Thursday, September 12, 2013

ಖಾಲಿ ನೀಲಿ ಹಾಯ್ಕುಗಳು..

 ೧

ನಿನ್ನ ಬೆವರಿನ ಗಂಧವಿಲ್ಲದ ತಂಗಾಳಿಗೆ
ನನ್ನ ಮನೆಯಂಗಳದಿ ಪ್ರವೇಶ
ನಿರಾಕರಿಸಲಾಗಿದೆ!!


ಸ್ನಾನ ಮಾಡುವಾಗ ಕದ್ದು ನೋಡುವ ಕನ್ನಡಿಯೇ !!
ನಿನ್ನ  ಮರ್ಯಾದೆಯ  ಮಿತಿ ಮೀರದಿರು,
ಅವನಂತೆ !!


ಹೆರಳಿಂದ ಉದುರಿದ ನೀರ ಹನಿಗಳ ಉಂಡು
ಹುಲುಸಾದೆ ನನ್ನ ಗುಲಾಬಿ ಗಿಡವೇ..
ನಾಚು ಸ್ವಲ್ಪ..ದುಂಬಿ ಬರುವ ಸಮಯಕ್ಕೆ!!


ಯಾಕೆ ಪ್ರೇಮ ಕವಿತೆಗಳ ಬರೆವೆ ಎಂದ...
ನಿಜಕ್ಕೆ ನಿಲುಕದ ನಿನ್ನ  ನನ್ನ ಪದಗಳಲ್ಲಿ
ಹಿಡಿದಿಡುವ ಪ್ರಯತ್ನ ಎಂದೆ ...


ಕಥೆ  ಕೇಳಲು ನಾನೇ ಬೇಕಾಗಿಲ್ಲ ಈ ಕಿಟಕಿ..
ತೆರೆದ ಬಾಗಿಲು.. ಮಡಿಯದ ಹಾಸಿಗೆಯ
ಸುಕ್ಕುಗಳ ಕೇಳಿ ..




 ಮಧುವು ರುಚಿಸುತ್ತಿಲ್ಲವಂತೆ ಅವನಿಗೆ
 ಇತ್ತೀಚೆಗೆ, ನನ್ನ ಕಣ್ಣ ರೆಪ್ಪೆಯಲ್ಲಿ ಕರಗಿದ
ಕಾಡಿಗೆಯ ಮತ್ತೇರಿರಬೇಕು!!



ಪ್ರೇಮವೆಂದರೆ  ಬಿಸಿಯುಸಿರಿನ ರಾತ್ರಿಗಳ
ನಂತರ ಉಳಿವ ಬಂಧ..ನನ್ನ ನಾಚಿಕೆ...
ಅವನ ಬೆವರಿನ ಗಂಧ!!




ಪೋಲಿ ಎಂದು ದೂರದಿರಿ ನನ್ನವನ,
ಅವ ಉಬ್ಬುತಗ್ಗುಗಳ ಮೀರಿ ಮನದ ಮಡಿಕೆಯಲ್ಲಿ
ಬಣ್ಣ ಬಿಡಿಸುವ ಅಜಾತ ಕಲಾವಿದ!!


ಚಿತ್ರ ಕೃಪೆ-ಗೂಗಲ್

Monday, September 9, 2013

ನಿರೀಕ್ಷೆ

ಮೋಡ ತುಂಬಿದ ಬಾನಲ್ಲಿ 
ಚೆಲ್ಲದೇ ಕಾದಿದೆ ಹನಿಗಳು 

ಸೋರಿ ಹೋಯಿತು ನನ್ನ ತಾರುಣ್ಯ 
ನಿನ್ನ ಬದುಕ ಅಡಿಪಾಯದಡಿಗೆ 
ಆರಿ ಹೋಯಿತು ಜೀವನದ ಚಿಲುಮೆ 
ನಿನ್ನ ದರ್ಪದ ಉರಿಗೆ 
ಬದುಕಿದ್ದೆ ಜೀವಂತ ಶವವಾಗಿ,,

ಎತ್ತಣಿಂದಲೊ ತೂರಿ ಬರುವ 
ಬಿಡುಗಡೆಯ ಬಾಳಿಗಾಗಿ ಕಾದಿದ್ದೆ.. 
ಬಂದೇ  ಬಂತು ಗಾಳಿ ಆದರೆ 
ನಾ ಉಸಿರಾಡುವ ಮುನ್ನ
ನನ್ನ ಬದುಕು ಸತ್ತಿತ್ತು 

ಇಂದು ನನ್ನ ಭಾವಗಳ 
ಹೆಣದ ಮೆರವಣಿಗೆ!!
ಈಗಾದರೂ ಬರುವುದೇ 
ಪ್ರೀತಿಯ ಮಳೆ ಇಳೆಗೆ??


Friday, September 6, 2013

ಕೇಳು ಶ್ಯಾಮ.....


ಕೇಳು ಶ್ಯಾಮ ,

ಯಮುನೆಯಲೆಯ ಉಬ್ಬರಕೆ ರಾತ್ರಿಯೇ ಬೇಕು,
ನನ್ನ ಮನದ ತುಡಿತಕ್ಕೆ ನಿನ್ನ ನವಿಲುಗರಿ ಸಾಕು ...


ನಿನ್ನ ಮೋಹಕ  ಮೊದಲ ನೋಟಕ್ಕೆ ನಮ್ಮನೆಯಂಗಳದಿ ಹೂ ಬಳ್ಳಿ ಚಿಗುರಿದೆ
ಇನ್ನು ನನ್ನ ಗತಿ ಏನಿರಬಹುದು??



ಸಖಿಯರೆಲ್ಲರೂ ಕೇಳುವರು ..
ಸತಿ ನೀನು, ಮೋಹನನ ಮೇಲೇಕೆ ಈ ಪರಿಯ ಮೋಹ
ನಾಬಲ್ಲೆ ಇದು  ತೀರದ ದೈವಿಕ ದಾಹ!!



ಗೋಕುಲದ ಗರಿಕೆಯೂ ನಿನ್ನ ಹೆಸರ ನುಡಿವುದೆಂದೇಕೆ
ಈ ಪರಿಯ ಹೆಮ್ಮೆ ನನ್ನ ಮೋಹನ
ಕೇಳು ನಿನ್ನ ಎದೆಯ ಬಡಿತ
ಅಲ್ಲಿ ಕೇವಲ ನಾನೇ ನಿನ್ನ ಮಿಡಿತ!!



ನಿನ್ನ ತುಂಟ ನೋಟಕ್ಕೆ ನನ್ನ ಕಾಲಿನ ಗೆಜ್ಜೆ ನಾಚಿದೆ
ಕೊಳಲಿಗೇಕೆ ಮುನಿಸು?
ಬೆಳಕು ಬಂದ ಒಡನೆ ಅನಿಸುವುದು,ನಿನ್ನ
ಇರುವಿಕೆ ಒಂದು ಕನಸು!!



ದು:ಖದ ಕಡಲಿದೆ ಎದೆಯಲ್ಲಿ ಶ್ಯಾಮ ನೀನೊಂದು ದೋಣಿ
ನೀಡಿರುವೆ ನಿನಗೆ  ನನ್ನ ಇಹಪರದ ಗೇಣಿ!!!


chitra krupe- kallavida mR.Keshava raghavan

Tuesday, September 3, 2013

ಅಮೃತ ವಾಹಿನಿ

ನಾ  ಕಪ್ಪು 

ನೀ ಬಿಳುಪು

ಆದರೂ ನಿನ್ನೊಲಮೆ 

ನನಗೆ ಒಪ್ಪು

ಕಾಲಕೋಶಗಳ ಮೀರಿತು 

ಸ್ನೇಹದ ಭಾಷೆ

ಕಡಿದ ಸಂಬಂಧಗಳ ಕೊಂಡಿ

ಕೂಡೀತು ಹೇಗೆ?

ಅವ  ಆ ಜಾತಿ

ಇವ ಈ  ಜಾತಿ

ಕದಡಿತು ಶಾಂತ

ಕೊಳದಂತ ಮತಿ

ತಿಳಿಯಾದೆದೆವೆಂದೂ

ಅಹಾರವಿರಲಿ ಬೇರೆ

ಇರದಿರಲಿ ಭಾವಗಳಿಗೆ

ಮುಖವಾಡದ  ಸಂಸ್ಕೃತಿ

ನನ್ನ ನರನಾಡಿಗಳಲ್ಲು ಹರಿಯುತಿದೆ

ಅದೇ ಕೆಂಪು ರಕ್ತ

ಅದೇವು ಎಂದು ನಾವು

ನಿಜದಿ ಮುಕ್ತ??

ಎಲ್ಲರೆದೆಯಲ್ಲೂ

ಪ್ರೀತಿ ಗುಪ್ತ ಗಾಮಿನಿ

ದೇಶ ಭಾಷೆಗಳ

ಮೀರಿದ ಅಮೃತ ವಾಹಿನಿ



Sunday, August 25, 2013

ಅಭಿಸಾರಿಕೆ

ನಾನು.. 

ನಿನ್ನ ರಾಧೆಯಲ್ಲ ... 

ನೀನು ಮುರಳಿಯಾಗಲಿಲ್ಲ ..

ಯಮುನೆಯ ತಟದ ನೀರವ 

ರಾತ್ರಿಗಳಲಿ 

ನಿನ್ನ ಮೋಹ ಗಾನಕ್ಕೆ 

ಗೆಜ್ಜೆ ಕಟ್ಟಿ ಕುಣಿಯಲಿಲ್ಲ .... 

ನಾನು.. 

ನಿನ್ನ ಶಬರಿಯಲ್ಲ... 

ಯಾರೂ ಬಾರದೂರಿನಲ್ಲಿ 

ಯಾರೂ ಕಾಣದೂರಿನಲ್ಲಿ 

ನಿನ್ನ ಧ್ಯಾನ ಮಾಡಲಿಲ್ಲ 

ಹಣ್ಣುಗಳ ಆಯ್ದು ತಂದು 

ಕಚ್ಚಿ  ನಿನಗೆ ನೀಡಲಿಲ್ಲ 

ನಿನ್ನೊಳೈಕ್ಯವಾಗಲಿಲ್ಲ 


ನಾನು..

ನಿನ್ನ ಮೀರಾಳಲ್ಲ .... 

ಕಿಶೋರ ಕಂಗಳಲ್ಲಿ 

ನಿನ್ನ ಬಿಂಬ ನೆಲೆಸಲಿಲ್ಲ 

ರಾಜ್ಯ ಕೋಶ  ತೊರೆದು 

ನಿನ್ನ ನೆನಪಲಿ ಅಲೆಯಲಿಲ್ಲ 

ಹಾಡ ಹಾಡಿ  ಮೈ ಮರೆತು ಕುಣಿಯಲಿಲ್ಲ 

ಉರಿವ ಜ್ಯೋತಿಯಾಗಿ ನಿನ್ನ ಸೇರಲಿಲ್ಲ 

ನನ್ನ ನಲ್ಲ.. 

ನಾ ನಿನ್ನ  ಅಭಿಸಾರಿಕೆ 

ನೀ ನನ್ನ ಶಿಲ್ಪಿಯಾದರೆ 

ನಿನ್ನ ಉಳಿಗಳ ತಾಳಕ್ಕೆ ನರ್ತಿಸುವ 

ಜೀವಂತ  ಶಿಲಾಬಾಲಿಕೆ!!







Sunday, June 30, 2013

ಮುಖಪುಸ್ತಕದ ಬರಹಗಳ ಸಂಗ್ರಹ

ಮುಖ ಪುಸ್ತಕದಲ್ಲಿ ಪ್ರಕಟವಾದ ಕೆಲ ಆಯ್ದ ಬರಹಗಳು....

ಮುಂಜಾವು ಕಣ್ ತೆರೆಯುವ ವೇಳೆ
ಹಾಸಿದ್ದನವ ನನ್ನ ಕನಸಿನ ದಾರಿಗೆ ಹೂವಿನ ಹಾಸಿಗೆ

ಮನದ ಮೂಲೆಯಲ್ಲೆಲ್ಲೋಆರಳುತಿಹುದು 
ನೋಡು ಶ್ಯಾಮ ನಿನ್ನ ನೆನಪಿನ ಮಲ್ಲಿಗೆ

ಕೊಳಲ ಹಿಡಿದಂತೆ ನನ್ನ ಹಿಡಿದು
ನಾದ ಹೊಮ್ಮಿಸಿದ ಕ್ಷಣಗಳು

ನೋಡಿ ನಮ್ಮ ಉಕ್ಕೇರುತ್ತಿತ್ತು
ಹೊಟ್ಟೆ ಉರಿಯಲಿ ಯಮುನೆಯ ತೆರೆಗಳು

ತಾರೆಗಳು ಮಿನುಗದ
ರಾತ್ರಿಗಳಲ್ಲಿ ನೀನೆ ನನ್ನ ಚಂದಿರ

ನಿನ್ನ ತುಟಿಗಳ ರಾಗ ಲೀಲೆಗೆ
ನನ್ನ ದೇಹ ನಾದ ಮಂದಿರ

ನೀನು ನಾನು ನಾನು ನೀನು
ಕಳೆದ ಕ್ಷಣಗಳವು ಜೇನು


ಕೇಳುತಿಹುದು ರಾಧ ಹೃದಯ
ಮತ್ತೆ ಎಂದು ಬರುವೆ ನೀನು??



ಎಷ್ಟೊಂದು ರಾಗಗಳು ಗೆಳೆಯಾ..

ನನ್ನ ಬದುಕ ಭೂಮಿಯ ತುಂಬಾ ನೀ ಬೆಳೆದದ್ದು..

ಚಂದ್ರ ಕೌಂಸವೆ??

ನೀ ಇಲ್ಲದ ರಾತ್ರಿಗಳಲ್ಲಿ

ನನ್ನ ಖಾಲಿ ಏಕಾಂತದ ಮೇಘ ಮಲ್ಹಾರ...

ನಿನ್ನ ತೋಳ ಬಂಧನದಲ್ಲಿ ನಿಧಾನವಾಗಿ ನಾನಾಗಿ

ಕರಗುವಾಗ ನುಡಿದದ್ದು ಮಂದ್ರ

ಒಡಲ ಬಳ್ಳಿಯಲ್ಲೊಂದು ಸುಂದರ ಮೊಗ್ಗು ನಿನ್ನ ಒಲುಮೆಯ

ಕುರುಹು ಪಂಚಮ..ಮತ್ತೊಂದು ಷಡ್ಜ..

ಎಲ್ಲ ಅರಿತೆವು ಎನ್ನುವಾಗ ಎದೆಯಲ್ಲಿ ಒಂದಷ್ಟು ನೋವು

ವಿರಹದ ಅಸಹನೀಯ ಕಾವು

ದೀಪಕವೆ??

ನೋಡು ವರುಣನಿಲ್ಲದ ಆಗಸದಲ್ಲಿ ನಾನು ನಿರೀಕ್ಷೆಯ

ಹೊತ್ತ ಮಾಲಕೌಂಸ!!

ಎಷ್ಟೊಂದು ರಾಗಗಳು ಗೆಳೆಯಾ ಭಾವಗಳಂತೆ...




ನಿನ್ನ ಪ್ರೇಮದ ಹಟಕ್ಕೆ ಬಿದ್ದು

ಆಕಾಶದ ಅಷ್ಟು ತಾರೆಗಳ ಬಾಚಿ ತಂದೆ


ನಿನ್ನ ಕಂಗಳ ಹೊಳಪಿನ ಮುಂದೆ


ನಕ್ಷತ್ರಗಳೂ


ಹೊಳೆಯಲಿಲ್ಲ


ಎಂದ ನನ್ನ


ಹಟಮಾರಿ ಹುಡುಗ!!




ಹುಡುಕುತಿಹೆ ನಿನ್ನ..

ಬದುಕಿನ ಹಾದಿಯಲಿ ತಂದತಹ ಸುಖದ ಕೆಲಕ್ಷಣಗಳಲ್ಲಿ

ಜೊತೆಯಾಗಿ ಬಂದ ದು:ಖದ ನೆರಳಿನಲ್ಲಿ

ಇದ್ದರೂ ಇಲ್ಲದಂತಿರುವ ಸ್ನೇಹದ ಆಸರೆಯಲ್ಲಿ

ಮರೆತು ಹೋದ ಕಳೆದು ಹೋದ

ಹಲವಾರು ಮುಖಗಳಲ್ಲಿ

ಹೇಳು ಎಲ್ಲಿರುವೆ ನನ್ನ ಶ್ಯಾಮಾ?

ಎಲ್ಲೆಲ್ಲು ಕಾಣದಿರುವೆ..ಸೋತಿರುವೆ..

ಬೆಳಕೊಮ್ಮೆ ನೀಡು..



ಅರಳಿದ ಹೂಗಳಲ್ಲು,ಮಗುವಿನ ನಗುವಿನಲ್ಲು, ಆಸೆ ತುಂಬಿದ ಕಂಗಳಲ್ಲು 

ಕಂಡೆ ಶ್ಯಾಮ ನಿನ್ನ ಇರುವನ್ನು...


ನನ್ನ ಮಂಜು ತೋಯಿಸಿದ ಕೆನ್ನೆಯ ಮೇಲೆ ಬಿಸಿಲಿನ 


ಹಿತವಾದ ಸ್ಪರ್ಶದಲ್ಲೂ 


ಒಂಟಿಯಾಗಿ ನಡೆವಾಗ ಮೂಡಿದ


ಹೆಜ್ಜೆಗುರುತಿನಲ್ಲೂ


ಕಂಡೆ ಶ್ಯಾಮ ನಿನ್ನೊಡನಿರುವ 


ನನ್ನ ಬದುಕಿನ ಗತಿಯನ್ನು ...




ಚುಮು ಚುಮು 

ಚಳಿಯ


ಈ ಸುಂದರ


ಮುಂಜಾವಿನಲಿ


ನನ್ನೆದೆಯ 


ತೊಟ್ಟಿಲಲಿ ಮಲಗಿದ್ದ


ನಿನ್ನ ನೆನಪುಗಳ 


ಮಗುವನ್ನ


ಚಿವುಟಿ 


ಎಬ್ಬಿಸಿದವರಾರು??

(ಅದು ನೀನೆ ಅನ್ನೋದು ನನ್ನ ಗುಮಾನಿ!!)




ಜೀವನದ ಯಾತ್ರೆಯಲ್ಲಿ ದು:ಖದ ಹಾದಿ

ಸವೆ ಸವೆದು

ಸುಖ ಬಂದದ್ದು ಗೊತ್ತಾಗುವ ಹೊತ್ತಿಗೆ

ಸಾವು ಕರೆದಿತ್ತು

ನಿನ್ನ ಕಂಗಳಲ್ಲಿ ಪ್ರೇಮವ ಹುಡುಕಿ ಮನವ ಸಂತೈಸಿಕೊಳ್ಳಲು

ದ್ವೇಷ ತಿರಸ್ಕಾರದ ಹಾದಿಯಲ್ಲಿ

ನೀನು ಮುಂದೆ ಹೋಗಿಯಾಗಿತ್ತು..ನಾತಿಚರಾಮಿ ಎಂಬ

ಕೊಟ್ಟ ಮಾತನ್ನೂ ಮರೆತು

ನಾನೀಗ ಬಯಲಲ್ಲಿ ನಿಂತ ಒಂಟಿ ಮರ

ಹಕ್ಕಿಗಳಿಗೆ ಆಶ್ರಯವನ್ನೂ ನೀಡಲಾಗದ

ಬರಡು ಬಾಳು ನನ್ನದು..




ನಾ ನಿನಗೆ ಅಪರಿಚಿತ..

ಕೈಗೆ ಎಟುಕದ ಚಂದಿರ 


ಎನ್ನದಿರು....


ಹಾಲಕಣಿವೆಯಲ್ಲಿ..


ನನ್ನ ಪ್ರಕಾಶಕ್ಕೆ ನಾನೆ ಸಾಟಿ 


ಗೆಳೆಯಾ..


ನಾ ನಿನಗೆ ನಿಲುಕದ


ನಕ್ಷತ್ರ..




ಪ್ರೀತಿಸದಿರು ಮನಸೇ!!

ಬದುಕ ಹಾದಿಯಲ್ಲಿ

ನೀ ನೆಟ್ಟ ತಂಪಾದ

ಆಸೆ ಕನಸುಗಳ ಗಿಡವ ಕಿತ್ತೆಸೆದು

ನಡು ನೀರಿನಲ್ಲಿ ನಿನ್ನನೆಸೆದು

ಬೇರೆ ದೋಣಿಯ ಹತ್ತಿ ಹೋದವ

ಬಹಳ ನೆನಪಾಗುತ್ತಾನೆ

ನಿನ್ನ ಕಣ್ಗಳಿಂದಿಳಿವ 

ನೀರಾಗುತ್ತಾನೆ!!

೧೦
ನೀ ಆಡದ ಮಾತುಗಳ

ನಾ ಕೇಳಿದಂತೆ

ಭಾವಿಸಿದೆ

ನೀ ಕೊಡದ ಭರವಸೆಗಳ 

ಕನಸುಗಳ ಹೊಳೆಯಲ್ಲಿ

ಮೀಯಿಸಿದೆ

ನನ್ನ ಅಸ್ತಿತ್ವವ ಕೊಂದು

ನನ್ನ ಆಸೆಗಳ

ಗೋರಿಯ ಮೇಲೆ

ನೀ ಇಡುವ ಹೂ ಗುಚ್ಚ

ಯಾರಿಗಾಗಿ ಗೆಳೆಯಾ??




Saturday, June 1, 2013

ಧಿಯೋಯೋನ: ಪ್ರಚೋದಯಾತ್....

 ೧

ಕಾಫಿಗಿಟ್ಟ ಹಾಲು ಉಕ್ಕಿದೆ...ನೊರೆ ನೊರೆಯಾಗಿ..ಗಂಡನ ಬೈಗುಳಕ್ಕೆ ತಡೆಯೆ ಇಲ್ಲ..ಆದರೆ ಇವಳಿಗೋ ತಲೆಯ ತುಂಬಾ ಅದೆ ಗುಂಗು...ಆಕೆಯ ನೋಟದ ತಾತ್ಸಾರ..ಕೊಂಕು ಮಾತುಗಳು...ನಂಬಬಹುದೇ?,"ನಿನ್ನೆ ಮಧ್ಯಾಹ್ನ ಅದ್ಯಾರೋ ಹೆಂಗಸು ನಿಮ್ಮನೆಗೆ ಬಂದಿದ್ರು..ನಿಮ್ಮ ತಂಗೀನಾ?"ಶಾಂತ ನದಿಯಂತಿದ್ದ ಬಾಳಿಗ್ಯಾವ ಕೊಳಕು ತೊರೆ ಸೇರಿತು?ಆಕೆ ಹೇಳಿದ್ದೆಲ್ಲ ನಿಜವೇ?ತನ್ನವ ಎಂದೂ ಆ ಸ್ವಭಾವದವನಲ್ಲ..ತಾನ್ಯಾಕೆ ನಂಬಲಿ? ಮನಸ್ಸು ಸಂತೈಸಿತು...ಬಾಯ್ತುಂಬಾ ಬೈದು ಸುಸ್ತಾಗಿದ್ದ ಗಂಡ ಈಗ ಈಕೆಯ ಬಳಿ ಬಂದ..
"ಕಾಫೀ ಕೊಡಲ್ವಾ?"
 "ತಗೊಳ್ಳಿ"
"ಯಾಕೇ?,ಬೈದಿದ್ದಕ್ಕೆ ಬೇಜಾರಾಯ್ತಾ?ಮತ್ತೆ ಯಾವಗ್ಲು ಹಾಲು ಕಾಯೋಕೆ ಇಟ್ಟು ನಿನ್ ಪ್ರಪಂಚದಲ್ಲಿ ಮುಳುಗಿ ಹೋಗಿರ್ತಿ,ನಾನ್ ಬೈದ್ರು ಪ್ರಯೋಜನ ಇಲ್ಲ"
ಇವನೋ ಎಂದಿನಂತೆ ಮಾತಾಡುತ್ತಲೇ ಇದ್ದಾನೆ..
"ನಿಂಗೊಂದು ವಿಶ್ಯ ಕೇಳ್ಬೇಕಿತ್ತು"
ಕಿವಿ ಚುರುಕಾಯ್ತು..ಏನಿರಬಹುದು? ಹೊರಗೆ ಹೋಗುವ ಹಂಬಲವೇ?ತನ್ನ ಜೊತೆಗಂತು ಇರಲಿಕ್ಕಿಲ್ಲ..
"ಆ ಪಕ್ಕದ್ಮನೆ ಹೆಂಗಸು ಇದ್ದಾಳಲ್ಲಾ,"
"ಹೂ ಇದ್ದಾಳೆ..ಇಲ್ಲದೇ ಏನು? "
’ಅದೇ ಕಣೆ,ಅವಳು ಇವತ್ತು ಹಾಲು ತರೋಕೆ ಅಂತ ಬೆಳಗ್ಗೆ ಹೋಗ್ತಾ ಇದ್ನಲ್ಲ,ಆಗ"
"ಹೂ ಹೇಳಿ ಏನಾಯ್ತು? ಅದಕ್ಕೆ ಇಷ್ಟುದ್ದ ಪೀಠಿಕೆ ಬೇಕಾ?"
"ಏನಿಲ್ಲ..ನಿನ್ನೆ ನೀನು ಮಧ್ಯಾಹ್ನ ಆಫೀಸಿನಿಂದ ಅದ್ಯಾರೋ ಜೊತೆ ಡ್ರಾಪ್ ತಗೊಂಡೆ ಅಂತೆ..ಆ ಮನುಷ್ಯ ಮನೆಗೂ ಬಂದಿದ್ದ ಅಂತೆ..ನನ್ನ ಹತ್ತಿರ ಅವರ್ಯಾರು ನಿನ್ನೆ ಬಂದಿದ್ದು ನಿಮ್ಮ ಸಂಬಂಧಿಕರಾ? ಅಂತ ಕೇಳಿದ್ಲುಕಣೇ"
"ನೀವು ನನ್ನ ಸಂಭಂಧಿಕ ಅಂತ ಹೇಳ್ಬೇಕಾಗಿತ್ತು"
"ಅಂದ್ರೆ,ಆಕೆ ಹೇಳಿದ್ದು ನಿಜಾ ಅಂತಾಯ್ತು"
"ಮತ್ತಿನೇನ್ರಿ, ನಿನ್ನೆ ನಾನು ಬಂದಿದ್ದೇ ೬ ಗಂಟೆಗೆ,ನಿಮ್ಗೆ ಯಾರೊ ಹೇಳಿದ್ದು ನಿಜಾ ಅನಿಸುತ್ತೆ..ನನ್ನ ಮೇಲೆ ಮಾತ್ರ ನಂಬ್ಕೆ ಇಲ್ಲ ನೋಡಿ"
ಇವಳಿಗೆ ಆಶ್ಚರ್ಯ..
ಮರುದಿನ...ಅವಳು ಇವಳು ಎದುರಾದರು...ಇವಳ ಮುಖದಲ್ಲಿ ಮುಗುಳ್ನಗೆ..
"ಎನ್ರೀ ಭಾಳ ಖುಷೀಲಿದ್ದೀರಿ??ಮತ್ತೆ ನಿನ್ನೆ ಅವರ್ಯಾರು ಅಂತ ಕೇಳಿದ್ರಾ?"
"ಕೇಳಿದೆ.. ಅದು ನೀವೇ ಅಂತೆ"
"ಹಾ!! ಏನಂದ್ರಿ?/"
ಅಷ್ಟರಲ್ಲಿ ಆಕೆಯ ಗಂಡ ಕೂಗುತ್ತ ಹೊರಬಂದ
"ಹಾಲು ಉಕ್ಕಿ ಹೋಯ್ತು..ಅದೇನು ಮಾಡ್ತಾ ಇದ್ದೀಯೇ??"

ಸುಂದರಿ ಚಿಟ್ಟೆ ತನ್ನ ಎಲೆ ಕೋಣೆಯ ಕಿಟಕಿ ಇಂದ ತಲೆ ಹೊರಗೆ ಹಾಕ್ತು..
ಅಹಾ..ನೀಲಿ ನೀಲಿ ಆಕಾಶ..ಇವತ್ತು ಮಳೆ ಬರೋದಿಲ್ಲ..
ಮನಸಲ್ಲೇ ಲೆಕ್ಕ ಹಾಕಿ ಪುರ್ರ್ ಅಂತ ಹೊರಗೆ ಹಾರಿತು..
ಹೂ ಹುಡುಗಿ ಮನೆಯ ದಾರೀಲಿ ಘಮ ಘಮ..
ಒಹೋ ಮಲ್ಲಿಗೆ ಅರಳಿದ್ದಾಳೆ..ಹಬ್ಬದೂಟ!!
ಹೊಟ್ಟೆಯಲ್ಲೇನೊ ಒದ್ದಂತಾಯ್ತು..
ಪುಳಕ್ಕನೆ ಕಂಡ ಎಲೆಯಡಿ ಸೇರಿತು ಸುಂದರಿ ಚಿಟ್ಟೆ..
ಬಸವನ ಹುಳ ಹರಿದಾಡ್ತಿತ್ತು..ಚಿಟ್ಟೆಗೆ ಹೇಳ್ತು"ನಾನು ಬರೋ ದಾರಿಲಿ ಮೊಟ್ಟೆ ಇಡ್ಬೆಡ್ವೆ"
ಗೆಳೆಯನನ್ನ ಕಂಡಂತಾಯ್ತು..ನಾಚಿಕೆ ಉಕ್ಕಿತು..ಮೊಟ್ಟೆ ಇತ್ತು ಮರೆಯಾಯ್ತು ಸುಂದರಿ..
ವಾರ ಕಳೆದಿತ್ತು..ಎರಡು ಸಲ ಮಳೆಯಾಗಿತ್ತೋ? ಗೊತ್ತಿಲ್ಲ..
ಸುಂದರಿಗೆ ತಾನಿಟ್ಟ ಮೊಟ್ಟೆಗಳ ನೋಡುವಾಸೆಯಾಯ್ತು..
ಎಲೆಯಡಿಯಲ್ಲಿ ಇಣುಕಿತು..ಕಾಣಿಸುತ್ತಲೇ ಇಲ್ಲ..ಭಯವಾಯ್ತು...
ಯಾವ ಹಸಿದ ಕೀಟಕ್ಕೆ ಅಹಾರವಾಯಿತೋ ನಮ್ಮ ಪ್ರೇಮ ಸಂಕೇತ?
ಕುಣಿದು ಕುಣಿದು ನೋಡಿತು..ಬೇಸರಾಗಿ ಹಾರಿತು..
ಅಲ್ಲೇ ಮರೆಯಲ್ಲಿ ವನವಾಸಕ್ಕೆ ತೆರಳಿದ್ದ ಲಾರ್ವಾ..ಅಮ್ಮನ ಕುಣಿತ ಕಂಡು ನಕ್ಕಿತು!!
"ನಾನು ಬರುವೆ..ನಾವಿಬ್ಬರೂ ಮತ್ತೆ ಸ್ವಚ್ಚಂದ ಬಾನು..ರಿಂಗಣದಾಟಕ್ಕೆ ನನ್ನ ಮುದ್ದು ಅಮ್ಮನ ಜೊತೆ ನಾನು!!
ಬೆಚ್ಚಗೆ ಕನಸುತ್ತಾ ಬರಲಿರುವ ಸುಂದರ ರೆಕ್ಕೆಗಳಿಗೆ ಬಣ್ಣ ಹಾಕತೊಡಗಿತ್ತು!!


ಕೆಳಗೆ ಬಿದ್ದಿದ್ದೇನೆ ನೋಡಬಾರದೆ? ಈ ಮಾನವರಷ್ಟು ಸ್ವಾರ್ಥಿಗಳನ್ನ ನಾ ನೋಡಲಿಲ್ಲ!!
ಆಕೆಯ ತಲೆ ಏರಿದ್ದೇ ಸ್ವರ್ಗದಷ್ಟು ಕುಶಿಯಾಗಿತ್ತು..ಸರಿಯಾಗಿ ಬಂಧಿಸಲಿಲ್ಲ,..
ಇಲ್ಲಿ ಎಲ್ಲೋ ಅವಳಿಂದ ದೂರಾದೆನಲ್ಲ..!!
ಗುಲಾಬಿಗೆ ಆಕೆಯ ಮುದ್ದು ಮೊಗದ್ದೇ ಧ್ಯಾನ..
ನಾ ಸುಂದರಿಯೋ ಆಕೆಯೋ ಎಂದು ಕನ್ನಡಿಯಲ್ಲಿ ಆಕೆಯ ಹೆರಳಿಂದ ಇಣುಕಿಣುಕಿ ನೋಡಿದ್ದೆ ಬಂತು
ಈಗ ಅವಳ ಪಾದದ ಗುರುತಿರದೆ ಈ ಮಾನವ ಕಾನನದಲ್ಲಿ ಕಳೆದು ಹೋದೆನೇ?
ಅಬ್ಬಾ??ಅದೇನು ಸದ್ದು..ತಲೆ ಎತ್ತಲು ಪ್ರಯತ್ನಿಸಿತು...ಯವೊದೋ ಆನೆಯಂತ ಪಾದ..ಇನ್ನು ತನ್ನ ಸಾವು ಖಚಿತ..
ಉಸಿರು ಬಿಗಿ ಹಿಡಿಯಿತು..ಹತ್ತಿರ ಬರುತ್ತಿರುವ ಹೆಜ್ಜೆಗಳ ಸದ್ದಿಗೆ ದಳಗಳು ಮುದುಡಿತು..ಓಓ ಇನ್ನೇನು..ಸತ್ತೇ ಬಿಟ್ಟೆ..ಪಾಪಿಗಳಾ ಯಾರಿಗೂ ನನ್ನ ಸೌಂದರ್ಯ ಬೇಡಾಯಿತೇ?? ಎದೆಯಲ್ಲಿಟ್ಟಿದ್ದ ಮುಂಜಾವಿನ ಇಬ್ಬನಿ ಕಣ್ಣೀರಾಗಿ ಸುರಿಯಿತು...
ಕಣ್ಣು ಬಿಟ್ಟಾಗ"ಅರೆ..ತನಗೇನಾಗಿಲ್ಲ"
ದನಿಯೊಂದು ಕೇಳಿತು.."ಶಮ್ಮಿ,ಅದ್ಯಾಕೇ ಬಿದ್ದ ಹೂವು ಎತ್ತಿ ಮುಡಿದೆ" ಹೆಣ್ಣು ಕಂಠ ನುಡಿಯಿತು.."ಅದು ಹೂವು..ಅದರಲ್ಲೂ ಗುಲಾಬಿ..ನೋಡು ಹೇಗೆ ಅಳ್ತಿದೆ ಅಂತ...ಅದಕ್ಕೇ!!..
ಹೆಮ್ಮೆ ಇಂದ ಗುಲಾಬಿ ತಲೆ ಎತ್ತಿತು..ಮತ್ತೆ ಕನ್ನಡಿಯಲ್ಲಿ ತನ್ನ ಕಂಡು ಹರುಶದಲ್ಲಿ  ನಾಚಿತು!!



Monday, May 13, 2013

ಒಂದೆರಡೆರಡೇ ಹನಿ...ಮುಂದಾಗುವುದು ಧಾರೆ...

ಹನಿ-೧
ತನ್ನದೇ ಬಿಂಬವ ಕಂಡು
ಕಿಟಕಿಯ ಗಾಜಿನಲ್ಲಿ
ಕುಕ್ಕುವ ಪುಟ್ಟ ಹಕ್ಕಿಯೇ
ನಿನ್ನ ಅಳಲ ಕೇಳುವ ಸಖರಿಲ್ಲ
(ತಟ್ಟೆಯಲ್ಲಿ ನೀರಿದೆ ನಾನಿತ್ತ ಕಾಳಿದೆ)
ಮಾನವರ ದುರಾಸೆಯ ಮೊತ್ತವೆಲ್ಲ
ನಿನ್ನ ಪಿಳುಗುಡುವ ಕಣ್ಣಲ್ಲಿ
ಭಯವಾಗಿ ಕಾಡುವಾಗ
ನನ್ನ ಅಸ್ತಿತ್ವ ನನಗೆ
ಬೇಕಾಗಿ ಕಾಣುವದಿಲ್ಲ!!

ಹನಿ-೨

ಬರೆದರು ಪ್ರೀತಿ ಪ್ರೇಮದ
ಮೇಲೆ ನೂರು ಸಾವಿರ ಸಾಲು
ಬರೆದರೂ ಕಥನ..ಕಥೆ..ಕವಿತೆ
ಸಾಲದಾಯಿತು ಬಾಳು
ಅರಿವುದ ಮರೆತರು,
ಪ್ರೇಮವೆಂಬುದು ಅವಿನಾಶಿ
ಸೂರ್ಯ ಚಂದ್ರರಿರುವ ತನಕ
ಅದರ ಬೆಳಕಿನಲಿ ಬದುಕುವುದು
ಜೀವರಾಶಿ..
(ಅದೂ ಪ್ರೇಮ ಅಲ್ಲವೇ?)

ಹನಿ-೩
ನಿನ್ನ ಮಾಸದ ನಗುವಿಗೆ
ಕಾರಣವೇನು ?
ಕೇಳುತ್ತಲೆ ಇದ್ದಾನೆ ಅವನು
ನಾ ಹೇಳಲಿಲ್ಲ
ನನ್ನೆದೆಯ
ದು:ಖದ ಸಾಗರದಿ
ತೇಲಿಬಿಟ್ಟಿದ್ದೇನೆ
ನಗೆಯ ಹಾಯಿದೋಣಿ
ಮನದ ತೀರದಲ್ಲಿ
ನನಗಾಗಿ
ಕಾಯುತ್ತಿರುವುದು
ಇರುಳು
ನಾ ನಗುತ್ತಲಿರುವೆ
ತೋರಿ ಚಂದ್ರನೆಡೆಗೆ ನನ್ನ ಬೆರಳು!!
(ಅಡಿಗರು ನೆನಪಾದರು!!)

ಧಾರೆ-೧

ಹೀಗೇ ಸುಮ್ಮನೆ  ನಿನ್ನ ನೆನಪಲ್ಲಿ
ಬಿಳಿಗೋಡೆಯ ಮೇಲೆ
ಬರೆಯದ ಚಿತ್ರಗಳ ಕಾಣುತಿರುವೆ

ಅಲ್ಲಿ ದೂರದಲ್ಲೆಲ್ಲೋ ಇರುವ ನಿನ್ನ
ಮನಸಿನ ಅಲೋಚನೆಗಳ
ನನ್ನ ಪದಗಳಲ್ಲಿ ಬಂಧಿಸಿಡುವುದು
ವ್ಯರ್ಥ ಪ್ರಯತ್ನ

ಬರುವೆಯೋ ಬಾರೆಯೋ?
ನಾ ನಿನಗೆ ಇಷ್ಟವಾದೇನೆ?
ನೂರುಪ್ರಶ್ನೆಗಳ ಹೊತ್ತ
ಮನಸಿನ ದ್ವಂದ್ವ ಗಾಯನ

ಉಕ್ಕಿಬರುವ ಭಾವಗಳ
ನದಿಗೆ ಕಟ್ಟಿರುವೆ
ಸಂಯಮದ ತಡೆಗೋಡೆ
ಎಂದು ಬೀಳುವುದೋ
ಎಂಬ ಆತಂಕದೆಡೆಯಲ್ಲೇ
ಸಂಭ್ರಮವೊಂದು ನುಗ್ಗಿಬರಲು
ಹವಣಿಸಿದೆ!!

ನಿನ್ನೆಡೆಗೆ ತುಡಿವ ನನ್ನ ಆಸೆಗಳ
ಬಾನಲ್ಲಿ ಬೆಳಗಿನ ರವಿಯಾಗಿ
ಕಾರ್ಗತ್ತಲ ಶಶಿಯಾಗಿ
ಒಂದಷ್ಟು ಹರುಷ ಚೆಲ್ಲು
ನೀ ಹೊತ್ತ ನಿನ್ನ
ಹೆಸರು ಸಾರ್ಥಕವಾದೀತು
(ನೀ ಭುವನ-ಚಂದ್ರನಲ್ಲವೇ?)


 ಧಾರೆ-೨

ಜೀವನ ಎಂದರಿದೇ!!
ಎಂದೆನೆ??

ಬರದ ನಾಳೆಗಳ ಬಾಗಿಲಿಗೆ
ನಿರೀಕ್ಷೆಗಳ ತೋರಣವ ಪೋಣಿಸಿ
ಇರುವ ವರ್ತಮಾನವ ಬೂದಿಗೆ
ಎಳಸುವ ಮನಸು

ಕಹಿ ಬೀಜಗಳು ಚೆಲ್ಲಿದ ನೆನಪುಗಳ
ಅಂಗಳಕ್ಕೆ ಸುರಿದ ಮರೆತ
ಮುಖಗಳ ಹೊಸಾ ಪರಿಚಯದ
ಮುಸಲಧಾರೆ

ಮೊಳಕೆಯೊಡೆವ ಸಂದಿನಲ್ಲಿ
ಕೀಟನಾಶಕಗಳ ಸುರಿದು
ಬೆಳಸುತ್ತಲೇ ಕೊಲ್ಲಲೆಳಸುವ
ವಿಕೃತಮಾನವೀಯರು

ಆದರು ಅಲ್ಲಲ್ಲಿ ಇದ್ದವರು..
ವರುಣರು!!ಅಮೃತವಾಹಿನಿಯ
ತುಂತುರಲಿ ಹರಿಸಿ ಸಂತೈಪರು
ಅಹಮಿಕೆಯ ಭೂಮಿಕೆಯಲ್ಲಿ
ವೈಶಾಲ್ಯತೆಯ ಹಸಿರ
ಸಾವಯವ ಕೃಷಿಯ ಬೆಳೆವರು!!

ಅದಕೆಂದೆ ಎಂದೆ..
ಜೀವನವ ಅರಿತೆ ಎಂದೆನೆ??
ಅರಿಯದಾದೆ ಎಂದರೂ ತಪ್ಪು..
ಅರಿತೆ ಎಂದರು ತಪ್ಪು
ಕಲಿವಿಕೆಯ ಈ ವಿದ್ಯಾಲಯದಿ
ನಾ ನಿತ್ಯ ನೂತನ ವಿದ್ಯಾರ್ಥಿ
ಅದೇ ಸರಿ,ಅದೆ ಒಪ್ಪು!!










Wednesday, April 24, 2013

ಏನೆಂದು ಹೆಸರಿಡಲಿ?

ಮನಸು ಮಾಯಾಮೃಗ...ಹಿಡಿತಕ್ಕೆ ಸಿಕ್ಕಿತೋ ಆಗಲೇ ಮತ್ತಾವುದೋ ಆಮಿಷದ ಹಿಂದೆ ಓಟ..ಮಾನಸ ಲೋಕಕ್ಕೆ ಏಕಾಗ್ರತೆ ತರುವುದು ಪ್ರೇಮ..ಅದು ಎಂಥ ಪ್ರೇಮವೂ ಆಗಿರಬಹುದು..ಒಂದೇ ವಸ್ತುವನ್ನೇ ಧೇನಿಸುವ ಸ್ಥಿತಿಗೆ ನಾನು ಪ್ರೇಮ ಅಂದದ್ದು..ಒಬ್ಬೊಬ್ಬರಿಗೆ ಒಂದೊಂದು ವಸ್ತು ವಿಷಯದ ಮೇಲೆ ಪ್ರೇಮ.. ಆದರೆ ಜಗತ್ತಿನ ಆದಿ-ಅಂತ್ಯಕ್ಕೆ ಕಾರಣ ಒಂದೇ ಪ್ರೇಮ..ಹುಟ್ಟು ಸಾವುಗಳಿಗೆ ಕಾರಣ ಒಂದೇ ಪ್ರೇಮ -ಅದು ಪ್ರಕೃತಿ -ಪುರುಷರ ಆದಿ ಅಂತ್ಯವಿಲ್ಲದ ಪ್ರೇಮ...
ಕಣ್ಣಲ್ಲಿ ಬಯಕೆಗಳ ಹೊತ್ತ ಹೆಸರಿಡದ ಹೆಣ್ಣೊಂದು ತನ್ನ ಹೆಸರಿಡದ ನಲ್ಲನಿಗೆ ಹೆಸರ ಯೋಚಿಸುವ ಪರಿ ಈ ಕವನದಲ್ಲಿ ಮೂಡಿದೆ....ಇಷ್ಟವಾದೀತೆ?(ವರ್ಷದ ಹಿಂದೆ ಬರೆದದ್ದು)

ಗಾಢಾಂಧಕಾರದಲಿ  ಕಣ್ಮುಚ್ಚಿ ಮಲಗಿದ್ದೆ
ಸುಮ್ಮನೇ ಅಲವರಿದೆ,ಕನಸುಗಳ ಗರ್ಭದಲಿ
ಹುದುಗಿದ್ದ ನಿನಗೊಂದು ರೂಪಿತ್ತು
ಜೊತೆ ಮಾಡಿಕೊಂಡೆ ,ನನ್ನಾತ್ಮಕ್ಕೆ
ಜೊತೆಯಾದವನೆ,ಹೆಸರ ಯೋಚಿಸುತಿರುವೆ
ಏನಿಡಲಿ ನಿನಗೊಂದು ಹೆಸರು?


ಕೆನ್ನೆಗಳ ಇಳಿಜಾರಲ್ಲಿ ಹಾರುವ
ಕೂದಲ ನನ್ನ ಅಂಕೆಯ ಮೀರಿ
ಚುಂಬಿಸಿದ,ತುಂಟಾಟವಾಡುವ
ಹೆಸರಿಲ್ಲದೆ ಸಲಿಗೆ ತೋರುವ
ಮೈ ತೀಡುವ ನಿನ್ನ ಅಲಪಿಗೆ
ತಂಬೆಲರಂಥವನೆ, ಏನಿಡಲಿ ಹೆಸರು??

ತೆರೆದ ನನ್ನ ನಸುಗೆಂಪು ಅಧರಗಳ
ನಡುವೆ ನೀ ಸುರಿದೆ ನಿನ್ನ ಅಧರಗಳ
ತಣ್ಬನಿ,ತನಿ ತನಿಯಾಗಿ ನಾ
ಹೀರುವಾಗ ನಿನ್ನ ಕಂಗಳಲ್ಲಿ ಕಂಡ
ತುಸು ತುಂಟ ನಗುವಿಗೆ  ಏನಿಡಲಿ ಹೆಸರು??


ಸುಮಗಳು ಸುರಿದ ತಂಪು ತಂಪು
ಹಾದಿಯಲ್ಲಿ ಕೈ ಹಿಡಿದು ನಡೆವ,
ಮತ್ತೊಮ್ಮೆ ಏಕಾಂತದಲಿ ಹರಡಿದ
ನನ್ನ ಹೆರಳ ನಡುವಿಂದ ಮೃದು
ಕೆನ್ನೆಯ ಮೇಲೆ ಗೀರುವ ಸ್ವಚ್ಚಂದ
ಬೆರಳೇ,ಏನಿಡಲಿ ನಿನಗೆ ಹೆಸರು??

ತಡೆದ ಕಣ್ಗಪ್ಪಿನ ಕಂಬನಿಯಲಿ
ನಿನ್ನೆದೆಯ ಕೂದಲುಗಳ ತೊಳೆದೆ,
ಕಣ್ಣು ಒರೆಸುತ್ತಾ ಎದೆಗೊತ್ತಿಕೊಂಡು
ನನ್ನ ನೀ ಮಗುವಂತೆ ನಲಿದವನೆ
ನಿನ್ನ ಪ್ರೇಮದ ಪರಿಗೆ ಏನಿಡಲಿ ಹೆಸರು??


ನೋವು ಬಿರಿದ ಬಿಸಿಲ ಎದೆಗೆ ಹಿಮದ
ಮಳೆಯಾದವನೆ,ಹೆಸರಿಲ್ಲದೇ ಕನಸುಗಳ
ನಡುವಿಂದ ಬಂದು ಬಾಳ ಹಸನಾಗಿಸಿದ
ನಿನ್ನ ಜೊತೆಗಿನಾಟ-ಬೇಟಕ್ಕೆ
ಹೆಸರೊಂದು ಬೇಕೆ??
ನೀನೇ ಎಂದಂತೆ ಬದುಕ
ಹಾದಿಯಲ್ಲಿ ನಾವುಗಳು
ಹೆಸರೇ ಇಲ್ಲದ ಹೂವುಗಳು
ಹೆಸರ ಹಂಗೊಂದು ಏಕೆ??




Tuesday, April 16, 2013

ಮಳೆ ಎಂಬ ಪುಳಕ

ಮಳೆ ಬರುವ ಮುನ್ನ..


ಭಾವಗಳ ಮೋಡದ ಜೋಲಿಯಲ್ಲಿ
ಇಣುಕುವ ನೀನು ನನ್ನ ಭಾನು
ಹಸಿಯಾದ ಎದೆ ನೆಲದಿ ಮೊಳಕೆ ಒಡೆಯಿತೇ
ಬಯಕೆಗಗಳ ಭವಿಷ್ಯದ ಕಾನು?

ಹೊಳೆಯುತಿಹ ಕಂಗಳಲ್ಲಿ
ಮಳೆಯ ಮುನ್ನಿನ ಮಿಂಚು
ವರುಣನಂತೆನ್ನ ಇಳೆಯಾಗಿಸಿ
ಬಳಸಿ ತಬ್ಬುವ ಹೊಂಚು

ನಿಲ್ಲು ನಲ್ಲ..
ನಿನ್ನ ಒಲವ ಸುಧೆಗೆ ಮೈ
ಒಡ್ಡುವ ನನ್ನ
ಒಮ್ಮೆ ಕಾಯಿಸಿ ನೋಡು
ಮಳೆ ಬರುವ ಮುನ್ನ!!

ಮಳೆ ಬಂತು

ಬಿರು ಬಿಸಿಲಿಗೆ ಕಾದ
ಭುವಿಗೆ ಬಿದ್ದ ಮೊದಲ
ಮಳೆಯ ಹನಿ
ಕಡಲ ಒಡಲ ಚಿಪ್ಪೊಂದರಲ್ಲಿ
ಸದ್ದಿಲ್ಲದೆ ಕಾಯುತಿದೆ
ರೂಪಾಂತರಿಸಲು
ಒಂದು ಸುಂದರ ಮುತ್ತು!

ಕಾಗೆ ಗುಬ್ಬಿಗಳಿಗೀಗ
ಒಂದೇ ಮರದ ಆಶ್ರಯ
ಬರುವ ಮುಸಲಧಾರೆಯಂತ 
ಮಳೆಗೆ ಗೂಡು ಕಟ್ಟಿ 
ಬೆಚ್ಚಗಾಗುವ ತವಕ

ಬಂದೇ ಬಂತು ಮಳೆ
ನನ್ನೆದೆಯ ಇಳೆಗೆ
ನೀ ಬಂದ ಗಳಿಗೆ!!

ಮಳೆಯ ನಂತರ


ತಂತಿಗಳಲ್ಲಿ ಜೋತು ಬಿದ್ದ
ಹನಿಗಳಿಗ್ಯಾವ ಅವಸರವಿಲ್ಲ
ಉಕ್ಕುವ ನದಿಗಳಿಗೆ 
ಹರೆಯದ ಪುಳಕ
ಕೆರೆಗಳೋ ನಮ್ಮ ಕಿರುತನದ 
ಬಿಂಬ ತೋರುತಿವೆ

ನನ್ನ ನಲ್ಲ...

ವರುಣನಾಗಿ ನನ್ನೆದೆಗೆ 
ನೀ ಪ್ರೇಮ ಸುರಿಸಿ
ಹನಿಗಳ ಧಾರೆಯಲ್ಲಿ 
ನನ್ನ ವರಿಸಿ
ಹೆಣ್ಣಾಗಿಸಿದೆ!!

ಹಸಿರ ಚಲ್ಲಿದ ಹಾದಿಯಲ್ಲಿ
ಉದುರಿದ ನಿರೀಕ್ಷೆಯ
ಎಲೆಗಳು
ನಮ್ಮ ಸ್ವಾಗತಿಸಿದೆ 
ಶಾಲ್ಮಲಿಯ ದಳಗಳು

ನಾನೀಗ ಇಳೆ
ನಿನ್ನಾತ್ಮದಷ್ಟು 
ಪರಿಶುದ್ಧ
ನಿನ್ನ ಒಲವ ಮಳೆ
ತೊಳೆಯಿತು
ನನ್ನೆಲ್ಲ ಕೊಳೆ!!


 
 (Image curtecy:Internet)