Sunday, February 24, 2013

"ಅವನು" ಎಂಬ ಕಾಣದ ಮಾಯೆ....

ಸುಳಿಯದಿರು ಮುಂದೆಂದೂ ನನ್ನ ಕಣ್ಣ ಮುಂದೆ..
ಓಡುವುದು ಮನಸು ಮತ್ತೆ ಗತಕಾಲ ಹಿಂದೆ!!

ನಿನ್ನ  ನೋಡಬಾರದಿತ್ತು..ಅದೂ ಇಷ್ಟು ವರುಷಗಳ ನಂತರ...ನೋಡಿದರೂ ನೀ ನನ್ನ ಮಾತಾಡಿಸಬಾರದಿತ್ತು..
ನಿನ್ನ ನನ್ನೆದೆಯ ಸಾಗರದ ಒಳಸುಳಿಯಾಗಿ ಬಚ್ಚಿಟ್ಟಿರುವೆ...ಅದ ಕೆಣಕುವ ನಿನ್ನ ಸಾಹಸಕ್ಕೆ ನಾ ಏನ ಹೇಳಲಿ??
ನನಗೆ ಸಂತಸವಾಯ್ತು..ನಿನ್ನ ಸಂಸಾರ ಸಮೇತ ಸಂತಸವಾಗಿ ನೋಡಿ..
"ಆರು ವರ್ಷಗಳ ಕಾಲ ಆರದ ಪ್ರೇಮದ ದೀಪವ ಕಣ್ಣಕುಡಿಯಂತೆ ಸಲಹಿದ್ದೆವು..ಯಾಕೆ ನನ್ನ ದೂರ ಮಾಡಿದೆ?? "
ಹೇಳು ಈಗ್ಯಾಕೆ ಬೇಕಿತ್ತು ಈ ಪ್ರಶ್ನೆ??
ನಿನ್ನಂತೆ ನನ್ನೊಳಗು ಒಂದು ಆರದ ದೀಪವಿತ್ತು..ಕಾಪಿಡುವ ಬಯಕೆಯೂ ಇತ್ತು..

ನೀನೆ ಹೇಳುತ್ತಿದ್ದ ಮಾತು ನೆನಪಿದೆಯಾ?? ನಾನೊಂದು ಸ್ವತಂತ್ರ ಹಕ್ಕಿ ಅಂತ..

ಬಾನಿನಲ್ಲಿ ಚುಕ್ಕಿಯಾಗಿ
ಹಾರುವ ನಿನಗೇಕೆ
ಬಂತು ಮೌನ?
ಮೌನದ ಮಾತಿನೆಲ್ಲೆಯ ಮೀರಿ
ದೂರದ ತೀರದಲ್ಲಿ
ಬರೀ ಖಾಲಿ ದೊಡ್ಡ ಶೂನ್ಯ !!
ನೀ ಅಲ್ಲೆ ನಿನ್ನ ಬಯಕೆಗಳ
ಮೊಟ್ಟೆ ಇಡ್ತಿಯಂತಲ್ಲ
ಹೋಮಾ??*
ನೀನಿವತ್ತು ಇಟ್ಟದ್ದು ನಿನ್ನ ಮೊಟ್ಟೆಯೋ
ನನ್ನ ಬರಡು ಬಯಕೆಗಳೋ??

ನೀನು ಗರುಡದ ಗೂಡು ನೋಡಿದ್ದೀಯಾ?? ನೋಡಿಲ್ಲ ಅಲ್ವಾ??ಅದು ಕಾಣೋದು ಅಪರೂಪ ಅಂತೆ..

 ನಾ ಯಾವತ್ತು ನಿನ್ನ ಬದಲಿಸ ಯತ್ನಿಸಿರಲಿಲ್ಲ...ಕಾರಣ ಇಷ್ಟೇ..ನಂಗೆ ನನ್ನ ತರ ನಾನು, ಅವನ ತರ ಅವನೇ ಇರೋ ಅಂತವ ಬೇಕಿತ್ತು..
ಹಾಗಂತ ನಾ ನಿನ್ನ ಪ್ರೀತಿಸಲಿಲ್ಲ ಅಂದುಕೋ ಬೇಡ..
ಮೊದಲ ಪ್ರೇಮ ಒಂದು ಅದ್ಭುತ..ಅದೂ ನಮ್ಮ ಪತ್ರಗಳಲ್ಲಿ ಬರೆದ ಪ್ರೇಮ ಕಾವ್ಯ..ನಿಜಕ್ಕು ಒಬ್ಬ ಹುಡುಗ ಹುಡುಗಿ ಪತ್ರಗಳಲ್ಲೇ ಪ್ರೀತಿಸಿದ್ರಾ?? ಅಂತ ಈಗ ಅಷ್ಟು ಆಶ್ಚರ್ಯ ನಂಗೇ!!

ಪ್ರೇಮಪತ್ರಗಳಲ್ಲಿ ನಾ ನಿನ್ನ
ನೀ ನನ್ನ  ಹುಡುಕಿದೆವು
ಸಿಗದ ಅದೃಷ್ಟದ ಚಿಂತಾಮಣಿಗಾಗಿ
ಮಿಡುಕಿದೆವು..!!!

ನಿನ್ನ ಬಿಟ್ಟು ಈ ಊರಿಗೆ ಬರೋ ಸಾಹಸ ನಂಗೆ ಬೇಕಿರಲಿಲ್ಲ ಕಣೋ...ಶಿವಮೊಗ್ಗದಲ್ಲಿಯೆ ಹಾಯಾಗಿ ಏನೋ ಮಾಡ್ಕೊಂಡು ಇಬ್ರೂ ಇದ್ಬಿಡಬಹುದಿತ್ತು..ಆದ್ರೆ ನಾ ಓದಿದ ಓದು ನನ್ನ ಪುತ್ತೂರಿನ ಯಾವ್ದೋ ಮೂಲೆಗೆ ಸೇರಿಸ್ತು..ಮೊದಲೇ ಪತ್ರಗಳಲ್ಲಿ ಬೆಳೆದ ಪ್ರೇಮ..ಮೊದಲು ವಾರಕ್ಕೆಒಂದಿತ್ತು..ಅಮೇಲೆ ತಿಂಗಳಿಗೆ ಒಂದಾಯ್ತು..ಮನಸಿನ ಮಾತುಗಳು ಬಂದಾಯ್ತು..

ನಂಗೆ ಗೊತ್ತು..ನಿನ್ನ ಮನಸಲ್ಲಿ ನೀನು ಕಮ್ಮಿ ಓದಿದವ ಅನ್ನೋ ಭಾವನೆ ಯಾವತ್ತೂ ಇತ್ತು..ಬೆಂಗಳೂರಿಗೆ ಕಾಲಿಟ್ಟ ಮೇಲೂ ನಿನ್ನ ಅದೆಷ್ಟು ಬಾರಿ ಮಾತಡಿಸಲು ಯತ್ನಿಸಿದೆ..ಮನೆಯ ಮೊದಲ ಮಗನಾಗಿ ನಿನಗಿದ್ದ ಜವಾಬ್ದಾರಿಗಳು ನನ್ನ ಮೂಕಿ ಮಾಡಿದವು..ನಿನ್ನ ಹೆತ್ತ ತಾಯಿಯಿಂದ ನಿನ್ನ ದೂರ ಮಾಡಿ ಆಕೆ ಮಗನಿಗಾಗಿ ಕಟ್ಟಿದ್ದ ಕನಸುಗಳನ್ನ ಚೂರು ಮಾಡಿ ನಿನ್ನ ಓಡಿಸಿಕೊಂಡು ಬರುವ ಉಪಾಯ ನಂಗೆ ಇಷ್ಟ ಆಗಲಿಲ್ಲ..ಎಷ್ಟೋ ಸಾರಿ ಅನ್ನಿಸಿದ್ದುಂಟು..ನಾನೇ ಹುಡುಗ ನೀನೇ ಹುಡುಗಿ ಆಗಿರ್ಬೇಕಿತ್ತು ಅಂತ..
ನನ್ನ ಆಸೆಗಳ ಹಕ್ಕಿ ಜೀವನದ ಕಹಿಸತ್ಯಗಳ ಕತ್ತಲಲ್ಲಿ ರೆಕ್ಕೆ ಮುರ್ಕೊಂಡು ಬಿತ್ತು..ನಂಗೆ ಊರಲ್ಲೆಲ್ಲ ಕೆಟ್ಟ ಹೆಸರೂ ಬಂತು..ಆದರೆ ನಿಂಗೊತ್ತಾ..ನಾನೆಷ್ಟು ಮಾತ್ರೆ ನುಂಗಿದೆ ಎರಡು ವರುಷ ಅಂತಾ?? ಹೋಗಲಿ ಬಿಡು..ನಂಗೆ ಗುಂಡಿಗೆ ಗಟ್ಟಿ ಮಾಡಿದ್ದೇ ನೀನಿತ್ತ ವಿರಹ..ಅಥವಾ ನಾನೇ ತಂದು ಕೊಂಡ ವಿರಹ..
ಈಗ ಕಾವೇರಿ ತುಂಗೇಲಿ ಸಾಕಷ್ಟು ನೀರು ಹರಿದು ಹೋಗಿದೆ..ನಾನು ನೀನು ಜೊತೆಯಾಗಿ ಕಳೆದ ಮಳೆಗಾಲದಲ್ಲಿ ಚಿಗುರು ಒಡೆದ ಪುಟ್ಟ ಸಸಿಗಳು ಯೌವನಕ್ಕೆ ಕಾಲಿಟ್ಟಿವೆ..ನಾವಿಬ್ಬರೂ ಕೈ ಹಿಡಿದು ನಡೆದ ದಾರಿಗಳಲ್ಲಿ ಮರಗಳನ್ನ ಕಡಿದು ಅರಣ್ಯ ಇಲಾಖೆಯವರ ಅಕೇಶಿಯಾ ಗಿಡ ನೆಡಲಾಗಿದೆ..
ಆದರೂ..
ಈಗಲೂ ಬೇಜಾರದ್ರೆ ಮೊದಲು ನೆನಪಾಗೋದೆ ನೀನು..ಕಟ್ಟಿ ಕೊಂಡವ ಬಾಯಿಗೆ ಬಂದದ್ದೆಲ್ಲಾ ಬೈಯ್ತಾ ಇದ್ರೆ..ನಂಗೆ ಅನ್ನಿಸ್ತಿರುತ್ತೆ.."ಇದು ನಿನ್ನ ಶಾಪದ ಫಲವಾ" ಅಂತ..ನಂಗೆ ಈಗೊಂದು ಸತ್ಯದ ಮಹಾ ದರ್ಶನ ಆಗಿದೆ  ಮಾರಾಯ..ಜೀವನದಲ್ಲಿ ಸುಖ ಅನ್ನೋದು ಒಗ್ಗರಣೆ ತರ..ಬಾಕೀದೆಲ್ಲ ಸರಿಯಾಗಿದ್ರೂ ಅದು ಬೀಳದೆ ಇದ್ರೆ ಅಡಿಗೆ ರುಚಿಯಾಗಲ್ಲ..ಹಾಗಂತ ದಿನಾ ಒಗ್ಗರಣೆ ಹಾಕೋದು ಈ ತುಟ್ಟಿ ಕಾಲದಲ್ಲಿ ಬಲು ಕಷ್ಟ..

ನೀ ಹಾಡ್ತಾ ಇದ್ದ ಹಾಡು ನೆನಪಾಗ್ತಿದೆ ಕಣೋ..(ತುಂಬಾ ನೆನಪಾದಾಗಲೆಲ್ಲಾ ಇದೇ ಹಾಡೋದು ನಾನು)

ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ....

 ನಿನಗಾಗಿ ಬರೆದ ಕವನವೊಂದು..ಒಪ್ಪಿಸಿಕೋ..ಕಣ್ಣ ಹನಿಗಳೊಂದಿಗೆ(ಸಧ್ಯಕ್ಕೆ ಅದೊಂದೇ ನಂದು ಅಂತ ಉಳಿದಿರೋದು!!)

ಕತ್ತಲ ಬದುಕಲ್ಲಿ ಬೆಳಕ ತರಬಲ್ಲ ಕಾಲ
ಭವಿಷ್ಯತ್ತಿನ ಎಲ್ಲ ಕನಸ
ಒಂದೇ ಕ್ಷಣದಲ್ಲಿ ಬೂದಿ ಮಾಡುವ
ವರ್ತಮಾನದ ಸಿಕ್ಕುಗಳ ನಡುವೆ
ನಿನ್ನನ್ನೆಲ್ಲೋ ಕಳಕೊಂಡಿದ್ದೇನೆ...

ಉಕ್ಕಿ ಬರುವ ಸಮುದ್ರದ ಅಲೆಗಳಿಗೀಗ
ಮೊದಲಿನ ಬಿರುಸಿಲ್ಲ...
ಹುಣ್ಣಿಮೆಯ ಬೆಳಕಲ್ಲಿ
ಈಗ ಕೇವಲ ವಿಷಾದ...
ನನ್ನ ಬದುಕಿನ ಪುಟಗಳಲ್ಲೀಗ
ಬರೇ ಹೇಮಂತ,

ಬಾಳು ಬೆಂಗಾಡಾಗಿ
ಮುರಿದ ಕಿಟಕಿ
ಗೆದ್ದಲು ತಿಂದ ಬಾಗಿಲು
ನಿಧಾನವಾಗಿ ಆಶಾಸೌಧಗಳ
ಅಂತ

ಕತ್ತಲಕೋಣೆಯಲಿ ಕಾಣುತಿರುವೆ
ಬೆಳಕಿನ ಕನಸು..
ಯಾವುದಾದರೂರಾಜಕುಮಾರ
ಬೆಳಕ ದೀವಿಗೆ ತಂದಾನು
ಎಂದು ಅನಂತದೆಡೆಗೆ
ನೆಟ್ಟ ಕಣ್ಣುಗಳಲ್ಲಿ
ಕೇವಲ ನಿನ್ನ ನಿರೀಕ್ಷೆ..

(ವಿ.ಸೂ:ಹೋಮಾ-ರೋಮನ್ನರ ಪುರಾಣಗಳಲ್ಲಿ ಬರುವ ಪಕ್ಷಿ..ಇದು ಗಗನದಲ್ಲೇ ಮೊಟ್ಟೆ ಇಡುತ್ತದಂತೆ..ಆ ಮೊಟ್ಟೆ ಭೂಮಿಗೆ ಬರುವ ಮೊದಲೇ ಒಡೆದು ಪಕ್ಷಿಯಾಗಿ..ತಾಯಿ ಪಕ್ಷಿಯೊಡನೆ ಹಾರಿ ಹೋಗ್ತದಂತೆ(ನನ್ನ ಚಾಟ್ ರೂಮ್ ರೋಮನ್ ಗೆಳೆಯ ಹೇಳಿದ್ದು!!)




Thursday, February 14, 2013

ಹಾಲುಂಡ ತವರೀಗೆ..

ಹೆಣ್ಣಿನ ತವರಾಸೆ ಹೊಸದಲ್ಲ..ಹಳತೂ ಆಗದ ಭಾವ ಬಂಧ ಅದು...ಬೇರು ಬಿಟ್ಟ ಗಿಡ ಮರವಾಗುವ ಹೊತ್ತಿಗೆ..ಹೊರ ಜಗತ್ತಿಗೆ ತನ್ನ ವಿಸ್ತಾರ ನೆರಳನ್ನು ಚಾಚಿ ಅಶ್ರಯದಾತಳಾಗುವ ಹೊತ್ತಿಗೆ ಆ ಬೇರು ಆಳಕ್ಕಿಳಿದಿರುತ್ತದೆ..ಯಾವ ಕೊಡಲಿಗೂ ಸಿಲುಕದ ಬೇರು..ತನ್ನ ಕಷ್ಟಗಳ ಕಾಲದಲ್ಲಿ ತಾಯೊಡಲು ಭೂಮಿಯ ಎದೆಯ ಒರತೆ ಎತ್ತಿ ತನ್ನ ಪೋಷಿಸಿಕೊಳ್ಳು ವೃಕ್ಷದಂತೆ ಹೆಣ್ಣೂ ಕೂಡ..ತನ್ನ ಬೆಳೆಸಿದ ತಂದೆ ತಾಯಿ..ಎತ್ತಿ ಆಡಿಸಿದ ಊರ ಜನ..ತುಂಟತನದ ಬಾಲ್ಯಕ್ಕೆ..ಹುಡುಗುತನದ ಕಿಶೋರತ್ವಕ್ಕೆ, ಕನಸು ತುಂಬಿದ ಬಣ್ಣಗಳ ಸರದಿ ಯೌವನಕ್ಕೆ ಆಶ್ರಯದಾತ ಪರಿಸರವನ್ನು  ಎಂದೂ ಮರೆಯಲಾರಳು...
ನನ್ನ ತವರೂರನ್ನ ನಾನು ತವರು ಅಂದುಕೊಂಡಿಲ್ಲ...ಅದು ನನ್ನೂರು ಅಷ್ಟೆ!!ಮರಗಿಡಗಳ ನಡುವಿನ ಕತ್ತಲು ಬೆಳಕಿನಾಟ..ಬೇಕೆಂದಾಗಲೆಲ್ಲಾ ತಂಪು ಸೋಕುವ ಗಾಳಿರಾಯ..ಆಲದ ಮರದ ಬಿಳಲುಗಳಂತೆ ಅಮ್ಮನ ತೋಳ್ತೆಕ್ಕೆಗೆ ಬಿದ್ದ ಮಕ್ಕಳ ಪ್ರೀತಿ..ಹಾವಿನಂತೆ ಬಿದ್ದ ಹಾದಿಯ ನಡುವಿನ ತಿರುವುಗಳಲ್ಲಿ ಕಾಣ ಸಿಗುವ ಪರಿಚಿತ ನಗು ಮುಖಗಳು..ತಮ್ಮ ಮನೆ ಮಗಳು ಬಂದಂತೆ ಮಾತಾಡಿಸುವ ದನಿಯ ಆತ್ಮೀಯತೆ..ನನ್ನೂರ ಹಾದಿಯೇ ಒಂದು ಸದಾ ಹೊಸ ಅನುಭವ...ಹಾಸಿದ ಎಲೆ ರಾಶಿಯ ಮೇಲೆ ಹೆಜ್ಜೆ ಇಟ್ಟ ಕಡೆಯಲ್ಲ ನೆನಪುಗಳ ಚಲನ ಚಿತ್ರ...

ಮನಸ್ಸು ಈಗಿಗ ಹೋಲಿಕೆಯನ್ನ ಕಲಿತಿದೆ...ಹಕ್ಕಿಗಳ ಕಲರವದ ಇಂಪು ಹೊತ್ತ ಅಲ್ಲಿನ ಮುಂಜಾವಿನಲ್ಲಿ ಮೊದಲಿನ ಸ್ನಿಗ್ಧತೆ ಇಲ್ಲದಿದ್ದರೂ ಆ ತೆಳುವಾದ ನಶೆ ಕಮ್ಮಿಯಾಗಿಲ್ಲ..ಬದುಕ ಕಟ್ಟಿದ ಮನೆ ...ನನ್ನಲ್ಲಿ ಅನವರತ  ಛಲ ತುಂಬಿ ಗಟ್ಟಿಗಿತ್ತಿಯನ್ನಾಗಿಸಿದ ಅಪ್ಪ ಅಮ್ಮನ ಪ್ರೇಮಧಾರೆ..ದೈವಸ್ಥಾನ  ಅದೋ ನನ್ನ ಮನೆ...ನೀವಿಲ್ಲಿ ಕಾಣದ ಅದೆಷ್ಟೊ ಘಟಿಸಿದ ಘಟನೆಗಳಿವೆ..ಬಾಯೊಂದು ಇದ್ದಿದ್ದರೆ  ಮನೆಯ ಗೋಡೆ ಗೋಡೆಗಳೂ ಕಥಿಸುತ್ತಿದ್ದವು ನನ್ನ ಕಥೆಯನ್ನ..

ಬದುಕಿನ ಬೆನ್ನು ಹತ್ತಿ..ಮನಮೆಚ್ಚಿದವನೊಡನೆ..ಈ ಮಹಾನಗರದಲ್ಲಿ ಬದುಕು ಕಟ್ಟಿಕೊಂಡ ನನಗೆ ಒಮ್ಮೊಮ್ಮೆ ಅನಿಸುವುದು
ಅಲ್ಲಿನ ನೀರಿನಂತೆ ಇಲ್ಲಿನ ನೀರು ರುಚಿ ಕಟ್ಟಲಾರದು...ಅಲ್ಲಿನ ನೆಮ್ಮದಿಭರಿತ ಗಾಢ ನಿದ್ದೆ,ಸುಖಭರಿತ ಸಂಜೆಗಳು ಇಲ್ಲಿ ಯಾವತ್ತೋ ಕಾಣೆಯಾಗಿವೆ..ತಿರುಗಿದಷ್ಟು ನೆನಪುಗಳು..ಪರಿಚಿತ ವ್ಯಕ್ತಿಗಳು..ನನ್ನ ಬಾಳ ಕಾದಂಬರಿಯ ನೂರೊಂದು ಪಾತ್ರಗಳು..ದುಖ:ದ  ಕ್ಷಣಗಳಲ್ಲಿ ಈಗಲು ಮನಸು ಅಮ್ಮನ ಮಡಿಲಿನ ಮಗುವಾಗ ಬಯಸುತ್ತದೆ....ಅಮ್ಮನ ನೆನೆದು ಶಾಂತತೆಯೊಂದು ಮನದಲ್ಲಿ ತುಂಬುತ್ತದೆ..ಅವಸರದಿಂದ ದೀಪ ಹಚ್ಚುವಾಗ ಅದರ ಮಂದ ಬೆಳಕಿನಲ್ಲಿ ಅಪ್ಪ ಅಮ್ಮನ ಮುಖ ಕಾಣುತ್ತೇನೆ..ದೂರವಾಣಿಯಲ್ಲಿ ಅವರ ಮಾತು ಆಲಿಸುವಾಗ ಮನಸ್ಸು ಅದರದೇ ವೇಗದಲ್ಲಿ ನನ್ನೂರು ತಲುಪಿರುತ್ತದೆ..
ವಾಹನಗಳ ಭರಾಟೆಯಲ್ಲಿ ನನ್ನ ಧ್ವನಿ ಕಳೆದು ಹೋದಾಗ ಅಂತರಾತ್ಮದ ಯಾವುದೋ ಮೂಲೆಯಲ್ಲಿ ಅಪ್ಪನ ದನಿ..ಅಮ್ಮನ ಸಾಂತ್ವನ..ಬೀಡಾಡಿ ದನಗಳ ಪ್ಲಾಸ್ಟಿಕ್ ತಿಂದು ಹೊಟ್ಟೆ ತುಂಬಿಸಿಕೊಳ್ಳುವಾಗ " ರಜನಿ, ಗಂಗೆ" ಯರ ನೆನಪು ಗಾಢವಾಗಿ ಕಾಡುತ್ತದೆ..


ಎಂಥಾ ದಿನಗಳವು..ಎಲ್ಲಿ ಮರೆಯಾದವು??

ಮಾಯಾ ಪೆಟ್ಟಿಗೆಯ ಮುಂದೆ ಕುಳಿತ ಗಂಡ ಮಗ ನನ್ನ ಇರುವನ್ನೇ ಮರೆತು ಕಾಲ್ಪನಿಕ ಲೋಕದಲ್ಲಿ ಮುಳುಗುವಾಗ ನನ್ನೆದುರು ಕಳೆದ ಗತಕಾಲದ ಸಂಜೆಗಳು ಬಿಚ್ಚಿಕೊಳ್ಳುತ್ತವೆ. ಮನೆ ಮುಂದಿನ ಕಟ್ಟೆಯಲ್ಲಿ ಕುಳಿತು ಊರವರ ಕತೆ ಕೇಳುತ್ತಿದ್ದ ದಿನಗಳು..ಸಂಜೆ ಆಗುತ್ತಿದ್ದಂತೆ ಭಾರತ ವಾಚನ ಮಾಡುತ್ತಿದ್ದ ಅಪ್ಪನ ರಾಗ ಭರಿತ ದನಿ...ಅದೆಷ್ಟುಬಾರಿ ನಾನು ದ್ರೌಪದಿಯಂತೆ ಸುಂದರಿಯೇ?? ಎಂದು ಕನ್ನಡಿ ನೋಡಿಕೊಂಡಿಲ್ಲ..ಅಮೇಲಾಮೇಲೆ ಆಕೆಯ ಬದುಕು ನನಗೆ ಬೇಡ ಅನ್ನಿಸಿದ್ದು ಅದೆಷ್ಟು ಸಲ..ಅಪ್ಪನ ವಾಚನವೇ ಹಾಗೆ..ಪಾತ್ರಗಳಿಗೆ ಜೀವ ತುಂಬಿ ಕಣ್ಣೆದುರು ನಿಲ್ಲಿಸುತ್ತಿತ್ತು..ಕಳೆದು ಹೋಗುತ್ತಿದ್ದ ದಿನಗಳಲ್ಲಿ ಸೊರಬದ ಗಂಧದ ಅಗರಬತ್ತಿಯ ಸುವಾಸನೆ ಇತ್ತಲ್ಲ.....

ಎಂಥಾ ಹದವಿತ್ತೆ ಗೆಳತಿ..ಹರೆಯಕೆ ಏನು ಮುದವಿತ್ತೇ??

ಗೆಳೆತನಗಳಲ್ಲಿದ್ದದ್ದು ಗುಬ್ಬಿ ಎಂಜಲಿನ ಸವಿ..ನೆಲ್ಲಿಕಾಯಿಯ ಒಗರು..ಬುಕ್ಕಿ ಹಣ್ಣಿನ ಸ್ವಾದ...ಮುಳುಗುತ್ತಿದ್ದ ಸೂರ್ಯನ ಹಿಂದೆಯೇ ಹೊತ್ತಿದ ಸೀಮೆ ಎಣ್ಣೆ ಬುರುಡಿಯ ದೀಪದ ಮಂದ ಬೆಳಕು..ಕಟು ವಾಸನೆ..ಬಗ್ಗಿ ಓದುವಾಗ ಸುಟ್ಟ ಕೂದಲಿನ ಕೆಟ್ಟ ವಾಸನೆ.. ಬೆಳಕು ಮಂದವಿತ್ತು ನಿಜ..ಆದರೆ ಮಾತು ಕತೆಗಳು ನೇರ ಇರಾದೆಗಳು ನೇರ..ಅಪ್ಪನಂತೆ.. ವಿದ್ಯುತ್ತಿನ ಹಾಲು ಬೆಳಕಿನಲ್ಲಿ ಇಂದು ಮನಸುಗಳು ಮಬ್ಬಾದಂತೆ ಅನ್ನಿಸುವಾಗ..ಗೆಳೆತನಗಳು ಸ್ವಾರ್ಥಪೂರಿತ ಅನ್ನಿಸಿದಾಗ..ನಮ್ಮ ಮನೆಯ ಸೀಮೆ ಬುಡ್ಡಿಯ ಬೆಳಕೇ ಶ್ರೇಷ್ಠ ಅನ್ನಿಸಿ ಬಿಡುತ್ತದೆ...ಜಾತಿ-ಮತಗಳ ಮೀರಿತ ಮಾನವ ಧರ್ಮವ ಕಲಿತದ್ದು ಅಲ್ಲಿಯೇ!!

ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ..ಕೈ ಹಿಡಿದು ನಡೆಸೆನ್ನನೂ...

ಗೋಡೆಯ ಮೇಲಿನ ಹಸೆ ಚಿತ್ತಾರದಂತೆ ನನ್ನ ಮಾನಸಲೋಕದ ತುಂಬೆಲ್ಲಾ ರಂಗು ತುಂಬಿದ ನನ್ನ ಮನೆ ಮತ್ತುಊರು ನನ್ನೊಳಗೆ ಅಚ್ಚಾಗಿರುತ್ತದೆ..ನನ್ನ ಕಷ್ಟಗಳ ನಡುವೆ ನನಗೆ ಊರುಗೊಲಾಗಿ..ಗೆಳೆಯನಾಗಿ..ತನ್ನ ಇರುವಿಕೆ ಇಂದಲೇ ಸಂತೈಸುತ್ತದೆ....ಹೇಳಿ ತವರೆಂದು ಕರೆದು ನನ್ನೂರ ನಾನಷ್ಟಕ್ಕೆ ಸೀಮಿತ ಮಾಡಬಹುದೇ.....ಬೇರಿಂದ ಮರವ ದೂರ ಮಾಡಬಹುದೇ??

Saturday, January 19, 2013

ನಾನು ಮತ್ತು ರುಮಿ

ನನ್ನ ಕಾಡಿದ ಬರಹಗಾರರಲ್ಲಿ ರುಮಿ-ಮಾಯ ಅಂಜೆಲೋ ತುಂಬಾ ಆಪ್ತರಾಗುತ್ತಾರೆ..ರುಮಿ-ಅವನು ಪ್ರಸ್ತಾಪಿಸದ ವಿಷಯಗಳೇ ಇಲ್ಲ...ಅವನ ಕಾವ್ಯ-ವಿಚಾರಗಳೊಡನೆ ನನ್ನ ದಿನಗಳು ಬಲು ರೋಚಕ- ಇತ್ತೀಚೆಗೆ ನನ್ನ ಮನಸ್ಸು ಅವನನ್ನು ಎಲ್ಲಾ ವಿಷಯಗಳಲ್ಲು ಪ್ರತಿಮೆಯಾಗಿ ಬಳಸುತ್ತಿದೆ!! ಈ ಪ್ರಕ್ರಿಯೆಯಲ್ಲಿ ನಾನು-ಅವನ ನಡುವೆ ಹುಟ್ಟಿದ ಕೆಲ ಕವಿತೆಗಳು ನಿಮಗಾಗಿ..
  •  
ನೀರವ ರಾತ್ರಿಯ ಏಕಾಂತದಲ್ಲಿ
ತಾರೆಗಳಿಲ್ಲದ ಬಾನ
ನೋಡುತಲಿದ್ದೆ
ಮುಗುಳ್ನಗೆಯ ಬೆಳ್ದಿಂಗಳ
ಚೆಲ್ಲಿ ಬಂದ ಅಲ್ಲಿಗೆ
ನನ್ನ ರುಮಿ
ಈಗ ನಾನೂ ಅವನು
ನಮ್ಮ ಕಣ್ಣೀರಿನ
ನಕ್ಷತ್ರಗಳನ್ನು ಹೆಕ್ಕುತ್ತಿದ್ದೇವೆ!!
  •  
 ರಾತ್ರಿ ಎಲ್ಲಾ ಅವನ ಬೆಚ್ಚನೆಯ
ಕಾವ್ಯಗಳ ಸಾಲು ಕೇಳುತ್ತಾ
ನಿದ್ರಿಸಿದ್ದೆ
ಬೆಳಕು ಹರಿಯಿತು
ಮೈ ತುಂಬ ಕಳ್ಳ ಕೇದಗೆಯ ಘಮ
ತುಟಿಗಳಲ್ಲಿ ರುಮಿಯ
ಕಾವ್ಯ ಜೇನು!!
  •  
ನಾನು ಮಲಗಿದ್ದೆ
ಕಣ್ತೆರೆದು
ನನ್ನೊಳಗಿನ ನನ್ನ
ಎಚ್ಚರಿಸಿದ್ದು
ಅವನ
ತಣ್ಣನೆಯ ಒರಟು
ಕಾವ್ಯದ ಕೈಗಳು !!

ನೆಲದಲ್ಲಿ ಮೂಡಿದ
ನಿನ್ನ ಪ್ರತಿ ಹೆಜ್ಜೆಗೊಂದು
ಕಾವ್ಯದ ಹೂವರಳಿದೆ
ರುಮಿ
ಅದರ ಗಂಧ ಕುಡಿಯುವ
ಚಿಟ್ಟೆ ನಾನು!!
  •  

ಹಸಿ ಮಣ್ಣಿನೊಳಗೆ ಬಿತ್ತಿದಂತೊಂದು ಬೀಜ
ನೀ ನನ್ನೊಳಗೆ ನೆಟ್ಟ
ಸೂಫಿ ಈಗ
ಮರವಾಗಿದೆ
ಸಂತ,
ನೋಡಿ ಆನಂದಿಸಲು ಎಂದು
ಬರುವೆ ನನ್ನ ರುಮಿ??
ಕೇಳು
ಕಾಲ-ದೇಶಗಳಮೀರಿದ
ಹಕ್ಕಿಗಳ ಗಾನ
ಕೊಂಬೆ ಕೊಂಬೆಗೆ ಅರಳಿರುವ
ನಿನ್ನ ಕನಸುಗಳ
ಹೂ
ನನ್ನ ಹುಡುಕದಿರು
ಮರದೊಳಗೊಂದು ಮರಿ ಬೀಜವಾಗಿ
ನಿನ್ನ ಕರೆಗೆ
ಕಾಯುತಿರುವೆ ನಾನೂ
ಮತ್ತೆ
ಮೊಳಕೆಯೊಡೆಯಲು!!







Sunday, January 13, 2013

ಸುಮ್ಮನಿರದ ಸಾಲುಗಳು...

  ನಾನಳಿಯಲಿ

ನಿನಗೆಂಥ ಪ್ರೇಮದ ಹಸಿವು ದೊರೆ??
ನಿನ್ನ ಬಯಕೆಯ ಕಡಲ ಹೀರಿ
ಮುತ್ತಿನ ಮಧು ಮಳೆಯಸುರಿದೆ
ನೋಟದ ಮಿಂಚಿತ್ತು
ಪಿಸುಮಾತುಗಳ ಗುಡುಗಿತ್ತು
 ಆದರೆ...
ನಿನ್ನೆದೆಯ ಬರಡು ಮರುಭೂಮಿಯಲ್ಲಿ
ತಾಕಿ ಆವಿಯಾಯಿತು..
 ನನ್ನಲ್ಲಿ ಇನ್ನೂ ಬತ್ತದ ಜೀವಸೆಲೆಯಿದೆ
ಸುರಿವೆ ನಿನ್ನೊಡಲಿಗೆ
ತಕ್ಕೋ..ನಿನ್ನ ವಿರಹದ
ಬಡಬಾನಲಕ್ಕೆ ಸಿಕ್ಕಿ "ನಾನ"ಳಿಯಲಿ!!



ಸಂಕ್ರಾಂತಿ

 ಸಂಕ್ರಾಂತಿ ಬಂದಿದೆ
’ಸಮ್" ಕ್ರಾಂತಿ ಬರುವುದೇ??

ಅದೆಷ್ಟು ಸೀತೆಯರು..
ಅದೆಷ್ಟು ದ್ರೌಪದಿಯರು..
ಅದೆಷ್ಟು ಅಂಬೆಯರು,
ಅಂಬಾಲಿಕೆಯರು
ಕಣ್ಣ ನೀರ ಹರಿಸಿ 
ಒಡಲ ಅಸು ನೀಗಿಹರು
ನೀನು ದುಶ್ಯಾಸನರ 
ಅಳಿಸಿ ರಾಮರ ತರುವೆ
ಕ್ರಾಂತಿಯ ಕಿಡಿಯ ಹೆಣ್ಣ 
ಮನದಲ್ಲಿ ಹೊತ್ತಿಸಿ
ಒಂದಷ್ಟು ಶಾಂತಿಯ 
ತಂದಿಯೆಂದು ಆಸೆ 
ಹೊತ್ತಿದೆ ಎನ್ನ ಮನ!!
 ಹೇಳು ಬರೀ ಎಳ್ಳು ಬೆಲ್ಲ
ತರುವುದೇ ರಾಮರಾಜ್ಯ??
ಎಷ್ಟು ಕೊಟ್ಟರೇನು,ಎಷ್ಟು ಪಡೆದರೇನು?
ಸಂಕ್ರಾಂತಿ ಕ್ರಾಂತಿಯಾಗಬೇಕು
ಹೆಣ್ಣು ಕಾಳಿಯಾಗಬೇಕು
ರಣಚಂಡಿಯಾಗಬೇಕು!!







Sunday, January 6, 2013

ಸಂಶಯ


ನೀ ಕರೆದದ್ದು ನನಗೆ ಕೇಳಲಿಲ್ಲವೇ!!??
ಅದಕ್ಕೇ ನೋಡು,
ದಾಟಿ ಯುಗಾಂತರಗಳ ಪಾಡು
ಆಡಿ ನೂರಾರು ಪಾತ್ರಗಳ ಮಾತು
ಬೆಚ್ಚಗೆ,ಬೆಚ್ಚದಂತೆ ಹೊದ್ದು
ಮಲಗಿದ್ದ ಮಾಯೆಗಳ ಮುಕ್ಕಿ
ಬಂದೇ ಬಿಟ್ಟೆ

ಅದೋ ಅಲ್ಲಿ! ಇಲ್ಲಿ!
ಎನ್ನುತ ಹಿಡಿಯ ಬರುವ
ಸಾವಿರಾರು ಆಮಿಷಗಳ ದಾಟಿ
ಮನದ ವೇಗದೆಲ್ಲೆಯ ಮೀರಿ
ನಿನ್ನೆಡೆಗೆ ಹೀಗೆ ಬಂದೇ ಬಿಟ್ಟೆ

ನಿನ್ನ ಕೂಗಿಗೆ ಅಲ್ಪಗಳ ಮೆಟ್ಟಿ
ಭೂಮದ ಕಲ್ಪನೆಯ ಕಟ್ಟಿ
ಮಕಾಡೆ ಮಲಗಿದ್ದ ಅಹಿಂಸೆಯ ಅಶ್ವವ ತಟ್ಟಿ
ಕಾಲಾಂತರಗಳ ಅಳಿಸಿ
ಓ ಇದೋ ಬಂದೇ ಬಿಟ್ಟೆ ಬುದ್ಧ!!
ನಿಜವಾಗಲೂ ಹೇಳು...
ನೀನೆ ಕರೆದದ್ದಾ??



Monday, December 31, 2012

ಹೆಜ್ಜೆಗಳು..



ಸಂಪ್ರದಾಯದ ಪಾಚಿಯಲ್ಲಿ
ಜಾರುತ್ತಿವೆ ನನ್ನ 
ಹೆಜ್ಜೆಗಳು

ಗುರಿ ತಿಳಿಯೆ
ದಾರಿ ಅರಿಯೆ
ಎತ್ತ ಹೊರಟಿದೆ
ಈ ಬಾಳ ಕಾಲು ದಾರಿ??

ನಮ್ಮದೇ ರಕ್ತದಲ್ಲಿ
ಕಟ್ಟಿದ ಆಶಾ ಸೌಧಗಳ
ಕೆಡವಿ ಕೆಡವಿ
ಗೋರಿಗಳ ಕಟ್ಟುತ್ತಾ
ಗೋರಿಗಳ ಮೇಲೆ 
ಉದ್ಯಾನವನ ಕಟ್ಟುತ್ತಾ

ಬೆಳೆದ ಹಸಿರು ಹೂಗಳ ಮೇಲೆ
ನಡೆದಾಡುವ
ಹೆಜ್ಜೆಗಳು
ಇವು ಯಾರ ಹೆಜ್ಜೆಗಳು??

ಈ ರಾಕ್ಷಸ ಹೆಜ್ಜೆ 
ಗುರುತುಗಳ ನಡುವೆ
ನನ್ನದೇ 
ಹೆಜ್ಜೆಗಳು ನನಗೆ
ಅಪರಿಚಿತವಾಗಿವೆ
ಜಾರು ದಾರಿಯಲ್ಲಿವೆ...

Tuesday, December 25, 2012

ಆತ್ಮ ಸಂಗಾತಿ


ಪ್ರೇಮ ಎಂದರೆ ಏನು?? ನಿಮಗೆ ನನ್ನ ಪ್ರಶ್ನೆ ಕೇಳಿ ನೂರು ಉತ್ತರಗಳು ಹೊಳೆದಿರಬಹುದು.ಪ್ರೇಮ ಅಂದರೆ ಹಾಗೆ..ಬಯಕೆ..ಆಸೆ..ಹೀಗೆ..ಮುಂತಾಗಿ..ಆದರೆ ನನ್ನ ಅಭಿಪ್ರಾಯದಲ್ಲಿ ಪ್ರೇಮ ಎಂದರೆ ಆತ್ಮಗಳ ಮಿಲನ..ವ್ಯಕ್ತಿಯ ಬಣ್ಣ,ರೂಪು,ಕೆಲಸ,ಜಾತಿಗಳ ಮೀರಿದ ಕಲ್ಪನೆ..ಅಂತಹ ಪ್ರೇಮ ಸುಲಭ ಸಾಧ್ಯವಲ್ಲ..ಆದರೆ ಒಮ್ಮೆ ದಕ್ಕಿದರೆ ಅದು ಜನ್ಮ ಜನ್ಮಾಂತರದ ಬಂಧ!! (ಕೆಳಗಿನ ಕವಿತೆ ಈಗ ೧೦ ತಿಂಗಳ ಹಿಂದೆ ಬರೆದದ್ದು)

ಹುಣ್ಣಿಮೆಯ ಬೆಳಕಲ್ಲಿ ಹೊರಟ
ಚಕೋರಗಳ ದಿಬ್ಬಣ
ಕಡಲ ಅಲೆಗಳಿಗೀಗ ಚಂದ್ರನೊಂದು
ಹಿತವಾದ ತಲ್ಲಣ

ಅಲೆಗಳ ಚುಂಬಿಸುವ
ಕಿರಣಗಳ ತವಕ
ಹಾಗೇ ಎರಡು ಜೀವಗಳ ಬಂಧಿಸುವುದು
ಪ್ರೇಮ ಎಂಬ ಪಾವಕ

ನಾನು ನೀನು! ನಿನ್ನ ನನ್ನ
ತೋಳತೆಕ್ಕೆ ಬಂಧನ
ಉಸಿರ ಬಿಸಿಯು ತಾಕುತಿರಲು
ಭಾವಗಳಿಗೆ ಕಂಪನ

ಕಪ್ಪೂ ಒಪ್ಪು,ಬೆಳ್ಳಿ ಚಂದ
ಒಂದನೊಂದು ಬೆರೆತವು
ತುಟಿಯ ಜೊನ್ನ ದೊನ್ನೆಯಲ್ಲಿ
ಕನಸುಗಳು ಕಲೆತವು

ಬಯಕೆ ಎಂಬ ಅಗ್ನಿಕುಂಡ
ಕಾಮವುರಿದು ಹೋಗಲಿ
ನನ್ನ ನಿನ್ನ ಮಿಲನದಲ್ಲಿ
ಆತ್ಮಗಳು ಬೆರೆಯಲಿ

ಆತ್ಮಗಳ ಮಿಲನದಲ್ಲಿ
ದೈವವೆಮಗೆ ಒಲಿವುದು
ಅವನ ಒಲುಮೆ ಬಾಳಿನಲ್ಲಿ
ಸುಖದ ಧಾರೆ ಸುರಿವುದು!!

Saturday, December 15, 2012

ಶಿಶಿರ ಹೇಮಂತ ಗಾನ(ಚಳಿಗಾಲದ ಪಲಕುಗಳು)

 ಪಲಕು ೧


ಹೊದಿಕೆಯ ಅಡಿಯಲ್ಲಿ ಬೆಚ್ಚಗೆ ಹೊದ್ದು ಮಲಗಿದ ನನ್ನ ಕರೆದದ್ದು ಸೂರ್ಯನಾ?ಈ ಮೈ ನಡುಕಕ್ಕೆ ನಿನ್ನ ನೆನಪು ಮತ್ತಷ್ಟು ಚಳಿ ಏರಿಸುತ್ತದಲ್ಲೋ ಪಾಪಿ!!ನಾನ್ಯಾವ ಪಾಪದ ಕರ್ಮ ಮಾದಿದ್ದೇನೋ,ಇಂತಹ ರಣ ಚಳಿಗಾಲದಲ್ಲಿ ನನ್ನ ವಿರಹದ ಉರಿಗೆ ತಳ್ಳಿ ನಿನ್ನ ತೊಗಲುಭರಿತ ಹೃದಯವ ಚಳಿ ಕಾಸೋಕೆ ಬಿಟ್ಟಿದ್ದೀಯಲ್ಲ ಹೇಳು ಇದು ಯಾವ ನ್ಯಾಯ? ಕಷ್ಟ ಪಟ್ಟು ಹೇಗೋ ಎದ್ದಿದ್ದಾಯ್ತು..ಅಕ್ಕಪಕ್ಕದ ಮನೆಯ ಹೆಂಗಸರ ಸುಳಿವಿಲ್ಲ ಈ ಚಳಿಗಾಲ ಬಂದ ಮೇಲೆ,ಎದ್ದಾರಾದರು ಹೇಗೆ, ಗಂಡ ಮಕ್ಕಳ ನಡುವೆ ಬೆಚ್ಚಗೆ ಹೊದ್ದು ಮಲಗಿದ ಅವರ ಸವಿ ನಿದ್ದೆಗೆ ಮತ್ತಷ್ಟು ಮಸುಕು ಸುರಿದು ನಿದಿರೆಯ ಮಾಯಾ ಲೋಕಕ್ಕೆ ತಳ್ಳುವನಲ್ಲಾ ಈ ಶಿಶಿರ..ನನ್ನ ಪಾಲಿಗೆ ಮಾತ್ರ ವೈರಿ!!

ಪಲಕು ೨

ತಣ್ಣನೆಯ ನೀರಿನಲ್ಲಿ ಮುಖ ತೊಳೆದು,ಬೆಳಗಿನ ಸೌಂದರ್ಯ ಸವಿಯಲು ಮನೆ ಬಾಗಿಲು ತೆರೆದೆ,ರಪ್ಪೆಂದು ರಾಚಿದ ಗಾಳಿಗೆ ಎದೆಯಲ್ಲಿ ನಡುಕ, ಮುಂದೆ ಯಾರಾದರೂ ಇದ್ದಾರೋ?..ಕಾಣಲಾಗದಷ್ಟು ಮಂಜಿನ ತೆರೆ, ನನ್ನ ನಿನ್ನ ನಡುವೆಯೂ ಇಷ್ಟೇ ಅಂತರ..ಹೆಜ್ಜೆ ಇಟ್ಟರೆ ಅಳುವ ಗತಿಸಿದ ನಿನ್ನ ಸವಿ ಸ್ನೇಹದ ನೆನಪುಗಳು..ನನ್ನ ಬೆಳಗಿನ ಕಿನ್ನರಿ ಅಂತಿದ್ದೆ..ಈಗ ಕಿನ್ನರಿಯ ಮಾಯಶಕ್ತಿ ಸೊರಗಿದೆ..ನೀ ಹಾಸಿದ ಮಂಜಿನ ತೆರೆಯ ನೀನೇ ಸರಿಸಿ ಬರಬಾರದೇ? ಮನಸಿಗೂ ಒಮ್ಮೊಮ್ಮೆ ಎಂತಹ ಹುಚ್ಚು ನೋಡು..ನಾ ನಡೆದ ಉಹುಮ್ ನಾವು ನಡೆದ ಈ ಹಾದಿಯಲ್ಲಿ ಮತ್ತೆ ಹೂ(ಅದೂ ಕಣಗಿಲೆ) ಅರಳಿದೆ..ಅದರ ಮೇಲೆ ಬಿದ್ದ ಹಿಮದ ಬಿಂದುವಿನಲ್ಲಿ ನಿನ್ನ ಸ್ಪರ್ಶದ ಅನುಭವವಾಗಿ ಒಮ್ಮೆ ಬೆಚ್ಚಿದೆ!!


ಪಲಕು ೩

ಎಂದೂ ಕಾಣುತ್ತಿದ್ದ ನಿತ್ಯದ ಮುಖಗಳಿಗೀಗ ಸ್ಪಷ್ಟತೆ ಇಲ್ಲ..ಯಾಕೆಂದರೆ ಮಂಜು ಸುರಿದಿದೆ ನೋಡು..ಸೂರ್ಯನು ನಿನ್ನ ಸ್ನೇಹಿತ ತಾನೆ..(ನೀ ಚಂದಿರನಾದರೆ ಅವ ನಿನ್ನ ಸ್ನೇಹಿತನೊ ವೈರಿಯೊ?)ಅವನಿಗೆ ನನ್ನ ಮೇಲ್ಯಾವ ದ್ವೇಷವಿದೆ  ಮಾರಾಯ ಎಲ್ಲಾ ಮುಖಗಳ ಮೇಲಿನ ನಗುವ ಅಳಿಸಿ ಹಾಕಿದ್ದಂತೆ ಕಾಣುವುದು!! ಕೈ ಕೈ ಹಿಡಿದು ನಾವಿಬ್ಬರೂ ಅದೆಷ್ಟು ಬಾರಿ ಈ ಜಾಗದಲ್ಲಿ ಸೂರ್ಯನಿಗೆ "ಗುಡ್ ಮಾರ್ನಿಂಗ್" ಹೇಳಿಲ್ಲ??ಈಗಲ್ಲಿ ನೀ ಬಿಟ್ಟು ಹೋದ ಅಸಹನೀಯ ಏಕಾಂತವಿದೆ..ಆ ದಾರಿಯಲ್ಲಿರುವ ಮಂಜಿನ ತೆರೆ ಈಗ ಮತ್ತಷ್ಟು ಗಾಢವಾಗಿದೆ.ಆದರೂ ನನಗೆ ಚಳಿಗಾಲ ಎಂದರೆ ಇಷ್ಟ..ನಿನ್ನ ನೆನಪು ಮತ್ತಷ್ಟು ನಿಚ್ಚಳ ನನ್ನ ಪ್ರೀತಿ ಮತ್ತಷ್ಟು ಆಳವಾಗುತ್ತದೆ ನೋಡು..ಅದಕ್ಕೇ!!

ಪಲಕು ೪
ಏನೆ ಹೇಳು,ಈ ಚಳಿಗಾಲಕ್ಕೊಂದು ಅನೂಹ್ಯ ಸೌಂದರ್ಯವಿದೆ , ಒಂದು ಬಣ್ಣಿಸಲಾಗದ ಅಂದವಿದೆ, ಮುಪ್ಪಿನ ಸುಕ್ಕುಗಳಲ್ಲಿರುವ ಅನುಭವದ ರೇಖೆಗಳಂತೆ ಜೀವನದ ನಶ್ವರತೆಯ ಸಾರುವ ಗುಣವಿದೆ..ನೋಡು..ಎಲ್ಲ ಮರಗಳಿಂದ ಉದುರುವ ಬಣ್ಣ ಬಣ್ಣ ಮಾಸಿದ ಎಲೆಗಳು ಯಾವ ಅವಸರವಿಲ್ಲದೇ ಭೂಮಿಯನ್ನ ನಿಧಾನವಾಗಿ ಚುಂಬಿಸುತ್ತಿದೆ..ಕಲರವದಿಂದ ಜರ್ಝರಿತವಾಗಿದ್ದ ಈ ವನದಲ್ಲಿ ಮೌನದ ಹಿತವಾದ ಕೂಜನ!! ಹಿಮಮಣಿಗಳ ಅಂದವೆನ ಹೇಳಲಿ ಗೆಳೆಯಾ,ಸೂರ್ಯನಿಗೇ ಗೊತ್ತಿಲ್ಲದ ಅನೇಕ ಬಣ್ಣಗಳಲ್ಲಿ, ಅವನ ಪ್ರಖರ ಕಿರಣಕ್ಕೆ ಕರಗುವಾಗಲೂ ಅದೆಂಥ ತನ್ಮಯತೆ??ನಿನ್ನಲ್ಲಿ ಕರಗುವ ನನ್ನಂತೆ!!ಈ ಮೌನದಲ್ಲಿ ಒಂದು ವಿರಹವಿದೆ..ಈ ಬಿದ್ದ ಎಲೆಗಳ ಮೇಲೆ ನಡೆವಾಗ ನಿನ್ನ ನೆನಪುಗಳ ಸರಸರ್ ಸದ್ದಿಗೆ ನನ್ನ ಕಾಲಗೆಜ್ಜೆ ಮೌನವಾಗಿದೆ.. ಆ ಎಲೆ ಇಲ್ಲದ ಮರಗಳು ನಶ್ವರತೆ,ದು:ಖದ ತೀವ್ರತೆಯನ್ನ ಸೂಚಿಸುವಂತೆ ನಿಂತಿವೆ, ಬೀಸಿ ಬರುವ ಗಾಳಿಗೀಗ ಎಲ್ಲಿಲ್ಲದ ತೀವ್ರತೆ..ನಲ್ಲನನ್ನ ಕಳಕೊಂಡ ನಲ್ಲೆಯ ನಿಟ್ಟುಸಿರ ಓಲೆ ಅದರಲ್ಲಿರಬಹುದೇ?? ನಾನಂಥ ಓಲೆಯೊಂದ ಬರೆದರೆ ನೀ ದೂರದಲ್ಲೆಲ್ಲೋ ಓದಬಹುದೇ??

ಪಲಕು೫

ಇದು ಆಸೆಗಳ ಹಣ್ಣಾಗುವ ಕಾಲ..ಹಳೇ ಗಾಯಗಳು,ನೋವುಗಳು ಕೆಣಕುವ ಕಾಲ..ಆಸೆಗಳ ಹಣ್ಣುಗಳು ಬಯಕೆಗಳ  ಎಲೆಗಳು ಉದುರುವ ಕಾಲ..ಸುಖ-ದು:ಖದ ಸಮ್ಮಿಲನದ ಅರೆಮಾಗಿದ ಮಾಗಿ ಕಾಲ..ಯಾವ ಅವಸರವಿಲ್ಲದ ಸಾವಕಾಶದ ಕಾಲ..ವಿರಹಿಗಳ ಸುಡುವ ಚಳಿಗಾಲ..ಮನಸ್ಸು ಯೋಚಿಸುತ್ತದೆ..ದು:ಖವಿಲ್ಲದೇ ಸುಖವೇ?? ಕಪ್ಪೆಂಬ ಬಣ್ಣವೇ ಕಾಣದಿದ್ದರೆ ಬಿಳುಪು ಕಂಡೀತು ಹೇಗೆ?? ಕತ್ತಲಿಲ್ಲದ ಬೆಳಕೇ??ಪ್ರೀತಿ ಇಲ್ಲದ ಪ್ರಕೃತಿಯೇ?? ಶಿಶಿರ ಹೇಮಂತರಿಲ್ಲದ ವಸಂತನೇ??ನಿನ್ನ ಇರುವಿರದ ನಾನೇ?? ನೀ ಉತ್ತರಿಸು!! ನನ್ನೊಂದಿಗೆ ಶಿಶಿರನೂ ಹೇಮಂತನೂ ಕಾಯುತ್ತಿರುವರು ನಿನ್ನ ಉತ್ತರಕ್ಕೆ..ವಸಂತನೊಬ್ಬ ಬರುವ ಮೊದಲೇ ನಿನ್ನ ಸಂದೇಶ ತಲುಪಲಿ..ನನ್ನ ಬರದಾದ ಬಯಕೆಗಳ ನದಿ ತುಂಬಿ ಹರಿಯಲಿ..



 

Friday, December 7, 2012

ಆ ಹುಡುಗಿ...

ಅವಳ ಕಣ್ಣುಗಳಲ್ಲಿ ನೀರಿನ ಪಸೆಯಿತ್ತು,ಆರದ ನೋವಿನ ಊಟೆ ಹೊತ್ತು ನಡೆಯಲಾಗದವಳಂತೆ ಬಗ್ಗಿ ನಡೆಯುತ್ತಿದ್ದಳು,ಆದರೂ ಆ ನಡಿಗೆಯಲ್ಲೊಂದು ಪ್ರಶಾಂತತೆಯಿತ್ತು,ಅವಸರದ ಸುಳಿವಿಲ್ಲದ ಬೇಸಿಗೆಯ ಗಾಳಿ ಆಕೆಗೇನೋ ಎಂಬಂತೆ ತೀರ ತಂಪಲ್ಲದೆ ಬೀಸುತ್ತಿತ್ತು,ಸುತ್ತ ಬೆಂಕಿ ಪೊಟ್ಟಣಗಳಂತೆ ಕಾಣುತ್ತಿರುವ ಸಾವಿರಾರು ಮನೆಗಳಿಂದ ಕೇಳುವ ಶಬ್ದ ಆಕೆಗೆ ಕೇಳಿಸುತ್ತಿಲ್ಲ, ಸುತ್ತ ನಿಂತು ಒಮ್ಮೆ ಸುಮ್ಮನೆ ಧೇನಿಸಿದಳು, ಆ ಮನೆಯ ಕಾಂಪೌಂಡಿನ ಸುತ್ತ ಇರುವ ವಸ್ತುಗಳ ಕಂಡು ಆಕೆಯ ಕಣ್ಣರಳಿತು,ಒಂದೊಂದಾಗಿ ಆರಿಸಿ ತನ್ನ ಪುಟ್ಟ ಕೈ ಚೀಲಕ್ಕೆ ತುಂಬಿದಳು, ಮುಂದೆ ಹೊರಟಾಕೆ ಮತ್ತೇನೋ ಹುಡುಕುವಂತೆ ಎರಡು ಹೆಜ್ಜೆ ಹಿಂದೆ ಬಂದಳು,ಆ ಮನೆಯ ಸೌಂದರ್ಯ ಆಕೆಯ ಮನ ಸೆಳೆಯಿತು,ಬಾಗಿಲಿನ ಹೊಸಾ ಚಿತ್ತಾರ ಕರೆಯಿತು, ಒಳಗೆ ಹೆಜ್ಜೆ ಇಡಬೇಕೆನ್ನುವಷ್ಟರಲ್ಲಿ ಮುದ್ದಾದ ಮಗು ಅವಳತ್ತಲೇ ನಡೆದು ಬಂತು. ಅದರ ಮುದ್ದು ಮೊಗ ಆಕೆ ಜಾಹೀರಾತಿನ ಪೋಸ್ಟರಿನಲ್ಲಿದ್ದ ಮುಖವನ್ನೇ ನೆನಪಿಗೆ ತಂತು.
ಹತ್ತಿರ ನಿಂತು ಕೈ ಚಾಚಿದಳು,

ಆ ಮಗು ಬಂತು,ಅಗೋ ಬಂದೇ ಬಿಟ್ಟಿತಲ್ಲ,

ಅರೆರೆ!! ಜೊತೆಗೆ ಅವರಮ್ಮನೂ, ಕೈಯಲ್ಲಿ ಮಲ್ಲಿಗೆಯ ಮಾಲೆ ಹಿಡಿದು!!

"ಮಗು ಯಾರಮ್ಮ ನೀನು?? ಇಲ್ಲೇನು ಮಾಡ್ತಾ ಇದ್ದೀಯಾ?"

ತಾನು ಯಾರು?,ನೆನಪಿಸಿಕೊಳ್ಳಲೆತ್ನಿಸಿದಳು, ಆಗಲಿಲ್ಲ, ಸುಮ್ಮನೆ ಕಾಲ್ಬೆರಳು ನೆಲ ಗೀರತೊಡಗಿತು,

"ಮಗೂ,ಊಟವಾಯ್ತೇ ನಿನ್ನದು??"

ಊಟ ,ಹಾಗೆಂದರೇನು?? ಹಾ!! ನೆನಪಾಯ್ತು,ಅಮ್ಮ ಹೇಳುತ್ತಿದ್ದಳಲ್ಲ,

"ಅಲ್ಲೆಲ್ಲೋ ಸುಂದರ ಜಗತ್ತೊಂದಿದೆಯಂತೆ,ಅಲ್ಲಿ ಗಂಜಿ ಬದಲು ಸುವಾಸನೆಯುಳ್ಳ ಅಕ್ಕಿಯೆಂಬ ವಸ್ತು ತಿನ್ನಲು ಸಿಗುತ್ತದಂತೆ!!ಇದು ಅದೇ",
ಪಸೆಯಿದ್ದ ಕಂಗಳಲ್ಲಿ ದೀಪವೊಂದು ಬೆಳಗಿತು,

"ಬಾ,ಮಗೂ,ನಮ್ಮ ಪುಟ್ಟನ ಹುಟ್ಟಿದ ದಿನ ಇವತ್ತು"

ಇವಳು ಅರ್ಥವಾಗದೆ ಸುಮ್ಮನೆ ನಿಂತೇ ಇದ್ದಳು,ಆದರೆ ಎಲ್ಲಿಂದಲೋ ಎರಡು ಕೈಗಳು ಬಂದು ಒಳಗೆಳೆದುಕೊಂಡವು, ಮತ್ಯಾವುದೋ ಎರಡು ಕೈಗಳು ಆಕೆಗೆ ಬಡಿಸಿದವು,ಹೆಸರೇ ಗೊತ್ತಿಲ್ಲದ ಅನೇಕ ವಸ್ತುಗಳು ಎಲೆಯ ಮೇಲೆ ಬಂದು ಬೀಳುತ್ತಿದ್ದರೆ ಆಕೆ ಕುಳಿತೇ ಇದ್ದಳು ನಿಶ್ಚಲವಾಗಿ,

"ಕ್ಲಿಕ್" ದೊಡ್ಡದಾದ ಬೆಳಕೊಂದು ಬಂದಂತಾಯಿತು, ಬೇರೆಯದೇ ಜಗತ್ತಿನಲ್ಲಿ ವಿಹರಿಸುತ್ತಿದ್ದ ಆಕೆ ವಾಸ್ತವಕ್ಕಿಳಿದಳು,

ಆದಷ್ಟು ಜಾಸ್ತಿ ತಿನ್ನಲೆತ್ನಿದಳು,ಆಗದೇ ಎಲೆಯ ಬಿಟ್ಟು ಏಳುವಾಗ ಕಂಗಳು ತುಂಬಿ ಬಂದವು, ಮತ್ತದೇ ಸ್ವರ ಕೇಳಿತು,

"ಮಗೂ ನಿನ್ನಮ್ಮ ಅಪ್ಪ ಎಲ್ಲಿ?"

"ಅಮ್ಮ ಮೇಲೆ ಇದಾರೆ,ಮತ್ತೆ ಅಪ್ಪ ಗೊತ್ತಿಲ್ಲ"

"ಈ ಪುಟ್ಟನ ಜೊತೆ ಇರ್ತೀಯಾ?"

ಆಕೆ ಹೇಳಲೋ ಬೇಡವೋ ಎಂಬಂತೆ ಸಣ್ಣಗೆ "ಹುಂ" ಎಂದದ್ದೇ ಮುಂದೆ ನಡೆದದ್ದೆಲ್ಲಾ ಕನಸು!! ಅಮ್ಮ ಹೇಳುತ್ತಿದ್ದ "ಸ್ವರ್ಗ"ವೆಂದರೆ ಇದು,ಆ ಹೆಂಗಸೇ "ಕಿನ್ನರಿ" ಅಂದುಕೊಂಡ ಆ ಎಳಸು ಕಂಗಳಿಗೆ ದಣಿವಾಗುತ್ತಲೇ ನಿದ್ರೆ ಆವರಿಸಿತ್ತು.

"ಯೋಯ್, ಯಾರಮ್ಮಾ ಅದು,ಎಲ್ಲಿಂದ ಬಂದು ಸಾಯ್ತಾವೋ ನಮ್ ತಲೇ ತಿನ್ನಕ್ಕೆ, ಒಯ್ ರಂಗಾ ಯಾವುದೋ ಚಿಂದಿ ಹುಡುಗಿ ಇಲ್ಲೇ ಬಿದ್ಬಿಟ್ಟಿದೆ,ಗಾಡಿ ತೆಗೆಯಕ್ಕೆ ಆಗ್ತಾ ಇಲ್ಲ,ನೀನೆಲ್ಲೊ ಹೋಗಿದ್ದೆ ಸಾಯಕ್ಕೆ?" ಗಡಸು ದ್ವನಿ ಕಿರುಚಿತು,

"ಸಾರ್, ಬಂದೇ, ಇವತ್ತು ಬೆಳಗಿನ ಜಾವ ಬಂದಿರ್ಬೇಕೇನೋ, ಅರೆರೆ!!ಅಯ್ಯೋ ಸಾರ್ ಜೀವ ಹೋಗ್ಬಿಟ್ಟಿದೆ!!ಯೇನ್ ಮಾಡೋದು ??"

"ನಗರ ಪಾಲಿಕೆ ವ್ಯಾನ್ಗೆ ಫೋನ್ ಮಾಡು ಭೇವ್ಕೂಫ!! ಅದನ್ನ ಎಳದು ಆ ಕಡೆ ಹಾಕು,ಇಲ್ಲೇ ಬಿದ್ದಿದ್ರೆ ಮೀಡಿಯಾದೋರು ದೊಡ್ಡ ಹಗರಣ ಮಾಡ್ತಾರೆ"

"ಸರಿ ಸಾರ್,"

ಮರುದಿನದ ಪತ್ರಿಕೆಯಲ್ಲಿ ಸಣ್ಣದಾಗಿ ಕ್ರೈಮ್ ವಿಭಾಗದಲ್ಲಿ ಸುದ್ದಿಯೊಂದು ಪ್ರಕಟವಾಗಿತ್ತು

"ಎಂಟು ವರ್ಷದ ಚಿಂದಿ ಆಯುವ ಬಾಲಕಿಯ ಶವ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳ ಮನೆಯ ಎದುರು ರೋಡಿನಲ್ಲಿ ಪತ್ತೆಯಾಗಿದ್ದು, ಮಾನ್ಯ ಮಂತ್ರಿಗಳು ಆಕೆಯ ತಂದೆ ತಾಯಿಗಳಿಗೆ ಐವತ್ತು ಸಾವಿರದ ಪರಿಹಾರ ಪ್ರಕಟಿಸಿದ್ದಾರೆ".

ಮಲ್ಲಿಗೆಯೊಂದು ಅರಳುವ ಮೊದಲೇ ಹಸಿವಿಂದ ಬಾಡಿ ಹೋದದ್ದು ಯಾರಗಮನಕ್ಕೂ ಬರಲೇ ಇಲ್ಲ!!

Friday, November 30, 2012

ನಾ ಯಶೋದೆ...

 ತಾಯ್ತನ ಅನ್ನೋದು ಸುಂದರ ವರ...ನನ್ನ ಪುಟ್ಟ ಭಾವತರಣ(ನನ್ನ ಮಗ) ನನ್ನ ಬದುಕನ್ನು ನಿಜಕ್ಕು ಗುರುವಾಗಿ ತಿದ್ದಿದ್ದಾನೆ,ನಾನು ಅವನಲ್ಲಿ ನನ್ನ ಜಗತ್ತು ಕಂಡಿದ್ದೀನಿ..ಅವನು ಬರೆಸಿದ ಕವನ ಇದು..

ನಿನ್ನ ಪುಟ್ಟ ಕೈಗಳಲ್ಲಿ
ನನ್ನ ಕೊರಳ ಬಳಸಿದಾಗ
ನೋಡು ನಾನೀಗ ಯಶೋದೆ!!

ನಿನ್ನ ಮುದ್ದು ಮುಖದಲ್ಲಿ ಸುಂದರ
ನಗುವು ಹೊಮ್ಮಿದಾಗ
ಕತ್ತಲ ತೆರೆ ಸರಿದು
ಹೃದಯದ ಕೋಣೆಯಲ್ಲಿ
ಬೆಳಗಿನ ಬೆಳಕು

ತುಟಿಗಳ ಅಂಚಿನಲ್ಲಿ
ಸುರಿವ ಸಿಹಿಮಾತುಗಳ
ಮುತ್ತಿನ ಧಾರೆಗೆ
ವಸುಂಧರೆ ಹೊಟ್ಟೆಕಿಚ್ಚಿಗೆ
ಮತ್ತೊಮ್ಮೆ ಬಿಮ್ಮನಸಿಯಾದಾಳು!!


ನೀ ನನಗೆ ಶ್ಯಾಮ,
ನೀ ನನಗೆ ರಾಮ
ಜಗದ ಎಲ್ಲ
ಸೌಂದರ್ಯಗಳ ಮೊತ್ತ
ನೀ ನನ್ನ ಕಾಮ,
ನವಿಲುಗರಿಯ
ಕಣ್ಣಲ್ಲಿರುವ ಅಷ್ಟೂ ಬಣ್ಣ
ನೀ ನನಗೆ ನನ್ನ ಮುದ್ದು ಕಣ್ಣಾ!!