬಂಧ ಅದು...ಬೇರು ಬಿಟ್ಟ ಗಿಡ ಮರವಾಗುವ ಹೊತ್ತಿಗೆ..ಹೊರ ಜಗತ್ತಿಗೆ ತನ್ನ ವಿಸ್ತಾರ ನೆರಳನ್ನು ಚಾಚಿ ಅಶ್ರಯದಾತಳಾಗುವ ಹೊತ್ತಿಗೆ ಆ ಬೇರು ಆಳಕ್ಕಿಳಿದಿರುತ್ತದೆ..ಯಾವ ಕೊಡಲಿಗೂ ಸಿಲುಕದ ಬೇರು..ತನ್ನ ಕಷ್ಟಗಳ ಕಾಲದಲ್ಲಿ ತಾಯೊಡಲು ಭೂಮಿಯ ಎದೆಯ ಒರತೆ ಎತ್ತಿ ತನ್ನ ಪೋಷಿಸಿಕೊಳ್ಳು ವೃಕ್ಷದಂತೆ ಹೆಣ್ಣೂ ಕೂಡ..ತನ್ನ ಬೆಳೆಸಿದ ತಂದೆ ತಾಯಿ..ಎತ್ತಿ ಆಡಿಸಿದ ಊರ ಜನ..ತುಂಟತನದ ಬಾಲ್ಯಕ್ಕೆ..ಹುಡುಗುತನದ ಕಿಶೋರತ್ವಕ್ಕೆ, ಕನಸು ತುಂಬಿದ ಬಣ್ಣಗಳ ಸರದಿ ಯೌವನಕ್ಕೆ ಆಶ್ರಯದಾತ ಪರಿಸರವನ್ನು  ಎಂದೂ ಮರೆಯಲಾರಳು...
ನನ್ನ ತವರೂರನ್ನ ನಾನು ತವರು ಅಂದುಕೊಂಡಿಲ್ಲ...ಅದು ನನ್ನೂರು ಅಷ್ಟೆ!!ಮರಗಿಡಗಳ ನಡುವಿನ ಕತ್ತಲು ಬೆಳಕಿನಾಟ..ಬೇಕೆಂದಾಗಲೆಲ್ಲಾ ತಂಪು ಸೋಕುವ ಗಾಳಿರಾಯ..ಆಲದ ಮರದ ಬಿಳಲುಗಳಂತೆ ಅಮ್ಮನ ತೋಳ್ತೆಕ್ಕೆಗೆ ಬಿದ್ದ ಮಕ್ಕಳ ಪ್ರೀತಿ..ಹಾವಿನಂತೆ ಬಿದ್ದ ಹಾದಿಯ ನಡುವಿನ ತಿರುವುಗಳಲ್ಲಿ ಕಾಣ ಸಿಗುವ ಪರಿಚಿತ ನಗು ಮುಖಗಳು..ತಮ್ಮ ಮನೆ ಮಗಳು ಬಂದಂತೆ ಮಾತಾಡಿಸುವ ದನಿಯ ಆತ್ಮೀಯತೆ..ನನ್ನೂರ ಹಾದಿಯೇ ಒಂದು ಸದಾ ಹೊಸ ಅನುಭವ...ಹಾಸಿದ ಎಲೆ ರಾಶಿಯ ಮೇಲೆ ಹೆಜ್ಜೆ ಇಟ್ಟ ಕಡೆಯಲ್ಲ ನೆನಪುಗಳ ಚಲನ ಚಿತ್ರ...

ಮನಸ್ಸು ಈಗಿಗ ಹೋಲಿಕೆಯನ್ನ ಕಲಿತಿದೆ...ಹಕ್ಕಿಗಳ ಕಲರವದ ಇಂಪು ಹೊತ್ತ ಅಲ್ಲಿನ ಮುಂಜಾವಿನಲ್ಲಿ ಮೊದಲಿನ ಸ್ನಿಗ್ಧತೆ ಇಲ್ಲದಿದ್ದರೂ ಆ ತೆಳುವಾದ ನಶೆ ಕಮ್ಮಿಯಾಗಿಲ್ಲ..ಬದುಕ ಕಟ್ಟಿದ ಮನೆ ...ನನ್ನಲ್ಲಿ ಅನವರತ  ಛಲ ತುಂಬಿ ಗಟ್ಟಿಗಿತ್ತಿಯನ್ನಾಗಿಸಿದ ಅಪ್ಪ ಅಮ್ಮನ ಪ್ರೇಮಧಾರೆ..ದೈವಸ್ಥಾನ  ಅದೋ ನನ್ನ ಮನೆ...ನೀವಿಲ್ಲಿ ಕಾಣದ ಅದೆಷ್ಟೊ ಘಟಿಸಿದ ಘಟನೆಗಳಿವೆ..ಬಾಯೊಂದು ಇದ್ದಿದ್ದರೆ  ಮನೆಯ ಗೋಡೆ ಗೋಡೆಗಳೂ ಕಥಿಸುತ್ತಿದ್ದವು ನನ್ನ ಕಥೆಯನ್ನ..

ಬದುಕಿನ ಬೆನ್ನು ಹತ್ತಿ..ಮನಮೆಚ್ಚಿದವನೊಡನೆ..ಈ ಮಹಾನಗರದಲ್ಲಿ ಬದುಕು ಕಟ್ಟಿಕೊಂಡ ನನಗೆ ಒಮ್ಮೊಮ್ಮೆ ಅನಿಸುವುದು
ಅಲ್ಲಿನ ನೀರಿನಂತೆ ಇಲ್ಲಿನ ನೀರು ರುಚಿ ಕಟ್ಟಲಾರದು...ಅಲ್ಲಿನ ನೆಮ್ಮದಿಭರಿತ ಗಾಢ ನಿದ್ದೆ,ಸುಖಭರಿತ ಸಂಜೆಗಳು ಇಲ್ಲಿ ಯಾವತ್ತೋ ಕಾಣೆಯಾಗಿವೆ..ತಿರುಗಿದಷ್ಟು ನೆನಪುಗಳು..ಪರಿಚಿತ ವ್ಯಕ್ತಿಗಳು..ನನ್ನ ಬಾಳ ಕಾದಂಬರಿಯ ನೂರೊಂದು ಪಾತ್ರಗಳು..ದುಖ:ದ  ಕ್ಷಣಗಳಲ್ಲಿ ಈಗಲು ಮನಸು ಅಮ್ಮನ ಮಡಿಲಿನ ಮಗುವಾಗ ಬಯಸುತ್ತದೆ....ಅಮ್ಮನ ನೆನೆದು ಶಾಂತತೆಯೊಂದು ಮನದಲ್ಲಿ ತುಂಬುತ್ತದೆ..ಅವಸರದಿಂದ ದೀಪ ಹಚ್ಚುವಾಗ ಅದರ ಮಂದ ಬೆಳಕಿನಲ್ಲಿ ಅಪ್ಪ ಅಮ್ಮನ ಮುಖ ಕಾಣುತ್ತೇನೆ..ದೂರವಾಣಿಯಲ್ಲಿ ಅವರ ಮಾತು ಆಲಿಸುವಾಗ ಮನಸ್ಸು ಅದರದೇ ವೇಗದಲ್ಲಿ ನನ್ನೂರು ತಲುಪಿರುತ್ತದೆ..
ವಾಹನಗಳ ಭರಾಟೆಯಲ್ಲಿ ನನ್ನ ಧ್ವನಿ ಕಳೆದು ಹೋದಾಗ ಅಂತರಾತ್ಮದ ಯಾವುದೋ ಮೂಲೆಯಲ್ಲಿ ಅಪ್ಪನ ದನಿ..ಅಮ್ಮನ ಸಾಂತ್ವನ..ಬೀಡಾಡಿ ದನಗಳ ಪ್ಲಾಸ್ಟಿಕ್ ತಿಂದು ಹೊಟ್ಟೆ ತುಂಬಿಸಿಕೊಳ್ಳುವಾಗ " ರಜನಿ, ಗಂಗೆ" ಯರ ನೆನಪು ಗಾಢವಾಗಿ ಕಾಡುತ್ತದೆ..


ಎಂಥಾ ದಿನಗಳವು..ಎಲ್ಲಿ ಮರೆಯಾದವು??

ಮಾಯಾ ಪೆಟ್ಟಿಗೆಯ ಮುಂದೆ ಕುಳಿತ ಗಂಡ ಮಗ ನನ್ನ ಇರುವನ್ನೇ ಮರೆತು ಕಾಲ್ಪನಿಕ ಲೋಕದಲ್ಲಿ ಮುಳುಗುವಾಗ ನನ್ನೆದುರು ಕಳೆದ ಗತಕಾಲದ ಸಂಜೆಗಳು ಬಿಚ್ಚಿಕೊಳ್ಳುತ್ತವೆ. ಮನೆ ಮುಂದಿನ ಕಟ್ಟೆಯಲ್ಲಿ ಕುಳಿತು ಊರವರ ಕತೆ ಕೇಳುತ್ತಿದ್ದ ದಿನಗಳು..ಸಂಜೆ ಆಗುತ್ತಿದ್ದಂತೆ ಭಾರತ ವಾಚನ ಮಾಡುತ್ತಿದ್ದ ಅಪ್ಪನ ರಾಗ ಭರಿತ ದನಿ...ಅದೆಷ್ಟುಬಾರಿ ನಾನು ದ್ರೌಪದಿಯಂತೆ ಸುಂದರಿಯೇ?? ಎಂದು ಕನ್ನಡಿ ನೋಡಿಕೊಂಡಿಲ್ಲ..ಅಮೇಲಾಮೇಲೆ ಆಕೆಯ ಬದುಕು ನನಗೆ ಬೇಡ ಅನ್ನಿಸಿದ್ದು ಅದೆಷ್ಟು ಸಲ..ಅಪ್ಪನ ವಾಚನವೇ ಹಾಗೆ..ಪಾತ್ರಗಳಿಗೆ ಜೀವ ತುಂಬಿ ಕಣ್ಣೆದುರು ನಿಲ್ಲಿಸುತ್ತಿತ್ತು..ಕಳೆದು ಹೋಗುತ್ತಿದ್ದ ದಿನಗಳಲ್ಲಿ ಸೊರಬದ ಗಂಧದ ಅಗರಬತ್ತಿಯ ಸುವಾಸನೆ ಇತ್ತಲ್ಲ.....

ಎಂಥಾ ಹದವಿತ್ತೆ ಗೆಳತಿ..ಹರೆಯಕೆ ಏನು ಮುದವಿತ್ತೇ??

ಗೆಳೆತನಗಳಲ್ಲಿದ್ದದ್ದು ಗುಬ್ಬಿ ಎಂಜಲಿನ ಸವಿ..ನೆಲ್ಲಿಕಾಯಿಯ ಒಗರು..ಬುಕ್ಕಿ ಹಣ್ಣಿನ ಸ್ವಾದ...ಮುಳುಗುತ್ತಿದ್ದ ಸೂರ್ಯನ ಹಿಂದೆಯೇ ಹೊತ್ತಿದ ಸೀಮೆ ಎಣ್ಣೆ ಬುರುಡಿಯ ದೀಪದ ಮಂದ ಬೆಳಕು..ಕಟು ವಾಸನೆ..ಬಗ್ಗಿ ಓದುವಾಗ ಸುಟ್ಟ ಕೂದಲಿನ ಕೆಟ್ಟ ವಾಸನೆ.. ಬೆಳಕು ಮಂದವಿತ್ತು ನಿಜ..ಆದರೆ ಮಾತು ಕತೆಗಳು ನೇರ ಇರಾದೆಗಳು ನೇರ..ಅಪ್ಪನಂತೆ.. ವಿದ್ಯುತ್ತಿನ ಹಾಲು ಬೆಳಕಿನಲ್ಲಿ ಇಂದು ಮನಸುಗಳು ಮಬ್ಬಾದಂತೆ ಅನ್ನಿಸುವಾಗ..ಗೆಳೆತನಗಳು ಸ್ವಾರ್ಥಪೂರಿತ ಅನ್ನಿಸಿದಾಗ..ನಮ್ಮ ಮನೆಯ ಸೀಮೆ ಬುಡ್ಡಿಯ ಬೆಳಕೇ ಶ್ರೇಷ್ಠ ಅನ್ನಿಸಿ ಬಿಡುತ್ತದೆ...ಜಾತಿ-ಮತಗಳ ಮೀರಿತ ಮಾನವ ಧರ್ಮವ ಕಲಿತದ್ದು ಅಲ್ಲಿಯೇ!!

ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ..ಕೈ ಹಿಡಿದು ನಡೆಸೆನ್ನನೂ...

ಗೋಡೆಯ ಮೇಲಿನ ಹಸೆ ಚಿತ್ತಾರದಂತೆ ನನ್ನ ಮಾನಸಲೋಕದ ತುಂಬೆಲ್ಲಾ ರಂಗು ತುಂಬಿದ ನನ್ನ ಮನೆ ಮತ್ತುಊರು ನನ್ನೊಳಗೆ ಅಚ್ಚಾಗಿರುತ್ತದೆ..ನನ್ನ ಕಷ್ಟಗಳ ನಡುವೆ ನನಗೆ ಊರುಗೊಲಾಗಿ..ಗೆಳೆಯನಾಗಿ..ತನ್ನ ಇರುವಿಕೆ ಇಂದಲೇ ಸಂತೈಸುತ್ತದೆ....ಹೇಳಿ ತವರೆಂದು ಕರೆದು ನನ್ನೂರ ನಾನಷ್ಟಕ್ಕೆ ಸೀಮಿತ ಮಾಡಬಹುದೇ.....ಬೇರಿಂದ ಮರವ ದೂರ ಮಾಡಬಹುದೇ??

Saturday, January 19, 2013

ನಾನು ಮತ್ತು ರುಮಿ

ನನ್ನ ಕಾಡಿದ ಬರಹಗಾರರಲ್ಲಿ ರುಮಿ-ಮಾಯ ಅಂಜೆಲೋ ತುಂಬಾ ಆಪ್ತರಾಗುತ್ತಾರೆ..ರುಮಿ-ಅವನು ಪ್ರಸ್ತಾಪಿಸದ ವಿಷಯಗಳೇ ಇಲ್ಲ...ಅವನ ಕಾವ್ಯ-ವಿಚಾರಗಳೊಡನೆ ನನ್ನ ದಿನಗಳು ಬಲು ರೋಚಕ- ಇತ್ತೀಚೆಗೆ ನನ್ನ ಮನಸ್ಸು ಅವನನ್ನು ಎಲ್ಲಾ ವಿಷಯಗಳಲ್ಲು ಪ್ರತಿಮೆಯಾಗಿ ಬಳಸುತ್ತಿದೆ!! ಈ ಪ್ರಕ್ರಿಯೆಯಲ್ಲಿ ನಾನು-ಅವನ ನಡುವೆ ಹುಟ್ಟಿದ ಕೆಲ ಕವಿತೆಗಳು ನಿಮಗಾಗಿ..
  •  
ನೀರವ ರಾತ್ರಿಯ ಏಕಾಂತದಲ್ಲಿ
ತಾರೆಗಳಿಲ್ಲದ ಬಾನ
ನೋಡುತಲಿದ್ದೆ
ಮುಗುಳ್ನಗೆಯ ಬೆಳ್ದಿಂಗಳ
ಚೆಲ್ಲಿ ಬಂದ ಅಲ್ಲಿಗೆ
ನನ್ನ ರುಮಿ
ಈಗ ನಾನೂ ಅವನು
ನಮ್ಮ ಕಣ್ಣೀರಿನ
ನಕ್ಷತ್ರಗಳನ್ನು ಹೆಕ್ಕುತ್ತಿದ್ದೇವೆ!!
  •  
 ರಾತ್ರಿ ಎಲ್ಲಾ ಅವನ ಬೆಚ್ಚನೆಯ
ಕಾವ್ಯಗಳ ಸಾಲು ಕೇಳುತ್ತಾ
ನಿದ್ರಿಸಿದ್ದೆ
ಬೆಳಕು ಹರಿಯಿತು
ಮೈ ತುಂಬ ಕಳ್ಳ ಕೇದಗೆಯ ಘಮ
ತುಟಿಗಳಲ್ಲಿ ರುಮಿಯ
ಕಾವ್ಯ ಜೇನು!!
  •  
ನಾನು ಮಲಗಿದ್ದೆ
ಕಣ್ತೆರೆದು
ನನ್ನೊಳಗಿನ ನನ್ನ
ಎಚ್ಚರಿಸಿದ್ದು
ಅವನ
ತಣ್ಣನೆಯ ಒರಟು
ಕಾವ್ಯದ ಕೈಗಳು !!

ನೆಲದಲ್ಲಿ ಮೂಡಿದ
ನಿನ್ನ ಪ್ರತಿ ಹೆಜ್ಜೆಗೊಂದು
ಕಾವ್ಯದ ಹೂವರಳಿದೆ
ರುಮಿ
ಅದರ ಗಂಧ ಕುಡಿಯುವ
ಚಿಟ್ಟೆ ನಾನು!!
  •  

ಹಸಿ ಮಣ್ಣಿನೊಳಗೆ ಬಿತ್ತಿದಂತೊಂದು ಬೀಜ
ನೀ ನನ್ನೊಳಗೆ ನೆಟ್ಟ
ಸೂಫಿ ಈಗ
ಮರವಾಗಿದೆ
ಸಂತ,
ನೋಡಿ ಆನಂದಿಸಲು ಎಂದು
ಬರುವೆ ನನ್ನ ರುಮಿ??
ಕೇಳು
ಕಾಲ-ದೇಶಗಳಮೀರಿದ
ಹಕ್ಕಿಗಳ ಗಾನ
ಕೊಂಬೆ ಕೊಂಬೆಗೆ ಅರಳಿರುವ
ನಿನ್ನ ಕನಸುಗಳ
ಹೂ
ನನ್ನ ಹುಡುಕದಿರು
ಮರದೊಳಗೊಂದು ಮರಿ ಬೀಜವಾಗಿ
ನಿನ್ನ ಕರೆಗೆ
ಕಾಯುತಿರುವೆ ನಾನೂ
ಮತ್ತೆ
ಮೊಳಕೆಯೊಡೆಯಲು!!







Sunday, January 13, 2013

ಸುಮ್ಮನಿರದ ಸಾಲುಗಳು...

  ನಾನಳಿಯಲಿ

ನಿನಗೆಂಥ ಪ್ರೇಮದ ಹಸಿವು ದೊರೆ??
ನಿನ್ನ ಬಯಕೆಯ ಕಡಲ ಹೀರಿ
ಮುತ್ತಿನ ಮಧು ಮಳೆಯಸುರಿದೆ
ನೋಟದ ಮಿಂಚಿತ್ತು
ಪಿಸುಮಾತುಗಳ ಗುಡುಗಿತ್ತು
 ಆದರೆ...
ನಿನ್ನೆದೆಯ ಬರಡು ಮರುಭೂಮಿಯಲ್ಲಿ
ತಾಕಿ ಆವಿಯಾಯಿತು..
 ನನ್ನಲ್ಲಿ ಇನ್ನೂ ಬತ್ತದ ಜೀವಸೆಲೆಯಿದೆ
ಸುರಿವೆ ನಿನ್ನೊಡಲಿಗೆ
ತಕ್ಕೋ..ನಿನ್ನ ವಿರಹದ
ಬಡಬಾನಲಕ್ಕೆ ಸಿಕ್ಕಿ "ನಾನ"ಳಿಯಲಿ!!



ಸಂಕ್ರಾಂತಿ

 ಸಂಕ್ರಾಂತಿ ಬಂದಿದೆ
’ಸಮ್" ಕ್ರಾಂತಿ ಬರುವುದೇ??

ಅದೆಷ್ಟು ಸೀತೆಯರು..
ಅದೆಷ್ಟು ದ್ರೌಪದಿಯರು..
ಅದೆಷ್ಟು ಅಂಬೆಯರು,
ಅಂಬಾಲಿಕೆಯರು
ಕಣ್ಣ ನೀರ ಹರಿಸಿ 
ಒಡಲ ಅಸು ನೀಗಿಹರು
ನೀನು ದುಶ್ಯಾಸನರ 
ಅಳಿಸಿ ರಾಮರ ತರುವೆ
ಕ್ರಾಂತಿಯ ಕಿಡಿಯ ಹೆಣ್ಣ 
ಮನದಲ್ಲಿ ಹೊತ್ತಿಸಿ
ಒಂದಷ್ಟು ಶಾಂತಿಯ 
ತಂದಿಯೆಂದು ಆಸೆ 
ಹೊತ್ತಿದೆ ಎನ್ನ ಮನ!!
 ಹೇಳು ಬರೀ ಎಳ್ಳು ಬೆಲ್ಲ
ತರುವುದೇ ರಾಮರಾಜ್ಯ??
ಎಷ್ಟು ಕೊಟ್ಟರೇನು,ಎಷ್ಟು ಪಡೆದರೇನು?
ಸಂಕ್ರಾಂತಿ ಕ್ರಾಂತಿಯಾಗಬೇಕು
ಹೆಣ್ಣು ಕಾಳಿಯಾಗಬೇಕು
ರಣಚಂಡಿಯಾಗಬೇಕು!!